ಕಾಂಗ್ರೆಸ್ ಸರಕಾರ ‘ಬಿದ್ದು ಹೋಗುವ’ ಲೆಕ್ಕಾಚಾರಗಳು
‘ಆಪರೇಷನ್ ಕಮಲ’ದ ಹೆಸರು ಮತ್ತೆ ಕೇಳಿಬರುತ್ತಿದೆ; ಸರಕಾರವನ್ನು ಕೆಡವಲು ಕೆಲ ಬಿಜೆಪಿ ನಾಯಕರು ‘ಸಂಕ್ರಾಂತಿ’ಯ ಮುಹೂರ್ತವನ್ನೂ ಗೊತ್ತು ಮಾಡುತ್ತಿದ್ದಾರೆ. ಈ ಬೆಳವಣಿಗೆಗಳನ್ನೆಲ್ಲಾ ಗಮನಿಸಿದಾಗ ಕಾಂಗ್ರೆಸ್ ಸರಕಾರ ಮತ್ತೊಮ್ಮೆ ಬಿಜೆಪಿಯ ಆಪರೇಷನ್ ಕಮಲಕ್ಕೆ ತುತ್ತಾಗಿ ಅಧಿಕಾರ ಕಳೆದುಕೊಳ್ಳಲಿದೆಯಾ? ಲೋಕಸಭಾ ಚುನಾವಣೆಗೂ ಮೊದಲೇ ಸರಕಾರ ಪತನವಾಗಲಿದೆಯಾ? ನಿಜಕ್ಕೂ ರಾಜ್ಯ ರಾಜಕಾರಣದಲ್ಲಿ ಅಂತಹ ಸಾಧ್ಯತೆ ಉಂಟಾ? ಎಂಬ ಗೊಂದಲ ಕಾಡದಿರದು.
ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಆಪರೇಷನ್ ಕಮಲದ ಸಾಧ್ಯತೆ ಎಷ್ಟರಮಟ್ಟಿಗಿದೆ ಎಂಬುದನ್ನು ನೋಡೋಣ. ಅಂಕಿಸಂಖ್ಯೆಗಳು ನಮಗಿದನ್ನು ಅರ್ಥ ಮಾಡಿಸುತ್ತವೆ. ಅದಕ್ಕೂ ಮೊದಲು, ನಾವು ಒಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಏನೆಂದರೆ, ಈ ಹಿಂದಿನ ಆಪರೇಷನ್ ಕಮಲಗಳನ್ನು ಅವಲೋಕಿಸಿ ನೋಡಿದಾಗ ಬಿಜೆಪಿ ಹುಟ್ಟುಹಾಕಿದ ಈ ‘ಆಪರೇಷನ್ ಕಮಲ’ ನಡೆಯಬೇಕೆಂದರೆ ಅದಕ್ಕೊಂದು ಪ್ರಬಲ ‘ಡ್ರೈವಿಂಗ್ ಫೋರ್ಸ್’ ಬೇಕಾಗುತ್ತದೆ. ಹಿಂದಿನ ಎರಡೂ ಆಪರೇಷನ್ (2008 ಮತ್ತು 2019) ಪ್ರಕರಣಗಳಲ್ಲಿ ಬಿಜೆಪಿ ಪಾಲಿಗೆ ಅಂತಹ ಡ್ರೈವಿಂಗ್ ಫೋರ್ಸ್ ಆಗಿದ್ದದ್ದು ಯಡಿಯೂರಪ್ಪನವರು. ಅವರಿಗಿದ್ದ ಅಧಿಕಾರದ ದಾಹ ಮತ್ತು ನಿಭಾಯಿಸುವ ಸಾಮರ್ಥ್ಯಗಳೇ ಆಪರೇಷನ್ ಕಮಲವನ್ನು ಸಾಧ್ಯವಾಗಿಸಿದ್ದವು. 2019ರಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಜೊತೆ ಮಾತಾಡುತ್ತಾ ‘‘ಆಪರೇಷನ್ ಕಮಲ ತಪ್ಪೇನೂ ಅಲ್ಲ. ಅದರ ಬಗ್ಗೆ ನನಗೆ ಪಶ್ಚಾತ್ತಾಪವೂ ಇಲ್ಲ. ಅದು ಪ್ರಜಾಪ್ರಭುತ್ವದ ಒಂದು ಭಾಗ’’ ಎಂದು ಯಡಿಯೂರಪ್ಪನವರು ಹೇಳಿದ್ದ ಮಾತುಗಳೇ, ಆಪರೇಷನ್ ಕಮಲಗಳ ಹಿಂದಿದ್ದ ದಾಢಸಿ ಶಕ್ತಿ ಅವರೆಂಬುದನ್ನು ಸಾಬೀತು ಮಾಡುತ್ತವೆ.
2008ರಲ್ಲಿ ಗಾಲಿ ಜನಾರ್ದನ ರೆಡ್ಡಿ, ಇಡೀ ಆಪರೇಷನ್ ಕಮಲದ ನೇತೃತ್ವ ವಹಿಸಿದ್ದರೂ, ಅದಕ್ಕೆ ಬೇಕಾದ ಸಂಪೂರ್ಣ ಸಹಕಾರ ಮತ್ತು ಪ್ರಚೋದನೆ ಕೊಟ್ಟದ್ದು ಯಡಿಯೂರಪ್ಪನವರು. ಸುದೀರ್ಘ ರಾಜಕಾರಣದ ಹೋರಾಟದ ಫಲವಾಗಿ ಸಿಎಂ ಕುರ್ಚಿಯ ಸನಿಹಕ್ಕೆ ಬಂದಿದ್ದ ಅವರು, ಟ್ವೆಂಟಿ-ಟ್ವೆಂಟಿ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿಯೂ ರುಚಿಕಂಡಿದ್ದರು. ಇನ್ನೇನು ಒಪ್ಪಂದದ ಪ್ರಕಾರ ಸಿಎಂ ಆಗಿಯೇ ಬಿಡುತ್ತಾರೆನ್ನುವಾಗ ಕುಮಾರಸ್ವಾಮಿಯವರ ವಚನಭ್ರಷ್ಟತೆಯಿಂದಾಗಿ ಅವಕಾಶ ತಪ್ಪಿಸಿಕೊಂಡಿದ್ದ ಯಡಿಯೂರಪ್ಪ ಸಿಎಂ ಕುರ್ಚಿಯ ಮೇಲೆ ಅಸ್ಥಿರತೆಯ ಭಾವನೆ ಬೆಳೆಸಿಕೊಂಡಿದ್ದರು. 2008ರ ಫಲಿತಾಂಶದ ನಂತರ ಆರು ಮಂದಿ ಪಕ್ಷೇತರ ಶಾಸಕರ ಬೆಂಬಲದಿಂದ ಸರಕಾರ ರಚಿಸಿದ್ದರೂ, ಈ ಹಿಂದೆ ಕೈತಪ್ಪಿದಂತೆ ಸಿಎಂ ಹುದ್ದೆ ಎಲ್ಲಿ ಕೈಬಿಟ್ಟುಹೋಗುವುದೋ ಎಂಬ ಆ ಅಸ್ಥಿರತೆಯ ಆತಂಕವೇ ಅವರನ್ನು ಆಪರೇಷನ್ ಕಮಲಕ್ಕೆ ಪ್ರೇರೇಪಿಸಿತ್ತು.
ಇನ್ನು 2019ರಲ್ಲೂ ಹೆಚ್ಚೂಕಮ್ಮಿ ಅದೇ ಪರಿಸ್ಥಿತಿ. ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಜೆಡಿಎಸ್‌ಕಾಂಗ್ರೆಸ್ ಮೈತ್ರಿಯಿಂದಾಗಿ, ವಿಶ್ವಾಸಮತಕ್ಕೂ ಮೊದಲೇ ಯಡಿಯೂರಪ್ಪನವರು ಸಿಎಂ ಕುರ್ಚಿ ಕಳೆದುಕೊಳ್ಳಬೇಕಾಗಿ ಬಂತು. ಅವರು ಅದನ್ನೊಂದು ಅವಮಾನದಂತೆಯೂ, ಪ್ರತಿಷ್ಠೆಯಂತೆಯೂ ಸ್ವೀಕರಿಸಿದ್ದರು. ಆಗಲೂ ಅವರ ಪಾಲಿಗೆ ‘ಖಳನಾಯಕ’ನಾಗಿ ಕಾಣಿಸಿದ್ದು ಇದೇ ಕುಮಾರಸ್ವಾಮಿಯವರು. ರಾಜೀನಾಮೆ ನೀಡುತ್ತಾ ವಿಧಾನಸಭೆಯಲ್ಲಿ ಅವರಾಡಿದ ಮಾತುಗಳೇ ಇದಕ್ಕೆ ಸಾಕ್ಷಿ.
ತಮ್ಮ ರಾಜಕೀಯ ಜೀವನದ ಕೊನೇ ಅಂಕದಲ್ಲಿ ಇಂತಹ ಅವಮಾನವನ್ನಾಗಲಿ, ಪ್ರತಿಷ್ಠೆಗೆ ಪೆಟ್ಟನ್ನಾಗಲಿ ಸ್ವೀಕರಿಸಲು ಸಿದ್ಧರಿರದ ಯಡಿಯೂರಪ್ಪನವರು ಶತಾಯಗತಾಯ ಸಿಎಂ ಆಗಲೇಬೇಕೆಂದು ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಅಡಿಪಾಯವಾಗಿ ನಿಂತರು. ಅದಕ್ಕೆ ಕುಮ್ಮಕ್ಕು ಕೊಟ್ಟದ್ದು ಬಿಜೆಪಿ ಹೈಕಮಾಂಡ್. ಅದರ ಪರಿಣಾಮದಿಂದಲೇ ಬಿಜೆಪಿ ಎರಡನೇ ಸಲ ಅಧಿಕಾರಕ್ಕೇರಲು ಸಾಧ್ಯವಾದದ್ದು.
ಈಗ ಇರುವ ಪ್ರಶ್ನೆ, ಇವತ್ತು ಕರ್ನಾಟಕದಲ್ಲಿ ಆಪರೇಷನ್ ಕಮಲವನ್ನು ಸಾಧ್ಯವಾಗಿಸಬೇಕೆಂದರೆ ಬಿಜೆಪಿ ಪಾಲಿನ ಆ ‘ಡ್ರೈವಿಂಗ್ ಫೋರ್ಸ್’ ಆಗಬಲ್ಲಂತಹವರು ಯಾರು? ಯಾರೂ ಇಲ್ಲ! ಸಿಎಂ ಆಗುವ ಅಧಿಕಾರದ ದಾಹ ಬಿಜೆಪಿಯ ಹಲವರಿಗೆ ಇರಬಹುದಾದರೂ, ಅದನ್ನು ನಿಭಾಯಿಸುವ ಸಾಮರ್ಥ್ಯದ ವಿಚಾರಕ್ಕೆ ಬಂದಾಗ, ಒಂದೇ ಒಂದು ಹೆಸರು ಕೂಡಾ ಮುನ್ನೆಲೆಗೆ ಬರುವುದಿಲ್ಲ. ಯಡಿಯೂರಪ್ಪನವರಲ್ಲಿದ್ದ ಆ ಸಾಮರ್ಥ್ಯವನ್ನು ಸ್ವತಃ ಬಿಜೆಪಿ ಹೈಕಮಾಂಡ್, ಮುಖ್ಯವಾಗಿ ಬಿ.ಎಲ್. ಸಂತೋಷ್ ಬಣ ಮಟ್ಟಹಾಕಿದೆ. ಪಕ್ಷದ ಮೇಲೆ ಅವರ ಪ್ರಭಾವವನ್ನು ತಪ್ಪಿಸಬೇಕೆಂದು ಮಾಡಿದ ರಣತಂತ್ರಗಳು ಯಡಿಯೂರಪ್ಪನವರ ಶಕ್ತಿಯನ್ನಷ್ಟೇ ಅಲ್ಲ, ಪಕ್ಷದ ಶಕ್ತಿಯನ್ನೂ ಕುಗ್ಗಿಸಿವೆ. ಹೀನಾಯ ಫಲಿತಾಂಶದ ಹೊರತಾಗಿಯೂ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುವ ಪ್ರಯತ್ನಗಳು ಇವತ್ತಿಗೂ ಜಾರಿಯಲ್ಲಿವೆ. ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಹುದ್ದೆಗೆ ಆಯ್ಕೆ ಕಗ್ಗಂಟಾಗಿರುವುದೇ ಆ ಕಾರಣಕ್ಕೆ. ಅವರ ಮಗ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ತಪ್ಪಿಸಲು ನಾನಾ ಕಸರತ್ತುಗಳು ನಡೆಯುತ್ತಿವೆ. ತಾನೀಗ ಮುಂದೆ ನಿಂತು, ಪಕ್ಷವನ್ನು ಅಧಿಕಾರದ ಹೊಸ್ತಿಲಿಗೆ ಕೊಂಡೊಯ್ದರೂ, ತನಗಾಗಲಿ ಅಥವಾ ತನ್ನ ಮಕ್ಕಳಿಗಾಗಲಿ ಅಧಿಕಾರ ಭಾಗ್ಯ ಲಭಿಸಲಿದೆ ಎಂಬ ವಿಶ್ವಾಸ ಯಡಿಯೂರಪ್ಪನವರಲ್ಲಿ ಉಳಿದಿಲ್ಲ. ತನ್ನನ್ನೇ ಪೂರ್ಣಾವಧಿಗೆ ಸಿಎಂ ಆಗಲು ಬಿಡದ ಪಕ್ಷ, ತನ್ನ ಮಕ್ಕಳ ಜೊತೆ ಹೇಗೆ ವರ್ತಿಸೀತು? ಎಂಬ ಪ್ರಶ್ನೆ ಅನುಭವಿ ರಾಜಕಾರಣಿಯಾದ ಅವರನ್ನು ಕಾಡದಿರದು. ಹಾಗಾಗಿಯೇ ಅವರು ಪಕ್ಷದಿಂದ ಈಗ ಆರೋಗ್ಯಕರ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ರೇಣುಕಾಚಾರ್ಯ ತರಹದ ಅವರ ಅತ್ಯಾಪ್ತರು ಪಕ್ಷದ ವಿರುದ್ಧವೇ ಆಗಾಗ ನಾಲಿಗೆ ಹರಿಬಿಡುತ್ತಿರುವುದು ಇದಕ್ಕೆ ಸಾಕ್ಷಿ. ಪಕ್ಷಕ್ಕೂ ಯಡಿಯೂರಪ್ಪನವರ ಮೇಲೆ ವಿಶ್ವಾಸವಿದ್ದಂತಿಲ್ಲ. ಹಾಗಾಗಿಯೇ ಝಡ್ ಪ್ಲಸ್ ಭದ್ರತೆಯ ನೆಪದಲ್ಲಿ ಅವರ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸಲು ಹೈಕಮಾಂಡ್ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆಪರೇಷನ್ ಕಮಲ ಎನ್ನುವುದು ಅಧಿಕಾರವನ್ನು ತಂದುಕೊಡಬಹುದಾದರೂ, ಅಪವಾದವನ್ನೂ ಮೈಮೇಲೆ ಹೊರಿಸುವಂತಹ ಒಂದು ರಿಸ್ಕಿ ರಾಜಕಾರಣ. ಅದನ್ನು ಕೈಗೆತ್ತಿಕೊಳ್ಳುವ ಮುಂಚೂಣಿ ವ್ಯಕ್ತಿಗೆ ಅಧಿಕಾರದ ದಾಹ, ನಿಭಾಯಿಸುವ ಸಾಮರ್ಥ್ಯವಲ್ಲದೆ, ಅದರ ಸಂಪೂರ್ಣ ಫಲಾನುಭವಿಯೂ ತಾನೇ ಆಗಿರುತ್ತೇನೆ ಎಂಬ ವಿಶ್ವಾಸಾತ್ಮಕ ವಾತಾವರಣವೂ ಪಕ್ಷದೊಳಗೆ ಇರಬೇಕಾಗುತ್ತದೆ. ಯಡಿಯೂರಪ್ಪನವರಿಗೇ ಅಂತಹ ವಿಶ್ವಾಸಪೂರ್ಣ ವಾತಾವರಣ ಇಲ್ಲವೆಂದಾದ ಮೇಲೆ, ಬೇರೆ ಯಾರು ತಾನೇ ಆ ರಿಸ್ಕ್‌ಗೆ ಕೈಹಾಕಿಯಾರು? ಹಿಂದಿನ ಎರಡೂ ಸಂದರ್ಭಗಳಲ್ಲಿ ಆಪರೇಷನ್‌ಗೆ ಪ್ರೇರಣೆಯಾಗಿದ್ದ ಅಂತಹ ‘ಡ್ರೈವಿಂಗ್ ಫೋರ್ಸ್’ ಅನುಪಸ್ಥಿತಿಯಲ್ಲಿ ಈ ಸಲ ಆಪರೇಷನ್ ಕಮಲ ಸಂಭವಿಸುವುದಾದರೂ ಹೇಗೆ?
ಇನ್ನು ಅಂಕಿಸಂಖ್ಯೆಗಳ ವಿಚಾರಕ್ಕೆ ಬರೋಣ. ಹಿಂದಿನ ಎರಡೂ ಆಪರೇಷನ್ ಕಮಲಗಳ ಸಂದರ್ಭದಲ್ಲಿ ಬಿಜೆಪಿ ನೂರಕ್ಕಿಂತಲೂ ಹೆಚ್ಚಿನ ಸ್ಥಾನಗಳೊಂದಿಗೆ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 2008ರಲ್ಲಿ 110 ಸ್ಥಾನ ಗಳಿಸಿದ್ದರೆ, 2018ರಲ್ಲಿ 104 ಸ್ಥಾನಗಳೊಂದಿಗೆ ಬಹುಮತಕ್ಕೆ (113) ತೀರಾ ಸನಿಹದಲ್ಲಿ ಮುಗ್ಗರಿಸಿತ್ತು. ಅದರರ್ಥ ಎದುರಾಳಿ ಪಕ್ಷಗಳ ಸಂಖ್ಯಾಬಲ ತೀರಾ ಕ್ಷೀಣವಾಗಿತ್ತು. 2008ರಲ್ಲಿ ಕಾಂಗ್ರೆಸ್ 80 ಸ್ಥಾನ ಗಳಿಸಿದ್ದರೆ, ಜೆಡಿಎಸ್ 28 ಸ್ಥಾನ ಗಳಿಸಿತ್ತು. 2018ಲ್ಲಿ ಕಾಂಗ್ರೆಸ್‌ನ ಗಳಿಕೆ 80ಕ್ಕೆ ಸೀಮಿತವಾಗಿದ್ದರೆ, ಜೆಡಿಎಸ್ 37 ಶಾಸಕರನ್ನು ಹೊಂದಿತ್ತು. ಸಾಧ್ಯಂತದ ದೃಷ್ಟಿಯಿಂದಾಗಿ ನೋಡಿದಾಗ ಈ ಸಂಖ್ಯೆಗಳ ಬಲಾಬಲ, ಆಪರೇಷನ್ ಕಮಲವನ್ನು ನಡೆಸಲು ಬಿಜೆಪಿಗೆ ಒಂದಷ್ಟು ಧೈರ್ಯ ಮತ್ತು ನೈತಿಕವಲ್ಲದ ಭಂಡತನವನ್ನು ತಂದುಕೊಟ್ಟಿತ್ತು ಎಂದರೂ ತಪ್ಪಲ್ಲ.
ಆದರೆ ಈಗ ಅಂಕಿಗಳು ಮೊದಲಿನಂತಿಲ್ಲ. ಕಾಂಗ್ರೆಸ್ 136 ಸ್ಥಾನಗಳೊಂದಿಗೆ ಬಹುಮತಕ್ಕಿಂತಲೂ ಬಹಳಷ್ಟು ಮುಂದೆಯಿದ್ದರೆ, ಬಿಜೆಪಿ 66 ಸ್ಥಾನಗಳಿಗೆ ಕುಸಿದಿದೆ. ಜೆಡಿಎಸ್ ಕೇವಲ ಹತ್ತೊಂಭತ್ತು ಶಾಸಕರನ್ನು ಹೊಂದಿದೆ. ಮೈತ್ರಿಯಿಂದಾಗಿ ಬಿಜೆಪಿ-ಜೆಡಿಎಸ್ ಶಾಸಕರು ಒಟ್ಟುಗೂಡಿದರೂ ವಿರೋಧ ಪಕ್ಷಗಳ ಸಂಖ್ಯೆ 85 ಆಗಲಿದೆ. ಅಂದರೆ ಬಹುಮತವನ್ನು ತಲುಪಬೇಕೆಂದರೆ, 28 ಸ್ಥಾನಗಳ ಕೊರತೆ ಅದಕ್ಕೆ ಕಾಡುತ್ತದೆ. ಆ 28 ಸ್ಥಾನಗಳ ಕೊರತೆ ಪೂರೈಸಿಕೊಳ್ಳಬೇಕೆಂದರೆ, ಈಗ ನಡೆಯಬಹುದೆಂದು ಹುಯಿಲೆಬ್ಬಿಸಲಾಗುತ್ತಿರುವ ಆಪರೇಷನ್ ಕಮಲವು ಕನಿಷ್ಠವೆಂದರೂ 40-45 ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಳ್ಳಬೇಕು! ಯಾಕೆಂದರೆ ಆಪರೇಷನ್‌ಗೆ ತುತ್ತಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪಚುನಾವಣೆ ಎದುರಿಸುವ ಎಲ್ಲರೂ ಗೆಲ್ಲುತ್ತಾರೆಂಬ ವಿಶ್ವಾಸವಿರುವುದಿಲ್ಲ. ಹಾಗಾಗಿ 28ಕ್ಕಿಂತಲೂ ದುಪ್ಪಟ್ಟು ಶಾಸಕರಿಗೇ ಅದು ಗಾಳ ಹಾಕಬೇಕು.
ಡ್ರೈವಿಂಗ್ ಫೋರ್ಸ್ ಎನ್ನಬಹುದಾದ ಯಡಿಯೂರಪ್ಪನವರು ತಮ್ಮ ಗರಿಷ್ಠ ಲವಲವಿಕೆಯಿಂದ ಪಾಲ್ಗೊಂಡ ಈ ಹಿಂದಿನ ಸಂದರ್ಭಗಳಲ್ಲೇ ಆಪರೇಷನ್ ಕಮಲ ಸೆಳೆದುಕೊಳ್ಳಲು ಸಾಧ್ಯವಾದದ್ದು ಮೊದಲ ಸಲ 07 ಮತ್ತು ಎರಡನೇ ಸಲ 17 ವಿರೋಧಿ ಬಣದ ಶಾಸಕರನ್ನು ಮಾತ್ರ! ಅಂತಹದ್ದರಲ್ಲಿ, ಡ್ರೈವಿಂಗ್ ಫೋರ್ಸ್‌ನ ಕೊರತೆ ಕಾಡುತ್ತಿರುವ ಈಗ ಆಪರೇಷನ್ ಕಮಲ 40-45 ಶಾಸಕರನ್ನು ಸೆಳೆದುಕೊಳ್ಳಲು ಸಾಧ್ಯವೇ?
ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಬಿಜೆಪಿಯ ನಾಯಕ ಸಿ.ಟಿ. ರವಿ ಕೂಡಾ, ಈ ಅಂಕಿಗಳ ಆಟದ ವಿಪರ್ಯಾಸವನ್ನು ಒಪ್ಪಿಕೊಂಡಿದ್ದಾರೆ. ‘‘ಬಿಜೆಪಿ-ಜೆಡಿಎಸ್ ಒಟ್ಟುಗೂಡಿದ ನಂತರವೂ ನಮಗೆ ಬಹುಮತ ಸಾಬೀತು ಮಾಡಲು ದೊಡ್ಡ ಸಂಖ್ಯೆಯ ಕೊರತೆ ಕಾಡುತ್ತದೆ. ಅಷ್ಟು ಸಂಖ್ಯೆಯ ಶಾಸಕರನ್ನು ನಾವು ಕಾಂಗ್ರೆಸ್‌ನಿಂದ ಸೆಳೆಯಬೇಕೆಂದರೆ, ಕಾಂಗ್ರೆಸ್ ಒಳಗೆ ಧ್ರುವೀಕರಣದಂತಹ ಬೇಗುದಿಯೇ ಸೃಷ್ಟಿಯಾಗಬೇಕು. ಸದ್ಯಕ್ಕೆ ಅಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಇವೆಯಾದರೂ, ನಮಗೆ ಬೇಕಾದಷ್ಟು ಸಂಖ್ಯೆಯ ಶಾಸಕರು ಬಂಡಾಯವೇಳುವ ಯಾವ ಲಕ್ಷಣಗಳೂ ಇಲ್ಲ’’ ಎಂಬ ಅವರ ಮಾತುಗಳೇ ಆಪರೇಷನ್ ಕಮಲದ ಸಾಧ್ಯತೆಯನ್ನು ತೊಡೆದುಹಾಕುತ್ತವೆ.
ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಈ ಹಿಂದಿನ ಆಪರೇಷನ್ ಕಮಲಗಳ ಫಲಾನುಭವಿ ಬಿಜೆಪಿ ಮಾತ್ರವಾಗಿತ್ತು. ಆದರೆ, ಈಗ ಜೊತೆಗೆ ಜೆಡಿಎಸ್ ಕೂಡಾ ಇರಲಿದೆ. ಜೆಡಿಎಸ್ ಜೊತೆಗಿನ ಈ ಮೈತ್ರಿಯನ್ನು, ಯಡಿಯೂರಪ್ಪನವರನ್ನೂ ಒಳಗೊಂಡಂತೆ, ಸ್ಥಳೀಯ ಬಿಜೆಪಿ ನಾಯಕರನ್ನು ಹೊರಗಿಟ್ಟು ಬಿಜೆಪಿ ಹೈಕಮಾಂಡ್ ಮಾಡಿಕೊಂಡಿರುವಂತಹದ್ದು. ರಾಜ್ಯ ಬಿಜೆಪಿ ನಾಯಕರು ಮತ್ತು ಜೆಡಿಎಸ್ ಮುಖಂಡರ ನಡುವೆ ಇದುವರೆಗೆ ಒಗ್ಗಟ್ಟಿನ ಸಂವಹನ ಸಾಧ್ಯವಾಗಿಲ್ಲ. ಪರಸ್ಪರ ಪೂರಕವಾಗಿ ಮಾತನಾಡಿಲ್ಲ. ಆ ಲಕ್ಷಣವೂ ಗೋಚರಿಸುತ್ತಿಲ್ಲ. ದೇವೇಗೌಡರು-ಕುಮಾರಸ್ವಾಮಿಯವರ ನಂಬಿಕೆದ್ರೋಹದ ನಡವಳಿಕೆಗಳ ಬಗ್ಗೆ ತಮ್ಮದೇ ಗಾಢ ಅನುಭವ-ಅಭಿಪ್ರಾಯಗಳನ್ನು ಹೊಂದಿರುವ ಬಿಜೆಪಿ ನಾಯಕರು, ಅವರನ್ನು ನಂಬಿಕೊಂಡು ಆಪರೇಷನ್ ಕಮಲಕ್ಕೆ ಮುಂದಾಗುವ ಪರಿಸ್ಥಿತಿಯಲ್ಲಂತೂ ಇಲ್ಲ. ಇಂತಹ ಅಪನಂಬುಗೆಯ ಜಂಟಿ ಕಾರ್ಯಾಚರಣೆಯಲ್ಲಿ ಅಷ್ಟು ಬೃಹತ್ ಆಪರೇಷನ್ ನಡೆಸಲು ಸಾಧ್ಯವೇ?
ಅಷ್ಟಾದರೂ ಬಿಜೆಪಿಯ ಕೆಲ ಮತ್ತು ಜೆಡಿಎಸ್‌ನ ನಾಯಕರು ಪದೇಪದೇ ಸರಕಾರದ ಪತನದ ಬಗ್ಗೆ ಯಾಕೆ ಅಷ್ಟು ಕರಾರುವಾಕ್ ಹೇಳಿಕೆ ನೀಡುತ್ತಿದ್ದಾರೆ? ರಾಜಕಾರಣಿಗಳ ಹೇಳಿಕೆಗಳನ್ನು ಪಕ್ಕಕ್ಕಿರಿಸಿ, ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಉತ್ತರ ದಕ್ಕುತ್ತದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತೊರೆದು, ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ರಾಮಪ್ಪ ಲಮಾಣಿ, ಎಂ.ಪಿ. ಕುಮಾರಸ್ವಾಮಿ, ಪೂರ್ಣಿಮಾ ಶ್ರೀನಿವಾಸ್, ಆಯನೂರು ಮಂಜುನಾಥ್ ಹೀಗೆ ಸಾಕಷ್ಟು ಪಟ್ಟಿ ಬೆಳೆಯುತ್ತಿದೆ. ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಒಳ್ಳೆಯ ಫಲಿತಾಂಶ ಬರುವಂತೆ ಮಾಡಿ, ಅದರ ಆಧಾರದ ಮೇಲೆ ಸಿಎಂ ಗಾದಿಯತ್ತ ಮತ್ತೊಂದೆರಡು ಹೆಜ್ಜೆ ಇಡುವ ಇರಾದೆಯಲ್ಲಿದ್ದಾರೆ. ಆ ಕಾರಣಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ಸೆಳೆಯುವ ಕೆಲಸಕ್ಕೆ ಮುಂದಾಗಿರುವುದು ಮೈತ್ರಿ ಪಕ್ಷಗಳಿಗೆ ದೊಡ್ಡ ತಲೆನೋವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ರಾಜಕೀಯ ಭವಿಷ್ಯದ ಕುರಿತು ಆತಂಕಕ್ಕೆ ತುತ್ತಾಗಿರುವ ದೊಡ್ಡ ಸಂಖ್ಯೆಯ ಕಾರ್ಯಕರ್ತರು, ನಾಯಕರು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ, ಈ ಎರಡೂ ಪಕ್ಷಗಳು ಲೋಕಸಭಾ ಚುನಾವಣೆಯಲ್ಲೂ ಭಾರೀ ಮುಖಭಂಗ ಎದುರಿಸಬೇಕಾಗುತ್ತದೆ. ಈ ಒತ್ತಡ ಬಿಜೆಪಿ ನಾಯಕರ ಮೇಲೆ ಹೆಚ್ಚಿದೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಮೋದಿ-ಅಮಿತ್ ಶಾ ಕೆಂಗಣ್ಣಿಗೆ ಗುರಿಯಾಗಿರುವ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್‌ನ ತೀವ್ರ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದಾರೆ. ರಾಜ್ಯಾಧ್ಯಕ್ಷನ ನೇಮಕ ಮಾಡದಿರುವುದು, ವಿಪಕ್ಷ ನಾಯಕನ ಆಯ್ಕೆಗೆ ಆಸಕ್ತಿ ತೋರದಿರುವುದು, ಜೆಡಿಎಸ್ ಜೊತೆಗಿನ ಮೈತ್ರಿಯ ಮಾತುಕತೆಯಲ್ಲಿ ರಾಜ್ಯ ನಾಯಕರನ್ನು ಹೊರಗಿಟ್ಟದ್ದು, ಮಾಜಿ ಸಿಎಂಗಳಾದ ಬೊಮ್ಮಾಯಿ-ಸದಾನಂದ ಗೌಡರಂತಹವರು ದಿಲ್ಲಿಗೆ ಹೋದಾಗಲೂ ಭೇಟಿಗೆ ಅವಕಾಶ ಕೊಡಲು ಸತಾಯಿಸಿದ್ದು ಇವೆಲ್ಲವೂ ಅದರ ಭಾಗವೇ ಆಗಿವೆ.
ಇಂತಹ ಪರಿಸ್ಥಿತಿಯಲ್ಲಿ ತಳಮಟ್ಟದ ನಾಯಕರು, ಕಾರ್ಯಕರ್ತರು ಹತಾಶೆಯಿಂದ ಪಕ್ಷ ತೊರೆದರೆ, ಲೋಕಸಭಾ ಚುನಾವಣೆಯಲ್ಲಿ ಇನ್ನೂ ಕೆಟ್ಟ ಫಲಿತಾಂಶ ನೋಡಬೇಕಾಗುತ್ತದೆ ಮತ್ತು ಹೈಕಮಾಂಡ್‌ನ ಕೆಂಗಣ್ಣಿಗೆ ಮತ್ತಷ್ಟು ಗುರಿಯಾಗಬೇಕಾಗುತ್ತದೆ. ಹೇಗಾದರೂ ಮಾಡಿ, ಆ ಅನಾಹುತವನ್ನು ತಪ್ಪಿಸಬೇಕಿರುವ ಒತ್ತಡಕ್ಕೆ ರಾಜ್ಯ ನಾಯಕರು ಸಿಲುಕಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಬಿಜೆಪಿ ಸಂಸದರು ಗೆದ್ದಿದ್ದರು. ಈ ಸಲ ಅಷ್ಟಲ್ಲದಿದ್ದರೂ, ಒಂದು ಗಣನೀಯ ಮಟ್ಟಿಗಾದರೂ ಸಂಸದರನ್ನು ಗೆಲ್ಲಿಸಿಕೊಳ್ಳದೆ ಹೋದರೆ ರಾಜ್ಯ ನಾಯಕರ ಪರಿಸ್ಥಿತಿ ತೀರಾ ಹದಗೆಡಲಿದೆ. ಅದು ಸಾಧ್ಯವಾಗಬೇಕಾದರೆ, ಪಕ್ಷ ತೊರೆದು ಹೋಗುತ್ತಿರುವ ಕಾರ್ಯಕರ್ತರನ್ನು ತಡೆಯಬೇಕು. ಸುಖಾಸುಮ್ಮನೆ ತಡೆಯುವುದು ಹೇಗೆ? ಕಾರ್ಯಕರ್ತರಲ್ಲಿ ಏನಾದರು ಭರವಸೆ ಮೂಡಿಸಿದರೆ ಮಾತ್ರ ಇಂತಹ ವಲಸೆಯನ್ನು ತಪ್ಪಿಸಲು ಸಾಧ್ಯ. ಆ ಭರವಸೆಯೇ ಆಪರೇಷನ್ ಕಮಲದ ಕನವರಿಕೆ. ಸ್ವಲ್ಪ ದಿನಗಳಲ್ಲಿ ಈ ಸರಕಾರ ಬಿದ್ದು, ಮತ್ತೆ ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕಾರಕ್ಕೇರುತ್ತೆ ಎಂಬ ಭರವಸೆಯನ್ನು ಕಾರ್ಯಕರ್ತರಲ್ಲಿ ತುಂಬಿ ಪಕ್ಷ ತೊರೆಯದಂತೆ ತಡೆಯಲು ಯತ್ನಿಸಲಾಗುತ್ತಿದೆ. ಜೊತೆಗೆ, ಈಗಿರುವ ಕಾಂಗ್ರೆಸ್ ಸರಕಾರದ ಬಗ್ಗೆ ಜನರಲ್ಲೂ ಅಸ್ಥಿರತೆಯ ಮತ್ತು ಭ್ರಮನಿರಸನ ಭಾವನೆ ಹುಟ್ಟುಹಾಕಿದರೆ, ಲೋಕಸಭಾ ಚುನಾವಣೆಗೆ ಮತಚಲಾಯಿಸುವಾಗ ಅವರ ಮೇಲೆ ಪ್ರಭಾವ ಬೀರಿ, ಲಾಭ ಮಾಡಿಕೊಳ್ಳಬಹುದೆನ್ನುವ ಲೆಕ್ಕಾಚಾರವೂ ಇದರ ಹಿಂದೆ ಇದ್ದಂತಿದೆ.
ಅದಕ್ಕೆ ತಕ್ಕಂತೆ ಕಾಂಗ್ರೆಸ್ ಪಾಳಯದಲ್ಲೂ ಬೆಳಗಾವಿ ರಾಜಕಾರಣದ ವಿಚಾರವಾಗಿ, ಸಿಎಂ ಕುರ್ಚಿಯ ಅಧಿಕಾರ ಹಂಚಿಕೆಯ ವಿಚಾರವಾಗಿ ಗೊಂದಲ ಏರ್ಪಡುತ್ತಿರುವುದನ್ನು ಬಿಜೆಪಿ-ಜೆಡಿಎಸ್ ನಾಯಕರು ತಮ್ಮ ಆಪರೇಷನ್ ಕಮಲಕ್ಕೆ ಪೂರಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಾಚೆಗೆ, ಕಾಂಗ್ರೆಸ್ ಸರಕಾರದ ಪತನವೆನ್ನುವುದು ಸದ್ಯದ ಮಟ್ಟಿಗಂತೂ ಗಾಳಿಗೋಪುರವೇ ಸರಿ.
ಆದರೆ ಕುತೂಹಲಕಾರಿ ಸಂಗತಿಯೆಂದರೆ, ಕಾಂಗ್ರೆಸ್ ಶಾಸಕರು ಮಾತ್ರವಲ್ಲದೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ರಂತಹ ನಾಯಕರು ಕೂಡಾ ಆಪರೇಷನ್ ಕಮಲದ ಬಗ್ಗೆ, ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಯತ್ನದ ಬಗ್ಗೆ ಮಾತಾಡುತ್ತಿರುವುದು. ನಿಜ ಹೇಳಬೇಕೆಂದರೆ, ಯಾವ ಆಪರೇಷನ್ ಕಮಲದ ಬಗ್ಗೆ ಹಾಗೂ ಕಾಂಗ್ರೆಸ್ ಸರಕಾರವನ್ನು ಬೀಳಿಸುವ ಬಗ್ಗೆ ಬಿಜೆಪಿ ನಾಯಕರು ಮಾತಾಡುತ್ತಿದ್ದಾರೋ ಆ ವರಸೆಗಳೇ ಬಿಜೆಪಿಗೆ ಲೋಕಸಭಾ ಚುನಾವಣೆಗೆ ದೊಡ್ಡ ಏಟು ಕೊಡಲಿವೆ. ಈಗಾಗಲೇ ಶೇ. 40 ಕಮಿಷನ್‌ನಂತಹ ಆರೋಪಗಳಿಂದಾಗಿ ಭ್ರಷ್ಟಾಚಾರಿಗಳೆಂಬ ಅಪವಾದಕ್ಕೆ ತುತ್ತಾಗಿರುವ ಬಿಜೆಪಿಯವರು, ಸುಭದ್ರ ಸರಕಾರವನ್ನು ಅಸ್ಥಿರಗೊಳಿಸುವ ಯತ್ನದ ಮಾತಾಡಿದಾಗ ಅವರ ಅಧಿಕಾರ ದಾಹದ ಬಗ್ಗೆಯೂ ಜನರಿಗೆ ಕೆಟ್ಟ ಸಂದೇಶ ರವಾನೆಯಾಗಲಿದೆ. ಲೋಕಸಭಾ ಚುನಾವಣೆಯ ಸನಿಹದಲ್ಲಿ ಇಂತಹ ಜನವಿರೋಧಿ ಅಭಿಪ್ರಾಯ ರೂಪುಗೊಳ್ಳುವುದು ಎಷ್ಟು ಅಪಾಯಕಾರಿ ಎಂಬ ಅಂದಾಜು, ರಾಜ್ಯ ಬಿಜೆಪಿಯ ಹತಾಶ ನಾಯಕರಿಗೆ ಇದ್ದಂತೆ ಕಾಣುತ್ತಿಲ್ಲ. ಅವರ ಆಪರೇಷನ್ ಹೇಳಿಕೆಯ ಲಾಭ ಪಡೆದು, ಅವರ ಮಾತುಗಳನ್ನು ಅವರಿಗೇ ಮುಳುವಾಗಿಸುವ ಸಲುವಾಗಿ ಕಾಂಗ್ರೆಸ್ ಪಾಳಯದಿಂದಲೂ ಇಂತಹ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿಯ ಈಗಿನ ಪರಿಸ್ಥಿತಿಯನ್ನು ನೋಡಿದರೆ, ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡಂತೆ ಕಾಣುತ್ತಿದೆಯೇ ವಿನಾ ಮತ್ತೇನೂ ಅಲ್ಲ. ರಾಷ್ಟ್ರೀಯ ಪಕ್ಷವೊಂದಕ್ಕೆ ಪ್ರಬಲ ಪ್ರಾದೇಶಿಕ ನಾಯಕತ್ವ ಮತ್ತು ಮುಂದಾಲೋಚನೆಯ ಮಾರ್ಗದರ್ಶನಗಳು ಇಲ್ಲದೆ ಹೋದರೆ ಏನಾಗುತ್ತದೆ ಎಂಬುದಕ್ಕೆ ರಾಜ್ಯ ಬಿಜೆಪಿಯೇ ಸೂಕ್ತ ನಿದರ್ಶನ!