ಸರಕಾರಿ ಉದ್ಯೋಗಗಳಿದ್ದರೂ ನಡೆಯುತ್ತಿಲ್ಲ ನೇಮಕಾತಿ!
ಎಲ್ಲಾ ಇಲಾಖೆ, ಸಚಿವಾಲಯಗಳಲ್ಲಿ ಖಾಲಿ ಬಿದ್ದಿವೆ ಹುದ್ದೆಗಳು
ಸಾಂದರ್ಭಿಕ ಚಿತ್ರ
ಭಾರತದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಸರ್ಕಾರಿ ಉದ್ಯೋಗಗಳ ಬಿಕ್ಕಟ್ಟಿನ ಬಗ್ಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ. ಕೋಟಿ ಉದ್ಯೋಗಗಳ ಭರವಸೆ ಹುಸಿಯಾಗಿದೆ. ನಾವು ಅಧಿಕಾರಕ್ಕೆ ಬಂದರೆ ಕೇಂದ್ರ ಸರಕಾರದ 30 ಲಕ್ಷ ಹುದ್ದೆಗಳಿಗೆ ತಕ್ಷಣ ನೇಮಕಾತಿ ಶುರು ಮಾಡುತ್ತೇವೆ ಎಂದಿದ್ದರು ರಾಹುಲ್ ಗಾಂಧಿ. ಆದರೆ , ಸರ್ಕಾರಿ ಉದ್ಯೋಗಗಳಲ್ಲಿನ ನೇಮಕಾತಿ ಪ್ರಕ್ರಿಯೆ ಮೋದಿ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.
ಮಂಜೂರಾದ ಹುದ್ದೆಗಳಲ್ಲಿನ ಖಾಲಿ ಹುದ್ದೆಗಳನ್ನು ತುಂಬಲಾಗುತ್ತಲೇ ಇಲ್ಲ. ವಿವಿಧ ರಾಜ್ಯಗಳಲ್ಲಿನ ಸರ್ಕಾರಿ ಉದ್ಯೋಗಗಳ ಸ್ಥಿತಿಗತಿ ಏನು? ವಿವಿಧ ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳೆಷ್ಟು?
ಸರ್ಕಾರದ ಬಳಿ ಉದ್ಯೋಗಗಳಿವೆ. ಆದರೆ ನೇಮಕಾತಿ ಆಗುತ್ತಲೇ ಇಲ್ಲ. ಸಾವಿರ ಹುದ್ದೆಗಳಿಗೆ ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿ ಕಾಯುತ್ತಾರೆ. ಹರಿಯಾಣದಲ್ಲಿ 2023ರಲ್ಲಿ ಗ್ರೂಪ್ ಡಿ ಯ 13,536 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದವರು 13,75,151 ಆಕಾಂಕ್ಷಿಗಳು. ಅವರಲ್ಲಿ 8.5 ಲಕ್ಷ ಆಕಾಂಕ್ಷಿಗಳು ಪರೀಕ್ಷೆ ಬರೆದಿದ್ದರು. ಗುಜರಾತಿನಲ್ಲಿ 2023ರ ಡಿಸೆಂಬರ್ನಲ್ಲಿ ಗುಜರಾತ್ ಸಬಾರ್ಡಿನೇಟ್ ಸೆಲೆಕ್ಷನ್ ಬೋರ್ಡ್ 2,500 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಕರೆದಾಗ ರಾಜ್ಯದ ಇಲಾಖೆಗಳಿಂದ ಒಂದು ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವು ಕೆಲವು ಉದಾಹರಣೆಗಳಷ್ಟೇ. 2015ರಿಂದ 2023ರ ಅವಧಿಯ 8 ವರ್ಷಗಳಲ್ಲಿ ನೌಕರಿಗಾಗಿ ಅರ್ಜಿ ಹಾಕಿಕೊಂಡವರು 22 ಕೋಟಿ. ಆಯ್ಕೆಯಾದವರು 7.22 ಲಕ್ಷ ಮಾತ್ರ.
ಪ್ರಶ್ನೆಪತ್ರಿಕೆ ಸೋರಿಕೆಯಂಥ ಹಗರಣಗಳು ನೇಮಕಾತಿ ಪ್ರಕ್ರಿಯೆಗೇ ಅಡ್ಡಗಾಲಾಗುತ್ತವೆ. ಒಮ್ಮೆ ಹೀಗಾದರೆ ಮತ್ತೆ ಆ ಪ್ರಕ್ರಿಯೆ ಶುರುವಾಗುವುದಕ್ಕೆ ವರ್ಷಗಟ್ಟಲೆ ಸಮಯ ಹಿಡಿಯುತ್ತದೆ.
ಸರ್ಕಾರದ ಬಳಿ ಎಷ್ಟು ಉದ್ಯೋಗಗಳಿವೆ? ಅವುಗಳಲ್ಲಿ ಖಾಲಿ ಇರುವ ಹುದ್ದೆಗಳೆಷ್ಟು? ವಿವಿಧ ರಾಜ್ಯಗಳಲ್ಲಿನ ನೇಮಕಾತಿ ಸ್ಥಿತಿ ಏನಿದೆ? ಸರ್ಕಾರದದ್ದೇ ಅಂಕಿಅಶಗಳ ಪ್ರಕಾರ, ಸರ್ಕಾರದ ಎ,ಬಿ,ಸಿ ಗ್ರೂಪ್ ಹುದ್ದೆಗಳಲ್ಲಿ 40 ಲಕ್ಷ ಮಂಜೂರಾದ ಹುದ್ದೆಗಳಿದ್ದವು. ಅವುಗಳಲ್ಲಿ 2022ರ ಹೊತ್ತಿಗೆ 9 ಲಕ್ಷ 64 ಸಾವಿರ ಅಂದರೆ ಶೇ.24.3ರಷ್ಟು ಹುದ್ದೆಗಳು ಖಾಲಿ ಇದ್ದವು.
ಗ್ರೂಪ್ ಪ್ರಕಾರ ಖಾಲಿ ಇರುವ ಹುದ್ದೆಗಳ ವಿವರವನ್ನು ನೋಡುವುದಾದರೆ, ಗ್ರೂಪ್ ಎ - 32,859 ಅಂದರೆ ಶೇ.22.5. ಗ್ರೂಪ್ ಬಿ (ಗೆಜೆಟೆಡ್) – 18,305 ಅಂದರೆ ಶೇ.15.47. ಗ್ರೂಪ್ ಬಿ (ನಾನ್ ಗೆಜೆಟೆಡ್) - 97,999 ಅಂದರೆ ಶೇ.32.22. ಗ್ರೂಪ್ ಸಿ – 8,33,865 ಅಂದರೆ ಶೇ.23.97.
ರೈಲ್ವೆಯಲ್ಲಿ ಹುದ್ದೆಗಳು ಭರ್ತಿಯಾಗದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಶೇ.15ರಷ್ಟು ರೈಲು ಚಾಲಕರ(ಲೋಕೊ ಪೈಲೆಟ್) ಹುದ್ದೆಗಳು ಖಾಲಿಯಿವೆ ಎಂಬುದು ಆರ್ ಟಿ ಐ ಮೂಲಕ ಸಿಕ್ಕಿರುವ ಮಾಹಿತಿ. 1 ಲಕ್ಷ 27 ಸಾವಿರ ಲೋಕೊ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಗಳ ಹುದ್ದೆಗಳಲ್ಲಿ 18,000 ಹುದ್ದೆಗಳು ಖಾಲಿ ಇದ್ದವು. ಮಂಜೂರಾದ ಹುದ್ದೆಗಳೇ ಹೀಗೆ ಖಾಲಿಯಿದ್ದು, ಲೋಕೊ ಪೈಲಟ್ ಗಳ ಕೊರತೆಯ ನಡುವೆಯೇ ರೈಲುಗಳು ಓಡುವ ಸ್ಥಿತಿ ನಿರ್ಮಾಣವಾಗಿದೆ.
2024ರ ಜನವರಿಯಲ್ಲಿ ರೈಲ್ವೆ ನೇಮಕಾತಿ ಪ್ರಕ್ರಿಯೆ ಶುರು ಮಾಡಿತ್ತು. ಕೇವಲ 5,696 ಹುದ್ದೆಗಳಿಗೆ ಸಹಾಯಕ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು. ಅದಾದ ಬಳಿಕ ಜೂನ್ ನಲ್ಲಿ ಪುನಃ ಪರಿಷ್ಕೃತ ಪಟ್ಟಿ ಎಂದು 18,799 ಸಹಾಯಕ ಲೋಕೋ ಪೈಲಟ್ ಗಳ ಹುದ್ದೆ ವಿಚಾರವಾಗಿ ಸುದ್ದಿ ಬಂದಿತ್ತು.
ಇದು ಕೇವಲ ರೈಲ್ವೆಯಲ್ಲಿನ ಸಮಸ್ಯೆ ಮಾತ್ರವಲ್ಲ. ಕೇಂದ್ರದ ವಿವಿಧ ಇಲಾಖೆಗಳಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳ ಕೊರತೆಯಿದ್ದು, ಖಚಿತ ಅಂಕಿ ಅಂಶಗಳು ಲಭ್ಯವಿಲ್ಲ.
ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ನೋಡುವುದಾದರೆ, ಪೊಲೀಸ್ ಇಲಾಖೆಯಲ್ಲಿನ ಸ್ಥಿತಿ ಏನು? ಕೇಂದ್ರ ಗೃಹ ಖಾತೆ ಅಡಿಯಲ್ಲಿ ಬರುವ ಬ್ಯೂರೊ ಆಫ್ ಪೊಲೀಸ್ ರಿಸರ್ಚ್ & ಡೆವಲಪ್ಮೆಂಟ್ ವರದಿ ಪ್ರಕಾರ, 2023ರ ಜನವರಿಯವರೆಗೆ ದೇಶದಲ್ಲಿ 18 ಲಕ್ಷ 33 ಸಾವಿರ ಮಂಜೂರಾದ ಸಿವಿಲ್ ಪೊಲೀಸ್ ಹುದ್ದೆಗಳಿದ್ದವು. ಅವುಗಳಲ್ಲಿ 4 ಲಕ್ಷ 33 ಸಾವಿರ ಹುದ್ದೆಗಳು ಖಾಲಿಯಿದ್ದವು. ಮೀಸಲು ಪೊಲೀಸ್ ಪಡೆ ಇವನ್ನೆಲ್ಲ ತೆಗೆದುಕೊಂಡರೆ ದೇಶದಲ್ಲಿ 27 ಲಕ್ಷ 22 ಸಾವಿರ ಹುದ್ದೆಗಳಿದ್ದವು. ಅವುಗಳಲ್ಲಿ 5 ಲಕ್ಷ 81 ಸಾವಿರ ಹುದ್ದೆಗಳು ಖಾಲಿಯಿದ್ದವು. ಐಜಿ, ಡಿಐಜಿ ಮಟ್ಟದ 1,117 ಹುದ್ದೆಗಳಲ್ಲಿ 183 ಖಾಲಿಯಿದ್ದವು.
ರಾಜ್ಯವಾರು ನೋಡಿಕೊಂಡರೆ ತುಂಬ ಹುದ್ದೆಗಳು ಖಾಲಿಯಿರುವುದು ಉತ್ತರ ಪ್ರದೇಶದಲ್ಲಿ. ಉತ್ತರ ಪ್ರದೇಶವೊಂದರಲ್ಲಿಯೇ 1 ಲಕ್ಷ 9 ಸಾವಿರ ಹುದ್ದೆಗಳು ಖಾಲಿಯಿದ್ದವು. ಪಶ್ಚಿಮ ಬಂಗಾಳದಲ್ಲಿ 65 ಸಾವಿರ ಹುದ್ದೆಗಳು ಖಾಲಿಯಿದ್ದವು. ಮಹಾರಾಷ್ಟ್ರದಲ್ಲಿ 60 ಸಾವಿರ ಹುದ್ದೆಗಳು ಖಾಲಿಯಿದ್ದವು.
ಬಹಳ ಮುಖ್ಯ ಇಲಾಖೆಯಾದ ಪೊಲೀಸ್ ಇಲಾಖೆಯಲ್ಲಿಯೇ ಇಷ್ಟೊಂದು ಕೊರತೆ! ಸಹಜವಾಗಿಯೇ ಇದು ಕಾನೂನು ಸುವ್ಯವಸ್ಥೆ ಮೇಲೆ ಪ್ರಭಾವ ಬೀರುತ್ತದೆ.
ಇನ್ನು ಶಿಕ್ಷಣ ಇಲಾಖೆಯಲ್ಲಿನ ಸ್ಥಿತಿ ಏನು? 2023ರ ಡಿಸೆಂಬರ್ ನಲ್ಲಿ ಲೋಕಸಭೆಯಲ್ಲಿ ಸರ್ಕಾರ ನೀಡಿದ್ದ ಮಾಹಿತಿ ಪ್ರಕಾರ, ಸರ್ಕಾರಿ ಸಂಸ್ಥೆಗಳಲ್ಲಿ 8 ಲಕ್ಷ 40 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದವು. ಅವುಗಳಲ್ಲಿ 7 ಲಕ್ಷ 22 ಸಾವಿರ ಹುದ್ದೆಗಳು ಪ್ರಾಥಮಿಕ ಹಂತದವು. ಅಂದರೆ 1ನೇ ತರಗತಿಯಿಂದ 8ರವರೆಗಿನ ಶಿಕ್ಷಕರ ಹುದ್ದೆಗಳು.
ರಾಜ್ಯವಾರು ನೋಡಿಕೊಂಡರೆ, ಬಿಹಾರದಲ್ಲಿ 2 ಲಕ್ಷ 24 ಸಾವಿರ ಹುದ್ದೆಗಳು ಖಾಲಿಯಿದ್ದವು. ಉತ್ತರ ಪ್ರದೇಶದಲ್ಲಿ 1 ಲಕ್ಷ 50 ಸಾವಿರ ಹುದ್ದೆಗಳು ಖಾಲಿಯಿದ್ದವು.
ಇಲ್ಲಿ ಏಳುವ ಪ್ರಶ್ನೆಗಳು ಏನೆಂದರೆ, ಇಷ್ಟೊಂದು ಹುದ್ದೆಗಳು ಖಾಲಿಯಿದ್ದರೂ ಸರ್ಕಾರ ಏಕೆ ಭರ್ತಿ ಮಾಡುತ್ತಿಲ್ಲ? ಇಲ್ಲಿ ಇರುವುದು ಇಚ್ಛಾಶಕ್ತಿಯ ಕೊರೆತೆಯೇ ಅಥವಾ ಬೇರೆ ಕಾರಣಗಳಿವೆಯೆ? ಕೋಟಿಗಟ್ಟಲೆ ಯುವಕರಿಗೆ ಉದ್ಯೋಗ ನೀಡಲು ಬರುವ ಬಜೆಟ್ನಲ್ಲಿ ಸರ್ಕಾರದ ಯೋಜನೆ ಏನು? ವರ್ಷಗಳಿಂದ ಉತ್ತರ ಸಿಗದೇ ಇರುವ ಪ್ರಶ್ನೆಗಳು ಮತ್ತೊಮ್ಮೆ ಎದುರಾಗುತ್ತಿವೆ.