ಸಂಸತ್ನ ಮೇಲೆ ಮತ್ತೊಮ್ಮೆ ದಾಳಿ: ಈ ಗಂಭೀರ ವೈಫಲ್ಯಕ್ಕೆ ಹೊಣೆ ಯಾರು?
Photo: PTI
2001ರ ಸಂಸತ್ ಮೇಲಿನ ದಾಳಿಗೆ 22 ವರ್ಷವಾಗಿದ್ದು, ಸರಿಯಾಗಿ ಅದೇ ದಿನ ಮತ್ತೆ ಭಾರೀ ಭದ್ರತಾ ವೈಫಲ್ಯವಾಗಿದೆ. ಆಗಂತುಕರು ಲೋಕಸಭೆ ಕಲಾಪ ನಡೆಯುತ್ತಿದ್ದಾಗಲೇ ಲೋಕಸಭೆ ಒಳಗೆ ಪ್ರವೇಶಿಸಿ, ಭಾರೀ ಆತಂಕ ಸೃಷ್ಟಿಸಿದ್ದಾರೆ.
ಅದರ ಬೆನ್ನಿಗೇ ಬಿಜೆಪಿ ದಾಳಿ ಬಗ್ಗೆ ಏನೂ ಹೇಳದೆ ‘‘ಒಬ್ಬ ಏಕಾಂಗಿ ಎಲ್ಲರನ್ನೂ ಮೀರಿಸಬಲ್ಲ’’ ಎಂಬ ಶೀರ್ಷಿಕೆಯ ನರೇಂದ್ರ ಮೋದಿಯವರ ವೀಡಿಯೊ ಒಂದನ್ನು ಶೇರ್ ಮಾಡಿದೆ. ಇದನ್ನು ಹೇಗೆ ಸ್ವೀಕರಿಸಬೇಕು ಎಂಬ ಗೊಂದಲದಲ್ಲಿ ಜನರಿದ್ದಾರೆ.
ಇನ್ನು ಮಡಿಲ ಮಾಧ್ಯಮಗಳ ರಿಪೋರ್ಟರ್ಗಳು ಸುಟ್ಟು ಹೋದ ಸ್ಮೋಕ್ ಕ್ಯಾನ್ ತೋರಿಸಲು ಗಲಾಟೆ ಮಾಡಿಕೊಂಡು ಇಡೀ ದೇಶದೆದುರು ನಗೆಪಾಟಲಿಗೀಡಾದರೆ ಅದರ ಆ್ಯಂಕರ್ಗಳು ಭಾರೀ ಸಂಯಮ ಹಾಗೂ ವಿವೇಕ ಪ್ರದರ್ಶಿಸಿ ಮಾದರಿ ಯಾಗಿದ್ದಾರೆ. ಏಕೋ ಏನೋ, ಈ ಇಡೀ ಪ್ರಕರಣದಲ್ಲಿ ಬೊಬ್ಬೆ ಹಾಕುವುದಕ್ಕೆ, ಚೀರಾಡುವುದಕ್ಕೆ, ಧರ್ಮದ ಸಂಬಂಧ ಕಲ್ಪಿಸುವುದಕ್ಕೆ ಸೂಕ್ತ ಯಾವುದೇ ಹೆಸರುಗಳು ಅವರಿಗೆ ಸಿಗಲೇ ಇಲ್ಲ. ಅವರಿಗೆ ಬೇಕಾದದ್ದು ಸಿಗಲಿಲ್ಲ. ಹಾಗಾಗಿ ನಿನ್ನೆ ಅವರು ಫುಲ್ ಪೀಸ್ಫುಲ್.
ಇಂತಹ ಪ್ರಕರಣಗಳಲ್ಲಿ ತಕ್ಷಣ ಬೀದಿಗೆ ಬಂದು ಚೀರಾಡುವ ಅಮಿತ್ ಮಾಳವಿಯ, ಸಂಬಿತ್ ಪಾತ್ರ, ತೇಜಸ್ವಿ ಸೂರ್ಯ, ಯತ್ನಾಳ್, ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಈಶ್ವರಪ್ಪ, ಚಕ್ರವರ್ತಿ ಸೂಲಿಬೆಲೆ ಎಲ್ಲರೂ ಗಪ್ ಚುಪ್.
ಬುಧವಾರ ಮಧ್ಯಾಹ್ನ ಕಲಾಪ ನಡೆಯುತ್ತಿದ್ಧಾಗಲೇ ಪ್ರೇಕ್ಷಕರ ಗ್ಯಾಲರಿಯಿಂದ ಹಾರಿದ್ದ ಇಬ್ಬರು ಆಗಂತುಕರು ಹಳದಿ ಬಣ್ಣದ ಹೊಗೆ ಎರಚಿ ಆತಂಕದ ವಾತಾವರಣ ಉಂಟು ಮಾಡಿದರು. ಸಂಸತ್ತಿನ ಹೊರಗೂ ಇಂಥದೇ ಆತಂಕದ ವಾತಾವರಣ ಸೃಷ್ಟಿಸುವಲ್ಲಿ ಮತ್ತಿಬ್ಬರು ತೊಡಗಿದ್ದರು. ಪೊಲೀಸರು ಐವರನ್ನೂ ಬಂಧಿಸಿದ್ದಾ ರಾದರೂ, ಒಟ್ಟು ಆರು ಜನ ಪಾಲ್ಗೊಂಡಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗಿದೆ.
ಇದೊಂದು ಬಹುದೊಡ್ಡ ಭದ್ರತಾ ವೈಫಲ್ಯ ವಾಗಿದ್ದು, ಉತ್ತರಿಸಬೇಕಾದ ಜವಾಬ್ದಾರಿ ಈ ದೇಶದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರದಾಗಿದೆ.
ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ಇದೆ ಎಂದು ಹೇಳಲಾದ ನೂತನ ಸಂಸತ್ ಭವನದಲ್ಲಿ ಒಂದು ಮಾಲ್ ಒಳಗೆ ಹೋಗುವಾಗಲೂ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಲಾಗುತ್ತದೆ. ಪ್ರತೀ ಹೆಜ್ಜೆ ಹೆಜ್ಜೆಗೂ ಭಾರೀ ಬಂದೋಬಸ್ತ್ ಹಾಗೂ ಪ್ರತಿಯೊಂದನ್ನೂ ತಪಾಸಣೆ ಮಾಡಿ ಒಂದು ಪೆನ್ನನ್ನೂ ಒಳಗೆ ತೆಗೆದುಕೊಂಡು ಹೋಗಲು ಬಿಡದಷ್ಟು ಸುರಕ್ಷತೆ ಇರುತ್ತದೆ.
ಅಂತಹ ಬಿಗಿ ಭದ್ರತೆಯಿರುವ ಸಂಸತ್ನ ಒಳಕ್ಕೆ ಇವರಿಬ್ಬರೂ ಸ್ಮೋಕ್ ಕ್ಯಾನ್ ಸಹಿತ ಪ್ರವೇಶಿಸುವುದು ಹೇಗೆ ಸಾಧ್ಯವಾಯಿತು? ಶೂನಲ್ಲಿ ಏನನ್ನಾದರೂ ಅಡಗಿಸಿಟ್ಟುಕೊಂಡು ಒಳಪ್ರವೇಶಿಸಲು ಸಾಧ್ಯವಾಗುವ ಮಟ್ಟಿಗೆ ನಮ್ಮ ಸಂಸತ್ತಿನ ಸ್ಥಿತಿಯಿದೆಯೇ? ಹಾಗಾದರೆ ಇದು ಅದೆಷ್ಟು ದೊಡ್ಡ ಭದ್ರತಾ ವೈಫಲ್ಯ?
ಸ್ಮೋಕ್ ಕ್ಯಾನ್ ಬದಲು ಯಾವುದಾದರೂ ವಿಷಕಾರಿ ಗ್ಯಾಸ್, ಕೆಮಿಕಲ್ ಅಥವಾ ಸಣ್ಣ ಅಸ್ತ್ರ ಹಾಗೇ ಒಳಗೆ ತಲುಪಿದ್ದರೆ ಅದೆಂತಹ ಭಯಾನಕ ಸ್ಥಿತಿ ಅಲ್ಲಿ ನಿರ್ಮಾಣವಾಗುತ್ತಿತ್ತು?
ವಿಶೇಷ ಎಂದರೆ ಈ ಘಟನೆ ನಡೆಯುವ ಅರ್ಧ ಗಂಟೆಯ ಮೊದಲೇ ಸಂಸತ್ತಿನ ಹೊರಗೆ ಓರ್ವ ಮಹಿಳೆ ಮತ್ತೊಬ್ಬ ಯುವಕ ಬಣ್ಣದ ಹೊಗೆ ಸಿಂಪಡಿಸಿ, ಸರ್ವಾಧಿಕಾರ ನಡೆಯುವುದಿಲ್ಲ ಎಂದು ಘೋಷಣೆ ಕೂಗಿದ್ದಾರೆ. ಭಾರತ್ ಮಾತಾಕಿ ಜೈ, ಜೈಭೀಮ್, ಜೈ ಭಾರತ್ ಎಂದೂ ಅವರು ಘೋಷಣೆ ಕೂಗಿದ್ದರು.
ಇನ್ನೂ ವಿಶೇಷ ಅಂದರೆ, ಲೋಕಸಭೆಯೊಳಗೆ ಪ್ರವೇಶಿಸಿದ ಇಬ್ಬರನ್ನೂ ಹಿಡಿದಿದ್ದು ಸಂಸದರು. ಅಲ್ಲಿ ಯಾವುದೇ ಸುರಕ್ಷತಾ ಸಿಬ್ಬಂದಿ ಕಾಣಲೇ ಇಲ್ಲ. ಇಬ್ಬರನ್ನೂ ಹಿಡಿದು ನಿಯಂತ್ರಿಸಿ ಮತ್ತೆ ಸುರಕ್ಷತಾ ಸಿಬ್ಬಂದಿಗೆ ಒಪ್ಪಿಸಿದ್ದು ಸಂಸದರು. ಝಡ್ ಪ್ಲಸ್ ಭದ್ರತೆ ಇರುವ ಸಂಸತ್ತಿನಲ್ಲಿ ಹೀಗೆ ಇಬ್ಬರು ಆಗಂತುಕರು ನುಗ್ಗಿದಾಗ ಅಲ್ಲಿ ಯಾಕೆ ಯಾವುದೇ ಸುರಕ್ಷತಾ ಸಿಬ್ಬಂದಿ ತಕ್ಷಣ ತಲುಪಲಿಲ್ಲ?.
ಇನ್ನು ಸಂಸತ್ತಿನ ಹೊರಗೆ ವಿಪಕ್ಷಗಳಿಗೆ ಪ್ರತಿಭಟನೆ ಮಾಡುವುದಕ್ಕೇ ಅವಕಾಶವಿಲ್ಲ. ಅಂತಹ ಬಿಗಿ ಬಂದೋಬಸ್ತ್ ಇರುವ ಜಾಗದಲ್ಲಿ ಇಬ್ಬರು ಸ್ಮೋಕ್ ಕ್ಯಾನ್ ಜೊತೆ ಹೇಗೆ ಬಂದು ತಲುಪಿದರು? ಅವರಿಬ್ಬರನ್ನು ಬಂಧಿಸಿ ದಾಗ ಅವರ ಸರಿಯಾದ ವಿಚಾರಣೆ ನಡೆಸಿಲ್ಲವೇ? ಒಳಗೆ ಅವರ ಇನ್ನೂ ಇಬ್ಬರು ಸಂಗಾತಿಗಳು ಇದ್ದಾರೆ ಎಂದು ಆಗಲೇ ಪೊಲೀಸರಿಗೆ ಯಾಕೆ ಗೊತ್ತಾಗಲಿಲ್ಲ?.
ವರದಿಗಳ ಪ್ರಕಾರ ಹೊಸ ಸಂಸತ್ತಿನಲ್ಲಿ ಸಂದರ್ಶಕರ ಗ್ಯಾಲರಿ ಕೇವಲ ಆರೂವರೆ ಅಡಿ ಎತ್ತರದಲ್ಲಿದೆ. ಹಳೆ ಸಂಸತ್ತಿನಲ್ಲಿ ಇದರ ಎತ್ತರ ಇನ್ನೂ ಹೆಚ್ಚು ಇತ್ತು. ಅಲ್ಲಿಂದ ಯಾರೂ ಕೆಳಗೆ ಹಾರುವ ಸಾಧ್ಯತೆ ಇರಲಿಲ್ಲ. ಹಾರಿದರೂ ಅವರಿಗೆ ತೀವ್ರ ಪೆಟ್ಟಾಗುವ ಸಾಧ್ಯತೆ ಹೆಚ್ಚಿತ್ತು. ಹಾಗಾದರೆ ಹೊಸ ಸಂಸತ್ತಿನಲ್ಲಿ ಕೇವಲ ಆರೂವರೆ ಅಡಿ ಎತ್ತರದಲ್ಲಿ ಸಂದರ್ಶಕರ ಗ್ಯಾಲರಿ ಮಾಡಲು ಕಾರಣವೇನು?
ಈ ಎರಡೂ ಘಟನೆಗಳಲ್ಲಿ ಭಾಗಿಯಾದ ಐವರನ್ನು ವಶಕ್ಕೆ ಪಡೆಯಲಾಗಿದೆ.
ಸಂಸತ್ ಒಳಗೆ ಪ್ರವೇಶಿಸಿದ ಇಬ್ಬರಲ್ಲಿ ಒಬ್ಬನಾದ ಸಾಗರ್ ಶರ್ಮಾ ಎಂಬಾತ ಲಕ್ನೋದವನಾಗಿದ್ದು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮಾಡಿದ್ದಾನೆ ಎನ್ನಲಾಗಿದೆ. ಇನ್ನೊಬ್ಬ ಆರೋಪಿ ಮನೋರಂಜನ್ ಮೈಸೂರಿನವನು.
ಇವರಿಬ್ಬರೂ ಮೈಸೂರು ಸಂಸದ ಪ್ರತಾಪ ಸಿಂಹ ಅವರಿಂದ ಪಾಸ್ ಪಡೆದು ಒಳಗೆ ಬಂದಿದ್ದರು.
ಸಂಸತ್ ಹೊರಗೆ ಗೊಂದಲ ಸೃಷ್ಟಿಸಿದವರಲ್ಲಿ ಒಬ್ಬಾಕೆ ಹರ್ಯಾಣದ ಹಿಸಾರ್ನ ನೀಲಂ ಹಾಗೂ ಮತ್ತೊಬ್ಬ ಮಹಾರಾಷ್ಟ್ರದ ಲಾತೂರ್ನ ಅಮೊಲ್ ಶಿಂಧೆ ಎಂದು ಗುರುತಿಸಲಾಗಿದೆ.
ಈ ಐವರೂ ಪರಸ್ಪರ ಪರಿಚಿತರಾಗಿದ್ದು, ಗುರುಗ್ರಾಮದಲ್ಲಿ ಒಂದೇ ಮನೆಯಲ್ಲಿ ಇರುತ್ತಿದ್ದರು ಎನ್ನಲಾಗಿದೆ. ಇದೇ ಗುಂಪಿನ ಸದಸ್ಯನೆಂದು ಶಂಕಿಸಲಾಗಿರುವ ಲಲಿತ್ ಎಂಬಾತ ಇವರೊಂದಿಗೆ ಕೃತ್ಯದಲ್ಲಿ ಪಾಲ್ಗೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ಧಾರೆ.
ಪರಾರಿಯಾಗಿರುವ ಆತನಿಗಾಗಿ ಹುಡುಕಾಟ ನಡೆದಿದೆ. 34 ವರ್ಷದ ಮನೋರಂಜನ್ ಮೈಸೂರಿನ ವಿಜಯನಗರ 2ನೇ ಹಂತದ ನಿವಾಸಿಯಾಗಿರುವ ದೇವರಾಜೇಗೌಡ ಅವರ ಪುತ್ರ. ಬೆಂಗಳೂರಿನ ಬಿಐಟಿ ಕಾಲೇಜಿನಿಂದ ಬಿಇ ಪದವಿ ಪಡೆದು ಮನೆಯಲ್ಲೇ ಇದ್ದ ಎನ್ನಲಾಗಿದೆ.
ಮಗ ನೊಂದವರಿಗೆ ಸಹಾಯ ಮಾಡುವ ಮನೋಭಾವದವ ನಾಗಿದ್ದ, ಪ್ರಧಾನಿ ಮೋದಿಯ ಅಭಿಮಾನಿಯಾಗಿದ್ದ, ಪ್ರತಾಪ ಸಿಂಹ ನಮಗೆ ಪರಿಚಿತರು ಎಂದಿದ್ದಾರೆ ತಂದೆ ದೇವರಾಜೇಗೌಡ. ಆರೋಪಿ ಮನೋರಂಜನ್ ಮೈಸೂರು ಸಂಸದ ಪ್ರತಾಪ ಸಿಂಹ ಕಚೇರಿಗೆ ಆಗಾಗ ಭೇಟಿ ನೀಡುತ್ತಿದ್ದ ಎಂದು ವರದಿಗಳು ಹೇಳುತ್ತಿವೆ. ಮತ್ತೊಬ್ಬ ಆರೋಪಿ ಸಾಗರ್ ಶರ್ಮಾನನ್ನು ತನ್ನ ಸ್ನೇಹಿತನೆಂದು ಪರಿಚಯಿಸಿದ್ದ ಎನ್ನಲಾಗಿದೆ. ಸಾಗರ್ ಶರ್ಮಾ ಉತ್ತರ ಪ್ರದೇಶದ ರಾಮನಗರದ ನಿವಾಸಿಯಾಗಿದ್ದು, ತಂದೆ ಮರಗೆಲಸದವರು. ಸಾಗರ್ ಶರ್ಮಾ ಕೆಲ ಕಾಲ ಬೆಂಗಳೂರಿನಲ್ಲಿ ಇದ್ದ ಎನ್ನಲಾಗಿದೆ. ಬಳಿಕ ಲಕ್ನೋಗೆ ಮರಳಿ ಇ-ರಿಕ್ಷಾ ಓಡಿಸುತ್ತಿದ್ದ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ದಿಲ್ಲಿಗೆ ಹೋಗಿದ್ದ ಎಂದು ಹೇಳಲಾಗಿದೆ.
ಮಾಹಿತಿಗಳ ಪ್ರಕಾರ, ಬಂಧಿತ ಮತ್ತಿಬ್ಬರಲ್ಲಿ ಒಬ್ಬರಾದ ನೀಲಂ, ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾರೆ. ಆಕೆ ಯಾವ ಗುರುತಿನ ಚೀಟಿಯನ್ನೂ ಹೊಂದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಗುರುತಿನ ಚೀಟಿಯಿಲ್ಲದೆ ಸಂಸತ್ ಆವರಣ ಪ್ರವೇಶ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಯೂ ಎದ್ದಿದೆ.
ಇನ್ನು ಶಿಂಧೆ ಬಿಎ ಪದವೀಧರನಾಗಿದ್ದು, ಪೊಲೀಸ್ ಮತ್ತು ಸೇನಾ ನೇಮಕಾತಿಯಲ್ಲಿ ಭಾಗವಹಿಸಲು ಯತ್ನಿಸುತ್ತಿದ್ದ ಎನ್ನಲಾಗಿದೆ. ದಿಲ್ಲಿಯಲ್ಲಿ ಸೇನಾ ನೇಮಕಾತಿ ಕ್ಯಾಂಪ್ ನಡೆಯುತ್ತಿದ್ದು, ಅದಕ್ಕಾಗಿ ಹೋಗುತ್ತಿರುವುದಾಗಿ ಹೇಳಿದ್ದ ಎಂದೂ ತಿಳಿದುಬಂದಿದೆ.
ಸಂಸತ್ ಭವನದ ಮೇಲೆ ನಡೆದಿರುವ ದಾಳಿ ಖಂಡನೀಯ ಎಂದಿರುವ ಕರ್ನಾಟಕ ಸಿಎಂ ಸಿದ್ದರಾಮಯ್ಯ, ನಿಷ್ಪಕ್ಷ ತನಿಖೆ ನಡೆಸಿ ಘಟನೆಯ ಹಿಂದಿನ ಸಂಪೂರ್ಣ ಸತ್ಯವನ್ನು ದೇಶದ ಮುಂದಿಡುವುದು ಕೇಂದ್ರ ಸರಕಾರದ, ಬಹಳ ಪ್ರಮುಖವಾಗಿ ದೇಶದ ಗೃಹಸಚಿವ ಅಮಿತ್ ಶಾ ಅವರ ಕರ್ತವ್ಯವಾಗಿದೆ ಎಂದಿದ್ಧಾರೆ. ಈ ಕೃತ್ಯದಲ್ಲಿ ಒಳಗಿನವರು ಭಾಗಿಯಾಗಿದ್ದಾರೆಯೇ? ಬಾಹ್ಯ ಶಕ್ತಿಗಳ ಕೈವಾಡ ಇದೆಯೆ? ದೇಶದ ಸಂಸತ್ ಭವನವೇ ಸುರಕ್ಷಿತವಾಗಿಲ್ಲದಿರುವಾಗ ದೇಶದ ಗಡಿ ಸುರಕ್ಷಿತವಾಗಿರುತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಹೊಣೆ ಪ್ರಧಾನಿ ನರೇಂದ್ರ ಮೋದಿ ಅವರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಂಸತ್ ಭವನದ ಮೇಲೆ ದಾಳಿ ನಡೆಸಿದ ಯುವಕರಿಗೆ ಮೈಸೂರಿನ ಲೋಕಸಭಾ ಸದಸ್ಯ ಪ್ರತಾಪ ಸಿಂಹ ಅವರೇ ಪಾಸ್ ನೀಡಿರುವುದು ನಿಜವಾಗಿದ್ದಲ್ಲಿ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ನಾಲ್ವರೂ ಮಾಡಿರುವುದು ಪ್ರಹಸನದ ಹಾಗೆ ಕಾಣಿಸುತ್ತಿದ್ದರೂ, ಇದೊಂದು ಗಂಭೀರ ಭದ್ರತಾ ವೈಫಲ್ಯ ಎಂಬುದು ಸ್ಪಷ್ಟ. ಈ ಘಟನೆಗೆ ಸಾಕ್ಷಿಯಾಗಿದ್ದ ಸಂಸದರಿಗೆ ನಿಜವಾಗಿಯೂ ಇದು ಆಘಾತ ತಂದಿತ್ತು.
‘‘ಅದು ಅತ್ಯಂತ ಗಾಬರಿಯ ವಾತಾವರಣವಾಗಿತ್ತು. ಏನು ಬೇಕಾದರೂ ಆಗಬಹುದಿತ್ತು. ಒಂದು ವೇಳೆ ಅವನು ತನ್ನ ಜೇಬಿನಲ್ಲಿ ಬಾಂಬ್ ಇಲ್ಲವೇ ಬೆಂಕಿ ಹಚ್ಚುವಂಥದ್ದನ್ನೇನಾದರೂ ಇಟ್ಟುಕೊಂಡಿದ್ದರೆ ಏನು ಗತಿಯಾಗುತ್ತಿತ್ತು?’’ ಎಂದು ಟಿಎಂಸಿ ಸಂಸದ ಸುದೀಪ್ ಬಂದೋಪಾಧ್ಯಾಯ ಹೇಳಿದ್ದಾರೆ.
‘‘ಗೃಹ ಸಚಿವ ಅಮಿತ್ ಶಾ ದೊಡ್ಡದಾಗಿ ಭಾಷಣಗಳನ್ನು ಬಿಗಿಯುತ್ತಾರೆ. ಆದರೆ ಸಂಸತ್ತಿನಲ್ಲಿ ಭದ್ರತೆಯನ್ನು ಕಾಪಾಡಲು ಅವರಿಗೆ ಸಾಧ್ಯವಾಗಿಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು’’ ಎಂದು ಟಿಎಂಸಿಯ ಮತ್ತೋರ್ವ ಸಂಸದ ಕಲ್ಯಾಣ್ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
2001ರ ದಾಳಿಯ ಸಮಯದಲ್ಲಿಯೂ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವೇ ಇತ್ತು. ಇದು ದೇಶದ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದೇಶದ ರಕ್ಷಣೆ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡುವ ಪ್ರಧಾನಿ ಮೋದಿಯಾಗಲೀ, ಭದ್ರತೆಯ ಹೊಣೆ ಹೊತ್ತಿರುವ ಗೃಹ ಸಚಿವ ಅಮಿತ್ ಶಾ ಆಗಲಿ ಈ ಆಘಾತಕಾರಿ ವಿದ್ಯಮಾನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರುವುದು ವರದಿಯಾಗಿಲ್ಲ.ಆದರೆ ಅವರು ಉತ್ತರಿಸಲೇಬೇಕಾದ ಹಲವು ಗಂಭೀರ ಪ್ರಶ್ನೆಗಳು ಖಂಡಿತ ಇವೆ.
ಮೊನ್ನೆಯ ಘಟನೆಯಲ್ಲಿ ಭಾಗವಹಿಸಿದವರು ಯಾವುದೇ ಉಗ್ರ ಸಂಘಟನೆಗೆ ಸೇರಿಲ್ಲ ಎಂದಾದರೆ ಅದು ಇನ್ನಷ್ಟು ಕಳವಳದ ವಿಷಯ.
ನಿರುದ್ಯೋಗ ಇತ್ಯಾದಿ ಹತಾಶೆಯಲ್ಲಿ ಯಾರಾದರೂ ಬಂದು ಸಂಸತ್ನಲ್ಲಿ ಇಂತಹ ಕೃತ್ಯ ಎಸಗುವುದು ಅದೆಷ್ಟು ಅಪಾಯಕಾರಿ?
ಇದರಲ್ಲಿ ಇನ್ನೂ ಒಂದು ಅಪಾಯವಿದೆ.
ನಿನ್ನೆಯ ಘಟನೆಯ ಬಳಿಕ ಸಂಸತ್ಗೆ ಸಂದರ್ಶಕರ ಭೇಟಿ ರದ್ದು ಮಾಡಲಾಗಿದೆ. ಇದೇ ನೆಪದಲ್ಲಿ ಪತ್ರಕರ್ತರ ಭೇಟಿಗೆ ಇರುವ ಅನುಮತಿಯನ್ನೂ ರದ್ದು ಮಾಡಿ ಇನ್ನು ಯಾರೂ ಇಲ್ಲಿಗೆ ಬರುವುದು ಬೇಡ, ನಾವೇ ನೋಡಿಕೊಳ್ಳುತ್ತೇವೆ ಎಂದು ಸರಕಾರ ಹೇಳುವ ಅಪಾಯನೂ ಇದೆ. ಅದಾಗಬಾರದು.
ಕಳವಳಕಾರಿ
22 ವರ್ಷಗಳ ಹಿಂದೆ ಸಂಸತ್ ಮೇಲೆ ದಾಳಿಯಾದ ದಿನವೇ ಈ ಘಟನೆ ನಡೆದಿದೆ ಎಂಬುದು ಇನ್ನಷ್ಟು ಆತಂಕದ ವಿಷಯ. ನ್ಯೂಸ್ 24 ವರದಿಯ ಪ್ರಕಾರ ಮೊನ್ನೆ ಬೇರೆ ದಿನಗಳಿಗಿಂತ ಕಡಿಮೆ ಸುರಕ್ಷತಾ ಸಿಬ್ಬಂದಿ ಇದ್ದರು ಎನ್ನಲಾಗಿದೆ. ದಾಳಿ ನಡೆದ 22ನೇ ವಾರ್ಷಿಕ ದಿನದಂದು ಭದ್ರತೆ ಇನ್ನಷ್ಟು ಬಿಗಿ ಇರಬೇಕಿತ್ತಲ್ಲವೇ? ಅದೂ ಖಾಲಿಸ್ತಾನಿ ಉಗ್ರರ ಬೆದರಿಕೆ ಬೇರೆ ಇರುವಾಗ?.
ಪುಲ್ವಾಮದಲ್ಲಿ 2019ರಲ್ಲಿ ಭಯಾನಕ ಭಯೋತ್ಪಾದಕ ದಾಳಿ ನಡೆದು ನಮ್ಮ 40 ವೀರ ಯೋಧರು ಹುತಾತ್ಮರಾದರು. ಆ ದಾಳಿ ಹೇಗೆ ನಡೆಯಿತು ಎಂಬುದಕ್ಕೆ ಇಂದಿಗೂ ದೇಶಕ್ಕೆ ಉತ್ತರ ಸಿಗಲಿಲ್ಲ.
2016ರಲ್ಲಿ ಪಠಾಣ್ ಕೋಟ್ ಸೇನಾ ನೆಲೆ ಮೇಲೆ ಉಗ್ರರ ದಾಳಿ ನಡೆಯಿತು. ಪಾಕಿಸ್ತಾನದ ಮೇಲೆ ಆರೋಪ ಕೇಳಿ ಬಂತು. ಮತ್ತೆ ನೋಡಿದರೆ ಪಾಕಿಸ್ತಾನದ ತನಿಖಾ ತಂಡವನ್ನೇ ಅಲ್ಲಿಗೆ ಬರಲು ಬಿಡಲಾಯಿತು. ಆ ತಂಡದಲ್ಲಿ ಐಎಸ್ಐನವರೂ ಇದ್ದರು ಎಂದು ವರದಿಯಾಯಿತು. ಆರೋಪ ಎದುರಿಸುತ್ತಿರುವ ದೇಶದ ತಂಡವನ್ನೇ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಲು ಈ ಹಿಂದೆಂದೂ ಅವಕಾಶ ನೀಡಿರಲಿಲ್ಲ. ಮತ್ತೆ ಹಾಗೆ ಐಎಸ್ಐ ಅವರನ್ನು ಅಲ್ಲಿಗೆ ಹೋಗಲು ಬಿಟ್ಟಿದ್ದನ್ನು ಸರಕಾರ ಸಮರ್ಥಿಸಿಕೊಂಡಿದ್ದೂ ನಡೆಯಿತು.
2022ರಲ್ಲಿ ಅಮೆರಿಕ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡುವಾಗ ಇನ್ನಿಲ್ಲದ ಭದ್ರತೆ ಇರುವ ಸಮಯದಲ್ಲೇ ರಾಜಧಾನಿ ದಿಲ್ಲಿಯಲ್ಲೇ ಭೀಕರ ಗಲಭೆ ನಡೆಯಿತು. ಹತ್ಯಾಕಾಂಡವೇ ನಡೆದು ಹೋಯಿತು. ಹೇಗೆ ನಡೆಯಿತು ಎಂದು ಇಂದಿಗೂ ಉತ್ತರ ಸಿಕ್ಕಿಲ್ಲ. ಈಗ ನೂತನ ಸಂಸತ್ ಮೇಲೆಯೇ ದಾಳಿ ನಡೆದಿದೆ.
ಈ ಘಟನೆ ಯಾವುದಾದರೂ ಸಂಘಟನೆಯ ಪಿತೂರಿಯೇ?
ಆರೋಪಿಗಳು ಹೇಳಿದಂತೆ ಅವರ ಹಿಂದೆ ಯಾವುದೇ ಸಂಘಟನೆ ಇಲ್ಲವೆಂದಾದರೆ ಇದು ಇನ್ನಷ್ಟು ಕಳವಳಕಾರಿ ವಿಷಯ.
ಕಳವಳಕಾರಿ
ಸಂಸತ್ತಿನ ಸಂದರ್ಶಕರ ಪಾಸ್ಗಳಿಗಾಗಿ ಮನವಿ ಸಲ್ಲಿಸುವ ಸಂಸದರು ಅತಿಥಿ ತಮಗೆ ವೈಯಕ್ತಿಕವಾಗಿ ಪರಿಚಿತರಾಗಿದ್ದು, ಅವರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ದೃಢೀಕರಿಸಬೇಕು ಎಂದು ಲೋಕಸಭಾ ಸದಸ್ಯರ ನಿಯಮಗಳ ಕೈಪಿಡಿ ಹೇಳುತ್ತದೆ.
ಸಂದರ್ಶಕರಿಗೆ ಸಂಬಂಧಿಸಿ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲ ವಿವರಗಳನ್ನು ಸಂಸದರು ಒದಗಿಸಬೇಕಾಗು ತ್ತದೆ. ವೀಕ್ಷಕರ ಗ್ಯಾಲರಿಗಾಗಿ ಸಂಸದರ ಅತಿಥಿಗಳಿಗೆ ಸಂದರ್ಶಕರ ಕಾರ್ಡ್ಗಳನ್ನು ಭೇಟಿಯ ಹಿಂದಿನ ದಿನ ಕೇಂದ್ರೀಕೃತ ಪಾಸ್ ವಿತರಣಾ ಸೆಲ್ನಲ್ಲಿ ನೀಡಲಾಗುತ್ತದೆ.
ಬುಧವಾರ ಲೋಕಸಭೆ ಪ್ರವೇಶಿಸಿ ಆತಂಕಕಾರಿ ವಾತಾವರಣ ಸೃಷ್ಟಿಸಿದ ಆಗಂತುಕರ ಪಾಸ್ ವಿಚಾರದಲ್ಲಿ ಇದೆಲ್ಲ ನಿಯಮಗಳ ಪಾಲನೆಯಾಗಿತ್ತೇ ಎಂಬ ಪ್ರಶ್ನೆಯೂ ಏಳುತ್ತದೆ.
ಪ್ರತಾಪ ಸಿಂಹ ಅವರಿಂದ ಪಾಸ್ ಪಡೆದು ಆರೋಪಿಗಳು ಸಂಸತ್ ಪ್ರವೇಶಿಸಿದ್ದರು ಎನ್ನುವುದು ನಿಜವೇ ಆಗಿದ್ದಲ್ಲಿ ಪ್ರತಾಪ ಸಿಂಹ ಅವರನ್ನೂ ವಿಚಾರಣೆಗೆ ಒಳಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.