ಸಹಕಾರ ಮಾರಾಟ ಮಹಾಮಂಡಳ ಖಾತೆಗಳ ನಡುವೆ ರೂ. 19.42 ಕೋಟಿಯಷ್ಟು ವ್ಯತ್ಯಾಸ
►ದಾಸ್ತಾನಿನಲ್ಲಿ 9,469 ಮೆಟ್ರಿಕ್ ಟನ್ನಷ್ಟು ಕೊರತೆ ►ಲೆಕ್ಕ ಪರಿಶೋಧನಾ ವರದಿ
PC: PTI
ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮುಖ್ಯ ಕಚೇರಿಯ ಖಾತೆ ಮತ್ತು ಶಾಖೆಗಳ ಖಾತೆಗಳ ನಡುವೆ 19.42 ಕೋಟಿ ರೂ.ಯಷ್ಟು ವ್ಯತ್ಯಾಸ ಕಂಡು ಬಂದಿದೆ. ಅದೇ ರೀತಿ ಮಂಡಳವು ಹೊಂದಿರುವ ಗೋದಾಮು ಮತ್ತು ಶಾಖೆಗಳಲ್ಲಿ 19.06 ಕೋಟಿ ರೂ.ಯಷ್ಟು ಮೌಲ್ಯದ 9,469 ಮೆಟ್ರಿಕ್ ಟನ್ನಷ್ಟು ದಾಸ್ತಾನಿನಲ್ಲಿ ಕೊರತೆ ಇರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಕರ್ನಾಟಕ ರಾಜ್ಯ ಕೋ-ಆಪರೇಟೀವ್ ಸೊಸೈಟಿ ಮಹಾಮಂಡಲದಲ್ಲಿ 2023ರ ಅಕ್ಟೋಬರ್ವರೆಗೆ ನಡೆದಿದೆ ಎನ್ನಲಾಗಿರುವ ಒಟ್ಟು 19.34 ಕೋಟಿ ರೂ. ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿರುವ ಬೆನ್ನಲ್ಲೇ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ 2022-23ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯೂ ಮುನ್ನೆಲೆಗೆ ಬಂದಿದೆ.
ಲೆಕ್ಕ ಪರಿಶೋಧನಾ ವರದಿಯ ಪ್ರತಿಯು "the-file.in" ಗೆ ಲಭ್ಯವಾಗಿದೆ. ವ್ಯಾಪಾರ ಸಂದಾಯಗಳು (ಸಂಡ್ರಿ ಕ್ರೆಡಿಟಾರ್ಸ್)ನಲ್ಲಿ ಮಹಾ ಮಂಡಳವು ನಡೆಸುವ ವಿವಿಧ ರೀತಿಯ ವ್ಯಾಪಾರ ವ್ಯವಹಾರಗಳ ಸಲುವಾಗಿ 140.00 ಕೋಟಿಯಷ್ಟು ಮೊತ್ತಕ್ಕೆ ಖಾತೆಗಳಲ್ಲಿ ಸರಿಯಾದ ರೀತಿಯಲ್ಲಿ ಲೆಕ್ಕಾಚಾರವೇ ಆಗಿಲ್ಲವೆಂಬುದು ಲೆಕ್ಕ ಪರಿಶೋಧನಾ ವರದಿಯಿಂದ ಗೊತ್ತಾಗಿದೆ.
ಅದೇ ರೀತಿ ಮಹಾಮಂಡಳದ ಹಣಕಾಸು ಲೆಕ್ಕಗಳಿಗೂ ಅಪೆಕ್ಸ್ ಬ್ಯಾಂಕ್ನಲ್ಲಿನ ಬಾಕಿ ಮೊತ್ತದ ದೃಢೀಕರಣಕ್ಕೆ ತಾಳೆ ಆಗುತ್ತಿಲ್ಲ. ಮಹಾಮಂಡಳವು ಹೊರಗಿನಿಂದ ಸಾಲ ಪಡೆಯಲು ಪ್ರತ್ಯೇಕವಾದ ಉಪ ನಿಯಮಗಳನ್ನು ರಚಿಸಿಕೊಂಡಿಲ್ಲ. 2023ರ ಮಾರ್ಚ್ 31ರ ಅಂತ್ಯಕ್ಕೆ ಎನ್ಸಿಡಿಸಿ ಸಂಸ್ಥೆಗೆ 47,42,087 ರೂ.ಗಳನ್ನು ಪಾವತಿಸಲು ಬಾಕಿ ಇರಿಸಿಕೊಂಡಿದೆ. ಅಲ್ಲದೇ ಎನ್ಸಿಡಿಸಿಯಿಂದ ಪಡೆದಿರುವ ಸಾಲಕ್ಕೆ ದೃಢೀಕರಣ ಲಭ್ಯವಿಲ್ಲ ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ವಿವರಿಸಲಾಗಿದೆ.
ಮಹಾಮಂಡಳವು ಠೇವಣಿ ಸಂಗ್ರಹಿಸಲು ಪ್ರತ್ಯೇಕವಾ ಉಪ ನಿಯಮಗಳನ್ನು ರಚಿಸಿಕೊಂಡಿಲ್ಲ. ಕೆಲವು ಠೇವಣಿಗಳಲ್ಲಿನ ಬಾಕಿ ಮೊತ್ತಗಳು ಋಣಾತ್ಮಕವಾಗಿವೆ. ಕೃಷಿ ಮಾರಾಟ ಇಲಾಖೆಗೆ 5,13,04,15,779 ರು. ಪಾವತಿಸಲು ಬಾಕಿ ಇರುವುದು ವರದಿಯಿಂದ ಗೊತ್ತಾಗಿದೆ.
ವ್ಯಾಪಾರ ಸಂದಾಯಗಳು (ಸಂಡ್ರಿ ಕ್ರೆಡಿಟಾರ್ಸ್)ನಲ್ಲಿ ಮಹಾ ಮಂಡಳವು ನಡೆಸುವ ವಿವಿಧ ರೀತಿಯ ವ್ಯಾಪಾರ ವ್ಯವಹಾರಗಳ ಸಲುವಾಗಿ 140.00 ಕೋಟಿಯಷ್ಟು ಮೊತ್ತಕ್ಕೆ ಖಾತೆಗಳಲ್ಲಿ ಸರಿಯಾದ ರೀತಿಯಲ್ಲಿ ಲೆಕ್ಕಾಚಾರ ಆಗಿಲ್ಲ.
ಇದಕ್ಕೆ ಸಂಬಂಧಪಟ್ಟ ದೃಢೀಕರಣ ಪಡೆದು ತಾಳೆ ಮಾಡಬೇಕು. ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು ಎಂದು ಸೂಚಿಸಿದೆ. ಮಹಾಮಂಡಳದ ಹಣಕಾಸು ತಃಖ್ತೆಗಳಲ್ಲಿ ಅಪೆಕ್ಸ್ ಬ್ಯಾಂಕ್ಗಳ ಬಾಕಿ ಮೊತ್ತವು ದೃಢೀಕರಣಕ್ಕೆ ತಾಳೆ ಇರುವುದಿಲ್ಲ. ಸಮನ್ವಯ ಪಟ್ಟಿ ತಯಾರಿಸಿದ ನಂತರ ಸಹ ಅಪೆಕ್ಸ್ ಬ್ಯಾಂಕ್ಗಳ ತಾಳೆ ಆಗದೇ ಇರುವುದನ್ನು ಲೆಕ್ಕ ಪರಿಶೋಧನಾ ವೇಳೆಯಲ್ಲಿ ಗಮನಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಸಿಬ್ಬಂದಿ ಜವಾಬ್ದಾರರರು ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ವಿವರಿಸಲಾಗಿದೆ.
ಮಹಾಮಂಡಳದಲ್ಲಿ ಕೆಲವು ನಿಷ್ಕ್ರೀಯ ಬ್ಯಾಂಕ್ ಖಾತೆಗಳು (ಸ್ಥಗಿತವಾದ ಬ್ಯಾಂಕ್ ಖಾತೆಗ) 2023ರ ಮಾರ್ಚ್ 31ರ ಅಂತ್ಯಕ್ಕೆ 14,51,120 ರೂ. ಇದೆ. ಕೆಲವು ವರ್ಷಗಳಿಂದ ಯಾವುದೇ ವ್ಯವಹಾರಗಳು ಈ ಖಾತೆಗಳಲ್ಲಿ ಕಂಡುಬಂದಿರುವುದಿಲ್ಲ. ಹಾಗೂ ಇದಕ್ಕೆ ಸಂಬಂಧಪಟ್ಟ ಯಾವುದೇ ದೃಢೀಕರಣವನ್ನೂ ಮಹಾಮಂಡಳವು ಪಡೆದಿಲ್ಲ.
ಸ್ಥಿರಾಸ್ತಿ ಚರಾಸ್ತಿ ರಿಜಿಸ್ಟ್ರೇಷನ್ ನಿರ್ವಹಣೆ ಮಾಡಿಲ್ಲ. ಮಂಡಳದ ಕೆಲವು ಶಾಖಾ ವ್ಯವಸ್ಥಾಪಕರು ದಾಸ್ತಾನು ಪರಿಶೀಲನೆಯನ್ನು ನಿಗದಿತ ಸಮಯದಲ್ಲಿ ಮಾಡಿಲ್ಲ. ವರದಿಯನ್ನೂ ಸಹ ನಿಗದಿತ ಸಮಯಕ್ಕೆ ನೀಡಿಲ್ಲ. ಖರೀದಿ ಬೆಲೆಯನ್ನು ಆಧರಿಸಿ ದಾಸ್ತಾನು ಮೌಲ್ಯವನ್ನು ನಿರ್ಧರಿಸಿದ್ದಾರೆ.
ಆಂತರಿಕ ಲೆಕ್ಕ ಪರಿಶೋಧನಾ ಸಿಬ್ಬಂದಿ ದಾಸ್ತಾನು ಪರಿಶೀಲನೆಯನ್ನು ನಡೆಸಿ ನೀಡಿರುವ ವರದಿಗಳಲ್ಲಿ ದಾಸ್ತಾನು ಕೊರತೆ ಕಂಡು ಬಂದಿದೆ. ಲೆಕ್ಕ ಪರಿಶೋಧನೆಗೆ ಒದಗಿಸಿರುವ ಮಾಹಿತಿ ಹಾಗೂ ದಾಖಲೆಗಳ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಹಲವು ವರ್ಷಗಳಿಂದಲೂ ಮಂಡಳದಲ್ಲಿ ಹಣ ದುರುಪಯೋಗ ನಡೆಯುತ್ತಿದೆ. ಮಾರಾಟ ಕೇಂದ್ರಗಳಲ್ಲಿ ಕೇಂದ್ರ ಕಚೇರಿಯು ಅನುಮೋದಿಸಿದ ಮೊತ್ತಗಳಿಗಿಂತ ಕೆಲವು ವೆಚ್ಚಗಳನ್ನು ಅಧಿಕವಾಗಿ ಮಾಡಿದೆ. ಅಧಿಕ ಮೊತ್ತಗಳಿಗೆ ಕೇಂದ್ರ ಕಚೇರಿಯಿಂದ ಅನುಮೋದನೆ ಪಡೆದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಮುಖ್ಯ ಕಚೇರಿಯ ಖಾತೆ ಮತ್ತು ಶಾಖೆಗಳ ಖಾತೆಗಳ ನಡುವೆ 19.42 ಕೋಟಿ ರೂ.ಯಷ್ಟು ವ್ಯತ್ಯಾಸ ಕಂಡು ಬಂದಿದೆ. ಶಾಖೆಗಳು ಮತ್ತು ಪ್ರಧಾನ ಕಚೇರಿಯ ಏಕೀಕೃತ ಹಣಕಾಸು ಪಟ್ಟಿಯನ್ನು ತಯಾರಿಸುವಾಗ ಶಾಖೆಯ ಖಾತೆಗಳಲ್ಲಿ ಮುಖ್ಯ ಕಚೇರಿಯ ಮೊತ್ತ, ಮುಖ್ಯ ಕಚೇರಿಯ ಖಾತೆಗಳಲ್ಲಿನ ಶಾಖೆಗಳ ಮೊತ್ತವು ಶೂನ್ಯವಾಗಿರಬೇಕು.
ಆದರೆ ಮುಖ್ಯ ಕಚೇರಿ ಮತ್ತು ಶಾಖೆಗಳ ಖಾತೆಗಳ ನಡುವೆ 19,42,66,374 ರೂ.ಗಳನ್ನು ಬ್ಯಾಲೆನ್ಸ್ ಶೀಟ್ನಲ್ಲಿ ಸ್ವತ್ತು ಎಂದು ವರ್ಗೀಕರಿಸಲಾಗಿದೆ. ಈ ಖಾತೆಗಳಲ್ಲಿನ ವ್ಯತ್ಯಾಸಗಳು ಹಲವು ವರ್ಷಗಳಿಂದಲೂ ಮುಂದುವರಿದಿವೆ. ಮಹಾಮಂಡಳದ ಸದಸ್ಯರು ಸರಿಯಾಗಿ ಸಾಲ ಮತ್ತು ಮುಂಗಡವನ್ನು ಮರು ಪಾವತಿಸುತ್ತಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.
ನೋಡಲ್ ಏಜೆನ್ಸಿ
ಮಹಾಮಂಡಳವು ರಸಗೊಬ್ಬರ, ಕ್ರಿಮಿನಾಶಕಗಳು ಸ್ವಂತ ಹಾಗೂ ಕಾಪು ದಾಸ್ತಾನು ಯೋಜನೆಯಡಿಯಲ್ಲಿ ಸಂಗ್ರಹಿಸಿ ವಿತರಿಸುತ್ತಿದೆ. ಕನಿಷ್ಠ ಬೆಂಬಲ ಯೋಜನೆ ಅಡಿಯಲ್ಲಿ ರಾಗಿ, ಭತ್ತ, ಬಿಳಿ ಜೋಳ ರೈತರಿಂದ ಖರೀದಿಸಲಿದೆ. ಕೇಂದ್ರ ಸರಕಾರದ ಪರವಾಗಿ ಕನಿಷ್ಠ ಬೆಂಬಲ ಯೋಜನೆಯಡಿಯಲ್ಲಿ ಮತ್ತು ಬೆಲೆ ಸ್ಥಿರೀಕರಣ ಯೋಜನೆಯಡಿಯಲ್ಲಿ ತೊಗರಿ, ಕಡಲೆ, ಉದ್ದು, ಹೆಸರುಕಾಳು, ಸೋಯಾ ಮತ್ತು ಒಣ ಕೊಬ್ಬರಿ ಖರೀದಿಸುವ ನೋಡಲ್ ಏಜೆನ್ಸಿಯಾಗಿದೆ.
ಬೆಳಗಾವಿ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿನ ಗೋದಾಮುಗಳಲ್ಲಿ ದಾಸ್ತಾನಿನಲ್ಲಿ ಕೊರತೆ ಕಂಡು ಬಂದಿದೆ. ಬೆಳಗಾವಿ ವಿಭಾಗದ ವಿಜಯಪುರದಲ್ಲಿ 40 ಮೆಟ್ರಿಕ್ ಟನ್, ಮುಧೋಳದಲ್ಲಿ 86.645 ಮೆಟ್ರಿಕ್ ಟನ್, ನರಗುಂದದಲ್ಲಿ 502 ಮೆಟ್ರಿಕ್ ಟನ್, ಬಾಗಲಕೋಟೆಯಲ್ಲಿ 534.395 ಮೆಟ್ರಿಕ್ ಟನ್, ಹಾವೇರಿಯಲ್ಲಿ 568 ಮೆಟ್ರಿಕ್ ಟನ್, ಗದಗ್ನಲ್ಲಿ 238.75ಮೆಟ್ರಿಕ್ ಟನ್, ಶಿರಸಿಯಲ್ಲಿ 64.95ಮೆಟ್ರಿಕ್ ಟನ್, ಅಥಣಿಯಲ್ಲಿ 27.45 ಮೆಟ್ರಿಕ್ ಟನ್ನಷ್ಟು ದಾಸ್ತಾನಿನಲ್ಲಿ ವ್ಯತ್ಯಾಸವಿದೆ.
ಮೈಸೂರು ವಿಭಾಗದ ಚಿಕ್ಕಮಗಳೂರು, ಕಡೂರಿನಲ್ಲಿ 421.5 ಮೆಟ್ರಿಕ್ ಟನ್, ಕುಶಾಲನಗರದಲ್ಲಿ 76 ಮೆಟ್ರಿಕ್ ಟನ್, ಮದ್ದೂರಿನಲ್ಲಿ 45,646, ಮಂಡ್ಯದಲ್ಲಿ 337.935 ಮೆಟ್ರಿಕ್ ಟನ್, ವ್ಯತ್ಯಾಸವಿದೆ.
ಕಲುಬುರಗಿ ವಿಭಾಗದ ಸಿಂಧನೂರಿನಲ್ಲಿ 3,938.15 ಮೆಟ್ರಿಕ್ ಟನ್, ಕೊಪ್ಪಳದಲ್ಲಿ 6.65 ಮೆಟ್ರಿಕ್ ಟನ್, ಬೀದರ್ನಲ್ಲಿ 293.08 ಮೆಟ್ರಿಕ್ ಟನ್, ಕಲುಬುರಗಿಯಲ್ಲಿ 100.38 ಮೆಟ್ರಿಕ್ ಟನ್, ಶಹಾಪುರದಲ್ಲಿ 664.17 ಮೆಟ್ರಿಕ್ ಟನ್, ಗಂಗಾವತಿಯಲ್ಲಿ 37.85 ಮೆಟ್ರಿಕ್ ಟನ್, ಹೊಸಪೇಟೆಯಲ್ಲಿ 476.445 ಮೆಟ್ರಿಕ್ ಟನ್, ರಾಯಚೂರಿನಲ್ಲಿ 736.35 ಮೆಟ್ರಿಕ್ ಟನ್ ಕೊರತೆ ಕಂಡು ಬಂದಿದೆ.
ಬೆಂಗಳೂರು ವಿಭಾಗದ ಚಿಕ್ಕಬಳ್ಳಾಪುರದಲ್ಲಿ 129.475 ಮೆಟ್ರಿಕ್ ಟನ್, ದಾವಣಗೆರೆಯಲ್ಲಿ 167.600ಮೆಟ್ರಿಕ್ ಟನ್ ಸೇರಿ ಒಟ್ಟು 359.475 ಮೆಟ್ರಿಕ್ ಟನ್ ಕೊರತೆ ಕಂಡು ಬಂದಿದೆ. ಇದೆಲ್ಲದರ ಒಟ್ಟು ಮೊತ್ತ 19.06 ಕೋಟಿ ರೂ.ಯಷ್ಟು ಎಂದು ತಿಳಿದು ಬಂದಿದೆ.