ಚೇತರಿಸಿಕೊಂಡ ಕಾಂಗ್ರೆಸ್ ಬಿಆರ್ಎಸ್ ಹಿಡಿತದಿಂದ ತೆಲಂಗಾಣವನ್ನು ಕಸಿದುಕೊಳ್ಳಬಹುದೇ?
Photo: wikimedia.org
ಕೇವಲ ಆರು ತಿಂಗಳ ಹಿಂದೆ, ತೆಲಂಗಾಣ ರಾಜಕೀಯದಲ್ಲಿನ ಸನ್ನಿವೇಶ ಈಗಿನದ್ದಕ್ಕಿಂತ ಬಹಳ ಭಿನ್ನವಾಗಿತ್ತು. ಈ ವಿಧಾನಸಭಾ ಚುನಾವಣೆಯಲ್ಲಿ ಬಿಆರ್ಎಸ್ ಮತ್ತು ಆಕ್ರಮಣಕಾರಿ ಬಿಜೆಪಿ ನಡುವೆ ನೇರ ಹಣಾಹಣಿಯಾಗಲಿದೆ ಎಂದು ಭಾವಿಸಲಾಗಿತ್ತು. ಕಾಂಗ್ರೆಸ್ ಹೆಸರಿಗೇ ಇಲ್ಲ ಎನ್ನುವಂತಹ ಸ್ಥಿತಿ ಕಂಡಿತ್ತು. ಆಶಾಭಾವನೆ ಕಳೆದುಕೊಂಡಂತಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ತಮ್ಮ ರಾಜಕೀಯ ಉಳಿವಿಗಾಗಿ ಪರ್ಯಾಯ ಆಯ್ಕೆಗಳ ಹುಡುಕಾಟದಲ್ಲಿದ್ದರು. ಹಾಗಿದ್ದ ಪರಿಸ್ಥಿತಿ ಹೇಗೆ ಬದಲಾಗಿದೆಯೆಂದರೆ, ಇಂದು ಬಿಆರ್ಎಸ್ ಹೊರತುಪಡಿಸಿ ತೆಲಂಗಾಣದ ಯಾರಾದರೂ ಕಾಂಗ್ರೆಸ್ನ ಪರವಾದ ಅಲೆ ಹಲವಾರು ಹಂತಗಳಲ್ಲಿ ಏರಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವ ಬಗ್ಗೆ ಯಾವುದೇ ವಿವಾದಗಳಿಲ್ಲದಿದ್ದರೂ, ಅದು ಅಧಿಕಾರವನ್ನು ಕಸಿದುಕೊಳ್ಳುವ ಮಟ್ಟಿಗೆ ಬೆಳೆದಿದೆಯೇ ಎಂಬುದು ಈಗಿನ ಪ್ರಶ್ನೆ. ಈಗ ಕಾಣಿಸುತ್ತಿರುವುದು ಒಂದು ಬಗೆಯ ಅಸ್ಪಷ್ಟತೆ. ಬಿಆರ್ಎಸ್ ಮತ್ತು ಅದೇ ರೀತಿ ಕಾಂಗ್ರೆಸ್ ಪರವಾಗಲೀ ಅಥವಾ ವಿರುದ್ಧವಾಗಲೀ ಯಾವುದೇ ವಿವೇಚನಾಶೀಲ ಅಲೆ ಕಂಡುಬರುತ್ತಿಲ್ಲ. ಇದು ಹಲವಾರು ಸಮೀಕ್ಷೆಗಳಿಂದ ತಿಳಿದುಬಂದಿದೆ. ಅವುಗಳಲ್ಲಿ ಪ್ರತಿಯೊಂದು ಸಮೀಕ್ಷೆಯೂ ಎರಡು ಪ್ರಮುಖ ಸ್ಪರ್ಧಿಗಳಾದ ಬಿಆರ್ಎಸ್ ಮತ್ತು ಕಾಂಗ್ರೆಸ್ಗೆ ವಿಭಿನ್ನ ಸಂಖ್ಯೆಗಳನ್ನು ತೋರಿಸುತ್ತಿವೆ. ಅವುಗಳಲ್ಲಿ ಕೆಲವು ಅತಂತ್ರ ವಿಧಾನಸಭೆಯ ಸಾಧ್ಯತೆಯನ್ನೂ ಸೂಚಿಸಿವೆ. ಕೆಲವು ಬಿಆರ್ಎಸ್ಗೆ ಸ್ವಲ್ಪಮಟ್ಟಿನ ಅವಕಾಶ ಒದಗುವ ಸಾಧ್ಯತೆಯ ಬಗ್ಗೆ ಹೇಳಿವೆ. ಹೆಚ್ಚಿನವು ಕಾಂಗ್ರೆಸ್ ಪರ ಅಲೆಯನ್ನು ಗಮನಿಸಿವೆ. ಈ ಸಮೀಕ್ಷೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಅಂಶವೆಂದರೆ ಕಾಂಗ್ರೆಸ್ ಪಕ್ಷದ ಸ್ಪಷ್ಟ ಚೇತರಿಕೆ.
ಕಾಂಗ್ರೆಸ್ನ ಈ ಮೇಲೇರುವಿಕೆಗೆ ಹಲವಾರು ಅಂಶಗಳು ಕೊಡುಗೆ ನೀಡಿರಬಹುದು. ಬಿಆರ್ಎಸ್ ಶಾಸಕರ ವಿರುದ್ಧ ಕ್ಷೇತ್ರದ ಮಟ್ಟದಲ್ಲಿ ಆಡಳಿತ ವಿರೋಧಿ ಅಲೆ ಕಂಡುಬಂದಿರುವುದೂ ಇವುಗಳಲ್ಲಿ ಒಂದು. ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಕರ್ನಾಟಕದ ಗೆಲುವು ಖಂಡಿತವಾಗಿಯೂ ಬಲ ತುಂಬಿದೆ ಎಂಬುದು ನಿಜ. ತೆಲಂಗಾಣ ಘಟಕದ ಮುಖ್ಯಸ್ಥರಾಗಿದ್ದ ಬಂಡಿ ಸಂಜಯ್ ಅವರನ್ನು ತೆಗೆದುಹಾರಿದ ನಂತರ ಬಿಜೆಪಿ ಅವನತಿಯ ಹಾದಿ ಹಿಡಿದದ್ದು ಮತ್ತು ಬಿಆರ್ಎಸ್ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಬಿಜೆಪಿಯೊಂದಿಗೆ ಕೈಜೋಡಿಸಿವೆ ಎಂಬ ಗ್ರಹಿಕೆ ಜನರಲ್ಲಿ ಬಂದಿರುವುದೂ ಕಾಂಗ್ರೆಸ್ ಕಡೆ ಒಲವು ಹೆಚ್ಚಲು ಕಾರಣವಾಗಿರುವ ಇತರ ಅಂಶಗಳಾಗಿವೆ.
ತೆಲಂಗಾಣ ರಾಜ್ಯ ಸ್ಥಾಪನೆಯ ಏಕೈಕ ಶ್ರೇಯಸ್ಸು ತಮಗೆ ಸಲ್ಲಬೇಕು ಎಂದು ಹೇಳಿಕೊಳ್ಳುತ್ತಾ, ಕಾಂಗ್ರೆಸ್ ಮತ್ತು ಬಿಆರ್ಎಸ್ ಎರಡೂ ಕ್ರಮವಾಗಿ ಇಚ್ಚಿನ ಪಕ್ಷ (ರಾಜ್ಯ ಸ್ಥಾನಮಾನ ನೀಡಿದ ಪಕ್ಷ) ಮತ್ತು ತೆಚ್ಚಿನ ಪಕ್ಷ (ಆಂದೋಲನದ ಮೂಲಕ ರಾಜ್ಯ ಸ್ಥಾನಮಾನವನ್ನು ಸಾಧಿಸಿದ ಪಕ್ಷ) ಎಂದು ತಮ್ಮನ್ನು ಬಣ್ಣಿಸಿಕೊಳ್ಳುತ್ತವೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮತ್ತು ಅವರ ಕುಟುಂಬದ ವಿರುದ್ಧ ಕಾಂಗ್ರೆಸ್ ತನ್ನದೇ ಆದ ರೀತಿಯಲ್ಲಿ ರಾಜಕೀಯ ದಾಳಿ ನಡೆಸಿದೆ. ಅವರು ಹಿಂದಿನ ಫ್ಯೂಡಲ್ ದೊರೆಗಳಂತೆ ತೆಲಂಗಾಣವನ್ನು ತಮ್ಮದೇ ಎನ್ನುವಂತೆ ಪರಿವರ್ತಿಸಿಕೊಂಡಿದ್ದಾರೆ ಎಂಬುದು ಕಾಂಗ್ರೆಸ್ನ ಆರೋಪಗಳಲ್ಲಿ ಒಂದು. ಕೆಸಿಆರ್ ವಿರುದ್ಧ ಅವರು ಜನರ ಕೈಗೆ ಸಿಗದವರು (ಇದು ಅವರಿಗೆ ಫಾರ್ಮ್ಹೌಸ್ ಸಿಎಂ ಎಂಬ ಹೆಸರು ತಂದುಕೊಟ್ಟಿತು) ಮತ್ತು ಅವರ ಕುಟುಂಬದ ಕೈಯಲ್ಲಿ ಅಧಿಕಾರ ಕೇಂದ್ರೀಕೃತವಾಗಿದೆ ಎಂಬ ವ್ಯಾಪಕ ಆರೋಪಗಳನ್ನು ಗಮನಿಸಿದರೆ, ಕಾಂಗ್ರೆಸ್ನ ಈ ಮಾತುಗಳು ಹಲವರನ್ನು ಪ್ರಭಾವಿಸಿದಂತೆ ಕಾಣಿಸುತ್ತದೆ.
ರಾಜಕೀಯ ಭಿನ್ನಾಭಿಪ್ರಾಯವನ್ನು ನಿವಾರಿಸಲು ವಿರೋಧ ಪಕ್ಷದ ಶಾಸಕರನ್ನು ಆಡಳಿತ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಾರೆ ಮತ್ತು ಸಿವಿಲ್ ಸೊಸೈಟಿ ಸದಸ್ಯರ ಬಂಧನದಂಥ ಹಲವಾರು ನಿದರ್ಶನಗಳನ್ನು ಮುಂದಿಟ್ಟು ಕೆಸಿಆರ್ ಆಡಳಿತದಲ್ಲಿ ದಬ್ಬಾಳಿಕೆ ನಡೆದಿದೆ ಎಂಬ ಆರೋಪಗಳನ್ನೂ ಕಾಂಗ್ರೆಸ್ ಮಾಡಿದೆ. ಬಿಆರ್ಎಸ್ನ ಹೆಚ್ಚು ಪ್ರಚಾರ ಪಡೆದ ಕಾಳೇಶ್ವರಂ ಯೋಜನೆ ಸೇರಿದಂತೆ ಕೆಸಿಆರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವ್ಯಾಪಕ ಭ್ರಷ್ಟಾಚಾರದ ಆರೋಪಗಳು ಕಾಂಗ್ರೆಸ್ನ ಪ್ರಚಾರದಲ್ಲಿ ಮುಖ್ಯ ಜಾಗ ಪಡೆದಿದ್ದವು. ಇದು ಸಾಮಂತ ರಾಜರ ಆಳ್ವಿಕೆಯಿಂದ ವಿಮೋಚನೆಗಾಗಿ ಮತ್ತೊಂದು ಹೋರಾಟ ಎಂದ ಕಾಂಗ್ರೆಸ್, ಅದಕ್ಕೆ ಜನರು ಕೈಜೋಡಿಸುವಂತೆ ಹೇಳಿತು.
ಕಾಂಗ್ರೆಸ್ ತನ್ನ ಕರ್ನಾಟಕ ಪ್ರಣಾಳಿಕೆಯ ಪ್ರಕಾರ ತೆಲಂಗಾಣದ ಮತದಾರರಿಗೆ ಆರು ಖಾತರಿಗಳನ್ನು ಘೋಷಿಸಿದೆ. ಅಭಿವೃದ್ಧಿಯ ಮೇಲೆ ಹೆಚ್ಚು ಕೇಂದ್ರೀಕರಿಸಿದ ಮತ್ತು ಸಮಾಜದ ವಿವಿಧ ವರ್ಗಗಳನ್ನು ಒಳಗೊಳ್ಳುವ ಅದರ ಪ್ರಣಾಳಿಕೆಯು ಕೂಡ ಕಾಂಗ್ರೆಸ್ ಪರವಾಗಿ ಕೆಲಸ ಮಾಡಬಹುದು. ಕಾಂಗ್ರೆಸ್ನ ಪ್ರಣಾಳಿಕೆಯಿಂದ ತನಗೆ ಆಗಬಹುದಾದ ಹಾನಿ ಎಂಥದು ಎಂಬುದನ್ನು ಅರಿತಿರುವ ಬಿಆರ್ಎಸ್, ತನ್ನ ಪ್ರಣಾಳಿಕೆಯ ಮೂಲಕ ಕಾಂಗ್ರೆಸನ್ನು ಮೀರಿಸಲು ಯತ್ನಿಸಿರುವುದೂ ನಡೆದಿದೆ.
ಕಾಂಗ್ರೆಸ್ ತನ್ನ ಮಹಾಲಕ್ಷ್ಮಿ ಖಾತರಿಯ ಭಾಗವಾಗಿ ಅರ್ಹ ಮಹಿಳೆಯರಿಗೆ ಮಾಸಿಕ 2,500 ರೂ. ಘೋಷಿಸಿದರೆ, ಅದಕ್ಕೆ ಪೈಪೋಟಿಯಾಗಿ ಬಿಆರ್ಎಸ್, ಮಾಸಿಕ ಗೌರವಧನವಾಗಿ 3,000 ರೂ. ಘೋಷಿಸಿದೆ. 500 ರೂ.ಗೆ ಎಲ್ಪಿಜಿ ಸಿಲಿಂಡರ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದ್ದರೆ, ಬಿಆರ್ಎಸ್ 400 ರೂ.ಗೆ ನೀಡುವುದಾಗಿ ಹೇಳಿದೆ.
ಅದೇ ರೀತಿ, ರೈತರಿಗೆ ಪ್ರತಿ ಎಕರೆಗೆ ವರ್ಷಕ್ಕೆ 10,000 ರೂ.ನಿಂದ 15,000 ರೂ.ಗೆ ಹೂಡಿಕೆ ಬೆಂಬಲವನ್ನು ಹೆಚ್ಚಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಬಿಆರ್ಎಸ್ ಸರಕಾರದ ಯೋಜನೆಯಡಿ ಲಾಭ ಪಡೆಯದ ಗೇಣಿದಾರ ರೈತರಿಗೂ ಭರವಸೆ ನೀಡುವ ಮೂಲಕ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿದೆ. ಪ್ರತಿಯಾಗಿ ಬಿಆರ್ಎಸ್ ಪ್ರತೀ ಎಕರೆಗೆ ವರ್ಷಕ್ಕೆ 16,000 ರೂ.ಘೋಷಿಸಿದೆ.
ಕಾಂಗ್ರೆಸ್ ತನ್ನ ಮತ್ತೊಂದು ಯೋಜನೆಯಡಿ, ವೃದ್ಧಾಪ್ಯ ಪಿಂಚಣಿ ಫಲಾನುಭವಿಗಳಿಗೆ ತಿಂಗಳಿಗೆ 4,000 ರೂ. ಘೋಷಿಸಿದ್ದರೆ, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಮೊತ್ತವನ್ನು ಈಗಿರುವ 2,000 ರೂ.ಗಳಿಂದ 5,000 ರೂ.ಗೆ ಹೆಚ್ಚಿಸುವುದಾಗಿ ಬಿಆರ್ಎಸ್ ಭರವಸೆ ನೀಡಿದೆ.
ಬಿಆರ್ಎಸ್ ಸರಕಾರದ ವಿರುದ್ಧ ಕೋಪಗೊಂಡಿರುವ ಯುವಕರು ಮತ್ತು ಸರಕಾರಿ ಉದ್ಯೋಗ ಆಕಾಂಕ್ಷಿಗಳ ಮತಗಳನ್ನು ತನ್ನತ್ತ ಸೆಳೆಯುವ ಯತ್ನವನ್ನು ಕಾಂಗ್ರೆಸ್ ಮಾಡಿದೆ. ಬಿಆರ್ಎಸ್ ಸರಕಾರವು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಯಾವುದೇ ಅಕ್ರಮಗಳಿಲ್ಲದೆ ನೇಮಕಾತಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದೆ ರಾಜ್ಯದ ನಿರುದ್ಯೋಗಿ ಯುವಕರನ್ನು ಹತಾಶರನ್ನಾಗಿಸಿರುವ ವಿಚಾರದ ಬಗ್ಗೆ ಬಿಆರ್ಎಸ್ ಕಾರ್ಯಕರ್ತರಿಗೆ ಕೂಡ ಈಗಾಗಲೇ ಆತಂಕವಾಗಿದೆ. ಯುವಜನರು ಬಿಆರ್ಎಸ್ ಪರವಾಗಿ ಇಲ್ಲದಿರುವುದು ಕಾಂಗ್ರೆಸ್ ಪಾಲಿಗೆ ಅನುಕೂಲಕರವಾಗಿ ಪರಿಣಮಿಸುವ ಸಾಧ್ಯತೆಗಳು ಕಂಡುಬಂದಿವೆ. ವಾಸ್ತವವಾಗಿ, ಕಾಂಗ್ರೆಸ್ ಉದ್ಯೋಗ ಕ್ಯಾಲೆಂಡರ್ ಘೋಷಿಸುವ ಮೂಲಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ ಮತ್ತು ಮುಂದಿನ ಸರಕಾರ ರಚಿಸುವ ವಿಶ್ವಾಸದಲ್ಲಿದೆ.
ಬಿಆರ್ಎಸ್ ಸರಕಾರದಿಂದ ಭ್ರಮನಿರಸನಗೊಂಡಿರುವ ಇತರರಲ್ಲಿ, ಮಧ್ಯಂತರ ಪರಿಹಾರ, ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ ಮತ್ತು ವೇತನ ಪರಿಷ್ಕರಣೆ ಆಯೋಗ ಇಂಥ ಇತರ ಸಮಸ್ಯೆಗಳ ನಡುವೆ ದೀರ್ಘಕಾಲದಿಂದ ಕಾಯುತ್ತಿರುವ ಸರಕಾರಿ ನೌಕರರು ಕೂಡ ಸೇರಿದ್ದಾರೆ. ದಲಿತ ಬಂಧು ಮತ್ತು ಡಬಲ್ ಬೆಡ್ರೂಮ್ ಮನೆಗಳಂತಹ ಬಿಆರ್ಎಸ್ ಸರಕಾರದ ಯೋಜನೆಗಳಿಂದ ಹೊರಗುಳಿದ ಹೆಚ್ಚಿನ ಸಂಖ್ಯೆಯ ಜನರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಬಹುದು. ಬಿಆರ್ಎಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂಬ ಪರಿಣಾಮಕಾರಿ ಸಂದೇಶದಿಂದಾಗಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರು ಕಾಂಗ್ರೆಸ್ನ ಹಿಂದೆ ಒಗ್ಗೂಡಿ ನಿಲ್ಲಬಹುದು.
ಕರ್ನಾಟಕದಲ್ಲಿ ಕಾಂಗ್ರೆಸ್ ಜಯ ಗಳಿಸಿದ ನಂತರ ಬಿಆರ್ಎಸ್ಗೆ ಪರ್ಯಾಯವಾಗಿ ಬಿಜೆಪಿ ಎಂಬ ಗ್ರಹಿಕೆ ಗಮನಾರ್ಹವಾಗಿ ತಗ್ಗಿದೆಯಾದರೂ, ಹಲವಾರು ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಮತಗಳನ್ನು ವಿಭಜಿಸುವ ಮೂಲಕ ಅದು ಕಾಂಗ್ರೆಸ್ ಮತಗಳನ್ನು ಕಸಿಯುವ ಸಾಧ್ಯತೆಯೂ ಇದೆ. ಕೊರುಟ್ಲಾ, ಎಲ್ಬಿ ನಗರ, ಬೋಧನ್, ಕಾಮರೆಡ್ಡಿ, ನಿರ್ಮಲ್, ಮಹೇಶ್ವರಂ ಮತ್ತು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ನಿಗಮದ ಕೆಲವು ಸ್ಥಾನಗಳು ಸೇರಿದಂತೆ ಸುಮಾರು 20 ಸ್ಥಾನಗಳಲ್ಲಿ ಬಿಆರ್ಎಸ್ ವಿರೋಧಿ ಮತಗಳಿಗಾಗಿ ಕಾಂಗ್ರೆಸ್ ವಿಶೇಷವಾಗಿ ತೀವ್ರ ಹೋರಾಟವನ್ನು ಎದುರಿಸಬೇಕಾದೀತು ಎಂದು ಹೇಳಲಾಗಿದೆ.
ಹೀಗೆ ಕಳೆದ ಕೆಲವು ತಿಂಗಳುಗಳಲ್ಲಿ ಸಕಾರಾತ್ಮಕ ಪ್ರಭಾವವನ್ನು ಜನರ ಮನಸ್ಸಿನಲ್ಲಿ ಹೆಚ್ಚಿಸಿಕೊಂಡ ನಂತರವೂ ಕಾಂಗ್ರೆಸ್ಗೆ ಎಲ್ಲವೂ ಸುಲಭವಾಗಿದೆ ಎಂದು ಹೇಳುವ ಹಾಗೇನೂ ಇಲ್ಲ. 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಬಿಆರ್ಎಸ್ ಮತ್ತು ಬಿಜೆಪಿ ಒಗ್ಗೂಡುವ ಸಾಧ್ಯತೆಯಿಂದಾಗಿ 60ಕ್ಕಿಂತ ಒಂದು ಸ್ಥಾನ ಕಡಿಮೆ ಗೆದ್ದರೂ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮುಂದಿನ ಸರಕಾರ ರಚಿಸಲು ಸಾಧ್ಯವಿಲ್ಲ ಎಂಬುದು ಪಕ್ಷದ ಹಿರಿಯ ಮುಖಂಡರೊಬ್ಬರ ಮಾತು. ಇದನ್ನೂ ಮೀರಿ, ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸೀತೆ ಎಂಬುದು ಈಗಿನ ಪ್ರಶ್ನೆ.
(ಆಧಾರ:thewire.in)