ಜಾತಿ-ಗಣತಿ: ಇನ್ನು ಕರ್ನಾಟಕದ ಸರದಿ!
ಎಷ್ಟೆಲ್ಲಾ ಅಡ್ಡಿ-ಆತಂಕಗಳ ನಡುವೆಯೂ ಬಿಹಾರ ಸರಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ-ಗಣತಿ) ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಿ ಅದನ್ನು ಬಹಿರಂಗ ಗೊಳಿಸುವುದರ ಮೂಲಕ ದಿಟ್ಟತನ ಮೆರೆದಿದೆ. ಇದಕ್ಕೆ ಕಾರಣೀಭೂತರಾದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಾರ್ಯದಕ್ಷತೆಗೆ ಶಹಭಾಸ್‌ಗಿರಿ ಸಲ್ಲಲೇಬೇಕು. ಜಾತಿ ಸಮೀಕ್ಷೆ ನಡೆಸಬಾರದೆಂದು ರಾಜಕೀಯವಾಗಿ ಹಾಗೂ ನ್ಯಾಯಾಲಯಗಳ ಮೆಟ್ಟಿಲುಗಳ ತುಳಿಯುವುದರ ಮೂಲಕ ಅದಕ್ಕೆ ತಡೆ ಒಡ್ಡಬೇಕೆಂದು ಕೆಲವು ಕೊಳಕು ಮನಸ್ಸುಗಳು ಇನ್ನಿಲ್ಲದಂತೆ ಪ್ರಯತ್ನಿಸಿದವು. ಅವೆಲ್ಲವೂ ವಿಫಲಗೊಂಡವು. ಅವುಗಳನ್ನೆಲ್ಲ ಮೆಟ್ಟಿನಿಂತು ಯಶಸ್ಸು ಸಾಧಿಸಿರುವ ನಿತೀಶ್ ಕುಮಾರ್‌ರ ಧೈರ್ಯ ಮೆಚ್ಚಲೇಬೇಕು. ಈ ದೇಶದ ಪ್ರಧಾನಿ ಮೋದಿಯವರು ಕೂಡ ಪರೋಕ್ಷವಾಗಿ ಬಿಹಾರದ ಜಾತಿ-ಗಣತಿಯ ಯಶಸ್ಸಿನ ಬಗ್ಗೆ ‘‘ಜಾತಿಗಳನ್ನು ಮುಂದಿಟ್ಟುಕೊಂಡು ದೇಶವನ್ನು ಛಿದ್ರಗೊಳಿಸಲಾಗುತ್ತಿದೆ’’ ಎಂದು ಸಲ್ಲದ ಕುಹಕವಾಡಿದ್ದಾರೆ. ಈ ಕುಹಕದಿಂದ ಮೇಲ್ಜಾತಿಗಳ ಹಿಡಿತದಲ್ಲಿರುವ ಭಾಜಪದ ಮನಸ್ಥಿತಿಯನ್ನು ಒಬ್ಬ ರಾಜಕೀಯ ಪಡ್ಡೆಯೂ ಊಹಿಸುವುದು ಕಷ್ಟವೇನಲ್ಲ!
ಸಮೀಕ್ಷೆಯ ದತ್ತಾಂಶಗಳಂತೆ ಬಿಹಾರದ ಒಟ್ಟು ಜನಸಂಖ್ಯೆ13.07 ಕೋಟಿ ಇದೆ. ಅದರಲ್ಲಿ ಹಿಂದುಳಿದ ವರ್ಗ 3.54 ಕೋಟಿ (ಶೇ.27.12), ಅತಿ ಹಿಂದುಳಿದ ವರ್ಗ 4.70 ಕೋಟಿ (ಶೇ.36.01), ಪರಿಶಿಷ್ಟ ಜಾತಿ 2.56 ಕೋಟಿ (ಶೇ.19.65), ಪರಿಶಿಷ್ಟ ಪಂಗಡ 21.99 ಲಕ್ಷ (ಶೇ.1.68) ಹಾಗೂ ಇನ್ನಿತರ ಸಾಮಾನ್ಯ ವರ್ಗ 2.02 ಕೋಟಿ (ಶೇ.15.52). ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳು ಒಟ್ಟಾರೆ 8.24 ಕೋಟಿ (ಶೇ.63.13) ಇವೆ. ಈ ದತ್ತಾಂಶಗಳಿಂದ ಕಂಡುಬರುವ ಒಟ್ಟಂಶವೆಂದರೆ ಹಿಂದುಳಿದ ವರ್ಗಗಳೇ ಬಹುಸಂಖ್ಯಾತರಾಗಿರುವುದು.
ಪ್ರಮುಖ ಜಾತಿಗಳ ಜನಸಂಖ್ಯೆ ಹೀಗಿದೆ: ಯಾದವ 1.86 ಕೋಟಿ (ಶೇ. 14.26), ಕೂರ್ಮಿ 37.22 ಲಕ್ಷ (ಶೇ. 2.87), ಕುಶ್ವಹಾ 55.05 ಲಕ್ಷ (ಶೇ.4.21), ಬ್ರಾಹ್ಮಣ 47.81 ಲಕ್ಷ(ಶೇ. 3.65), ರಜಪೂತ್ 45.10 ಲಕ್ಷ (ಶೇ. 3.45), ಭೂಮಿಹಾರ 37.5 ಲಕ್ಷ (ಶೇ. 2.86), ಕಾಯಸ್ಥ 7.85 ಲಕ್ಷ (ಶೇ. 0.60) ಹಾಗೂ ಮುಸ್ಲಿಮ್ 2.30 ಕೋಟಿ (ಶೇ.17.70).
ಜಾತಿ- ಗಣತಿ ಜನಸಂಖ್ಯೆಯನ್ನು ಬಿಡುಗಡೆಗೊಳಿಸಿರುವುದನ್ನು ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ಸ್ವಾಗತಿಸಿದೆ. ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇರಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಮುಂದಿಟ್ಟಿದೆ. ಜಾತಿ-ಗಣತಿ ವರದಿಯು ಬಿಹಾರದಲ್ಲಿನ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಲಿದ್ದು ಹೊಸದೊಂದು ಸಮೀಕರಣಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಇದರಿಂದಾಗಿ ರಾಷ್ಟ್ರೀಯ ಮಟ್ಟದಲ್ಲೂ ಜಾತಿ-ಗಣತಿ ನಡೆಯಬೇಕಾಗಿದೆ ಎಂಬುದನ್ನು ಹಲವಾರು ಪಕ್ಷಗಳ ಮುಖಂಡರು ಹೇಳಿಕೊಂಡಿರುವರು. ರಾಷ್ಟ್ರೀಯ ಮಟ್ಟದಲ್ಲಿ ಜಾತಿ-ಜನಗಣತಿ ಮಾಡಲು ರಾಷ್ಟ್ರ ಉತ್ಸುಕವಾದರೆ ಮೊದಲಿಗೆ ಜನಗಣತಿ ಕಾಯ್ದೆ 1948ನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ಏಕೆಂದರೆ ನ್ಯಾಯಾಲಯಗಳಲ್ಲಿ ಕೇಂದ್ರ ಸರಕಾರದ ಪರವಾಗಿ ಹಾಜರಿದ್ದ ವಕೀಲರೆಲ್ಲರೂ ಕಾಯ್ದೆಯಲ್ಲಿ ಜಾತಿ-ಜನಗಣತಿ ಮಾಡಲು ರಾಜ್ಯಗಳಿಗೆ ಅವಕಾಶವಿಲ್ಲ ಎಂದು ಹೇಳುತ್ತಲೇ ಬರುತ್ತಿದ್ದಾರೆ. ವಸಾಹತುಶಾಹಿ ಕಾಲಘಟ್ಟದಲ್ಲಿ ಕಡೆಯದಾಗಿ ನಡೆದ ಜಾತಿ-ಜನಗಣತಿ 1931ರಲ್ಲಿ. ಸ್ವಾತಂತ್ರ್ಯ ಗಳಿಸಿದ ತರುವಾಯ ಜನಗಣತಿಗಾಗಿ ಕಾಯ್ದೆಯೊಂದನ್ನು 1948ರಲ್ಲಿ ತರಲಾಯಿತು. ಯಾರ ಚಿತಾವಣೆಯೋ ಏನೋ 1948ರ ಕಾಯ್ದೆಯಲ್ಲಿ ಜಾತಿ ಎಣಿಕೆಯ ವಿಷಯ ಸೇರಿಸಲಿಲ್ಲ. ಅದೇ ಕಾರಣದಿಂದ ರಾಷ್ಟ್ರೀಯ ಮಟ್ಟದಲ್ಲಿ ದಶವಾರ್ಷಿಕ ಜನಗಣತಿ ನಡೆಯುವ ಸಂದರ್ಭದಲ್ಲಿ ಜಾತಿಯನ್ನು ಪರಿಗಣಿಸುವುದಿಲ್ಲ.
ತಮಿಳುನಾಡಿನಲ್ಲಿ 1982ರಷ್ಟರಲ್ಲಿಯೇ ಅಂಬಾ ಶಂಕರ್ ಆಯೋಗ ಶೇ. 100ರಷ್ಟು ಜಾತಿ ಮತ್ತದರ ಅಂಕಿ ಅಂಶಗಳನ್ನು ಸಂಗ್ರಹಿಸಿದೆ. ಹೀಗಾಗಿ ಈ ವಿಷಯದಲ್ಲಿ ಅದು ಮೊದಲಿಗ ರಾಜ್ಯವಾಗುತ್ತದೆ. ಆನಂತರದ 2015ರಲ್ಲಿ ಕರ್ನಾಟಕ ರಾಜ್ಯವು ಅತ್ಯಂತ ವ್ಯವಸ್ಥಿತವಾಗಿ ಜಾತಿ-ಜನಗಣತಿಯ ಅಂಕಿ ಅಂಶಗಳನ್ನು ಸಂಗ್ರಹಿಸಿದ್ದರೂ, ರಾಜಕೀಯ ಕಾರಣಗಳಿಗಾಗಿಯೋ ಏನೋ, ಅದು ಹಿಂದುಳಿದ ವರ್ಗಗಳ ಆಯೋಗದ ಕಚೇರಿಯ ಕಪಾಟಿನಲ್ಲಿ ಗೆದ್ದಲು ತಿನ್ನುತ್ತಿದೆ. ಕರ್ನಾಟಕದ ನಂತರ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಜಾತಿ-ಜನಗಣತಿ ಅಂಕಿ ಅಂಶಗಳನ್ನು ಸಂಗ್ರಹಿಸಲು ಮುಂದೆ ಬಂದವಾದರೂ, ಅವುಗಳ ಹಣೆಬರಹ ಏನಾಗಿದೆ ಎಂಬುದು ಈವರೆಗೂ ತಿಳಿದಿಲ್ಲ. ಪ್ರಸಕ್ತ ಒಡಿಶಾ ರಾಜ್ಯವು ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಹೆಚ್ಚು ಕಡಿಮೆ ಬಿಹಾರ ರಾಜ್ಯವು ಈ ವಿಷಯದಲ್ಲಿ ಮೊದಲಿಗನಾಗಿ ಜಾತಿ-ಗಣತಿ ಅಂಕಿ ಅಂಶಗಳನ್ನು ಇಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಕಟ್ಟಾಜ್ಞೆ ಕೋಟಾ ಶೇ.50ರ ಮಿತಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿದೆ. ಮೊತ್ತ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯ 1962ರಲ್ಲಿ ಎಂ.ಆರ್. ಬಾಲಾಜಿ ಪ್ರಕರಣದಲ್ಲಿ ಏನೇ ಇದ್ದರೂ ಮೀಸಲಾತಿಯ ಕೋಟಾ ಮಿತಿ ಶೇ.50ರಷ್ಟನ್ನು ಮೀರಿ ಹೋಗಬಾರದು ಎಂದು ಆದೇಶಿಸಿತ್ತು. ಅದೇ ವಿಷಯ 1992ರಲ್ಲಿ ಮಂಡಲ್ ಮೊಕದ್ದಮೆಯಲ್ಲಿ ಸಂವಿಧಾನದ 9 ಮಂದಿ ಪೀಠದಲ್ಲಿ ಮತ್ತೆ ವಿಚಾರಣೆಗೆ ಬಂದು, ಅದನ್ನು ಎತ್ತಿ ಹಿಡಿಯಲಾಯಿತು.ಇದರ ಹಿಂದಡಗಿರುವ ತತ್ವವೆಂದರೆ: ಮೀಸಲಾತಿಗೆ ಒಳಪಡುವ ವರ್ಗಗಳಿಗೂ ಮತ್ತು ಸಾಮಾನ್ಯ ವರ್ಗಗಳಿಗೂ ಸಮಾನ ಅವಕಾಶ ಇರಬೇಕೆಂಬುದು ನ್ಯಾಯಾಲಯದ ಆಶಯ. ಅದು ಹೀಗಿದೆ: ‘‘ಅನುಚ್ಛೇದ 15(4)ಮತ್ತು 16(4)ರ ಅಡಿಯಲ್ಲಿ ಮೀಸಲಾತಿಯು ಶೇ. 50ರಷ್ಟನ್ನು ಮೀರಬಾರದು ಮತ್ತು ಒಕ್ಕೂಟ ಹಾಗೂ ರಾಜ್ಯಗಳು ಒಟ್ಟಾರೆಯಾಗಿ ಇದನ್ನು ಸರಿ ಎಂದು ಒಪ್ಪಿ ಕೊಂಡಿರುವುದರಿಂದ ಸಾಂವಿಧಾನಿಕವಾಗಿ ನಿಷೇಧಕ್ಕೊಳಪಟ್ಟಿದೆ. ಒಂದು ವೇಳೆ ಶೇ.50ಕ್ಕಿಂತ ಮೀಸಲಾತಿ ಹೆಚ್ಚಿದ್ದಲ್ಲಿ ಅದನ್ನು ರದ್ದುಗೊಳಿಸಬೇಕು. ಅನುಚ್ಛೇದ 16(4)ರ ಅಡಿಯಲ್ಲಿ ಮೀಸಲಾತಿ ಯಾವುದೇ ಸಂದರ್ಭದಲ್ಲಿಯೂ ಶೇ. 50ರಷ್ಟನ್ನು ಮೀರಬಾರದು.’’ (ಪ್ಯಾರಾ 619, ಇಂದ್ರಾ ಸಹಾನಿ v/s ಭಾರತ ಸರಕಾರ)
ಮುಂದುವರಿದು ಸರ್ವೋಚ್ಚ ನ್ಯಾಯಾಲಯ ಅಸಾಮಾನ್ಯ ಸಂದರ್ಭದಲ್ಲಿ ಮಾತ್ರ ಶೇ. 50ರಷ್ಟನ್ನು ಮೀರಿ ಹೋಗಬಹುದು ಎಂದು ಹೇಳಿದೆಯಾದರೂ ಅಂತಹ ಅಸಾಮಾನ್ಯ ಸಂದರ್ಭ ಯಾವುದು ಎಂದು ವಿವರಿಸಿಲ್ಲ. ಪ್ರಸಕ್ತ ಬಿಹಾರವು ಎಲ್ಲಾ ಹಿಂದುಳಿದ- ಅತಿ ಹಿಂದುಳಿದ ವರ್ಗಗಳ ಜನಸಂಖ್ಯೆ ತನ್ನಲ್ಲಿರುವುದರಿಂದ ಅವಶ್ಯವಿದ್ದಲ್ಲಿ ಮೀಸಲಾತಿ ಕೋಟವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಕರ್ನಾಟಕದಲ್ಲಿಯೂ ಮೀಸಲಾತಿ ಕೋಟ ಶೇ.50 ಅನ್ನುಮೀರಿ ಹೋಗಿರುವುದರಿಂದ(ಶೇ. 56) ಎಚ್. ಕಾಂತರಾಜ್ ಆಯೋಗ ನಡೆಸಿರುವ ಸಮೀಕ್ಷೆ ಅಂಕಿ ಅಂಶಗಳನ್ನು ಆಧಾರವಾಗಿ ಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ.
ಬಿಹಾರದಲ್ಲಿ ಭಾಜಪ ಗಣತಿ ಕಾರ್ಯಕ್ಕೆ ಮೊದಲು ಒಪ್ಪಿಗೆ ನೀಡಿತ್ತಾದರೂ, ಆನಂತರ ಅಸಮಾಧಾನ ವ್ಯಕ್ತಪಡಿಸಿದೆ. ಸಮೀಕ್ಷೆ ‘ಬದಲಾಗಿರುವ ಸಾಮಾಜಿಕ ಮತ್ತು ಆರ್ಥಿಕ ವಾಸ್ತವಾಂಶ’ಗಳ ಬಗ್ಗೆ ಏನನ್ನೂ ತಿಳಿಸುವುದಿಲ್ಲ ಎಂದು ಬಿಹಾರ ಘಟಕದ ಭಾಜಪ ಅಧ್ಯಕ್ಷ ಸಾಮ್ರಾಟ್ ಚೌದರಿ ಹೇಳಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜಾತಿ-ಗಣತಿಯನ್ನು ವಿರೋಧಿಸಿ ಕೊಂಡೇ ಬಂದಿರುವ ಆ ಪಕ್ಷಕ್ಕೆ ತಕ್ಕುದಾದ ಮಾತುಗಳಿವು. ಈ ಮಾತುಗಳು ಆ ಪಕ್ಷದ ರಾಜಕೀಯ ಇಬ್ಬಂದಿತನವನ್ನು ತೋರಿಸುತ್ತವೆ.
ಕರ್ನಾಟಕದಲ್ಲೂ ಹೆಚ್ಚುತ್ತಿರುವ ಒತ್ತಡ
ಬಿಹಾರದಲ್ಲಿ ಜಾತಿ ಸಮೀಕ್ಷೆಯ ಅಂಕಿ ಅಂಶಗಳು ಬಹಿರಂಗ ಗೊಂಡ ನಂತರ ಕರ್ನಾಟಕದ ಜನತೆ ಕರ್ನಾಟಕದಲ್ಲಿ ಈಗಾಗಲೇ ನಡೆದಿರುವ ಸಮೀಕ್ಷೆಯನ್ನು ಯಾಕೆ ಬಿಡುಗಡೆ ಮಾಡಬಾರದು ಎಂದು ಕೇಳುತ್ತಿದ್ದಾರೆ. ಬಿಹಾರದಲ್ಲಿ ಕೇವಲ ಒಂದೂವರೆ ವರ್ಷದಲ್ಲಿ ಅದು ಸಾಧ್ಯವಾಗುವುದಾದರೆ ಕರ್ನಾಟಕದಲ್ಲಿ ಸುಮಾರು ವರ್ಷಗಳೇ ಕಳೆದು ಹೋಗಿದ್ದರೂ ಬಿಡುಗಡೆ ಭಾಗ್ಯ ಅದಕ್ಕಿಲ್ಲ. ಕಾಂಗ್ರೆಸ್ ಪಕ್ಷದ ಪ್ರಕಾರ, ಜಾತಿ ಗಣತಿ ವರದಿ ಬಿಡುಗಡೆಗೂ ಶೀಘ್ರ ಮುಹೂರ್ತ ಕೂಡಿಬರುವ ಲಕ್ಷಣಗಳು ದಟ್ಟವಾಗಿವೆ. ವರದಿ ಬಿಡುಗಡೆಗೆ ಎಲ್ಲಾ ವರ್ಗಗಳು ಸಹಕರಿಸಬೇಕು ಎಂದು ಹೇಳಿರುವುದಾಗಿ ವರದಿಯಾಗಿದೆ. ಆದರೆ ಭಾಜಪ ಮಾತ್ರ ಸವಾಲಿನ ರೂಪದಲ್ಲಿ ಅಂಕಿ ಅಂಶಗಳ ಬಿಡುಗಡೆಯ ವಿಳಂಬವನ್ನು ಪ್ರಶ್ನಿಸಿದೆ. ‘‘ಸಾಮಾಜಿಕ ನ್ಯಾಯ ಒದಗಿಸುವ ರಾಜಕೀಯ ಇಚ್ಛಾಶಕ್ತಿ ಇದ್ದರೆ ಕರ್ನಾಟಕದಲ್ಲಿ ಜಾತಿ ಸಮೀಕ್ಷೆಯ ವರದಿ ಬಹಿರಂಗಪಡಿಸಬೇಕು’’ ಎಂದು ಅದು ಹೇಳಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, 20 ಸಂಪುಟಗಳಲ್ಲಿ ಸಿದ್ಧಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯು ಸದ್ಯ ಆಯೋಗದ ಬಳಿ ಇದ್ದು, ಅದರಲ್ಲಿನ ಸಂಖ್ಯೆಗಳನ್ನು ಆಧರಿಸಿ ಎಲ್ಲಾ ಸಮೂಹಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಅಂಶಗಳನ್ನು ಅಧ್ಯಯನ ಮಾಡಲಾಗುತ್ತಿದೆ, ಬರುವ ನವೆಂಬರ್ ವೇಳೆಗೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿರುವುದು ವರದಿಯಾಗಿದೆ.
ವಸ್ತುಸ್ಥಿತಿ ಇದಾಗಿದ್ದರೂ, ಆಯೋಗದ ವತಿಯಿಂದ ದತ್ತಾಂಶಗಳನ್ನು ಪಡೆಯಲು ಸರಕಾರವೇಕೆ ವಿಳಂಬ ಮಾಡುತ್ತಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಚುನಾವಣೆ ನಡೆದು ಕಾಂಗ್ರೆಸ್ ಸರಕಾರ ಬಂದ ನಂತರದಲ್ಲಿ ಸಮೀಕ್ಷೆಗೆ ಮರುಜೀವ ಬಂದಿದೆ ಎಂದೇ ಎಲ್ಲರೂ ಬಯಸಿದ್ದರು. ಈ ಕುರಿತು ಮುಖ್ಯಮಂತ್ರಿಗಳು ಸಾಂದರ್ಭಿಕವಾಗಿ ಆಯೋಗದಿಂದ ಸಮೀಕ್ಷೆಯ ದತ್ತಾಂಶಗಳನ್ನು ಸರಕಾರ ಸದ್ಯದಲ್ಲಿಯೇ ಸ್ವೀಕರಿಸುವುದು ಎಂದು ಹೇಳಿರುತ್ತಾರೆ. ಆದರೆ ಕಾಣದ ಕೈಗಳ ಕೈವಾಡವೋ ಏನೋ ಅದಕ್ಕೆ ಕಾಲಮಿತಿಯಂತೂ ನಿಗದಿಯಾಗಿಲ್ಲ.
ಈ ಹಿಂದೆಯೇ ಅದಕ್ಕಿರಬಹುದಾದ ಊಹಾತ್ಮಕ ಕಾರಣಗಳನ್ನು ನಾನು ಕೆಲವು ಲೇಖನಗಳಲ್ಲಿ ಪ್ರಸ್ತಾಪಿಸಿರುವೆ. ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015’ ನಡೆಸುವ ಉದ್ದೇಶದಿಂದ ಹಿಂದುಳಿದ ವರ್ಗಗಳ ಆಯೋಗ ಬಹಳಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡು ಸರಕಾರದ ಆಡಳಿತ ಇಲಾಖೆಯ ಸಿಬ್ಬಂದಿ ಮೂಲಕವೇ ಸಮೀಕ್ಷೆ ನಡೆಸಬೇಕೆಂದು ತೀರ್ಮಾನಿಸಿ ಜಿಲ್ಲಾ, ಉಪವಿಭಾಗ ಮತ್ತು ತಹಶೀಲ್ ಮಟ್ಟದಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಇತರ ಇಲಾಖೆಯ ಸಿಬ್ಬಂದಿಯನ್ನೂ ಉಪಯೋಗಿಸಿಕೊಂಡು, ಸಮಾಜ ವಿಜ್ಞಾನಿಗಳ ಮತ್ತು ಪರಿಣಿತ ಅಧಿಕಾರಿಗಳ ಹಾಗೂ ತಂತ್ರಜ್ಞಾನಿಗಳ ಪೂರ್ವಭಾವಿ ಸಭೆಗಳನ್ನು ನಡೆಸಿ ಅವರು ನೀಡಿದ ಸಲಹೆಗಳನ್ನು ಮತ್ತು ರಾಷ್ಟ್ರೀಯ ಜನಗಣತಿಯಲ್ಲಿ ಅನುಸರಿಸಿರುವ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಸಮೀಕ್ಷೆಗೆ ಅವಶ್ಯ ಬೇಕಾಗಿರುವ ಪರಿಕರಗಳನ್ನು ಸಿದ್ಧಪಡಿಸಿಕೊಂಡು ಬಿ.ಇ.ಎಲ್. ಸಂಸ್ಥೆಯ ತಂತ್ರಜ್ಞಾನಾಧಾರಿತ ಮೇಲ್ವಿಚಾರಣೆಯಲ್ಲಿ ಸಮೀಕ್ಷಾ ಕಾರ್ಯಕ್ಕಾಗಿ ಆಯೋಗ ಸಿದ್ಧತೆ ಮಾಡಿಕೊಂಡು ಬಹು ಯಶಸ್ವಿಯಾಗಿ ಸಮೀಕ್ಷಾ ಕಾರ್ಯವನ್ನು ಪೂರೈಸಿತು.
ಈ ನಡುವೆ ಕೆಲವು ದೃಶ್ಯ ಮಾಧ್ಯಮಗಳು ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಕಪೋಲ ಕಲ್ಪಿತ ವರದಿಗಳು ಬಿತ್ತರಗೊಂಡವು. ಅವುಗಳ ‘ಸಾಚಾ’ತನವನ್ನೇ ನಂಬಿದ ಕೆಲವು ಹಿತಾಸಕ್ತಿಗಳು ಸಮೀಕ್ಷೆಯ ಬಗ್ಗೆ ಅನಗತ್ಯವಾಗಿಯೋ ಅಥವಾ ಸತ್ಯದ ಮಾಹಿತಿಯ ಕೊರತೆಯೋ ಏನೋ ವಿರೋಧಿಸತೊಡಗಿದವು. ಹೀಗಾಗಿ ಸಮೀಕ್ಷೆಯು ಬಾಲಗ್ರಹ ಪೀಡಿತವಾಯಿತು.
ಸರಕಾರವು ಸಮೀಕ್ಷಾ ವಿರೋಧಿಗಳ ಜೊತೆ ಮಾತುಕತೆ ನಡೆಸಿ, ಸಮೀಕ್ಷೆಯ ಬಗ್ಗೆ ಅವರಿಗೆ ತಿಳುವಳಿಕೆ ನೀಡಿ ಮನವೊಲಿಸುವುದರ ಮೂಲಕ ಸಮೀಕ್ಷೆಯ ಅಂಕಿ ಅಂಶಗಳನ್ನು ಪಡೆದು ಅವುಗಳಿಂದ ಉಂಟಾಗಬಹುದಾದ ಪ್ರಯೋಜನವನ್ನು ಸಮುದಾಯಗಳಿಗೆ ಒದಗಿಸುವ ಕಾರ್ಯವನ್ನು ಯಾವುದೇ ಒತ್ತಡ ತಂತ್ರಗಳಿಗೆ ಮಣಿಯದೆ, ಸರಕಾರ ಕೂಡಲೇ ಮಾಡಬೇಕಾಗಿದೆ.