ಎಚ್ಚರ... ಮೈಮರೆತರೆ ಮಂಗಳೂರು ದಿಲ್ಲಿಯಾದೀತು!
ಕುಸಿಯುತ್ತಿದೆ ಉಸಿರಾಡುವ ಗಾಳಿಯ ಗುಣಮಟ್ಟ
♦ಗಾಳಿಯಲ್ಲಿ ಡಬ್ಲ್ಯುಎಚ್ ಒ ನಿಗದಿತ ಸರಾಸರಿ ಮಟ್ಟ ಮೀರುತ್ತಿದೆ ಮಾಲಿನ್ಯಕಾರಕ ಕಣಗಳು
ಮಂಗಳೂರು, ಡಿ.22: ರಾಷ್ಟ್ರ ರಾಜಧಾನಿ ದಿಲ್ಲಿ ಇತ್ತೀಚೆಗೆ ಗಾಳಿಯ ಗುಣಮಟ್ಟ ಕುಸಿತದ ಮೂಲಕ ಸುದ್ದಿಯಾಗುತ್ತಿದೆ. ದಿಲ್ಲಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ(ಎಕ್ಯೂಐ)ವು ಡಿಸೆಂಬರ್ 16ರಂದು 400ರ ಗಡಿ ದಾಟಿದೆ. ಇದು ‘ಅತ್ಯಂತ ಕಳಪೆ’ ಎಕ್ಯೂಐ ಮಟ್ಟ ಆಗಿದ್ದು, ‘ಗಂಭೀರ ಸ್ಥಿತಿ’ ಎಂದು ಘೋಷಿಸಿರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಹಲವು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಇದು ದೇಶದ ಎ-1 ಶ್ರೇಯಾಂಕಿತ ನಗರವಾದ ದಿಲ್ಲಿಯದ್ದಷ್ಟೇ ಸಮಸ್ಯೆಯಲ್ಲ. ಎಚ್ಚೆತ್ತುಕೊಳ್ಳದಿದ್ದಲ್ಲಿ ಇಂತಹದ್ದೇ ಅಪಾಯದ ಸ್ಥಿತಿ ಬಿ-2 ಶ್ರೇಯಾಂಕಿತ ನಗರವಾಗಿರುವ ಮಂಗಳೂರಿಗೂ ಎದುರಾಗುವ ದಿನಗಳು ದೂರವಿಲ್ಲ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಶುದ್ಧ ಗಾಳಿ ನಮ್ಮ ಆರೋಗ್ಯದ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಮಂಗಳೂರಿನಲ್ಲಿ ನಾವು ಉಸಿರಾಡುವ ಗಾಳಿಯ ಗುಣಮಟ್ಟ ದಿನೇದಿನೇ ಕುಸಿಯುತ್ತಿದ್ದು, ಮಾಲಿನ್ಯದ ಪ್ರಮಾಣ ಅಪಾಯಕಾರಿಯಾಗುತ್ತಿದೆ. ವಾಯುಮಾಲಿನ್ಯ ತಡೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮಂಗಳೂರು ಕೂಡಾ ಮತ್ತೊಂದು ದಿಲ್ಲಿ ಆದೀತು ಎಂದು ಪರಿಸರ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಮಂಗಳೂರು ಮಾತ್ರವಲ್ಲ, ಕರ್ನಾಟಕದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು ನಗರದಲ್ಲೂ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಈ ನಗರಗಳಲ್ಲಿ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳಾದ ಪಿಎಂ(ಪಾರ್ಟಿಕ್ಯುಲೇಟ್ ಮ್ಯಾಟರ್- ಗಾಳಿಯಲ್ಲಿರುವ ಧೂಳಿನ ಕಣಗಳ ಪ್ರಮಾಣ) 2.5 (ಸೂಕ್ಷ್ಮ) ಮತ್ತು ಪಿಎಂ-10 (ಅತಿಸೂಕ್ಷ್ಮ)ಗಳ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ ಒ)ಯ ಪರಿಷ್ಕೃತ ಮಾರ್ಗಸೂಚಿಯ ಸರಾಸರಿ ಮಟ್ಟಗಳನ್ನು ಮೀರಿದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಪರಿಸರ ಅಭಿಯಾನಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ‘ಗ್ರೀನ್ ಪೀಸ್ ಇಂಡಿಯಾ’ ಸಂಸ್ಥೆ ಎಚ್ಚರಿಸಿದೆ. ಈ ಬಗ್ಗೆ ಸಂಸ್ಥೆಯು ಇತ್ತೀಚೆಗೆ ನಡೆಸಿದ ‘ಸ್ಪೇರ್ ದಿ ಏರ್-2’ ಸಂಶೋಧನಾ ವರದಿಯಲ್ಲಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಡಬ್ಲ್ಯುಎಚ್ ಒ ಮಾರ್ಗಸೂಚಿಗೆ ಹೋಲಿಸಿದಾಗ, ಗಾಳಿಯಲ್ಲಿ ಪಿಎಂ 2.5 ಕಣಗಳ ಮಟ್ಟವು ಮಂಗಳೂರಿನಲ್ಲಿ 6ರಿಂದ 7 ಪಟ್ಟು ಹೆಚ್ಚಾಗಿದೆ ಎಂದು ಗ್ರೀನ್ ಪೀಸ್ ವರದಿ ಎಚ್ಚರಿಸಿದೆ. ಅಷ್ಟೇ ಅಲ್ಲದೆ, ಗಾಳಿಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನ್ಯಾಶನಲ್ ಆ್ಯಂಬಿಯೆಂಟ್ ಏರ್ ಕ್ವಾಲಿಟಿ ಸ್ಟ್ಯಾಂಡರ್ಡ್ಸ್ (ಎನ್ ಎಎಕ್ಯೂಎಸ್) ಮಾರ್ಗಸೂಚಿ ಯಲ್ಲಿ ತಿಳಿಸಲಾದ ಮಾನದಂಡಗಳನ್ನೂ ಇದು ಮೀರಿದೆ ಎಂದು ಹೇಳಲಾಗುತ್ತಿದೆ. ನಗರದಲ್ಲಿ ಪಿಎಂ 10 ಕಣಗಳ ವಾರ್ಷಿಕ ಸರಾಸರಿಯು ಎನ್ಎಎಕ್ಯೂಎಸ್ ಮಾನದಂಡಕ್ಕಿಂತ 1.5 ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಬೆಂಗಳೂರು, ಮೈಸೂರು, ನೆರೆಯ ಆಂಧ್ರ ಪ್ರದೇಶ ರಾಜ್ಯದ ವಿಶಾಖಪಟ್ಟಣ, ವಿಜಯವಾಡ, ತೆಲಂಗಾಣ ರಾಜ್ಯದ ಹೈದರಾಬಾದ್, ತಮಿಳುನಾಡಿನ ಮಹಾನಗರ ಚೆನ್ನೈ, ಕೇರಳದ ಕೊಚ್ಚಿಯಲ್ಲೂ ಗಾಳಿಯ ಗುಣಮಟ್ಟ ಕಳವಳಕಾರಿಯಾಗಿದೆ. ಅದರಲ್ಲೂ ವಿಶಾಖಪಟ್ಟಣದಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಇಲ್ಲಿನ ಗಾಳಿಯಲ್ಲಿ ಪಿಎಂ 2.5 ಕಣಗಳ ಪ್ರಮಾಣ ಡಬ್ಲ್ಯುಎಚ್ ಒ ಮಾನದಂಡಕ್ಕಿಂತ 10 ಪಟ್ಟು ಮತ್ತು ಪಿಎಂ 10 ಕಣಗಳ ಪ್ರಮಾಣ 9 ಪಟ್ಟು ಹೆಚ್ಚಾಗಿವೆ. ಪಿಎಂ 10 ಕಣಗಳ ಮಟ್ಟವು ಬೆಂಗಳೂರು, ಮೈಸೂರು ನಗರಗಳಲ್ಲೂ 4ರಿಂದ 5 ಪಟ್ಟು ಹೆಚ್ಚಾಗಿವೆ. ಅದೇರೀತಿ ಹೈದರಾಬಾದ್, ವಿಜಯವಾಡ, ಕೊಚ್ಚಿ, ಚೆನ್ನೈಯಲ್ಲಿ ಗಾಳಿಯಲ್ಲಿ ಪಿಎಂ 2.5 ಕಣಗಳ ಮಟ್ಟವು ಡಬ್ಲ್ಯುಎಚ್ ಒ ಮಾನದಂಡಕ್ಕಿಂತ 6ರಿಂದ 7 ಪಟ್ಟು ಹೆಚ್ಚಾಗಿದೆ ಎಂದು ಗ್ರೀನ್ ಪೀಸ್ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಡಬ್ಲ್ಯುಎಚ್ ಒ ಮಾರ್ಗಸೂಚಿ ಪ್ರಕಾರ ಪಿಎಂ 10 ವಾರ್ಷಿಕ ಸರಾಸರಿ ಪ್ರತೀ ಘನ ಮೀಟರ್ ಗೆ 15 (μg/m3) ಮೈಕ್ರೋಗ್ರಾಮ್ಸ್ ಆಗಿದ್ದರೆ, ಎನ್ಎಎಕ್ಯೂಎಸ್ ವಾರ್ಷಿಕ ಸರಾಸರಿ 60 μg/m3ಆಗಿದೆ. ಅದೇ ರೀತಿ ದಿನದ ಸರಾಸರಿ ಮಟ್ಟ ಡಬ್ಲ್ಯುಎಚ್ ಒ ಮಾರ್ಗಸೂಚಿ ಪ್ರಕಾರ 45 μg/m3, ಎನ್ ಎಎಕ್ಯೂಎಸ್ ಪ್ರಕಾರ 100 μg/m3 ಆಗಿದೆ.
ಡಬ್ಲ್ಯುಎಚ್ ಒ ಮಾರ್ಗಸೂಚಿಯನ್ವಯ ಪಿಎಂ 2.5 ವಾರ್ಷಿಕ ಸರಾಸರಿ 5 μg/m3 ಸಾಮಾನ್ಯ ಮಟ್ಟವಾಗಿದ್ದರೆ, ಎನ್ಎಎಕ್ಯೂಎಸ್ ವಾರ್ಷಿಕ ಸರಾಸರಿ 40 μg/m3 ಆಗಿದೆ. ಅದೇ ರೀತಿ ದಿನದ ಸರಾಸರಿ ಮಟ್ಟ ಡಬ್ಲ್ಯುಎಚ್ ಒ ಪ್ರಕಾರ 15 μg/m3, ಎನ್ಎಎಕ್ಯೂಎಸ್ ಪ್ರಕಾರ 60 μg/m3 ಆಗಿದೆ.
ಎಕ್ಯೂಐ ಪ್ರಮಾಣದಲ್ಲೂ ಏರಿಕೆ: ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ(Air Quality Index-ಎಕ್ಯೂಐ) ಪ್ರಮಾಣದಲ್ಲೂ ಏರಿಕೆ ಕಂಡುಬಂದಿದೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಎಕ್ಯೂಐ ಪ್ರಮಾಣ ಸೊನ್ನೆಯಿಂದ 50ರಷ್ಟಿದ್ದರೆ ‘ಉತ್ತಮ’, 51ರಿಂದ 100ರಷ್ಟಿದ್ದರೆ ‘ಸಮಾಧಾನಕರ’, 101ರಿಂದ 200 ರಷ್ಟಿದ್ದರೆ ‘ಸಾಧಾರಣ’, 201ರಿಂದ 300ರಷ್ಟಿದ್ದರೆ ‘ಕಳಪೆ’ ಹಾಗೂ 301ರಿಂದ 400ರಷ್ಟಿದ್ದರೆ ‘ಅತ್ಯಂತ ಕಳಪೆ’ ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡುಬಂದರೆ ‘ತೀವ್ರ ಕಳಪೆ’ ಹಾಗೂ 450ಕ್ಕಿಂತಲೂ ಹೆಚ್ಚಾದರೆ ‘ತೀವ್ರಕ್ಕಿಂತಲೂ ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ. ಮಂಗಳೂರು ನಗರದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ‘ಉತ್ತಮ’ ಸ್ಥಿತಿಯನ್ನು ಮೀರಿ ಮುಂದುವರಿದಿದೆ ಎನ್ನುತ್ತಾರೆ ಪರಿಸರಾಸಕ್ತರು.
♦ ಉಸಿರಾಡುವ ಗಾಳಿಯ ಗುಣಮಟ್ಟ ಕುಸಿಯಲು ಕಾರಣವಾಗುವ ಅಂಶಗಳು
ವಾಹನಗಳಿಂದ ಹೊರಸೂಸುವ ಹೊಗೆ, ರಸ್ತೆಯ ಧೂಳು, ಹೊಸ ಕಟ್ಟಡಗಳ ನಿರ್ಮಾಣ ಮತ್ತು ಹಳೆ ಕಟ್ಟಡಗಳ ಧ್ವಂಸ, ಕೈಗಾರಿಕೆಗಳು ಮತ್ತು ಕಟ್ಟಿಗೆಗಳ ಉರಿಸುವಿಕೆ ಇವೇ ಮೊದಲಾದವುಗಳಿಂದ ಉಂಟಾಗುವ ಹೊರಸೂಸುವಿಕೆ ಗಾಳಿಯ ಗುಣಮಟ್ಟ ಕುಸಿಯಲು ಪ್ರಮುಖ ಕಾರಣಗಳಾಗಿವೆ. ಪಾರ್ಟಿಕ್ಯುಲೇಟ್ ಮ್ಯಾಟರ್ (ಪಿಎಂ) ಮಟ್ಟ ಏರಿಕೆಯಾಗುವಲ್ಲ್ಲೂ ಇವುಗಳು ಪ್ರಮುಖ ಪಾತ್ರ ವಹಿಸುತ್ತವೆ.
♦ಅಭಿವೃದ್ಧಿಯ ನೆಪದಲ್ಲಿ ಮಾಯವಾಗುತ್ತಿರುವ ಹಸುರೀಕರಣ:
ವಾಯುಮಾಲಿನ್ಯ, ಉಸಿರಾಡುವ ಗಾಳಿಯ ಗುಣಮಟ್ಟ ಕುಸಿತ, ತಾಪಮಾನ ಏರಿಕೆಗೆ ಹಲವು ಕಾರಣಗಳಿದ್ದರೂ ನಗರದಲ್ಲಿ ಮಾಯವಾಗುತ್ತಿರುವ ಹಸುರೀಕರಣ ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ವೃಕ್ಷಗಳ ಮಾರಣ ಹೋಮ ನಿರಂತರವಾಗುತ್ತಿದ್ದು, ಹಸಿರು ಕಣ್ಮರೆಯಾಗುತ್ತಿದೆ. ಇದರಿಂದ ದಿನೇದಿನೇ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಪ್ರತೀ ಬೇಸಿಗೆಯಲ್ಲಿ ಸುಡು ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಕರಾವಳಿ ಜಿಲ್ಲೆಗಳ ಜೀವಜಲ ನದಿಗಳ ಉಗಮಸ್ಥಾನವಾಗಿರುವ ಪಶ್ಚಿಮ ಘಟ್ಟಗಳ ಒಡಲು ನವೆಂಬರ್ ತಿಂಗಳಿಗೇ ಬರಿದಾಗಿರುವ ಬಗ್ಗೆ ಪರಿಸರಾಸಕ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬಹುತೇಕವಾಗಿ ಫೆಬ್ರವರಿ ಅಂತ್ಯದವರೆಗೂ ನೀರು ಹರಿಯುವ ಜರಿಗಳು ನವೆಂಬರ್ ವೇಳೆಗೆ ಬತ್ತಿ ಹೋಗಿರುವುದನ್ನು ನವೆಂಬರ್ ಪ್ರಥಮ ವಾರದಲ್ಲಿ ಅಂಕೋಲಾ ತಾಲೂಕಿನ ನೆವಳಸೆಗೆ ಭೇಟಿ ನೀಡಿದ್ದ ಪರಿಸವಾದಿ ದಿನೇಶ್ ಹೊಳ್ಳ ಹಾಗೂ ಸ್ಥಳೀಯರು ಸಂಪೂರ್ಣ ಬರಿದಾಗಿದ್ದ ತೊರೆಯ ಚಿತ್ರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಮಂಗಳೂರು ನಗರದಲ್ಲಿ ಇಂದು ನೆರಳಿನ ಆಶ್ರಯಕ್ಕೆ ಹುಡುಕಾಡಿದರೂ ವೃಕ್ಷಗಳು ಕಾಣಸಿಗದಂತಾಗಿದೆ. ಕೆಲವು ವರ್ಷಗಳ ಹಿಂದೆ ಕಂಕನಾಡಿಯ ಫಾದರ್ ಮುಲ್ಲರ್ ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ಗಾತ್ರದ ಅದೆಷ್ಟೋ ಮರಗಳಿದ್ದವು. ಈ ಮರಗಳು ಹಕ್ಕಿಗಳ ಆವಾಸ ಸ್ಥಾನವಾಗಿದ್ದವಲ್ಲದೆ, ಪರಿಸರ ತಂಪಾಗಿರಲು ಸಹಾಯಕವಾಗಿದ್ದವು. ಆದರೆ ಸ್ಮಾರ್ಟ್ ಸಿಟಿ, ರಸ್ತೆ ಅಭಿವೃದ್ಧಿಗೆ ಈ ಮರಗಳಿಗೆ ಕೊಡಲಿಯೇಟು ಬಿದ್ದವು. ಈ ರೀತಿ ನಗರದಲ್ಲೆಡೆ ಹಲವು ಬೃಹತ್ ಗಾತ್ರದ ಮರಗಳು ಅಭಿವೃದ್ಧಿಗಾಗಿ ಬಲಿಯಾಗಿವೆ.
ಸಾಮಾನ್ಯವಾಗಿ ನಗರದಲ್ಲಿ ಶೇ.33ರಷ್ಟಾದರೂ ಹಸಿರು ಇರಬೇಕು. ಖಾಸಗಿ ಭೂಮಿಗಳೆಲ್ಲ ಸೇರಿದಂತೆ ಮಂಗಳೂರಿನಲ್ಲಿ ಒಟ್ಟು ಹಸಿರು ಹೊದಿಕೆಯ ಪ್ರಮಾಣ ಸುಮಾರು 41.9 ಶೇ. ಇದೆ. ಆದರೆ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್ಗಳ ಪೈಕಿ 50 ವಾರ್ಡ್ ಗಳ ಸಾರ್ವಜನಿಕ ಸ್ಥಳಗಳಲ್ಲಿರುವ ಹಸಿರು ಹೊದಿಕೆಯ ಪ್ರಮಾಣ ಕೇವಲ ಶೇ.6.24 ಎಂಬುದು ಸಸ್ಯಶಾಸ್ತ್ರಜ್ಞೆ ಡಾ.ಸ್ಮಿತಾ ಹೆಗ್ಡೆ ನೇತೃತ್ವದ ತಂಡ 2023ಲ್ಲಿ ಸಿದ್ಧಪಡಿಸಿದ ಮರಗಳ ಲೆಕ್ಕ(ಟ್ರೀ ಕೌಂಟ್) ವರದಿಯಲ್ಲಿ ಬಹಿರಂಗವಾಗಿದೆ.
ಡಾ.ಸ್ಮಿತಾ ಹೆಗ್ಡೆ ನೇತೃತ್ವದ ತಂಡವು ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳ ಸಹಕಾರದಿಂದ ನಗರದಲ್ಲಿರುವ ಮರಗಳನ್ನು ಲೆಕ್ಕ ಹಾಕಿ ಈ ವರದಿ ಸಿದ್ಧಪಡಿಸಿದೆ. ಟ್ರೀ ಕೌಂಟ್ ವೇಳೆ 19,171 ವಿವಿಧ ಜಾತಿಯ ಮರಗಳು ನಗರದಲ್ಲಿರುವುದನ್ನು ತಂಡ ಗುರುತಿಸಿದೆ. ಇವರ ಸರ್ವೇಯ ಅವಧಿಯಲ್ಲಿ ಮನಪಾ ಬಂದರು ವಾರ್ಡ್ ನಲ್ಲಿ ಹಸಿರು ಹೊದಿಕೆ ಪ್ರಮಾಣ ಕೇವಲ ಶೇ.8.72 ಕಂಡುಬಂದಿತ್ತು. ಇನ್ನೂ ಕುದ್ರೋಳಿ ವಾರ್ಡ್ ನಲ್ಲಿ ಶೇ.10.70, ಹೊಯ್ಗೆಬಝಾರ್ ವಾರ್ಡ್ ನಲ್ಲಿ ಶೇ.12.84ರಷ್ಟು ಪ್ರಮಾಣದ ಹಸಿರು ಹೊದಿಕೆ ಇದೆ. ಪದವು ಪೂರ್ವ ವಾರ್ಡ್ ನಲ್ಲಿ ಅತ್ಯಧಿಕ ಅಂದರೆ ಶೇ. 64.81 ಹಸಿರು ಇರುವುದನ್ನು ಅಧ್ಯಯನ ತಂಡ ಗುರುತಿಸಿತ್ತು. ಈ ವರದಿ ಪ್ರಕಟವಾಗಿ ಒಂದು ವರ್ಷವೇ ಕಳೆದಿದ್ದು, ಬಳಿಕ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕೊಡಲಿಯೇಟಿಗೆ ಬಲಿಯಾದ ಮರಗಳ ಸಂಖ್ಯೆಗೆ ಲೆಕ್ಕವೇ ಇಲ್ಲ.
♦ ಮಿತಿಮೀರಿದ ವಾಹನಗಳ ಭರಾಟೆ:
ನಗರಗಳಲ್ಲಿ ಉಂಟಾಗುವ ವಾಯುಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ವಾಹನಗಳಾದ್ದಾಗಿದೆ. ದಿನನಿತ್ಯ ಓಡಾಡುವ ಸಾವಿರಾರು ವಾಹನಗಳು ಅಗಾಧ ಪ್ರಮಾಣದ ಹೊಗೆ ಹೊರಸೂಸುತ್ತದೆ. ಆರ್ಟಿಒ ಮಾಹಿತಿ ಪ್ರಕಾರ ದ.ಕ. ಜಿಲ್ಲೆಯಲ್ಲಿ 2023ರ ಮಾರ್ಚ್ ಅಂತ್ಯಕ್ಕೆ ಒಟ್ಟು 6,76,046 ವಾಹನಗಳು ನೋಂದಣಿಯಾಗಿವೆ. ಅವುಗಳಲ್ಲಿ ದ್ವಿಚಕ್ರ ವಾಹನಗಳದ್ದು ಸಿಂಹಪಾಲು. ಜಿಲ್ಲೆಯಲ್ಲಿ 4,29,180 ದ್ವಿಚಕ್ರ ವಾಹನಗಳಿದ್ದರೆ 1,49,433 ಕಾರು/ಜೀಪ್ಗಳಿವೆ. 30,747 ಆಟೊ ರಿಕ್ಷಾಗಳಿವೆ. 33,188 ಗೂಡ್ಸ್ ವಾಹನಗಳಿವೆ. 7,392 ಖಾಸಗಿ ಬಸ್ ಗಳು ಓಡಾಡುತ್ತಿವೆ ಎಂದು ಆರ್ಟಿಐ ಕಚೇರಿ ಮಾಹಿತಿ ನೀಡಿದೆ. ಇದೇ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ರಸ್ತೆಗಿಳಿದಿದ್ದ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ 5,136ರಷ್ಟಿದ್ದವು. ಈ ವಾಹನಗಳಲ್ಲಿ ಬಹುಪಾಲು ಮಂಗಳೂರು ನಗರದಲ್ಲಿವೆ ಎನ್ನುವುದು ಗಮನಾರ್ಹ.
♦ ಹಳೇ ವಾಹನಗಳ ಕಾರುಬಾರು:
ಜಿಲ್ಲೆಯಲ್ಲಿ ಡೀಸೆಲ್ ಇಂಧನ ಚಾಲಿತ ವಾಹನಗಳು ಬಹಳಷ್ಟಿವೆ. ಇವು ಗಣನೀಯ ಪ್ರಮಾಣದಲ್ಲಿ ಪರಿಸರಕ್ಕೆ ಇಂಗಾಲವನ್ನು ಸೇರಿಸುತ್ತವೆ. ಅದರಲ್ಲೂ 10-15 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳು ಹೊರಸೂಸುವ ಇಂಗಾಲದ ಪ್ರಮಾಣ ಅತ್ಯಧಿಕವಾಗಿದ್ದು, ವಾಯುಮಾಲಿನ್ಯದಲ್ಲಿ ಇವುಗಳ ಪಾತ್ರವು ಗಣನೀಯ.
ಪರಿಹಾರೋಪಾಯಗಳು
ಗಾಳಿಯ ಗುಣಮಟ್ಟ ಹೆಚ್ಚಳಕ್ಕೆ ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ತುರ್ತಾಗಿ ಆಗಬೇಕಿರುವ ಕೆಲವೊಂದು ಪರಿಹಾರೋಪಾಯಗಳು ಈ ಕೆಳಗಿನಂತಿವೆ.
♦ ಸಾರ್ವಜನಿಕ ಸಾರಿಗೆಗೆ ಒತ್ತು:
ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಸ್ ಸಾರಿಗೆಯನ್ನು ಜನಸ್ನೇಹಿಯನ್ನಾಗಿಸಬೇಕು. ಇದು ಫಲ ನೀಡಿದರೆ ನಗರದಲ್ಲಿ ಓಡಾಡುವ ಇತರ ವಾಹನಗಳ ಸಂಖ್ಯೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು.
♦ ಸೈಕಲ್ ಬಳಕೆಗೆ ಪ್ರೋತ್ಸಾಹ:
ನಗರದಲ್ಲಿ ಸಾಮಾನ್ಯ ಕೆಲಸ ಕಾರ್ಯಗಳ ಓಡಾಟಕ್ಕೆ ಸೈಕಲ್ಗಳ ಬಳಕೆ ಕಡ್ಡಾಯಗೊಳಿಸಬೇಕು. ಟ್ರಾಫಿಕ್ ಸಮಸ್ಯೆ, ವಾಹನಗಳ ಭರಾಟೆಯಿಂದ ಹೈರಾಣಾಗುವ ವಾಹನ ಸವಾರರನ್ನು ಆಕರ್ಷಿಸುವ ರೀತಿಯಲ್ಲಿ ಸೈಕಲ್ ಓಡಾಟಕ್ಕೆ ವ್ಯವಸ್ಥೆಯನ್ನೂ ಕಲ್ಪಿಸಬೇಕು. ಈ ಹಿಂದೆ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಗರದಲ್ಲಿ ಪ್ರತ್ಯೇಕ ಸೈಕಲ್ ಟ್ರಾಕ್ ನಿರ್ಮಿಸುವ ಯೋಜನೆ ಹಾಕಿಕೊಂಡಿತ್ತು. 12 ಕಿ.ಮೀ. ಉದ್ದ ಮಾರ್ಗದ ನಕಾಶೆ ಕೂಡಾ ಸಿದ್ಧವಾಗಿತ್ತು. ಆದರೆ ಬಳಿಕ ಅದು ನನೆಗುದಿಗೆ ಬಿತ್ತು. ಈ ಬಗ್ಗೆ ಪಾಲಿಕೆ ಆಡಳಿತವು ಎಚ್ಚೆತ್ತು ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಸೈಕಲ್ ಟ್ರಾಕ್ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು.
♦ ಹಳೇ ವಾಹನಗಳ ಬಳಕೆಗೆ ಮಿತಿ ಹೇರುವುದು:
15 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವ ಯೋಜನೆಗೆ ಕೇಂದ್ರ ಸರಕಾರ ಬಜೆಟ್ ನಲ್ಲಿ ಪ್ರತ್ಯೇಕ ಅನುದಾನವನ್ನೇ ಮೀಸಲಿಟ್ಟಿದೆ. ತೀರಾ ಹಳೆಯ ವಾಹನಗಳು ರಸ್ತೆಗಿಳಿಯದಂತೆ, ಅವುಗಳನ್ನು ವಿಲೇವಾರಿ ಮಾಡಲು ಸರಕಾರ ಹೆಚ್ಚು ಪ್ರೋತ್ಸಾಹ ನೀಡಬೇಕು. ಇದರಿಂದ ನಗರದಲ್ಲಿ ವಾಯು ಮಾಲಿನ್ಯವನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಅದೇ ರೀತಿ ಇಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಅವುಗಳ ಖರೀದಿಗೆ ಸರಕಾರ ಹೆಚ್ಚಿನ ಸಬ್ಸಿಡಿ ನೀಡಬೇಕು.
♦ ಮರ ಕಡಿಯುವ ಪ್ರಮಾಣಕ್ಕಿಂತ ಹೆಚ್ಚು ಗಿಡಗಳನ್ನು ನೆಡುವುದು:
ನಗರದಲ್ಲಿ ಅಭಿವೃದ್ಧ್ಧಿ ಕಾಮಗಾರಿ ವೇಳೆ ತೀರಾ ಅನಿವಾರ್ಯವಾದರೆ ಮಾತ್ರ ಮರಗಳನ್ನು ತೆರವುಗೊಳಿಸಬೇಕು. ಒಂದು ವೇಳೆ ಮರಗಳನ್ನು ಕಡಿಯುವ ಅನಿವಾರ್ಯ ಎದುರಾದರೆ ಆ ಮರಗಳನ್ನು ಬೆಳೆಸಿದ ವರ್ಷಕ್ಕೆ ಅನುಗುಣವಾಗಿ ಹೆಚ್ಚುವರಿ ಗಿಡಗಳನ್ನು ನೆಟ್ಟು ಬೆಳೆಸಬೇಕು. ಮಂಗಳೂರು ಮಹಾನಗರ ಪಾಲಿಕೆ ಸ್ವತಃ ಎಚ್ಚೆತ್ತು ಸಾಧ್ಯವಿರುವ ಪ್ರದೇಶಗಳಲ್ಲಿ ಗಿಡಗಳನ್ನು ಬೆಳೆಸಲು ಕ್ರಮ ಕೈಗೊಳ್ಳಬೇಕು.
ಮನೆಗಳಲ್ಲಿ ಸೌರಶಕ್ತಿಯನ್ನು ಅಳವಡಿಸಿಕೊಳ್ಳಲು ಜನರನ್ನು ಉತ್ತೇಜಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ್ಳಬೇಕು ಮತ್ತು ಇಂಧನದ ಅವಲಂಬನೆಯನ್ನು ಆದಷ್ಟು ಕಡಿಮೆ ಮಾಡಬೇಕು. ತ್ಯಾಜ್ಯ ನಿರ್ವಹಣೆ ಸುಧಾರಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಹೊಗೆ ಉಗುಳುವಿಕೆಗೆ ಕಾರಣವಾಗುವ ತ್ಯಾಜ್ಯ ಸುಡುವಿಕೆಯನ್ನು ತಡೆಗಟ್ಟಬೇಕು. ನಗರ ಯೋಜನೆ ಮತ್ತು ಕಟ್ಟಡ ನಿರ್ಮಾಣದ ವೇಳೆ ಗ್ರೀನ್ ಬಿಲ್ಡಿಂಗ್ ಮಾನದಂಡಗಳ ಪಾಲನೆಯನ್ನು ಕಡ್ಡಾಯಗೊಳಿಸಬೇಕು. ಹೊಸ ಕಟ್ಟಡ ಸಂಕೀರ್ಣಗಳ ನಿರ್ಮಾಣದ ವೇಳೆ ನಿಗದಿತ ಪ್ರಮಾಣದಲ್ಲಿ ಹಸುರೀಕರಣ ಕಡ್ಡಾಯಗೊಳಿಸಬೇಕು. ತಂತ್ರಜ್ಞಾನಗಳನ್ನು ಬಳಸಿ ಕಾರ್ಖಾನೆಗಳು ಹೊರಸೂಸುವ ಹೊಗೆಯ ಪ್ರಮಾಣವನ್ನು ಕಡಿಮೆಗೊಳಿಸಬೇಕು. ಮೊದಲಾದ ಪರಿಸರಪೂರಕ ಕ್ರಮಗಳನ್ನು ಸರಕಾರ ಪರಿಣಾಮಕಾರಿಯಾಗಿ ಕೈಗೊಂಡಲ್ಲಿ ಮಾಲಿನ್ಯ ನಿಯಂತ್ರಣವನ್ನು ಗರಿಷ್ಠ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಜನರು ಕೂಡಾ ಪರಿಸರ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು. ನೆಮ್ಮದಿಯ ನಾಳೆಗಾಗಿ ಇನ್ನಾದರೂ ಎಚ್ಚೆತ್ತುಕೊಳ್ಳೋಣ. ಪರಿಸರ ಸಂರಕ್ಷಣೆ ಮಾಡೋಣ.
ಏನಿದು ಪಿಎಂ 10 ಮತ್ತು ಪಿಎಂ 2.5 ?
ವಾತಾವರಣದಲ್ಲಿ ವಿವಿಧ ಮೂಲಗಳಿಂದ ಉತ್ಪತ್ತಿಯಾಗುವ ಧೂಳಿನ ಕಣಗಳನ್ನು ಅವುಗಳ ಗಾತ್ರದ ಆಧಾರದಲ್ಲಿ ಎರಡು ರೀತಿಯಲ್ಲಿ ವಿಂಗಡಿಸಲಾಗುತ್ತದೆ. ಅವುಗಳಲ್ಲಿ ಪಿಎಂ10 (ಪಾರ್ಟಿಕ್ಯುಲೇಟ್ ಮ್ಯಾಟರ್-10) ಮತ್ತು ಪಿಎಂ 2.5 ಪ್ರಮುಖವಾದವು.
ಗಾಳಿಯಲ್ಲಿರುವ 10 ಮೈಕ್ರೋಮೀಟರ್ ಅಥವಾ ಅದಕ್ಕಿಂತ ಕಡಿಮೆ ವ್ಯಾಸದ ಧೂಳಿನ ಕಣಗಳನ್ನು ‘ಪಿಎಂ-10’ ಎಂದು ಗುರುತಿಸಲಾಗುತ್ತದೆ. ಪಿಎಂ10 ಕಣಗಳು ಗಂಟಲು ಮತ್ತು ಮೂಗಿನ ಮೂಲಕ ನಮ್ಮ ದೇಹವನ್ನು ಸೇರಿ ಶ್ವಾಸಕೋಶವನ್ನು ಪ್ರವೇಶಿಸುವಷ್ಟು ಚಿಕ್ಕದಾಗಿವೆ. ಈ ಕಣಗಳು ಹೃದಯ ಮತ್ತು ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರಬಹುದು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಲ್ಲದು. ಮಾಸ್ಕ್ ಧರಿಸುವುದರಿಂದ ಪಿಎಂ 10 ದೇಹದೊಳಗೆ ಸುಲಭವಾಗಿ ಪ್ರವೇಶಿಸುವುದನ್ನು ತಡೆಯಬಹುದು.
ಅದೇ ರೀತಿ 2.5 ಮೈಕ್ರೊಮೀಟರ್ ಅಥವಾ ಅದಕ್ಕಿಂತ ಕಡಿಮೆ ವ್ಯಾಸದ ಧೂಳಿನ ಕಣಗಳನ್ನು ಪಿಎಂ 2.5 ಎಂದು ಗುರುತಿಸಲಾಗುತ್ತದೆ. ಇದು ಅತಿ ಸೂಕ್ಷ್ಮ ಧೂಳಿನ ಕಣವಾಗಿದ್ದು, ಯಾವುದೇ ರೀತಿಯ ಮಾಸ್ಕ್ ಧರಿಸಿದರೂ ನೇರವಾಗಿ ಶ್ವಾಸಕೋಶ ಸೇರುವಷ್ಟು ಅಪಾಯಕಾರಿಯಾಗಿವೆ. ಇಂತಹ ಕಣಗಳು ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತವೆ. ಅವು ಶ್ವಾಸಕೋಶಗಳಿಗೆ ಆಳವಾಗಿ ಪ್ರವೇಶಿಸಬಲ್ಲದು ಮತ್ತು ರಕ್ತ ಪರಿಚಲನೆಯಲ್ಲೂ ಸೇರಿಕೊಳ್ಳಬಲ್ಲವು. ದೀರ್ಘಕಾಲದವರೆಗೆ ಪಿಎಂ 2.5ಗೆ ಒಡ್ಡಿಕೊಳ್ಳುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಬೀರಬಲ್ಲದು ಎಂದು ವೈದ್ಯಕೀಯ ಅಧ್ಯಯನಗಳು ಎಚ್ಚರಿಸಿವೆ. ಪಿಎಂ 10 ಕಣಗಳು ಪಿಎಂ 2.5 ಕಣಗಳನ್ನೂ ಹೊಂದಿರುತ್ತವೆ ಎಂಬುದು ಗಮನಾರ್ಹ ವಿಚಾರವಾಗಿದೆ.
ಇನ್ನೂ 7-8 ವರ್ಷಗಳು ಕಳೆದರೆ ಹವಾಮಾನ ವೈಪರೀತ್ಯದ ಕಾರಣಕ್ಕೆ ಮಂಗಳೂರು ಸಹಿಸಲಾಗದ ಸ್ಥಿತಿಯನ್ನು ತಲುಪಲಿದೆ. ಸೂಕ್ತ ಡ್ರೈನೇಜ್ ವ್ಯವಸ್ಥೆ, ಅಂತರ್ಜಲ ಮರುಪೂರಣ, ಹಸುರೀಕರಣ ಇದಕ್ಕೆ ಒತ್ತು ನೀಡಿ ಅಭಿವೃದ್ಧಿ ಮಾಡುವುದು ‘ಸ್ಮಾರ್ಟ್ ಸಿಟಿ’ಯ ಪರಿಕಲ್ಪನೆಯಾಗಿದೆ. ಆದರೆ ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಅದ್ಯಾವುದೂ ಆಗುತ್ತಿಲ್ಲ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ 1,800 ಕೋಟಿ ರೂ. ಖರ್ಚು ಮಾಡಿ ಮಂಗಳೂರನ್ನೇ ಹಾಳು ಮಾಡಿದರು. ಇದೆಲ್ಲದರ ಪರಿಣಾಮ ಮಂಗಳೂರಿನಲ್ಲಿ ತಾಪಮಾನ ವಿಪರೀತ ಹೆಚ್ಚಳವಾಗುತ್ತಿದೆ. ಕಳೆದ ವರ್ಷ ಮಂಗಳೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಚಳಿಗಾಲ ಮಾಯವಾಗಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಬೇಸಿಗೆ ಕಾಲ ಆರಂಭವಾಗುತ್ತದೆ. ಕೊನೆಯ ನಾಲ್ಕು ತಿಂಗಳು ಬರಗಾಲ ಅನುಭವಿಸುತ್ತಿದ್ದೇವೆ. ಮಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಹಸುರೀಕರಣ ನಾಶವಾಗುತ್ತಿದೆ. ಇದು ಅಂತರ್ಜಲ ಕುಸಿತ, ತಾಪಮಾನ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಒಂದು ಮರ ಕಡಿದಲ್ಲಿ ಬದಲಿಗೆ 10 ಸಸಿಗಳನ್ನು ನೆಡಲಾಗುವುದು ಎಂಬ ಘೋಷಣೆ ಕಾಗದದಲ್ಲಷ್ಟೇ ಉಳಿದುಕೊಂಡಿದೆ. ಪರಿಸರ ನಾಶ ನಮ್ಮ ಸ್ವಯಂಕೃತ ಅಪರಾಧವಾಗಿದೆ. ಸಕಾಲದಲ್ಲಿ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಮಂಗಳೂರಿನ ಸ್ಥಿತಿ ಭೀಕರವಾಗಲಿದೆ.
-ದಿನೇಶ್ ಹೊಳ್ಳ,
ಪರಿಸರ ತಜ್ಞ
ಮಂಗಳೂರಿನಲ್ಲಿ 2023ರ ನವೆಂಬರ್ನಲ್ಲಿ ಪಿಎಂ-10 ಪ್ರಮಾಣವು ಪ್ರತೀ ಘನ ಮೀಟರ್ಗೆ 181(μg/m3) ಮೈಕ್ರೋಗ್ರಾಮ್ಸ್ ದಾಖಲಾಗಿದೆ. ಅದೇ ವರ್ಷದ ಡಿಸೆಂಬರ್ನಲ್ಲಿ ಪಿಎಂ-2.5 ಪ್ರಮಾಣವು 132 μg/m3 ದಾಖಲಾಗಿದೆ. ಇದು ಇತ್ತೀಚೆಗೆ 24 ಗಂಟೆಗಳಲ್ಲಿ ದಾಖಲಾದ ಅತ್ಯಧಿಕ ಪ್ರಮಾಣ. ಇದೇ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಪಿಎಂ 10 ಪ್ರಮಾಣದ ವಾರ್ಷಿಕ ಸರಾಸರಿಯು 73 μg/m3 ದಾಖಲಾಗಿದೆ. ಪಿಎಂ 2.5 ಪ್ರಮಾಣದ ವಾರ್ಷಿಕ ಸರಾಸರಿಯು 34 μg/m3 ಇದೆ. ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ(ಎಕ್ಯೂಐ) ಹೆಚ್ಚು ಅಂದರೆ 20 ಎಕ್ಯೂಐ ಕಂಡುಬಂದಿದೆ. ಇದು ಕಳೆದ ವರ್ಷದ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕದ್ರಿ ಪ್ರದೇಶದಲ್ಲಿ ದಾಖಲಾಗಿದ್ದು, ಮಂಗಳೂರಿನ ಎಕ್ಯೂಐ ‘ಉತ್ತಮ’ವಾಗಿದೆ.
-ಡಾ.ಲಕ್ಷ್ಮೀಕಾಂತ,
ಪರಿಸರಾಧಿಕಾರಿ, ಮಂಗಳೂರು
ಗಾಳಿಯ ಗುಣಮಟ್ಟ ಸುಧಾರಣೆಗೆ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸಾರಿಗೆಗೆ ಹೆಚ್ಚು ಒತ್ತು ನೀಡಬೇಕು. ನಗರದಲ್ಲಿ ಹಸುರೀಕರಣದ ಹೆಚ್ಚಳಕ್ಕೆ ಮುಂದಾಗಬೇಕು. ಇದರ ಜೊತೆಗೆ ಗಾಳಿಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಭಾರತದ ನ್ಯಾಶನಲ್ ಆ್ಯಂಬಿಯೆಂಟ್ ಏರ್ ಕ್ವಾಲಿಟಿ ಸ್ಟ್ಯಾಂಡರ್ಡ್ಸ್ (ಎನ್ ಎಎಕ್ಯೂಎಸ್) ಮಾರ್ಗಸೂಚಿಯಲ್ಲಿ ಪರಿಷ್ಕರಣೆ ಆಗಬೇಕಿದೆ. ಈಗಿರುವ ಮಾನದಂಡವು ವಿಶ್ವ ಆರೋಗ್ಯ ಸಂಸ್ಥೆಯ ಪರಿಷ್ಕೃತ ಮಾರ್ಗಸೂಚಿಗೆ ಹೋಲಿಸಿದರೆ ತೀರಾ ದುರ್ಬಲವಾಗಿದೆ. ಇದನ್ನು ಪರಿಷ್ಕರಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಬೇಕು.
-ಸೆಲೋಮಿ ಗಾರ್ನಾಯಕ್,
ಕ್ಲೈಮೇಟ್ ಆ್ಯಂಡ್ ಎನರ್ಜಿ ಕಂಪೈನರ್ ಗ್ರೀನ್ ಪೀಸ್ ಇಂಡಿಯಾ