ದಾಳಿಂಬೆ ಬೆಳೆದು ಸಮೃದ್ಧ ಜೀವನ ನಡೆಸುತ್ತಿರುವ ವೃದ್ಧೆ
ತಳಸಮುದಾಯದ ಮಹಿಳೆಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆ

PC | AI
ಚಿಕ್ಕಮಗಳೂರು : ತಳ ಸಮುದಾಯವಾಗಿರುವ ಸುಡುಗಾಡು ಸಿದ್ಧ ಸಮುದಾಯದ ಅನಕ್ಷರಸ್ಥ ವಯೋವೃದ್ಧೆಯೊಬ್ಬರು ಕೃಷಿ ಜ್ಞಾನ ಬೆಳೆಸಿಕೊಂಡು ದಾಳಿಂಬೆ ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಎಲ್ಲರಿಗೂ ಮಾದರಿಯಾಗುತ್ತಿದೆ.
ಜಿಲ್ಲೆಯ ಕಡೂರು ತಾಲೂಕಿನ ಹೇಮಗಿರಿ ಬೆಟ್ಟದ ಸುತ್ತಲಿನ ಗ್ರಾಮವಾಗಿರುವ ಅಂಚೆ ಚೋಮನ ಹಳ್ಳಿಯಲ್ಲಿ ನೆಲೆಸಿರುವ ಅತ್ಯಂತ ಹಿಂದುಳಿದ ಸಮಾಜವೆಂದೇ ಪರಿಗಣಿತವಾಗಿರುವ ಹಾಗೂ ಅಲೆಮಾರಿ ಸಮುದಾಯವಾಗಿರುವ ಸುಡುಗಾಡು ಸಿದ್ಧರ ಸಮಾಜದ ವೃದ್ಧ ಮಹಿಳೆ ಸಾವಿತ್ರಮ್ಮ ಸ್ವಯಂ ಕೃಷಿಯಿಂದ ದಾಳಿಂಬೆ ಬೆಳೆದು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಆರ್ಥಿಕಾಭಿವೃದ್ಧಿಯೊಂದಿಗೆ ಸ್ವಾವಲಂಬನೆಯ ಜೀವನ ನಡೆಸುತ್ತಾ ಇತರರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ.
ತುಂಬು ಕುಟುಂಬದ ನಿರ್ವಹಣೆ, ಬದುಕಿನ ಅನಿವಾರ್ಯತೆಯನ್ನು ಸವಾಲಿನಂತೆ ಸ್ವೀಕರಿಸಿ, ತಮಗಿದ್ದ 3.20 ಎಕರೆ ಭೂಮಿಯಲ್ಲೇ ಯಾರ ನೆರವಿಲ್ಲದೆ ಶ್ರಮಪಟ್ಟು ಮಾಡಿದ ಕೃಷಿ ಇದೀಗ ಸಾವಿತ್ರಮ್ಮಳ ಕೈಹಿಡಿದಿದೆ. ಹಿಂದೆ ರಾಗಿ, ಜೋಳ ಬೆಳೆಯುತ್ತಿದ್ದ ಸಾವಿತ್ರಮ್ಮ ಕಳೆದ 3-4 ವರ್ಷಗಳಿಂದ ದಾಳಿಂಬೆ ಬೆಳೆಯಲು ಆರಂಭಿಸಿದ್ದಾರೆ. ತಮ್ಮ ಜಮೀನಿನಲ್ಲಿ ಯಾರ ನೆರವಿಲ್ಲದೆ ಸಾಲ ಮಾಡಿ 1,183 ದಾಳಿಂಬೆ ಗಿಡಗಳನ್ನು ಬೆಳೆದಿರುವ ಸಾವಿತ್ರಮ್ಮ ಸಾವಯವ ಕೃಷಿ ಮೂಲಕ ಈ ಬಾರಿ ಹೆಚ್ಚಿನ ಇಳುವರಿ ಪಡೆಯುವ ಮೂಲಕ ಅಧಿಕ ಲಾಭ ಗಳಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.
ಬರ ಪೀಡಿತ ಪ್ರದೇಶದಲ್ಲಿ ದಾಳಿಂಬೆಯಂತಹ ಹಣ್ಣಿನ ಕೃಷಿಗೆ ಮುಂದಾಗಿ ಅದರಲ್ಲೂ ಸೈ ಎನಿಸಿಕೊಂಡಿರುವ ಸಾವಿತ್ರಮ್ಮ ಸುತ್ತಮುತ್ತಲ ದಾಳಿಂಬೆ ಕೃಷಿಕರನ್ನು ಚಕಿತರನ್ನಾಗಿಸಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿದರೂ ದಾಳಿಂಬೆ ಬೆಳೆ ನಿರೀಕ್ಷಿತ ಫಸಲು ನೀಡದ ಸಂದರ್ಭದಲ್ಲಿ ಸಾವಿತ್ರಮ್ಮ ಅವರ ಜಮೀನಿನಲ್ಲಿ ದಾಳಿಂಬೆ ಬೆಳೆ ಸಮೃದ್ಧವಾಗಿ ಬೆಳೆದಿರುವುದರ ಗುಟ್ಟು ತಿಳಿಯಲು ಇತರ ಕೃಷಿಕರು ಸದ್ಯ ಸಾವಿತ್ರಮ್ಮ ಅವರ ಜಮೀನಿನತ್ತ ಮುಖ ಮಾಡುತ್ತಿದ್ದಾರೆ.
ಕೃಷಿ ಕ್ಷೇತ್ರ ಅಲ್ಲದೇ ರಾಜಕಾರಣದಲ್ಲೂ ತೊಡಗಿದ್ದ ಇವರು 2015-16ನೇ ಸಾಲಿನಲ್ಲಿ ಕೆರೆಸಂತೆ ಗ್ರಾಪಂಗೆ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿ ತಮಗೆ ಸಿಕ್ಕ ಅಧಿಕಾರವನ್ನು ಗ್ರಾಮೀಣ ಜನರ ಸೇವೆಗೆ ಮುಡಿಪಾಗಿಸಿಕೊಂಡಿದ್ದರು. ಸದ್ಯ ದಿನವಿಡೀ ಜಮೀನಿನಲ್ಲಿದ್ದು, ಇರುವ 1,183 ದಾಳಿಂಬೆ ಗಿಡಗಳ ಆರೈಕೆಗೆ ಬೇಕಾಗುವ ಔಷಧ ಮತ್ತಿತರ ಪರಿಕರಗಳನ್ನು ಹೊಂದಿಸಿಕೊಂಡು ಕಳೆದ ಮೂರ್ನಾಲ್ಕು ವರ್ಷಗಳಿಂದ ದಾಳಿಂಬೆ ಕೃಷಿ ಮಾಡುತ್ತಿರುವ ಸಾವಿತ್ರಮ್ಮ, 60ನೇ ವಯಸ್ಸಿನಲ್ಲಿಯೂ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ.
ಸುಡುಗಾಡು ಸಿದ್ಧರ ಅಲೆಮಾರಿ ಸಮುದಾಯದ ಈ ಮಹಿಳೆ ಸಾಧನೆಯನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸವನ್ನು ಸರಕಾರ ಮಾಡಬೇಕಿದೆ ಎಂಬುದು ಸಾರ್ವಜನಿಕರು, ಸ್ಥಳೀಯ ರೈತರ ಆಗ್ರಹವಾಗಿದ್ದು, ಅತೀ ಹಿಂದುಳಿದ, ಶೋಷಿತ ಸುಡುಗಾಡು ಸಿದ್ಧರ ಸಮುದಾಯದ ಸಾವಿತ್ರಮ್ಮ ಅವರ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಾವಿತ್ರಮ್ಮ ಅವರ ಪತಿ ನಿಧನರಾಗಿ ಎಂಟು ವರ್ಷ ಕಳೆದಿದೆ. ಪತಿಯ ನಿಧನ ನಂತರ ಪಾಳು ಬಿದ್ದಿದ್ದ ತಮ್ಮ ಜಮೀನಿನಲ್ಲಿ ರಾಗಿ ಬೆಳೆಯುತ್ತಿದ್ದರು. ರಾಗಿ ಬೆಳೆಯಿಂದ ಹೆಚ್ಚು ಲಾಭ ಗಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಣ್ಣಿನ ಬೆಳೆ ಬೆಳೆಯಲು ಯೋಚಿಸಿದ್ದರು, ದಾಳಿಂಬೆ ಬೆಳೆದರೆ ಹೆಚ್ಚು ಲಾಭ ಗಳಿಸಲು ಸಾಧ್ಯ ಎಂದು ಯಾರೋ ಹೇಳಿದ ಸಲಹೆಯಿಂದ ಸಾವಿತ್ರಮ್ಮ ಸಾಲ ಸೂಲ ಮಾಡಿ ತಮ್ಮ ಜಮೀನಿನಲ್ಲಿ 1,183 ದಾಳಿಂಬೆ ಗಿಡಗಳನ್ನು ನೆಟ್ಟು ಅವನ್ನು ಜತನದಿಂದ ಆರೈಕೆ ಮಾಡಿದ ಪರಿಣಾಮ ಇದೀಗ ದಾಳಿಂಬೆ ಅವರ ಕೈ ಹಿಡಿದಿದೆ.