ಅನಾಥ ಮೃತದೇಹಗಳ ಅಂತಿಮ ಸಂಸ್ಕಾರ ನಡೆಸುವ ‘ಪ್ರೀತಿ’
ನಿರ್ಗತಿಕರಿಗೆ ಆಸರೆಯಾದ ‘ಅಮ್ಮನ ಮಡಿಲು’ ಅನಾಥಾಶ್ರಮ
ಬೆಂಗಳೂರು: ಸಮಾಜಸೇವೆ ಮಾಡಲು ಇಂತಹ ಕ್ಷೇತ್ರಗಳೇ ಆಗಬೇಕೆಂದೇನಿಲ್ಲ ಎಂಬುದನ್ನು ರಾಮನಗರ ಜಿಲ್ಲೆಯ ಡಿ.ಎಂ.ಪ್ರೀತಿ ಎಂಬ ಮಹಿಳೆಯು ತೋರಿಸಿಕೊಟ್ಟಿದ್ದಾರೆ. ಹೌದು, ಅನಾಥ ಮೃತದೇಹಗಳಿಗೆ ಅಂತಿಮ ಸಂಸ್ಕಾರ, ಮೃತದೇಹಗಳನ್ನು ವಾರಸುದಾರರಿಗೆ ತಲುಪಿಸುವ ಕೆಲಸ, ‘ಸಾವಿತ್ರಿಬಾಯಿ ಫುಲೆ ಟ್ರಸ್ಟ್’ ಸ್ಥಾಪಿಸುವುದರ ಜೊತೆಗೆ, ನಿರಾಶ್ರಿತ ವೃದ್ಧರು ಹಾಗೂ ಅನಾಥರಿಗಾಗಿ ‘ಅಮ್ಮನ ಮಡಿಲು’ ಅನಾಥಾಶ್ರಮ ತೆರೆಯುವ ಮೂಲಕ ಸದ್ದಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿಸಿದ್ದಾರೆ.
ಡಿ.ಎಂ.ಪ್ರೀತಿ ಅವರು ಏಳೆಂಟು ವರ್ಷಗಳಿಂದ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ, ವಿಶೇಷವಾಗಿ ಕ್ರೈಂ ಪ್ರಕರಣಗಳಲ್ಲಿ ಪರಿಚಯ ಸಿಗದ ಅನಾಥ ಮೃತದೇಹಗಳ ಅಂತಿಮ ಸಂಸ್ಕಾರ ನಡೆಸುತ್ತಿದ್ದಾರೆ. ನೀರಿನಲ್ಲಿ ಮುಳುಗಿ ನಾರುತ್ತಿರುವ ಮೃತದೇಹ, ರೈಲಿಗೆ ಸಿಲುಕಿ ಛಿದ್ರಗೊಂಡ ದೇಹಗಳಿರಲಿ ಯಾವುದನ್ನೂ ಲೆಕ್ಕಿಸದೇ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಹಣದ ತೊಂದರೆಯಿಂದ ಚಿಕಿತ್ಸೆಯಿಲ್ಲದೇ ಮನೆಯಿಂದ ಹೊರದೂಡಲ್ಪಟ್ಟ ಬಹಳಷ್ಟು ವ್ಯಕ್ತಿಗಳು ಮೃತಪಟ್ಟಾಗ, ಮೃತದೇಹಗಳಿಗೆ ಸಂಸ್ಕಾರ ಮಾಡಿದ್ದೇನೆ. ರಾಮನಗರ, ಚನ್ನಪಟ್ಟಣ, ಮಾಗಡಿ ವ್ಯಾಪ್ತಿಗಳಲ್ಲಿ ಮೃತದೇಹಗಳ ವಾರಸುದಾರರ ವಿಳಾಸ ಪತ್ತೆಹಚ್ಚಿ, ಅವರನ್ನು ಸ್ಥಳಕ್ಕೆ ಬರಮಾಡಿಕೊಂಡು, ಮೃತದೇಹವನ್ನು ವಾರಸುದಾರರಿಗೆ ನೀಡಿದ ನಿದರ್ಶನಗಳೂ ಇವೆ ಎನ್ನುತ್ತಾರೆ ಡಿ.ಎಂ.ಪ್ರೀತಿ.
ಅಮ್ಮನ ಮಡಿಲು ಅನಾಥಶ್ರಮ ತೆರೆದಿರುವ ಪ್ರೀತಿ ಅವರು ಅನ್ನ, ಆಶ್ರಯದೊಂದಿಗೆ ಅಲ್ಲಿನ ಮಕ್ಕಳ ವಿದ್ಯಾಭ್ಯಾಸ, ಆಟೊಪಚಾರಗಳಿಗೂ ಪ್ರೋತ್ಸಾಹ ನೀಡುತ್ತಿದ್ದಾರೆ. ಇದಿಷ್ಟೇ ಅಲ್ಲದೆ, ಕೌಟುಂಬಿಕ ಆಪ್ತ ಸಮಾಲೋಚನೆ, ಸತಿ-ಪತಿ, ಅತ್ತೆ-ಸೊಸೆ, ಬಾಲ್ಯ ವಿವಾಹ ಹಾಗೂ ಮಕ್ಕಳ ಸಮಸ್ಯೆಗಳ ಬಗ್ಗೆಯೂ ಆಪ್ತ ಸಮಾಲೋಚನೆಯನ್ನೂ ನಡೆಸುತ್ತಾರೆ.. ಹೀಗೆ ಪ್ರೀತಿ ಅವರ ಸಾಮಾಜಿಕ ಕಳಕಳಿ ಹೊತ್ತ ಸಾರ್ಥಕ ಕೆಲಸಗಳ ಪಟ್ಟಿ ಬೆಳೆಯುತ್ತಲೇ ಇದೆ.
ಹಲವು ಸಂಘಟನೆಗಳಲ್ಲಿ ಸೇವೆ
ಪ್ರಜಾ ಪರಿವರ್ತನಾ ವೇದಿಕೆಯ ರಾಮನಗರ ಜಿಲ್ಲಾಧ್ಯಕ್ಷೆಯಾಗಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಮನಗರ ತಾಲೂಕು ಘಟಕದ ಅಧ್ಯಕ್ಷೆಯಾಗಿ, ರಾಮನಗರ ತಾಲೂಕು ಸ್ತ್ರೀ ಶಕ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆಯಾಗಿ ಹೀಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಮಹಿಳಾ ಸಬಲೀಕರಣದ ವಿಚಾರವಾಗಿ ಸಾಕಷ್ಟು ಸೇವೆಯನ್ನು ಸಲ್ಲಿಸಿರುವ ಪ್ರೀತಿ ಅವರು, ‘ನಮಗೆ ಜೀವನ ಕೊಟ್ಟ ಈ ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ತುಡಿತವಿದೆ. ನನ್ನ ವಿದ್ಯಾರ್ಥಿ ಜೀವನದಲ್ಲೇ, ಸಮಾಜಕ್ಕೆ ನನ್ನ ಕೈಯಲ್ಲಾದ ಏನಾದರೂ ಕೆಲಸ ಮಾಡಬೇಕು ಎಂದೆನಿಸಿತು. ಅದನ್ನು ಇದುವರೆಗೂ ಮುಂದುವರಿಸಿಕೊಂಡು ಬಂದಿದ್ದೇನೆ’ ಎನ್ನುತ್ತಾರೆ.
ಮೃತದೇಹಗಳ ಮಾಹಿತಿ ಹೇಗೆ?
ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತೀ ತಿಂಗಳಿಗೆ ಕನಿಷ್ಠ ನಾಲ್ಕೈದು ಅನಾಥ ಮೃತದೇಹಗಳ ಸಂಸ್ಕಾರದಲ್ಲಿ ತೊಡಗುವ ಪ್ರೀತಿ ಅವರಿಗೆ ಮುಖ್ಯವಾಗಿ ಪೊಲೀಸ್ ಇಲಾಖೆಯವರ ಸಹಕಾರದಿಂದಾಗಿ ಅನಾಥ ಮೃತದೇಹಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ. ಉಳಿದಂತೆ, ಆಟೊ, ಆ್ಯಂಬುಲೆನ್ಸ್ ಚಾಲಕರು ಹಾಗೂ ಪ್ರೀತಿ ಅವರ ಸೇವೆಯ ಬಗ್ಗೆ ಗೊತ್ತಿರುವ ಜನ ಸಾಮಾನ್ಯರಿಂದಲೂ ಅವರಿಗೆ ಮಾಹಿತಿ ದೊರೆಯುತ್ತದೆ. ಅಲ್ಲದೆ, ಕರ್ನಾಟಕ ರೈತಸಂಘ, ಹಸಿರುಸೇನೆ ಸೇರಿದಂತೆ ಅನೇಕ ಸಮಾನ ಮನಸ್ಕ ವೇದಿಕೆಗಳು ಇವರ ಬೆಂಬಲಕ್ಕೆ ನಿಂತಿವೆ.