ಮಾಧ್ಯಮಗಳ ತಪ್ಪು ಗ್ರಹಿಕೆಗಳು ತಂದಿಟ್ಟ ತಲ್ಲಣ
ಹಿಂಸಾಚಾರದಲ್ಲಿ ಬೇಯುತ್ತ, ನಿತ್ಯವು ವಿಲಕ್ಷಣ ವಿದ್ಯಮಾನಗಳಿಗಾಗಿ ಮಣಿಪುರ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಗಮನದ ಕೇಂದ್ರಬಿಂದುವಾಗಿದೆ. ಮೈತೈ ಮತ್ತು ಕುಕಿ ಸಮುದಾಯದ ಬಹುಪಾಲು ಜನರು ಅಸ್ಸಾಮ್ ಮತ್ತಿತರ ಗಡಿ ರಾಜ್ಯಗಳಿಗೆ ಪಲಾಯನ ಮಾಡುವುದರೊಂದಿಗೆ, ತುರಾದಲ್ಲಿ ಹೊಸ ಚಳಿಗಾಲದ ರಾಜಧಾನಿಗಾಗಿ ದೀರ್ಘಕಾಲದ ಬೇಡಿಕೆಯಿಂದಾಗಿ ಮೇಘಾಲಯದಲ್ಲಿ ಹೊಸ ಹಿಂಸಾಚಾರ ಭುಗಿಲೆದ್ದಿದೆ. ಈಶಾನ್ಯ ಭಾರತ ಹೀಗೆ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದೆ.
ಮೇ ತಿಂಗಳಿನಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ದ್ವೇಷದ ಜ್ವಾಲೆ ಕಡಿಮೆಯಾಗುವ ಸೂಚನೆಯಿಲ್ಲ. ಇತ್ತೀಚೆಗೆ ತೆಗೆದುಹಾಕಲಾದ ಇಂಟರ್ನೆಟ್ ದಿಗ್ಬಂಧನ ಹಲವಾರು ಭಯಾನಕ ದೌರ್ಜನ್ಯಗಳನ್ನು ಬಹಿರಂಗಪಡಿಸಿವೆ, ಮುಖ್ಯವಾಗಿ, ಯಾವುದೇ ಸಂಘರ್ಷದ ತಕ್ಷಣದ ಮತ್ತು ಅತ್ಯಂತ ದುರ್ಬಲ ಬಲಿಪಶುಗಳಾಗಿರುವ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ದೌರ್ಜನ್ಯಗಳು ಬಯಲಾಗಿವೆ.
ಮಣಿಪುರದ ಪ್ರಸಕ್ತ ಪರಿಸ್ಥಿತಿ ರಾಜಕೀಯ ವರ್ಗ ಮತ್ತು ರಾಜಕೀಯ ವ್ಯವಸ್ಥೆಯ ವೈಫಲ್ಯವೆಂಬುದು ಸ್ಪಷ್ಟವಾಗಿದೆ. ಸರಕಾರದ ಹಲವಾರು ಅಸಮರ್ಪಕ ನಡೆಗಳು ಬೆಳಕಿಗೆ ಬಂದಿವೆ. ಆದರೆ ಮಾಧ್ಯಮ ವರದಿಗಳು ಮಣಿಪುರವನ್ನು ನಿಜವಾಗಿಯೂ ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿವೆ?
ಇತ್ತೀಚಿನ ತಿಂಗಳುಗಳಲ್ಲಿ ಕಂಡುಬಂದ ಮಾಧ್ಯಮ ನಿರೂಪಣೆಗಳನ್ನು ಗಮನಿಸಿದರೆ, ಮುಖ್ಯವಾಹಿನಿಯ ಮಾಧ್ಯಮದ ಒಂದು ವಿಭಾಗ, ಕೆಲವು ಅಂತರ್ರಾಷ್ಟ್ರೀಯ ಪ್ರಕಟಣೆಗಳು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ರಾತ್ರೋರಾತ್ರಿ ವಿಷಯದ ಬಗ್ಗೆ ಪರಿಣಿತರಾದವರಂತೆ ಏನನ್ನೋ ಹೇಳುತ್ತ, ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನೇ ಉಂಟುಮಾಡಿರುವುದನ್ನು ಕಾಣಬಹುದು.
ಈಶಾನ್ಯ ಭಾಗದ ಜನರು ಐತಿಹಾಸಿಕವಾಗಿ ಅಲಕ್ಷ್ಯಕ್ಕೊಳಗಾಗಿರುವುದು ಮತ್ತು ಈ ಭಾಗಕ್ಕೆ ದೀರ್ಘಾವಧಿಯ ಗಮನ ನೀಡಲು ಸರಕಾರದ ವೈಫಲ್ಯ ಎದ್ದು ಕಾಣಿಸುವ ಅಂಶಗಳು. ಈ ಪ್ರದೇಶವನ್ನು ಹೆಚ್ಚಾಗಿ ಸಂಘರ್ಷ, ಹಿಂಸಾಚಾರ, ದಂಗೆ ಮತ್ತು ಮಿಲಿಟರೀಕರಣದ ಮಸೂರದಿಂದ ಅರ್ಥೈಸಿಕೊಳ್ಳಲಾಗಿದೆ. ಸ್ಥಳೀಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಬಳಿಸುವ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಯೋಜನೆಗಳನ್ನು ಉತ್ತೇಜಿಸುವ ಕಡೆಗೆ ಒತ್ತು ನೀಡಿರುವ ವ್ಯವಸ್ಥೆ, ಈ ಪರಿಸರದ ಎಲ್ಲವನ್ನೂ ಹದ ತಪ್ಪಿಸಿದೆ.
ಮಣಿಪುರದಲ್ಲಿನ ಸಂಘರ್ಷ ನಂಬಲಾಗದಷ್ಟು ಜಟಿಲವಾಗಿದೆ ಮತ್ತು ಬಹುಮುಖಿಯಾಗಿದೆ. ಜನಾಂಗೀಯ ಹಿಂಸಾಚಾರದ ಕುರಿತು ಸಂಶೋಧನೆ ನಡೆಸುವಲ್ಲಿ ವರ್ಷಗಳ ಕಾಲ ಪರಿಣತಿಯನ್ನು ಹೊಂದಿರುವ ಇಲ್ಲಿನ ಮತ್ತು ಹೊರಗಿನ ವಿದ್ವಾಂಸರಿಗೂ ಮಣಿಪುರದಲ್ಲಿ ಅದು ಎಷ್ಟರ ಮಟ್ಟಿಗೆ ಉಲ್ಬಣಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ.
ದುರದೃಷ್ಟವಶಾತ್, ಮಣಿಪುರದ ಗ್ರಹಿಕೆ, ಅದರ ರಾಜಕೀಯ ಮತ್ತು ಅದರ ಜನರ ಗ್ರಹಿಕೆ ಮತ್ತೊಮ್ಮೆ ರಾಜ್ಯದ ಪ್ರಭಾವಿ ಮಾಧ್ಯಮ ದೈತ್ಯರಿಂದಲೇ ರೂಪುಗೊಳ್ಳುತ್ತಿದೆ, ಮಣಿಪುರದ ಬಗೆಗಿನ ಅಲ್ಪಜ್ಞಾನ ಮತ್ತು ಈಗಲೂ ಸೂಕ್ಷ್ಮ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವ ಕಳಕಳಿಯಿಲ್ಲದ ಅವರ ನಿಲುವಿನಿಂದ ಮೂಡಿರುವ ಗ್ರಹಿಕೆ ಇವಾಗಿವೆ.
ಭಾರತದ ಗಡಿ ಪ್ರದೇಶಗಳ ಬಗ್ಗೆ ಮಾಧ್ಯಮದ ಒಂದು ವರ್ಗದ ತೀರಾ ಅಜ್ಞಾನದ ಪ್ರಶ್ನೆ ಮತ್ತೆ ಮತ್ತೆ ಮುಂದಕ್ಕೆ ಬರುತ್ತದೆ. ಕೆಲವು ಶ್ಲಾಘನೀಯ ವರದಿ ಮತ್ತು ಚರ್ಚೆಯನ್ನು ಮಾಡಿದ ಕೆಲವೇ ಕೆಲವು ಮಾಧ್ಯಮ ಪೋರ್ಟಲ್ಗಳನ್ನು ಹೊರತುಪಡಿಸಿದರೆ, ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳೆರಡೂ ಈ ಸಮಸ್ಯೆಯನ್ನು ಬುಡಕಟ್ಟು ಮತ್ತು ಬುಡಕಟ್ಟಿನವರಲ್ಲದ ಜನರ ನಡುವಿನದ್ದು ಅಥವಾ ಧಾರ್ಮಿಕ ಸಂಘರ್ಷ ಎಂಬಂತೆ ಮಾತಾಡುತ್ತಿವೆ. ಹಿಂದೂ ಮೈತೈಗಳು ಮತ್ತು ಕ್ರಿಶ್ಚಿಯನ್ ಕುಕಿ ಸಮುದಾಯ ಎಂಬುದು ಹೆಚ್ಚಿನ ಅಂತರ್ರಾಷ್ಟ್ರೀಯ ಮಾಧ್ಯಮಗಳ ದೃಷ್ಟಿಕೋನವಾಗಿದೆ.
ವಸ್ತುನಿಷ್ಠತೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಮತ್ತು ಏಕಪಕ್ಷೀಯ ನಿರೂಪಣೆಯ ಮೇಲೆ ಒಲವು ತೋರುವ, ಒಂದು ಗುಂಪನ್ನು ಇನ್ನೊಂದರ ಮೇಲೆ ಎತ್ತಿಕಟ್ಟುವ ಮತ್ತು ವಿಭಜಕ ರಾಜಕೀಯವನ್ನು ಬಲಪಡಿಸುವ ಪಕ್ಷಪಾತಿ ನಿಲುವುಗಳೇ ಟಿವಿ ಚರ್ಚೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ. ಹಾಗೆ ಮಾಡುವ ಮೂಲಕ, ವಸಾಹತುಶಾಹಿ ಕಾಲದ ಗಡಿರೇಖೆಯ ಹಿಂದಿನ ಆಳವಾದ ಇತಿಹಾಸವನ್ನು ಕಡೆಗಣಿಸುವ ಅಥವಾ ಅದರ ತಿಳುವಳಿಕೆಯೇ ಇಲ್ಲದ ನಡೆಯೊಂದು ವ್ಯಕ್ತವಾಗುತ್ತಿದೆ. ಗುಡ್ಡಗಾಡು ಮತ್ತು ಕಣಿವೆಯ ಜನರ ನಡುವಿನ ಸಾಮಾಜಿಕ-ಸಾಂಸ್ಕೃತಿಕ ಹೋಲಿಕೆಗಳನ್ನು ಈ ನಿರೂಪಣೆ ಅಳಿಸಿಹಾಕುತ್ತದೆ. ಪ್ರಸಕ್ತ ಮಣಿಪುರ ಬಿಕ್ಕಟ್ಟಿನ ಕುರಿತು ತಿಳಿಯುವಾಗ ಭೂಮಿ ಮತ್ತು ಪ್ರಾದೇಶಿಕತೆ ಮತ್ತು ಆರ್ಥಿಕ ಅವಕಾಶಗಳ ಸುತ್ತಲಿನ ತಿಳುವಳಿಕೆ ಪ್ರಮುಖವಾಗಿದೆ.
ಮಾಧ್ಯಮದ ಈ ದೃಷ್ಟಿಕೋನವನ್ನು ಬದಲಾಯಿಸುವುದರಿಂದ ಮಾತ್ರವೇ ಈಶಾನ್ಯದ ಹೊರಗಿನ ಜನರು, ಧಾರ್ಮಿಕ ಮತ್ತು ಜನಾಂಗೀಯ, ದಂಗೆ ಮತ್ತು ಮಾದಕದ್ರವ್ಯ ವ್ಯಾಪಾರ ಇಂಥ ವಿಚಾರಗಳನ್ನು ಮೀರಿದ ಆ ಭಾಗದ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ.
ಕುಕಿಗಳನ್ನು ಭಯೋತ್ಪಾದಕರು, ಗಸಗಸೆ ಕೃಷಿಕರು ಮತ್ತು ಆಕ್ರಮಣಕಾರರು ಎಂದು ಬಿಂಬಿಸುವ ಮುಖ್ಯವಾಹಿನಿಯ ನಿರೂಪಣೆ ಮಣಿಪುರದ ಸಂಕೀರ್ಣ ಸಂಘರ್ಷದ ಬಗ್ಗೆ ಅತ್ಯಂತ ಸರಳವಾದ ಮತ್ತು ಪಕ್ಷಪಾತದ ದೃಷ್ಟಿಕೋನ ಮಾತ್ರವಾಗಿದೆ. ಈ ನಿರೂಪಣೆ ಸಂಘರ್ಷದ ಐತಿಹಾಸಿಕ ಸಂದರ್ಭವನ್ನು ಗ್ರಹಿಸಲು ಮತ್ತು ಒಪ್ಪಿಕೊಳ್ಳಲು ವಿಫಲವಾಗಿದೆ, ಇದು ವಸಾಹತುಶಾಹಿ ಕಾಲದಿಂದ ಮಣಿಪುರದೊಂದಿಗೆ ಇರುವ ಬಿಕ್ಕಟ್ಟು ಎಂಬುದನ್ನು ತಿಳಿಯಲಾರದ ಸ್ಥಿತಿಯಿದೆ. ವಸಾಹತುಶಾಹಿ ಶಕ್ತಿಗಳು ಹೇರಿದ ಗಡಿಗಳು ಮತ್ತು ನಂತರದ ರಾಜಕೀಯ ನಿರ್ಧಾರಗಳು ಮಣಿಪುರದಲ್ಲಿ ವಿವಿಧ ಜನಾಂಗೀಯ ಗುಂಪುಗಳ ನಡುವಿನ ಉದ್ವಿಗ್ನತೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ ಎಂಬುದನ್ನು ತಿಳಿಯುವ, ಅರ್ಥ ಮಾಡಿಕೊಳ್ಳುವ ವ್ಯವಧಾನ ಈ ಮಾಧ್ಯಮ ನಿರೂಪಣೆಗಳ ಹಿಂದೆ ಇಲ್ಲವಾಗಿದೆ.
ಕುಕಿ ಮತ್ತು ಮೈತೈ ಸಮುದಾಯಗಳು ಐತಿಹಾಸಿಕವಾಗಿಯೇ ಕೆಲವು ಕುಂದುಕೊರತೆಗಳನ್ನು ಹೊಂದಿವೆ. ಈ ಪ್ರದೇಶದಲ್ಲಿ ಅವರಿಗಿರುವ ಭೂಮಿ ಮತ್ತು ಸಂಪನ್ಮೂಲಗಳ ಹಕ್ಕುಗಳ ಬಗ್ಗೆಯೂ ಅವರದೇ ಆದ ತಕರಾರುಗಳಿವೆ. ಇವೆಲ್ಲದರ ಜೊತೆಗೆ, ಭಯೋತ್ಪಾದನೆ ಮತ್ತು ಗಸಗಸೆ ಕೃಷಿ ವಿಚಾರವಾಗಿ ಕೇವಲ ಒಂದು ಜನಾಂಗೀಯ ಗುಂಪನ್ನು ದೂಷಿಸುವುದು ಈ ಪ್ರದೇಶದಲ್ಲಿನ ಹಿಂಸೆ ಮತ್ತು ಅಸ್ಥಿರತೆಯ ಮೂಲಗಳನ್ನು ಇನ್ನಷ್ಟು ಸರಳಗೊಳಿಸುತ್ತದೆ. ಮಣಿಪುರದಲ್ಲಿನ ಸಂಘರ್ಷದ ಹಿಂದಿನ ಪರಸ್ಪರ ಸಂಬಂಧವಿರುವ ಅನೇಕ ಸಂಕೀರ್ಣ ಅಂಶಗಳಿವೆ. ಹಾಗಿರುವಾಗ ಯಾವುದೋ ಒಂದೇ ಗುಂಪನ್ನು ಎಲ್ಲದಕ್ಕೂ ಹೊಣೆಯಾಗಿಸುವುದು ಸರಿಯಾಗದು. ಅಂಥ ಏಕಪಕ್ಷೀಯ ನಿರೂಪಣೆ, ಇರುವ ಕಥೆಗಳನ್ನೇ ಮತ್ತೆ ಮತ್ತೆ ಹೇಳುತ್ತ, ಪೂರ್ವಾಗ್ರಹಗಳನ್ನೇ ಶಾಶ್ವತಗೊಳಿಸುತ್ತದೆ, ಒಡಕನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಂಘರ್ಷಕ್ಕೆ ಶಾಶ್ವತ ಮತ್ತು ನ್ಯಾಯಯುತ ಪರಿಹಾರಗಳನ್ನು ಹುಡುಕುವ ಪ್ರಯತ್ನಗಳಿಗೆ ಇದು ಅಡ್ಡಿಯಾಗುತ್ತದೆ.
ಸಂಘರ್ಷ ವಲಯಗಳಲ್ಲಿ ಮತ್ತು ಸಾಮೂಹಿಕ ದೌರ್ಜನ್ಯದ ಸಮಯದಲ್ಲಿ ಮಾಧ್ಯಮ ವರದಿ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಮರೆಯಕೂಡದು. ಅದು ಸತ್ಯವನ್ನು ಪ್ರಸ್ತುತಪಡಿಸುವ ಮತ್ತು ಪರಿಸ್ಥಿತಿಯ ಜಟಿಲತೆಗಳನ್ನು ಬಿಚ್ಚಿಡುವ ಜವಾಬ್ದಾರಿಯನ್ನು ಹೊಂದಿದೆ, ಪ್ರತಿಯೊಬ್ಬ ನಾಗರಿಕನೂ ಸಂಕೀರ್ಣತೆಗಳನ್ನು ಗ್ರಹಿಸಲು ಮತ್ತು ತಿಳುವಳಿಕೆಯುಳ್ಳ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಬೇಜವಾಬ್ದಾರಿ ಮಾಧ್ಯಮ ವರದಿಯ ನಂತರದ ಪರಿಣಾಮಗಳನ್ನು ತೋರಿಸಲು ಸಾಕಷ್ಟು ಉದಾಹರಣೆಗಳಿವೆ. ಮಣಿಪುರ ಬಿಕ್ಕಟ್ಟಿನ ನಂತರದ ಮೇಲ್ನೋಟದ ತಿಳುವಳಿಕೆಯ ದೃಷ್ಟಿಕೋನಗಳು ಉಂಟುಮಾಡುವ ಪರಿಣಾಮಗಳೂ ಹಾಗೆಯೇ ಅಪಾಯಕಾರಿ. ಅಲ್ಪಸಂಖ್ಯಾತರ ಹಕ್ಕುಗಳ ಪ್ರತಿಪಾದನೆ, ಸ್ವಾಯತ್ತತೆಯ ಬೇಡಿಕೆ, ಭೂಮಿಯ ಸುತ್ತಲಿನ ಸಂಘರ್ಷ, ಪ್ರಾದೇಶಿಕತೆ ಹೀಗೆ ವಿವಿಧ ಮಗ್ಗಲುಗಳಿವೆ.
ಈಶಾನ್ಯದ ಹಲವಾರು ಭಾಗಗಳಿಂದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಇತ್ತೀಚೆಗಷ್ಟೇ ತೆಗೆದುಹಾಕಲಾಯಿತು. ಮಾನವ ಹಕ್ಕುಗಳನ್ನು ಉಲ್ಲಂಸುವ ಕಠಿಣ ಕಾನೂನುಗಳ ಹೇರಿಕೆಯನ್ನು ಕಾನೂನುಬದ್ಧಗೊಳಿಸಲು ಸರಕಾರ ಪ್ರಸಕ್ತ ಬಿಕ್ಕಟ್ಟನ್ನು ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳು ಪಕ್ಷಪಾತ ಮತ್ತು ತಪ್ಪು ಮಾಹಿತಿಯಿಂದ ದಾರಿತಪ್ಪಿದಾಗ, ತಿಳುವಳಿಕೆಯಿರದ ಲಕ್ಷಾಂತರ ವ್ಯಕ್ತಿಗಳನ್ನು ಅವು ಹೇಗೆ ದಾರಿ ತಪ್ಪಿಸಬಹುದು ಎಂಬುದು ಕಳವಳ ಹುಟ್ಟಿಸುತ್ತದೆ. ಮಣಿಪುರದ ಪರಿಸ್ಥಿತಿ ಹೆಚ್ಚು ವಸ್ತುನಿಷ್ಠ ಮತ್ತು ಸುಸಜ್ಜಿತ ದೃಷ್ಟಿಕೋನವನ್ನು ಒದಗಿಸುವ ಬದಲು ಸುಳ್ಳು ನಿರೂಪಣೆಗಳನ್ನು ಮುಂದೆ ಮಾಡುವ ಮಾಧ್ಯಮಗಳ ಕೆಟ್ಟ ರೂಢಿಗೆ ಉದಾಹರಣೆ.
ಮಣಿಪುರದ ಬಿಕ್ಕಟ್ಟಿನ ಕುರಿತ ಧ್ರುವೀಕೃತ ಮತ್ತು ಅತ್ಯಂತ ಸರಳವಾದ ಮಾಧ್ಯಮ ನಿರೂಪಣೆ ಬದಲಾಗಬೇಕಾಗಿದೆ, ಇದರ ಹಿಂದೆ ಮಾಧ್ಯಮದ ಒಂದು ವರ್ಗದ ದೊಡ್ಡ ರಾಜಕೀಯ ಅಜೆಂಡವೇ ಇದೆ. ಕೇವಲ ಎರಡು ಸಂಸದೀಯ ಸ್ಥಾನಗಳ ಮಣಿಪುರದ ಪ್ರಾಮುಖ್ಯತೆ ಪ್ರಬಲ ಉತ್ತರ ಪ್ರದೇಶ ಅಥವಾ ಪಶ್ಚಿಮ ಬಂಗಾಳಕ್ಕೆ ಹೋಲಿಸಿದರೆ ಅತ್ಯಲ್ಪ.
ಕೇಂದ್ರ ಮತ್ತು ರಾಜ್ಯವೆರಡರಲ್ಲೂ ಅಧಿಕಾರದಲ್ಲಿರುವ ರಾಜಕೀಯ ವರ್ಗ ಎಚ್ಚೆತ್ತುಕೊಂಡು ಸಮಾಲೋಚನೆ ಮತ್ತು ಸಹಭಾಗಿತ್ವದ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವುದು ಈಗಿನ ಅಗತ್ಯ. ಎರಡೂ ಸಮುದಾಯಗಳ ನಡುವೆ ಮಧ್ಯಸ್ಥಿಕೆಯ ಕೆಲಸ ನಡೆಯಬೇಕಿದೆ. ಸಂಘರ್ಷ ಮತ್ತು ಹಿಂಸಾಚಾರಕ್ಕೆ ತುತ್ತಾದ ನೆಲದಲ್ಲಿ ಪರಿಹಾರ ಸರಳವಾಗಿರುವುದಿಲ್ಲ. ಮಣಿಪುರ ಭಾರತಕ್ಕೆ ತನ್ನ ಒಲಿಂಪಿಕ್ ಪ್ರಶಸ್ತಿಗಳನ್ನು ಗಳಿಸಿದಾಗ ಮಾತ್ರ ನೆನಪಿಸಿಕೊಳ್ಳುವ ರಾಜ್ಯವಾಗಲು ಸಾಧ್ಯವಿಲ್ಲ. ಕಲಹದ ಕಳಂಕದಾಚೆಗೂ ಮಣಿಪುರ ವೈವಿಧ್ಯತೆಗೆ ಸಾಕ್ಷಿಯಾಗಿದೆ, ಅದರ ಎಲ್ಲ ಹಿರಿಮೆಗಳನ್ನು ನೆನಪಿಟ್ಟುಕೊಂಡೇ, ಅದರ ಚೆಲುವನ್ನು ಅದಕ್ಕೆ ಮರಳಿಸಬೇಕಿದೆ.
ಕೃಪೆ:thewire.in