ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ವೋಟಿನ ರಾಜಕೀಯ
ಬ್ರಿಟಿಷರ ಬಿಗಿ ಮುಷ್ಟಿಯಿಂದ ಬಿಡಿಸಿ ಕೊಂಡಿದ್ದ ಘನ ಭಾರತಕ್ಕೆ ಯೋಗ್ಯ ಮತ್ತು ಯುಕ್ತವಾದ ಸಂವಿಧಾನವನ್ನು ಕೊಟ್ಟುಕೊಳ್ಳುವ ಅವಶ್ಯಕತೆ ಭಾರತದ ಪ್ರಾಜ್ಞರು ಮತ್ತು ಮುತ್ಸದ್ದಿಗಳಿಗಿತ್ತು. ಇಂಥ ಗುರುತರವಾದ ಜವಾಬ್ದಾರಿಯನ್ನು ಬಾಬಾ ಸಾಹೇಬರ ನೇತೃತ್ವದಲ್ಲಿ ಭಾರತದ ವಿದ್ವಾಂಸರು ಸಮರ್ಥನೀಯವಾಗಿ ನಿಭಾಯಿಸಿದರು. ಸಂವಿಧಾನವನ್ನು ರೂಪಿಸುವಲ್ಲಿ ಅತಿ ಮುಖ್ಯವಾದ ಪಾತ್ರವನ್ನು ರಚನಾ ಸಭೆಯು ವಹಿಸಿಕೊಂಡಿತ್ತು.
ಹಿಂದುಳಿದ ವರ್ಗಗಳಿಗೆ ಸಾರ್ವಜನಿಕ ಹುದ್ದೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ ಅವಶ್ಯಕತೆ ಇದೆ ಎಂಬುದನ್ನು ಚರ್ಚೆಯಲ್ಲಿ ಭಾಗವಹಿಸಿದ ಕೆಲವು ಪಂಡಿತರು ವ್ಯಕ್ತಪಡಿಸಿದ್ದರು. ‘ಹಿಂದುಳಿದ’ ಪದ ಅರ್ಥ ವಿವರಣೆಗೆ ಸಾಕಷ್ಟು ಚರ್ಚೆ ನಡೆದು ಅಂತಿಮವಾಗಿ ಅದೇ ಪದ ಉಳಿದುಕೊಂಡಿತು. ಹಿಂದುಳಿದವರಿಗೆ ಮೀಸಲಾತಿ ಬೇಕೇ ಬೇಡವೇ ಎಂಬುದರ ಬಗ್ಗೆ ವಿಸ್ತೃತ ಚರ್ಚೆ ನಡೆದು ಕೆಲವರು ಬೇಕು ಎಂದರೆ ಕೆಲವರು ಬೇಡ ಎಂಬ ಅಭಿಪ್ರಾಯದಲ್ಲಿ ಚರ್ಚೆ ಸಾಗಿ ಕೊನೆಯಲ್ಲಿ ಬಾಬಾ ಸಾಹೇಬರ ವಿದ್ವತ್ಪೂರ್ಣ ಭಾಷ್ಯದೊಡನೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಅವಶ್ಯಕತೆಯನ್ನು ರಚನಾ ಸಭೆಯ ಚರ್ಚಾಕೂಟ ಕಂಡುಕೊಂಡಿತು. ರಚನಾ ಸಭೆ ಚರ್ಚೆಯ ಫಲಶ್ರುತಿ ಎಂದರೆ ಹಿಂದುಳಿದವರಿಗೆ ಇದ್ದ ಒಂದು ದೊಡ್ಡ ಕಂಟಕ ನಿವಾರಣೆ. ಸಂವಿಧಾನದ ಕರಡು ಅನುಚ್ಛೇದ10(3) ಸಂವಿಧಾನದ16(4)ಎಂದಾಯಿತು.
‘ಹಿಂದುಳಿದವರು’ ಯಾರು ಎಂಬ ಪ್ರಶ್ನೆ ಮಾತ್ರ ರಚನಾ ಸಭೆಯಲ್ಲಿ ಚರ್ಚೆಗೆ ಬಂದರೂ ಆ ಕುರಿತು ಯಾವುದೇ ನಿರ್ಣಯಕ್ಕೆ ಬರಲಾಗದೆ ಸಭೆ ವಿಫಲಗೊಂಡಿತು. ಸ್ವಾತಂತ್ರ್ಯ ಪೂರ್ವದಲ್ಲಿಯೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗಿರಲಿಲ್ಲ. ಮೈಸೂರು ಸಂಸ್ಥಾನದ ಮಿಲ್ಲರ್ ಸಮಿತಿಯಾಗಲಿ ಅಥವಾ ಮುಂಬೈ ಸರಕಾರದ ಒ.ಎ.ಬಿ. ಸ್ಟಾರ್ಟೆ ಸಮಿತಿಯಾಗಲಿ ಅದಕ್ಕೆ ನಿರ್ದಿಷ್ಟ ಅರ್ಥ ವಿವರಣೆಯನ್ನು ನೀಡಲು ಸಾಧ್ಯವಾಗಲಿಲ್ಲ.
ಸಾಮಾಜಿಕ ಆಸಕ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವವರೆಂದರೆ ತಮಿಳು ಭಾಷಿಗರು. ಕಾಲೇಜು ಪ್ರವೇಶಕ್ಕಾಗಿ ಮದ್ರಾಸ್ ಸರಕಾರ ತಂದ ಕೋಮು ಆಧಾರಿತ ಮೀಸಲಾತಿ ಆದೇಶ ಸರ್ವೋಚ್ಚ ನ್ಯಾಯಾಲಯದಲ್ಲಿ ರದ್ದುಗೊಂಡದ್ದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ ಸಂವಿಧಾನಕ್ಕೆ ಮೊದಲನೇ ತಿದ್ದುಪಡಿ ತರಬೇಕಾಯಿತು. ಅದು ಚಂಪಕಂ ದೊರೆರಾಜ್ ಪ್ರಕರಣವೆಂದು ಪ್ರಸಿದ್ಧವಾಯಿತು (ಎಐಆರ್ 1951 ಎಸ್‌ಸಿ 226). ಆ ತಿದ್ದುಪಡಿಯೇ ಅನುಚ್ಛೇದ 15(4). ಈ ಅನುಚ್ಛೇದದಲ್ಲಿರುವ ಅರ್ಥ ವಿವರಣೆ ಎಂದರೆ-ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಾಗರಿಕರನ್ನು ಮೀಸಲಾತಿಯ ಉದ್ದೇಶಕ್ಕೆ ‘ಹಿಂದುಳಿದವ’ರೆನ್ನುವರು.
ಸಂವಿಧಾನದ ಈ ಅನುಚ್ಛೇದಗಳನ್ವಯ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಎಂಬುದು ಮೂಲಭೂತ ಹಕ್ಕಲ್ಲ. ಅದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಇಚ್ಛೆಗೆ ಬಿಡಲಾಗಿದೆ. ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯ ಪಟ್ಟಲ್ಲಿ ಅಂಥವರಿಗಾಗಿ ನೇಮಕಗಳನ್ನು ಅಥವಾ ಹುದ್ದೆಗಳನ್ನು ಮೀಸಲಿಡುವುದಕ್ಕಾಗಿ ಯಾವುದೇ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸ ತಕ್ಕದ್ದಲ್ಲ ಎಂಬುದು ಅನುಚ್ಛೇದ 16(4)ರಲ್ಲಿ ಹೇಳಿದೆ.
ಹಿಂದುಳಿದವರಿಗೆ ಮೀಸಲಾತಿ ಕೊಡುವ ನಿಟ್ಟಿನಲ್ಲಿ ಕೇಂದ್ರವಾಗಲಿ ಅಥವಾ ರಾಜ್ಯಗಳೇ ಆಗಲಿ, ಆತುರವನ್ನೇನೂ ತೋರಿಸಲಿಲ್ಲ. ಕೇಂದ್ರ ಸರಕಾರದ ಮಟ್ಟದಲ್ಲಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಮೊದಲನೇ ಮಹಾ ಚುನಾವಣೆ ಆದ ಕ್ಷಣದಲ್ಲಿಯೇ ಅನುಚ್ಛೇದ 340ರಂತೆ ಆಯೋಗ ರಚಿಸ ಬೇಕಾಗಿತ್ತು. ಪರಿಶಿಷ್ಟ ವರ್ಗಗಳಿಗೆ ಸಂಬಂಧಿಸಿದಂತೆ 1950ರಲ್ಲಿಯೇ ರಾಷ್ಟ್ರಪತಿಗಳಿಂದ ಆದೇಶ ಹೊರಡಿಸಲಾಗಿತ್ತು. ಏಕೋ ಏನೋ ತಕ್ಷಣದಲ್ಲಿ ಹಿಂದುಳಿದ ವರ್ಗಗಳ ವಿಷಯದಲ್ಲೂ ಅವಶ್ಯಕ ಕ್ರಮ ಕೈಗೊಳ್ಳಬೇಕಾಗಿದ್ದ ಸರಕಾರಕ್ಕೆ ಜಡತ್ವ ಬಡಿಯಿತು. ಇದೊಂದು ಊಹೆಗೂ ನಿಲುಕದ ಕಾರಣ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿಕೆಯನ್ನು ಇತಿಹಾಸದುದ್ದಕ್ಕೂ ವಿರೋಧಿಸುತ್ತಿದ್ದ ಕಾಣದ ಕೈಗಳಿಗೋ ಅಥವಾ ಪುರೋಹಿತಶಾಹಿಗಳ ಹಿಡಿತಕ್ಕೋ ಕಾಂಗ್ರೆಸ್ ಸರಕಾರ ಸಿಕ್ಕಿ ಹಾಕಿಕೊಂಡಿರಲಿಕ್ಕೂ ಸಾಧ್ಯ ಎಂಬ ಅಭಿಪ್ರಾಯ ಸಾರ್ವಜನಿಕರ ಮನಸ್ಸಿನಲ್ಲಿ ಬರದೇ ಇರದು. ಅಂತೂ ಸಂವಿಧಾನ ಜಾರಿಗೊಂಡ ಮೂರು ವರ್ಷಗಳ ನಂತರ ಆಯೋಗ ರಚಿಸಲು ಕೇಂದ್ರ ಸರಕಾರ ಮುಂದಾಗಿ ಹಿಂದುಳಿದ ವರ್ಗಗಳ ಜನರ ಮೂಗಿಗೆ ತುಪ್ಪದ ಘಮಲು ಹತ್ತಿಸಿತು.
ಕಾಕಾ ಕಾಲೇಲ್ಕರ್ ಆಯೋಗ
ಮೊದಲನೇ ಹಿಂದುಳಿದ ವರ್ಗಗಳ ಆಯೋಗವನ್ನು ರಾಷ್ಟ್ರಪತಿಗಳು ಜನವರಿ 29,1953 ರಲ್ಲಿ ಅನುಚ್ಛೇದ 340ರ ಅಡಿಯಲ್ಲಿ ರಚಿಸುವರು. ಕಾಕಾ ಕಾಲೇಲ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಆಯೋಗದ 10 ಮಂದಿ ಸದಸ್ಯರಲ್ಲಿ ಟಿ.ಮರಿಯಪ್ಪ ಮೈಸೂರು ರಾಜ್ಯವನ್ನು ಪ್ರತಿನಿಧಿಸಿದ್ದರು.
ಆಯೋಗ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ ಕಡೆಗೆ ‘ಜಾತಿ’ಯನ್ನು ಒಂದು ಮಾನದಂಡವಾಗಿ ಹಿಂದುಳಿದ ವರ್ಗಗಳನ್ನು ನಿರ್ಣಯಿಸಲು ಆಯ್ದುಕೊಂಡಿತು. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯೊಳಗಿನ ಜಾತಿಯನ್ನು ಪರಿಶೀಲನಾ ಅಂಶಾನುಸಾರ ವ್ಯಾಖ್ಯಾನಿಸಿ ಆಯೋಗ ಸಮರ್ಥಿಸಿಕೊಂಡಿತು. ಅದೇ ಮಾನದಂಡ ಅನುಸರಿಸಿ 2,399 ಜಾತಿಗಳನ್ನು ಹಿಂದುಳಿದವುಗಳೆಂದು, ಅವುಗಳಲ್ಲಿ 837 ಅನ್ನು ಅತಿ ಹಿಂದುಳಿದ ಜಾತಿಗಳೆಂದು ಆಯೋಗ ಗುರುತಿಸಿತು. ಮೈಸೂರು ಸಂಸ್ಥಾನದ ಅಂದಿನ (1951) ಜನಸಂಖ್ಯೆ 90,74,972 ಅದರಲ್ಲಿ ಅಂದಾಜು ಹಿಂದುಳಿದ ವರ್ಗಗಳ ಜನಸಂಖ್ಯೆ 59,63,902(ಶೇ.65.7).
ಆಯೋಗದ ಅಧ್ಯಕ್ಷರು ತಮ್ಮ ಅಗ್ರ ಪತ್ರದಲ್ಲಿಯೇ ಹಿಂದುಳಿದ ವರ್ಗಗಳನ್ನು ಗುರುತಿಸಲು ಜಾತಿಯನ್ನು ಮಾನದಂಡವಾಗಿ ಪರಿಗಣಿಸಿರುವ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಜೊತೆಗೆ 11 ಮಂದಿ ಸದಸ್ಯರಲ್ಲಿ ಐದು ಮಂದಿ ಜಾತಿಯನ್ನು ಮಾನದಂಡವಾಗಿ ಬಳಸಿರುವುದನ್ನು ಒಪ್ಪದೇ ಅಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ವರದಿಯೇ ಗೊಂದಲದ ಗೂಡಾಯಿತು. ಕೊಡಗು ಪ್ರಾಂತದ ಲಿಂಗಾಯತರನ್ನು ಹಿಂದುಳಿದ ವರ್ಗವೆಂದು ಪರಿಗಣಿಸಿದೆ. ಹಾಗೆಯೇ ಮೈಸೂರು ಸಂಸ್ಥಾನದಲ್ಲಿ ಗ್ರಾಮಾಂತರ ಒಕ್ಕಲಿಗರನ್ನು ಮಾತ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದ್ದರೂ, ಒಕ್ಕಲಿಗರೆಲ್ಲರನ್ನೂ ಕೊಡಗು ಸಂಸ್ಥಾನದಲ್ಲಿ ಹಿಂದುಳಿದವರೆಂದು ಪರಿಗಣಿಸಿದೆ. ಆಯೋಗ ವರದಿಯನ್ನು ಮಾರ್ಚ್ 30, 1955ರಂದು ಸರಕಾರಕ್ಕೆ ಸಲ್ಲಿಸಿತು.
ಭಾರತ ಸರಕಾರ ವರದಿಯನ್ನು ಗೃಹಮಂತ್ರಿ ಪಂಡಿತ್ ಗೋವಿಂದ ವಲ್ಲಭ ಪಂತ್ ಅವರಿಂದ ಸೆಪ್ಟಂಬರ್ 3, 1956ರಂದು, ಒಂದು ಉದ್ದನೆಯ ಟಿಪ್ಪಣಿಯೊಡನೆ ಸಂಸತ್ತಿನಲ್ಲಿ ಮಂಡನೆಯಾಯಿತು. ವಾಸ್ತವಿಕ ಸಂಗತಿಗಳಿಂದ ಕೂಡಿದ ಪರೀಕ್ಷಾ ವಿಧಾನ ಅನುಸರಿಸಿ ಮತ್ತು ಯುಕ್ತ ಮಾನದಂಡಗಳನ್ನು ಅಳವಡಿಸಿ ಹಿಂದುಳಿದ ವರ್ಗಗಳನ್ನು ಗುರುತಿಸಿಲ್ಲ ಎಂದು ಸಂಸತ್ತು ವರದಿಯನ್ನು ತಿರಸ್ಕರಿಸಿತು. ಗೃಹಮಂತ್ರಿ ಗೋವಿಂದ ವಲ್ಲಭ ಪಂತ್ ಅವರೇ ವರದಿ ಕುರಿತು ತೀವ್ರ ಕಠಿಣ ನಿಲುವನ್ನು ಹೊಂದಿದ್ದರು. ವರದಿಯೇ ವ್ಯವಸ್ಥಿತ ಪಿತೂರಿಗೆ ಒಳಗಾಗಿತ್ತು ಎಂಬುದೂ ಸಂದೇಹಾಸ್ಪದ.
ವರದಿಯು ಕೇಂದ್ರದ ಅವಕೃಪೆಗೆ ಒಳಗಾದ ನಂತರ, ಸಂವಿಧಾನದ ಆಶಯದಂತೆ ಮತ್ತೊಂದು ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಬೇಕಾದ ತುರ್ತು ಕೇಂದ್ರದ ಕಾಂಗ್ರೆಸ್ ಸರಕಾರದ ಮೇಲಿತ್ತು. ಪಂಡಿತ್ ಜವಾಹರಲಾಲ್ ನೆಹರೂ ಅವರು ಪ್ರಧಾನಮಂತ್ರಿಯಾಗಿ, ವರದಿ ತಿರಸ್ಕರಿಸಿದ ನಂತರ ಸುಮಾರು ಎಂಟು ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿದ್ದರು. ಅವರು 1964ರಲ್ಲಿ ಮೃತಪಟ್ಟ ನಂತರ ಅಧಿಕಾರಕ್ಕೆ ಬಂದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಎರಡು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದರಾದರೂ ಆಕಸ್ಮಿಕವಾಗಿ ಮರಣ ಹೊಂದಿದರು. ಮುಂದೆ ಬಂದವರೇ ಇಂದಿರಾ ಗಾಂಧಿಯವರು. ತುರ್ತು ಪರಿಸ್ಥಿತಿ ಘೋಷಣೆಯ ಕಾರಣ 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪಕ್ಷ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಬರುತ್ತದೆ. ಮುರಾರ್ಜಿ ದೇಸಾಯಿಯವರು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವರು. ಎರಡನೇ ಹಿಂದುಳಿದ ವರ್ಗಗಳ ಆಯೋಗದ ರಚನೆಗೆ ಜನತಾ ಪಕ್ಷದ ಭಾಗವಾಗಿದ್ದ ದ್ರಾವಿಡ ಪಕ್ಷಗಳ ಪ್ರಬಲ ಒತ್ತಾಯದ ಮೇರೆಗೆ ಬಿ.ಪಿ.ಮಂಡಲ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ಜನತಾ ಪಕ್ಷ ಸರಕಾರ ಜನವರಿ 1, 1978ರಂದು ರಚಿಸುತ್ತದೆ. ಸುಮಾರು 22 ವರ್ಷಗಳ ಕಾಲ ಕಾಂಗ್ರೆಸ್ ಕಾಲಹರಣ ಮಾಡಿದ್ದಕ್ಕಾಗಿ ಸಮಾಜವಾದಿ ಪಕ್ಷದ ಮುಖಂಡ ರಾಮ ಮನೋಹರ ಲೋಹಿಯಾ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ಖಂಡಿಸುತ್ತಾರೆ. ‘‘ಬ್ರಾಹ್ಮಣ-ಬನಿಯ ಜಾತಿಗಳು ಎಲ್ಲಿಯವರೆಗೆ ಅಧಿಕಾರದಲ್ಲಿ ಇರುತ್ತವೆಯೋ ಆ ತನಕ ಹಿಂದುಳಿದ ವರ್ಗಗಳು ಶೋಷಣೆ, ದೌರ್ಜನ್ಯ ಮತ್ತು ತೀವ್ರ ಹಾನಿ ಗೊಳಗಾಗುವುದು ತಪ್ಪುವುದಿಲ್ಲ’’ ಎನ್ನುತ್ತಾರೆ ಲೋಹಿಯಾ.
ಬಿ.ಪಿ.ಮಂಡಲ್ ಆಯೋಗ
ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ಬಿ.ಪಿ.ಮಂಡಲ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರಪತಿಗಳು ಜನವರಿ 1,1979ರಂದು ರಚಿಸುತ್ತಾರೆ.
ಆಯೋಗ ವರದಿ ಸಿದ್ಧಪಡಿಸಲು ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ವಲಯಗಳಿಗೆ ಅನ್ವಯಿಸುವಂತೆ 11 ಮಾನದಂಡಗಳನ್ನು ಅಳವಡಿಸಿ ಕೊಂಡಿತ್ತು. ವರದಿಯನ್ನು ಎರಡು ವರ್ಷಗಳ ಅವಧಿಯೊಳಗೆ ಡಿಸೆಂಬರ್ 31, 1980ರಂದು ಸರಕಾರಕ್ಕೆ ಸಲ್ಲಿಸುತ್ತದೆ. ಆಯೋಗ ಹಿಂದುಳಿದ ವರ್ಗಗಳಿಗೆ ಸರಕಾರದ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಯ ಪ್ರವೇಶಕ್ಕಾಗಿ ಶೇ.27ರಷ್ಟು ಮೀಸಲಾತಿ ಕೋಟಾ ನಿಗದಿಗೊಳಿಸಿತ್ತು. ಸಿದ್ಧಪಡಿಸಿದ ವರದಿಯಲ್ಲಿ 3,743 ಜಾತಿಗಳನ್ನು ಹಿಂದುಳಿದವು ಎಂದು ಪರಿಗಣಿಸಲಾಗಿತ್ತು. ಸರಿ ಸುಮಾರು ಹತ್ತು ವರ್ಷಗಳ ಕಾಲ ಆ ದಿನಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ವರದಿಯ ಶಿಫಾರಸುಗಳನ್ನು ಜಾರಿಗೆ ಕೊಡಲು ಸುತಾರಾಂ ಇಷ್ಟವಿರಲಿಲ್ಲ. ಬದಲಾದ ಕೇಂದ್ರ ಸರಕಾರ ಕಡೆಗೂ ಆಗಸ್ಟ್ 13, 1990ರಂದು ಕಾರ್ಯನಿರ್ವಾಹಕ ಆದೇಶ ಹೊರಡಿಸುವುದರ ಮೂಲಕ ಜಾರಿಗೆ ಕೊಡುತ್ತದೆ. ಸಂವಿಧಾನ ಜಾರಿಗೊಂಡ ನಂತರ ಅದರ ಆಶಯದಂತೆ ಹಿಂದುಳಿದ ವರ್ಗಗಳ ಕನಸು ನನಸಾಗಲು ಸುಮಾರು 40 ವರ್ಷಗಳೇ ಬೇಕಾಯಿತು. ಆದೇಶ ಹೊರಡಿಸಿದ ದಿನ ಹಿಂದುಳಿದವರ ಬದುಕಿಗೊಂದು ಬಹು ಮಹತ್ವದ ದಿನ ಅಷ್ಟೇ ಅಲ್ಲ; ಅದೊಂದು ಭಾರತೀಯ ಹಿಂದುಳಿದ ವರ್ಗಗಳ ಪಾಲಿಗೆ ಮೈಲಿಗಲ್ಲಾಗಿ ಉಳಿದಿದೆ.
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಅವಕಾಶ ಮಾಡಿಕೊಟ್ಟವರು ಅಂದಿನ ಪ್ರಧಾನ ಮಂತ್ರಿ ವಿ. ಪಿ.ಸಿಂಗ್ ಅವರು. 1977ರಲ್ಲಿ ಕಾಂಗ್ರೆಸ್ ಸೋಲಿಸಿ ಅಧಿಕಾರಕ್ಕೆ ಬಂದ ಜನತಾ ಪಕ್ಷ ತನ್ನ ಒಳಕಚ್ಚಾಟದಿಂದಾಗಿ ಅಧಿಕಾರ ಕಳೆದುಕೊಂಡು 1980ರಲ್ಲಿ ಮತ್ತೆ ಸಾರ್ವತ್ರಿಕ ಚುನಾವಣೆಗಳು ನಡೆದು, ಇಂದಿರಾಗಾಂಧಿಯವರೇ ಅಧಿಕಾರದ ಗಾದಿ ಹಿಡಿದರು. ಇಂದಿರಾ ಗಾಂಧಿಯವರು ತಮ್ಮ ಅವಧಿಯಲ್ಲಿ ಒಮ್ಮೆ ಮಂಡಲ್ ವರದಿಯನ್ನು ಸಂಸತ್ತಿನಲ್ಲಿ ಮಂಡಿಸುತ್ತಾರೆ. ವರದಿ ಮೇಲ್ಜಾತಿಗಳ ವ್ಯಾಪಕ ಟೀಕೆಗೆ ಒಳಗಾಗಿ ಸಂಸತ್ ಸದಸ್ಯರ ಬೆಂಬಲವಿಲ್ಲದೆ ಬಿದ್ದು ಹೋಯಿತು. ಅಕ್ಟೋಬರ್ 31,1984ರಂದು ತಮ್ಮ ಅಂಗ ರಕ್ಷಕನಿಂದಲೇ ಇಂದಿರಾ ಗಾಂಧಿ ಗುಂಡೇಟಿನಿಂದ ಮೃತರಾದರು. ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯಗಳಿಸಿ ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾದರು. ಇವರ ಅವಧಿಯಲ್ಲೂ ವರದಿಗೆ ಮುಕ್ತಿ ದೊರಕಲಿಲ್ಲ. 1989ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತು ರಾಷ್ಟ್ರೀಯ ರಂಗ ಅಧಿಕಾರ ಗಳಿಸಿ ವಿ. ಪಿ. ಸಿಂಗ್ ಅವರು ಪ್ರಧಾನ ಮಂತ್ರಿಯಾದರು. ಅವರು ಮಂಡಲ್ ವರದಿ ಆಧಾರಿತ ಆದೇಶ ಹೊರಡಿಸಲು ಬಹು ಮುಖ್ಯವಾಗಿ ಕಾನ್ಶಿರಾಮ್ ಮತ್ತು ದ್ರಾವಿಡ ಪಕ್ಷಗಳ ಪ್ರಬಲ ಒತ್ತಾಯ ಇತ್ತು.
ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ್ದಕ್ಕಾಗಿ ಲೋಕಸಭೆಯಲ್ಲಿ ಸಂಸದರು ಬೆಂಬಲ ಹಿಂದೆಗೆದುಕೊಂಡದ್ದರಿಂದ ವಿ.ಪಿ. ಸಿಂಗ್ ಅಧಿಕಾರ ವಂಚಿತರಾದರು. ಮತ್ತೊಂದೆಡೆ ಲಾಲ್ ಕೃಷ್ಣ ಅಡ್ವಾಣಿಯವರು ದಕ್ಷಿಣದಿಂದ ಉತ್ತರಕ್ಕೆ ರಥಯಾತ್ರೆ ಕೈಗೊಂಡರು. ಈ ಪ್ರಕರಣಗಳಿಂದಾಗಿ ‘ಮಂಡಲ್ ವಿರುದ್ಧ ಕಮಂಡಲ’ ಎಂಬ ತ್ವೇಷಮಯ ವಾತಾವರಣ ದೇಶದಲ್ಲೆಲ್ಲಾ ಉಂಟಾದದ್ದು ಹೌದು.
ಸರ್ವೋಚ್ಚ ನ್ಯಾಯಾಲಯದಲ್ಲಿ, ನವೆಂಬರ್ 16, 1992ರಂದು ಮೀಸಲಾತಿ ಆದೇಶವನ್ನು ಒಂಭತ್ತು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ ಎತ್ತಿ ಹಿಡಿಯಲಾಗಿ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವಿರೋಧಿಸುತ್ತಿದ್ದ ಎಲ್ಲಾ ಬಾಯಿಗಳು ಬಂದ್ ಆದವು. ವಿರೋಧಿಗಳ ಅಂತರಂಗದಲ್ಲಿ ಮೀಸಲಾತಿ ವಿರುದ್ಧ ಗೊಣಗಾಟ ಇದ್ದರೂ, ಬಹಿರಂಗವಾಗಿಯಂತೂ ಅವರ ಸದ್ದಡಗಿತು. ವಿ.ಪಿ. ಸಿಂಗ್ ನಂತರ ಸ್ವಲ್ಪ ಕಾಲ ಚಂದ್ರಶೇಖರ್ ಬಂದರೂ ಬಹುಕಾಲ ಉಳಿಯಲಿಲ್ಲ. ಆ ನಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಪಿ. ವಿ. ನರಸಿಂಹರಾವ್ ಅವರು ಆಂಧ್ರಪ್ರದೇಶದ ಒಬ್ಬ ಹಿಂದುಳಿದ ವರ್ಗದ ಅಭ್ಯರ್ಥಿಗೆ ನೇಮಕಾತಿ ಆದೇಶವನ್ನು ಸಾಂಕೇತಿಕವಾಗಿ ಕೊಡುವುದರ ಮೂಲಕ ಹಿಂದುಳಿದ ವರ್ಗಗಳ ಮೀಸಲಾತಿಗೆ ನಾಂದಿ ಹಾಡಿದರು.
ಮಂಡಲ್ ವರದಿ ಆಧಾರಿತ ಮೀಸಲಾತಿ ಜಾರಿಗೆ ಬಂದರೂ, ಕೇಂದ್ರ ಉನ್ನತ ಶಿಕ್ಷಣ ಸಂಸ್ಥೆಗಳು ಮೀಸಲಾತಿಗೆ ಒಳಪಟ್ಟಿರಲಿಲ್ಲ. ಸುಮಾರು 15 ವರ್ಷ ಕಳೆದ ನಂತರವಷ್ಟೇ ಕೇಂದ್ರ ಸರಕಾರ ಸಂವಿಧಾನ ತಿದ್ದುಪಡಿ ಮಾಡುವುದರ ಮೂಲಕ ಕೇಂದ್ರ ಶಿಕ್ಷಣ ಸಂಸ್ಥೆಗಳಿಗಾಗಿ ಶೇ.27ರಷ್ಟು ಕೋಟಾ ನಿಗದಿ ಮಾಡಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಘೋಷಿಸಿತು. ಈ ಮುಂಚಿನ ಅವಧಿಯಲ್ಲಿ ಎಚ್. ಡಿ. ದೇವೇಗೌಡ, ಐ.ಕೆ. ಗುಜ್ರಾಲ್ , ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಗಳಾಗಿದ್ದರು. ಕಾಂಗ್ರೆಸ್ ಪಕ್ಷದಿಂದ 2005ರಿಂದ 2014ರ ವರೆಗೂ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಸುಮಾರು ಐದು ವರ್ಷಗಳ ಕಾಲ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರೂ ಅವರ ಅವಧಿಯಲ್ಲಿ ಈ ಮೀಸಲಾತಿ ಕಾರ್ಯಗತವಾಗಲಿಲ್ಲ. ಮನಮೋಹನ್ ಸಿಂಗ್ ಮಂತ್ರಿ ಮಂಡಲದಲ್ಲಿ ಅರ್ಜುನ್ ಸಿಂಗ್ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದರು. ಸಂವಿಧಾನ ತಿದ್ದುಪಡಿಗೆ ಅವರೇ ಕಾರಣಕರ್ತರು. ಕಾಂಗ್ರೆಸ್ ಪಕ್ಷಕ್ಕಿಂತ ಅರ್ಜುನ್ ಸಿಂಗ್ ಅವರ ರಾಜಕೀಯ ಇಚ್ಛಾಶಕ್ತಿ ಮತ್ತು ಅವರು ಹಿಂದುಳಿದ ವರ್ಗಗಳ ಮೇಲೆ ಇಟ್ಟಿದ್ದ ಸಹಾನುಭೂತಿಯೇ ಕಾರಣ. ಸಂವಿಧಾನ ತಿದ್ದುಪಡಿಯಾಗಿ ಅನುಚ್ಛೇದ 15 (5) ಸೇರ್ಪಡೆಗೊಂಡು ಸಂವಿಧಾನ ತಿದ್ದುಪಡಿ ಕಾಯ್ದೆ, 2006 ಜಾರಿಗೆ ಬಂತು. ಅದು ಜನವರಿ 4, 2007ರಂದು ಅಧಿಸೂಚಿಸಲ್ಪಟ್ಟಿತು. ಕಾಯ್ದೆಯಲ್ಲಿ ಪರಿಶಿಷ್ಟ ವರ್ಗಗಳನ್ನೂ ಸೇರಿಸಲಾಯಿತು. ಕಾಯ್ದೆಯನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾಕಷ್ಟು ಮನವಿಗಳು ದಾಖಲಾದವು. ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿತು. ಕಡೆಗೆ ಎಪ್ರಿಲ್ 10, 2008ರಂದು ಅಂತಿಮ ತೀರ್ಪು ಹೊರಬಂದು ಸಂವಿಧಾನದ ತಿದ್ದುಪಡಿಯನ್ನು ಎತ್ತಿ ಹಿಡಿಯಲಾಯಿತು. (ಅಶೋಕ್ ಠಾಕೂರ್ v/s ಭಾರತ ಒಕ್ಕೂಟ).
2014ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು, ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ತೀರ ಅವಮಾನಕರವಾಗಿ ಸೋತು ಹೋಯಿತು; ಅಷ್ಟೇ ಅಲ್ಲ ಅಧಿಕೃತ ವಿರೋಧ ಪಕ್ಷದ ನಾಯಕನ ಪಟ್ಟವೂ ಸಿಗಲಿಲ್ಲ. ಎನ್‌ಡಿಎ ನೇತೃತ್ವದ ಭಾಜಪ ಅಧಿಕಾರದ ಗದ್ದುಗೆ ಹಿಡಿಯಿತು. ಭಾಜಪ ಗೆಲುವಿಗಾಗಿಯೇ ಅಹೋರಾತ್ರಿ ಹಂಬಲಿಸುತ್ತಿದ್ದ ಮೇಲ್ಜಾತಿಯ ಮನಸ್ಸುಗಳ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಿತು. ಮೇಲ್ಜಾತಿಯ ಬಡವರಿಗೂ ಮೀಸಲಾತಿ ಬೇಕು ಎಂದು ಹವಣಿಸುತ್ತಿದ್ದವರು, ಒಮ್ಮೆಲೇ ಪಕ್ಷಿಯೊಂದಕ್ಕೆ ಮರುಜೀವ ಬಂದು ಗರಿ ಬಿಚ್ಚಿ ಹಾರಲು ಅಣಿಯಾದಂತೆ, ಎಂದಿನ ತಮ್ಮ ಆಟ ಶುರುವಿಟ್ಟುಕೊಂಡರು. ಭಾಜಪ ಸರಕಾರವೂ ಸೂಕ್ತ ಸಮಯಕ್ಕಾಗಿ ಕಾಯುತ್ತಿತ್ತು. ಸಕಲ ಸನ್ನದ್ಧರಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ಮೇಲ್ಜಾತಿಗಳ ಎಷ್ಟೋ ವರ್ಷಗಳ ಕನಸನ್ನು ನನಸಾಗಿಸಲು 2019ರ ಮೊದಲ ತಿಂಗಳಲ್ಲಿ ಸಂವಿಧಾನ ತಿದ್ದುಪಡಿಗೆ ಭಾಜಪ ಸರಕಾರ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿ ಅತ್ಯಂತ ಅವಸರದಲ್ಲಿ ಅನುಮೋದನೆ ಪಡೆದು ಕೊಂಡು ಬಿಟ್ಟಿತು. ದ್ರಾವಿಡ ಪಕ್ಷ ಒಂದನ್ನು ಹೊರತುಪಡಿಸಿ ಮತ್ತಾವ ಪಕ್ಷವು ವಿಧೇಯಕವನ್ನು ವಿರೋಧಿಸಲಿಲ್ಲ ಎಂಬುದು ವೋಟಿನ ರಾಜಕೀಯದ ಮಹತ್ವವನ್ನು ಒತ್ತಿ ಹೇಳುವುದು. ಕಾಂಗ್ರೆಸ್ ಪಕ್ಷವಂತೂ ತುದಿಗಾಲಲ್ಲಿ ನಿಂತು ಬೆಂಬಲಿಸಿತು. ಸಂವಿಧಾನ ತಿದ್ದುಪಡಿ ಕಾರಣದಿಂದ 15 (6 )ಮತ್ತು 16 (6) ಅನುಚ್ಛೇದಗಳು ಹೊಸದಾಗಿ ಸ್ಥಾನ ಪಡೆದುಕೊಂಡವು. ಆರ್ಥಿಕ ದುರ್ಬಲ ವರ್ಗಗಳಿಗೆ ಪ್ರತಿಶತ ಹತ್ತರಷ್ಟು ಮೀಸಲಾತಿ ನೀಡಲು ಸಂವಿಧಾನದ ಮಾನ್ಯತೆ ಸಿಕ್ಕಂತಾಯಿತು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟ ಸಂದರ್ಭದಲ್ಲಿ ಅಮಾಯಕ ವಿದ್ಯಾರ್ಥಿಗಳನ್ನು ಹೋರಾಟಕ್ಕಿಳಿಸಿ ಕೆಲವರ ಪ್ರಾಣಕ್ಕೆ ಸಂಚಕಾರ ತಂದ ಮೇಲ್ಜಾತಿಯವರು, ಈ ತಿದ್ದುಪಡಿಯನ್ನು ಯಾವುದೇ ಸಿಗ್ಗುವಿಗೆ ಆಸ್ಪದ ನೀಡದೆ ಸ್ವಾಗತಿಸಿಬಿಟ್ಟರು!
ಶೇ. 10ರ ಮೀಸಲಾತಿಯನ್ನು ವಿರೋಧಿಸಿ ಅನೇಕ ಮನವಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾದವು. ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯ ಬಹುಮತದ ತೀರ್ಪಿನಲ್ಲಿ ಎತ್ತಿ ಹಿಡಿಯಿತು. ತೀರ್ಪನ್ನು ಮೊದಲಿಗೆ ಸ್ವಾಗತಿಸಿದ್ದ ಕಾಂಗ್ರೆಸ್ ಪಕ್ಷವು ಕ್ಷಣಾರ್ಧದಲ್ಲಿ ತನ್ನ ಮನಸ್ಸು ಬದಲಿಸಿಕೊಂಡು ವಿರೋಧಿಸಿದ್ದಂತೂ(ಸಂಸತ್ತಿನಲ್ಲಿ ತಿದ್ದುಪಡಿಯನ್ನು ಬೆಂಬಲಿಸಿತ್ತು)ಅದರ ದ್ವಿಮುಖ ನೀತಿಯನ್ನು ಸಾರಿ ಸಾರಿ ಹೇಳುತ್ತಿತ್ತು!