ಬೇಡಿಕೆಯಿದ್ದರೂ ಜೇಬು ತುಂಬಿಸದ ಮಣ್ಣಿನ ಹಣತೆ
ಕುಲ ಕಸುಬಿನಿಂದ ಹಿಂದೆ ಸರಿಯುತ್ತಿರುವ ಕುಟುಂಬಗಳು
Photo: twitter
ಮಂಗಳೂರು: ಹಿಂದೆಲ್ಲಾ ದೀಪಾವಳಿಗೆ ನಾಲ್ಕೈದು ತಿಂಗಳು ಮುಂಚಿತವಾಗಿ ಉರ್ವಾ ಮಾರಿಯಮ್ಮ ದೇವಸ್ಥಾನಕ್ಕೆ ತಾಗಿಕೊಂಡಿರುವ ವಠಾರದ ಹತ್ತಾರು ಕುಂಬಾರ ಕುಟುಂಬಗಳು ಮಣ್ಣಿನ ಹಣತೆ ತಯಾರಿಯಲ್ಲಿ ಬ್ಯುಸಿಯಾಗಿರುತ್ತಿದ್ದವು. ವರ್ಷವೊಂದಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಹಣತೆ ತಯಾರಿಸುತ್ತಿದ್ದ ಈ ಕುಟುಂಬಗಳ ಅಂಗಳದಲ್ಲಿ ಈಗ ದೀಪಾವಳಿಯ ಸಂದರ್ಭಕ್ಕೂ ಮಣ್ಣಿನ ಹಣತೆಗಳು ಕಾಣ ಸಿಗುತ್ತಿಲ್ಲ.
ಹಾಗೆಂದು ಇವರು ತಯಾರಿಸುವ ಮಣ್ಣಿನ ಹಣತೆಗಳಿಗೆ ಬೇಡಿಕೆ ಇಲ್ಲವೆಂದಲ್ಲ. ಆದರೆ ಅದರ ಕಚ್ಚಾ ವಸ್ತುಗಳ ಖರೀದಿ, ಖರ್ಚುವೆಚ್ಚಗಳನ್ನು ಪೂರೈಸಿ ಆ ಹಣತೆಗಳಿಂದ ಈ ಕುಟುಂಬಗಳ ಹೊಟ್ಟೆಪಾಡಿಗಾಗಿ ಜೇಬು ತುಂಬಿಸಲು ಸಾಧ್ಯವಾಗುತ್ತಿಲ್ಲ. ಆ ಕಾರಣದಿಂದ ಕಳೆದ ನಾಲ್ಕೈದು ವರ್ಷಗಳಿಂದ ಈ ಕುಟುಂಬಗಳು ಹಣತೆ ತಯಾರಿಕೆಯನ್ನೇ ಕೈ ಬಿಟ್ಟಿವೆ.
ಮಾರುಕಟ್ಟೆಯಲ್ಲಿ ಪ್ರಸಕ್ತ ವಿನ್ಯಾಸಮಯ ಪಿಂಗಾಣಿಯ ಹಣತೆಗಳ ಜತೆಗೆ ಹೊರ ಜಿಲ್ಲೆ ಮಾತ್ರವಲ್ಲದೆ, ಕೇರಳ, ತಮಿಳುನಾಡು ರಾಜ್ಯಗಳಿಂದ ಅಚ್ಚು ಅಥವಾ ಯಂತ್ರಗಳಲ್ಲಿ ತಯಾರಿಸಿದ ಹಣತೆಗಳು ಕಡಿಮೆ ದರದಲ್ಲಿ ಪೂರೈಕೆ ಆಗುತ್ತಿವೆ. ಮಣ್ಣಿನ ಪರಿಕರಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳಾದ ಆವೆ ಮಣ್ಣು, ಕಟ್ಟಿಗೆಯ ಬೆಲೆ ವಿಪರೀತ ಏರಿಕೆಯಾಗಿವೆ. ಈ ಖರ್ಚುನ್ನು ಸರಿದೂಗಿಸಿಕೊಂಡು ಹಣತೆ ತಯಾರಿಸಿದರೆ ಹಾಕಿದ ಬಂಡವಾಳದ ಹಣ ಪಡೆಯಲೂ ಸಾಕಾಗದು. ಮನೆಯವರಲ್ಲಾ ಸೇರಿ ಬೆಳಗ್ಗಿನಿಂದ ಸಂಜೆಯವರೆಗೆ ಆ ಹಣತೆ ತಯಾರಿಸಿ ಹೊಟ್ಟೆ ತುಂಬುವುದಾದರೂ ಹೇಗೆ? ಇನ್ನು ಕೆಲಸಕ್ಕೆ ಜನ ಇಟ್ಟು, ಅವರಿಗೆ ಸಂಬಳ ಕೊಟ್ಟು ಈ ಕಸುಬು ಮಾಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ಈ ಕುಟುಂಬಗಳ ಸದಸ್ಯರು.
‘‘ಹಿಂದೆಲ್ಲಾ ನಾವು ಮನೆಯವರೆಲ್ಲಾ ಸೇರಿ, (ಅದರಲ್ಲೂ ಮಕ್ಕಳು ಮತ್ತು ಮಹಿಳೆಯರು) ದಸರಾಕ್ಕೂ ಮುನ್ನವೇ ದೀಪಾವಳಿಗೆ ಮಣ್ಣಿನ ಹಣತೆಗಳನ್ನೇ ತಯಾರಿಸಲು ಆರಂಭಿಸುತ್ತಿದ್ದೆವು. ವರ್ಷವೊಂದಕ್ಕೆ ಮನೆಯೊಂದರಲ್ಲಿ ಸುಮಾರು ೨ ಲಕ್ಷದಷ್ಟು ಮಣ್ಣಿನ ಹಣತೆಗಳು ತಯಾರಾಗುತ್ತಿದ್ದವು. ಸ್ಥಳೀಯವಾಗಿ ಹಾಗೂ ಉಡುಪಿ, ಕಾಸರಗೋಡು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೂ ಇಲ್ಲಿಂದ ಹಣತೆಗಳು ಪೂರೈಕೆಯಾಗುತ್ತಿತ್ತು. ಆದರೆ ಮಾರುಕಟ್ಟೆಯಲ್ಲಿ ಪಿಂಗಾಣಿಯ ಆಲಂಕಾರಿಕ ಹಣತೆಗಳು ಕಡಿಮೆ ದರದಲ್ಲಿ ಲಭ್ಯವಾಗಲು ಆರಂಭವಾದ ಬಳಿಕ ನಮ್ಮ ಹಣತೆಗಳನ್ನು ಕೊಳ್ಳುವವರು ಕಡಿಮೆಯಾಗಿದ್ದಾರೆ. ಇದರಿಂದಾಗಿ ಹಣತೆ ತಯಾರಿಸುವುದನ್ನೇ ಕೈ ಬಿಡಬೇಕಾಯಿತು’’ ಎಂದು ನೋವು ತೋಡಿಕೊಳ್ಳುತ್ತಾರೆ ಹಣತೆ ತಯಾರಕ ಮಹಿಳೆ ಸಾವಿತ್ರಿ.
ತೆಲುಗು ಮಾತೃಭಾಷೆಯ ಈ ಕುಟುಂಬಗಳು ತೆಲುಗು ಕುಂಬಾರರಾಗಿದ್ದು, ಬೆರಳೆ
ಕೆಯ ಮನೆಗಳವರು ಮಾತ್ರವೇ ಕುಂಬಾರಿಕೆಯ ಸಾಂಪ್ರದಾಯಿಕ ಚಕ್ರದಲ್ಲಿ ಕೆಲವೊಂದು ಮ್ಣನ ಪರಿಕರಗಳನ್ನು ತಯಾರಿಸುತ್ತಿದ್ದಾರೆ. ಇದಕ್ಕೆ ಬೇಕಾಗುವ ಆವೆ ಮಣ್ಣನ್ನು ಮುಖ್ಯವಾಗಿ ಪೊಳಲಿ ಸೇರಿದಂತೆ ನಗರದ ಹೊರ ಪ್ರದೇಶಗಳಿಂದ ತರಿಸಲಾಗುತ್ತದೆ.
ಕಳೆದ ೫ ದಶಕಗಳಿಂದ ಹಣತೆ ತಯಾರಿಕೆಯಲ್ಲಿ ತೊಡಗಿದ್ದ ಲಿಂಗಯ್ಯ ಎಂಬವರು ಹಿಂದೆ ಮಣ್ಣಿನ ಪರಿಕರಗಳನ್ನು ತಯಾರಿಸುತ್ತಿದ್ದ ಮರದ ಚಕ್ರ ಹಾಳಾಗಿ ಮೂಲೆ ಸೇರಿದೆ. ಆ ಜಾಗದಲ್ಲಿ ವಿದ್ಯುತ್ ಚಾಲಿತ ಯಂತ್ರ ಬಂದಿದ್ದು, ಅದರಲ್ಲಿ ಆವೆಮಣ್ಣಿನಲ್ಲಿ ದೊಡ್ಡ ಹಣತೆ, ಧೂಪ ಹಾಕುವ ಪರಿಕರಗಳನ್ನು ತಯಾರಿಸುತ್ತಿದ್ದಾರೆ.
ಲಿಂಗಯ್ಯ ಅವರ ಅಕ್ಕನ ಮಕ್ಕಳಾದ ರಾಜೇಶ್ ಹಾಗೂ ಗೌತಮ್ ಅವರೂ ಪಕ್ಕದಲ್ಲೇ ತಮ್ಮ ಮನೆಯಲ್ಲಿ ಹೂಜಿ, ಮಡಿಕೆಗಳನ್ನು ತಯಾರಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು ಯಾರೂ ಪ್ರಸಕ್ತ ಈ ಕಸುಬಿನಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೊಟ್ಟೆಪಾಡಿಗಾಗಿ ಸದ್ಯ ನಾವು ಕಲಿತ ಈ ಕಸುಬನ್ನು ಮುಂದುವರಿಸಿದ್ದೇವೆ. ನಮ್ಮ ಬಳಿಕ ಈ ಕುಲಕಸುಬು ಮುಂದುವರಿಯುವ ಲಕ್ಷಣ ಕಾಣುತ್ತಿಲ್ಲ. ನಾವೂ ಏನೂ ಮಾಡುವಂತಿಲ್ಲ ಎನ್ನುವುದು ರಾಜೇಶ್ ಅವರ ಮಾತು.
ಗುಡಿ ಕೈಗಾರಿಕೆ, ಕರಕುಶಲ ವಸ್ತುಗಳ ತಯಾರಿಕೆಗಾಗಿ ಸರಕಾರಗಳಿಂದ ವಿಭಿನ್ನ ರೀತಿಯ ಸಾಲ ಸೌಲಭ್ಯ, ಸ್ಟಾರ್ಟ್ಅಪ್ಗಾಗಿ ವ್ಯವಸ್ಥೆಗಳಿವೆಯಲ್ಲಾ ಅದಕ್ಯಾಕೆ ಪ್ರಯತ್ನಿಸುತ್ತಿಲ್ಲ ? ಈ ಬಗ್ಗೆ ಸ್ಥಳೀಯವಾಗಿ ಜನಪ್ರತಿನಿಧಿಗಳಿಂದ ನಿಮಗೆ ಸಹಕಾರ ಸಿಗುತ್ತಿಲ್ಲವೇ ಎಂದು ಪ್ರಶ್ನಿಸಿದರೆ, ‘ಬ್ಯಾಂಕ್ನಲ್ಲಿ ನಮ್ಮ ಕಾರ್ಯಕ್ಕೆ ಹೂಡಿಕೆಗಾಗಿ ಸಾಲ ಕೇಳಲು ಹೋದರೆ ಹಲವು ದಾಖಲೆಗಳನ್ನು ಕೇಳುತ್ತಾರೆ. ಅದನ್ನು ನಾವು ಎಲ್ಲಿಂದ ತರುವುದು ಎನ್ನುವುದು ಅವರ ಮರು ಪ್ರಶ್ನೆಯಾಗಿರುತ್ತದೆ.
ಒಟ್ಟಿನಲ್ಲಿ ಆಧುನಿಕತೆ, ಯಾಂತ್ರೀಕರಣ ಭರಾಟೆ ಹಾಗೂ ಅನಿವಾರ್ಯತೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ಗುಡಿ ಹಾಗೂ ಕುಲಕಸುಬುಗಳು ಮರೆಯಾಗುತ್ತಿವೆ. ಸರಕಾರದ ಯೋಜನೆಗಳು, ಸಾಲ ಸೌಲಭ್ಯಗಳು ಕೂಡಾ ಇಂತಹ ಕುಟುಂಬಗಳಿಗೆ ತಲುಪದಿರುವ ಕಾರಣ, ಇಂತಹ ಸಾಂಪ್ರದಾಯಿಕ ಕಸುಬು ಮೂಲೆಗುಂಪಾಗುತ್ತಿರುವ ಜತೆಗೆ ಕುಟುಂಬಗಳು ಅದರಿಂದ ದೂರವಾಗುತ್ತಿವೆ.
ಇಲ್ಲಿನ ಸುಮಾರು ೧೦ಕ್ಕೂ ಅಧಿಕ ಕುಟುಂಬಗಳು ತಲೆತಲಾಂತರದಿಂದ ಹಣತೆ ಸೇರಿದಂತೆ, ನಾನಾ ರೀತಿಯ ಮಣ್ಣಿನ ಸಾಮಗ್ರಿಗಳನ್ನೇ ತಯಾರಿಸಿ ಈ ಕುಂಬಾರಿಕೆಯಲ್ಲೇ ತಮ್ಮ ಜೀವನವನ್ನು ಸಾಗಿಸಿದವರು. ಈಗ ಎರಡು ಕುಟುಂಬಗಳ ಮೂರ್ನಾಲ್ಕು ಮಂದಿ ಮಾತ್ರವೇ ಮಣ್ಣಿನ ಹೂಜಿ, ಮಡಿಕೆ, ಆಲಂಕಾರಿಕ ದೊಡ್ಡ ಹಣತೆ ಸೇರಿದಂತೆ ಇತರ ಕೆಲವೊಂದು ಪರಿಕರಗಳನ್ನು ತಯಾರಿಸುತ್ತಿದ್ದಾರೆ.
- ಸಾವಿತ್ರಿ, ಹಣತೆ ತಯಾರಕಿ
ನಾನು ನನ್ನ ೧೨ನೆ ವಯಸ್ಸಿನಿಂದಲೇ ಈ ಕುಂಬಾರಿಕೆಯನ್ನು ಮಾಡಿಕೊಂಡು ಬಂದಿದ್ದೇನೆ. ದೀಪಾವಳಿ ಮಾತ್ರವಲ್ಲದೆ, ಸ್ಥಳೀಯವಾಗಿ ದೇವಾಲಯಗಳ ವಿಶೇಷ ಪೂಜೆ, ಹಬ್ಬಗಳಿಗೂ ಇಲ್ಲಿಂದ ಹಣತೆಗಳು ಪೂರೈಕೆಯಾಗುತ್ತಿತ್ತು. ಈಗಲೂ ಕೆಲವರು ಮಣ್ಣಿನ ಹಣತೆ ಕೇಳಿಕೊಂಡು ಬರುತ್ತಾರೆ. ಬೇಡಿಕೆ ಇದೆ, ಹಾಗಾಗಿ ಪೂರೈಕೆ ಮಾಡಲು ಸಾಧ್ಯವಿಲ್ಲ ಎನ್ನುವುದಕ್ಕಿಂತಲೂ ಅದರ ಖರ್ಚು ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ.
- ಲಿಂಗಯ್ಯ, ಹಣತೆ ತಯಾರಕರು