ಆರೆಸ್ಸೆಸ್ ನಿಂದ ಅಹಿಂದ ವರ್ಗಗಳನ್ನು ಸಾಂವಿಧಾನಿಕ ಹಕ್ಕುಗಳಿಂದ ವಂಚಿತರನ್ನಾಗಿಸುವ ಷಡ್ಯಂತ್ರ: ಭನ್ವರ್ ಮೇಘವಂಶಿ
ವಾರ್ತಾಭಾರತಿ ವಿಶೇಷ ಸಂದರ್ಶನ

ಸರಕಾರಿ ಶಿಕ್ಷಕನ ಹುದ್ದೆಗೆ ರಾಜೀನಾಮೆ
ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿದ್ದ ನಾನು ಶಾಲೆಯಲ್ಲಿ ಅಸ್ಪಶ್ಯತೆಯನ್ನು ಅನುಭವಿಸಿದೆ. ನನಗೆ ಹಾಗೂ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇವಿಸಲು ಪ್ರತ್ಯೇಕವಾದ ಮಣ್ಣಿನ ಮಡಕೆಗಳನ್ನು ಇರಿಸಲಾಗಿತ್ತು. ಯಾವ ಅಸ್ಪಶ್ಯತೆಯ ವಿರುದ್ಧ ನಾವು ಧ್ವನಿ ಎತ್ತುತ್ತಿದ್ದೇವೆ. ಅದನ್ನು ನಾವೇ ಅನುಭವಿಸಿಕೊಂಡು ಹೋಗುವುದು ಎಷ್ಟರ ಮಟ್ಟಿಗೆ ಸರಿ? ಸವರ್ಣೀಯರ ಮನೆಗಳ ಎದುರು ನಾನು ಸೈಕಲ್ನಲ್ಲಿ ಹೋಗುವಂತಿರಲಿಲ್ಲ, ನಡೆದುಕೊಂಡೇ ಹೋಗಬೇಕಿತ್ತು. ಸಂವಿಧಾನದಲ್ಲಿ ಅಸ್ಪಶ್ಯತೆ ಆಚರಣೆಯನ್ನು ಅಪರಾಧ ಎಂದು ತಿಳಿಸಿದ್ದರೂ, ಸಾಮಾಜಿಕ ವ್ಯವಸ್ಥೆಯಲ್ಲಿ ಅದನ್ನು ಕಾಪಾಡಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಭಾವಿಸಿ, ಸರಕಾರಿ ಶಿಕ್ಷಕ ಹುದ್ದೆಯನ್ನು ತ್ಯಜಿಸಿ, ಸಾಮಾಜಿಕ ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದೇನೆ ಎನ್ನುತ್ತಾರೆ ಭನ್ವರ್ ಮೇಘವಂಶಿ.
ಸಂದರ್ಶನ: ಅಮ್ಜದ್ ಖಾನ್ ಎಂ.
► ಅತೀ ಸಣ್ಣ ವಯಸ್ಸಿನಲ್ಲೇ ನೀವು ಆರೆಸ್ಸೆಸ್ ಸೇರ್ಪಡೆಯಾಗಲು ಕಾರಣವೇನು?
ಭನ್ವರ್ ಮೇಘವಂಶಿ : ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ನಮ್ಮ ಶಾಲೆಯ ಶಿಕ್ಷಕರೊಬ್ಬರು ಪ್ರತೀ ದಿನ ಸಂಜೆ ಆಟದ ಮೈದಾನದಲ್ಲಿ ನಮಗೆ ಕ್ರೀಡೆ, ದೈಹಿಕ ಕಸರತ್ತುಗಳ ಬಗ್ಗೆ ಹೇಳಿಕೊಡುತ್ತಿದ್ದರು. ಅವರು ಒಬ್ಬ ಉತ್ತಮ ಗಾಯಕ ಕೂಡ ಆಗಿದ್ದರು. ಇದರಿಂದಾಗಿ, ನಾವು ಅವರಿಂದ ಪ್ರಭಾವಿತರಾಗಿ ಆರೆಸ್ಸೆಸ್ ಸೇರುವಂತಾಯಿತು.
► ಸ್ವಯಂಸೇವಕರಾಗಿದ್ದ ವೇಳೆ ನಿಮಗೆ ಏನೆಲ್ಲ ಬೋಧನೆ ಮಾಡಲಾಗುತ್ತಿತ್ತು?
ಭನ್ವರ್ ಮೇಘವಂಶಿ: ನಮ್ಮ ಬೈಠಕ್ಗಳಲ್ಲಿ ನಮ್ಮನ್ನು ಒಂದೆಡೆ ಕೂರಿಸಿ, ನಾವು ಆರ್ಯರು, ಇದು ನಮ್ಮ ದೇಶ, ನಾವು ಶ್ರೇಷ್ಠರು ಮತ್ತು ನಮ್ಮ ರಕ್ತವು ಶ್ರೇಷ್ಠವಾದದ್ದು. ಮುಸ್ಲಿಮರು ಹೊರಗಿನವರು, ಅವರು ನಮ್ಮ ಮೇಲೆ ಆಕ್ರಮಣ ಮಾಡಿದರು, ನಮ್ಮ ದೇಶವನ್ನು ಲೂಟಿ ಮಾಡಿದರು, ನಮ್ಮ ಸಂಸ್ಕೃತಿಯನ್ನು ನಾಶಪಡಿಸಿದರು, ಮಸೀದಿಗಳನ್ನು ನಿರ್ಮಿಸಲು ದೇವಾಲಯಗಳನ್ನು ಒಡೆದರು ಎಂಬುದನ್ನು ನಮಗೆ ಹೇಳಿಕೊಡುತ್ತಿದ್ದರು. ಇದರಿಂದಾಗಿ, ಸಹಜವಾಗಿಯೇ ನಮ್ಮ ಮನಸ್ಸುಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಮನೆ ಮಾಡ ತೊಡಗಿತು.
► ಆರೆಸ್ಸೆಸ್ನಲ್ಲಿ ಜಿಲ್ಲಾ ಪ್ರಮುಖ್ ಆಗಿದ್ದ ತಾವು ಏಕಾಏಕಿ ಆ ಸಂಘಟನೆಯಿಂದ ಹೊರ ಬರಲು ಕಾರಣ?
ಭನ್ವರ್ ಮೇಘವಂಶಿ: 1991ರ ಮಾ13ರಂದು ಭಿಲ್ವಾರಾದಲ್ಲಿ ಅಯೋಧ್ಯೆ ವಿಚಾರವನ್ನು ಮುಂದಿಟ್ಟುಕೊಂಡು ‘ದೇವಾಲಯ ಹಸ್ತಾಂತರಿಸಿ, ಇಲ್ಲವೇ ಅಧಿಕಾರ ತ್ಯಜಿಸಿ’ ಎಂಬ ಘೋಷಣೆಯೊಂದಿಗೆ ರ್ಯಾಲಿ ಆಯೋಜಿಸಲಾಗಿತ್ತು. ನಮ್ಮ ರ್ಯಾಲಿ ಸಾಗುತ್ತಿದ್ದ ಹಾದಿಯಲ್ಲಿ ಗುಲ್ಮಂಡಿ(ಮುಸ್ಲಿಮರು ಹೆಚ್ಚಿರುವ ಪ್ರದೇಶ) ಮೂಲಕ ಹಾದು ಹೋಗಬೇಕಿತ್ತು. ಅಂದು ಮಧ್ಯಾಹ್ನದ ನಮಾಝ್ ಸಮಯವಾಗಿದ್ದರಿಂದ ಪೊಲೀಸರು ನಮಗೆ ರ್ಯಾಲಿಯ ಸಮಯ ಅಥವಾ ಮಾರ್ಗ ಬದಲಿಸುವಂತೆ ಸೂಚಿಸಿದರು. ಆದರೆ, ನಾವು ಮಾರ್ಗ ಅಥವಾ ಸಮಯ ಬದಲಾಯಿಸಲು ಒಪ್ಪಲಿಲ್ಲ. ಈ ವೇಳೆ ನಮ್ಮ ಹಿಂದಿನಿಂದ ಯಾರೋ ಕಲ್ಲು ತೂರಾಟ ನಡೆಸಿದರು. ಈ ವೇಳೆ ಲಾಠಿಚಾರ್ಜ್, ಗಾಳಿಯಲ್ಲಿ ಗುಂಡು, ಗೋಲಿಬಾರ್ ಕೂಡ ನಡೆಯಿತು. ಈ ಸಂದರ್ಭದಲ್ಲಿ ರ್ಯಾಲಿಗೆ ಸಂಬಂಧವಿಲ್ಲದ ಇಬ್ಬರು ಪೊಲೀಸರ ಗುಂಡಿಗೆ ಬಲಿಯಾದರು.
ರಾಮನ ಹೆಸರಿನಲ್ಲಿ ಇವರಿಬ್ಬರೂ ಹುತಾತ್ಮರಾದ ರು ಎಂದು ಆರೆಸ್ಸೆಸ್ ಘೋಷಿಸಿ, ಅವರ ಅಸ್ಥಿ ಕಲಶದ ಮೆರವಣಿಗೆಯನ್ನು ಆಯೋಜಿಸಿತು. ಜಿಲ್ಲಾ ಪ್ರಮುಖ್ ಆಗಿದ್ದ ನಾನು ಅಸ್ಥಿ ಕಲಶದ ಮೆರವಣಿಗೆ ನನ್ನ ಮನೆಗೂ ಬರುವಂತೆ ಕಾರ್ಯಕ್ರಮ ಆಯೋಜಿಸಿದ್ದೆ. ಮೆರವಣಿಗೆ ನನ್ನ ಗ್ರಾಮಕ್ಕೆ ಬಂತು. ನಾನು ಅವರಿಗಾಗಿ ನನ್ನ ಮನೆಯಲ್ಲಿ ಊಟವನ್ನು ಸಿದ್ಧಪಡಿಸಿದ್ದೆ. ಆಗ ‘‘ನೀನು ಊಟ ಸಿದ್ಧಪಡಿಸುತ್ತಿದ್ದೀಯಾ. ಆದರೆ, ಅವರು ನಮ್ಮ ಮನೆಯಲ್ಲಿ ಊಟ ಮಾಡುತ್ತಾರೆಯೇ?’’ ಎಂದು ನನ್ನ ತಂದೆ ನನ್ನನ್ನು ಕೇಳಿದರು. ಆಗ ನಾನು ‘‘ಅಂತಹ ಮೇಲು ಕೀಳು ಎಂಬುದೆಲ್ಲ ನಮ್ಮ ಸಂಘದಲ್ಲಿ ಇಲ್ಲ’’ ಎಂದು ಪ್ರತ್ಯುತ್ತರ ನೀಡಿದ್ದೆ.
ಕಾರ್ಯಕ್ರಮ ಮುಗಿದ ಬಳಿಕ ನಾನು ನಮ್ಮ ಸಂಘದವರನ್ನು ಊಟಕ್ಕೆ ಆಹ್ವಾನಿಸಿದೆ. ಆಗ, ಸೇವಾ ಭಾರತಿಯ ಪ್ರಮುಖರೊಬ್ಬರು ನನ್ನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ನೀವು ತಯಾರಿಸಿದ ಆಹಾರವನ್ನು ನಾವು ತಿನ್ನುತ್ತೇವೆ, ಆದರೆ ನಮ್ಮೊಂದಿಗೆ ಬಂದ ಪುರೋಹಿತರು ಮತ್ತು ಸಂತರಿಗೆ ಆ ಆಹಾರವನ್ನು ತಿನ್ನಲು ಸ್ವಲ್ಪಕಷ್ಟವಾಗುತ್ತದೆ. ನೀವು ಆಹಾರವನ್ನು ಕಟ್ಟಿಕೊಡಿ, ನಾವು ಪಕ್ಕದ ಊರಿನಲ್ಲಿ ಹೋಗಿ ಸೇವಿಸುತ್ತೇವೆ ಎಂದರು. ನಾನು ಅವರು ಹೇಳಿದ ಹಾಗೆ ಊಟವನ್ನು ಕಟ್ಟಿಕೊಟ್ಟೆ. ಆದರೆ, ಅವರು ನಮ್ಮ ಗ್ರಾಮದ ಹೊರಗೆ ಹೋಗುತ್ತಿದ್ದಂತೆ ನಮ್ಮ ಮನೆಯಿಂದ ಕೊಟ್ಟಿದ್ದ ಆಹಾರವನ್ನು ರಸ್ತೆಯ ಬದಿಗೆ ಎಸೆದು ಹೋಗಿದ್ದರು. ಅಲ್ಲದೆ, ಬ್ರಾಹ್ಮಣರೊಬ್ಬರ ಮನೆಯಲ್ಲಿ ಪ್ರತ್ಯೇಕವಾಗಿ ಅಡುಗೆ ಮಾಡಿಸಿ ಊಟ ಸೇವಿಸಿದ್ದರು. ಈ ವಿಚಾರ ನನಗೆ ಮರು ದಿನ ತಿಳಿಯಿತು.
ಇದಾದ ನಂತರ ನಾನು ಅವರ ಬಳಿ ಹೋಗಿ, ‘‘ನೀವು ನಮ್ಮ ಮನೆಯಲ್ಲಿ ಊಟ ಮಾಡಲಿಲ್ಲ, ನಾನು ಕೊಟ್ಟಿದ್ದ ಆಹಾರವನ್ನು ಸೇವಿಸದೆ ಎಸೆದಿದ್ದೀರಿ. ರಾಮ ಮಂದಿರ ಹೋರಾಟದಲ್ಲಿ ಅಯೋಧ್ಯೆಯಲ್ಲಿ ನಿಮಗಾಗಿ ಪ್ರಾಣ ಕೊಡಲು ಸಿದ್ಧನಾಗಿದ್ದೆ. ಇಲ್ಲಿ ನಾನು ಸಂಘದ ಜಿಲ್ಲಾ ಮುಖ್ಯಸ್ಥ. ಆದರೂ, ನನಗೇಕೆ ಈ ರೀತಿಯ ತಿರಸ್ಕಾರ ಮಾಡಿದ್ದೀರಾ. ನಾನು ನಿಮ್ಮೊಂದಿಗೆ ಹಿಂದೂ ರಾಷ್ಟ್ರವನ್ನು ರಚಿಸಲು ಬಯಸುತ್ತೇನೆ. ಆದರೆ, ಇದರಲ್ಲಿ ನನ್ನ ಸ್ಥಾನವೇನು?’’ ಎಂದು ಪ್ರಶ್ನಿಸಿದೆ. ಈ ವಿಷಯ ಹಲವು ತಿಂಗಳುಗಳ ಕಾಲ ನಾನು ಆರೆಸ್ಸೆಸ್ ಒಳಗೆ ಇದ್ದುಕೊಂಡೇ ಚರ್ಚೆಗೆ ಎತ್ತಿಕೊಳ್ಳುತ್ತಿದ್ದೆ. ಕ್ರಮೇಣ ಈ ಅಸ್ಪಶ್ಯತೆಯ ವಿರುದ್ಧ ಹೋರಾಡಲು ಸಂಘದಿಂದ ಹೊರಗೆ ಬಂದೆ.
► ಆರೆಸ್ಸೆಸ್ ಪ್ರತಿಪಾದಿಸುವ ಹಿಂದೂ ರಾಷ್ಟ್ರದ ಕಲ್ಪನೆಯಲ್ಲಿ ಜಾತಿ ತಾರತಮ್ಯ ಇರುವುದಿಲ್ಲವೇ?
ಭನ್ವರ್ ಮೇಘವಂಶಿ: ಆರೆಸ್ಸೆಸ್ ಪ್ರತಿಪಾದಿಸುತ್ತಿರುವ ಸಾಂಸ್ಕೃತಿಕ ಹಿಂದೂ ರಾಷ್ಟ್ರದಲ್ಲಿ ದಲಿತರು, ಹಿಂದುಳಿದ ವರ್ಗದವರು, ಆದಿವಾಸಿಗಳ ಸ್ಥಾನ ಎಲ್ಲಿದೆ? ಆರೆಸ್ಸೆಸ್ ಕಚೇರಿಗಳಲ್ಲಿ ಹಿಂದೂ ದೇವಿ, ದೇವತೆಗಳ ಭಾವಚಿತ್ರವೇ ಇರುವುದಿಲ್ಲ. ಭಾರತ ಮಾತೆಯ ಚಿತ್ರವನ್ನು ಮಾತ್ರ ಅವರು ಇರಿಸಿರುತ್ತಾರೆ. ಆರೆಸ್ಸೆಸ್ಗೆ ಧಾರ್ಮಿಕ ಗುರು ಇಲ್ಲ. ಅವರ ಸಿದ್ಧಾಂತ ಹಾಗೂ ಹಿಂದೂ ಧರ್ಮ, ಶಾಸ್ತ್ರಗಳೊಂದಿಗೆ ಯಾವುದೇ ಸಂಬಂಧ ಇಲ್ಲ. ಆರೆಸ್ಸೆಸ್ ಸಂಸ್ಕೃತಿಯ ಹೆಸರಿನಲ್ಲಿ ಪೂರ್ಣ ಪ್ರಮಾಣದ ರಾಜಕೀಯ ಮಾಡುವ ಸಂಘಟನೆ. ತ್ರಿಶೂಲ, ಶಿವಲಿಂಗ, ರಾಮ, ಕೃಷ್ಣ, ಗೋವು ಹೀಗೆ ಸಮಯಕ್ಕೆ ತಕ್ಕಂತೆ ತನಗೆ ಬೇಕಾದನ್ನು ಬಳಸಿಕೊಂಡು, ಜನರನ್ನು ಭ್ರಮಾಲೋಕದಲ್ಲಿ ಇರಿಸಿ, ಬ್ರಾಹ್ಮಣ್ಯದ ಶ್ರೇಷ್ಠತೆ ಉಳಿಸುವುದು ಮಾತ್ರ ಅವರ ಉದ್ದೇಶ.
► ಆರೆಸ್ಸೆಸ್ ಇನ್ನೂ ವರ್ಣ ವ್ಯವಸ್ಥೆಯನ್ನು ಪೋಷಿಸುತ್ತಿದ್ದೆಯೇ?
ಭನ್ವರ್ ಮೇಘವಂಶಿ: ಇತ್ತೀಚಿನ ದಿನಗಳಲ್ಲಿ ಸರಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ, ನಾವು ಸಾಂವಿಧಾನಿಕ ಭಾರತದ ಸ್ವರೂಪದಲ್ಲಿ ಇಲ್ಲ. ಬದಲಾಗಿ ಅಘೋಷಿತ ವರ್ಣ ವ್ಯವಸ್ಥೆಯ ಸ್ವರೂಪದಲ್ಲಿ ಇದ್ದೇವೆ ಎಂಬ ಅನುಮಾನ ಕಾಡುತ್ತದೆ. ಪ್ರಜಾತಂತ್ರವು ನಮ್ಮನ್ನು ಗುಲಾಮರಿಂದ ಪ್ರಜೆ, ಪ್ರಜೆಯಿಂದ ನಾಗರಿಕರನ್ನಾಗಿಸಿತು. ಆದರೆ, ಈಗ ನಮ್ಮನ್ನು ನಾಗರಿಕರಿಂದ ಮತ್ತೆ ಗುಲಾಮರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಪೂರ್ವಜರು ಹೇಗೆ ಗುಲಾಮರಾಗಿದ್ದರೋ, ಇಂದು ನಾವು ಅದೇ ಹೊಸ್ತಿಲಲ್ಲಿ ಬಂದು ನಿಂತಿದ್ದೇವೆ. ಈ ಷಡ್ಯಂತ್ರವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಹಾಗೂ ಸಂಘಪರಿವಾರದ ಜೊತೆಯಲ್ಲಿರುವವರು ಆದಷ್ಟು ಬೇಗ ಅಲ್ಲಿಂದ ಹೊರಗೆ ಬರುವ ಪ್ರಯತ್ನ ಮಾಡಬೇಕು.
►ದಲಿತ, ಹಿಂದುಳಿದ ವರ್ಗದ ಯುವ ಸಮುದಾಯದ ಆರೆಸ್ಸೆಸ್ ಕಡೆ ಹೆಚ್ಚಾಗಿ ಆಕರ್ಷಣೆಗೊಳಪಡುತ್ತಿರುವುದೇಕೆ?
ಭನ್ವರ್ ಮೇಘವಂಶಿ: ಉದಾರೀಕರಣ, ಜಾಗತೀಕರಣದ ಪರಿಣಾಮ ಸಾಮಾಜಿಕ ಜಾಲತಾಣಗಳು, ಡಿಜಿಟಲ್ ಮಾಧ್ಯಮಗಳು ಬೆಳೆದ ನಂತರ ಯುವ ಸಮುದಾಯವು ವಾಟ್ಸ್ಆ್ಯಪ್ನಲ್ಲಿ ಬರುತ್ತಿರುವ ಮಾಹಿತಿಯನ್ನು ಕೇಂದ್ರೀಕೃತವಾಗಿಸಿಕೊಂಡಿದೆ. ಅವುಗಳಲ್ಲಿ ಬಹುತೇಕ ಸುಳ್ಳು ಸುದ್ದಿಗಳು, ಅಪೂರ್ಣ ಮಾಹಿತಿಗಳನ್ನು ತಲುಪಿಸಲಾಗುತ್ತಿದೆ. ಇದರಿಂದಾಗಿ, ಸಮಾಜದಲ್ಲಿನ ಮೂಲ ಸಮಸ್ಯೆಗಳ ಬಗ್ಗೆ ಇಂದಿನ ಯುವ ಸಮುದಾಯಕ್ಕೆ ವಿಶೇಷವಾಗಿ ದಲಿತರು, ಹಿಂದುಳಿದ ವರ್ಗದವರಿಗೆ ಅವುಗಳ ಅರಿವೇ ಇಲ್ಲ. ವಾಸ್ತವ ಜಗತ್ತಿನ ಬದಲಾಗಿ ವರ್ಚುಯಲ್ ಜಗತ್ತಿನಲ್ಲಿ ಅವರು ಜೀವಿಸುತ್ತಿದ್ದಾರೆ.
ಶಿಕ್ಷಿತ, ಆರ್ಥಿಕವಾಗಿ ಸಬಲರಾಗಿರುವ, ನಗರ ವಾಸಿಗಳಾಗಿರುವ ಹೊಸ ತಲೆಮಾರಿನ ದಲಿತರು ಅಸ್ಪಶ್ಯತೆಯ ಕಾರಣದಿಂದಾಗಿಯೇ ತಮ್ಮನ್ನು ತಮ್ಮ ಸಮುದಾಯದ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುತ್ತಿಲ್ಲ. ಇನ್ನು ಕೆಲವರು ಬಿಜೆಪಿಯಲ್ಲಿ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಆರೆಸ್ಸೆಸ್ ಶಾಖೆಗಳಿಗೆ ಹೋಗುತ್ತಿದ್ದಾರೆ.
► ದಲಿತ, ಹಿಂದುಳಿದ ವರ್ಗಗಳು ಎದುರು ಇರುವ ಪರ್ಯಾಯ ಆಯ್ಕೆ ಯಾವುದು?
ಭನ್ವರ್ ಮೇಘವಂಶಿ: ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಹೊಸ ತಲೆಮಾರಿನ ದಲಿತರು ಭ್ರಮಲೋಕದಲ್ಲಿದ್ದಾರೆ. ವಾಸ್ತವವಾಗಿ ಇವರಿಗೆ ಅಲ್ಲಿ ಯಾವುದೇ ಸ್ಥಾನಮಾನ ಇಲ್ಲ. ದಲಿತರ ಬಗ್ಗೆ ಆರೆಸ್ಸೆಸ್ಗೆ ನಿಜಕ್ಕೂ ಕಾಳಜಿ ಇದ್ದರೆ, ಸಮಾನತೆಯನ್ನು ಬಯಸುವುದಾದರೆ ಆರೆಸ್ಸೆಸ್ನ ಸರಸಂಘಚಾಲಕ ಹುದ್ದೆ ದಲಿತರಿಗೆ ನೀಡಲಿ, ಶಂಕರಾಚಾರ್ಯರ ನಾಲ್ಕು ಪೀಠಗಳಲ್ಲಿ ದಲಿತರನ್ನು ನೇಮಕ ಮಾಡಲಿ, ದೊಡ್ಡ ದೊಡ್ಡ ದೇವಸ್ಥಾನಗಳ ಸಮಿತಿಗಳಲ್ಲಿ ದಲಿತರನ್ನು ತಂದು ಕೂರಿಸಲಿ, ದೇವಸ್ಥಾನಗಳಲ್ಲಿ ಪೂಜೆ ಮಾಡಲು ದಲಿತರಿಗೆ ಅವಕಾಶ ನೀಡಲಿ. ಸಂವಿಧಾನವನ್ನು ನಾಶ ಮಾಡಲು ಪ್ರಯತ್ನಿಸುತ್ತಿರುವ ಶಕ್ತಿಗಳಿಗೆ ಪ್ರೋತ್ಸಾಹ ನೀಡಿದರೆ, ನಮ್ಮ ಅಂತ್ಯವನ್ನು ನಾವೇ ಕಂಡುಕೊಂಡಂತೆ ಆಗುತ್ತದೆ.
► ದೇಶದಲ್ಲಿ ಜನರ ಗಮನವನ್ನು ಮುಖ್ಯ ವಿಷಯಗಳಿಂದ ವಿಮುಖರನ್ನಾಗಿಸಲಾಗುತ್ತಿದೆಯೇ?
ಭನ್ವರ್ ಮೇಘವಂಶಿ: ದೇಶದಲ್ಲಿ ಜಾತಿವಾರು ಜನಗಣತಿ ನಡೆಯಬೇಕು ಎಂಬ ಚರ್ಚೆ ಆರಂಭವಾಗಿತ್ತು. ಆದರೆ, ರಾಮ ಮಂದಿರ ಉದ್ಘಾಟನೆಯ ವಿಚಾರವನ್ನು ಮುನ್ನೆಲೆಗೆ ತಂದು ಸಂಘ ಪರಿವಾರ(ಆರೆಸ್ಸೆಸ್)ವು ದಲಿತರು, ಹಿಂದುಳಿದ ವರ್ಗದವರು, ಆದಿವಾಸಿಗಳು, ಧಾರ್ಮಿಕ ಅಲ್ಪಸಂಖ್ಯಾತರನ್ನು ಅವರ ಸಂವಿಧಾನ ಬದ್ಧ ಹಕ್ಕುಗಳಿಂದ ವಂಚಿತರನ್ನಾಗಿಸುವ ದೊಡ್ಡ ಷಡ್ಯಂತ್ರ ನಡೆಸುತ್ತಿದೆ. ಈ ಹಿಂದೆಯೂ ಮಂಡಲ್ ಆಯೋಗದ ವಿಚಾರ ಬಂದಾಗ ರಾಮ ಮಂದಿರ ರಥಯಾತ್ರೆ ವಿಷಯವನ್ನು ಮುಂದಕ್ಕೆ ತಂದು ಸಮಾಜವನ್ನು ಹಾದಿ ತಪ್ಪಿಸುವ ಕೆಲಸ ಮಾಡಲಾಗಿತ್ತು. ಈಗ ಪುನಃ ಜಾತಿವಾರು ಜನಗಣತಿ ವಿಚಾರ ಚರ್ಚೆಯಾಗುವ ವೇಳೆ ರಾಮ ಮಂದಿರ ಉದ್ಘಾಟನೆಯ ವಿಷಯ ಹೆಚ್ಚು ಚರ್ಚೆಗೆ ಒಳಪಡುವಂತೆ ಮಾಡಲಾಗುತ್ತಿದೆ.
ರಾಮ ಮಂದಿರ ಉದ್ಘಾಟನೆಯ ಕಾರ್ಯಕ್ರಮವನ್ನು ಇವತ್ತು ಯಾವ ರೀತಿ ಬಿಂಬಿಸಲಾಗುತ್ತಿದೆ ಎಂಬುದು ನಮ್ಮೆಲ್ಲರ ಕಣ್ಣ ಮುಂದೆಯೇ ಇದೆ. ಆದರೆ, ಅದನ್ನು ವಿರೋಧಿಸಿದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಹೊರಿಸಿ ಜೈಲಿಗೆ ಅಟ್ಟಬಹುದು. ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗ ಹುಡುಕುತ್ತಿದ್ದಾರೆ. ಅಯೋಧ್ಯೆ ಆಯಿತು, ಈಗ ಕಾಶಿ, ಮಥುರಾ ಎನ್ನುತ್ತಿದ್ದಾರೆ. ಹಳೆಯ ಕಟ್ಟಡಗಳನ್ನು ಮಂದಿರ ಎನ್ನುತ್ತಿದ್ದಾರೆ. ಇತಿಹಾಸದ ಉತ್ಖನನ ನಡೆಸಲಾಗುತ್ತಿದೆ. ಸಾವಿರಾರು ವರ್ಷಗಳ ಹಿಂದೆ ನಡೆದ ಯುದ್ಧದಲ್ಲಿ ಯಾರು ಸೋತರು, ಯಾರು ಗೆದ್ದರು ಅನ್ನುವುದನ್ನು ಈಗ ನಿರ್ಧಾರ ಮಾಡಲಾಗುತ್ತಿದೆ.
ಜನರ ಆಹಾರ, ಉಡುಗೆ, ವಿವಾಹದ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪ ಸರಿಯೇ?
ಭನ್ವರ್ ಮೇಘವಂಶಿ: ಒಂದು ದೇಶವಾಗಿ ನಾವು ಮುಂದೆ ಹೋಗುತ್ತಿಲ್ಲ, ಹಿಮ್ಮುಖವಾಗಿ ಚಲಿಸುತ್ತಿದ್ದೇವೆ. ಗೋ ಮೂತ್ರದಲ್ಲಿ ನಾವು ವಿಜ್ಞಾನ ಹುಡುಕುತ್ತಿದ್ದೇವೆ. ಜನರಿಗೆ ಉತ್ತಮ ಆರೋಗ್ಯ, ಶಿಕ್ಷಣ, ಮೂಲಸೌಕರ್ಯಗಳನ್ನು ನೀಡುವುದು ಸರಕಾರದ ಜವಾಬ್ದಾರಿಯಾಗಿರಬೇಕೇ ಹೊರತು, ಜನ ಏನು ಧರಿಸಬೇಕು, ಏನು ತಿನ್ನಬೇಕು, ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು ಅನ್ನುವುದನ್ನು ನಿರ್ಧರಿಸುವುದಲ್ಲ. ನಾನು ಮಲಗುವ ಕೋಣೆ, ನನ್ನ ಅಡುಗೆ ಮನೆಯೊಳಗೆ ಬರುವುದು, ಮೊಬೈಲ್ನಲ್ಲಿ ಇಣುಕುವುದು ಸರಕಾರದ ಕೆಲಸವೇ?.