ಜಾನುವಾರು ಮಸೂದೆ: ಸಣ್ಣ ರೈತರ ಜೀವನೋಪಾಯದ ಬಗ್ಗೆ ದಿವ್ಯ ನಿರ್ಲಕ್ಷ್ಯ
ಪ್ರಾಣಿ ಸಾಕಣೆಯ ಬಂಡವಾಳೀಕರಣ, ಜಾಗತಿಕ ಮಾರುಕಟ್ಟೆಯೊಂದಿಗಿನ ಅದರ ನಂಟು ಲಕ್ಷಾಂತರ ಕೆಳಜಾತಿಯ ಸಣ್ಣ ಉತ್ಪಾದಕರನ್ನು ಮತ್ತು ಅವರ ಜಾನುವಾರುಗಳನ್ನು ಅವರ ಪ್ರಾಣಿ ಕೃಷಿ ಜೀವನೋಪಾಯದಿಂದ ಹೊರಗಿಟ್ಟಿದೆ. ಈ ರಫ್ತು ಉದ್ದೇಶದ ಜಾನುವಾರು ಉತ್ಪಾದನಾ ನೀತಿ, ಜೀವನೋಪಾಯ ಮತ್ತು ಪೌಷ್ಟಿಕಾಂಶದ ಭದ್ರತೆಯ ಮೂಲವಾಗಿ ಪ್ರಾಣಿಗಳ ಮೇಲೆ ಅವಲಂಬಿತವಾಗಿರುವ ಸಣ್ಣ ಉತ್ಪಾದಕರ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
✍️ ಸಾಗರಿ ಆರ್. ರಾಮದಾಸ್
ಜೂನ್ 7ರಂದು ಜಾನುವಾರು ಮತ್ತು ಜಾನುವಾರು ಉತ್ಪನ್ನಗಳು (ಆಮದು ಮತ್ತು ರಫ್ತು) ಮಸೂದೆ, 2023ನ್ನು ಮಂಡಿಸಿದ್ದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ, ತೀವ್ರ ಟೀಕೆಗಳ ಬಳಿಕ ಹಿಂದೆಗೆದುಕೊಂಡಿದೆ. ಮಸೂದೆಗೆ ಸಾರ್ವಜನಿಕರಿಂದ ಅಭಿಪ್ರಾಯ ಮತ್ತು ಸಲಹೆಗಳನ್ನು ಕೋರಿದ್ದ ಸಚಿವಾಲಯ, ಪ್ರಾಣಿ ಕಲ್ಯಾಣ ಮತ್ತಿತರ ಸೂಕ್ಷ್ಮತೆಗಳನ್ನು ಉಲ್ಲೇಖಿಸಿ ಅದನ್ನೀಗ ಹಿಂಪಡೆದಿದೆ.
ಈ ಮಸೂದೆಯನ್ನು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ಭಾರತೀಯ ಕಿಸಾನ್ ಸಂಘದಂತಹ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಯೋಜಿತವಾಗಿರುವ ಸಂಸ್ಥೆಗಳು ಟೀಕಿಸಿವೆ. ಈ ಮಸೂದೆ ಬೀದಿ ಪ್ರಾಣಿಗಳ ಹಾವಳಿಗೆ ದಿವ್ಯೌಷಧವಾಗಿದೆ ಎಂದು ಭಾರತೀಯ ಕಿಸಾನ್ ಸಂಘ ಹೇಳಿದ್ದರೂ, ಇದು ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳಿಗೆ ನೋವುಂಟು ಮಾಡಿದೆ ಎನ್ನುವ ಮೂಲಕ ಮಸೂದೆಯನ್ನು ವಿರೋಧಿಸಿದೆ.
ಸರಕಾರ ಮಸೂದೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದಂತೆ ಕಂಡುಬಂದರೂ, ಜಾನುವಾರು ಮತ್ತು ಜಾನುವಾರು ಉತ್ಪನ್ನಗಳ ರಫ್ತಿನ ಮೇಲಿನ ತನ್ನ ವ್ಯಾಪಾರ ನೀತಿಗಳಿಗೆ ಅದು ಇನ್ನೂ ಜವಾಬ್ದಾರ ವಾಗಿರುತ್ತದೆ ಎಂಬುದನ್ನು ಗಮನಿಸಬೇಕು.
ಈಗ ಹಿಂಪಡೆದಿರುವ ಕರಡು ಮಸೂದೆ ಬೆಕ್ಕುಗಳು ಮತ್ತು ನಾಯಿಗಳು ಸೇರಿದಂತೆ ದೇಶದಲ್ಲಿನ ಪ್ರತಿಯೊಂದು ಸಾಕುಪ್ರಾಣಿಗಳನ್ನು ಜಾನುವಾರುಗಳೆಂದು ವ್ಯಾಖ್ಯಾನಿಸಿದೆ. ಇದು ಜಾನುವಾರು ಮತ್ತು ಜಾನುವಾರು ಉತ್ಪನ್ನಗಳ ರಫ್ತುಗಳನ್ನು ಸಕ್ರಿಯವಾಗಿ ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವ ಹೊಸ ಸೆಕ್ಷನನ್ನೂ ಒಳಗೊಂಡಿದೆ.
ಮಸೂದೆಯ ರಚನೆ ಮತ್ತು ಹಿಂದೆಗೆದುಕೊಳ್ಳುವಿಕೆ ಎರಡರಲ್ಲೂ ಸರಕಾರ, ತಮ್ಮ ಉಳಿವಿಗಾಗಿ ಜಾನುವಾರುಗಳನ್ನು ಅವಲಂಬಿಸಿರುವ ಲಕ್ಷಾಂತರ ಕೆಳಜಾತಿಯ ಭೂರಹಿತರು, ಅಂಚಿನಲ್ಲಿರುವವರು ಮತ್ತು ಸಣ್ಣ ರೈತರ ಜೀವನ ಮತ್ತು ಜೀವನೋಪಾಯವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬುದನ್ನು ಗಮನಿಸಬೇಕು. ಭಾರತದ ಸುಮಾರು ಶೇ.70ರಷ್ಟು ಜಾನುವಾರುಗಳ ಪಾಲಕರು ಇವರೇ ಆಗಿದ್ದಾರೆ.
ಜಾನುವಾರು ಅಭಿವೃದ್ಧಿ, ಕೃಷಿ, ಭೂ ಬಳಕೆ ಮತ್ತು ಅರಣ್ಯ ನೀತಿಗಳು ಸ್ಥಳೀಯ ಜಾನುವಾರುಗಳ ಸಂಖ್ಯೆ ತೀವ್ರ ಕುಸಿತ ಕಾಣುವುದಕ್ಕೆ ಕಾರಣವಾಗಿವೆ. ಈಗ ರಫ್ತು ನೀತಿಯೊಂದಿಗೆ ಇದು ಇನ್ನಷ್ಟು ಕುಸಿಯಲಿದೆ.
ಕಳೆದ 75 ವರ್ಷಗಳಲ್ಲಿ ವಿವಿಧ ಸ್ಥಳೀಯ ಜಾನುವಾರು ತಳಿಗಳಾದ ದನ, ಎಮ್ಮೆ, ಮೇಕೆ, ಕುರಿ, ಕುದುರೆ, ಕತ್ತೆ, ಹೇಸರಗತ್ತೆ, ಹಂದಿ, ಯಾಕ್, ಒಂಟೆ, ನಾಯಿ ಮತ್ತು ಕೋಳಿಗಳ ಸಂಖ್ಯೆಯಲ್ಲಿ ಭಾರೀ ಕುಸಿತವಾಗಿರುವುದನ್ನು ಜಾನುವಾರು ಗಣತಿ ಸ್ಪಷ್ಟವಾಗಿ ಬಹಿರಂಗಪಡಿಸಿದೆ. ಹಲವಾರು ಸ್ಥಳೀಯ ತಳಿಗಳನ್ನು ಅಪರೂಪದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದ ಅಂಚಿನಲ್ಲಿರುವ ತಳಿಗಳೆಂದು ಗುರುತಿಸಲಾಗಿದೆ.
ಈ ನಷ್ಟಕ್ಕೆ ಕಾರಣವಾಗಿರುವ ಕೆಲವು ನಿರ್ಣಾಯಕ ನೀತಿ ನಿರ್ಧಾರಗಳು ಹೀಗಿವೆ:
ಹೆಚ್ಚು ಉತ್ಪಾದಿಸುವ ಡೈರಿ ತಳಿಗಳನ್ನು ಉತ್ತೇಜಿಸಲು ಡೈರಿ ನೀತಿಗಳ ಕೈಗಾರಿಕೀಕರಣ ಮತ್ತು ಆ ಮೂಲಕ ನಮ್ಮ ವೈವಿಧ್ಯಮಯವಾದ ಪರಿಸರದ ವಿಶಿಷ್ಟ ಬಹುಪಯೋಗಿ ಸ್ಥಳೀಯ ತಳಿಗಳ ಪಾತ್ರವನ್ನು ನಿರ್ಲಕ್ಷಿಸಲಾಗಿದೆ.
ಗೋಹತ್ಯೆ ವಿರೋಧಿ ನೀತಿ, ವಯಸ್ಸಾದವುಗಳ ಮಾರಾಟ ಮೌಲ್ಯ ಕುಸಿತ ಗ್ರಾಮೀಣ ರೈತರು ಜಾನುವಾರುಗಳನ್ನು ಸಾಕುವುದನ್ನು ವ್ಯವಸ್ಥಿತವಾಗಿ ತಡೆಯುತ್ತದೆ.
ಫಾರ್ಮ್ ಯಾಂತ್ರೀಕರಣ ನೀತಿಗಳು ದೇಶಾದ್ಯಂತ ಪ್ರಾಣಿಗಳ ತಳಿಗಳನ್ನೇ ಬದಲಿಸಿಬಿಟ್ಟಿದೆ.
ದೋಷಪೂರಿತ ಭೂ-ಬಳಕೆ ನೀತಿ, ಎಲ್ಲ ಸವಲತ್ತುಳ್ಳ ಕೆಲವೇ ಕೆಲವು ಪ್ರಬಲ ಜಾತಿಯವರ ಕೈಯಲ್ಲಿ ಭೂಮಿ ಸೇರುವಂತೆ ಮಾಡಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಇಂಥ ನೀತಿಗಳು ಸಾಮಾನ್ಯ ಹುಲ್ಲುಗಾವಲು ಭೂಮಿ ಮತ್ತು ನೀರಿನ ಮೂಲಗಳ ಸ್ವಾಧೀನಕ್ಕೆ ಕಾರಣವಾಗಿವೆ. ಹೀಗಾಗಿ, ಭೂಮಿಯನ್ನು ಹೊಂದಿರದ ಗ್ರಾಮೀಣ ಜನರು ಪ್ರಾಣಿ ಸಾಕಣೆಯಲ್ಲಿ ತೊಡಗಿಸಿಕೊಳ್ಳುವುದು ಗಮನಾರ್ಹವಾಗಿ ಕಡಿಮೆಯಾಗಿದೆ.
ಹಸಿರು ಕ್ರಾಂತಿಯ ಕೃಷಿಯ ಹೆಚ್ಚಿನ ಬಂಡವಾಳ ಆಧಾರಿತ ಮತ್ತು ಕೈಗಾರಿಕಾ ವ್ಯವಸ್ಥೆ ಕೂಡ ಮೇವಿನ ಕೊರತೆಗೆ ಕಾರಣ. ಈ ಹಿಂದೆ ಪ್ರಾಣಿಗಳ ಆಹಾರಕ್ಕಾಗಿ ವಿವಿಧ ಬೆಳೆಯ ಹುಲ್ಲು ಲಭ್ಯವಿರುತ್ತಿತ್ತು. ಈಗ ಭತ್ತ ಮತ್ತು ಗೋಧಿ ಕೊಯ್ಲಿನಲ್ಲಿ ಯಂತ್ರಗಳ ವ್ಯಾಪಕ ಬಳಕೆಯಿಂದಾಗಿ ಸುಮಾರು ಶೇ.50ರಷ್ಟು ಹುಲ್ಲು ಹೊಲದಲ್ಲಿಯೇ ಉಳಿದು, ಕಡೆಗೆ ಮುಂದಿನ ಬೆಳೆಯ ವೇಳೆಗೆ ಅದನ್ನು ಸುಡುವ ಕ್ರಮ ಅನುಸರಿಸಲಾಗುತ್ತಿದೆ. ಇದಲ್ಲದೆ, ಕಳೆನಾಶಕಗಳು ಮತ್ತು ಸಸ್ಯನಾಶಕಗಳ ವ್ಯಾಪಕ ಬಳಕೆ ಕೂಡ ಪ್ರಾಣಿ ಮೇವುಗಳಾದ ನೈಸರ್ಗಿಕ ಹುಲ್ಲು, ಗಿಡ, ಬಳ್ಳಿಗಳ ಲಭ್ಯತೆಯನ್ನು ಕಡಿಮೆ ಮಾಡಿದೆ.
ಪ್ರಾಣಿ ಸಾಕಣೆಯ ಬಂಡವಾಳೀಕರಣ, ಜಾಗತಿಕ ಮಾರುಕಟ್ಟೆಯೊಂದಿಗಿನ ಅದರ ನಂಟು ಲಕ್ಷಾಂತರ ಕೆಳಜಾತಿಯ ಸಣ್ಣ ಉತ್ಪಾದಕರನ್ನು ಮತ್ತು ಅವರ ಜಾನುವಾರುಗಳನ್ನು ಅವರ ಪ್ರಾಣಿ ಕೃಷಿ ಜೀವನೋಪಾಯದಿಂದ ಹೊರಗಿಟ್ಟಿದೆ. ಈ ರಫ್ತು ಉದ್ದೇಶದ ಜಾನುವಾರು ಉತ್ಪಾದನಾ ನೀತಿ, ಜೀವನೋಪಾಯ ಮತ್ತು ಪೌಷ್ಟಿಕಾಂಶದ ಭದ್ರತೆಯ ಮೂಲವಾಗಿ ಪ್ರಾಣಿಗಳ ಮೇಲೆ ಅವಲಂಬಿತವಾಗಿರುವ ಸಣ್ಣ ಉತ್ಪಾದಕರ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಭಾರತದ ಬಹುಪಾಲು ಸ್ಥಳೀಯ ಪ್ರಾಣಿ ತಳಿಗಳನ್ನು ಆದಿವಾಸಿಗಳು ಮತ್ತು ಇತರ ಬುಡಕಟ್ಟು, ಅರೆ ಅಲೆಮಾರಿ ಬುಡಕಟ್ಟು, ಅಲೆಮಾರಿ ಬುಡಕಟ್ಟಿನವರು, ಇತರ ಹಿಂದುಳಿದ ವರ್ಗದವರು ಮತ್ತು ದಲಿತ ಸಮುದಾಯದವರು ಬೆಳೆಸುತ್ತಾರೆ. ಪ್ರಪಂಚದಾದ್ಯಂತ ಎಲ್ಲಾ ಕೋಳಿ ತಳಿಗಳ ತಾಯಿ ಎಂದು ಹೇಳಲಾಗುವ ಅಸೀಲ್ ಕೋಳಿಯನ್ನು ಪೂರ್ವ ಘಟ್ಟಗಳ ಕೊಂಡ ರೆಡ್ಡಿ ಮತ್ತು ಕೋಯಾ ಆದಿವಾಸಿಗಳು ತಲೆಮಾರುಗಳಿಂದ ಬೆಳೆಸುತ್ತ ಬಂದಿದ್ದಾರೆ. ಅದೇ ರೀತಿ, ಭಾರತೀಯ ಕೋಳಿ ತಳಿಯಾದ ಕಡಕ್ನಾಥ್ ಕೋಳಿಯನ್ನು ಮಧ್ಯಪ್ರದೇಶದ ಝಬುವಾದ ಆದಿವಾಸಿಗಳು ಸಾಕುತ್ತಾರೆ. ಗಿರ್ ದನ ಮತ್ತು ಜಾಫರ್ಬಾಡಿ ಎಮ್ಮೆಗಳನ್ನು ಗಿರ್ ಅರಣ್ಯದ ರೆಬಾರಿಗಳು ಸಾಕುತ್ತಾರೆ; ಕಪ್ಪುಉಣ್ಣೆಯ ಡೆಕ್ಕನಿ ಕುರಿಗಳನ್ನು ಧಂಗಾರ್, ಕುರುಮ ಮತ್ತು ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡಿನ ಉತ್ತರ ಭಾಗದವರೆಗೆ ಕರ್ನಾಟಕವನ್ನು ಆವರಿಸಿರುವ ವಿಶಾಲ ಡೆಕ್ಕನ್ ಪ್ರಸ್ಥಭೂಮಿಯಲ್ಲಿನ ಕುರುಬರು ಸಾಕುತ್ತಾರೆ. ಅಂತೆಯೇ ರಾಜಸ್ಥಾನದ ರೈಕಾ ಸಮುದಾಯಕ್ಕೆ ಒಂಟೆಗಳು ಬದುಕಿನ ಭಾಗವೇ ಆಗಿವೆ.
ಪ್ರತಿಯೊಂದು ಗುರುತಿಸಲ್ಪಟ್ಟ ಮತ್ತು ಮಾನ್ಯತೆ ಪಡೆಯದ ತಳಿಯು, ಪ್ರಾಣಿ ಮತ್ತು ಶತಮಾನಗಳಿಂದ ಅವನ್ನು ಸಾಕುತ್ತ ಬಂದಿರುವ ಜನರ ನಡುವಿನ ಆಂತರಿಕ ಮತ್ತು ಸಂಕೀರ್ಣ ಸಂಬಂಧವನ್ನು ಬಿಂಬಿಸುತ್ತದೆ. ಆದರೆ ಈ ಮಸೂದೆ ಪ್ರಾಣಿ ಸಂಪನ್ಮೂಲಗಳ ಈ ಪಾಲಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ. ಅವರು ತಮ್ಮ ಪ್ರಾಣಿಗಳನ್ನು ಪ್ರೀತಿ, ಸಂತೋಷ, ಕಾಳಜಿ ಮತ್ತು ಆರ್ಥಿಕ ಉದ್ದೇಶದಿಂದ ಸಾಕುತ್ತಾರೆ. ರಫ್ತು ಆಧಾರಿತ ಪ್ರಾಣಿ ಸಾಕಣೆ ಇಂಥ ಅನುಬಂಧವನ್ನೇ ನಾಶಪಡಿಸಬಹುದು.
ಈ ಮಸೂದೆ ಗೋಮಾಂಸದ ಬಗ್ಗೆ ಸರಕಾರದ ನಿಲುವನ್ನು ಸಹ ಬಹಿರಂಗಪಡಿಸುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಗೋಮಾಂಸ ಸೇವನೆಯನ್ನು ಅಪರಾಧವೆಂಬಂತೆ ನೋಡಿದೆ ಮತ್ತು ಗೋಹತ್ಯೆಯನ್ನು ನಿಷೇಧಿಸಿದೆ. ಅಷ್ಟಿದ್ದೂ ಅದು ಗೋಮಾಂಸ ರಫ್ತು ಮಾಡಲು ಇಚ್ಛಿಸುತ್ತದೆ. ಜಾನುವಾರು ಉತ್ಪನ್ನಗಳನ್ನು ಗೋವಿನ ತಾಜಾ, ಶೀತಲೀಕರಿಸಿದ ಮತ್ತು ಹೆಪ್ಪುಗಟ್ಟಿದ ಮಾಂಸ, ಅಂಗಾಂಶ ಮತ್ತು ಅಂಗಗಳು ಸೇರಿದಂತೆ ಎಲ್ಲಾ ರೀತಿಯ ಮಾಂಸ ಮತ್ತು ಮಾಂಸ ಉತ್ಪನ್ನಗಳೆಂದು ವ್ಯಾಖ್ಯಾನಿಸುವ ಮಸೂದೆಯ ಸೆಕ್ಷನ್ 2 (ಎಫ್) ನಿಂದ ಇದು ಸ್ಪಷ್ಟವಾಗಿದೆ.
ಗೋವುಗಳ ಸೇರ್ಪಡೆ ಸರಕಾರ ರಫ್ತಿಗಾಗಿ ವಧೆಯನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸುತ್ತಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ದೇಶೀಯವಾಗಿ ಅದನ್ನು ಕಾನೂನುಬಾಹಿರ ವೆಂದು ಪರಿಗಣಿಸಲಾಗಿರುವ ಹೊತ್ತಿನಲ್ಲಿ ಈ ಪ್ರಶ್ನೆ ಸಹಜ.
ಉತ್ಪಾದನೆಯಾಗುವ ಒಟ್ಟು ವಾರ್ಷಿಕ ಹಾಲಿನ ಶೇ.48ರಷ್ಟನ್ನು ಜಾನುವಾರುಗಳು ಕೊಡುತ್ತಿದ್ದು, ದೇಶದ ಡೈರಿ ಉದ್ಯಮದ ಅತಿದೊಡ್ಡ ಉಪಉತ್ಪನ್ನವಾದ ಗೋಮಾಂಸದಿಂದ ಭಾರೀ ಲಾಭ ಗಳಿಸಲು ಸರಕಾರಕ್ಕೆ ಇದು ಅನುಕೂಲಕರ ಮಾರ್ಗವಾಗಿದೆಯೇ? ಸರಕಾರವು ತನ್ನ ಗೋಹತ್ಯೆ ವಿರೋಧಿ ಕಾನೂನುಗಳ ಮೂಲಕ ದೇಶೀಯ ಆಹಾರದಿಂದ ಗೋಮಾಂಸವನ್ನು ವ್ಯವಸ್ಥಿತವಾಗಿ ತೆಗೆದುಹಾಕಲು ಮತ್ತು ಆ ಮೂಲಕ ಪ್ರತೀ 13ನೇ ಭಾರತೀಯರಲ್ಲಿ ಒಬ್ಬರ ಪೌಷ್ಟಿಕಾಂಶದ ಭದ್ರತೆ ಉಂಟಾಗಲು ಇದು ದಾರಿಯಾದೀತೆ?
ಶ್ರೀಮಂತ, ಆದರೆ ವೇಗವಾಗಿ ಕುಸಿಯುತ್ತಿರುವ ದೇಶದ ವೈವಿಧ್ಯಮಯ ಜಾನುವಾರು ಸಂಪತ್ತಿಗೆ, ಹಾಗೆಯೇ ತಮ್ಮ ಜೀವನೋಪಾಯಕ್ಕಾಗಿ ಈ ಜಾನುವಾರುಗಳನ್ನು ಅವಲಂಬಿಸಿರುವ ಲಕ್ಷಾಂತರ ದಮನಿತ ಜಾತಿಯ ಜನರ ಪಾಲಿಗೆ ದೊಡ್ಡ ಅಪಾಯದಂತೆ ಕಾಣುತ್ತಿದ್ದ, ಕಾನೂನುಬದ್ಧಗೊಳಿಸಲು ಬಯಸಿದ್ದ ಈ ಮಸೂದೆಯನ್ನು ಸದ್ಯಕ್ಕೇನೋ ಹಿಂಪಡೆಯಲಾಗಿದೆ.
ಕೃಪೆ: thiwire.in