ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಉದ್ಘಾಟನೆಯಾಗದ ಬೆಳಗುಂಬ ಹಾಸ್ಟೆಲ್
ತುಮಕೂರು, ನ.19: ಜಿಲ್ಲೆಯ ಬೆಳಗುಂಬ ಪಂಚಾಯತ್ ವ್ಯಾಪ್ತಿಯಲ್ಲಿ 2013-14ನೇ ಸಾಲಿನ ಎಸ್.ಸಿ.ಪಿ, ಟಿ.ಎಸ್.ಪಿ. ಯೋಜನೆಯಡಿಯಲ್ಲಿ ಅಂದಾಜು 95 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವಿದ್ಯಾರ್ಥಿ ನಿಲಯವು ಹಲವು ವರ್ಷಗಳು ಕಳೆದರೂ ಇದಕ್ಕೆ ಉದ್ಘಾಟನೆ ಭಾಗ್ಯ ಸಿಗದೇ ಪಾಳು ಬೀಳುವಂತಹ ಸ್ಥಿತಿಗೆ ತಲುಪಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹತ್ತು ತಾಲೂಕುಗಳನ್ನು ಹೊಂದಿರುವ ತುಮಕೂರು ಜಿಲ್ಲೆಯ ಜಿಲ್ಲಾ ಕೇಂದ್ರವಾದ ತುಮಕೂರು ನಗರಕ್ಕೆ ವರ್ಷದಿಂದ ವರ್ಷಕ್ಕೆ ವಿದ್ಯಾಭ್ಯಾಸಕ್ಕಾಗಿ ತಾಲೂಕುಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಈ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯ ಹರಿಜನ, ಗಿರಿಜನ ಉಪಯೋಜನೆ ಅಡಿಯಲ್ಲಿ ಸುಮಾರು 95 ಲಕ್ಷ ರೂ. ವೆಚ್ಚದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣಗೊಂಡಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯವೋ, ಇಲ್ಲ ಅಧಿಕಾರಿಗಳ ಅಸಡ್ಡೆಯೋ ನಿರ್ಮಾಣಗೊಂಡು 2-3 ವರ್ಷ ಕಳೆದರೂ ಹಾಸ್ಟೆಲ್ ಉದ್ಘಾಟನೆಯಾಗಿಲ್ಲ.
ಕಟ್ಟಡ ನಿರ್ಮಾಣದ ಉದ್ದೇಶ ಈಡೇರಿದ್ದರೆ, ಹತ್ತಾರು ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸಬೇಕಿದ್ದ ಕಟ್ಟಡ ಈಗ ಕಟ್ಟಡದ ಸುತ್ತಮುತ್ತ ಹಾಗೂ ಒಳಭಾಗದಲ್ಲಿ ಗಿಡಗೆಂಟೆಗಳು ಬೆಳೆದು ಕಾಲಿಡುವುದಕ್ಕೂ ಹೆದರುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ ಹಾವು, ಹೆಗ್ಗಣಗಳ ವಾಸಸ್ಥಾನವಾಗಿ ಮಾರ್ಪಾಡಾಗಿದೆ.ಜಿಲ್ಲೆಯ ಜನಪ್ರತಿನಿಧಿಗಳಿಗೆ ಕಟ್ಟಡ ಕಟ್ಟುವಾಗ ಇದ್ದ ಆಸಕ್ತಿ, ಅದನ್ನು ಲೋಕಾರ್ಪಣೆಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವವರೆಗೂ ಇರುವುದಿಲ್ಲ ಎಂಬುದಕ್ಕೆ ಈ ಕಟ್ಟಡವೇ ಸಾಕ್ಷಿಯಾಗಿದೆ.
ಬೆಳಗುಂಬ ಗ್ರಾಮ ನಗರದಿಂದ ಸುಮಾರು 6 ಕಿ.ಮಿ.ದೂರದಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಓಡಾಡಲು ತೊಂದರೆ ಹಾಗಾಗಿ ಕಟ್ಟಡ ಇದುವರೆಗೂ ಉದ್ಘಾಟನೆಯಾಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ.ಆದರೆ ಈ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಚೆನ್ನಾಗಿದೆ. ನಗರ ಸಾರಿಗೆ ಬಸ್ ಪ್ರತಿ ಅರ್ಧಗಂಟೆಗೆ ಒಮ್ಮೆ ಬಂದು ಹೋಗುತ್ತವೆ. ಅಲ್ಲದೆ ಉರ್ಡಿಗೆರೆ, ದೊಡ್ಡಬಳ್ಳಾಪುರ, ಕೋಲಾರಕ್ಕೆ ಹೋಗುವ ಬಸ್‌ಗಳು ಇದೇ ಮಾರ್ಗವಾಗಿ ಚಲಿಸುವುದರಿಂದ ವಿದ್ಯಾರ್ಥಿಗಳ ಸಕಾಲಕ್ಕೆ ಶಾಲಾ, ಕಾಲೇಜಿಗೆ ಹೋಗಲು ಯಾವುದೇ ಅಡ್ಡಿಯಾಗದು ಎಂಬುದು ಸ್ಥಳೀಯರ ಸಮಜಾಯಿಸಿಯಾಗಿದೆ.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರಿಗೆ ಸರಕಾರ ಸಾಕಷ್ಟು ಸವಲತ್ತು ಕಲ್ಪಿಸಿದೆ ಎಂದು ಅಧಿಕಾರಿಗಳು ಅಂಕಿ ಅಂಶ ಬಿಡುಗಡೆ ಮಾಡುತ್ತಾರೆ.ಆದರೆ ವಾಸ್ತವದಲ್ಲಿ ಸವಲತ್ತುಗಳೇ ಸಿಗುವುದಿಲ್ಲ ಎಂಬುದಕ್ಕೆ ಈ ಕಟ್ಟಡವೇ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.