‘ಬನ್ ಸಲೂತ್’ ನಿರ್ಮಿಸಿದ ಸನ್ಯಾಸಿಗಳ ಸಾಮುದಾಯಿಕ ಅರಣ್ಯ
ಇತ್ತೀಚಿನ ದಿನಗಳಲ್ಲಿ ಪರಿಸರ ರಕ್ಷಣೆಯ ಬಗ್ಗೆ ಒಂದಿಷ್ಟು ಕಾಳಜಿ ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆ. ಕೆಲ ಸಂಘ-ಸಂಸ್ಥೆಗಳು, ಸಮುದಾಯಗಳು, ವ್ಯಕ್ತಿಗಳು ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹೊಸ ಹೊಸ ಮಾರ್ಗಗಳ ಬಗ್ಗೆ ತಿಳಿಯಲು ಉತ್ಸುಕರಾಗಿದ್ದಾರೆ. ಇದು ಒಂದು ಉತ್ತಮ ಬೆಳವಣಿಗೆ ಎನ್ನಬಹುದು.
ದಿನಾಂಕ 07-05-2023ರಂದು ಇದೇ ಅಂಕಣದಲ್ಲಿ ಪ್ರಕಟವಾಗಿದ್ದ ಕಾಗದ ತಯಾರಿಕೆಗೆ ರಿ-ಲೀಫ್ ಲೇಖನವನ್ನು ಓದಿದ ಧಾರವಾಡ ಬಳಿಯ ಮನಗುಂಡಿ ಮಠದ ಬಸವಾನಂದ ಸ್ವಾಮೀಜಿಯವರು ಫೋನ್ ಮಾಡಿ ಲೇಖನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಮುಂದುವರಿದು ದಾಂಡೇಲಿ ಸುತ್ತಮುತ್ತಲಿನ ಅರಣ್ಯವು ಬರಿದಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಹಾಗೂ ಲೇಖನದ ಆಶಯದಂತೆ ಬಿದ್ದ ಎಲೆಗಳಿಂದ ಕಾಗದ ತಯಾರಿಸುವ ಪ್ರಯತ್ನದ ಯೋಜನೆಯ ಬಗ್ಗೆ ಚರ್ಚಿಸಿದ್ದರು. ಅವರೊಂದಿಗೆ ಮಾತನಾಡಿದ ನಂತರ ಪರಿಸರ ಸಂರಕ್ಷಣೆಯ ಕುರಿತು ಇಂತಹ ಸ್ವಾಮೀಜಿಗಳ ಸಂಖ್ಯೆ ಹೆಚ್ಚಳವಾದರೆ ಉತ್ತಮವಲ್ಲವೇ? ಎನಿಸಿತು.
ಈಗಾಗಲೇ ಕೆಲ ಸ್ವಾಮೀಜಿಗಳು ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ. ಸಮುದಾಯ ಅರಣ್ಯಗಳ ಬಗ್ಗೆ ಅಧ್ಯಯನ ಮಾಡುವ ವೇಳೆ ಕಾಂಬೋಡಿಯಾದ ಸನ್ಯಾಸಿಗಳ ಸಮುದಾಯ ಅರಣ್ಯವು ನನ್ನನ್ನು ಬಹುವಾಗಿ ಆಕರ್ಷಿಸಿತು. ಈ ಕುರಿತು ಹೆಚ್ಚು ಹೆಚ್ಚು ಅಧ್ಯಯನ ಮಾಡುತ್ತಾ ಹೋದಂತೆ ಅದರ ಬಗ್ಗೆ ಒಂದಿಷ್ಟು ವಿವರಗಳು ಲಭ್ಯವಾದವು. ಅವುಗಳನ್ನೇ ಇಲ್ಲಿ ಉಲ್ಲೇಖಿಸಿರುವೆ. ಕಾಂಬೋಡಿಯಾ ಎಂದೊಡನೆ ನೆನಪಾಗುವುದು ವಿಶ್ವದ ಅತಿದೊಡ್ಡ ಧಾರ್ಮಿಕ ಸ್ಮಾರಕ ಅಂಕೋರ್ ವಾಟ್ ದೇವಾಲಯದ ಸಂಕೀರ್ಣಗಳು. ಅಂಕೋರ್ ವಾಟ್ನ ವೈಭವದ ಜೊತೆಗೆ, ಕಾಂಬೋಡಿಯಾವು ಸಂಕೀರ್ಣವಾದ ಸಾಂಸ್ಕೃತಿಕ ವಸ್ತ್ರ ವೈಭವದ ಸುದೀರ್ಘ ಇತಿಹಾಸ ಹೊಂದಿದೆ. ಕಾಂಬೋಡಿಯಾದ ಕಡಲತೀರಗಳು, ಸುಂದರವಾದ ನೈಸರ್ಗಿಕ ತಾಣಗಳು, ವನ್ಯಜೀವಿಗಳು ಮತ್ತು ಅಲ್ಲಿನ ರುಚಿಕರವಾದ ಆಹಾರ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಕಳೆದ ಇಪ್ಪತ್ತು ವರ್ಷಗಳ ಹಿಂದಿನ ಕಾಂಬೋಡಿಯಾ ಈಗಿನಂತೆ ಹಚ್ಚ ಹಸಿರಿನಿಂದ ಕೂಡಿರಲಿಲ್ಲ ಎಂಬುದು ಮುಖ್ಯ. ವಿಶ್ವಬ್ಯಾಂಕ್ ವರದಿಯ ಪ್ರಕಾರ, 1990ರಲ್ಲಿ ಕಾಂಬೋಡಿಯಾವು ಶೇ.73ರಷ್ಟು ಅರಣ್ಯದಿಂದ ಆವೃತವಾಗಿತ್ತು. ಆದರೆ 2010ರ ಹೊತ್ತಿಗೆ ಅದು ಶೇ. 57ರಷ್ಟಕ್ಕೆ ಕುಸಿದಿತ್ತು. ಇದರಿಂದ ಅಲ್ಲಿನ ಹವಾಮಾನ ಪರಿಸ್ಥಿತಿ ತುಂಬಾ ಬಿಗಡಾಯಿಸಿತು. ಇದೇ ಪರಿಸ್ಥಿತಿ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಇಡೀ ದೇಶ ಬರಡು ಭೂಮಿಯಾಗುತ್ತದೆ ಎಂಬುದನ್ನು ಅಲ್ಲಿನ ಕೆಲ ಸನ್ಯಾಸಿಗಳು ಅರಿತರು.
ಅದಕ್ಕಾಗಿ ಮಾಸ್ಟರ್ ಪ್ಲಾನ್ ತಯಾರಿಸಿದರು. ಕಾಂಬೋಡಿಯನ್ ಸನ್ಯಾಸಿ ಬನ್ ಸಲೂತ್ ಅವರು ಇದರ ನೇತೃತ್ವ ವಹಿಸಿದರು. ರೈತನ ಮಗನಾದ ಬನ್ ಸಲೂತ್ ಅವರು ಇಂದು ಕಾಂಬೋಡಿಯಾದಲ್ಲಿ ಅರಣ್ಯಗಳನ್ನು ರಕ್ಷಿಸುವ ಪ್ರವರ್ತಕರಾಗಿದ್ದಾರೆ.
ಒಡ್ಡರ್ ಮೀಂಚೆ ಪ್ರಾಂತದ ಸ್ಯಾಮ್ರೋಂಗ್ ಪಗೋಡಾದ ಮುಖ್ಯಸ್ಥ ಬನ್ ಸಲೂತ್ ಅವರು ತಮ್ಮ ಪ್ರಾಂತದಲ್ಲಿನ ಅರಣ್ಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದನ್ನು ಕಂಡು ಹಳಹಳಿಸಿದರು. ಅಲ್ಲಿದ್ದ ಎಲ್ಲಾ ಬೌದ್ಧ ಅನುಯಾಯಿಗಳನ್ನು ಒಗ್ಗೂಡಿಸಿ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಸಿದರು.
ಅರಣ್ಯನಾಶದ ವಿರುದ್ಧ ಸರಕಾರದ ಕ್ರಮವನ್ನು ಖಂಡಿಸುವ ಮೂಲಕ ಮತ್ತು ಮರಗಳ ರಕ್ಷಣೆಗಾಗಿ ಶಾಸಕರ ಮನವೊಲಿಸುವ ಮೂಲಕ ಅರಣ್ಯವನ್ನು ಉಳಿಸುವ ಹೋರಾಟಕ್ಕೆ ಸನ್ನದ್ಧರಾದರು. ಅರಣ್ಯ ನಾಶದ ಪರಿಣಾಮಗಳ ಕುರಿತ ಕೆಲ ಫೋಟೊ ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲ ತಾಣಗಳಿಗೆ ಅಪ್ಲೋಡ್ ಮಾಡುವ ಮೂಲಕ ಜನರ ಗಮನವನ್ನು ಸೆಳೆದರು.
ಈ ಕುರಿತ ಲೇಖನಗಳನ್ನು ಪ್ರಕಟಿಸುವ ಮೂಲಕ ಅಕ್ರಮ ಭೂಪ್ರವೇಶದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಅವರೆಲ್ಲರ ಸಂಘಟಿತ ಪ್ರಯತ್ನದ ಫಲವಾಗಿ ಒಡ್ಡರ್ ಮೀಂಚೆ ಪ್ರಾಂತದ 18,261 ಹೆಕ್ಟೇರ್ ಅರಣ್ಯ ಭೂಮಿ ಸಂರಕ್ಷಿತವಾಗಿದೆ.
ಈಗ ಆ ಅರಣ್ಯಕ್ಕೆ ಮಾಂಕ್ಸ್ ಕಮ್ಯುನಿಟಿ ಫಾರೆಸ್ಟ್ ಎಂದು ಮರುನಾಮಕರಣ ಮಾಡಲಾಗಿದೆ. ಬನ್ ಸಲೂತ್ ತಮ್ಮ ಸುತ್ತಮುತ್ತಲಿನ ಜನರನ್ನು ಸಂಘಟಿಸಿ ಸ್ವಯಂಸೇವಕರ ಗುಂಪನ್ನು ರಚಿಸಿದರು. ಸ್ವಯಂ ಸೇವಕರು ಸರತಿ ಪ್ರಕಾರ ಅರಣ್ಯ ರಕ್ಷಣೆಗೆ ಗಸ್ತು ತಿರುಗುವ ವ್ಯವಸ್ಥೆ ಮಾಡಿದರು. ಮೊದಲ ಹಂತದಲ್ಲಿ ಅರಣ್ಯದ ಗಡಿಗಳನ್ನು ಗುರುತಿಸಿ ರಕ್ಷಣೆ ಮಾಡಿದರು. ನಂತರ ಅನ್ಯರ ಒಳನುಸುಳುವಿಕೆಯನ್ನು ತಡೆದರು.
ಸ್ವಯಂ ಸೇವಕರ ಜೀವನೋಪಾಯಕ್ಕಾಗಿ ಮರಗಳಲ್ಲದ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಅನುಮತಿ ನೀಡಿದರು. ಅರಣ್ಯ ಉತ್ಪನ್ನಗಳಾದ ಬಿದಿರು, ಕಾಡು ಶುಂಠಿ, ಹಣ್ಣು, ಅಣಬೆ ಮುಂತಾದವುಗಳನ್ನು ಸಂಗ್ರಹಿಸಲು ಪರವಾನಿಗೆ ನೀಡಿದ್ದರಿಂದ ಸ್ವಯಂ ಸೇವಕರ ದೈನಂದಿನ ಜೀವನ ನಿರ್ವಹಣೆ ತೊಂದರೆಯಾಗಲಿಲ್ಲ. ಸಂರಕ್ಷಿತ ಪ್ರದೇಶದಲ್ಲಿ ಮರ ಕಡಿಯುವುದು ಮತ್ತು ಬೇಟೆಯಾಡುವುದನ್ನು ನಿಷೇಧಿಸಿದರು. ಹಳ್ಳಿಗರು ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ಮೀನು ಹಿಡಿಯಲು ಅವಕಾಶ ನೀಡಿದರು. ತಮ್ಮ ಆಶ್ರಯಕ್ಕಾಗಿ ಹಳೆಯ ಮರಗಳನ್ನು ಬಳಸಲು ಒಪ್ಪಿಗೆ ನೀಡಿದರು. ಹಳ್ಳಿಗರ ಜೀವನಾಧಾರಕ್ಕಾಗಿ ಮರಗಳಿಂದ ಸಾಂಪ್ರದಾಯಿಕ ಔಷಧಿಗಳನ್ನು ಸಂಗ್ರಹಿಸಲು ಅನುಮತಿ ನೀಡಿದ್ದರಿಂದ ಸ್ಥಳೀಯರು ಮರಗಳನ್ನು ಕಡಿಯದೆ ಸಂರಕ್ಷಿಸಲು ಮುಂದಾದರು.
ಸ್ಥಳೀಯರ ಭಾಗವಹಿಸುವಿಕೆ ಇಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯಗಳು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ಬನ್ ಸಲೂತ್ ಅವರು ಸ್ಥಳೀಯರನ್ನು ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಯೋಜನೆಯ ಯಶಸ್ಸಿನ ಮೂಲವಾಗಿತ್ತು. ಅಲ್ಲದೆ ಅರಣ್ಯದ ಉಪ ಉತ್ಪನ್ನಗಳಿಂದ ಸ್ಥಳೀಯರ ಜೀವನೋಪಾಯಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಟ್ಟದ್ದೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯ ಭಾಗವಾಗಿತ್ತು. ಮಹಿಳೆಯರೂ ಈ ಕಾರ್ಯದಲ್ಲಿ ಭಾಗಿಯಾದುದು ವಿಶೇಷ.
ಬನ್ ಸಲೂತ್ ಇವೆಲ್ಲವುಗಳ ಜೊತೆಗೆ ಸನ್ಯಾಸಿಗಳ ಸಹಾಯದಿಂದ ಹಳ್ಳಿಗಳಲ್ಲಿ ಅರಣ್ಯ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ವ್ಯವಸ್ಥೆ ಮಾಡಿದರು. ಬುದ್ಧನ ಜೀವನದಲ್ಲಿ ಪ್ರಕೃತಿಯ ನಿಕಟ ಪಾತ್ರವನ್ನು ಒತ್ತಿಹೇಳಿದರು. ಇದರಿಂದಾಗಿ ಜನರು ಬಹುಬೇಗನೆ ಅರಣ್ಯ ರಕ್ಷಣೆಯತ್ತ ಮನಸ್ಸು ಮಾಡಿದರು. ಇವರ ಎಲ್ಲಾ ಸಂರಕ್ಷಣೆಯ ಕಾರ್ಯಗಳಿಗೆ ಸರಕಾರಿ ಅಧಿಕಾರಿಗಳು ಮತ್ತು ಎನ್ಜಿಒಗಳು ಸಹಕಾರ ನೀಡಿದರು. ಪ್ರಸಕ್ತ ಬನ್ ಸಲೂತ್ ಅವರ ಪ್ರೇರಣೆಯಿಂದ ಮೂವತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಸಂರಕ್ಷಣೆಯಾಗುತ್ತಿದೆ.
ಇದಕ್ಕಿಂತ ಬಹುದೊಡ್ಡ ಸಾಧನೆ ಇನ್ನೇನಿದೆ. ಸಿದ್ಧಾರ್ಥನು ಬೋಧಿ ಮರದಡಿ ಕುಳಿತು ಜ್ಞಾನೋದಯ ಪಡೆದಂತೆ ಕಾಂಬೋಡಿಯಾದ ಸನ್ಯಾಸಿಗಳು ಮರಗಳ ರಕ್ಷಣೆಗೆ ತೊಡಗಿರುವುದು ಇನ್ನೂ ವಿಶೇಷ. ಇಂತಹ ಪ್ರಯತ್ನಗಳು ಇನ್ನಷ್ಟು ಹೆಚ್ಚಲಿ, ಆ ಮೂಲಕ ಅರಣ್ಯ ರಕ್ಷಣೆಗೆ ಒಲವು ಮೂಡಲಿ.