ಕಾಂಗ್ರೆಸ್ ಗ್ಯಾರಂಟಿಗಳನ್ನು ಲೇವಡಿ ಮಾಡಿ ಮಾಡಿ ಅದನ್ನೇ ಅನುಸರಿಸಿದ ಬಿಜೆಪಿ
► ಈವರೆಗೆ ಮೋದೀಜಿ ಕೊಟ್ಟ ಗ್ಯಾರಂಟಿಗಳೆಲ್ಲ ಕೇವಲ ಜುಮ್ಲಾ ಆಗಿಲ್ಲವೇ ? ► ಗ್ಯಾರಂಟಿಯಿಂದ ಲಂಕಾ ಆಗುತ್ತೆ, ಪಾಕ್ ಆಗುತ್ತೆ ಎನ್ನುತ್ತಿದ್ದ ಭಕ್ತರ ಬಾಯಿಗೆ ಬೀಗ
Photo: PTI
ಎಲ್ಲರಿಗೂ ನೆನಪಿದ್ದೇ ಇರುತ್ತದೆ. ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಣೆ ಮಾಡಿದಾಗ, ಇಂಥ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಈ ದೇಶದ ಪ್ರಧಾನಿ ಮೋದಿ ಹೇಳಿದ್ದರು. ಕಾಂಗ್ರೆಸ್ ಗ್ಯಾರಂಟಿಗಳಿಂದ ಕರ್ನಾಟಕ ಪಾಕಿಸ್ತಾನ ಆಗುತ್ತೆ, ಶ್ರೀಲಂಕಾ ಆಗುತ್ತೆ ಎಂದು ತಮ್ಮ ಅಂಧ ಭಕ್ತರನ್ನು ಮೋದಿ ನಂಬಿಸಿದ್ದರು.
ಒಂದೆರಡು ಉದ್ಯಮಿಗಳಿಗೆ ಸಾವಿರಾರು ಕೋಟಿ ಲಾಭ ಮಾಡಿ ಕೊಡುತ್ತಲೇ ಜನರಿಗೆ ಕೊಡುವ ಯೋಜನೆಗಳನ್ನು "ರೇವಡಿ" ಎಂದು ಲೇವಡಿ ಮಾಡಿದ್ದರು. ಅದನ್ನು ಅನುಸರಿಸಿ ರಾಜ್ಯ ಬಿಜೆಪಿ ನಾಯಕರೂ ಅಪಹಾಸ್ಯ ಮಾಡಿ ನಕ್ಕಿದ್ದರು. ಬಿಜೆಪಿಯ ಅಂಧ ಬೆಂಬಲಿಗರು ಹೋದಲ್ಲಿ ಬಂದಲ್ಲಿ ಗ್ಯಾರಂಟಿಗಳನ್ನು ತಮಾಷೆ ಮಾಡಿದ್ದೇ ಮಾಡಿದ್ದು. ರಾಜ್ಯ ದಿವಾಳಿ ಆಗುತ್ತೆ ಅಂತ ಹೇಳಿದ್ದೇ ಹೇಳಿದ್ದು.
ಅಷ್ಟೇ ಅಲ್ಲ. ಅವತ್ತು ಕಾಂಗ್ರೆಸ್ ಗ್ಯಾರಂಟಿಗಳ ಸ್ವರೂಪವನ್ನು ನೋಡಿಯೇ ದಿಗಿಲುಗೊಂಡಿದ್ದ ಬಿಜೆಪಿ, ಹೇಗಾದರೂ ಮಾಡಿ, ಅವು ಈಡೇರುವ ಗ್ಯಾರಂಟಿಗಳಲ್ಲ ಎಂದು ಜನರನ್ನೂ ನಂಬಿಸಲು ಯತ್ನಿಸಿತ್ತು. ಆದರೆ ಜನರು ಕಾಂಗ್ರೆಸ್ ಗ್ಯಾರಂಟಿಗಳನ್ನು ನಂಬಿ ಗೆಲ್ಲಿಸಿಯೂಬಿಟ್ಟರು. ಸೋತ ಬಿಜೆಪಿ ಅದೇ ಹತಾಶೆಯಲ್ಲಿ ಆಮೇಲೆಯೂ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತ್ತಲೇ ಇತ್ತು.
ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮೋದಿಯಿಂದ ಹಿಡಿದು ಬಿಜೆಪಿಯ ನಾಯಕರೆಲ್ಲ ಅವತ್ತು ಇಷ್ಟೆಲ್ಲ ಹುಯಿಲೆಬ್ಬಿಸಿದ್ದ ಮೋದಿ ಟೀಮಿನ ಅದೇ ಮಂದಿ, ಅದೇ ಬಿಜೆಪಿ ಈಗ ಮಾಡುತ್ತಿರುವುದೇನು?
ಬೇರೆ ದಾರಿ ಕಾಣದೆ ಅದೇ ಗ್ಯಾರಂಟಿಗಳಿಗೆ ತಮ್ಮ ಹೆಸರು ಸೇರಿಸಿ ಘೋಷಿಸುವ ಪರಿಸ್ಥಿತಿಗೆ ತಲುಪಿಬಿಟ್ಟರಲ್ಲವೆ ಬಿಜೆಪಿಯವರು ? ಇದು ನಿಜಕ್ಕೂ ಹೀನಾಯ ಸ್ಥಿತಿ ಅಲ್ವಾ ? . ಅವತ್ತು ಕಾಂಗ್ರೆಸ್ ಗ್ಯಾರಂಟಿಗಳನ್ನು "ರೇವಡಿ" ಎಂದು ಆಡಿಕೊಂಡಿದ್ದವರಿಗೆ ಇವತ್ತು ತಾವು ಅದನ್ನೇ ಘೋಷಿಸಬೇಕಾಗಿ ಬಂದಿರುವುದು ಎಂಥಾ ಸಂಕಟ ತಂದಿರಬಹುದಲ್ವಾ ?
ಕಾಂಗ್ರೆಸ್ ಅನ್ನೇ ಬೈದಾಡಿಕೊಂಡಿದ್ದವರಿಗೆ ಕಾಂಗ್ರೆಸ್ ಮಾದರಿ ಬಿಟ್ಟು ಬೇರೆ ಗತಿಯೇ ಇರದ ಸ್ಥಿತಿ ಬಂದುಬಿಟ್ಟಿತೆ?. ಬಿಜೆಪಿ ಬಿಡುಗಡೆ ಮಾಡಿರುವ ಛತ್ತೀಸ್ಘಡ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿನ ಅದರ ಭರವಸೆಗಳನ್ನು ನೋಡಿದ ಬಳಿಕ ಇಂಥ ಪ್ರಶ್ನೆಗಳನ್ನು ಕೇಳಲೇಬೇಕಾಗಿದೆ.
ಅಂದಹಾಗೆ, ಈ ಪ್ರಣಾಳಿಕೆಗೆ ಬಿಜೆಪಿ ಇಟ್ಟಿರುವ ಹೆಸರು, " ಮೋದಿ ಕಿ ಗ್ಯಾರಂಟಿ 2023". ಕನಿಷ್ಠ ಹೆಸರಲ್ಲಾದರೂ ಏನಾದರೂ ಹೊಸತನ ತರಲು ಆಗಲಿಲ್ವ ಬಿಜೆಪಿಗೆ ?.
ಪ್ರಣಾಳಿಕೆಯಲ್ಲಿ ಬಿಜೆಪಿಯ ಪ್ರಮುಖ ಭರವಸೆಗಳು ಏನಿವೆ ಎಂಬುದನ್ನು ನೋಡೋಣ.
1.ಎರಡು ವರ್ಷಗಳಲ್ಲಿ ಛತ್ತೀಸ್ಗಢದಲ್ಲಿ ಖಾಲಿ ಇರುವ ಒಂದು ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು.
2.ಬಡ ಕುಟುಂಬದ ಮಹಿಳೆಯರಿಗೆ ತಲಾ 500 ರೂ. ದರದಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆ.
3. ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಮಾಸಿಕ ಪ್ರಯಾಣ ಭತ್ಯೆ.
4.ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 18 ಲಕ್ಷ ಮನೆಗಳ ನಿರ್ಮಾಣ, ಘರ್ ಘರ್ ನಿರ್ಮಲ್ ಜಲ ಅಭಿಯಾನದಡಿ ಎರಡು ವರ್ಷಗಳಲ್ಲಿ ಪ್ರತಿ ಮನೆಗೆ ನಲ್ಲಿ ನೀರಿನ ಸಂಪರ್ಕ.
5.ದೀನದಯಾಳ್ ಉಪಾಧ್ಯಾಯ ಕೃಷಿ ಮಜ್ದೂರ್ ಯೋಜನೆ ಅಡಿಯಲ್ಲಿ ಭೂರಹಿತ ಕೃಷಿ ಕಾರ್ಮಿಕರಿಗೆ ವರ್ಷಕ್ಕೆ 10,000 ರೂ.
6. ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12,000 ರೂ. ಆರ್ಥಿಕ ನೆರವು.
7.ಕೃಷಿ ಉನ್ನತಿ ಯೋಜನೆಯಲ್ಲಿ ಪ್ರತಿ ಎಕರೆಗೆ 21 ಕ್ವಿಂಟಾಲ್ ಭತ್ತವನ್ನು ರೈತರಿಂದ ಪ್ರತಿ ಕ್ವಿಂಟಲ್ಗೆ 3100 ರೂ.ನಂತೆ ಖರೀದಿಸುವುದು.
8.ಅಯೋಧ್ಯೆಯ ರಾಮಮಂದಿರಕ್ಕೆ ರಾಜ್ಯದ ಜನರನ್ನು ಕರೆದುಕೊಂಡು ಹೋಗುವುದು.
9. ರಾಯಪುರದಲ್ಲಿ ಇನ್ನೋವೇಶನ್ ಹಬ್, 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಒದಗಿಸುವ ಭರವಸೆ
10. ಹೊಸ ಕೈಗಾರಿಕೆಗೆ ಶೇ.50ರಷ್ಟು ಸಹಾಯಧನದ ಭರವಸೆ
ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, 15 ವರ್ಷಗಳಲ್ಲಿ ಛತ್ತೀಸ್ಗಢ ಅನಾರೋಗ್ಯಕರ ಸ್ಥಿತಿಯಿಂದ ಉತ್ತಮ ರಾಜ್ಯವಾಗಿ ಪರಿವರ್ತನೆಯಾಗಿದೆ. ಛತ್ತೀಸ್ಗಢದ ಜನರು ಬದಲಾವಣೆ ತರಲಿದ್ದಾರೆ. ಛತ್ತೀಸ್ಗಢವನ್ನು ಬಿಜೆಪಿ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲಿದೆ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ಛತ್ತೀಸ್ಗಢ ಸರ್ಕಾರ ಜಾತೀಯತೆ ಮತ್ತು ತುಷ್ಟೀಕರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಛತ್ತೀಸ್ಗಢದ ಅಭಿವೃದ್ಧಿಗೆ ಭೂಪೇಶ್ ಬಘೇಲ್ ದೊಡ್ಡ ಅಡ್ಡಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೆಲ್ಲದರ ಮೂಲಕ ಮತ್ತೊಂದು ಕಸರತ್ತಿಗೆ ಬಿಜೆಪಿ ತಯಾರಾಗಿದೆ.
ಈಗ ಚುನಾವಣೆ ಎದುರಿಸುತ್ತಿರುವ ಪಂಚರಾಜ್ಯಗಳಲ್ಲಿ ಅದರೆದುರು ಇರುವುದು ಬರೀ ಆತಂಕ.
ಮಧ್ಯ ಪ್ರದೇಶ, ಛತ್ತೀಸ್ ಗಡ, ತೆಲಂಗಾಣಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಹೆಚ್ಚು ಎಂದು ಸಮೀಕ್ಷೆಗಳು ಹೇಳುತ್ತಿವೆ.
ಚುನಾವಣೆ ಮೂಲಕ ಗೆಲ್ಲಲಾಗದೇ ಇರುವಾಗ ಅಡ್ಡದಾರಿಯಿಂದ ಅಧಿಕಾರ ಕಸಿದು ಸರ್ಕಾರ ಸ್ಥಾಪಿಸುವುದನ್ನು ಚಾಳಿ ಮಾಡಿಕೊಂಡಿರುವ ಬಿಜೆಪಿಗೆ, ಪ್ರತಿಬಾರಿಯೂ ಜನರ ವಿರೋಧವನ್ನು ಆ ಕಾರಣಕ್ಕಾಗಿ ಕಟ್ಟಿಕೊಳ್ಳುವುದು ಸಾಧ್ಯವಿಲ್ಲ ಎನ್ನಿಸಿಬಿಟ್ಟಿದೆ. ಹಾಗಾಗಿಯೇ ಈಗ ಕಾಂಗ್ರೆಸ್ ಗ್ಯಾರಂಟಿಗಳನ್ನು ಅನುಸರಿಸಿ ಏನೇನೋ ಭರವಸೆಗಳನ್ನು ಕೊಟ್ಟಿದೆ.
ಆದರೆ ಮೋದಿಜಿ ಕಿ ಗ್ಯಾರಂಟಿಗಳಿಗೆ ಏನಾದರೂ ಗ್ಯಾರಂಟಿ ಇದೆಯೇ ?
ಈ ಹಿಂದೆ ಮೋದಿಜಿ ಅಧಿಕಾರಕ್ಕೆ ಬರುವ ಹೊತ್ತಲ್ಲಿ ಕೊಟ್ಟಿದ್ದ ಭರವಸೆಗಳು, ಕೊಚ್ಚಿಕೊಂಡಿದ್ದ ಬಡಾಯಿಗಳು ಒಂದೆರಡಲ್ಲ. ಆದರೆ ಯಾವುದನ್ನಾದರೂ ಅವರ ಸರ್ಕಾರ ಈಡೇರಿಸಿತಾ ಎಂದು ಕೇಳಿಕೊಂಡರೆ, ಉತ್ತರ - ಇಲ್ಲ. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿಯೂ, ವಿದೇಶದಲ್ಲಿರುವ ಭಾರತೀಯರ ಕಪ್ಪುಹಣ ಮರಳಿ ತರುವುದಾಗಿಯೂ ಕೊಚ್ಚಿಕೊಂಡಿತು ಬಿಜೆಪಿ.
ಆದರೆ, ನ ಖಾವೂಂಗಾ ನ ಖಾನೇ ದೂಂಗಾ ಎಂದು ಹೇಳಿದ್ದ ಮೋದಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಇನ್ನಿಲ್ಲದಷ್ಟು ಆರೋಪಗಳಿವೆ. ಆ ವಿಷಯದಲ್ಲಿ ಈ ಹಿಂದಿನ ಎಲ್ಲ ಸರಕಾರಗಳ ದಾಖಲೆ ಮುರಿದುಹಾಕಿದೆ ಮೋದಿ ಸರಕಾರ. ಅತ್ತ ಕಪ್ಪುಹಣವೂ ಬರಲಿಲ್ಲ.
ನೋಟ್ ಬ್ಯಾನ್ ಮಾಡಿ ಕಪ್ಪು ಹಣ ಸಂಪೂರ್ಣ ಬಂದ್ ಮಾಡುತ್ತೇವೆ , ಭಯೋತ್ಪಾದನೆ ನಿಲ್ಲಿಸುತ್ತೇವೆ, ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೇವೆ ಅಂದ್ರು ಮೋದೀಜಿ. ಏನಾದ್ರೂ ಆಯ್ತಾ ? ಪುಲ್ವಾಮದಂತಹ ಭಯಾನಕ ಭಯೋತ್ಪಾದಕ ದಾಳಿ ಆಗಿದ್ದು ಅದರ ಬಳಿಕವೇ ಅಲ್ವಾ ? ಕಪ್ಪು ಹಣ ಏನಾದ್ರೂ ಬಂದ್ ಆಯ್ತಾ ? ಇನ್ನು ಭ್ರಷ್ಟಾಚಾರದ ವಿಷಯ - ಅದನ್ನು ಮಾತಾಡದೇ ಇರೋದೇ ಲೇಸು.
ನೋಟ್ ಬ್ಯಾನ್ ಮೂಲಕ ದೇಶದ ಜನಸಾಮಾನ್ಯರ ಬದುಕನ್ನ ಕಂಗೆಡಿಸಿದ್ದಷ್ಟೇ ಮೋದಿ ಸರ್ಕಾರದ ಸಾಧನೆ. ಇಂದಿಗೂ ಅದಕ್ಕಾಗಿ ಬೆಲೆ ತೆರುತ್ತಿದ್ದಾರೆ ಈ ದೇಶದ ಕೆಳ ಮಧ್ಯಮ ವರ್ಗದ ಜನ. ರೈತರಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ.50ರಷ್ಟು ಲಾಭ ಗಳಿಸುವ ನೀತಿ ಘೋಷಿಸಲಾಯಿತು. ರೈತರ ಆದಾಯ ದುಪ್ಪಟ್ಟು ಮಾಡ್ತೇವೆ ಎಂದು ಹೇಳಲಾಯಿತು.
ಆದರೆ ಮಾಡಿದ್ದೇನು ? ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ತೀವ್ರ ಆಕ್ರೋಶ ಹಾಗು ಸುದೀರ್ಘ ಹೋರಾಟದ ಬಳಿಕ ಅದನ್ನು ಹಿಂಪಡೆಯಿತು ಮೋದಿ ಸರಕಾರ. ವೈದ್ಯಕೀಯ ವಿಮೆ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಎಂದೆಲ್ಲ ಹೇಳಲಾಯಿತು. ಈ ದೇಶದ ಅರೋಗ್ಯ ವ್ಯವಸ್ಥೆ ಮೋದೀಜಿ ಬಂದ ಮೇಲೆ ಅದೆಷ್ಟು ಉದ್ಧಾರ ಆಗಿದೆ ಎಂದು ಕೋವಿಡ್ ಸಂದರ್ಭದಲ್ಲಿ ಬಟಾ ಬಯಲಾಯಿತು. ಅಮಾಯಕ ಜನ ಹಾದಿ ಬೀದಿಗಳಲ್ಲಿ ಸಾಯುವ ಸ್ಥಿತಿ ಬಂತು. ಮೋದಿ ಸರಕಾರ ಕೂತು ನೋಡಿತು.
ಉತ್ಪಾದನಾ ವಲಯದ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಿ, ಇದರಿಂದ ದೇಶದಲ್ಲಿ ಕೋಟಿ ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದಿತು.
ಆದರೆ ಎಷ್ಟು ಉದ್ಯೋಗಗಳು ಸೃಷ್ಟಿಯಾದವು ? ನಲ್ವತ್ತು ವರ್ಷಗಳಲ್ಲೇ ಅತ್ಯಂತ ಹೆಚ್ಚು ನಿರುದ್ಯೋಗ ಪ್ರಮಾಣವನ್ನು ಈ ದೇಶ ಮೋದೀಜಿ ಅವಧಿಯಲ್ಲೇ ನೋಡಿತು. ಮೋದೀಜಿಯನ್ನು ನಂಬಿ ಓಟು ಹಾಕಿದ ಯುವಜನರಿಗೆ ಮೋದೀಜಿ ಪಕೋಡ ಮಾರುವುದೂ ಉದ್ಯೋಗವೇ ಅಲ್ವಾ ಅಂತ ಹೇಳಿ ಅವಮಾನ ಮಾಡಿದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನೀಡುವ ಭರವಸೆಗಳೆಲ್ಲ ಕೇವಲ ಭಾಷಣದ ಜುಮ್ಲಾಗಳು ಅಂತ ಹೇಳಿ ಅಮಿತ್ ಶಾ ಬಿಜೆಪಿ ಭಕ್ತರ ಗಾಯದ ಮೇಲೆ ಬರೆ ಎಳೆದು ಬಿಟ್ಟರು. ಈ ದೇಶದ ಪ್ರಧಾನಿ ಹಾಗು ಬಿಜೆಪಿ ತಾನು ಕೊಟ್ಟ ಭರವಸೆಗಳ ವಿಚಾರದಲ್ಲಿ ಎಷ್ಟು ಹಾಸ್ಯಾಸ್ಪದವಾಗಿ, ಎಷ್ಟು ಕ್ರೂರವಾಗಿ ನಡೆದುಕೊಂಡಿದೆ ಎಂಬುದಕ್ಕೆ ಇವೆಲ್ಲವೂ ಸಾಕ್ಷಿ. ಈಗ ಇವರಿಗೆ ಓಟು ಹಾಕಿದ, ಹಾಕಿಸಿದ ಯುವಜನರು ವಾಟ್ಸ್ ಆಪ್ ಗಳಲ್ಲಿ ದ್ವೇಷ, ಸುಳ್ಳುಗಳ ಮೆಸೇಜ್ ಗಳನ್ನು ಫಾರ್ವರ್ಡ್ ಮಾಡಿಕೊಂಡು ಕಾಲಹರಣ ಮಾಡುವ ಪರಿಸ್ಥಿತಿ ತಂದಿಟ್ಟಿದ್ದಾರೆ.
ಹಾಗಾಗಿ, ಮೋದಿಗಾಗಲೀ ಬಿಜೆಪಿಯವರಿಗಾಗಲೀ ಸುಮ್ಮನೆ ಭರವಸೆ ನೀಡುವುದು ಒಂದು ಚಾಳಿ. ನೀಡಿದ ಭರವಸೆಯನ್ನು ಈಡೇರಿಸುವ ಬಗ್ಗೆ ಅದು ಯಾವತ್ತೂ ತಲೆ ಕೆಡಿಸಿಕೊಂಡಿದ್ದೇ ಇಲ್ಲ. ಮತ್ತೊಂದು ಚುನಾವಣೆ ಎದುರಾದಾಗ ಮತ್ತೇನೋ ಆಮಿಷ ಹುಟ್ಟಿಸಿ, ಮರುಳು ಮಾಡುವ ಕಲೆ ಮಾತ್ರ ಅದಕ್ಕೆ ಚೆನ್ನಾಗಿಯೇ ಗೊತ್ತು.
ಇದೆಲ್ಲವೂ ಜನರಿಗೀಗ ಗೊತ್ತಾಗಿಹೋಗಿದೆ ಎಂಬುದೂ ಬಿಜೆಪಿಗೆ ತಿಳಿದಿದೆ. ಇಂಥ ಹೊತ್ತಲ್ಲಿ, ಕಾಂಗ್ರೆಸ್ ಜನರನ್ನು ಆಕರ್ಷಿಸಿದ ಹಾಗೆ ತಾನೂ ಅಂಥದೇ ಭರವಸೆಗಳನ್ನು ನೀಡಿ ಜನರನ್ನು ಸೆಳೆದುಕೊಳ್ಳೋಣ ಎಂಬ ತಂತ್ರ ಬಿಜೆಪಿಯದ್ದು. ಆದರೆ ಅದರ ಭರವಸೆಗಳೇ ಅದಕ್ಕೆ ಭಾರವಾದರೂ ಅಚ್ಚರಿಯಿಲ್ಲ. ಯಾಕೆಂದರೆ ಈಗಾಗಲೇ ಅದು ಕೊಟ್ಟಿರುವ ಅಸಂಖ್ಯ ಭರವಸೆಗಳ ಗತಿ ಏನಾಗಿದೆ ಎಂದು ಜನ ನೋಡಿದ್ದಾರೆ. ಹೀಗಿರುವಾಗ ಮೋದಿ ಗ್ಯಾರಂಟಿಗಳಿಗೆ ಬೆಲೆ ಇದೆಯೆ ?.