ಬೆಳಗಾವಿ: ನಿರಂತರ ಗೆಲ್ಲುತ್ತಿರುವ ಬಿಜೆಪಿಗೆ ಕಾಂಗ್ರೆಸ್ ಈ ಬಾರಿ ಸೋಲುಣಿಸೀತೇ?
ಸರಣಿ 18
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿನ ಸಾಕ್ಷರತೆ ಪ್ರಮಾಣ ಶೇ.63.85. ಈ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭೆ ಕ್ಷೇತ್ರಗಳಿವೆ.
ಅವೆಂದರೆ, ಅರಭಾವಿ, ಗೋಕಾಕ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮಾಂತರ, ಬೈಲಹೊಂಗಲ, ಸವದತ್ತಿ ಯಲ್ಲಮ್ಮ ಹಾಗೂ ರಾಮದುರ್ಗ.
5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, 3ರಲ್ಲಿ ಬಿಜೆಪಿ ಶಾಸಕರಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು 18 ಲಕ್ಷಕ್ಕೂ ಹೆಚ್ಚು. ಈ ಪೈಕಿ ವೀರಶೈವ-ಲಿಂಗಾಯತ ಮತದಾರರದ್ದೇ ಪ್ರಾಬಲ್ಯ. ಆನಂತರದ ಸ್ಥಾನದಲ್ಲಿ ಮರಾಠರು, ಮುಸ್ಲಿಮರು, ಕುರುಬರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ದೇವಾಂಗ, ಉಪ್ಪಾರ, ಹಣಬರ, ರೆಡ್ಡಿ ಮತ್ತಿತರ ಸಮುದಾಯದವರು ಬರುತ್ತಾರೆ.
ಕಳೆದ ಮೂರು ಚುನಾವಣೆಗಳು ಮತ್ತು ಒಂದು ಉಪಚುನಾವಣೆಯ ಫಲಿತಾಂಶವನ್ನು ನೋಡುವುದಾದರೆ,
2009, 2014 ಮತ್ತು 2019 ಈ ಮೂರೂ ಚುನಾವಣೆಗಳಲ್ಲಿ ಬಿಜೆಪಿಯ ಸುರೇಶ್ ಅಂಗಡಿ ಗೆಲುವು ಸಾಧಿಸಿದ್ದರೆ, 2021ರ ಉಪಚುನಾವಣೆಯಲ್ಲಿ ಬಿಜೆಪಿಯ ಮಂಗಳಾ ಅಂಗಡಿ ಗೆಲುವು ಕಂಡಿದ್ದಾರೆ.
ಹಿಂದಿನ ಚುನಾವಣೆಗಳಲ್ಲಿನ ಮತಗಳ ಹಂಚಿಕೆ ವಿವರ:
2021 ಬಿಜೆಪಿಗೆ ಶೇ.43.07, ಕಾಂಗ್ರೆಸ್ಗೆ 42.56,
ಎಂಇಎಸ್ಗೆ ಶೇ.11.46
2019 ಬಿಜೆಪಿಗೆ ಶೇ.63.22, ಕಾಂಗ್ರೆಸ್ಗೆ ಶೇ. 30.76
2014 ಬಿಜೆಪಿಗೆ ಶೇ.51.53, ಕಾಂಗ್ರೆಸ್ಗೆ ಶೇ. 44.48
2009 ಬಿಜೆಪಿಗೆ ಶೇ.50.85, ಕಾಂಗ್ರೆಸ್ಗೆ ಶೇ. 35.15
ಎರಡು ಉಪಚುನಾವಣೆಗಳೂ ಸೇರಿ 1957ರಿಂದ ನಡೆದಿರುವ 18 ಚುನಾವಣೆಗಳಲ್ಲಿ 11 ಚುನಾವಣೆಗಳನ್ನು ಕಾಂಗ್ರೆಸ್ ಗೆದ್ದಿತ್ತು.ಒಮ್ಮೆ ಮಾತ್ರ ಜನತಾ ದಳ ಗೆದ್ದಿತ್ತು. ಬಿಜೆಪಿ 6 ಬಾರಿ ಜಯ ಸಾಧಿಸಿದೆ.
1957ರಿಂದ 1991ರವರೆಗೂ ಕಾಂಗ್ರೆಸ್ ಇಲ್ಲಿ ಸತತ ಜಯ ಗಳಿಸಿತ್ತು. ಕಾಂಗ್ರೆಸ್ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದ್ದು 1996ರಲ್ಲಿ ಕ್ಷೇತ್ರ ಜನತಾ ದಳದ ಪಾಲಾದಾಗ. ಅದಾದ ಬಳಿಕ ಮತ್ತೆ 1998ರಲ್ಲಿ ಇಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಕಂಡಿತು. ನಂತರದ ಚುನಾವಣೆಯನ್ನು ಕಾಂಗ್ರೆಸ್ ಗೆದ್ದಿತು.ಅದಾದ ಬಳಿಕ ಕಳೆದ 20 ವರ್ಷಗಳಿಂದ ಕಾಂಗ್ರೆಸ್ಗೆ ಗೆಲ್ಲಲಾಗಲಿಲ್ಲ. 2004ರಿಂದಲೂ ಸತತ ಗೆಲುವು ಕಂಡಿರುವುದು ಬಿಜೆಪಿ.
ಕಾಂಗ್ರೆಸ್ನ ಷಣ್ಮುಖಪ್ಪ ಸಿದ್ನಾಳ ಸತತ 4 ಬಾರಿ ಮತ್ತು ಬಿಜೆಪಿಯ ಸುರೇಶ್ ಅಂಗಡಿ ಸತತ 4 ಬಾರಿ ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ. ಅದರ ಹೊರತಾಗಿ ಕಾಂಗ್ರೆಸ್ನ ಬಲವಂತರಾವ್ ದಾತಾರ್ ಸತತ 2 ಬಾರಿ ಗೆಲುವು ಕಂಡಿದ್ದರು.
1999ರಲ್ಲಿ ಕಾಂಗ್ರೆಸ್ನಿಂದ ಗೆದ್ದ ಅಮರಸಿಂಹ ಪಾಟೀಲ್ ಕುರುಬ ಸಮುದಾಯದವರಾಗಿದ್ದು, 1971ರ ನಂತರ ಸತತ 8 ಚುನಾವಣೆಗಳಲ್ಲಿನ ಲಿಂಗಾಯತ ಅಭ್ಯರ್ಥಿಗಳ ಗೆಲುವಿನ ಬಳಿಕ ಜಯ ಸಾಧಿಸಿದ ಮೊದಲ ಲಿಂಗಾಯತೇತರ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
► ಪ್ರಬಲ ಸಮುದಾಯಕ್ಕೆ ಮಣೆ?
ಈವರೆಗಿನ ಚುನಾವಣೆಗಳಲ್ಲಿ ಅತಿ ಹೆಚ್ಚು ಬಾರಿ ಗೆದ್ದವರು ವೀರಶೈವ-ಲಿಂಗಾಯತ ಅಭ್ಯರ್ಥಿಗಳು. ರಾಜಕೀಯ ಪಕ್ಷಗಳು ಕೂಡ ಇದೇ ಲೆಕ್ಕಾಚಾರ ಇಟ್ಟುಕೊಂಡೇ ಟಿಕೆಟ್ ಕೊಡುತ್ತವೆ.ಇದರ ನಡುವೆಯೂ ಬ್ರಾಹ್ಮಣ, ಮುಸ್ಲಿಮ್ ಮತ್ತು ಕುರುಬ ಸಮುದಾಯದ ಅಭ್ಯರ್ಥಿಗಳು ಗೆಲುವು ಕಂಡಿರುವುದಿದೆ. ಈ ಬಾರಿಯೂ ಇದೇ ಜಾತಿ ಲೆಕ್ಕಾಚಾರವನ್ನು ಮುಂದಿಟ್ಟುಕೊಂಡೇ ಕಸರತ್ತು ನಡೆಯಲಿದೆ.
ಜಿಲ್ಲೆಯ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಲಿಂಗಾಯತರು. ಇನ್ನೊಂದರಲ್ಲಿ ಕುರುಬ ಸಮುದಾಯದವರಿಗೆ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತಿರುವುದು ಈಗಾಗಲೇ ಸ್ಪಷ್ಟವಾಗಿದೆ.
ದೊಡ್ಡ ಸಮುದಾಯಗಳಿಗೆ ಗಾಳ ಹಾಕಿ ಎರಡೂ ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್, ಬೆಳಗಾವಿ ಕ್ಷೇತ್ರವನ್ನು 20 ವರ್ಷಗಳ ನಂತರ ಮತ್ತೆ ವಶಕ್ಕೆ ತೆಗೆದುಕೊಳ್ಳುವ ಹಠದಲ್ಲಿದೆ. ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ಗೆಲ್ಲಬೇಕೆಂದು ಹೈಕಮಾಂಡ್ ಒತ್ತಡವೂ ಇದೆ.
ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮೊದಲಾದ ಘಟಾನುಘಟಿ ನಾಯಕರು ಕಾಂಗ್ರೆಸ್ನಲ್ಲಿದ್ದು, ಬೆಳಗಾವಿ ಜಿಲ್ಲೆಯ ರಾಜಕಾರಣದ ಮೇಲೆ ಪ್ರಬಲ ಹಿಡಿತ ಹೊಂದಿದವರಾಗಿದ್ದಾರೆ. ಹಾಗಾಗಿ ಈ ಚುನಾವಣೆ ಅವರಿಗೆ ಸವಾಲಿನದ್ದೂ ಆಗಿದೆ.
► ಯಾರಿಗೆ ಸಿಗಲಿದೆ ಟಿಕೆಟ್?
ಟಿಕೆಟ್ಗಾಗಿ ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ದೊಡ್ಡ ದಂಡೇ ಇದೆ. ಈಗಾಗಲೇ ಕುರುಬ ಸಮುದಾಯದಿಂದ ಒಮ್ಮೆ ಗೆದ್ದಿರುವ ಅಮರಸಿಂಹ ಪಾಟೀಲ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್. ಸಾಧುನವರ ಅವರ ಪುತ್ರ ಕಿರಣ್ ಸಾಧುನವರ ಕೂಡ ಮತ್ತೊಬ್ಬ ಪ್ರಬಲ ಆಕಾಂಕ್ಷಿ.
ಜಿಲ್ಲೆಯಲ್ಲಿ ಕುರುಬ ಸಮುದಾಯದವರು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಈ ಬಾರಿ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬುದು ಕುರುಬರ ಬೇಡಿಕೆಯಾಗಿದೆ.
ಕಾಂಗ್ರೆಸ್ ಕೂಡ ಎರಡೂ ಪ್ರಬಲ ಸಮುದಾಯಗಳ ನಡುವೆ ಪರಸ್ಪರ ಸಹಕಾರ ಸಾಧ್ಯವಾಗುವಂತೆ ಮಾಡಿ ಗೆಲುವು ಸಾಧಿಸಲು ಈ ಸಮೀಕರಣವನ್ನೇ ಅನುಸರಿಸುವ ಸಾಧ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಯೋಚಿಸುವಾಗ ಕುರುಬ ಸಮುದಾಯದ ಪ್ರಬಲ ಅಭ್ಯರ್ಥಿಯಾಗಿರುವ ಅಮರಸಿಂಹ ಪಾಟೀಲರಿಗೇ ಆದ್ಯತೆ ನೀಡಬಹುದು ಎನ್ನಲಾಗುತ್ತಿದೆ. ಅಮರಸಿಂಹ ಪಾಟೀಲರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆಪ್ತರೇ ಆಗಿರುವುದು ಕೂಡ ಗಮನಿಸಬೇಕಿರುವ ಅಂಶ.
ಆದರೆ ಚಿಕ್ಕೋಡಿಯಲ್ಲಿ ಲಕ್ಷ್ಮಣರಾವ್ ಚಿಂಗಳೆ ಕುರುಬ ಸಮುದಾಯದ ಪ್ರಬಲ ನಾಯಕರಾಗಿದ್ದು, ಅವರಿಗೆ ಅಲ್ಲಿ ಟಿಕೆಟ್ ನೀಡಿದರೆ ಇಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ತಪ್ಪಲಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕೂಡ ಆಕಾಂಕ್ಷಿಯಾಗಿರುವುದರಿಂದ ರಾಜಕೀಯ ಸಮೀಕರಣಗಳು ಹೇಗೆ ತಿರುವು ಪಡೆಯಲಿವೆ ಎಂಬುದು ಕುತೂಹಲ ಕೆರಳಿಸಿದೆ.
ಇನ್ನು ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಗೆ ಭಾರೀ ಪೈಪೋಟಿ ನೀಡಿ, ಅಲ್ಪಮತಗಳ ಅಂತರದಿಂದ ಸೋತಿದ್ದ ಸತೀಶ್ ಜಾರಕಿಹೊಳಿ ಸ್ಪರ್ಧಿಸಬಹುದು ಎಂಬ ಮಾತುಗಳು ಕೆಲ ತಿಂಗಳುಗಳ ಹಿಂದೆ ಇದ್ದವು. ಈಗ ಅವರಿಗೆ ಅಂಥ ಇಚ್ಛೆ ಇದ್ದಂತಿಲ್ಲ. ಸಚಿವ ಹುದ್ದೆ ತ್ಯಜಿಸಿ ಮತ್ತೊಂದು ಚುನಾವಣೆ ಎದುರಿಸುವ ಉದ್ದೇಶ ಜಾರಿಕಿಹೊಳಿಯವರಿಗಾಗಲೀ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗಾಗಲೀ ಇಲ್ಲ.
ಜಾರಕಿಹೊಳಿಗೆ ಪುತ್ರನನ್ನು ಕಣಕ್ಕಿಳಿಸುವ ಇರಾದೆ ಇದೆ ಎಂದೂ ಹೇಳಲಾಗುತ್ತಿದೆ.
► ಬಿಜೆಪಿಯಲ್ಲಿ ಕಚ್ಚಾಟ?
ಇನ್ನು ಬಿಜೆಪಿಯಲ್ಲಿ ಗುಂಪುಗಾರಿಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಲೋಕಸಭಾ ಟಿಕೆಟ್ಗಾಗಿ ನಾಯಕರೇ ಪೈಪೋಟಿಗೆ ಬಿದ್ದಿರುವ ಸುದ್ದಿಯೂ ಇದೆ.ಒಂದೇ ಬಣದಲ್ಲಿ ಗುರುತಿಸಿಕೊಂಡಿದ್ದವರು ಟಿಕೆಟ್ ವಿಚಾರದಲ್ಲಿ ದಿಲ್ಲಿ ಮಟ್ಟದಲ್ಲಿ ಈಗಗಾಲೇ ಲಾಬಿ ಶುರು ಮಾಡಿರುವ ಮಾಹಿತಿಗಳಿವೆ.
ಹಾಲಿ ಸಂಸದೆ ಮಂಗಳಾ ಅಂಗಡಿಯವರಿಗೆ ಮತ್ತೊಮ್ಮೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದ್ದರೂ, ಅವರು ಈ ಬಾರಿ ಸ್ಪರ್ಧೆ ಮಾಡುತ್ತಿಲ್ಲ ಎಂಬ ಮಾತುಗಳೂ ಇವೆ. ಆದರೆ ಬಹಿರಂಗವಾಗಿ ಅವರು ಹಾಗೇನೂ ಹೇಳಿಲ್ಲ ಮತ್ತು ತಾನು ಸ್ಪರ್ಧೆಯಲ್ಲಿರುವ ಸುಳಿವನ್ನೇ ಕೊಟ್ಟಿದ್ಧಾರೆ. ಪುತ್ರಿಯರಲ್ಲಿ ಒಬ್ಬರಿಗೆ ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.
ಈ ನಡುವೆಯೇ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಹಾಂತೇಶ್ ಕವಟಗಿಮಠ, ಅನಿಲ್ ಬೆನಕೆ ಸೇರಿದಂತೆ ಹಲವರು ಕೂಡ ಟಿಕೆಟ್ ಬಯಸಿದ್ದಾರೆ. ಮಂಗಳಾ ಅಂಗಡಿ ಸೇರಿದಂತೆ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ.
ಅಂತೂ ಬಿಜೆಪಿಗೆ 20 ವರ್ಷಗಳಿಂದ ಗೆದ್ದುಕೊಂಡು ಬಂದಿರುವ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದ್ದರೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಮತ್ತು ಬೆಳಗಾವಿಯಲ್ಲಿ ಘಟಾನುಘಟಿ ನಾಯಕರಿರುವ ಕಾಂಗ್ರೆಸ್‌ಗೆ ಈ ಸಲ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ.