ಇನ್ನೂ 52 ಕೋಟಿ ರೂ. ಪರಿಹಾರ ಪಾವತಿಸದ ಯುಪಿಸಿಎಲ್
ಚೆನ್ನೈ ಹಸಿರು ಪೀಠದ ಆದೇಶಕ್ಕೆ ಎರಡು ವರ್ಷಗಳು ಪೂರ್ಣ

ಉಡುಪಿ : ಪಡುಬಿದ್ರೆಯ ಎಲ್ಲೂರು ಗ್ರಾಮದಲ್ಲಿ 2005ರಿಂದ ಕಾರ್ಯಾಚರಿಸುತ್ತಿರುವ ಅದಾನಿ ಆಡಳಿತದ, ಕಲ್ಲಿದ್ದಲು ಆಧಾರಿತ ಉಡುಪಿ ಉಷ್ಣ ವಿದ್ಯುತ್ ಸ್ಥಾವರ (ಯುಪಿಸಿಎಲ್) ತನ್ನ 10ಕಿ.ಮೀ. ವ್ಯಾಪ್ತಿಯಲ್ಲಿ ಮಾಡಿರುವ ಪರಿಸರ ಹಾನಿಗಾಗಿ 52 ಕೋಟಿ ರೂ.ದಂಡವನ್ನು ಪರಿಹಾರ ರೂಪದಲ್ಲಿ ಪಾವತಿಸುವಂತೆ ಚೆನ್ನೈನ ರಾಷ್ಟ್ರೀಯ ಹಸಿರು ಪೀಠ ಆದೇಶ ನೀಡಿ ಎರಡು ವರ್ಷ 9 ತಿಂಗಳು ಕಳೆದರೂ ಕಂಪೆನಿ ಇದುವರೆಗೆ ನಯಾ ಪೈಸೆ ದಂಡವನ್ನೂ ಪಾವತಿಸಿಲ್ಲ.
ಅಲ್ಲದೇ ಕಾನೂನಿನ ಪ್ರಕಾರ ಯುಪಿಸಿಎಲ್ ನಿಂದ ದಂಡದ ಮೊತ್ತವನ್ನು ವಸೂಲಿ ಮಾಡುವಂತೆ ಹಸಿರು ಪೀಠ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ(ಸಿಪಿಸಿಬಿ) ಆದೇಶವನ್ನು ನೀಡಿದ್ದರೂ, ಕೇಂದ್ರ ಮಂಡಳಿ ಇದುವರೆಗೆ ಈ ಕುರಿತಂತೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂಬುದು ವಿಷಯದ ಕುರಿತಂತೆ ಆರ್ಟಿಐ ಅಡಿ ಪಡೆದ ಮಾಹಿತಿ ಬಹಿರಂಗ ಪಡಿಸಿದೆ.
ಮೂರು ದಶಕಗಳಿಗೂ ಅಧಿಕ ಸಮಯದಿಂದ ಪಡುಬಿದ್ರೆ ಪರಿಸರದಲ್ಲಿ ಉಷ್ಣವಿದ್ಯುತ್ ಸ್ಥಾವರದ ಸ್ಥಾಪನೆ ವಿರುದ್ಧ ಅವಿರತ ಹೋರಾಟ ಮಾಡಿಕೊಂಡು ಬಂದಿದ್ದ ನಂದಿಕೂರು ಜನಜಾಗೃತಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ರಾಷ್ಟ್ರೀಯ ಹಸಿರು ಪೀಠದ (ಗ್ರೀನ್ ಟ್ರಿಬ್ಯೂನಲ್) ದಕ್ಷಿಣ ವಲಯ ಪೀಠದ ಮುಂದೆ ಹೂಡಿದ್ದ ವ್ಯಾಜ್ಯದ ಹಿನ್ನೆಲೆಯಲ್ಲಿ 2022ರ ಮೇ 31ರಂದು ಪೀಠ ತನ್ನ ಅಂತಿಮ ತೀರ್ಪನ್ನು ನೀಡಿತ್ತು.
ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರದಿಂದಾಗಿ ಅತ್ಯಂತ ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟದ ಬುಡದಲ್ಲೇ ಇರುವ ಪಡುಬಿದ್ರೆ ಪರಿಸರದ ರೈತರಿಗೆ ಆಗಿರಬಹುದಾದ ಕೃಷಿ ಹಾನಿ ಹಾಗೂ ಇಲ್ಲಿನ ಜನರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಂಡುಬಂದ ಹಾನಿಯನ್ನು ಪರಿಗಣಿಸಿ ಇದಕ್ಕೆ ಪರಿಹಾರ ರೂಪದಲ್ಲಿ 52,02,50,000ರೂ. ದಂಡ ಪಾವತಿಸುವಂತೆ ಹಸಿರು ಪೀಠ ಆದೇಶಿಸಿತ್ತು.
ಕಂಪೆನಿಯು ಹಿಂದೆ ಪರಿಹಾರ ರೂಪದಲ್ಲಿ ಪಾವತಿಸಿದ್ದ 5 ಕೋಟಿ ರೂ.ಗಳನ್ನು ಗಣನೆಗೆ ತೆಗೆದುಕೊಂಡಿದ್ದ ಹಸಿರು ಪೀಠ, ಉಳಿದ ದಂಡದ ಮೊತ್ತವನ್ನು ಮೂರು ತಿಂಗಳೊಳಗೆ ಪಾವತಿಸುವಂತೆ ಕಂಪೆನಿಗೆ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿತ್ತು. ‘ಒಂದು ವೇಳೆ ಮೂರು ತಿಂಗಳೊಳಗೆ ಕಂಪೆನಿ ದಂಡದ ಮೊತ್ತವನ್ನು ಪಾವತಿಸದಿದ್ದರೆ, ಸಿಪಿಸಿಬಿ ಕಾನೂನಿನಂತೆ ಈ ಮೊತ್ತವನ್ನು ಯುಪಿಸಿಎಲ್ ಕಂಪೆನಿಯಿಂದ ಸಂಗ್ರಹಿಸುವಂತೆ’ ಹಸಿರು ಪೀಠ ತಿಳಿಸಿತ್ತು.
ಆದರೆ ಚೆನ್ನೈ ಹಸಿರು ಪೀಠದ ತೀರ್ಪು ಬಂದು ಎರಡು ವರ್ಷಗಳು ಕಳೆದರೂ ಕಂಪೆನಿ ದಂಡ ಪಾವತಿಸುವ ಅಥವಾ ಸಿಪಿಸಿಬಿ ದಂಡವನ್ನು ಕಂಪೆನಿಯಿಂದ ವಸೂಲಿ ಮಾಡುವ ಯಾವುದೇ ಪ್ರಕ್ರಿಯೆ ನಡೆದೇ ಇಲ್ಲ ಎಂಬುದು ಆರ್ಟಿಐ ಮಾಹಿತಿಯಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಸಿರು ಪೀಠದ ನಿರ್ದೇಶನದಂತೆ 2022ರ ಸೆಪ್ಟಂಬರ್ ತಿಂಗಳೊಳಗೆ ಈ ಎಲ್ಲಾ ಪ್ರಕ್ರಿಯೆ ಮುಗಿಯಬೇಕಿತ್ತು.
ಆಶ್ಚರ್ಯದ ವಿಷಯವೆಂದರೆ ನ್ಯಾಯಮೂರ್ತಿ ಕೆ.ರಾಮಕೃಷ್ಣ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ಹಸಿರು ಪೀಠದ ಆದೇಶದಂತೆ ಕಂಪೆನಿ ದಂಡ ಪಾವತಿಸಲು ವಿಫಲವಾದರೆ ಅದರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದ್ದ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಯಾವುದೇ ಕ್ರಮಕ್ಕೆ ಇದುವರೆಗೆ ಮುಂದಾಗದಿರುವುದು.
ಸಿಪಿಸಿಬಿ ಹೇಳುವಂತೆ ಯುಪಿಸಿಎಲ್ ಹಸಿರು ಪೀಠದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಅಪೀಲು ಹೋಗಿದೆ. ಆದರೆ ಕಂಪೆನಿಯ ಅಪೀಲಿನ ವಿಷಯದಲ್ಲಿ ಸುಪ್ರೀಂ ಕೋರ್ಟ್ ಇದುವರೆಗೆ ಯಾವುದೇ ತಡೆಯಾಜ್ಞೆ (ಸ್ಟೇ) ನೀಡಿಲ್ಲ.
‘ಎನ್ಜಿಟಿಯ ತೀರ್ಪನ್ನು ಪ್ರಶ್ನಿಸಿ ಕಂಪೆನಿ 2022ರ ಆ.26ರಂದು ಸುಪ್ರೀಂ ಕೋರ್ಟ್ಗೆ ಅಪೀಲು ಸಲ್ಲಿಸಿದೆ ಎಂದು ಮೆಸರ್ಸ್ ಅದಾನಿ ಪವರ್ ಲಿ. (ಹಿಂದಿನ ಯುಪಿಸಿಎಲ್) ತಿಳಿಸಿದೆ. ಆದರೆ ಕಂಪೆನಿಯ ಈ ಅಪೀಲು ಇದುವರೆಗೆ ವಿಚಾರಣೆಗೆ ಬಂದಿಲ್ಲ’ ಎಂದು ಸಿಪಿಸಿಬಿ ಆರ್ಟಿಐಗೆ ನೀಡಿದ ಉತ್ತರದಲ್ಲಿ ತಿಳಿಸಿದೆ.
ಯುಪಿಸಿಎಲ್ ಕಂಪೆನಿ ಹಾಕಿದ ಅಪೀಲಿನಲ್ಲಿ ಬಹಳಷ್ಟು ತಪ್ಪುಗಳಿದ್ದವು. ಅವುಗಳನ್ನು ಸರಿಪಡಿಸಿ ಸರಿಯಾದ ಅಪೀಲು ಹಾಕುವಂತೆ ಕೋರ್ಟ್ ಸೂಚಿಸಿತ್ತು. ಅದರ ಒಂದು ಪ್ರತಿಯನ್ನು ಎನ್ಜಿಟಿಗೆ ಅಪೀಲು ಹೋದ ತಮಗೂ ನೀಡಬೇಕೆಂದು ಕೋರ್ಟ್ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅದಿನ್ನೂ ತಮ್ಮ ಕೈಸೇರಿಲ್ಲ ಎಂದು ನಂದಿಕೂರು ಜನಜಾಗೃತಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕೆಲ ಸಮಯದ ಹಿಂದೆ ತಿಳಿಸಿದ್ದರು.
ನಿಜವಾಗಿಯೂ ಎನ್ಜಿಟಿ ಡೆಡ್ಲೈನ್ ಮುಗಿದ ಎರಡು ವಾರಗಳ ನಂತರ ಅಂದರೆ 2022ರ ಸೆ.14ರಂದು ಯುಪಿಸಿಎಲ್ ತನ್ನ ಅಪೀಲಿನಲ್ಲಿದ್ದ 9 ತಪ್ಪುಗಳನ್ನು ಸರಿಪಡಿಸಿ ಸುಪ್ರೀಂ ಕೋರ್ಟ್ಗೆ ಸರಿಯಾದ ಅಪೀಲು ಸಲ್ಲಿಸಿತ್ತು ಎಂದು ತಿಳಿದುಬಂದಿದೆ.
ಪಡುಬಿದ್ರೆ ಪರಿಸರದಲ್ಲಿ ಯುಪಿಸಿಎಲ್ನಿಂದ ರೈತರಿಗೆ ಆಗಿರಬಹುದಾದ ಕೃಷಿ ಹಾನಿಯ ಕುರಿತಂತೆಯೂ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ವಿಶೇಷ ಸಮಿತಿಯೊಂದನ್ನು ರಚಿಸುವಂತೆಯೂ ಹಸಿರು ಪೀಠ ತಿಳಿಸಿತ್ತು. ಸಮಿತಿಯಲ್ಲಿ ಜಿಲ್ಲೆಯ ಕಂದಾಯ, ಕೃಷಿ ಹಾಗೂ ಪರಿಸರ ಮಾಲಿನ್ಯ ಮಂಡಳಿಯ ಅಧಿಕಾರಿಗಳು ಇರುವಂತೆ ಸೂಚಿಸಲಾಗಿತ್ತು.
ಈ ಸಮಿತಿ ನೀಡುವ ವರದಿಯಾಧಾರದಲ್ಲಿ ಕೃಷಿ ಹಾನಿಯ ಮೊತ್ತವನ್ನು ಅಂದಾಜಿಸಿ ಯುಪಿಸಿಎಲ್ ಸಂತ್ರಸ್ತ ರೈತರಿಗೆ ಅದನ್ನು ಪಾವತಿಸುವಂತೆ ಹಸಿರು ಪೀಠದ ಆದೇಶದಲ್ಲಿ ತಿಳಿಸಲಾಗಿತ್ತು.
‘ಕಂಪೆನಿ ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಅಪೀಲು ಹೋದಾಕ್ಷಣ ಸಿಪಿಸಿಬಿಯ ಜವಾಬ್ದಾರಿ ಇಳಿದುಹೋಗುವುದಿಲ್ಲ. ಇದು ಪರಿಸರ ಹಾಗೂ ಜನರ ಆರೋಗ್ಯದಂಥ ಗಂಭೀರ ಸಮಸ್ಯೆಗಳನ್ನು ಒಳಗೊಂಡಿರುವಂಥದ್ದು’ ಎಂದು ಬಾಲಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಈ ವಿಷಯದಲ್ಲಿ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದರೂ ಮಂಡಳಿಯ ನಡೆಯನ್ನು ಒಪ್ಪಬಹುದು. ಆದರೆ ಇಲ್ಲಿ ತಡೆಯಾಜ್ಞೆ ಇಲ್ಲ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಲೈನ್, ನುಂಗಲಾರದ ತುತ್ತು:
ನಿಜವಾಗಿಯೂ ತಲಾ 600 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಸ್ಥಾವರನ್ನು ಹೊಂದಿರುವ ಯುಪಿಸಿಎಲ್, ಅದಾನಿ ಪವರ್ಸ್ನ ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರ ಇನ್ನೂ ಎರಡು ಸ್ಥಾವರಗಳ ವಿಸ್ತರಣೆಗೆ ಮುಂದಾಗಿತ್ತು. ಆದರೆ ಯುಪಿಸಿಎಲ್ನಿಂದ ಕೇರಳಕ್ಕೆ ವಿದ್ಯುತ್ ಪ್ರಸರಣ ಮಾರ್ಗ ಯೋಜನೆ ಸಾಗಲು ಪಲಿಮಾರು, ಮುದರಂಗಡಿ, ಇನ್ನಾ ಗ್ರಾಮಸ್ಥರು ತೋರುತ್ತಿರುವ ಪ್ರತಿರೋಧ ನುಂಗಲಾರದ ತ್ತುತ್ತಿನಂತಾಗಿದೆ.
ಕೇರಳದೊಂದಿಗೆ ಯುಪಿಸಿಎಲ್ ಮಾಡಿಕೊಂಡ ಒಪ್ಪಂದದಂತೆ ವಿದ್ಯುತ್ ಅಲ್ಲಿಗೆ ಹೋಗತೊಡಗಿದರೆ, ಕಂಪೆನಿ ಖಂಡಿತ ಇನ್ನೂ 1,200 ಮೆ.ವ್ಯಾ. ವಿಸ್ತರಣೆಗೆ ಮುಂದಾಗುತ್ತದೆ. ಇದಕ್ಕಾಗಿ ಭೂಸ್ವಾಧೀನ ಸೇರಿದಂತೆ ಎಲ್ಲವೂ ಸಿದ್ಧವಾಗಿದೆ. ಆದರೆ ಈಗಿನ ಒಪ್ಪಂದವೇ ಜಾರಿಗೊಳ್ಳದೇ ಅದು ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ವಿದ್ಯುತ್ ಲೈನ್ ವಿರುದ್ಧ ಹೋರಾಟದ ಮುಂಚೂಣಿಯಲ್ಲಿರುವ ನಾಯಕರೊಬ್ಬರು ತಿಳಿಸಿದರು.
ಎನ್‌ಜಿಟಿ ತೀರ್ಪಿನ ವಿರುದ್ಧ ಯುಪಿಸಿಎಲ್ ಸುಪ್ರೀಂ ಕೋರ್ಟ್ಗೆ ಅಪೀಲು ಹೋಗಿದೆ ಎಂದು ಸಿಪಿಸಿಬಿ ಹೇಳುತ್ತಿರುವುದು ನೆಪ ಮಾತ್ರ. ಯುಪಿಸಿಎಲ್ ತಪ್ಪುಗಳಿಂದ ಕೂಡಿದ ಅಪೀಲನ್ನು ಸುಪ್ರೀಂ ಕೋರ್ಟ್ನ ಮುಂದೆ ಸಲ್ಲಿಸಿದ್ದು, ತಿಂಗಳುಗಟ್ಟಲೆ ಅದನ್ನು ಸರಿಪಡಿಸಲಿಲ್ಲ. ಅವರು ೧೯ ಮಂದಿಯನ್ನು ಪ್ರತಿವಾದಿಗಳಾಗಿ ಹೆಸರಿಸಿದ್ದಾರೆ. ಆದರೆ ಅವರ್ಯಾರು ಕೇಸಿಗೆ ಸಂಬಂಧಿಸಿದವರೇ ಅಲ್ಲ. ಈ ಬಗ್ಗೆ ನಮಗೆ ಇನ್ನೂ ನೋಟಿಸೇ ಬಂದಿಲ್ಲ. ನ್ಯಾಯಾಲಯದಿಂದ ಕನಿಷ್ಠ ಮದ್ಯಂತರ ತಡೆಯಾಜ್ಞೆ ಇಲ್ಲದೇ, ಇಲ್ಲಿ ಸರ್ವೇಗೆ ಅನಗತ್ಯ ವಿಳಂಬ ಮಾಡುತ್ತಿದ್ದಾರೆ.
-ಬಾಲಕೃಷ್ಣ ಶೆಟ್ಟಿ, ಅಧ್ಯಕ್ಷರು, ನಂದಿಕೂರು ಜನಜಾಗೃತಿ ಸಮಿತಿ