ಮುನ್ನೆಲೆಗೆ ಬಂದ ಸಿಎಎ ಜಾರಿ ವಿಚಾರ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹತಾಶಗೊಂಡಿರುವುದರ ಸೂಚನೆಯೆ?
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನವೆಂಬರ್ ಕಡೇ ವಾರದಲ್ಲಿ ಕೋಲ್ಕತಾದಲ್ಲಿನ ಸಾರ್ವಜನಿಕ ಸಭೆಯಲ್ಲಿ ಹೇಳಿದರು. ‘‘ಮಮತಾ ಬ್ಯಾನರ್ಜಿ ಅವರು ಸಿಎಎಯನ್ನು ವಿರೋಧಿಸುತ್ತಿದ್ದಾರೆ. ಆದರೆ ದೇಶದಲ್ಲಿ ಸಿಎಎ ಜಾರಿಯಾಗಲಿದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ’’ ಎಂದು ಶಾ ಹೇಳಿದರು. ಮೂರು ದಿನಗಳ ನಂತರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರು ಪಶ್ಚಿಮ ಬಂಗಾಳದ ಮಟುವಾ-ನಾಮಸೂದ್ರ ಸಮುದಾಯದ ಸಭೆಯಲ್ಲಿ, ಮುಂದಿನ ವರ್ಷ ಮಾರ್ಚ್ 30ರೊಳಗೆ ಅಂತಿಮ ಕರಡು ರೂಪಿಸಲಾಗುವುದು ಎಂದರು. ಇದರೊಂದಿಗೆ, 2024ರ ಸಂಸತ್ತಿನ ಚುನಾವಣೆಗೆ ಹೊಸ ಕಾವೇರುವ ಸಾಧ್ಯತೆ ಕಾಣಿಸತೊಡಗಿದೆ.
ನಾಲ್ಕು ವರ್ಷಗಳ ಹಿಂದೆ ಅಂಗೀಕಾರಗೊಂಡ ನಂತರ ಸಿಎಎ ವಿಚಾರ ಬದಿಗೆ ಸರಿದಿತ್ತು. ಅದನ್ನೀಗ ಬಿಜೆಪಿ ಮತ್ತೆ ಮುಂದೆ ತಂದು ನಿಲ್ಲಿಸಿದೆ. ಇದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಇದು ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಈಗಾಗಲೇ ಉದ್ವಿಗ್ನವಾಗಿರುವ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಗಳಿಗೆ ಪ್ರಚೋದನೆ ನೀಡುವ ಸಾಧ್ಯತೆ ಹೆಚ್ಚಿದೆ.
2019ರ ಡಿಸೆಂಬರ್ 11ರಂದು ಸಂಸತ್ತು ಅಂಗೀಕರಿಸಿದ್ದ ಶಾಸನ 2015ರ ಮೊದಲು ಭಾರತಕ್ಕೆ ಬಂದ ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರಗಳಾದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಅಥವಾ ಕ್ರಿಶ್ಚಿಯನ್ನರಿಗೆ ಪೌರತ್ವವನ್ನು ನೀಡಲಿದೆ ಎಂದು ಪ್ರತಿಪಾದಿಸಲಾಗಿತ್ತು. ಆದರೂ, ನಿಯಮಗಳನ್ನು ಇನ್ನೂ ರೂಪಿಸಬೇಕಿದೆ. ನಿಯಮಗಳಿಲ್ಲದೆ ಅನುಷ್ಠಾನ ಶುರುವಾಗುವುದು ಸಾಧ್ಯವಿಲ್ಲ.
‘‘ನಿಯಮಗಳನ್ನು ರೂಪಿಸಲು, ಲೋಕಸಭೆಯ ಗಡುವು ಜನವರಿ 9, 2024 ಆಗಿದೆ ಮತ್ತು ರಾಜ್ಯಸಭೆಯ ಗಡುವು ಮಾರ್ಚ್ 30 ಆಗಿದೆ. ನಾವು ಅದನ್ನು ಪೂರ್ಣಗೊಳಿಸುತ್ತೇವೆ’’ ಎಂದು ಪಶ್ಚಿಮದ ಬಾಂಗ್ಲಾದೇಶದ ಗಡಿಯಲ್ಲಿರುವ ಠಾಕೂರ್‌ನಗರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಿಶ್ರಾ ಹೇಳಿದ್ದಾರೆ.
ಠಾಕೂರ್‌ನಗರವು ಸಮುದಾಯದ ಮುಖ್ಯ ಸಾಮಾಜಿಕ-ಧಾರ್ಮಿಕ ಸಂಘಟನೆಯಾದ ಮಟುವಾ ಮಹಾಸಂಘವು ಪ್ರಧಾನ ಕಚೇರಿಯನ್ನು ಹೊಂದಿರುವ ಸ್ಥಳವಾಗಿದೆ. ಮಟುವಾ-ನಾಮಸೂದ್ರರು ಬಾಂಗ್ಲಾದೇಶದಿಂದ ವಲಸೆ ಬಂದ ಹಿಂದೂಗಳು ಮತ್ತು ಪಶ್ಚಿಮ ಬಂಗಾಳದಲ್ಲಿ ಸಿಎಎಯ ಅತಿ ದೊಡ್ಡ ಬೆಂಬಲಿಗರು.
ಈ ಕಾಯ್ದೆ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ, 2001ರ ಜನಗಣತಿಯ ಪ್ರಕಾರ ರಾಜ್ಯದ ಜನಸಂಖ್ಯೆಯ ಸುಮಾರು ಶೇ.4ರಷ್ಟಿರುವ ಮಟುವಾ-ನಾಮಸೂದ್ರ ಸಮುದಾಯವು ಕಾಯ್ದೆಯನ್ನು ಸ್ವಾಗತಿಸಿತು.
ಈಶಾನ್ಯ ರಾಜ್ಯಗಳಲ್ಲಿ, ರಾಜಕೀಯ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಇದನ್ನು ವಿರೋಧಿಸಿದವು. ಇದು ಅಕ್ರಮ ವಲಸೆಯನ್ನು ಕಾನೂನುಬದ್ಧಗೊಳಿಸುತ್ತದೆ ಎಂಬುದು ಅವರ ವಾದವಾಗಿತ್ತು. ಮುಸ್ಲಿಮ್ ವಿರೋಧಿ ತಾರತಮ್ಯ ಈ ಕಾನೂನಿನಲ್ಲಿ ಅಂತರ್ಗತವಾಗಿದೆ ಎಂದು ವಿವಿಧ ವಿರೋಧ ಪಕ್ಷಗಳು ಇದನ್ನು ವಿರೋಧಿಸಿದ್ದವು.
ಮಟುವಾ-ನಾಮಸೂದ್ರರಲ್ಲಿ ಹೆಚ್ಚಿನವರು ಮತದಾರರ ಗುರುತಿನ ಚೀಟಿ, ಪ್ಯಾನ್ ಮತ್ತು ಆಧಾರ್‌ನಂತಹ ಗುರುತಿನ ದಾಖಲೆಗಳನ್ನು ಹೊಂದಿದ್ದಾರೆ. ಆದರೆ 1971ರ ಮೊದಲಿನ ಮತದಾರರ ಪಟ್ಟಿಯಲ್ಲಿ ತಮ್ಮ ಅಥವಾ ಅವರ ಪೋಷಕರ ಹೆಸರಿನ ದಾಖಲೆಗಳನ್ನು ಸಲ್ಲಿಸಲು ಕೇಳಿದಾಗ, ಪಾಸ್‌ಪೋರ್ಟ್‌ಗಳು, ಉದ್ಯೋಗಗಳು ಮತ್ತು ಜಾತಿ ಪ್ರಮಾಣಪತ್ರಗಳಿಗಾಗಿ ಪೊಲೀಸ್ ಪರಿಶೀಲನೆ ವರದಿಗಳನ್ನು ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಾರೆ.
ಪಶ್ಚಿಮ ಬಂಗಾಳದಲ್ಲಿ 2021ರ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಅಮಿತ್ ಶಾ, ಈ ಕಾಯ್ದೆ ಜಾರಿ ಕೋವಿಡ್ ಕಾರಣದಿಂದಾಗಿ ಮುಂದಕ್ಕೆ ಹೋಗಿದೆ ಎಂದು ದೂಷಿಸಿದ್ದರು. ಕಾಯ್ದೆ ಜಾರಿ ವಿಳಂಬದ ಬಗ್ಗೆ ರಾಜ್ಯದ ಮಟುವಾ ಸಮುದಾಯ ಅಸಮಾಧಾನಗೊಂಡಿತ್ತು ಮಾತ್ರವಲ್ಲ, ಬಿಜೆಪಿ ದ್ರೋಹ ಬಗೆದಿದೆ ಎಂದು ಅನೇಕರು ಆರೋಪಿಸಿದ್ದರು.
ಮೊನ್ನೆಯ ಶಾ ಅವರ ಹೇಳಿಕೆಗಳ ನಂತರ, ಪಶ್ಚಿಮ ಬಂಗಾಳದ ಕೈಗಾರಿಕಾ ಸಚಿವ ಮತ್ತು ತೃಣಮೂಲ ಕಾಂಗ್ರೆಸ್‌ನ ಹಿರಿಯ ವಕ್ತಾರ ಶಶಿ ಪಂಜಾ ಅವರು ರಾಜ್ಯದಲ್ಲಿ ಸಿಎಎ ಜಾರಿಗೆ ತರುವುದಿಲ್ಲ ಎಂಬ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ನಿಲುವನ್ನು ಪುನರುಚ್ಚರಿಸಿದರು.
ಚುನಾವಣೆ ಸಮೀಪಿಸುತ್ತಿರುವ ಕಾರಣ ಬಿಜೆಪಿಗೆ ಸಿಎಎ ನೆನಪಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ಅವರು ನಿಯಮಗಳ ರಚನೆಗಾಗಿ ವಿಸ್ತರಣೆಯ ನಂತರ ವಿಸ್ತರಣೆಯನ್ನು ತರುತ್ತ, ಒಟ್ಟಾರೆಯಾಗಿ ಒಂಭತ್ತು ಬಾರಿ ಸಮಯ ವಿಸ್ತರಿಸಿದ್ದಾರೆ. ಚುನಾವಣೆಗಳು ಮುಗಿದ ನಂತರ ಈ ವಿಚಾರ ಮತ್ತೆ ಬದಿಗೆ ಸರಿಯುತ್ತದೆ ಎಂದು ಅವರು ಹೇಳಿದರು. ಮಟುವಾ-ಮನಸೂದ್ರರು ಈಗಾಗಲೇ ಈ ದೇಶದ ಪ್ರಜೆಗಳಾಗಿದ್ದಾರೆ ಮತ್ತು ಸಿಎಎ ಅಗತ್ಯವಿಲ್ಲ ಎಂದು ಟಿಎಂಸಿ ಯಾವಾಗಲೂ ಸಮರ್ಥಿಸಿಕೊಳ್ಳುತ್ತಲೇ ಬಂದಿದೆ.
ಪಕ್ಷದ ಮಟುವಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಹಿರಿಯ ಬಿಜೆಪಿ ನಾಯಕರ ಪ್ರಕಾರ, ಹೆಚ್ಚಿನ ಸಂಖ್ಯೆಯ ಮಟುವಾ-ನಾಮಸೂದ್ರ ಸಮುದಾಯದ ಸದಸ್ಯರು ಬೇಷರತ್ತಾದ ಪೌರತ್ವವನ್ನು ಬಯಸಿರುವುದು ವಿಳಂಬದ ಹಿಂದಿನ ಒಂದು ಕಾರಣ. ಅವರು ತಮ್ಮನ್ನು ನಿರಾಶ್ರಿತರೆಂದು ಘೋಷಿಸಿಕೊಳ್ಳುವ ಅರ್ಜಿಯನ್ನು ಸಲ್ಲಿಸಲು ಅಗತ್ಯವಿರುವ ಯಾವುದೇ ನಿಬಂಧನೆಗೆ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳದ ಪುರಾವೆಗಳನ್ನು ಒದಗಿಸಲು ಅಥವಾ ಅದಕ್ಕೆ ದೃಢೀಕರಿಸುವ ಸ್ವಯಂ ಘೋಷಣೆಗೆ ಸಂಬಂಧಿಸಿದ ಯಾವುದೇ ನಿಬಂಧನೆಯನ್ನು ವಿರೋಧಿಸುತ್ತಾರೆ.
ಇನ್ನು ಈಶಾನ್ಯದಲ್ಲಿ ಮತ್ತೆ ಈ ಸಿಎಎ ಪ್ರಸ್ತಾಪ ಶಾಂತಿಯನ್ನು ಕದಡುವ ಸಾಧ್ಯತೆಗಳು ಹೆಚ್ಚಿವೆ. ಶಾ ಹೇಳಿಕೆಯ ನಂತರ, ಆಲ್ ಅಸ್ಸಾಮ್ ವಿದ್ಯಾರ್ಥಿಗಳ ಒಕ್ಕೂಟದ (ಎಎಎಸ್‌ಯು) ಮುಖ್ಯ ಸಲಹೆಗಾರ ಸಮುಜ್ಜಲ್ ಭಟ್ಟಾಚಾರ್ಯ ಅವರು ಈ ಕ್ರಮವನ್ನು ವಿರೋಧಿಸುವುದಾಗಿ ಹೇಳಿದ್ದಾರೆ.
ಅಸ್ಸಾಮಿನ ಪಕ್ಷೇತರ ಶಾಸಕ ಅಖಿಲ್ ಗೊಗೊಯಿ ಅವರ ರೈಜೋರ್ ದಳದ ಯುವ ನಾಯಕ ನಿರ್ಮಲ್ ಪಯೆಂಗ್ ಕೂಡ ಸಿಎಎಯನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ. ಪ್ರತೀ ಡಿಸೆಂಬರ್ 11 ಅನ್ನು ಕಪ್ಪು ದಿನ ಮತ್ತು ಸಿಎಎ ವಿರೋಧಿ ದಿನ ಎಂದು ಆಚರಿಸುವ ಈಶಾನ್ಯ ವಿದ್ಯಾರ್ಥಿಗಳ ಸಂಘಟನೆಯ (ಎನ್‌ಇಎಸ್‌ಒ) ನಾಯಕರೊಬ್ಬರು ಶೀಘ್ರದಲ್ಲೇ ಇದರ ಬಗ್ಗೆ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ.
ಅಸ್ಸಾಮಿನ ಹೊರತಾಗಿ, ಮೇಘಾಲಯ ಮತ್ತು ತ್ರಿಪುರಾದ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿಯೂ ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಲೇಖಕ ಅಯಾನ್ ಗುಹಾ ಅವರ ಪ್ರಕಾರ, ಸಿಎಎ ಜಾರಿಗಾಗಿ ಶಾ ಅವರೀಗ ನಾಮಸೂದ್ರ-ಮಟುವಾ ನಿರಾಶ್ರಿತರ ನೆಪ ಮುಂದೆ ಮಾಡಿರುವಂತೆ ತೋರುತ್ತಿದೆ. ಏಕೆಂದರೆ ಆ ಸಮುದಾಯವು ಈ ಕಾಯ್ದೆ ಜಾರಿಯಲ್ಲಿನ ವಿಳಂಬದ ಬಗ್ಗೆ ಹೆಚ್ಚು ಅಸಮಾಧಾನಗೊಂಡಿದೆ ಎಂದಿದ್ದಾರೆ.
ಈ ಭರವಸೆಯಿಂದಾಗಿಯೇ ಸಮುದಾಯದ ಹೆಚ್ಚಿನ ಜನರು 2019ರ ಲೋಕಸಭೆ ಚುನಾವಣೆ ಮತ್ತು 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ. ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿ 2019ರ ಚುನಾವಣಾ ಯಶಸ್ಸನ್ನು ಮತ್ತೆ ಪಡೆಯಲು ನಾಮಸೂದ್ರ ಸಮುದಾಯದ ಬೆಂಬಲದ ನೆಲೆಯನ್ನು ಹಿಡಿದಿಟ್ಟುಕೊಳ್ಳುವುದು ಬಿಜೆಪಿಗೆ ಮುಖ್ಯವಾಗಿದೆ ಎಂಬುದು ಗುಹಾ ವಿಶ್ಲೇಷಣೆ.
ಈ ವಿಷಯದ ಬಗ್ಗೆ ದೇಶದ ವಿವಿಧ ಪ್ರದೇಶಗಳಿಂದ ಹೊರಹೊಮ್ಮುವ ವಿರೋಧಗಳು ಮತ್ತು ಒತ್ತಡಗಳನ್ನು ನಿಭಾಯಿಸುವುದು ಬಿಜೆಪಿಗೆ ಸವಾಲಾಗಿದೆ ಎಂದು ಅವರು ಹೇಳುತ್ತಾರೆ. ಸದ್ಯಕ್ಕೆ ಪಕ್ಷವು ನಾಮಸೂದ್ರ ಸಮುದಾಯದ ಬೆಂಬಲ ಉಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತಿರುವಂತೆ ತೋರುತ್ತಿದೆ ಎನ್ನುತ್ತಾರೆ ಗುಹಾ.
ದಕ್ಷಿಣ ಪಶ್ಚಿಮ ಬಂಗಾಳದ ಬೊಂಗಾವ್ ಮತ್ತು ರಾಣಾಘಾಟ್ ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಮಟುವಾ-ನಾಮಸೂದ್ರ ಬೆಂಬಲ ಅತ್ಯಗತ್ಯ ಮತ್ತು ಬರಾಸತ್ ಮತ್ತು ದಮ್ ದಮ್ ಲೋಕಸಭಾ ಸ್ಥಾನಗಳಲ್ಲಿಯೂ ಇದು ಬಿಜೆಪಿಗೆ ಮಹತ್ವದ್ದಾಗಿ ಒದಗಬಹುದು.
2019ರಲ್ಲಿ ಬಿಜೆಪಿ ಬೊಂಗಾವ್ ಮತ್ತು ರಾಣಾಘಾಟ್ ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. 2021ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ 24-ಪರಗಣಗಳು ಮತ್ತು ನಾಡಿಯಾ ಜಿಲ್ಲೆಗಳಲ್ಲಿ ಮಟುವಾ-ನಾಮಸೂದ್ರ ಸಮುದಾಯದ ಬೆಂಬಲ ಮಾತ್ರ ತಗ್ಗಿರಲಿಲ್ಲ.
ಸಿಎಎ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವುದು ಬಿಜೆಪಿಯ ಚುನಾವಣಾ ಲೆಕ್ಕಾಚಾರದ ಹಿನ್ನೆಲೆಯಿಂದಲೇ ಆಗಿದೆ. ಅದು ಅಂಕಿಅಂಶಗಳ ಆಟಕ್ಕೆ ಆದ್ಯತೆ ನೀಡಿದೆ ಎಂದು ಕೋಲ್ಕತಾದ ಸಮಾಜ ವಿಜ್ಞಾನಗಳ ಅಧ್ಯಯನ ಕೇಂದ್ರದ ರಾಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಮೈದುಲ್ ಇಸ್ಲಾಂ ಅಭಿಪ್ರಾಯಪಟ್ಟಿದ್ದಾರೆ. ಸಿಎಎಯಂತಹ ವಿಚಾರ ಮಟುವಾ-ನಾಮಸೂದ್ರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ದೊಡ್ಡ ಧ್ರುವೀಕರಣಕ್ಕೂ ಮುಖ್ಯವಾಗಿದೆ ಎನ್ನುತ್ತಾರೆ ಅವರು.
ಬಿಜೆಪಿ 2019ರಲ್ಲಿ ತಾನು ರಾಜ್ಯದಲ್ಲಿ ಗೆದ್ದ ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳಬೇಕಾದರೆ ಅಥವಾ ಅದನ್ನು ಹೆಚ್ಚಿಸಬೇಕಾದರೆ, ಸಿಎಎ ಮತ್ತು ರಾಮ ಮಂದಿರದಂತಹ ವಿಷಯಗಳಲ್ಲಿ ಧ್ರುವೀಕರಣವನ್ನು ಸೃಷ್ಟಿಸುವುದನ್ನು ಬಿಟ್ಟು ಅದಕ್ಕೆ ಬೇರೆ ಆಯ್ಕೆಗಳಿಲ್ಲ. ಈಶಾನ್ಯದಲ್ಲಿ ಕಳೆದುಕೊಳ್ಳಬಹುದಾದಕ್ಕಿಂತ ಇಂತಹ ಧ್ರುವೀಕರಣದಿಂದ ಗಳಿಸಬಹುದಾದ ಹೆಚ್ಚಿನ ಸ್ಥಾನಗಳನ್ನು ತಾನು ಬಂಗಾಳದಲ್ಲಿ ಹೊಂದಿರುವುದಾಗಿ ಅದು ಲೆಕ್ಕ ಹಾಕಿರಬೇಕು ಎನ್ನುತ್ತಾರೆ ಇಸ್ಲಾಂ.
ಇನ್ನು, ತ್ರಿಪುರ ಮತ್ತು ಮೇಘಾಲಯ ತಲಾ ಎರಡು ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಅಸ್ಸಾಮಿನಲ್ಲಿ 14 ಸ್ಥಾನಗಳಿವೆ.
ಆದರೆ, ಅಂತಿಮವಾಗಿ ಬಿಜೆಪಿ ತನ್ನ ಭರವಸೆಯಿಂದ ಹಿಂದೆ ಸರಿದರೂ ಆಶ್ಚರ್ಯವಿಲ್ಲ ಎಂದು ಕೋಲ್ಕತಾದ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಝಾದ್ ಮಹಮೂದ್ ಹೇಳಿದ್ದಾರೆ. ಬಿಜೆಪಿಯು ವಿಭಿನ್ನ ಜನಸಮೂಹವನ್ನು ಉದ್ದೇಶಿಸಿ ಮಾತನಾಡುವಾಗ ವಿವಿಧ ಭಾಷೆಗಳನ್ನು ಬಳಸಿ ಮಾತನಾಡುತ್ತದೆ. ಇಂಥ ಭರವಸೆಗಳು ಕೂಡ ಅದರ ಒಂದು ಭಾಗ ಎನ್ನುತ್ತಾರೆ ಅವರು.
ಬಿಜೆಪಿಯು ಮಧ್ಯ, ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಮುಸ್ಲಿಮರನ್ನು ಬೆದರಿಸಲು ಆಡುವ ಭಾಷೆಯೇ ಬೇರೆ. ಗೋವಾ ಮತ್ತು ಈಶಾನ್ಯ ಭಾರತದಲ್ಲಿನ ಹಿಂದೂಗಳು ಮತ್ತು ಬುಡಕಟ್ಟು ಜನಾಂಗದವರನ್ನು ಉದ್ದೇಶಿಸಿ ಮಾತನಾಡುವ ಭಾಷೆಯೇ ಬೇರೆ. ಜನರನ್ನು ಗೊಂದಲದಲ್ಲಿಡುವ ಅದರ ಸಾಮರ್ಥ್ಯದಲ್ಲಿಯೇ ಅದರ ಯಶಸ್ಸು ಅಡಗಿದೆ ಎಂದು ಮಹಮೂದ್ ಹೇಳುತ್ತಾರೆ.
ಈಶಾನ್ಯದಲ್ಲಿ ಅದರ ಪರಿಣಾಮಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಬಿಜೆಪಿಯು ಅಂತಿಮವಾಗಿ ನಿಯಮಗಳನ್ನು ಪ್ರಕಟಿಸಲು ಮುಂದಾದರೆ, ತನಗೆ ಅಗತ್ಯವಿರುವ ನಂಬರ್‌ಗಳನ್ನು ಪಡೆಯಲು ಅದು ಎಷ್ಟು ಹತಾಶವಾಗಿದೆ ಎಂಬುದು ಗೊತ್ತಾಗುತ್ತದೆ. ಈಗಾಗಲೇ ಆತಂಕದಲ್ಲಿರುವ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಪ್ರತಿಭಟನೆಗಳಿಗೆ ಅವಕಾಶ ನೀಡುವ ಮೂಲಕ ಅದು ತನಗೆ ಚುನಾವಣೆಯ ಸಂದರ್ಭವನ್ನು ಲಾಭದಾಯಕವಾಗಿ ಮಾಡಿಕೊಳ್ಳಲಿದೆ.
ಚುನಾವಣೆಗಳಿಗೆ ಮುಂಚಿತವಾಗಿ ಅಂತಿಮ ಕರಡನ್ನು ಪ್ರಕಟಿಸುವುದು ಎಂದರೆ ತೀಕ್ಷ್ಣವಾದ ಧ್ರುವೀಕರಣವನ್ನು ಸೃಷ್ಟಿಸುವ ಮೂಲಕ ಬಂಗಾಳದಿಂದ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವುದು ಎಂದರ್ಥ. ಅದು ಬಿಜೆಪಿಗೆ ಸಂಪೂರ್ಣವಾಗಿ ಅವಶ್ಯಕವಾಗಿದೆ. ಸಂಖ್ಯೆಗಳ ಆಟದಲ್ಲಿ, ಪಶ್ಚಿಮ ಬಂಗಾಳಕ್ಕೆ ಹೋಲಿಸಿದರೆ ಈಶಾನ್ಯ ಭಾಗಕ್ಕೆ ಅದು ನೀಡುವ ಪ್ರಾಮುಖ್ಯತೆ ಕಡಿಮೆ ಎಂದು ಮಹಮೂದ್ ಹೇಳುತ್ತಾರೆ.
(ಕೃಪೆ: thewire.in)