ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಗುತ್ತಿಗೆದಾರ ಎಂದು ಸುಳ್ಳೇ ಹೇಳಿದ ಬಿಜೆಪಿ
ಗೌತಮ್ ಆತ್ಮಹತ್ಯೆ : ಬಿಜೆಪಿ ಹೇಳಿದ್ದೇನು ? ವಾಸ್ತವವೇನು ?
ಸಾಂದರ್ಭಿಕ ಚಿತ್ರ.| Photo: PTI
ಸುಳ್ಳಿಗೂ ಬಿಜೆಪಿಗೂ ಅದೇನೋ ಬಿಡಿಸಲಾರದ ನಂಟು. ಅದೇನು ಮಾಡಿದರೂ ಸುಳ್ಳಿನಿಂದ ಬಿಜೆಪಿಯನ್ನು, ಬಿಜೆಪಿಯಿಂದ ಸುಳ್ಳನ್ನು ಬೇರ್ಪಡಿಸೋದು ಅಸಾಧ್ಯ ಎಂಬಷ್ಟು ಗಾಢ ಬೆಸುಗೆ ಅವರಿಬ್ಬರ ನಡುವೆ. ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಸುಳ್ಳನ್ನು ಸೃಷ್ಟಿಸಿ ಅದಕ್ಕೆ ಒಂದಿಷ್ಟು ದ್ವೇಷ, ಕೋಮುವಾದ, ಅಸಹಿಷ್ಣುತೆಗಳ ಮಸಾಲೆ ಬೆರೆಸಿ ಹದವಾಗಿ ಬೇಯಿಸಿ ಜನರಿಗೆ ಉಣಬಡಿಸಿ ಮಜಾ ತೆಗೆದುಕೊಳ್ಳೋದು ಬಿಜೆಪಿಯವರ ಜಾಯಮಾನ.
ಅದು ಅಲ್ಲಿ ಇಲ್ಲಿ ಅಂತಲ್ಲ, ಹಳ್ಳಿಯಿಂದ ದಿಲ್ಲಿವರೆಗೆ, ಬಿಜೆಪಿಯವರಿಗೆ ಎಲ್ಲೆಡೆ ಅತ್ಯಂತ ಚೆನ್ನಾಗಿ ಕಲಿಸಲಾಗಿರುವ ಕಲೆ. ಒಮ್ಮೆ ಬಳಸಿ ವಿಫಲವಾದರೆ ಮತ್ತೊಮ್ಮೆ, ಮತ್ತೂ ವಿಫಲವಾದರೆ ಮಗದೊಮ್ಮೆ ಹೀಗೆ ಸುಳ್ಳಿನ ಪ್ರಯೋಗವನ್ನು ಬಿಜೆಪಿಯವರು ಮಾಡ್ತಾನೆ ಇರ್ತಾರೆ. ಅದು ಅವರ ಸರ್ವರೋಗಗಳಿಗೆ ಪರಿಹಾರ ಎಂಬಂತಹ ಅಸ್ತ್ರ.
ತೀರಾ ಮೊನ್ನೆ ಮೊನ್ನೆ ಉಡುಪಿಯಲ್ಲಿ ವಿದ್ಯಾರ್ಥಿನಿಯರ ಬಗ್ಗೆ ಘೋರ ಸುಳ್ಳು ಹರಡಿ ಕೊನೆಗೆ ಅವರ ಪಕ್ಷದವರೇ ಬಂದು " ಇಲ್ಲ ಇಲ್ಲ. ಹಾಗೆಲ್ಲ ಹಸಿ ಹಸಿ ಸುಳ್ಳು ಹೇಳಬೇಡಿ " ಎಂದು ಹೇಳಬೇಕಾಯಿತು. ಆದರೆ ಬಿಜೆಪಿಯವರು ಎಲ್ಲಿ ಪಾಠ ಕಲೀತಾರೆ. ಈಗ ಮತ್ತೆ ಅದೇ ರೀತಿ ಹಸಿ ಹಸಿ ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ.
ಆಗಿದ್ದಿಷ್ಟು. ಬಿಬಿಎಂಪಿ ಗುತ್ತಿಗೆದಾರರು ಬಿಲ್ ಪಾವತಿ ವಿಳಂಬದ ಬಗ್ಗೆ ಸರಕಾರದ ವಿರುದ್ಧ ಆರೋಪ ಮಾಡುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡರು. ಅತ್ತಿಗುಪ್ಪೆ ವಾರ್ಡ್ ನ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ದೊಡ್ಡಯ್ಯ ಅವರ ಪುತ್ರ ಗೌತಮ್ ಎಂಬವರು ಬುಧವಾರ ಆಗಸ್ಟ್ 9 ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಅದರ ಹಿಂದೆ ಮುಂದೆ ನೋಡದ ಕೆಲವು ಚಾನಲ್ ಗಳು ʼʼಕಾಮಗಾರಿ ಬಿಲ್ ಸಿಗದಿದ್ದಕ್ಕೆ ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆʼʼ ಎಂದು ತಿರುಚಿ ವರದಿ ಮಾಡಿ ಬಿಟ್ಟವು . ʼʼಸರ್ಕಾರ- ಗುತ್ತಿಗೆದಾರರ ಹಗ್ಗಾಜಗ್ಗಾಟಕ್ಕೆ ಮೊದಲ ಬಲಿ: ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ!ʼʼ.
ʼʼಕಾಮಗಾರಿ ಬಿಲ್ ಸಿಗದಿದ್ದಕ್ಕೆ ಬಿಬಿಎಂಪಿ ಗುತ್ತಿಗೆದಾರ ಗೌತಮ್ ಆತ್ಮಹತ್ಯೆʼʼ ಎಂಬಿತ್ಯಾದಿ ಸತ್ಯಕ್ಕೆ ಸಂಬಂಧವೇ ಇಲ್ಲದ ಸುದ್ದಿಗಳನ್ನು ಕೆಲವು ವೆಬ್ ಸೈಟ್ ಗಳು ಮತ್ತುಟಿವಿ ಚಾನೆಲ್ ಗಳು ವರದಿ ಮಾಡಿದವು. Oneindia Kannada, Zee News, ಏಷ್ಯಾನೆಟ್ ಸುವರ್ಣ ನ್ಯೂಸ್, ಪವರ್ ಟಿವಿ ಸೇರಿದಂತೆ ಕೆಲವು ಚಾನಲ್ ಗಳು ಈ ಸುಳ್ಳು ಸುದ್ದಿ ವರದಿ ಮಾಡಿದೆ.
ಆಮೇಲೆ ಫೀಲ್ಡಿಗೆ ಇಳಿದಿದ್ದೇ ಬಿಜೆಪಿ ನಾಯಕರು. ʼʼಗೌತಮ್ ಆತ್ಮಹತ್ಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ನೇರ ಹೊಣೆʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಮಾಜಿ ಸಚಿವ ಸುನಿಲ್ ಕುಮಾರ್ ಸೇರಿದಂತೆ ಹಲವರು ಸುಳ್ಳು ಸುದ್ದಿಗಳನ್ನೇ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜ್ಯ ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆಯಲ್ಲೂ ಪೋಸ್ಟ್ ಮಾಡಲಾಗಿದೆ.
ನಳಿನ್ ಕುಮಾರ್ ಕಟೀಲ್ ಅವರು ʼʼಇದು ಜೀವ ತೆಗೆಯುವ ಸರ್ಕಾರ! ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರೈತರ , ನೌಕರನ ಆತ್ಮಹತ್ಯೆ ಎಂದು ಪ್ರತಿ ದಿನ ಕೇಳುತ್ತಲೇ ಇದ್ದೇವೆ. ಇಂದು ಬಿಬಿಎಂಪಿ ಗುತ್ತಿಗೆದಾರನ ಆತ್ಮಹತ್ಯೆ! ಕಾಮಗಾರಿಯ ಬಿಲ್ ಕೇಳಿದ್ದಕ್ಕೆ ಬೇಜವಾಬ್ದಾರಿಯ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಇದಕ್ಕೆ ನೇರ ಹೊಣೆ. ಕಾಂಗ್ರೆಸ್ಸಿಗರೇ, ಇನ್ನೆಷ್ಟು ಬಲಿ ಬೇಕು?ʼʼ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.
ಬಿಜೆಪಿ ಟ್ವೀಟ್ ಮಾಡಿ "ಅಧಿಕಾರಕ್ಕೆ ಬಂದ ದಿನದಿಂದ ಕಲೆಕ್ಷನ್, ಕಮಿಷನ್ ಎನ್ನುತ್ತಾ ಲೂಟಿಗಿಳಿದ ಪರಿಣಾಮವೇ ಇಂದು ಬಿಬಿಎಂಪಿ ಗುತ್ತಿಗೆದಾರ ಗೌತಮ್ ಕಾಮಗಾರಿ ಬಿಲ್ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ಕೊಡಲ್ಲ, ಆಣೆ ಮಾಡೋಲ್ಲ, ಪ್ರತಿಭಟನೆ ಮಾಡಿದ್ರೆ ಬ್ಲ್ಯಾಕ್ ಮೇಲ್ ಎನ್ನುತ್ತ ಬೇಜವಾಬ್ದಾರಿಯಿಂದ ವರ್ತಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದಕ್ಕೆ ನೇರ ಹೊಣೆ..! ಆಡಳಿತ ನಡೆಸಲು ಕಾಂಗ್ರೆಸ್ ಅಸಮರ್ಥ ಎನ್ನುವುದು ಸಾಬೀತಾಗಿದೆ. ಇನ್ನಷ್ಟು ಜೀವಗಳನ್ನು ಬಲಿ ಪಡೆಯುವ ಮೊದಲು ರಾಜೀನಾಮೆ ನೀಡಿ ಮನೆಗೆ ಹೋಗಿ!ʼʼ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ತಾನೇನು ಕಡಿಮೆ ಇಲ್ಲ ಎಂದು ಜಿಗಿದ ಮಾಜಿ ಸಚಿವ ಸುನಿಲ್ ಕುಮಾರ್, " ಅಧಿಕಾರಕ್ಕೆ ಬಂದ ಮರು ದಿನದಿಂದಲೇ ಅಧಿಕೃತವಾಗಿ ಭ್ರಷ್ಟಾಷಾರದ ಅಂಗಡಿ ಬಾಗಿಲು ತೆರೆದ ಕಾಂಗ್ರೆಸಿಗರು ಆರೋಪಗಳೆಲ್ಲ ನಕಲಿ ಎಂದು ತಪ್ಪಿಸಿಕೊಳ್ಳುತ್ತಿದ್ದರು. ಈ ಸರ್ಕಾರದ ಧನದಾಹಕ್ಕೆ ಈಗ ಗುತ್ತಿಗೆದಾರ ಗೌತಮ್ ಪ್ರಾಣ ತೆತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಈ ಆತ್ಮಹತ್ಯೆಯೂ ನಕಲಿ ಎಂದು ಹೇಳುತ್ತೀರಾ ? " ಎಂದು ಟ್ವೀಟ್ ಮಾಡಿದ್ದಾರೆ.
ಹೀಗೆ ಬಿಜೆಪಿಯ ಹಿರಿಯ ಮುಖಂಡರೆಲ್ಲ ಸರಣಿ ಟ್ವೀಟ್ ಮಾಡುತ್ತಲೇ ಇರುವಾಗ ಗೌತಮ್ ಕುಟುಂಬದವರು ಪ್ರತಿಕ್ರಿಯಿಸಿದರು. ಮೊದಲೇ ಕುಟುಂಬದ ಸದಸ್ಯನನ್ನು ಕಳಕೊಂಡು ದಿಕ್ಕೆಟ್ಟಿದ್ದ ಅವರಿಗೆ ಬಿಜೆಪಿಯವರ ಈ ಸುಳ್ಳುಗಳನ್ನು ನೋಡಿ ಇನ್ನಷ್ಟು ಸಂಕಟವಾಗಿರಬೇಕು. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಗೌತಮ್ ಅವರ ತಂದೆ ದೊಡ್ಡಯ್ಯ, ʼಆತ ಯಾವುದೇ ಕಂಟ್ರಾಕ್ಟರ್ ಕೆಲಸ ಮಾಡುತ್ತಿರಲಿಲ್ಲ. ಕಳೆದ 3-4 ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನಮಗೂ ಗೊತ್ತಾಗುತ್ತಿಲ್ಲ. ಹುಡುಗರ ಜೊತೆ ಓಡಾಡಿಕೊಂಡಿದ್ದ. ಆತನಿಗೆ ಮದುವೆ ಮಾಡಲು ಹೆಣ್ಣು ನೋಡುತ್ತಿದ್ದೆವುʼ ಎಂದು ಸ್ಪಷ್ಟಪಡಿಸಿದ್ದಾರೆ.
ಗೌತಮ್ ಅವರ ಭಾವ ಕೂಡ ಪ್ರತಿಕ್ರಿಯಿಸಿ, ʼʼನಾನು ಸ್ಪಷ್ಟವಾಗಿಯೇ ಹೇಳುತ್ತೇನೆ, ನನ್ನ ಭಾಮೈದ ಗುತ್ತಿಗೆದಾರನಲ್ಲ. ಆತನಿಗೆ ಬಿಲ್ ಬರಬೇಕಾಗಿರಲಿಲ್ಲ. ಇದು ಬಿಜೆಪಿಯವರು ಮಾಡಿರುವ ಕೆಲಸ. ಮದುವೆ ಮಾಡಲು ನಿರ್ಧರಿಸಿ ಹುಡುಗಿ ಹುಡುಕುತಿದ್ದೆವು . ಈ ವೇಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದʼʼ ಎಂದು ಹೇಳಿದ್ದಾರೆ.
ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ ಟಿ ಮಂಜುನಾಥ್ ಅವರು
"ಆತ್ಮಹತ್ಯೆ ಮಾಡಿಕೊಂಡಿರುವ ಗೌತಮ್ ಸಹೋದರ ಹರೀಶ್ ನನ್ನ ಸ್ನೇಹಿತ. ಅವರ ಜೊತೆ ಆತ್ಮಹತ್ಯೆ ವಿಚಾರದ ಕುರಿತು ಮಾತನಾಡಿದ್ದೇನೆ. ಆತ್ಮಹತ್ಯೆಗೆ ಕಾರಣ ಏನು ಎನ್ನುವ ಕುರಿತು ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ. ಆದರೆ ಗೌತಮ್ ಗುತ್ತಿಗೆದಾರ ಅಲ್ಲ. ಅವರ ಸಹೋದರ ಹರೀಶ್ ಗುತ್ತಿಗೆದಾರ, ಈ ವಿಚಾರದಲ್ಲಿ ಯಾರೂ ಅಪಪ್ರಚಾರ ಮಾಡಬಾರದು. ಆತ್ಮಹತ್ಯೆಗೂ ಬಿಲ್ಗೂ ಸಂಬಂಧ ಇಲ್ಲ. ಅವರು ಮೂರು ದಿನದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ
ಈ ಕುರಿತು ಪ್ರತಿಕ್ರಿಯಿಸಿದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ, " ದೊಡ್ಡಯ್ಯ ಅತ್ತಿಗುಪ್ಪೆ ವಾರ್ಡಿನ ಮಾಜಿ ಸದಸ್ಯರಾಗಿದ್ದು, ಗೌತಮ್ ಮೂರನೇ ಮಗ. ಪ್ರತಿ ದಿನ ತಡವಾಗಿ ಮನೆಗೆ ಬರುತ್ತಿದ್ದ ಗೌತಮ್, ಬುಧವಾರ ರಾತ್ರಿ ಊಟಕ್ಕೆ ಕರೆದಾಗ ಬಾಗಿಲು ತೆರೆದಿಲ್ಲ. ಆ ಬಳಿಕ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಹೀಗೆ ಗೌತಮ್ ಮನೆಯವರೇ ಆತ ಗುತ್ತಿಗೆದಾರ ಅಲ್ಲ ಎಂದು ಹೇಳಿಕೆ ನೀಡಿದ್ದರೂ, ಗುತ್ತಿಗೆದಾರರ ಸಂಘದವರು, ತನಿಖೆ ನಡೆಸಿದ ಪೊಲೀಸರು ಎಲ್ಲರೂ ಆತ ಗುತ್ತಿಗೆದಾರನೇ ಅಲ್ಲ ಎಂದು ಹೇಳಿದ್ದರೂ ಬಿಜೆಪಿಯ ನಾಯಕರು ತಮ್ಮ ಸುಳ್ಳು ಹೇಳಿಕೆಗಳ ಬಗ್ಗೆ ಸ್ಪಷ್ಟನೆ ಕೊಡುವುದಾಗಲಿ, ಈ ಕುರಿತ ಟ್ವೀಟ್ ಅನ್ನು ಡಿಲಿಟ್ ಮಾಡುವ ಗೋಜಿಗೆ ಹೋಗಿಲ್ಲ.
ತಮ್ಮ ಹೊಲಸು ರಾಜಕೀಯಕ್ಕಾಗಿ ಒಂದು ಕುಟುಂಬದ ವೈಯಕ್ತಿಕ ವಿಚಾರವನ್ನು, ಅವರ ದುರಂತವನ್ನು ಬೀದಿಗೆ ತಂದು ಹಾಕಿದರು ಬಿಜೆಪಿ ನಾಯಕರು. ಅದಕ್ಕೆ ರಾಜಕೀಯ ಬಣ್ಣ ಕೊಟ್ಟರು. ಸುಳ್ಳು ಸೇರಿಸಿದರು. ತಾವು ಹೀಗೆಲ್ಲ ಮಾಡೋದರಿಂದ ಆ ಕುಟುಂಬಕ್ಕೆ ಅದೆಷ್ಟು ಸಮಸ್ಯೆಯಾಗುತ್ತೆ ಎಂದು ಒಂದು ಕ್ಷಣವಾದರೂ ಬಿಜೆಪಿಯವರು ಯೋಚಿಸಿದ್ದರೆ ಸಾಕಿತ್ತು.