ಆಫೀಸ್ ಬಾಯ್ ಆಗಿ ರೂ. 9,000 ವೇತನ ಪಡೆಯುತ್ತಿದ್ದ ವ್ಯಕ್ತಿಯೀಗ ಎರಡು ನವೋದ್ಯಮಗಳ ಸಿಇಒ!
ದಾದಾಸಾಹೇಬ್ ಭಗತ್ | Photo credit : indiatimes.com
ಮುಂಬೈ: ಧೃಢ ಇಚ್ಛಾಶಕ್ತಿ ಹಾಗೂ ಅಚಲ ಅರ್ಪಣಾ ಮನೋಭಾವ ಹೊಂದಿರುವವರಿಗೆ ತಮ್ಮ ದಾರಿಯಲ್ಲಿ ಅದೆಷ್ಟೇ ಅಡೆತಡೆ ಎದುರಾದರೂ ಅದು ಅವರಿಗೆ ಸಮಸ್ಯೆಯೇ ಆಗುವುದಿಲ್ಲ. ಇದಕ್ಕೆ ದೊಡ್ಡ ಉದಾಹರಣೆಯೆಂದರೆ, ಇನ್ಫೋಸಿಸ್ ನಲ್ಲಿ ಕೇವಲ ಆಫೀಸ್ ಬಾಯ್ ಆಗಿದ್ದ ದಾದಾಸಾಹೇಬ್ ಭಗತ್ ಅವರಿಂದು ಅವರದೇ ಮಾಲಕತ್ವದ ಎರಡು ಕಂಪನಿಗಳಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಯಶೋಗಾಥೆ. ಅವರ ಈ ಸಾಧನೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಕೇವಲ ಕೊಟ್ಟಿಗೆ ಒಂದರಿಂದ ‘Made in India’ ಚಿತ್ತಾರ ಬಿಡಿಸಿದ ದಾದಾಸಾಹೇಬ್ ಭಗತ್ ಅವರ ಪಯಣದ ದಾರಿ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.
ಮಹಾರಾಷ್ಟ್ರದ ಬೀಡ್ ನಿವಾಸಿಯಾದ ದಾದಾಸಾಹೇಬ್ ಭಗತ್ ಅವರು 1994ರಲ್ಲಿ ಜನಿಸಿದರು. ನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವರು ತಮ್ಮ ವಾಸ್ತವ್ಯವನ್ನು ತಮ್ಮ ಗ್ರಾಮದಿಂದ ಪುಣೆಗೆ ಬದಲಿಸಿದರು. ಅವರು ತಮ್ಮ ಐಟಿಐ ಡಿಪ್ಲೊಮಾವನ್ನು ಪೂರೈಸಿದ ನಂತರ ರೂಮ್ ಸರ್ವೀಸ್ ಬಾಯ್ ಆಗಿ ತಿಂಗಳಿಗೆ ರೂ. 9,000 ವೇತನ ಗಳಿಸುತ್ತಿದ್ದರು. ಅವರು ಇನ್ಫೋಸಿಸ್ ಸಂಸ್ಥೆಯ ಅತಿಥಿ ಗೃಹವೊಂದಕ್ಕೆ ಕೆಲಸಗಾರರಾಗಿ ಸೇರಿಕೊಂಡಿದ್ದರು.
ಇನ್ಫೋಸಿಸ್ ಅತಿಥಿ ಗೃಹದಲ್ಲಿನ ಅತಿಥಿಗಳಿಗೆ ಅವರು ಕೊಠಡಿ ಸೇವೆ, ಟೀ ಹಾಗೂ ನೀರು ಒದಗಿಸಬೇಕಿತ್ತು. ಇನ್ಫೋಸಿಸ್ ನಲ್ಲಿ ಅವರು ಕಾರ್ಯನಿರ್ವಹಿಸುವಾಗ ಸಾಫ್ಟ್ ವೇರ್ ಮೌಲ್ಯವನ್ನು ಅರಿತುಕೊಂಡರು ಹಾಗೂ ಆ ಉದ್ಯಮದಲ್ಲಿ ಆಸಕ್ತಿ ತಳೆದರು. ಕಾರ್ಪೊರೇಟ್ ಜಗತ್ತಿನ ಬಗ್ಗೆ ಭಗತ್ ಮೋಹ ಬೆಳೆಸಿಕೊಂಡರಾದರೂ, ಅವರಿಗೆ ಕಾಲೇಜು ಶಿಕ್ಷಣ ಇಲ್ಲದೆ ಇದ್ದುದರಿಂದ ಅವರನ್ನು ಯಾರೂ ನೇಮಿಸಿಕೊಳ್ಳಲು ಸಾಧ್ಯವಿರಲಿಲ್ಲ.
ಅವರು ಇತರ ಆಯ್ಕೆಗಳತ್ತ ನೋಡುತ್ತಿದ್ದಾಗ, ಅನಿಮೇಷನ್ ಹಾಗೂ ವಿನ್ಯಾಸ ಕಲಿಯುವಂತೆ ಪ್ರೋತ್ಸಾಹಿಸಲಾಯಿತು. ನಂತರ ಅವರು ರಾತ್ರಿ ವೇಳೆ ತಮ್ಮ ಕೆಲಸವನ್ನು ಮುಂದುವರಿಸಿ, ಬೆಳಗ್ಗಿನ ಹೊತ್ತು ಅನಿಮೇಷನ್ ವ್ಯಾಸಂಗ ಮಾಡಲು ಶುರು ಮಾಡಿದರು. ಆ ಕೋರ್ಸ್ ಅನ್ನು ಮುಗಿಸಿದ ನಂತರ ಅವರು ಮುಂಬೈನಲ್ಲಿ ನೈಜ ಉದ್ಯೋಗಕ್ಕೆ ನೇಮಕವಾದರು. ಆದರೆ, ಕೆಲವೇ ದಿನಗಳಲ್ಲಿ ಅವರದನ್ನು ತೊರೆದು, ಹೈದರಾಬಾದ್ ಗೆ ತಮ್ಮ ವಾಸ್ತವ್ಯ ಬದಲಿಸಿದರು.
ಹೈದರಾಬಾದ್ ನ ವಿನ್ಯಾಸ ಹಾಗೂ ಗ್ರಾಫಿಕ್ಸ್ ಸಂಸ್ಥೆಯೊಂದು ಅವರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಂಡ ನಂತರ, ಭಗತ್ ಪೈಥಾನ್ ಹಾಗೂ ಸಿ++ ಕಲಿಯಲು ಶುರು ಮಾಡಿದರು. ಈ ಸಂದರ್ಭದಲ್ಲಿ ವಿವಿಧ ದೃಶ್ಯ ಪರಿಣಾಮಗಳನ್ನು ಸೃಷ್ಟಿಸಲು ಸಾಕಷ್ಟು ಸಮಯ ತಗುಲುತ್ತದೆ ಹಾಗೂ ಮರುಬಳಕೆಯ ವಿನ್ಯಾಸಗಳ ಮಾದರಿಗಳ ಗ್ರಂಥಾಲಯ ನಿರ್ಮಿಸುವುದು ಅದ್ಭುತ ಕಾರ್ಯವಾಗಲಿದೆ ಎಂಬುದು ಅವರಿಗೆ ಮನವರಿಕೆಯಾಯಿತು. ಅವರು ಆ ವಿನ್ಯಾಸಗಳ ಮಾದರಿಗಳನ್ನು ಆನ್ ಲೈನ್ ಮಾರುಕಟ್ಟೆ ಮಾಡುವ ಕುರಿತು ಯೋಜಿಸಿದ್ದಾರೆ. ನಂತರ ಈ ಯೋಜನೆಯೇ ಬೃಹತ್ ಬೆಳವಣಿಗೆ ಸಾಧಿಸಿದೆ.
ದುರದೃಷ್ಟವಶಾತ್, ಆ ಹೊತ್ತಿನಲ್ಲೇ ಭಗತ್ ಕಾರು ಅಪಘಾತಕ್ಕೀಡಾಗಿದ್ದಾರೆ. ಇದರಿಂದ ಹಾಸಿಗೆಗೆ ಅಂಟಿಕೊಳ್ಳುವಂತಾದ ಭಗತ್, ತಮ್ಮ ಉದ್ಯೋಗವನ್ನು ತೊರೆದು, ತಮ್ಮ ವಿನ್ಯಾಸ ಗ್ರಂಥಾಲಯವನ್ನು ಬೆಳೆಸುವತ್ತ ಚಿತ್ತ ಹರಿಸಿದ್ದಾರೆ. ಅವರ ಚೊಚ್ಚಲ ಉದ್ಯಮ ‘ನೈನ್ತ್ ಮೋಷನ್’ ಅನ್ನು 2015ರಲ್ಲಿ ಸ್ಥಾಪಿಸಿದ್ದಾರೆ. ಇದಾದ ಸಣ್ಣ ಅವಧಿಯಲ್ಲೇ ಬಿಬಿಸಿ ಸ್ಟುಡಿಯೋಸ್ ಹಾಗೂ 9ಎಕ್ಸ್ಎಮ್ ಸಂಗೀತ ವಾಹಿನಿಯಂಥ ಪ್ರಖ್ಯಾತ ಸಂಸ್ಥೆಗಳು ಸೇರಿದಂತೆ ಸುಮಾರು 6,000 ಜಾಗತಿಕ ಗ್ರಾಹಕರಿಗೆ ತಮ್ಮ ಸೇವೆ ಒದಗಿಸಿದ್ದಾರೆ. ಇದೇ ಬಗೆಯಲ್ಲಿ ಆನ್ ಲೈನ್ ಗ್ರಾಫಿಕ್ ವಿನ್ಯಾಸಗಳಿಗೆ ವೇದಿಕೆಯೊಂದನ್ನು ನಿರ್ಮಿಸಲು ಭಗತ್ ನಿರ್ಧರಿಸಿದ್ದಾರೆ. ಇದರ ಫಲಿತಾಂಶವಾಗಿ ಭಗತ್ ಅವರ ಎರಡನೆ ಉದ್ಯಮ ‘ಡೂಗ್ರಾಫಿಕ್ಸ್’ ಜನ್ಮ ತಳೆದಿದೆ. ಈ ವೇದಿಕೆಯು ಗ್ರಾಹಕರು ಮಾದರಿಗಳು ಹಾಗೂ ವಿನ್ಯಾಸಗಳನ್ನು ಸೃಷ್ಟಿಸಲು ಅವಕಾಶ ನೀಡುವ ‘ತೆಗೆದುಕೊಳ್ಳುವ ಹಾಗೂ ಹಾಕುವ’ ಸರಳ ಇಂಟರ್ ಫೇಸ್ ವೈಶಿಷ್ಟ್ಯ ಒಳಗೊಂಡಿತ್ತು. ಆದರೆ, ಕೋವಿಡ್-19 ಲಾಕ್ ಡೌನ್ ಕಾರಣಕ್ಕೆ ಅವರು ತಮ್ಮ ಉದ್ಯಮವನ್ನು ಪುಣೆಯಿಂದ ಬೀಡ್ ನಲ್ಲಿನ ತಮ್ಮ ಗ್ರಾಮಕ್ಕೆ ಸ್ಥಳಾಂತರಿಸಬೇಕಾದ ಅನಿವಾರ್ಯಕ್ಕೆ ತುತ್ತಾದರು.
ಅವರ ಗ್ರಾಮವು ಉತ್ತಮ ಮೂಲಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದುದರಿಂದ, ಬೆಟ್ಟದ ಮೇಲಿನ ಜಾನುವಾರು ಕೊಟ್ಟಿಗೆಯಲ್ಲಿ ಉತ್ತಮ 4ಜಿ ತರಂಗಾತರ ಸೇವೆಯನ್ನು ಸ್ವೀಕರಿಸುವ ವ್ಯವಸ್ಥೆಯೊಂದಿಗೆ ಭಗತ್ ತಮ್ಮ ಮಳಿಗೆಯನ್ನು ಸ್ಥಾಪಿಸಿದರು. ನಂತರ ತಾವೇ ವೈಯಕ್ತಿಕವಾಗಿ ಅನಿಮೇಷನ್ ಹಾಗೂ ವಿನ್ಯಾಸದಲ್ಲಿ ತರಬೇತಿ ನೀಡಿದ್ದ ತಮ್ಮ ಕೆಲವು ಸ್ನೇಹಿತರೊಂದಿಗೆ ಕೊಟ್ಟಿಗೆಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಕೇವಲ ಆರು ತಿಂಗಳೊಳಗಾಗಿ ಅವರ ಉದ್ಯಮವು 10,000 ಸಕ್ರಿಯ ಬಳಕೆದಾರರನ್ನು ಹೊಂದಿತು. ಅವರಲ್ಲಿ ಬಹುತೇಕರು ಮಹಾರಾಷ್ಟ್ರ, ದಿಲ್ಲಿ, ಬೆಂಗಳೂರು ಹಾಗೂ ಸ್ವಲ್ಪ ಪ್ರಮಾಣದಲ್ಲಿ ಜಪಾನ್, ಆಸ್ಟ್ರೇಲಿಯಾ ಹಾಗೂ ಬ್ರಿಟನ್ ನವರಾಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ’ದ ಕನಸನ್ನು ಸಾಕಾರಗೊಳಿಸಲು ಅವರೀಗ ತಮ್ಮ ಸಂಪೂರ್ಣ ಭಾರತ ನಿರ್ಮಿತ ಸಾಫ್ಟ್ ವೇರ್ ತಯಾರಿಕಾ ಸಂಸ್ಥೆಯಾಗಿರುವ ‘ಡೂಗ್ರಾಫಿಕ್ಸ್’ ಅನ್ನು ವಿಶ್ವದಲ್ಲೇ ಅತ್ಯಂತ ಬೃಹತ್ ವಿನ್ಯಾಸ ಜಾಲತಾಣವಾಗಿಸುವ ಯೋಜನೆ ಹೊಂದಿದ್ದಾರೆ.