ಅಮೃತಕಾಲದಿಂದ ಕರ್ತವ್ಯಕಾಲ: ಹಕ್ಕು ಮತ್ತು ಕರ್ತವ್ಯಗಳ ಸಂಘರ್ಷ
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ 75 ವರ್ಷಗಳ ‘ಅಮೃತಕಾಲ’ ಈಗ ಕಳೆದಿದೆ; 2047ರಲ್ಲಿ ಬರಲಿರುವ ಶತಮಾನೋತ್ಸವದ ತಯಾರಿಗಾಗಿ ‘ಕರ್ತವ್ಯ ಕಾಲ’ ಆರಂಭವಾಗಿದೆ. ಹೋದ ವರ್ಷದ ‘ಹರ್ ಘರ್ ತಿರಂಗಾ’ (ಮನೆಮನೆಯಲ್ಲಿ ಬಾವುಟ)ವೆಂಬ ಕರೆ ಬಂದಿತ್ತು; ಈಗ ‘ಮೇರೀ ಮಾಟಿ, ಮೇರಾ ದೇಶ’ (ನನ್ನ ಮಣ್ಣು, ನನ್ನ ದೇಶ) ಘೋಷವಾಕ್ಯವು ಬಂದಿದೆ. ಇತ್ತೀಚೆಗೆ ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ‘ರಾಜದಂಡ’ವೂ ಪ್ರತ್ಯಕ್ಷವಾಯಿತು. ರಾಜದಂಡ ಅಧಿಕಾರ ಮತ್ತು ಕರ್ತವ್ಯದ ಪ್ರತೀಕ. 2023ರ ಅಂದರೆ 77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಹೊಸ್ತಿಲಿನಲ್ಲಿ ಘೋಷಣೆಗಳ, ಪ್ರತಿಮೆಗಳ, ಪ್ರತೀಕಗಳ ನೆರೆಯೇ ಬರುತ್ತಿದೆ; ದೇಶಕ್ಕೋಸ್ಕರ ಕರ್ತವ್ಯ ಮಾಡಬೇಕು ಎನ್ನಲಾಗುತ್ತಿದೆ. (ಇತ್ತೀಚೆಗಿನ ಉದಾಹರಣೆ: ಆಗಸ್ಟ್ 9ರಂದು ‘ದ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ಅಸ್ಸಾಮ್ ಸರಕಾರದ ಸಂಪೂರ್ಣ ಪುಟದ ಜಾಹೀರಾತು).
ಅಮೃತಕಾಲ ಮತ್ತು ಕರ್ತವ್ಯಕಾಲದ ಪರಿಕಲ್ಪನೆಗಳು:
ಅಮೃತಕಾಲದಲ್ಲಿ ಎರಡು ಭಾವಗಳು ಮೈಗೂಡಿವೆ. ಒಂದು, ಆ ಕಾಲಘಟ್ಟಕ್ಕೆ ತಲುಪಿದ ದಾರಿಯ ಸಮೀಕ್ಷೆ ಹಾಗೂ ಆ ಪಯಣದಲ್ಲಿ ದೇಶವು ಎದುರಿಸಿದ ಸವಾಲುಗಳು. ಎರಡು, ಸಾಧನೆ ಮತ್ತು ವೈಫಲ್ಯಗಳ ಕುರಿತಾದ ಆತ್ಮಾವಲೋಕನ. ಕ್ರಮಿಸಿದ ದಾರಿಯ ಸಮೀಕ್ಷೆಯಷ್ಟೇ ಅಗತ್ಯ ಆತ್ಮಾವಲೋಕನಕ್ಕೂ ಇದೆ. ಆತ್ಮಾವಲೋಕನವು ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ತೋರಿಸಿಕೊಟ್ಟು, ಭವಿಷ್ಯದ ಬಗ್ಗೆ ನಾವು ಹೊಂದಬೇಕಾದ ನಿಲುವು ಮತ್ತು ಅನುಸರಿಸಬೇಕಾದ ದಾರಿಯನ್ನು ರೂಪಿಸಲು ಸಹಕಾರಿಯಾಗುತ್ತದೆ. ಈ ಚಿಂತನೆಗೆ ಭಿನ್ನವಾದುದು ಕರ್ತವ್ಯಕಾಲ. ಕರ್ತವ್ಯದ ಕಲ್ಪನೆಯಲ್ಲಿ ಹಿಂದಿನ ಅನುಭವದಿಂದ ಕಲಿತ ಪಾಠಗಳು ಅಪ್ರಸ್ತುತವಾಗುತ್ತವೆ. ಅವುಗಳ ಚಿಂತನೆಗೆ ಅಲ್ಲಿ ಆಸ್ಪದವಿಲ್ಲ. ನಮ್ಮ ಪ್ರಯಾಣವು ಆರಂಭವಾಗುವುದೇ ನಿರ್ವಾತದಿಂದ; ಹಾಗಾಗಿ ಹಿಂದಿನದು ಅಸಂಗತವಾಗುತ್ತದೆ. ಆದರೆ ಒಂದು ರಾಷ್ಟ್ರವು ಶತಮಾನಗಳ ಪಾರತಂತ್ರ್ಯದಿಂದ ಬಿಡುಗಡೆಯಾಗಿ ಅಭ್ಯುದಯದ ಮಾರ್ಗವನ್ನು ಹುಡುಕುವಾಗ ಅದರ ಭೂತ, ವರ್ತಮಾನ ಮತ್ತು ಭವಿಷ್ಯತ್ತು ಪರಸ್ಪರ ಹೊಂದಿಕೊಂಡೇ ಇರುತ್ತವೆ ಎಂಬುದನ್ನು ಗಮನಿಸಬೇಕು. ಮಧ್ಯಪ್ರಾಚ್ಯದಲ್ಲಿ 1948ರಲ್ಲಿ ಯಹೂದ್ಯರಿಗಾಗಿ ಇಸ್ರೇಲನ್ನು ಸೃಷ್ಟಿಸಿದಾಗ ಹೊಸ ರಾಷ್ಟ್ರಕ್ಕೆ ತನ್ನದೇ ಆದ ಚರಿತ್ರೆ ಇರಲಿಲ್ಲ. ಹಾಗಾಗಿ ಭೂತಕಾಲದ ಹೊರೆಯನ್ನು ಜಾರಿಸುವ ಸವಾಲು ಇಸ್ರೇಲಿಗೆ ಬರಲಿಲ್ಲ. ಒಂದು ವರ್ಷದ ಮೊದಲು, 1947ರಲ್ಲಿ ಸ್ವತಂತ್ರವಾದ ಭಾರತಕ್ಕೆ ಸುದೀರ್ಘವಾದ ಚರಿತ್ರೆ ಇತ್ತು. ಆ ಚರಿತ್ರೆಯ ಧನಾತ್ಮಕ ಕೊಡುಗೆಯನ್ನು ಕಾಪಾಡುವ ಜೊತೆಗೆ, ಅಲ್ಲಿಂದ ಬಂದ ಹೊರೆಯನ್ನು ಇಳಿಸುವ ನೈತಿಕ ಜವಾಬ್ದಾರಿಯೂ ದೇಶದ ನಾಯಕರ ಮುಂದೆ ಇತ್ತು.
ಈ ಜವಾಬ್ದಾರಿಯ ಅರಿವು ಅಂದಿನ ನಾಯಕರಿಗಿತ್ತು ಎಂಬುದು ಎರಡು ಚಾರಿತ್ರಿಕ ಘಟನೆಗಳಿಂದ ಸ್ಪಷ್ಟವಾಗುತ್ತದೆ. 1947 ಆಗಸ್ಟ್ 14-15ರ ನಡುರಾತ್ರಿ ದೇಶವನ್ನು ಉದ್ದೇಶಿಸಿ ಹೊಸ ಪ್ರಧಾನಿ ಜವಾಹರಲಾಲ್ ನೆಹರೂ ಮಾಡಿದ ಭಾಷಣ -‘ಭವಿಷ್ಯತ್ತಿನ ಜೊತೆ ಅನುಸಂಧಾನ’ (ಎ ಟ್ರಿಸ್ಟ್ ವಿತ್ ಡೆಸ್ಟಿನಿ) ಹೊಸ ರಾಷ್ಟ್ರದ ಅನನ್ಯವಾದ ಚರಿತ್ರೆಯನ್ನು ನೆನಪಿಸುವುದರ ಜೊತೆಗೆ ಅದರ ಬಳುವಳಿಯಾಗಿ ಉಳಿದ ಹೊರೆಯ ನಿವಾರಣೆ ಹೇಗಾಗಬೇಕು ಎಂಬುದನ್ನು ಸೂಕ್ಷ್ಮವಾಗಿ ಉಲ್ಲೇಖಿಸುತ್ತದೆ. ಆ ಬಳಿಕ 1949ರ ನವೆಂಬರ್ 26ರಂದು ದೇಶವು ತನಗೇ ಸಮರ್ಪಿಸಿದ ಹೊಸ ಸಂವಿಧಾನವು ಭೂತಕಾಲದ ಹೊರೆಯನ್ನು ಇಳಿಸುವ ಹಾಗೂ ಸರ್ವಜನರ ಅಭ್ಯುದಯಕ್ಕೆ ದಾರಿಗಳನ್ನು ತೋರಿಸಿತು. ಮುಂದಿನ ಸುಮಾರು 70 ವರ್ಷಗಳಲ್ಲಿ ಈ ಎರಡು ಘಟನೆಗಳಲ್ಲಿ ಅಂತರ್ಗತವಾದ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಭಾರತವು ಸಾಕಷ್ಟು ಮುನ್ನಡೆ ಸಾಧಿಸಿದೆ. ಮುನ್ನಡೆಯ ದಾರಿಯಲ್ಲಿ ಜನರ ಹಕ್ಕುಗಳೂ ನಿರ್ಣಾಯಕ ಸ್ಥಾನವನ್ನು ಪಡೆದವು. ಹಕ್ಕುಗಳನ್ನು ಕಸಿಯುವ ಪ್ರಯತ್ನವು 1975-77ರ ಅವಧಿಯಲ್ಲಿ ನಡೆದರೂ ನಾಗರಿಕರ ಪ್ರಜ್ಞೆಯಿಂದಾಗಿ ದೇಶದ ಪ್ರಜಾಸತ್ತೆಯು ಮತ್ತೆ ಹಳಿಗೇರಿ ದೇಶ ಪ್ರಗತಿ ಪಥದಲ್ಲಿ ಮುನ್ನಡೆಯಿತು. ಈ ಚಾರಿತ್ರಿಕ ಸತ್ಯಗಳನ್ನು ಇಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅನೇಕ ಸನ್ನಿವೇಶಗಳಲ್ಲಿ ಮುನ್ನೆಲೆಗೆ ತಂದಿದ್ದರು. ಎರಡು ಉದಾಹರಣೆಗಳು ಇಲ್ಲಿ ಪ್ರಾಸಂಗಿಕವಾಗುತ್ತವೆ.
2016 ಜೂನ್ ತಿಂಗಳಿನಲ್ಲಿ ಅಮೆರಿಕದ ತಮ್ಮ ಮೊದಲ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಸಂಸತ್ತನ್ನು ಉದ್ದೇಶಿಸಿ ಅವರು ಹೇಳಿದ ಮಾತುಗಳು ಇವು: ‘‘ನಮ್ಮ ಸ್ಥಾಪಕರು ಸ್ವಾತಂತ್ರ್ಯ, ಪ್ರಜಾತಂತ್ರ ಮತ್ತು ಸಮಾನತೆಗಳೇ ಆತ್ಮವಾಗಿರುವ ಹೊಸ ರಾಷ್ಟ್ರವನ್ನು ಕಟ್ಟಿದರು. ಅದರ ಜೊತೆಗೆ ಅವರು ನಮ್ಮ ಅನಾದಿ ಕಾಲದ ವೈವಿಧ್ಯಗಳನ್ನು ಕಾಪಾಡಿಕೊಂಡರು. ಇಂದು ನಮ್ಮ ದೇಶದ ಬೀದಿಗಳಲ್ಲಿ ಮತ್ತು ಸಂಸ್ಥೆಗಳಲ್ಲಿ,ಅದರ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಸರ್ವಧರ್ಮಗಳ ಸಮನ್ವಯ ಮತ್ತು ನೂರಾರು ಭಾಷೆಗಳ ಸುಶ್ರಾವ್ಯತೆಯನ್ನು ಗಮನಿಸಬಹುದು.’’
ಇದೇ ದಾಟಿಯಲ್ಲಿ 2019ರ ಅಕ್ಟೋಬರ್ನಲ್ಲಿ ‘ನ್ಯೂಯಾರ್ಕ್ ಟೈಮ್ಸ್’ ದೈನಿಕದ ಸಂಪಾದಕೀಯ ಪುಟದಲ್ಲಿ ತಾವು ಬರೆದ ಲೇಖನದಲ್ಲಿ ಮೋದಿಯವರು ಅಹಂಕಾರವನ್ನು ಬಿಟ್ಟು, ದ್ವೇಷ, ಹಿಂಸೆ ಮತ್ತು ನೋವುಗಳಿಂದ ಜನಾಂಗವನ್ನು ಬಿಡುಗಡೆಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ್ದರು. ಅವರ ಮಾತುಗಳು ಹೀಗಿವೆ:
‘‘ಒಬ್ಬ ನೈಜ ಮಾನವನಾದವನು ಇನ್ನೊಬ್ಬನ ನೋವನ್ನು ಅನುಭವಿಸುತ್ತಾನೆ; ಅವನ ಸಂಕಷ್ಟವನ್ನು ನಿವಾರಿಸುವ ಪ್ರಯತ್ನವನ್ನು ಮಾಡುತ್ತಾನೆ. ಅವನು ಎಂದಿಗೂ ಅಹಂಕಾರಿಯಾಗಿರಲಾರ. ದ್ವೇಷ, ಹಿಂಸೆ ಮತ್ತು ನೋವುಗಳಿಂದ ಮಾನವನನ್ನು ವಿಮುಕ್ತಿಗೊಳಿಸಿ ಜಗತ್ತಿನ ಏಳಿಗೆಗೆ ಜೊತೆಯಾಗಿ ದುಡಿಯೋಣ’’
ಇವೆರಡೂ ಬಹಳ ಅರ್ಥಪೂರ್ಣವಾದ ಮಾತುಗಳು. ದೇಶದ ಸ್ವಾತಂತ್ರ್ಯದ ಆರಂಭದ ದಿನಗಳ ಆಶಯಗಳನ್ನು ಪ್ರಧಾನಿಯವರೇ ನೆನಪಿಸಿದ್ದರು. ಅಮೃತಕಾಲದ ಪರಿಕಲ್ಪನೆಯಲ್ಲಿ ಈ ಎಲ್ಲ ಭಾವಗಳು ಒಳಗೊಳ್ಳುತ್ತವೆ. ಕರ್ತವ್ಯಕಾಲವೆಂಬುದು ಈ ಚಿಂತನೆಗೆ ತೀರಾ ಭಿನ್ನವಾದ ಒಂದು ಕಲ್ಪನೆ. ಅದರಲ್ಲಿ ಸಮಾಜಕ್ಕೆ ನಾಗರಿಕರ ಬಾಧ್ಯತೆ ಏನಿದೆ ಎಂಬುದಕ್ಕೆ ಪ್ರಾಶಸ್ತ್ಯ. ಇಲ್ಲಿ ಹಿಂದಿನಿಂದ ಬಳುವಳಿಯಾಗಿ ಬಂದ ಕೊಡುಗೆ ಮತ್ತು ಇನ್ನೂ ಪರಿಹಾರ ಕಾಣದ ಸಮಸ್ಯೆಗಳನ್ನು ಮುಚ್ಚಿಹಾಕುವ ಪ್ರವೃತ್ತಿಯನ್ನು ನಾವು ಕಾಣಬಹುದು. ವ್ಯವಸ್ಥೆಯಲ್ಲಿ ಕರ್ತವ್ಯಕ್ಕೇ ಆದ್ಯತೆಯಾದುದರಿಂದ ಹಕ್ಕುಗಳು ತೆರೆಯ ಹಿಂದೆ ಜಾರುತ್ತವೆ. ನಾಗರಿಕರು ತಮ್ಮ ಕರ್ತವ್ಯಗಳನ್ನು ಪರಿಪಾಲಿಸಬೇಕೆಂಬುದರ ಬಗ್ಗೆ ಎರಡು ಮಾತಿಲ್ಲ. ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ಆದರೆ ಅವುಗಳನ್ನು ಸಂವಿಧಾನದ ಆಶಯಕ್ಕನುಗುಣವಾಗಿ ಕಾರ್ಯರೂಪಕ್ಕೆ ತರುವ ಗುರುತರ ಜವಾಬ್ದಾರಿ ಆಳುವ ಪ್ರಭುಗಳದ್ದು. ಸಮಾನತೆ, ಸಹೋದರತೆ, ಸಹಿಷ್ಣುತೆಗಳ ರಕ್ಷಣೆ ಪ್ರಭುಗಳ ಮಟ್ಟದಿಂದ ಆರಂಭವಾಗಬೇಕು.
ಹಕ್ಕು ಮತ್ತು ಕರ್ತವ್ಯದ ಸಂಘರ್ಷ
ದೇಶದಲ್ಲಿಂದು ಹಕ್ಕು ಮತ್ತು ಕರ್ತವ್ಯದ ನಡುವಿನ ಸಂಘರ್ಷವನ್ನು ಆಳುವ ಪ್ರಭುಗಳು ಪ್ರಚೋದಿಸುವ ಲಕ್ಷಣಗಳನ್ನು ಕಾಣಬಹುದು. ಬಹುಚರ್ಚಿತವಾದ ಕೆಲವು ಪ್ರಮುಖ ಬೆಳವಣಿಗೆಗಳು ಈ ಹೇಳಿಕೆಗೆ ಸಮರ್ಥನೆಯನ್ನು ನೀಡುತ್ತವೆ. ನವೆಂಬರ್ 2016ರಲ್ಲಿ ಹಠಾತ್ತಾಗಿ ನೋಟು ರದ್ದತಿಮಾಡಿದ ಸರಕಾರವು ನಾಗರಿಕರು ಭದ್ರತೆಗೆಂದು ಮತ್ತು ಬಡ್ಡಿಗೋಸ್ಕರ ಬ್ಯಾಂಕುಗಳಲ್ಲಿ ಇಟ್ಟ ಠೇವಣಿಗಳನ್ನು ಪಡೆಯಲು ಅನೇಕ ನಿರ್ಬಂಧಗಳನ್ನು ಹೇರಿತು. ತಮ್ಮದೇ ಹಣವನ್ನು ಮರಳಿ ಪಡೆಯಲು ಬ್ಯಾಂಕುಗಳ ಸಾಮಾನ್ಯ ನಿಯಮಗಳ ಹೊರತಾಗಿ ಹೊಸ ನಿರ್ಬಂಧಗಳನ್ನು ಹೇರುವುದು ತಮ್ಮ ಹಕ್ಕುಗಳ ಕಡಿತವಾದರೂ ಅದನ್ನು ಪ್ರಶ್ನಿಸುವ ಸ್ವಾತಂತ್ರ್ಯ, ಹಕ್ಕು ಕಳಕೊಂಡವರಿಗಿರಲಿಲ್ಲ. ‘ಒಂದು ದೇಶ, ಒಂದು ತೆರಿಗೆ’ ಎಂಬ ನೀತಿಯ ಹೆಸರಿನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯನ್ನು 2017ರಲ್ಲಿ ಕಾರ್ಯರೂಪಕ್ಕೆ ತಂದಾಗ ಸಾವಿರಾರು ಕಿರು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಬಾಗಿಲು ಹಾಕಿ ಲಕ್ಷಾಂತರ ಕಾರ್ಮಿಕರು ಉದ್ಯೋಗಗಳನ್ನು, ಸ್ವೋದ್ಯೋಗಿಗಳು ಜೀವನಾಧಾರವನ್ನು ಕಳೆದುಕೊಂಡರು. ಅವರಿಗೂ ಪ್ರಶ್ನಿಸುವ ಸ್ವಾತಂತ್ರ್ಯವಿರಲಿಲ್ಲ.
ಕೋವಿಡ್ ಮಹಾಮಾರಿ ಅಪ್ಪಳಿಸುತ್ತಿದ್ದಂತೆ 2020ರ ಮಾರ್ಚ್ ತಿಂಗಳಲ್ಲಿ ಕೇವಲ ನಾಲ್ಕು ಗಂಟೆಯ ಮುನ್ಸೂಚನೆಯನ್ನು ನೀಡಿ ಪ್ರಧಾನಿ ಮೋದಿಯವರು ದೇಶದಲ್ಲಿಡೀ ಹೇರಿದ ‘ಲಾಕ್ ಡೌನ್’ನ ಪರಿಣಾಮವಾಗಿ ಲಕ್ಷಗಟ್ಟಲೆ ಕಾರ್ಮಿಕರು ಮರುವಲಸೆ ಹೋಗಿ ತಮ್ಮ ಜೀವನಾಧಾರವನ್ನು ಕಳಕೊಂಡರು. ಅಸಮರ್ಪಕವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಪರಿಣಾಮವಾಗಿ ಲಕ್ಷಾಂತರ ಮಂದಿ ಅಸುನೀಗಿದರು.
ಸಾಮಾನ್ಯ ನಾಗರಿಕರ ಜೀವನಕ್ಕೆ ಸಂಕಷ್ಟವನ್ನು ಉಂಟುಮಾಡುವ ಇನ್ನಿತರ ಅನೇಕ ಘಟನೆಗಳು ನಿರಂತರ ಆಗುತ್ತಲೇ ಇವೆ. ದೇಶದ ಪ್ರಗತಿಗೆ ಅಗತ್ಯ ಎಂಬ ಕಾರಣವನ್ನು ಕೊಟ್ಟು ನಿಮ್ನ ವರ್ಗದವರ, ರೈತರ, ಕಾರ್ಮಿಕರ, ಆದಿವಾಸಿಗಳ, ಗುಡ್ಡಗಾಡಿನಲ್ಲಿ ತಮ್ಮಷ್ಟಕ್ಕೆ ಜೀವಿಸುವವರ ಹಕ್ಕುಗಳನ್ನು ಪ್ರಭುತ್ವವೇ ಕಸಿಯುತ್ತಿದೆ. ಸಂಸತ್ತಿನಲ್ಲಿ ಚರ್ಚಿಸದೆ, ಸಾರ್ವಜನಿಕವಾಗಿ ಭಿನ್ನ ಭಿನ್ನ ಅಭಿಪ್ರಾಯಗಳನ್ನು ಆಲಿಸದೆ, ಸರಕಾರಕ್ಕೆ ಇರುವ ಬಹುಮತದ ಆಧಾರದಲ್ಲಿ ಹೊಸ ಹೊಸ ಕಾನೂನುಗಳನ್ನು ತರಲಾಗುತ್ತಿದೆ. ಕಾನೂನು ಎಂದಾದ ಮೇಲೆ ಅದನ್ನು ಪರಿಪಾಲಿಸುವುದು ನಾಗರಿಕರ ಕರ್ತವ್ಯ. ಸರಕಾರದ ನೀತಿಯ ಅನುಸರಣೆ ಕರ್ತವ್ಯವೇನೋ ಹೌದು; ಆದರೆ ಈ ತರದ ಘಟನೆಗಳಲ್ಲಿ ಅದಕ್ಕೆ ಬೆಲೆ ತೆರಬೇಕಾದವರು ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ಮಂದಿಯೇ. ಅವರ ಧ್ವನಿ ಹಕ್ಕು-ಕರ್ತವ್ಯದ ಸಂಘರ್ಷದಲ್ಲಿ ಕೇಳದಾಯಿತು.
ಕರ್ತವ್ಯಗಳ ಹೊರೆ ಒಂದು ವರ್ಗದ ಮೇಲೆ ಮಾತ್ರ. ಕರ್ತವ್ಯಗಳನ್ನು ನೆನಪಿಸುವ ಆಳುವ ವರ್ಗ ಮತ್ತು ಅದರ ಬೆಂಬಲಿಗರಿಗೆ ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಬೇಕೆಂಬ ನಿಯತ್ತು ಇಲ್ಲ. ಕಾನೂನುಗಳನ್ನು ರೂಪಿಸುವ ಸಂಸತ್ತಿನಲ್ಲಿರುವ ಪ್ರಧಾನಿಯನ್ನೂ ಒಳಗೊಂಡ ಚುನಾಯಿತ ಪ್ರತಿನಿಧಿಗಳಿಗೆ ಚರ್ಚೆಗಳಲ್ಲಿ ಭಾಗವಹಿಸುವ, ಪ್ರಶ್ನೆಗಳಿಗೆ ಉತ್ತರಿಸುವ, ದೇಶದಲ್ಲಿ ಆಗುತ್ತಿರುವ ಕ್ಷೋಭೆಗೆ ಪರಿಹಾರಗಳನ್ನು ಹುಡುಕುವ ಕರ್ತವ್ಯವಿಲ್ಲವೇ? ಈ ಬೆಳವಣಿಗೆಗಳ ಒಟ್ಟು ಸಾರ ಎಂದರೆ ಸ್ವಾತಂತ್ರ್ಯದ 75 ವರ್ಷಗಳ ಸಮುದ್ರಮಥನದಲ್ಲಿ ಬಂದ ಅಮೃತವು ಒಂದು ವರ್ಗಕ್ಕೆ ಮಾತ್ರ ಲಭಿಸಿದೆ- ಅಂದರೆ ಪ್ರಭುಗಳನ್ನು ಓಲೈಸುವ ಮತ್ತು ಅವರಿಂದ ಬೆಂಬಲ ಪಡೆಯುವ ಕೋಟ್ಯಧಿಪತಿಗಳು, ರಾಜಕೀಯ ಧುರೀಣರು, ಶ್ರೀಮಂತರು, ಅರ್ಥಾತ್ ದೇಶದ ಸುಮಾರು ಶೇ. 10ರಷ್ಟು ಮಂದಿಗೆ; ದೇಶದ ಉಳಿದ ಶೇ. 90 ಮಂದಿಗೆ ಅಮೃತವು ಮೃಗಜಲವಾಗಿಯೇ ಉಳಿದಿದೆ. ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ರೈತರ, ಯುವಕರ, ಸಣ್ಣ ಉದ್ದಿಮೆದಾರರ, ಜೀವನದ ಹೊಸ್ತಿಲಿನಲ್ಲಿ ಅನೇಕ ಆಶೋತ್ತರಗಳನ್ನು ಹೊಂದಿದ ವಿದ್ಯಾರ್ಥಿಗಳ ಆತ್ಮಹತ್ಯೆಗಳು, ಇದಕ್ಕೆ ಆಘಾತಕಾರಿ ನಿದರ್ಶನಗಳು. ಇದರ ಜೊತೆಗೆ ದೇಶಾದ್ಯಂತ ಅಲ್ಪಸಂಖ್ಯಾಕರ ಮೇಲೆ ನಡೆಯುತ್ತಿರುವ ಹಿಂಸೆ, ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳು, ಶೋಷಿತ ವರ್ಗಗಳ ಮೇಲಿನ ಅತ್ಯಾಚಾರಗಳು ಮತ್ತು ಮಣಿಪುರದಲ್ಲಿ ಆರದ ಜನಾಂಗೀಯ ದಳ್ಳುರಿ ಮತ್ತು ಅವುಗಳನ್ನು ಸಮರ್ಥಿಸುವ ಧೋರಣೆ ಇವುಗಳೆಲ್ಲ ಇಂದಿನ ಪರಿಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಸ್ವಾತಂತ್ರ್ಯದ ಪರಿಕಲ್ಪನೆಯಲ್ಲಿ ಅಡಕವಾದ ಆಶಯಗಳು ಹೊಸತಾದ ಕರ್ತವ್ಯದ ಬೇಗೆಯಿಂದ ಕಮರಿಹೋಗುತ್ತಿವೆ. ಇಂದು ಯಾವುದೇ ಸಮುದಾಯಕ್ಕೆ, ಓರ್ವ ನಾಗರಿಕನಿಗೆ ಅಥವಾ ಒಂದು ಪ್ರದೇಶಕ್ಕೆ ಸಂವಿಧಾನದ ಆಶಯದ ಪ್ರಕಾರ ನ್ಯಾಯ ಸಿಕ್ಕಿರದಿದ್ದರೆ ಅದನ್ನು ಆಗ್ರಹಿಸುವವರು ಪ್ರಗತಿವಿರೋಧಿಗಳಾಗುವ ಸಾಧ್ಯತೆ ಇದೆ. ಅವರಿಗೆ ತಮ್ಮ ಹಕ್ಕುಗಳನ್ನು ಮಂಡಿಸುವ ಅವಕಾಶ ಕುಂಠಿತವಾಗುತ್ತದೆ. ಅವರ ಮೇಲೆ ಯಾವುದಾದರೂ ಒಂದು ಆಪಾದನೆ ಹೊರಿಸಿ ಅವರ ಹಕ್ಕುಗಳನ್ನು ರಾಜಾರೋಷವಾಗಿ ದಮನಮಾಡುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಇವುಗಳನ್ನೆಲ್ಲ ಪರಿಶೀಲಿಸಿದಾಗ ಪ್ರಧಾನಿಯವರ ಮೇಲೆ ಉದ್ಧರಿಸಿದ ಹೇಳಿಕೆಗಳಲ್ಲಿನ ವಾಗಾಡಂಬರ ಸ್ಪಷ್ಟವಾಗುತ್ತದೆ. ಮಾತು ಮತ್ತು ಕೃತಿಗಳ ಅಂತರ ಎದ್ದು ಕಾಣುತ್ತದೆ.
ಸ್ವಾತಂತ್ರ್ಯದ ಭವಿಷ್ಯ
ಈ ಗಂಭೀರ ಪರಿಸ್ಥಿತಿಯಲ್ಲಿ ಭಾರತದ ಸ್ವಾತಂತ್ರ್ಯದ ಭವಿಷ್ಯವೇನು? 2024ರ ಲೋಕಸಭಾ ಚುನಾವಣೆಯು ನಿರ್ಣಾಯಕವಾಗಲಿದೆ. 1975-77ರ ಅನುಭವ, 2021-22ರಲ್ಲಿ ನಡೆದ ರೈತರ ಸಂಘಟಿತ ಪ್ರತಿಭಟನೆ, ಮಣಿಪುರ ಮತ್ತು ಹರ್ಯಾಣದ ನೂಹ್‌ನ ಹಿಂಸಾಚಾರದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನಿರ್ಧಾರಗಳು ಮತ್ತು ವಿಭಜಿತವಾದ ವಿರೋಧಪಕ್ಷಗಳಲ್ಲಿ ಮೂಡುತ್ತಿರುವ ಒಮ್ಮತ, ಸಾಮಾಜಿಕ ಜಾಲತಾಣಗಳ ಮೂಲಕ ಸತ್ಯವನ್ನು ಬಿಚ್ಚಿಡುವ ಸ್ವತಂತ್ರ ಯುವ ಪತ್ರಕರ್ತ/ಕರ್ತೆಯರ ಧೈರ್ಯ-ಇವುಗಳೆಲ್ಲ ನಮ್ಮ ಸ್ವಾತಂತ್ರ್ಯದ ಪಯಣ ಮತ್ತೆ ಹಳಿಗೆ ಮರಳಬಹುದೆಂಬ ಭರವಸೆಯನ್ನು ನೀಡುತ್ತವೆ.