‘‘ಶೂನ್ಯ ಸಾಧನೆಯ ಬಿಜೆಪಿಯವರು ಸಾಲ ಮಾಡುವುದರಲ್ಲಿ ನಿಪುಣರು’’: ರಾಮಲಿಂಗಾ ರೆಡ್ಡಿ
ಸಂದರ್ಶನ
ನಿಮ್ಮ ಇಲಾಖೆಯ ಶಕ್ತಿ ಯೋಜನೆ ನಿಮ್ಮ ಗ್ಯಾರಂಟಿಗಳಲ್ಲಿ ಮೊದಲನೆಯದಾಗಿ ಜಾರಿಯಾದದ್ದು. ಏನೆನ್ನಿಸುತ್ತದೆ ಈ ಸಂದರ್ಭದಲ್ಲಿ?
ರಾಮಲಿಂಗಾ ರೆಡ್ಡಿ: ನಮ್ಮ ಸರಕಾರ ಬಂದಿದ್ದು ಮೇ 20ಕ್ಕೆ. 25ರಂದು ಖಾತೆ ಹಂಚಿಕೆ ಆಯಿತು. ಜೂನ್ 11ಕ್ಕೆ ಶಕ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬರೀ 15 ದಿವಸದಲ್ಲಿಯೇ ಪೂರ್ವತಯಾರಿ ಮಾಡಿಕೊಂಡೆವು. ಈವರೆಗೆ ಶಾಲಾ ಮಕ್ಕಳೂ ಸೇರಿ 43 ಕೋಟಿಗೂ ಹೆಚ್ಚು ಮಹಿಳೆಯರು ನಮ್ಮ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. ನಿತ್ಯ ಇಷ್ಟು ಮಹಿಳೆಯರು ಪ್ರಯಾಣಿಸುತ್ತಾರೆ ಎಂದು ನಾವೂ ಅಂದಾಜು ಮಾಡಿರಲಿಲ್ಲ. ಅದಕ್ಕೂ ಮೊದಲು ಸರಾಸರಿ 84 ಲಕ್ಷ ಜನ ಪ್ರಯಾಣ ಮಾಡುತ್ತಿದ್ದರು. ಶಕ್ತಿ ಯೋಜನೆ ಬಂದ ಮೇಲೆ 1 ಕೋಟಿ 10 ಲಕ್ಷದವರೆಗೂ ಜನರು ಓಡಾಡುತ್ತಿದ್ದಾರೆ. ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಪ್ರಯಾಣ ಮಾಡುವವರಲ್ಲಿ ಪುರುಷರಿಗಿಂತ ಹೆಣ್ಣುಮಕ್ಕಳು ಜಾಸ್ತಿ.
ಈ ನಡುವೆ ಶಕ್ತಿ ಯೋಜನೆ ನಿಲ್ಲಿಸುತ್ತಾರೆ ಎಂಬ ವದಂತಿ ಹಬ್ಬಿತು. ಗ್ರಾಮೀಣ ಭಾಗದಲ್ಲಿಯೂ ಅಂಥದೊಂದು ಆತಂಕ ಶುರುವಾಗಿತ್ತು. ಈ ವದಂತಿ ಬಗ್ಗೆ?
ರಾಮಲಿಂಗಾ ರೆಡ್ಡಿ: ಶಕ್ತಿ ಕಾರ್ಯಕ್ರಮ ಪ್ರಾರಂಭ ಮಾಡುವ ಮೊದಲೇ, ನಾವು ಅದರ ಬಗ್ಗೆ ಘೋಷಣೆ ಮಾಡಿದಾಗಲೇ ಬಿಜೆಪಿಯವರು ಅದನ್ನು ಸುಳ್ಳು ಎಂದಿದ್ದರು. ಹೀಗೆ ಉಚಿತ ಪ್ರಯಾಣ ಸೌಲಭ್ಯ ಕೊಟ್ಟರೆ ಕಡೆಗೆ ಸಂಬಳಕ್ಕೆ, ಡೀಸೆಲ್‌ಗೂ ಹಣವಿರುವುದಿಲ್ಲ ಎಂದೆಲ್ಲ ಅಪಪ್ರಚಾರ ಮಾಡಿದ್ದರು. ಮಹಿಳೆಯರಿಗೆ ಉಚಿತ ಪ್ರಯಾಣ ಎಂಬುದನ್ನು ವಿರೋಧ ಪಕ್ಷದಲ್ಲಿದ್ದ ಇವರು ಮಾಡಿ ಎನ್ನಬೇಕಿತ್ತು. ಇಲ್ಲವೇ ಚುನಾವಣೆ ವೇಳೆಯೇ, ಅವರ ಪ್ರಣಾಳಿಕೆಯಲ್ಲಿಯೂ ಹೇಳಬೇಕಿತ್ತು.
ಸಾರಿಗೆ ನಿಗಮಗಳು ನಷ್ಟದಲ್ಲಿರುವ ವರದಿಯಿದೆ. 250 ಕೋಟಿ ರೂ. ಬಿಡುಗಡೆ ಮಾಡಬೇಕಿದ್ದಲ್ಲಿ ಮೊದಲ ಹಂತದಲ್ಲಿ 125 ಕೋಟಿ ರೂ. ಬಿಡುಗಡೆ ಮಾಡಿದ್ದೀರಿ. ರೂ. 11 ಸಾವಿರ ಕೋಟಿಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಈ ಕಡೆಗೆ ತೆಗೆದುಕೊಂಡಿದ್ದೀರಿ. ಬಿಜೆಪಿಯವರು ಹೇಳುತ್ತಿರುವುದರಲ್ಲಿ ಸ್ವಲ್ಪ ಸತ್ಯ ಇದೆ ಎನ್ನಿಸುವುದಿಲ್ಲವೆ?
ರಾಮಲಿಂಗಾ ರೆಡ್ಡಿ: ನಾಲ್ಕೂ ನಿಗಮಗಳು ನಷ್ಟದಲ್ಲಿವೆ. ನಾನು ಹಿಂದೆ ನಾಲ್ಕು ವರ್ಷ ನಾಲ್ಕು ತಿಂಗಳು ಸಾರಿಗೆ ಸಚಿವನಾಗಿದ್ದೆ. 2015-16ರಲ್ಲಿ ಸ್ವಲ್ಪ ಲಾಭ ಬಂದಿತ್ತು. ಆಮೇಲೆ ನಷ್ಟ ಆಗಿದೆ. ಸಾರಿಗೆ ಸಂಸ್ಥೆಗಳನ್ನು ನಮ್ಮ ರಾಜ್ಯ ಮಾತ್ರವಲ್ಲ, ದೇಶ ಮಾತ್ರವಲ್ಲ, ಇಡೀ ಪ್ರಪಂಚದಲ್ಲೇ ಲಾಭದ ದೃಷ್ಟಿಯಿಂದ ನಡೆಸುವುದಿಲ್ಲ. ಲಾಭ ಇಟ್ಟುಕೊಂಡು ನಡೆಸಲು ಖಾಸಗಿಯವರಿದ್ದಾರೆ. ಕರ್ನಾಟಕದಲ್ಲಿ 25 ಸಾವಿರ ಹಳ್ಳಿಗಳಿವೆ. ಅವುಗಳಲ್ಲಿ 300ರಿಂದ 400 ಹಳ್ಳಿಗಳನ್ನು ಬಿಟ್ಟರೆ ಉಳಿದೆಲ್ಲ ಕಡೆಗೂ ಸಾರಿಗೆ ಸೌಲಭ್ಯ ಕೊಟ್ಟಿದ್ದೇವೆ. ಖಾಸಗಿಯವರು ನಷ್ಟವಾದರೆ ಅಲ್ಲಿಗೆ ಬಸ್ ಓಡಿಸುವುದಿಲ್ಲ. ಆದರೆ ನಾವು ಸಾರ್ವಜನಿಕರ ಹಿತದೃಷ್ಟಿಯಿಂದ ಓಡಿಸುವುದರಿಂದ ಲಾಭ ನಷ್ಟದ ಪ್ರಶ್ನೆ ನೋಡಲು ಆಗುವುದಿಲ್ಲ. ಹತ್ತು ಜನ ಇದ್ದರೂ ನಾವು ಓಡಿಸಬೇಕು.
ಕೆಲವು ಭಾಗಗಳನ್ನು ಇನ್ನೂ ಕೆಎಸ್‌ಆರ್‌ಟಿಸಿ ಸಂಪರ್ಕಿಸಿಲ್ಲ. ನಿಮ್ಮ ಯೋಜನೆಯ ಲಾಭವನ್ನು ಹಲವರು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇದನ್ನು ಮತ್ತು ನೌಕರರ ಹುದ್ದೆಗಳನ್ನು ತುಂಬುವ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತೀರಿ?
ರಾಮಲಿಂಗಾ ರೆಡ್ಡಿ: ಯಾವುದೇ ಹಳ್ಳಿಯ ಒಂದು ಕಿ.ಮೀ. ಪಕ್ಕದಲ್ಲಿ ಹೋದರೂ ಆ ಹಳ್ಳಿಗೆ ಸಾರಿಗೆ ಇದೆ ಎಂದು ಅರ್ಥ. ಮಲೆನಾಡು ಮತ್ತು ಕರಾವಳಿಯಲ್ಲಿ ಹೆಚ್ಚು ಖಾಸಗಿಯವರಿದ್ದಾರೆ. ಅಂಥ ಕಡೆ ನಮ್ಮ ಬಸ್ಸುಗಳು ಸಹಜವಾಗಿಯೇ ಕಡಿಮೆ ಇರುತ್ತವೆ. ಬಿಎಂಟಿಸಿ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಏಕಸ್ವಾಮ್ಯ ಇದೆ. ಬಿಜೆಪಿ ಸರಕಾರ ನಾಲ್ಕೂ ನಿಗಮಗಳಿಂದ 4,100 ಕೋಟಿ ರೂ. ನಷ್ಟ ಮಾಡಿತ್ತು. 3,000 ಕೋಟಿ ರೂ. ನೆರವು ನೀಡಿದ್ದರು ಎಂಬ ಪ್ರಶ್ನೆ ಬೇರೆ. ಆದರೆ, ಟೀಕೆ ಮಾಡುವ ಮುಂಚೆ ಅವರ ಆಡಳಿತ ಹೇಗಿತ್ತು ಎಂಬುದನ್ನೂ ಅವರು ನೋಡಬೇಕು. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದವರು, ಜೂನ್ ತಿಂಗಳ ಪ್ರಾರಂಭದಲ್ಲಿಯೇ ಸಾರಿಗೆ ನೌಕರರಿಗೆ ಸಂಬಳ ಕೊಟ್ಟಿಲ್ಲ ಎಂದು ಟೀಕೆ ಮಾಡುತ್ತಾರೆ. ನಾವು ಸಮಯಕ್ಕೆ ಸರಿಯಾಗಿಯೇ ಈವರೆಗೆ ಸಂಬಳವನ್ನೆಲ್ಲ ಕೊಟ್ಟಿದ್ದೇವೆ. ಕೆಎಸ್‌ಆರ್‌ಟಿಸಿ ಯಾವತ್ತೂ ಒಂದನೇ ತಾರೀಕಿಗೇ ಸಂಬಳ ಕೊಡುತ್ತದೆ. ಬಿಎಂಟಿಸಿ 7ನೇ ತಾರೀಕಿಗೆ ಸಂಬಳ ಕೊಡುವ ಕ್ರಮವಿದೆ. ಕೊಡಲಾಗಿದೆ. ಕಲ್ಯಾಣ ಕರ್ನಾಟಕ ಮತ್ತು ವಾಯವ್ಯ ವಿಭಾಗಗಳು 15ರವರೆಗೆ ಕೊಡುತ್ತವೆ. ಆದರೆ ಬೊಮ್ಮಾಯಿಯವರ ಆಡಳಿತದಲ್ಲಿ ಈ ತಿಂಗಳ ಸಂಬಳವನ್ನು ಮುಂದಿನ ತಿಂಗಳ 25ರವರೆಗೂ ಕೊಡುತ್ತಿದ್ದರು. ನಿಗದಿತ ಸಮಯವೇ ಇರಲಿಲ್ಲ. ಆದರೆ ರಾಜಕೀಯವಾಗಿ ವಿರೋಧ ಮಾಡಬೇಕೆಂದು ಮಾಡುತ್ತಾರೆ.
ಹೊಸ ಬಸ್ ಕೊಳ್ಳುವ ಬದಲು ಇರುವ ಕೆಲವನ್ನು ದುರಸ್ತಿ ಮಾಡುವುದು, 13 ಸಾವಿರ ನೌಕರರ ನೇಮಕಾತಿ ಈ ವಿಚಾರದ ಬಗ್ಗೆ?
ರಾಮಲಿಂಗಾ ರೆಡ್ಡಿ: ನಮ್ಮಲ್ಲಿ ಈಗ 24 ಸಾವಿರ ಬಸ್‌ಗಳಿವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸ್ವಲ್ಪ ಜಾಸ್ತಿ. ಬೆಂಗಳೂರು ನಗರದಲ್ಲಿಯೇ ಸುಮಾರು 8 ಸಾವಿರ ಬಸ್‌ಗಳಿವೆ. ಇನ್ನೂ 1,900 ಬಸ್‌ಗಳು ಸೇರಲಿವೆ. ನಗರ ಪ್ರದೇಶದಲ್ಲಿ ಇಲೆಕ್ಟ್ರಿಕ್ ಬಸ್‌ಗಳಿಗೆ ಕೂಡ ಹೆಚ್ಚು ಒತ್ತು ಕೊಡುತ್ತಿದ್ದೇವೆ. ವಾಯವ್ಯ ಕರ್ನಾಟಕದಲ್ಲಿಯೂ 450 ಇಲೆಕ್ಟ್ರಿಕ್ ಬಸ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಒಟ್ಟಾರೆ 2016ರಿಂದ 16 ಸಾವಿರ ನೌಕರರು ನಿವೃತ್ತರಾಗಿದ್ದಾರೆ. ನಮ್ಮ ಉದ್ಯೋಗಿಗಳಲ್ಲಿ ಶೇ.90ರಷ್ಟು ಡ್ರೈವರ್‌ಗಳು, ಕಂಡಕ್ಟರ್‌ಗಳು ಮತ್ತು ಮ್ಯೆಕಾನಿಕ್‌ಗಳೇ ಇದ್ದಾರೆ. 7ವರ್ಷಗಳಲ್ಲಿ ಯಾವ ನೇಮಕಾತಿಯೂ ನಡೆದಿಲ್ಲ. ಬಸ್‌ಗಳ ವಿಚಾರದಲ್ಲಿಯೂ ಅಷ್ಟೆ. ಹಿಂದೆ ನಮ್ಮ ಸರಕಾರವಿದ್ದಾಗ ತೆಗೆದುಕೊಂಡಿದ್ದೆವು. ಅದಾದ ಮೇಲೆ ನಾಲ್ಕು ವರ್ಷ ಬಸ್ ಖರೀದಿಸಿಲ್ಲ. ಕೊನೆಯ ವರ್ಷ 4 ಸಾವಿರ ಬಸ್‌ಗಳನ್ನು ತೆಗೆದುಕೊಳ್ಳುವುದಕ್ಕೆ ತಯಾರಿ ನಡೆದಿತ್ತು. ಆದರೆ ರಸ್ತೆಗೆ ಯಾವುದೂ ಇಳಿಯಲಿಲ್ಲ. ಕೊರೋನ ನಂತರ ಅನೇಕ ನಿಗದಿತ ಕಾರ್ಯಕ್ರಮಗಳು ರದ್ದಾದವು. ಈಗ ನಾವು ಸುಮಾರು 5 ಸಾವಿರ ಬಸ್‌ಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಜೊತೆಗೆ ನಾಲ್ಕೂ ನಿಗಮಗಳಲ್ಲಿ ನೇಮಕಾತಿಯ ಬಗ್ಗೆ ಪ್ರಸ್ತಾಪ ಸರಕಾರಕ್ಕೆ ಕಳಿಸಲಾಗಿದೆ. ಕೊರೋನ ಸಮಯದಲ್ಲಿ ನೇಮಕಾತಿ ನಿಷೇಧ ಮಾಡಲಾಗಿತ್ತು. ಅದಕ್ಕಾಗಿ ಈಗ ಅನುಮತಿ ಹೊಸದಾಗಿ ಪಡೆಯಬೇಕಾಗಿದೆ.
ಶಕ್ತಿ ಯೋಜನೆ ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ಕ್ರಾಂತಿಕಾರಕ ಬದಲಾವಣೆ. ಅದಕ್ಕಾಗಿ ಅಭಿನಂದನೆ, ರಾಜಕೀಯಕ್ಕೆ ಬರುವುದಾದರೆ, ಚಂದ್ರಯಾನದ ವಿಚಾರವಾಗಿ ನೆಹರೂ ಕಾಲದಿಂದ ಏನೂ ಆಗಿಲ್ಲ, ನಾವೀಗ ಸಾಧಿಸಿದ್ದೇವೆ ಎಂದು ಬಿಜೆಪಿಯ ಅಶೋಕ್ ಹೇಳಿಕೆ ಕೊಟ್ಟರು. ಇದಕ್ಕೆ ಏನು ಪ್ರತಿಕ್ರಿಯೆ?
ರಾಮಲಿಂಗಾ ರೆಡ್ಡಿ: ಬಿಜೆಪಿಯವರಿಗೆ ವಿಜ್ಞಾನ, ಜ್ಞಾನ ಎಂಬುದೇ ಇಲ್ಲ. ಇಸ್ರೋ ಸಂಸ್ಥೆ ಪ್ರಾರಂಭ ಮಾಡಿದವರು ನೆಹರೂ ಅವರು. ಇಂದಿರಾ ಗಾಂಧಿಯವರ ಕಾಲದಲ್ಲಿ ಇಸ್ರೋ ಎಂಬ ನಾಮಕರಣ ಆಯಿತು. ಇಸ್ರೋ ಸಂಸ್ಥೆಗೆ ಇನ್ನೂ ಒತ್ತು ಕೊಟ್ಟವರು ರಾಜೀವ್ ಗಾಂಧಿ. ಬಿಜೆಪಿಯವರು ಮಾತನಾಡುತ್ತಾರೆ. ಸಾಧನೆ ಶೂನ್ಯ. ದೇಶದಲ್ಲಿ ಈಗಿರುವ ಸಾರ್ವಜನಿಕ ವಲಯದ ಸಂಸ್ಥೆಗಳನ್ನೆಲ್ಲ ಕಟ್ಟಿದ್ದು ನೆಹರೂ ಅವರೇ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ನಮ್ಮ ಬಜೆಟ್ ಎಷ್ಟಿತ್ತು ಎಂಬುದು ಕೂಡ ಟೀಕೆ ಮಾಡುವ ಬಿಜೆಪಿಯವರಿಗೆ ಗೊತ್ತಿಲ್ಲ. ಬರೀ 200 ಕೋಟಿ ರೂ. ಇತ್ತು. ಅಂಥ ಸಂದರ್ಭದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಹಮ್ಮಿಕೊಂಡು ದೇಶವನ್ನು ಈ ಮಟ್ಟಕ್ಕೆ ತಂದಿದ್ದು ಕಾಂಗ್ರೆಸ್ ಸರಕಾರ. ಬಿಜೆಪಿಯವರು ಸಾಲ ಮಾಡುವುದರಲ್ಲಿ ನಿಪುಣರು. 1947ರಿಂದ 2014ರವರೆಗೂ ನಮ್ಮ ದೇಶದ ಸಾಲ 52 ಲಕ್ಷ ಕೋಟಿ ರೂ. ಅಷ್ಟೆ. ಬಿಜೆಪಿಯವರು 9 ವರ್ಷದ ಆಡಳಿತದಲ್ಲಿ ಇನ್ನೂ 120 ಲಕ್ಷ ಕೋಟಿ ರೂ. ಹೊಸ ಸಾಲ ಮಾಡಿದ್ದಾರೆ. ಅಂಥವರು ಇಂಥ ಟೀಕೆ ಮಾಡುತ್ತಾರೆ.
ರಾಜ್ಯದಲ್ಲಿ ಈಗ ದೊಡ್ಡ ಚರ್ಚೆ ಆಗುತ್ತಿರುವುದು ‘ಆಪರೇಷನ್ ಹಸ್ತ’ದ ಬಗ್ಗೆ. ‘ಆಪರೇಷನ್ ಕಮಲ’ ಅನೈತಿಕ ಮಾರ್ಗ. ಅದರ ಬಗ್ಗೆ ಜನರಿಗೆ ಬೇಸರ ಇದೆ. ನೀವೀಗ ‘ಆಪರೇಷನ್ ಹಸ್ತ’ ಮಾಡಲು ಹೊರಟಿದ್ದೀರಿ. ಎಸ್.ಟಿ. ಸೋಮಶೇಖರ್ ನಿಮ್ಮನ್ನೆಲ್ಲ ಭೇಟಿಯಾಗುತ್ತಿದ್ದಾರೆ. ಅವರ ಕ್ಷೇತ್ರಕ್ಕೆ ಹೆಚ್ಚು ಅನುದಾನ ಸಿಗುತ್ತಿದೆ. ಪಕ್ಷಕ್ಕೆ ಬರುತ್ತಾರೆ ಎಂಬ ಮಾತಿದೆ. ಇದರ ಬಗ್ಗೆ?
ರಾಮಲಿಂಗಾ ರೆಡ್ಡಿ: ಬಿಜೆಪಿಯವರು ಎರಡು ಬಾರಿ ‘ಆಪರೇಷನ್ ಕಮಲ’ ಮಾಡಿದರು. ಅವರಿಗೆಲ್ಲ ಮಂತ್ರಿ ಸ್ಥಾನ ಕೊಟ್ಟರು. ಅವರ ಚುನಾವಣೆಯ ಖರ್ಚು ವೆಚ್ಚಗಳನ್ನೆಲ್ಲ ನೋಡಿಕೊಂಡರು. ಆಪರೇಷನ್ ಮಾಡುವಂಥ ಅವಶ್ಯಕತೆ ನಮಗಿಲ್ಲ. 135 ಸ್ಥಾನಗಳನ್ನು ಗೆದ್ದಿದ್ದೇವೆ. ಅವರಾಗಿಯೇ ಯಾರಾದರೂ ಬರುವುದಾದರೆ ನಾವೇಕೆ ಬೇಡ ಎನ್ನಬೇಕು?
ಲೋಕಸಭೆ ಚುನಾವಣೆಗೆ ಏನು ಗುರಿ ಇಟ್ಟುಕೊಂಡಿದ್ದೀರಿ?
ರಾಮಲಿಂಗಾ ರೆಡ್ಡಿ: ಕನಿಷ್ಠ 20 ಸ್ಥಾನ ಗೆಲ್ಲಬೇಕು ಎಂಬುದು ನಮ್ಮ ಪಕ್ಷದ ಗುರಿ. ಕಳೆದ ಬಾರಿ ಬಹಳ ಕಡಿಮೆಯಾಯಿತು. ಒಂದೇ ಒಂದು ಸ್ಥಾನ ಸಿಕ್ಕಿತು. ಕರ್ನಾಟಕದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯಿರುವಲ್ಲಿ ಕಾಂಗ್ರೆಸ್, ಜೆಡಿಎಸ್ ಎರಡಕ್ಕೂ ಲಾಭ ಇರುತ್ತದೆ. ನೇರ ಹಣಾಹಣಿ ಹೊತ್ತಲ್ಲಿ ಜೆಡಿಎಸ್‌ಗೂ ನಷ್ಟವಾಯಿತು, ಕಾಂಗ್ರೆಸ್‌ಗೂ ನಷ್ಟವಾಯಿತು. ಬಿಜೆಪಿಗೆ ಲಾಭವಾಯಿತು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಲ್ಲಿ ನಿಮ್ಮ ಮಗಳು ಆಕಾಂಕ್ಷಿ ಎಂಬ ಮಾಹಿತಿಗಳಿವೆ?
ರಾಮಲಿಂಗಾ ರೆಡ್ಡಿ: ನನ್ನ ಮಗಳು ಸ್ಪರ್ಧಿಸಬೇಕು ಎಂದೇನಿಲ್ಲ. ಪಕ್ಷದಲ್ಲಿ ಮಾತುಕತೆಗಳು ನಡೆಯುತ್ತಿವೆ. ಮಗಳಿಗೆ ಆಸಕ್ತಿ ಇದೆಯೋ ಇಲ್ಲವೋ ಎಂಬುದನ್ನೂ ನಾನು ಕೇಳಿಲ್ಲ.
ಬೆಂಗಳೂರು ದಕ್ಷಿಣ ಬಿಜೆಪಿಯ ಭದ್ರಕೋಟೆ. ಏನೆನ್ನಿಸುತ್ತದೆ ಆ ಕ್ಷೇತ್ರದ ಬಗ್ಗೆ?
ರಾಮಲಿಂಗಾ ರೆಡ್ಡಿ: ಬೆಂಗಳೂರು ದಕ್ಷಿಣದಲ್ಲಿ ಕೆಂಗಲ್ ಹನುಮಂತಯ್ಯ ನವರು 71ರಲ್ಲಿ ಗೆದ್ದಿದ್ದರು. ಅದಾದ ಬಳಿಕ ಗುಂಡೂರಾಯರು ಗೆದ್ದಿದ್ದರು. ಅದು ಬಿಟ್ಟರೆ ನಾವು ಅಲ್ಲಿ ಗೆದ್ದಿಲ್ಲ. ಆದರೆ ವಾತಾವರಣ ಹೀಗೆಯೇ ಇರುವುದಿಲ್ಲ. ಬದಲಾವಣೆ ರಾಜಕೀಯದಲ್ಲಿ ಆಗುತ್ತಿರುತ್ತದೆ. ಪ್ರಯತ್ನ ಮಾಡಬೇಕಿದೆ.
ಕರ್ನಾಟಕದ ಗ್ಯಾರಂಟಿ ಯೋಜನೆ ಲೋಕಸಭೆ ಚುನಾವಣೆಗೆ ಇಡೀ ದೇಶದಲ್ಲಿಯೇ ಒಂದು ಮಾಡೆಲ್ ಆಗಿ ಇಟ್ಟುಕೊಳ್ಳುವ ಯೋಚನೆ ಇದೆಯೆ?
ರಾಮಲಿಂಗಾ ರೆಡ್ಡಿ: ನಮ್ಮ ಗ್ಯಾರಂಟಿಗಳನ್ನು ಮಧ್ಯಪ್ರದೇಶದಲ್ಲಿ, ರಾಜಸ್ಥಾನದಲ್ಲಿ ಹೇಳತೊಡಗಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲಿ ಸೇರಿಸಲೂ ಬಹುದು. ಈ ಗ್ಯಾರಂಟಿಗಳು ಚುನಾವಣೆ ಸಂದರ್ಭದ ಆಶ್ವಾಸನೆ ಎಂಬುದು ಒಂದು. ಬೆಲೆ ಏರಿಕೆ, ಶಾಲಾ ಶುಲ್ಕ ಸೇರಿದಂತೆ ಎಲ್ಲವೂ ಹೆಚ್ಚಿರುವಾಗ ಆದಾಯ ಜಾಸ್ತಿಯಾಗದೆ ಇರುವುದರಿಂದ ಜನರಿಗೆ ನೆರವಾಗುವ ದೃಷ್ಟಿಯಿಂದ ತಂದಿರುವ ಕಾರ್ಯಕ್ರಮ ಇವು ಎಂಬುದು ಮತ್ತೊಂದು ವಿಚಾರ.
ನೀವು ರಾಜಕೀಯ ದ್ವೇಷ ಮಾಡುತ್ತಿದ್ದೀರಿ ಎಂಬುದು ಬಿಜೆಪಿಯವರ ಆರೋಪ. ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತಿದ್ದೀರಿ. ಇದೆಲ್ಲ ದ್ವೇಷದ ಕಾರಣದಿಂದ ಎಂಬುದು ಅವರ ಆರೋಪ. ಇದಕ್ಕೇನೆನ್ನುತ್ತೀರಿ?
ರಾಮಲಿಂಗಾ ರೆಡ್ಡಿ: ದ್ವೇಷ ಎಂಬ ಪ್ರಶ್ನೆಯೇ ಬರುವುದಿಲ್ಲ. ಸಬ್ ಇನ್‌ಸ್ಪೆಕ್ಟರ್ ಹಗರಣ ಅವರ ಕಾಲದಲ್ಲಿಯೇ ಆಯಿತು. ಈಗಲೂ ಐಜಿ ಒಬ್ಬರು ಜೈಲಿನಲ್ಲಿಯೇ ಇದ್ದಾರೆ. ಇನ್ನೂ ಅನೇಕರು ಜೈಲಿನಲ್ಲಿದ್ದಾರೆ. ಅದರ ಬಗ್ಗೆ ಎಸ್‌ಐಟಿ ಮಾಡುವುದರಲ್ಲಿ ತಪ್ಪೇನಿದೆ? ಇಂಜಿನಿಯರ್ ನೇಮಕ, ವೈದ್ಯರ ನೇಮಕ, ಉಪನ್ಯಾಸಕರ ನೇಮಕ ಎಲ್ಲದರಲ್ಲಿಯೂ ಮೋಸ ನಡೆದಿದೆ. ನೇಮಕ ಮಾಡುವುದಕ್ಕೆ ಪರೀಕ್ಷೆ ನಡೆಸುವಲ್ಲಿಂದಲೇ ಯಾರನ್ನು ಆಯ್ಕೆ ಮಾಡಬೇಕು ಎಂಬುದು ನಿರ್ಧಾರವಾಗಿರುತ್ತದೆ. ಅಲ್ಲಿಯೇ ಉತ್ತಮ ಅಂಕ ಹಾಕಿಸಿ, ಮೆರಿಟ್ ಎಂದು ತೋರಿಸಲಾಗುತ್ತದೆ. ಯಾರು ಪ್ರಾಮಾಣಿಕ ಪ್ರಯತ್ನ ಮಾಡಿ ಒಳ್ಳೆಯ ಅಂಕ ಪಡೆದಿರುತ್ತಾರೋ ಅವರಿಗೆ ಅನ್ಯಾಯವಾಗುತ್ತದೆ. ಇಂಥ ಮೋಸ ಇವರ ಅವಧಿಯಲ್ಲಿ ಆರಂಭವಾದದ್ದು. ಹಿಂದೆ ಯಾವತ್ತೂ ಹೀಗಿರಲಿಲ್ಲ.
ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿದರು. ನ್ಯಾ.ನಾಗಮೋಹನದಾಸ್ ನೇತೃತ್ವದಲ್ಲಿ ಸಮಿತಿಯನ್ನೂ ರಚನೆ ಮಾಡಿದ್ದೀರಿ. ಆ ಸಮಿತಿ ಟೂಲ್‌ಕಿಟ್ ಭಾಗ ಎಂದು ಸಿ.ಟಿ. ರವಿ ಹೇಳುತ್ತಾರೆ. ಗುತ್ತಿಗೆದಾರರನ್ನು ತನಿಖೆಯ ಭಯವೊಡ್ಡಿ ಸುಮ್ಮನೆ ಕೂರಿಸಲಾಗಿದೆ ಎಂಬುದು ಮತ್ತೊಂದು ಆರೋಪ. ಇದರ ಬಗ್ಗೆ?
ರಾಮಲಿಂಗಾ ರೆಡ್ಡಿ: ಗುತ್ತಿಗೆದಾರರಿಗೆ ಹಣ ಬಾಕಿ ಇದೆ. ಬೇಗ ಕೊಡಬೇಕು ಎನ್ನುವವರಲ್ಲಿ ನಾನೂ ಒಬ್ಬ. ಈಗಾಗಲೇ ರಚನೆಯಾಗಿರುವ ತಂಡ ವರದಿ ಕೊಟ್ಟ ಬಳಿಕ ಎಲ್ಲಿ ಸಮರ್ಪಕ ಕೆಲಸವಾಗಿದೆ, ಎಲ್ಲಿ ಆಗಿಲ್ಲ ಎಂಬುದನ್ನು ನೋಡಿ ಬಿಲ್ ಕೊಡಬೇಕಾಗುತ್ತದೆ. ವರದಿ ಬಾರದಿರುವುದರಿಂದ ಬಿಲ್ ಕೊಡುವ ಪ್ರಶ್ನೆಯೇ ಬರುವುದಿಲ್ಲ. ರಾಜಕೀಯ ಪಿತೂರಿಯಿಂದ ಹೀಗೆ ಆರೋಪ ಮಾಡಲಾಗುತ್ತಿದೆ.
ಬೆಂಗಳೂರು ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಬಹಳಷ್ಟು ಹಣ ಇಡಲಾಗಿದೆ. ಬೆಂಗಳೂರು ಈಗಾಗಲೇ ಅಭಿವೃದ್ಧಿಯಾಗಿದೆ, ಅದು ಅಗತ್ಯವಿರಲಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಬೇರೆ ಬೇರೆ ಕಡೆಗೆ ಅದನ್ನು ಕೊಡಬಹುದು, ನಗರೀಕರಣ ಮಾಡಬಹುದು ಎಂಬ ಮಾತುಗಳಿವೆ. ಇದರ ಬಗ್ಗೆ ಏನೆನ್ನಿಸುತ್ತದೆ?
ರಾಮಲಿಂಗಾ ರೆಡ್ಡಿ: ಬೆಂಗಳೂರು 800 ಚದರ ಕಿ.ಮೀ. ಇದೆ. ಹೊರವಲಯದಲ್ಲಿಯೇ ಸಾಕಷ್ಟು ಖಾಲಿ ಜಾಗವಿದೆ. ಹಾಗಿದ್ದರೂ ಕನಕಪುರ, ಸರ್ಜಾಪುರ, ಬನ್ನೇರುಘಟ್ಟ, ಹೊಸಕೋಟೆ, ತುಮಕೂರು ರಸ್ತೆ ಹೀಗೆ 20-25 ರಸ್ತೆಗಳು ಬೆಂಗಳೂರಿಗೆ ಬಂದು ಸೇರುತ್ತವೆ. ಉದ್ದಕ್ಕೂ ಅಪಾರ್ಟ್‌ಮೆಂಟ್‌ಗಳು, ಮನೆಗಳು, ಬಡಾವಣೆಗಳು, ವಿಲ್ಲಾಗಳು ಬೆಳೆಯುತ್ತಿವೆ. ಹಳೇ ವ್ಯಾಪ್ತಿಗೆ ಈಗ ಬೆಂಗಳೂರು ಸೀಮಿತವಲ್ಲ. ನಗರ ಜಿಲ್ಲೆ ದಾಟಿ ಬೆಂಗಳೂರು ಬೆಳೆಯುತ್ತಿದೆ. ಅಲ್ಲೆಲ್ಲ ಕುಡಿಯುವ ನೀರು, ರಸ್ತೆ ಮತ್ತಿತರ ಮೂಲಭೂತ ಸೌಲಭ್ಯ ಕೊಡಬೇಕು.
ನೀರು ಬಹಳ ಮುಖ್ಯ. ಮೇಕೆದಾಟು ಯೋಜನೆ ವಿಚಾರವಾಗಿ ನೀವೇ ಪಾದಯಾತ್ರೆ ಮಾಡಿದ್ದೀರಿ. ಇನ್ನೂ ಸರಿಯಾಗಿ ಒಪ್ಪಿಗೆ ಸಿಕ್ಕಿಲ್ಲ. ಯಾಕೆ ಹೀಗಾಗುತ್ತಿದೆ ಮೇಕೆದಾಟು ವಿಚಾರದಲ್ಲಿ?
ರಾಮಲಿಂಗಾ ರೆಡ್ಡಿ: ಅಲ್ಲಿ ನೀರು ಸಂಗ್ರಹ ಮಾತ್ರ. ವ್ಯವಸಾಯಕ್ಕೆ ಬಳಸುವುದಿಲ್ಲ. ಮಳೆ ಬಂದ ಸಂದರ್ಭದಲ್ಲಿ ನೂರಾರು ಟಿಎಂಸಿ ನೀರು ಹರಿದುಹೋಗುತ್ತದೆ. ಅದನ್ನು ಸಂಗ್ರಹಿಸುವುದಕ್ಕೆ ಮೇಕೆದಾಟು ಯೋಜನೆಗಾಗಿ ಒತ್ತಾಯಿಸುತ್ತಿದ್ದೇವೆ. ಸಂಗ್ರಹಿಸದಿದ್ದರೆ ನಮ್ಮ ಬಳಿ ನೀರೇ ಇರುವುದಿಲ್ಲ. ಸಂಗ್ರಹಿಸಿಟ್ಟುಕೊಂಡರೆ ಬೆಂಗಳೂರು ನಗರಕ್ಕೆ ಬಳಸಬಹುದು. ಬೆಂಗಳೂರು ಮತ್ತು ಸುತ್ತಮುತ್ತ ಸುಮಾರು 2 ಕೋಟಿ ಜನರು ಇರಬಹುದು. ಇದಕ್ಕಾಗಿ ನೀರು ಬೇಕು.
ಪರಿಷತ್ ಚುನಾವಣೆ ವಿಚಾರ. ಸುಧಾಮ್ ದಾಸ್ ಎಂಬವರು 2023ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಪಕ್ಷ ಸೇರುತ್ತಾರೆ. ಅವರನ್ನು ಪರಿಷತ್‌ಗೆ ನಾಮನಿರ್ದೇಶನ ಮಾಡಿದ್ದೀರಿ. ನಾಲ್ವರು ಹಿರಿಯ ಸದಸ್ಯರು ಇದನ್ನು ವಿರೋಧಿಸಿ ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಪಕ್ಷಕ್ಕಾಗಿ ದುಡಿದ ನೂರಾರು ಮಂದಿ ಇದ್ದಾರೆ. ಮುಸ್ಲಿಮ್ ಸಮುದಾಯಕ್ಕೆ ಅವಕಾಶ ಕೇಳಿದ್ದರು. ಅದೂ ಸಿಕ್ಕಿಲ್ಲ. ಯಾಕೆ ಈ ಥರದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ?
ರಾಮಲಿಂಗಾ ರೆಡ್ಡಿ: ಅವರ ತಂದೆ ಪುಟ್ಟದಾಸ್ ನಮ್ಮಲ್ಲಿಯೇ ಶಾಸಕರಾಗಿದ್ದರು. ಅವರು ಅಧಿಕಾರಿಯಾಗಿ ನಿವೃತ್ತರಾದ ಮೇಲೆ ರಾಜಕೀಯ ಸೇರಿದರು. ಪ್ರಚಾರ ಸಮಿತಿಗೆ ಸಹ ಅಧ್ಯಕ್ಷರೂ ಆಗಿದ್ದರು. ಅದು ಹೈಕಮಾಂಡ್ ತೀರ್ಮಾನ. ಬೇರೆಯವರಿಗೆ ಕೊಡಬಹುದಿತ್ತು ಎಂಬ ಅಭಿಪ್ರಾಯಗಳು ಇವೆ. ಮುಂದೆ ಅವಕಾಶ ಸಿಗುತ್ತದೆ.
ನಿಮ್ಮ ಇಲಾಖೆಯ ಕನಸುಗಳ ಬಗ್ಗೆ?
ರಾಮಲಿಂಗಾ ರೆಡ್ಡಿ: ನಮ್ಮಲ್ಲಿರುವ ಈಗಿನ ಜನಸಂಖ್ಯೆಗೆ ಈಗಿರುವ ಬಸ್‌ಗಳು ಸಾಲುತ್ತಿಲ್ಲ. ಕನಿಷ್ಠ 35 ಸಾವಿರ ಬಸ್‌ಗಳು ಬೇಕು. ಈಗಿರುವ ಬಸ್‌ಗಳ ಜೊತೆ ಇನ್ನು 10-12 ಸಾವಿರ ಬಸ್‌ಗಳ ಅಗತ್ಯವಿದೆ. ಗ್ರಾಮಾಂತರ ಸಾರಿಗೆಗೆ ಇನ್ನೂ ಹೆಚ್ಚು ಒತ್ತು ಕೊಡಬೇಕು. ಬಸ್ ನಿಲ್ದಾಣಗಳು ಸಾಕಷ್ಟಾಗಿವೆ. ನಗರ ಸಾರಿಗೆಗೂ ಅಷ್ಟೇ ಒತ್ತು ನೀಡಬೇಕಿದೆ. ಹಿಂದೆ ನಾನೇ ಪ್ರಾರಂಭ ಮಾಡಿದ್ದು. ಮಾಲಿನ್ಯ ಕಡಿಮೆ ಮಾಡುವ ಉದ್ದೇಶಕ್ಕೆ ಎಲೆಕ್ಟ್ರಿಕ್ ಬಸ್‌ಗಳಿಗೂ ಆದ್ಯತೆ ಕೊಡುತ್ತೇವೆ. ಉದ್ಯೋಗಿಗಳ ಯೋಗಕ್ಷೇಮ ನೋಡಿಕೊಳ್ಳುವುದು, ಅವರಿಗೆ ವಿಮೆ ಸೌಲಭ್ಯ ಅಲ್ಲದೆ, ಕಲ್ಯಾಣ ಯೋಜನೆಗಳು ಸಾಕಷ್ಟಿವೆ. ದೇಶದಲ್ಲಿನ ಅತ್ಯುತ್ತಮ ಸಾರಿಗೆ ಸಂಸ್ಥೆಗಳಲ್ಲಿ ನಮ್ಮ ನಾಲ್ಕೂ ಸಂಸ್ಥೆಗಳೇ ಉತ್ತಮವಾಗಿರುವುದು. ಕೆಎಸ್‌ಆರ್‌ಟಿಸಿ ಆರಂಭವಾದ ಮೇಲೆ ಸುಮಾರು 350 ಪ್ರಶಸ್ತಿಗಳು ಬಂದಿವೆ. ಅವುಗಳಲ್ಲಿ 204 ಪ್ರಶಸ್ತಿಗಳು ನಾನಿದ್ದ ನಾಲ್ಕು ವರ್ಷಗಳಲ್ಲಿಯೇ ಬಂದಿವೆ. ರಾಷ್ಟ್ರಮಟ್ಟದಲ್ಲಿ ನಮ್ಮ ಸಾರಿಗೆಗೆ ಒಳ್ಳೆಯ ಹೆಸರಿದೆ. ಇನ್ನೂ ಒಳ್ಳೆಯ ಹೆಸರು ಪಡೆಯುವ ದಿಕ್ಕಿನಲ್ಲಿ ಯೋಚನೆ ಮಾಡುತ್ತೇನೆ.