ಭೂಪೇಶ್ ಬಘೆಲ್ ಮತ್ತು ಮತದಾರರ ಗಮನವನ್ನು ಬೇರೆಡೆಗೆ ಸೆಳೆಯುವ ಕುಶಲ ತಂತ್ರ
ಛತ್ತೀಸ್ ಗಡ ವಿಧಾನಸಭಾ ಚುನಾವಣೆ
ಭೂಪೇಶ್ ಬಘೆಲ್ (PTI)
ಸುದಿಪ್ತೊ ಮೊಂಡಲ್ - thenewsminute.com
ಹೊಸದಿಲ್ಲಿ: ಛತ್ತೀಸ್ ಗಡ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನ.7ರಂದು ನಡೆಯಲಿದ್ದು,ನ.17ರಂದು ಎರಡನೇ ಮತ್ತು ಅಂತಿಮ ಹಂತದ ಮತದಾನ ನಡೆಯಲಿದೆ. ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಒಬಿಸಿ ನಾಯಕ ಭೂಪೇಶ್ ಬಘೆಲ್ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಾನೋರ್ವ ನಿಷ್ಪಕ್ಷಪಾತ ಆಡಳಿತಗಾರ ಎಂದು ಹೇಳಿಕೊಳ್ಳಲು 2021, ಸೆಪ್ಟಂಬರ್ನಲ್ಲಿ ತನ್ನ ತಂದೆ ನಂದಕುಮಾರ ಬಘೆಲ್ ಅವರ ಬಂಧನದ ಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ.
ಬಘೆಲ್ ತಂದೆ ನಂದಕುಮಾರ ಬಘೆಲ್ (88) ಅವರು ಛತ್ತೀಸ್ಗಡದಲ್ಲಿ ಬ್ರಾಹ್ಮಣರ ಮತ್ತು ವೈದಿಕ ಹಿಂದು ಧರ್ಮದ ಪ್ರಾಬಲ್ಯದ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಬಘೆಲ್ ಸರಕಾರವು ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ್ದ ಆರೋಪದಲ್ಲಿ ಅವರನ್ನು ಬಂಧಿಸಿತ್ತು ಮತ್ತು ಅವರು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ರಾಜ್ಯದಲ್ಲಿಯ ಪ್ರಚಲಿತ ಸಮಸ್ಯೆಗಳಿಂದ ಮತದಾರರ ಗಮನವನ್ನು ಬೇರೆಡೆಗೆ ಸೆಳೆಯುವ ಕುಶಲ ತಂತ್ರವನ್ನು ಸಿದ್ಧಿಸಿಕೊಂಡಿರುವ ಬಘೆಲ್ ಈ ಘಟನೆಯನ್ನು ತಾನೋರ್ವ ನಿಷ್ಪಕ್ಷ ಆಡಳಿತಗಾರ ಎಂದು ಹೇಳಿಕೊಳ್ಳಲು ಮಾತ್ರವಲ್ಲ, ತಾನು ಹಿಂದು ಪರ ಎಂದು ಸಮರ್ಥಿಸಿಕೊಳ್ಳಲೂ ಬಳಸಿಕೊಂಡಿದ್ದಾರೆ.
ಹಿರಿಯ ಬಘೆಲ್ (ನಂದಕುಮಾರ)ರನ್ನು ಭೇಟಿಯಾಗಲು ನಾವು ಪ್ರಯತ್ನಿಸಿದ್ದೆವು, ಆದರೆ ನಾವು ಮಾತನಾಡಿದ ರಾಜಕೀಯ ಪಂಡಿತರು ಅವರನ್ನು ಓರ್ವ ವಿಲಕ್ಷಣ ವ್ಯಕ್ತಿ ಎಂದು ತಳ್ಳಿ ಹಾಕಿದ್ದರು. ಅವರು 1960ರಿಂದಲೂ ಲೋಹಿಯಾವಾದಿಗಳು, ಅಂಬೇಡ್ಕರ್ವಾದಿಗಳು ಮತ್ತು ಬೌದ್ಧ ಗುಂಪುಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ನಮಗೆ ನಂತರ ತಿಳಿದುಬಂದಿತ್ತು.
ಮುಖ್ಯಮಂತ್ರಿಗಳ ತಂದೆಯದು ದೊಡ್ಡ ಬಾಯಿ ಮತ್ತು ಕೊಂಚ ಅರಳುಮರಳು ಕೂಡ ಇದೆ ಎಂದು ನಂದಕುಮಾರ ಭಘೆಲ್ರನ್ನು ಬಣ್ಣಿಸಿದ ರಾಯಪುರ ಮೂಲದ ರಾಜಕೀಯ ತಜ್ಞರೋರ್ವರು, ಅವರು ಯಾವುದೇ ರಾಜಕೀಯ ಮಹತ್ವ ಹೊಂದಿಲ್ಲ. ಚುನಾವಣೆಗಳ ಮಧ್ಯದಲ್ಲಿ ಅವರನ್ನೇಕೆ ಭೇಟಿಯಾಗಲು ಬಯಸಿದ್ದೀರಿ ಎಂದು ಪ್ರಶ್ನಿಸಿದರು.
ಛತ್ತೀಸ್ಗಡ ರಾಜಕೀಯದ ವಿಲಕ್ಷಣತೆಗಳನ್ನು ಅರ್ಥ ಮಾಡಿಕೊಳ್ಳಲು ನಾವು ವಿಲಕ್ಷಣ ಎಂದು ಹೇಳಲಾಗಿರುವ ವ್ಯಕ್ತಿಯೊಂದಿಗೆ ಮಾತನಾಡಲು ಬಯಸಿದ್ದೆವು.
ಆದಿವಾಸಿಗಳು, ದಲಿತರು ಅಥವಾ ಹಿಂದುಳಿದ ಸಮುದಾಯಗಳು ಜನಸಂಖ್ಯೆಯ ಶೇ.95ರಷ್ಟು ಪಾಲನ್ನು ಹೊಂದಿರುವ ರಾಜ್ಯದಲ್ಲಿ ಬ್ರಾಹ್ಮಣರ ವಿರುದ್ಧ ಮಾತನಾಡಿದ್ದಕ್ಕೆ ತನ್ನ ತಂದೆಯನ್ನು ಬಂಧಿಸಲು ಭೂಪೇಶ್ ಅವಕಾಶ ನೀಡಿದ್ದು ಏಕೆ? ಇಷ್ಟೊಂದು ದೊಡ್ಡ ಜಾತಿ ದಮನಿತ ಜನಸಂಖ್ಯೆ ಇರುವ ರಾಜ್ಯದಲ್ಲಿ ತನ್ನ ಆರು ದಶಕಗಳ ಜಾತಿ ವಿರೋಧಿ ಚಟುವಟಿಕೆಗಳ ನಂತರವೂ ಹಿರಿಯ ಬಘೆಲ್ ಗುರುತಿಸಿಕೊಳ್ಳಲು ಏಕೆ ವಿಫಲರಾದರು? ಅವರ ಮಗ (ಭೂಪೇಶ್) ಛತ್ತೀಸ್ಗಡದ ಅತ್ಯಂತ ಶಕ್ತಿಶಾಲಿ ರಾಜಕೀಯ ನಾಯಕರಲ್ಲೊಬ್ಬರಾಗಿ ಹೊರಹೊಮ್ಮಲು ಯಾವ ತಂತ್ರಗಳನ್ನು ಬಳಸಿದ್ದರು?
ದುರದೃಷ್ಟವಶಾತ್ ಹಿರಿಯ ಬಘೆಲ್ ಅನಾರೋಗ್ಯ ಪೀಡಿತರಾಗಿದ್ದಾರೆ. ಅವರದು ತುಂಬ ಘಟನಾತ್ಮಕ ರಾಜಕೀಯ ಬದುಕು ಮತ್ತು ತನ್ನ ಕಥೆಗಳನ್ನು ಹಂಚಿಕೊಳ್ಳುವುದನ್ನು ಅವರು ಇಷ್ಟಪಡುತ್ತಾರೆ. ತಂದೆ ಮತ್ತು ಮಗನ ನಡುವೆ ಧ್ರುವಗಳ ಅಂತರವಿದೆ ಎಂದು ನಮ್ಮನ್ನು ನಯವಾಗಿ ಸಾಗಹಾಕಲು ಪ್ರಯತ್ನಿಸಿದ್ದ ನಿಕಟ ಸಹಾಯಕರೋರ್ವರು ಹೇಳಿದರು. ಆದರೆ ನಂದಕುಮಾರಜಿ ಒತ್ತಡಕ್ಕೊಳಗಾಗಲು ನಾವು ಅವಕಾಶ ನೀಡುವುದಿಲ್ಲ. ನೀವು ಆಂದೋಲನದಲ್ಲಿರುವ ಜನರ ಬಳಿ ಹಿರಿಯ ಬಘೆಲ್ ಕುರಿತು ಮಾತನಾಡಬೇಕು ಎಂಬ ಫುಕ್ಕಟೆ ಸಲಹೆಯನ್ನು ನೀಡಿದರು.
ಅಮುಖ್ಯ ಎಂದು ಭಾವಿಸಲಾಗಿರುವ ತಂದೆಯ ಸಿದ್ಧಾಂತದ ಮಹತ್ವ ಮತ್ತು ಚುನಾವಣಾ ಕಣದಲ್ಲಿ ಮಗನ ಪ್ರಾಬಲ್ಯವನ್ನು ಅರ್ಥ ಮಾಡಿಕೊಳ್ಳಲು ‘ದಿ ನ್ಯೂಸ್ ಮಿನಿಟ್’ ತಂಡವು ಸವಲತ್ತುಗಳನ್ನು ಹೊಂದಿರುವ ಸಮುದಾಯಗಳಿಗೆ ಸೇರಿದ ಚುನಾವಣಾ ತಜ್ಞರನ್ನು ಬಿಟ್ಟು ಕೆಳಜಾತಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರೊಂದಿಗೆ ಮಾತನಾಡಿತ್ತು.
ಕ್ರೈಸ್ತರಿಗೆ ಕಿರುಕುಳ:
ಸ್ಥಳೀಯ ಬುದ್ಧಿಜೀವಿಗಳು ಮತ್ತು ಮಾಧ್ಯಮಗಳಲ್ಲಿಯ ವರದಿಗಳು ಭೂಪೇಶ್ ಅವರ ಅದ್ಭುತ ಬೆಳವಣಿಗೆಗೆ ಹಲವಾರು ವಿವರಣೆಗಳನ್ನು ಮುಂದಿಟ್ಟಿದ್ದು, ಇವರಲ್ಲಿ ಹೆಚ್ಚಿನವರು ಭೂಪೇಶ್ ಎರಡನೇ ಅವಧಿಗೆ ಅಧಿಕಾರಕ್ಕೆ ಮರಳಬಹುದು ಎಂದಿದ್ದಾರೆ. ಭೂಪೇಶ್ ಅವರ ಕೃಷಿ ಮತ್ತು ನೇರ ಲಾಭ ಯೋಜನೆಗಳ ಜನಪ್ರಿಯತೆ, ಜಾತಿ ಗಣತಿಗೆ ಅವರ ಸಮರ್ಥನೆ ಮತ್ತು ಉತ್ತರಭಾರತದಲ್ಲಿ, ನಿರ್ದಿಷ್ಟವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಒಬಿಸಿ ನಾಯಕರಾಗಿ ಅವರ ಹೆಚ್ಚುತ್ತಿರುವ ಪ್ರಭಾವ, ಒಬಿಸಿ ಕೋಟಾ ಹೆಚ್ಚಿಸಲು ಮತ್ತು ರಾಜ್ಯದಲ್ಲಿ ಶೇ.82ರಷ್ಟು ಮೀಸಲಾತಿಯನ್ನು ತರಲು ಅವರ ಹೋರಾಟ,ಪ್ರಧಾನಿ ನರೇಂದ್ರ ಮೋದಿಯವರನ್ನು ತನ್ನ ಲಾಂಛನವನ್ನಾಗಿ ಬಳಸುತ್ತಿರುವ ಬಿಜೆಪಿಯನ್ನು ಮೀರಿಸಲು ಸ್ಥಳೀಯ ಅಥವಾ ‘ಛತ್ತೀಸ್ಗಡೀಯ’ ಹೆಮ್ಮೆಯ ಸುತ್ತ ರಾಜಕೀಯ ನಿರೂಪಣೆಯನ್ನು ನಿರ್ಮಿಸುವಲ್ಲಿ ಅವರ ಯಶಸ್ಸು ಕುರಿತು ಚರ್ಚೆಗಳು ನಡೆಯುತ್ತಿವೆ. ಛತ್ತೀಸ್ಗಡವು ದೇಶದಲ್ಲಿಯೇ ಅತ್ಯಂತ ಕಡಿಮೆ ನಿರುದ್ಯೋಗ ದರದ ರಾಜ್ಯವಾಗಿ ಮೂಡಿಬಂದಿರುವುದರ ಹೆಗ್ಗಳಿಕೆಯನ್ನೂ ಅವರು ಭೂಪೇಶಗೆ ನೀಡಿದ್ದಾರೆ.
ಈ ಎಲ್ಲ ಬಹುಪರಾಕ್ಗಳ ನಡುವೆ ಬಲಪಂಥೀಯ ಬಹುಸಂಖ್ಯಾತ ವಾದದತ್ತ ಭೂಪೇಶ್ ಅವರ ಹೆಚ್ಚುತ್ತಿರುವ ಒಲವನ್ನು ‘ಮೃದು ಹಿಂದುತ್ವ ’ ಎಂದು ಕಡಗಣಿಸಲಾಗುತ್ತಿದೆ ಅಥವಾ ಸಮಕಾಲೀನ ವ್ಯಾವಹಾರಿಕ ರಾಜಕೀಯ ಎಂದು ಸಮರ್ಥಿಸಲಾಗುತ್ತಿದೆ. ಆದರೆ ತಳಮಟ್ಟದಲ್ಲಿ ಪರಿಸ್ಥಿತಿಯು ಕಠಿಣವಾಗಿರುವಂತೆ ಕಂಡು ಬರುತ್ತಿದೆ.
ದಿಲ್ಲಿಯ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ (ಯುಸಿಎಫ್)ನ ಅಂಕಿಅಂಶಗಳಂತೆ 2018ರ ಕೊನೆಯ ವಾರದಲ್ಲಿ ಭೂಪೇಶ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಕ್ರೈಸ್ತರಿಗೆ ಕಿರುಕುಳದ ಸುಮಾರು 500 ಪ್ರಮುಖ ಘಟನೆಗಳು ನಡೆದಿವೆ. ಅಂದರೆ ವರ್ಷಕ್ಕೆ ನೂರಕ್ಕೂ ಅಧಿಕ ಪ್ರಕರಣಗಳು.
ತಮ್ಮ ಅಂಕಿಅಂಶಗಳು ತಳಮಟ್ಟದಲ್ಲಿಯ ವಾಸ್ತವ ಸ್ಥಿತಿಯನ್ನು ಬಿಂಬಿಸುವುದಿಲ್ಲ ಎಂದು ಯುಸಿಎಫ್ನಲ್ಲಿಯ ಮೂಲಗಳು ಹೇಳಿವೆ. ಪೋಲಿಸರಿಂದ ಅವರ ಕೆಲಸಕ್ಕೆ ಅಡ್ಡಿಯುಂಟಾಗಿದೆ ಮತ್ತು ಹಲವಾರು ಸಲ ಧಾರ್ಮಿಕ ಗುಂಪುಗಳು ಸ್ವಯಂಸೇವಕರಿಗೆ ಕಿರುಕುಳಗಳನ್ನು ನೀಡಿವೆ ಮತ್ತು ಅವರ ಮೇಲೆ ದಾಳಿಗಳನ್ನು ನಡೆಸಿವೆ.
ದೂರವಾಣಿ ಮೂಲಕ ನಾವು ಸಂಪರ್ಕಿಸಿದ ಕ್ರೈಸ್ತ ಪಾದ್ರಿಯೋರ್ವರು, ‘ಕಳೆದ ನಾಲ್ಕು ದಶಕಗಳಲ್ಲಿ ಮಧ್ಯಭಾರತದಲ್ಲಿಯ ಬುಡಕಟ್ಟು ಪ್ರದೇಶಗಳಲ್ಲಿ ಸಂಘ ಪರಿವಾರದ ಕ್ರೋಡೀಕರಣದಲ್ಲಿ ಕ್ರೈಸ್ತರಿಗೆ ಕಿರುಕುಳ ಪ್ರಮುಖವಾಗಿತ್ತು. ಆದಾಗ್ಯೂ ಕಾಂಗ್ರೆಸ್ ಆಡಳಿತದಲ್ಲಿ ಛತ್ತೀಸ್ಗಡದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕೈಮೀರಿದೆ. ಬಿಜೆಪಿ ಆಡಳಿತದಲ್ಲಿ ನಾವು ಕನಿಷ್ಠ ಎಫ್ಐಆರ್ಗಳನ್ನಾದರೂ ದಾಖಲಿಸಬಹುದಿತ್ತು. ಈಗ ಪ್ರತಿಯೊಂದೂ ಪ್ರಕರಣವನ್ನು ದಾಖಲಿಸಲು ನಾವು ಎಸ್ಪಿ,ಐಜಿಪಿ ಅಥವಾ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಬೇಕಿದೆ. ನಮ್ಮ ಪ್ರಕರಣಗಳನ್ನು ದಾಖಲಿಸಿಕೊಳ್ಳಬಾರದು ಎಂಬ ಅಘೋಷಿತ ನಿಯಮವಿರುವಂತಿದೆ. ಪೋಲಿಸರು ಬಲವಂತದ ಮತಾಂತರಗಳ ಆರೋಪದಲ್ಲಿ ನಮ್ಮ ವಿರುದ್ಧ ಪ್ರಕರಣಗಳನ್ನೂ ದಾಖಲಿಸುತ್ತಿದ್ದಾರೆ’ಎಂದು ಹೇಳಿದರು.
ಸ್ವಂತ ಇಚ್ಛೆಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವನ್ನೂ ‘ಘರ್ ವಾಪ್ಸಿ’ಗೆ ಒತ್ತಡ ಹೇರುತ್ತಿರುವ ರಾಜ್ಯದಲ್ಲಿನ ಬುಡಕಟ್ಟು ಮಂಡಳಿಗಳು ಸ್ವತಂತ್ರ ಗಣರಾಜ್ಯಗಳಂತೆ ವರ್ತಿಸುತ್ತಿವೆ ಮತ್ತು ಅವುಗಳ ನಿಯಮಗಳು ಸಂವಿಧಾನಕ್ಕೆ ವಿರುದ್ಧವಾಗುತ್ತವೆ ಎಂದು ಹೇಳಿದ ಅವರು, ಸ್ಥಳೀಯ ಸ್ವಯಂ ಆಡಳಿತ ಮತ್ತು ಬುಡಕಟ್ಟು ಸ್ವಾಯತ್ತತೆಯನ್ನು ಉತ್ತೇಜಿಸುವ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಗ್ರಾಮಸಭೆಗಳ ಕಾನೂನುಬಾಹಿರ ನಿರ್ಣಯಗಳನ್ನು ಪ್ರೋತ್ಸಾಹಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡೂ ಪಕ್ಷಗಳ ನಾಯಕರು ಕ್ರೈಸ್ತರಿಗೆ ವಿರುದ್ಧವಾಗಿದ್ದಾರೆ ಎಂದರು.
2022ರಲ್ಲಿ ಪೆಸಾ ಕಾಯ್ದೆಯನ್ನು ತರುವ ಮೂಲಕ ಭೂಪೇಶ್ ಸರಕಾರವು ಚುನಾಯಿತ ಗ್ರಾಮ ಪಂಚಾಯತ್ಗಳಿಗೆ ಹೆಚ್ಚುವರಿಯಾಗಿ ಗ್ರಾಮಸಭೆಗಳ ಸ್ಥಾಪನೆಗೆ ಅವಕಾಶವನ್ನು ಕಲ್ಪಿಸಿತ್ತು. ಈ ಗ್ರಾಮಸಭೆಗಳು ಪೋಲಿಸರ ನೆರವಿನೊಂದಿಗೆ ವ್ಯವಸ್ಥಿತವಾಗಿ ಕ್ರೈಸ್ತರನ್ನು ಗ್ರಾಮಗಳಿಂದ ತೆರವುಗೊಳಿಸುತ್ತಿವೆ ಎಂದು ಪಿಯುಸಿಲ್ನ ರಾಜ್ಯ ಘಟಕದ ಅಧ್ಯಕ್ಷ ಡಿಗ್ರೀ ಪ್ರಸಾದ ಚೌಹಾಣ ಆರೋಪಿಸಿದರು.
ಕೆಲವು ರಾಜಕೀಯ ಪಂಡಿತರು ಭವಿಷ್ಯ ನುಡಿದಿರುವಂತೆ ಭೂಪೇಶ್ ಬಿಜೆಪಿಯನ್ನು ಸೋಲಿಸಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾದರೆ ಸಂಭ್ರಮಾಚರಣೆಯು ಕಾಂಗ್ರೆಸ್ನ ಛತ್ತೀಸಗಡ ಪಾಳಯಕ್ಕೆ ಸೀಮಿತವಾಗಿರುವುದಿಲ್ಲ. ಬಿಜೆಪಿಯು ಮುಖ್ಯಮಂತ್ರಿ ಹುದ್ದೆಗೆ ಅಭ್ಯರ್ಥಿಯಾಗಿ ಯಾರನ್ನೂ ಬಿಂಬಿಸಿಲ್ಲ, ಹೀಗಾಗಿ ಅವರ ಗೆಲುವನ್ನು ದೇಶಾದ್ಯಂತದ ಬಿಜೆಪಿ ಟೀಕಾಕಾರರು ನರೇಂದ್ರ ಮೋದಿಯವರ ಸೋಲು ಎಂದು ಕೊಂಡಾಡಲಿದ್ದಾರೆ. ಇಂತಹ ಸಂದರ್ಭದಲ್ಲಿ ಟೀಕಾಕಾರರು ಅದನ್ನು ಮೋದಿ-ಶಾ ರಾಜಕೀಯ ಬ್ರ್ಯಾಂಡ್ ಮತ್ತು ಅದಕ್ಕೆ ಹಣಕಾಸು ನೆರವು ನೀಡುವ ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ಸೋಲು ಎಂದು ವಿಶ್ಲೇಷಿಸುತ್ತಾರೆ ಎಂದೂ ನಾವು ನಿರೀಕ್ಷಿಸಬಹುದು.
ಬೌದ್ಧ ತಂದೆ ಮತ್ತು ಹಿಂದೂ ಮಗ:
ನಂದಕುಮಾರ ಬಘೆಲ್ ಕುರಿತು ನಮ್ಮ ಕುತೂಹಲ ನಮ್ಮನ್ನು ರಾಯಪುರದ ಯುವ ಅಂಬೇಡ್ಕರ್ವಾದಿಗಳು, ನವ ಬೌದ್ಧ ಕಾರ್ಯಕರ್ತರು ಮತ್ತು ವಿದ್ವಾಂಸರ ಬಳಿಗೆ ಕರೆದೊಯ್ದಿತ್ತು. ಇವರೆಲ್ಲ ಹಿರಿಯ ಬಘೆಲ್ಗೆ ಹೆಚ್ಚಿನ ಗೌರವ ನೀಡುತ್ತಾರೆ. ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳ ಮಿಶ್ರಣವಾಗಿರುವ ಗುಂಪು ಅಂಬೇಡ್ಕರ್ ಪ್ರತಿಮೆಯ ಬಳಿ ನಡೆಸುವ ಪ್ರತಿಭಟನೆಗಳಲ್ಲಿ ಹಿರಿಯ ಬಘೆಲ್ ಆಗಾಗ್ಗೆ ಪಾಲ್ಗೊಳ್ಳುತ್ತಾರೆ. ಹಿರಿಯ ಬಘೆಲ್ರನ್ನು ಜಾತಿ ವಿರೋಧಿ ಆಂದೋಲನದ ಪೋಷಕ ಎಂದು ಬಣ್ಣಿಸಿದ ಈ ಗುಂಪು, ನಂದಕುಮಾರಜಿ ಬೌದ್ಧಧರ್ಮಕ್ಕೆ ಬದ್ಧರಾಗಿದ್ದಾರೆ ಎನ್ನುವುದು ನಿಮಗೆ ಗೊತ್ತೇ? ಕಳೆದ 40 ವರ್ಷಗಳಿಂದಲೂ ಅವರು ಬೌದ್ಧ ಸನ್ಯಾಸಿಗಳಿಗಾಗಿ ‘ವರ್ಷ ವಾಸ್ ’ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ ಎಂದು ತಿಳಿಸಿತು.
2019ರಲ್ಲಿ ನಂದಕುಮಾರ ಪತ್ನಿ ಬಿಂದೇಶ್ವರಿ ಭಘೆಲ್ ನಿಧನದ ಬಳಿಕ ತಂದೆ-ಮಗನ ನಡುವಿನ ದ್ವೇಷ ಹೆಚ್ಚು ಮುನ್ನೆಲೆಗೆ ಬಂದಿತ್ತು. ಅಂತ್ಯ ಸಂಸ್ಕಾರದ ಬಗ್ಗೆ ಹಿರಿಯ ಬಘೆಲ್ ಮತ್ತು ಭೂಪೇಶ್ ಸಾರ್ವಜನಿಕವಾಗಿ ಜಗಳವಾಡಿದ್ದರು. ಅಂತಿಮವಾಗಿ ಚಿತಾಭಸ್ಮವನ್ನು ಎರಡು ಪಾಲು ಮಾಡಲಾಗಿತ್ತು. ಹಿರಿಯ ಬಘೆಲ್ ಬೌದ್ಧ ವಿಧಿಯಂತೆ ಉತ್ತರ ಕ್ರಿಯೆಯನ್ನು ನಡೆಸಿದರೆ ಭೂಪೇಶ್ ಹಿಂದು ವಿಧಿಯಂತೆ ಆಚರಿಸಿದ್ದರು.