ಮೋದಿ ಮೂರನೇ ಅವಧಿಯ ಸಾಧ್ಯತೆ ಮತ್ತು ಭಾರತವನ್ನು ಕಾಡುತ್ತಿರುವ ಆತಂಕಗಳು
ʼದಿ ಗಾರ್ಡಿಯನ್ʼ ಲೇಖನದ ಸಾರಾಂಶ
ಪ್ರಧಾನಿ ನರೇಂದ್ರ ಮೋದಿ (PTI)
ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿನ ಗೆಲುವಿನ ಬಳಿಕ ಬಿಜೆಪಿಯ ಆತ್ಮವಿಶ್ವಾಸ ಹೆಚ್ಚಿದೆ. ಈ ಹ್ಯಾಟ್ರಿಕ್ ಗೆಲುವು 2024ರ ಗೆಲುವನ್ನು ಖಾತರಿಪಡಿಸಿದೆ ಎಂದು ಸ್ವತಃ ಮೋದಿ ಕೂಡ ಹೇಳಿಯಾಗಿದೆ. ಇದು, ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವ ತಯಾರಿಯಲ್ಲಿರುವಾಗಿನ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಚಾರ ಜೋರಾಗಿಯೇ ಶುರುವಾಗುವುದರ ಸೂಚನೆಯೂ ಆಗಿದೆ.
ದೇಶದ ಈಗಿನ ರಾಜಕೀಯ ಸನ್ನಿವೇಶದಲ್ಲಿ, ಮೋದಿ ಮತ್ತು ಬಿಜೆಪಿಯ ಗೆಲುವು ಮೇಲ್ನೋಟಕ್ಕೇ ಕಾಣಿಸುತ್ತಿರುವ ಸಾಧ್ಯತೆ ಎಂದೇ ರಾಜಕೀಯ ವಿಶ್ಲೇಷಣೆಗಳು ಹೇಳುತ್ತಿವೆ.
ಒಂದೆಡೆ ಬಿಜೆಪಿಯ ಹಿಂದೂ ರಾಷ್ಟ್ರೀಯತಾವಾದಿ ಅಜೆಂಡಾ, ಮತ್ತೊಂದೆಡೆ ರಾಜಕೀಯವಾಗಿ ಬಲಿಷ್ಠವಾಗಿರುವ ಪ್ರಧಾನಿಯ ಜನಪ್ರಿಯತೆ, ದೇಶದ – ಅದರಲ್ಲೂ ಹಿಂದಿ ಭಾಷಿಕ ಪ್ರದೇಶಗಳ ಬಹುಸಂಖ್ಯಾತ ಹಿಂದೂಗಳನ್ನು ಉತ್ತೇಜಿಸುತ್ತಿದೆ ಮತ್ತು ಮುಸ್ಲಿಮರು ವ್ಯಾಪಕ ಕಿರುಕುಳಕ್ಕೆ ತುತ್ತಾಗುವುದಕ್ಕೆ ಕಾರಣವಾಗಿದೆ.
2014ರಲ್ಲಿ ಮೋದಿ ಆಯ್ಕೆಯಾದ ಬಳಿಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ದೇಶದ ವ್ಯವಸ್ಥೆ ಬಿಜೆಪಿಯತ್ತ ಹೆಚ್ಚು ಒಲವು ತೋರುತ್ತಿದೆ. ಊಹಿಸಲಾಗದಷ್ಟು ಅಧಿಕಾರವನ್ನು ಹೊಂದಿರುವುದು, ಟೀಕಿಸುವ ಮಾಧ್ಯಮಗಳ ದಮನ, ನ್ಯಾಯಾಂಗೀಯ ಸ್ವಾತಂತ್ರ್ಯ ಮತ್ತು ಎಲ್ಲಾ ಬಗೆಯ ಸಂಸದೀಯ ವಿವೇಚನೆ ಮತ್ತು ಉತ್ತರದಾಯಿತ್ವದ ಹರಣ ಹಾಗೂ ರಾಜಕೀಯ ವಿರೋಧಿಗಳನ್ನು ಮಣಿಸಲು ಮತ್ತು ಜೈಲಿಗಟ್ಟಲು ಸರ್ಕಾರಿ ಸಂಸ್ಥೆಗಳ ದುರ್ಬಳಕೆ ಆರೋಪಗಳು ಅವರ ಮೇಲಿವೆ.
ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಾದೇಶಿಕ ವಿರೋಧ ಪ್ರಬಲವಾಗಿದ್ದರೂ, ರಾಷ್ಟ್ರೀಯ ಮಟ್ಟದಲ್ಲಿ ಅದು ವಿಘಟಿತ ಮತ್ತು ದುರ್ಬಲವಾಗಿದೆ. ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈಚಿನ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದೆಯಾದರೂ, ಅದು ಮೂರು ರಾಜ್ಯಗಳಲ್ಲಿ ಮಾತ್ರವೇ ಅಧಿಕಾರದಲ್ಲಿದೆ ಮತ್ತು ಆಂತರಿಕ ಕಚ್ಚಾಟದಿಂದ ಸೊರಗಿದೆ.
ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟದ ಉದ್ದೇಶದೊಂದಿಗೆ ಇತ್ತೀಚೆಗೆ ರಚನೆಯಾಗಿರುವ ಪ್ರಮುಖ ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ, ನಿರ್ಣಾಯಕ ವಿಚಾರಗಳಲ್ಲಿ ಇನ್ನೂ ಒಮ್ಮತ ಕಂಡುಕೊಳ್ಳಬೇಕಿದೆ.
ಇಂಥದೊಂದು ಸನ್ನಿವೇಶದಲ್ಲಿ ಬಿಜೆಪಿ ಗೆಲುವು ಬಹುತೇಕ ನಿರಾಯಾಸವಾಗಿರಲಿದೆ ಎಂದೇ ಪರಿಣಿತರು ಗ್ರಹಿಸುತ್ತಾರೆ.
ಈಗಾಗಲೇ ಬಿಜೆಪಿ ರಾಷ್ಟ್ರಾದ್ಯಂತ ಚುನಾವಣಾ ಪೂರ್ವತಯಾರಿಯಲ್ಲಿ ತೊಡಗಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಂಪನ್ಮೂಲಗಳನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸುವುದರ ವಿರುದ್ಧದ ಟೀಕೆಗಳ ಹೊರತಾಗಿಯೂ, ವಿಕಸಿತ ಭಾರತ ಸಂಕಲ್ಪ ಯಾತ್ರೆ ಹೆಸರಿನ ರೋಡ್ಶೋ ಆಯೋಜನೆಗಾಗಿ ದೇಶಾದ್ಯಂತ ಸಾವಿರಾರು ಸರ್ಕಾರಿ ಅಧಿಕಾರಿಗಳನ್ನು ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ನಿಯೋಜಿಸಲಿದೆ. ಕಳೆದ ಒಂಬತ್ತು ವರ್ಷಗಳಲ್ಲಿನ ಬಿಜೆಪಿಯ ಸಾಧನೆಗಳ ಬಗ್ಗೆ ಅವರು ಹೇಳಬೇಕಿದೆ.
ರಕ್ಷಣಾ ಸಚಿವಾಲಯ 822 ಸೆಲ್ಫಿ ಪಾಯಿಂಟ್ಗಳ ಸ್ಥಾಪನೆಗೆ ಸೂಚಿಸಿದೆ. ಯುದ್ಧ ಸ್ಮಾರಕಗಳು, ರಕ್ಷಣಾ ಮ್ಯೂಸಿಯಂಗಳು, ರೈಲು ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳಲ್ಲಿ ಇವನ್ನು ಸ್ಥಾಪಿಸಬೇಕಿದ್ದು, ಅಲ್ಲಿ ಜನರು ಮೋದಿ ಕಟೌಟ್ನೊಂದಿಗೆ ಫೋಟೋ ತೆಗೆದುಕೊಳ್ಳಬಹುದಾಗಿದೆ.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಬಿಜೆಪಿಯ ಇತ್ತೀಚಿನ ಗೆಲುವು ಮೋದಿ ಜನಪ್ರಿಯತೆಯನ್ನು ಮತ್ತೆ ತೋರಿಸುವಂತಿದೆ. ವಿಧಾನಸಭೆ ಚುನಾವಣೆಗಳು ಪ್ರಧಾನಿಗೆ ಹೆಚ್ಚು ಸಂಬಂಧವಿಲ್ಲದಿರುವಾಗಲೂ, ಸ್ಥಳೀಯ ನಾಯಕರ ಬದಲಾಗಿ ಮತ್ತು ಪ್ರಚಾರದ ಮುನ್ನೆಲೆಯಲ್ಲಿ ಮೋದಿಯನ್ನೇ ತೋರಿಸುವುದು ಬಿಜೆಪಿಯ ಕಾರ್ಯತಂತ್ರವಾಗಿದೆ. ಅಲ್ಲಿ ಮೋದಿ ಜನರನ್ನುದ್ದೇಶಿಸಿ ಮಾತನಾಡಲು ರ್ಯಾಲಿಗಳಲ್ಲಿ ನೇರವಾಗಿ ಪಾಲ್ಗೊಳ್ಳುತ್ತಾರೆ ಮತ್ತು ಬಿಜೆಪಿ ಎಂದರೆ ತಾನೇ ಎಂದು ತೋರಿಸಿಕೊಳ್ಳುತ್ತಾರೆ.
ಮೋದಿಯ ಈ ಪ್ರಚಾರ ಭಾಷಣಗಳಲ್ಲಿ ಬಿಜೆಪಿಯ ಅಭಿವೃದ್ಧಿ ಯೋಜನೆಗಳ ಬಗ್ಗೆ ನೀಡಲಾಗುವ ಒತ್ತು ಮತ್ತು ರಾಷ್ಟ್ರೀಯತಾವಾದಿ, ಕೋಮುವಾದಿ ಪ್ರತಿಪಾದನೆಗಳು, ಬಿಜೆಪಿ ರಾಷ್ಟ್ರಮಟ್ಟದಲ್ಲಿ ಚುನಾವಣೆಯನ್ನು ಹೇಗೆ ಎದುರಿಸಲು ಉದ್ದೇಶಿಸಿದೆ ಎಂಬುದರ ಒಂದು ಚಿತ್ರವನ್ನು ನೀಡುತ್ತವೆ.
ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸುವಲ್ಲಿ – ಅಂತರರಾಷ್ಟ್ರೀಯ ರಾಜಕೀಯದಲ್ಲಾಗಲಿ ಅಥವಾ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಕಾರಣವಾಗಿರುವ ಚಂದ್ರಯಾನ ಯೋಜನೆಯಂಥ ವಿಚಾರದಲ್ಲಾಗಲಿ – ಮೋದಿಯ ಪಾತ್ರವನ್ನು ಬಿಂಬಿಸುವುದು ಕೂಡ ಇಲ್ಲಿ ಪ್ರಮುಖವಾಗಿರುತ್ತದೆ.
ಮತಗಳನ್ನು ಸೆಳೆಯಲು ಬಿಜೆಪಿ ಹಿಂದುತ್ವವನ್ನು ಬಳಸಿ ಆಟವಾಡುವುದು ಹೆಚ್ಚಿದೆ. ಉತ್ತರ ಭಾರತದ ರಾಜ್ಯಗಳಲ್ಲಿನ ಇತ್ತೀಚಿನ ಚುನಾವಣಾ ಪ್ರಚಾರಗಳು ತಾವು ಕಂಡ ಅತ್ಯಂತ ಧಾರ್ಮಿಕ ಧ್ರುವೀಕರಣದ ನಿದರ್ಶನಗಳಾಗಿದ್ದವು ಎಂದು ರಾಜಕೀಯ ತಜ್ಞ ಅಸಿಮ್ ಅಲಿ ಹೇಳುತ್ತಾರೆ.
ರಾಜಸ್ಥಾನದಲ್ಲಿ, ಕಾಂಗ್ರೆಸ್ ಪಕ್ಷ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದೆ ಮತ್ತು ಮುಸ್ಲಿಮರ ಓಲೈಕೆಯಲ್ಲಿ ತೊಡಗಿದೆ ಎಂಬುದನ್ನು ಬಿಂಬಿಸಲು ಹಿಂದೂ ಟೈಲರ್ ಕೊಲೆ ಘಟನೆಯನ್ನು ಮೋದಿ ಪದೇ ಪದೇ ಪ್ರಸ್ತಾಪಿಸಿದ್ದರು. ನಾಲ್ವರು ಹಿಂದೂ ಅರ್ಚಕರೂ ಸೇರಿದಂತೆ ಬಿಜೆಪಿಯ ಅಭ್ಯರ್ಥಿಗಳಲ್ಲಿ ಕೆಲವರು ಅತ್ಯಂತ ತೀವ್ರ ಹಿಂದುತ್ವದ ಪ್ರತಿಪಾದಕರಾಗಿದ್ದರು. ಆದರೆ ಮುಸ್ಲಿಮರು ಇರಲಿಲ್ಲ. ಬುಡಕಟ್ಟು ಪ್ರಾಬಲ್ಯದ ರಾಜ್ಯವಾದ ಛತ್ತೀಸ್ಗಢದಲ್ಲಿ, ಬುಡಕಟ್ಟು ಜನರನ್ನು ಹಿಂದೂ ಧರ್ಮದಿಂದ ದೂರವಾಗಿಸುವ ಬಲವಂತದ ಮತಾಂತರ ಆರೋಪವನ್ನು ಬಿಜೆಪಿ ಮುಂದೆ ಮಾಡಿತ್ತು.
ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದಾಗ ಭಾರೀ ಅಧಿಕಾರ ವಿರೋಧಿ ಅಲೆಯ ಹಿನ್ನೆಲೆಯಿತ್ತು. ಆದರೆ 2019ರಲ್ಲಿ ಅವರ ಮರು ಆಯ್ಕೆಗೆ ಕಾರಣವಾದದ್ದು ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ಟ್ರೈಕ್. ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ನಡೆದ ಭಯೋತ್ಪಾದಕ ದಾಳಿ ಭಾರತೀಯ ಯೋಧರನ್ನು ಬಲಿ ತೆಗೆದುಕೊಂಡ ಬಳಿಕ ನಡೆದ ಆ ದಾಳಿ ಮೋದಿ ಪರವಾಗಿ ರಾಷ್ಟ್ರೀಯ ಭದ್ರತೆ ಭಾವನೆಯ ಅಲೆ ಏಳುವುದಕ್ಕೆ ಕಾರಣವಾಗಿತ್ತು.
ಹಾಗಿದ್ದೂ, ಬಿಜೆಪಿ 2019ರಲ್ಲಿ ಗಳಿಸಿದ ಅದೇ ರೀತಿಯ ಬಹುಮತದ ಗೆಲುವನ್ನು ಪಡೆದೀತೆ ಎಂಬುದು ಸ್ಪಷ್ಟವಾಗಿಲ್ಲ. ಬಿಹಾರ ಮತ್ತು ಮಹಾರಾಷ್ಟ್ರದಂತಹ ಕೆಲವು ನಿರ್ಣಾಯಕ ರಾಜ್ಯಗಳಲ್ಲಿ ಅದರ ನೆಲೆ ಅನಿಶ್ಚಿತವಾಗಿದೆ ಮತ್ತು ಆರ್ಥಿಕ ಸಮಸ್ಯೆಗಳು, ವಿಶೇಷವಾಗಿ ನಿರುದ್ಯೋಗ, ಹಣದುಬ್ಬರದಂಥ ವಿಚಾರಗಳು ಬಿಜೆಪಿಗೆ ವಿರುದ್ಧವಾದ ಪರಿಣಾಮ ತರಬಹುದು.
ಹಿಂದೂ-ಮುಸ್ಲಿಂ ವಿಭಜನೆಯಂತೂ ಕನಿಷ್ಠಪಕ್ಷ ಹಿಂದಿ ಹಾರ್ಟ್ಲ್ಯಾಂಡ್ ನಲ್ಲಿ ಪ್ರಬಲ ವಿಚಾರವಾಗಲಿದೆ ಎಂಬ ಆತಂಕವನ್ನು ಅಸಿಮ್ ಅಲಿ ಸೇರಿದಂತೆ ಹಲವಾರು ರಾಜಕೀಯ ಪರಿಣತರು ವ್ಯಕ್ತಪಡಿಸುತ್ತಾರೆ.
ಹಿಂದೂ-ಮುಸ್ಲಿಂ ವಿಚಾರ ಎಷ್ಟು ಸಾಮಾನ್ಯವಾಗಿಬಿಟ್ಟಿದೆ ಎಂದರೆ, ಅದು ರಾಜಕೀಯ ಪ್ರಚಾರದ ಭಾಗವಾಗಿ ಮಾತ್ರ ಉಳಿಯದೆ, ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮ, ವಾಟ್ಸಾಪ್ನಲ್ಲಿ ಜನರು ನೋಡುವ ಸಂದೇಶಗಳಲ್ಲೂ ತುಂಬಿಕೊಂಡಿದೆ. ಬಿಜೆಪಿಯವರು ಅದನ್ನು ಯಾವಾಗ ಬೇಕಾದರೂ ತಳಮಟ್ಟದಲ್ಲಿ ಬಳಸಿಕೊಳ್ಳುತ್ತಾರೆ. ಮೋದಿ ಮತ್ತಿತರ ಹಿರಿಯ ಬಿಜೆಪಿ ನಾಯಕರಿಂದ ಒಂದು ಅಥವಾ ಎರಡು ಘೋಷಣೆಗಳು ಬಂದರೂ ಮುಂದಿನ ಪರಿಣಾಮಗಳಿಗೆ ಅದು ಸಾಕಾಗುತ್ತದೆ ಎನ್ನುತ್ತಾರೆ ಅಲಿ.
ಈಗಂತೂ ಬಿಜೆಪಿಯ ಪಾಲಿಗೆ ಬಹು ಮುಖ್ಯ ವಿಚಾರವೆಂದರೆ, ರಾಮಮಂದಿರ. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಅದು ಹಿಂದೂ ರಾಷ್ಟ್ರೀಯತಾವಾದಿ ಚಳುವಳಿಯ ಕೇಂದ್ರಬಿಂದುವಾಗಿದ್ದು, ಈ ತಿಂಗಳಲ್ಲಿ ಮೋದಿ ಉದ್ಘಾಟಿಸಲಿರುವುದು ರಾಷ್ಟ್ರೀಯ ಕಾರ್ಯಕ್ರಮವಾಗಿ ಬಿಂಬಿತವಾಗಲಿದೆ.
ಮೋದಿ ಮೂರನೇ ಅವಧಿ ಭಾರತದ ಪಾಲಿಗೆ ಏನಾಗಲಿದೆ ಎಂಬುದರತ್ತ ನೋಡಿದರೆ, ಅದು ಮತ್ತೊಂದು ಭಾರೀ ಬಹುಮತದ ಗೆಲುವಾದರಂತೂ ಅತ್ಯಂತ ಕಳವಳಕಾರಿ ಎಂದು ಕೆಲವು ವಿಶ್ಲೇಷಕರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಆತಂಕ ವ್ಯಕ್ತಪಡಿಸುತ್ತಾರೆ. ದೇಶ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಎಂದೆಲ್ಲ ಬಿಜೆಪಿಯ ಜನರು ಹೇಳಿದರೆ, ಪ್ರಜಾಪ್ರಭುತ್ವದ ನಿರಂತರ ನಾಶ ಮತ್ತು 20 ಕೋಟಿಗೂ ಅಧಿಕ ಮುಸ್ಲಿಂ ಅಲ್ಪಸಂಖ್ಯಾತರ ಹಕ್ಕುಗಳ ಪಾಲಿಗೆ ಅಪಾಯ ಎಂಬ ತಳಮಳ ಇತರರದ್ದಾಗಿದೆ.
ಅಮೆರಿಕದ ಬ್ರೌನ್ ವಿಶ್ವವಿದ್ಯಾನಿಲಯದ ಸಮಕಾಲೀನ ದಕ್ಷಿಣ ಏಷ್ಯಾ ಕೇಂದ್ರದ ನಿರ್ದೇಶಕ ಅಶುತೋಷ್ ವರ್ಷ್ನಿ ಕೂಡ ಮುಸ್ಲಿಮರ್ ಹಕ್ಕುಗಳು ದಾಳಿಗೊಳಗಾಗುವುದು ಮುಂದುವರಿಯಲಿದೆ ಎಂಬ ಆತಂಕವನ್ನೇ ವ್ಯಕ್ತಪಡಿಸುತ್ತಾರೆ.
19ನೇ ಶತಮಾನದ ಕೊನೆಯಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ದಕ್ಷಿಣ ಅಮೆರಿಕದ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದ್ದ, ಜನಾಂಗೀಯ ಆಧಾರದ ಮೇಲೆ ಕಪ್ಪು ಜನರ ಹಕ್ಕುಗಳನ್ನು ಕಸಿದುಕೊಂಡಿದ್ದ ಜಿಮ್ ಕ್ರೌ ಕಾನೂನಿನಂಥದೇ ಪರಿಸ್ಥಿತಿ ಮೋದಿ ಮೂರನೇ ಅವಧಿಯಲ್ಲಿ ಭಾರತದಲ್ಲಿ ತಲೆದೋರಬಹುದು ಎಂದು ವರ್ಷ್ನಿ ಎಚ್ಚರಿಸಿದ್ದಾರೆ.
ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಿಮ್ ಕ್ರೌ ಶೈಲಿಯ ಹಿಂದೂ ರಾಷ್ಟ್ರೀಯತಾವಾದಿ ದರ್ಪದ ಸನ್ನಿವೇಶವೇ ಕಾಣಿಸಲಿದೆ. ಅದು ಹಿಂದೂ ಪ್ರಾಬಲ್ಯಕ್ಕೆ ಕಾರಣವಾಗುತ್ತೆ, ಮುಸ್ಲಿಮರ ಸಮಾನತೆಯನ್ನು ಕಸಿದುಕೊಳ್ಳುತ್ತದೆ ಮತ್ತು ಅಂತಿಮವಾಗಿ ಮುಸ್ಲಿಮರ ಮತದಾನದ ಹಕ್ಕನ್ನೇ ತೆಗೆದುಹಾಕುತ್ತದೆ ಎಂಬುದು ವರ್ಷ್ನಿ ಪ್ರತಿಪಾದನೆ.
ಇಂಥ ಆತಂಕ ಕಾಡುತ್ತಿರುವಾಗ, ಭಾರತದಲ್ಲಿ ಯಾರೇ ಅಲ್ಪಸಂಖ್ಯಾತರು ತಾರತಮ್ಯಕ್ಕೆ ಒಳಗಾಗಿದ್ದಾರೆ ಎಂಬುದಕ್ಕೆ ಒಂದೇ ಒಂದು ಉದಾಹರಣೆಯೂ ಸಿಗುವುದಿಲ್ಲ ಎಂದು ಬಿಜೆಪಿಯವರು ಹೇಳುವುದು ಮಾತ್ರ ನಿಂತಿಲ್ಲ.