ಜ.17ರಿಂದ ಕಲಬುರಗಿಯಲ್ಲಿ ‘ಬಹುತ್ವ ಸಂಸ್ಕೃತಿ ಭಾರತೋತ್ಸವ’ : ಚಿಂತಕಿ ಡಾ.ಮೀನಾಕ್ಷಿ ಬಾಳಿ
ಡಾ.ಮೀನಾಕ್ಷಿ ಬಾಳಿ
ಕಲಬುರಗಿ : ಸೌಹಾರ್ದ ಕರ್ನಾಟಕ ಮತ್ತು ರಾಜ್ಯದ ವಿವಿಧ 40ಕ್ಕೂ ಹೆಚ್ಚು ಸಂಘಟನೆಗಳ ಸಹಯೋಗದೊಂದಿಗೆ ಭಾರತದ ಬಹುತ್ವದ ಸಂಸ್ಕೃತಿ ಪ್ರತಿಪಾದನೆ ಮತ್ತು ಸೌಹಾರ್ದ ಕರ್ನಾಟಕಕ್ಕಾಗಿ ಜ.17, 18 ಮತ್ತು 19 ರಂದು ಮೂರು ದಿನಗಳ ಕಾಲ ಬಹುತ್ವ ಸಂಸ್ಕೃತಿ ಭಾರತೋತ್ಸವ ಚಲೋ ಕಲಬುರಗಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ದೊರೆಯಲಿದೆ. ಸರ್ವಧರ್ಮಿಯರ ಸಂಚಾಲಕರ ನೇತೃತ್ವದಲ್ಲಿ ಜರುಗಲಿರುವ ಈ ಕಾರ್ಯಕ್ರಮದ ಗುರಿ, ಉದ್ದೇಶ, ಸ್ವರೂಪ, ರೂಪರೇಶಗಳ ಕುರಿತು ಸಂಚಾಲಕರಲ್ಲಿ ಒಬ್ಬರಾದ ಚಿಂತಕಿ, ಲೇಖಕಿ ಡಾ.ಮೀನಾಕ್ಷಿ ಬಾಳಿ ಅವರ ಸಂದರ್ಶನ.
ವಾ.ಭಾ : ಬಹುತ್ವ ಸಂಸ್ಕೃತಿ ಭಾರತೋತ್ಸವದ ಕುರಿತು ವಿವರಿಸಿ?
ಮೀನಾಕ್ಷಿ ಬಾಳಿ : ಧರ್ಮೋ ರಕ್ಷತಿ ರಕ್ಷಿತಃ ಎಂದು ಹೇಳಲಾಗುತ್ತದೆ. ಆದರೆ ನಮ್ಮದು ಸಂವಿಧಾನವೂ ರಕ್ಷಿತ ರಕ್ಷಿತಃ ಕಾರ್ಯಕ್ರಮ. ಭಾರತದಲ್ಲಿ ಹಿಂದೂ, ಮುಸ್ಲಿಂ, ಸಿಖ್, ಬೌದ್ಧ, ಕ್ರಿಶ್ಚಿಯನ್, ಜೈನ್, ಪಾರ್ಸಿ, ನಾಸ್ತಿಕರು ಸೇರಿದಂತೆ ಹಲವು ಧರ್ಮಗಳು ಇವೆ. ಅವುಗಳು ತಮ್ಮದೇ ಆದ ಸಂಸ್ಕೃತಿಗಳು ಹೊಂದಿವೆ. ಎಲ್ಲ ಧರ್ಮಗಳು ಶೇಷ್ಠವಾಗಿವೆ. ತನ್ನ ಧರ್ಮವೇ ಶೇಷ್ಠ ಉಳಿದ ಧರ್ಮಗಳು ಕನಿಷ್ಠ ಎಂಬ ಅಪನಂಬಿಕೆಗಳ ವಿರುದ್ಧ ಕೈಗೊಳ್ಳುತ್ತಿರುವ ಬಹುತ್ವ ಸಂಸ್ಕೃತಿ ಭಾರತೋತ್ಸವದ ಸೌಹಾರ್ದ ಕಾರ್ಯಕ್ರಮವಾಗಿದೆ.
ವಾ.ಭಾ : ಈ ಕಾರ್ಯಕ್ರಮದ ಅಗತ್ಯ ಬಗ್ಗೆ ಹೇಳುವುದಾದರೆ..?
ಮೀನಾಕ್ಷಿ ಬಾಳಿ : ಇತ್ತೀಚೆಗೆ ಮಂದಿರ, ಮಸೀದಿ, ಜಾತಿ, ಧರ್ಮ, ಉದ್ಯೋಗ, ಶಿಕ್ಷಣ, ಹೆಣ್ಣು, ಗಂಡು, ಶಕ್ತಿವಂತ, ದುರ್ಬಲರು, ಅಧಿಕಾರ, ಶ್ರೀಮಂತ, ಬಡವ, ಕಾರ್ಮಿಕ ಹೀಗೆ ಹಲವು ರೂಪದಲ್ಲಿ ಮನುಷ್ಯ, ಮನುಷ್ಯರ ನಡುವೆ ಅಪನಂಬಿಕೆ ಹುಟ್ಟಿಸಿ ಜನರಲ್ಲಿ ಕೋಮುವಾದದ ಮೂಲಕ ಯುವಕರಲ್ಲಿ ವಿಷ ಬೀಜ ಬಿತ್ತುವ ಮೂಲಕ ವಚನ ಸಾಹಿತ್ಯದ ಮೇಲೆ ದಾಳಿ ಮಾಡಲಾಗುತ್ತಿದೆ. ವಚನಗಳನ್ನು ತಿರುಚಿ ಸನಾತನ ಧರ್ಮಕ್ಕೆ ಪುರಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಶ್ರಮಿಕರು ಮತ್ತು ದುಡಿಯುವ ವರ್ಗದ ಕಟ್ಟಿದ ವಚನಗಳು ಕರ್ಮ ಸಿದ್ಧಾಂತವನ್ನು ಧಿಕ್ಕರಿಸಿ ಕಾಯಕ ಸಿದ್ಧಾಂತವನ್ನು ಎತ್ತಿಹಿಡಿಯುವ ವಚನ ದರ್ಶನವನ್ನು ವಚನ ವಿಚಾರದ ಹೆಸರಲ್ಲಿ ಕುಚೇಷ್ಟೆ ಮಾಡುತ್ತಿದ್ದಾರೆ. ಕಲಬುರಗಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಶರಣರಿಗೆ ಕರ್ಮ ಭೂಮಿ, ಸೂಫಿ ಸಂತರಿಗೆ ಪ್ರಯೋಗ ಭೂಮಿಯಾಗಿದೆ.
ಕೋಮುವಾದಿಗಳು ಸಂಸ್ಕೃತಿ ಉತ್ಸವದ ನೆಪದಲ್ಲಿ ಏಕ ಸಂಸ್ಕೃತಿಯನ್ನು ಹೇರುತ್ತಾ ನಮ್ಮ ನಾಡಿನ ಭಾವೈಕ್ಯ ಪರಂಪರೆಯನ್ನು ಹಾಳು ಮಾಡಲು ಮುಂದಾಗುತ್ತಿದ್ದಾರೆ. ಇದಕ್ಕೆ ಉತ್ತರವೆಂಬಂತೆ ಕೆಲವು ಅಲ್ಪಸಂಖ್ಯಾತ ಮೂಲಭೂತವಾದಿಗಳು ಮತಾಂಧತೆಯಲ್ಲಿ ಮುಳುಗುತ್ತಿದ್ದಾರೆ. ಅತ್ಯಂತ ಅಪಾಯಕಾರಿ ಕೋಮು ಚಟುವಟಿಕೆಗಳು ಪ್ರಭುತ್ವ ಪ್ರೇರಿತ ಅಧಿಕಾರದ ಮೂಲಕ ನಡೆಯುತ್ತಿವೆ. ಈ ನಡೆಗಳು ನಮ್ಮ ಬದುಕನ್ನು ಇನ್ನಷ್ಟು ದುರ್ಬಲಗೊಳಿಸುತ್ತವೆ.
ಕೋಮುವಾದಿಗಳ ಆಕರ್ಷಕ ಮಾತುಗಳಿಗೆ ಮರುಳಾದ ನಮ್ಮ ಯುವಜನರು, ವಿಶೇಷವಾಗಿ ದಲಿತ, ಶೂದ್ರ ಮುಂತಾದ ಹಿಂದುಳಿದ ಯುವಜನರು ಅವರು ತೋಡಿದ ಖೆಡ್ಡಾಗಳಿಗೆ ಬೀಳುತ್ತಿದ್ದಾರೆ. ಧಾರ್ಮಿಕ ದ್ವೇಷಗಳಿಂದ ಕೋಮುದಂಗೆಗಳಲ್ಲಿ ನಿರತರಾಗಿ ಕೇಸು ಹಾಕಿಸಿಕೊಂಡು ಒದ್ದಾಡುತ್ತಿದ್ದಾರೆ. ಹಿಂದೂ ನಾವೆಲ್ಲ ಒಂದು ಎನ್ನುತ್ತ ದಲಿತಾದಿ ಶೂದ್ರ ಬಡಮಕ್ಕಳನ್ನು ಮತಾಂಧತೆಯಲ್ಲಿ ಕೆರಳಿಸಿ ಅವರೆಲ್ಲರನ್ನು ಕ್ರಿಮಿನಲ್ಗಳಾಗಿಸುತ್ತಿದ್ದಾರೆ. ನಮ್ಮ ತರುಣ ಪೀಳಿಗೆ ಕೋಮುದ್ವೇಷದ ದಳ್ಳುರಿಗೆ ಸಿಲುಕದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದಕ್ಕಾಗಿ ಮೂರು ದಿವಸಗಳವರೆಗೆ ಕಲಬುರಗಿಯಲ್ಲಿ ರಾಜ್ಯ ಮಟ್ಟದ ಸೌಹಾರ್ದ ಸಮಾವೇಶ ಏರ್ಪಡಿಸಲಾಗಿದೆ.
ವಾ.ಭಾ : ಈ ಕಾರ್ಯಕ್ರಮದ ಮುಂದಿನ ನಡೆ ಏನು?
ಮೀನಾಕ್ಷಿ ಬಾಳಿ : ಈ ಕಾರ್ಯಕ್ರಮ ವಚನಗಳು ತಿರುಚುವವರ ವಿರುದ್ಧ ಜಾಗೃತಿ ಮೂಡಿಸುವ ಅಭಿಯಾನ. ಯಾರನ್ನೂ ವಿರೋಧಿಸುವ, ದ್ವೇಷಿಸುವ ಮತ್ತು ತಡೆಯುವ ಕಾರ್ಯಕ್ರಮವಲ್ಲ. ದ್ವೇಷಿಸುವುದು ಅವರ ಕರ್ಮ ಪ್ರತಿಸುವುದು ನಮ್ಮ ಧರ್ಮ. ಧರ್ಮೋ ರಕ್ಷತಿ ರಕ್ಷಿತಃ ಎಂದು ಹೇಳಲಾಗುತ್ತದೆ. ಆದರೆ ನಮ್ಮದು ಸಂವಿಧಾನವೂ ರಕ್ಷಿತ ರಕ್ಷಿತಃವೇ ನಮ್ಮ ಮುಂದಿನ ನಡೆಯಾಗಿದೆ.
ವಾ.ಭಾ : ಕಾರ್ಯಕ್ರಮದ ಆಯೋಜಕರು ಯಾರು?
ಮೀನಾಕ್ಷಿ ಬಾಳಿ : ರಾಜ್ಯದ ಬುದ್ಧಿ ಜೀವಿಗಳು, ಎಲ್ಲ ಧರ್ಮದ ಮುಖಂಡರು ಮತ್ತು ೪೦ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜನೆಗೊಂಡಿರುವ ಒಂದು ಕಾರ್ಯಕ್ರಮ.
ವಾ.ಭಾ : ಕಾರ್ಯಕ್ರಮದ ರೂಪರೇಷೆಗಳೇನು?
ಮೀನಾಕ್ಷಿ ಬಾಳಿ : ಜ.17ರಂದು ಶರಣಬಸವೇಶ್ವರ ದೇವಸ್ಥಾನದಿಂದ ವಾಹನ ಜಾಥಾ ಆರಂಭವಾಗಿ ಸೈಂಟ್ ಮೇರಿ ಚರ್ಚ್ ಎದುರಿಂದ ಸರ್ದಾರ ವಲ್ಲಭಾಯಿ ಪಟೇಲ್ ಮಾರ್ಗಾದಿಂದ ಜಗತ್ ವೃತದಿಂದ ಖ್ವಾಜಾ ಬಂದೇನವಾಜ್ ದರ್ಗಾದ ಮುಕ್ತಾಯಗೊಳ್ಳಿಸುವ ಮೂಲಕ ಶಾಂತಿ ಸಂದೇಶ ಸಾರಲಾಗುತ್ತದೆ.
ಎರಡನೇ ದಿನವಾದ ೧೮ ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಪಂಡಿತ್ ರಂಗಮಂದರಿರದಲ್ಲಿ ಭಾವೈಕ್ಯದ ಸಮನ್ವಯ ಗಾಯನ ಗಮಲು ಘೋಷಣೆಯಡಿ ದಿನವಿಡಿ ತತ್ವಪದ, ಸೂಫಿಪದ, ವಚನ ಗಾಯನ ಮತ್ತು ಖವಾಲಿಗಳು ಇರುತ್ತದೆ.
ಕಾರ್ಯಕ್ರಮದ ಕೊನೆ ದಿನ ಜ.17 ರಂದು ಬೆಳಗ್ಗೆ 10 ರಿಂದ ಕನ್ನಡ ಭವನದಿಂದ ಮೆರವಣಿಗೆ ನಡೆಸಿ ಜಗತ್ ವೃತದಲ್ಲಿ ಸೌಹಾರ್ದ ಉತ್ಸವದ ಬಹಿರಂಗ ಸಮಾವೇಶ ದಿನವಿಡಿ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಬೆಂಗಳೂರು, ಮಂಗಳೂರು, ಮಂಡ್ಯ, ಕೋಲಾರ ಸೇರಿದಂತೆ ಎಲ್ಲ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.