ಸಂವಿಧಾನ ಸಮರ್ಪಣೆಯೂ ಆಡಳಿತ ಜವಾಬ್ದಾರಿಯೂ
"ರಾಜಕೀಯ ಅಧಿಕಾರದ ರಕ್ಷಣೆಯೊಂದಿಗೇ ಸಾಮಾಜಿಕ ಜವಾಬ್ದಾರಿಯತ್ತಲೂ ಗಮನಹರಿಸಬೇಕಿದೆ"
Photo: PTI
ಕಳೆದ ಹತ್ತು ವರ್ಷಗಳ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದಂಶ ಸ್ಪಷ್ಟವಾಗುತ್ತದೆ. ರಾಜಕೀಯ ಪಕ್ಷಗಳು ಎಷ್ಟೇ ಬಹುಮತದೊಂದಿಗೆ ಸರಕಾರವನ್ನು ರಚಿಸಿದರೂ, ಆ ಸರಕಾರದ ಅಳಿವು-ಉಳಿವು ಸದಾ ತೂಗುಗತ್ತಿಯಲ್ಲೇ ಸಾಗುತ್ತಿರುವುದು ಅಮೃತಕಾಲದ ಮೂಲ ಲಕ್ಷಣವಾಗಿ ತೋರುತ್ತದೆ. ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶದ ಬೆಳವಣಿಗೆಗಳನ್ನು ಗಮನಿಸಿದಾಗ ರಾಜಕೀಯ ಅಧಿಕಾರ ಎನ್ನುವುದು ತತ್ವ ಸಿದ್ಧಾಂತಗಗಳಿಂದಾಚೆಗೆ ನಿರ್ಧಾರವಾಗುವ ಒಂದು ಶಕ್ತಿ ಪ್ರದರ್ಶನದ ಕೇಂದ್ರವಾಗಿರುವುದು ಸ್ಪಷ್ಟವಾಗುತ್ತದೆ. ತನಗೆ ಸ್ಪಷ್ಟ ಬಹುಮತ ದೊರೆತಿದೆ ಎಂಬ ಆತ್ಮವಿಶ್ವಾಸದೊಂದಿಗೆ ದಿಟ್ಟ ಅಥವಾ ನಿಷ್ಠುರ ಆಡಳಿತ ನಿರ್ಧಾರಗಳನ್ನು ಕೈಗೊಳ್ಳಲು ಸರಕಾರಗಳಿಗೆ ಸಾಧ್ಯವಾಗದೆ ಇರುವಂತಹ ಒಂದು ಸನ್ನಿವೇಶವನ್ನು ನಾವು ತಲುಪಿದ್ದೇವೆ. ಏಕೆಂದರೆ ಸರಕಾರಗಳನ್ನು ಪದಚ್ಯುತಗೊಳಿಸುವ ಹೊಸ ವಿಧಾನಗಳನ್ನು, ಆಯಾಮಗಳನ್ನು ಭಾರತದ ಪ್ರಜಾತಂತ್ರ ಮೈಗೂಡಿಸಿಕೊಂಡಿದೆ.
ಈ ಅನಿಶ್ಚಿತತೆ ಮತ್ತು ಅಭದ್ರತೆಯ ನಡುವೆಯೇ ರಚಿಸಲಾಗುವ ಸರಕಾರಗಳಿಗೆ ಸಮಸ್ತ ಜನತೆಯ ಆಶೋತ್ತರಗಳಿಗಿಂತಲೂ ತಮ್ಮ ಅಧಿಕಾರವನ್ನು ಕಾಪಾಡಲು ನೆರವಾಗುವ ಜಾತಿ ಆಧಾರಿತ ಮತಬ್ಯಾಂಕುಗಳು ಹಾಗೂ ಚುನಾವಣಾ ಮಾರುಕಟ್ಟೆಯನ್ನು ನಿರ್ಧರಿಸುವ ಜನಪ್ರತಿನಿಧಿಗಳ ನಿಷ್ಠೆಯ ನೆಲೆಗಳು ಪ್ರಧಾನವಾಗಿ ಕಾಣುತ್ತವೆ. ಅನಿಶ್ಚಿತ ನಾಳೆಗಳತ್ತ ನೋಡುತ್ತಲೇ ಹೆಜ್ಜೆ ಇಡುವ ಸರಕಾರ ಒಂದೆಡೆಯಾದರೆ ಚುನಾಯಿತ ಸರಕಾರದ ಪದಚ್ಯುತಿಯನ್ನೇ ಅಪೇಕ್ಷಿಸುತ್ತಾ, ನಿರೀಕ್ಷಿಸುತ್ತಾ ರಾಜಕೀಯ ಲೆಕ್ಕಾಚಾರಗಳಲ್ಲಿ ತೊಡಗುವ ವಿರೋಧ ಪಕ್ಷಗಳು, ತಮ್ಮ ಸಾಂವಿಧಾನಿಕ ನೈತಿಕತೆಯನ್ನೂ ಬದಿಗೊತ್ತಿ, ಅಧಿಕಾರ ರಾಜಕಾರಣದ ವಾರಸುದಾರಿಕೆಗೆ ಪೈಪೋಟಿ ನಡೆಸುತ್ತಿರುತ್ತವೆ. ವಿಡಂಬನೆ ಎಂದರೆ ನವೆಂಬರ್ 26ರ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸುತ್ತಲೇ ಮತ್ತೊಂದು ಬದಿಯಲ್ಲಿ ಸಾಂವಿಧಾನಿಕ ನೈತಿಕತೆಯನ್ನು ಉಲ್ಲಂಘಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ.
► ಸಂವಿಧಾನದ ಆಶಯಗಳು
ಸಂವಿಧಾನ ಸಮರ್ಪಣಾ ದಿನದಂದು ಬಹುಮುಖ್ಯವಾಗಿ ರಾಜಕೀಯ ಪಕ್ಷಗಳು ಮನಗಾಣಬೇಕಾದ ತಾತ್ವಿಕ ಅಂಶ ಎಂದರೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪರಿಪಾಲನೆ. ಆದರೆ ಈ ಸಮಾನತೆಯನ್ನು ಸಾಧಿಸಲು ನೆರವಾಗುವಂತಹ ಜಾತಿ ಗಣತಿ ಅಥವಾ ಸಮೀಕ್ಷೆಗಳು ಎಲ್ಲ ರಾಜಕೀಯ ಪಕ್ಷಗಳಲ್ಲಿರುವ ಪ್ರಬಲ ವರ್ಗಗಳ, ಸ್ಥಾಪಿತ ಹಿತಾಸಕ್ತಿಗಳ ಹಾಗೂ ಸಶಕ್ತ ಗುಂಪುಗಳ ನಡುವೆ ಕ್ಷೋಭೆಯನ್ನು,ಆತಂಕವನ್ನು, ಆಭದ್ರತೆಯನ್ನು ಉಂಟುಮಾಡುತ್ತವೆ. ಕರ್ನಾಟಕದಲ್ಲೂ ಆರು ತಿಂಗಳ ಆಡಳಿತವನ್ನು ಪೂರೈಸಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದೇ ದ್ವಂದ್ವವನ್ನು ಎದುರಿಸುತ್ತಿದೆ. ಹಿಂದುಳಿದ ಜಾತಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಸಮೀಕ್ಷೆಗೊಳಪಡಿಸಿರುವ ಕಾಂತರಾಜು ಆಯೋಗದ ವರದಿಯನ್ನು ಜಾರಿಗೊಳಿಸುತ್ತೇವೆ ಎಂಬ ಒಂದು ಘೋಷಣೆಯೇ ಇಡೀ ರಾಜಕೀಯ ವ್ಯವಸ್ಥೆಯ ತಳಪಾಯವನ್ನು ಅಲುಗಾಡಿಸಿಬಿಟ್ಟಿದೆ. ಪಕ್ಷಾತೀತವಾಗಿ ರಾಜಕೀಯ ನಾಯಕರು ತಮ್ಮ ಜಾತಿ ಪ್ರಜ್ಞೆಯ ನೆಲೆಯಲ್ಲಿ ಒಂದಾಗಿಬಿಟ್ಟಿದ್ದಾರೆ. ಮತ್ತೊಂದೆಡೆ ಸದಾಶಿವ ಆಯೋಗದ ತೂಗುಗತ್ತಿಯೂ ಸರಕಾರದ ನೆತ್ತಿಯ ಮೇಲಿದ್ದು, ದಲಿತ ಸಮುದಾಯದ ನಡುವೆಯೇ ಇರುವ ದ್ವಂದ್ವಗಳಿಗೆ ಸಾಕ್ಷಿಯಾಗುವಂತಿದೆ.
ಹಿಂದುಳಿದ ವರ್ಗಗಳ ಆಯೋಗದ ಶಿಫಾರಸುಗಳು ಪ್ರಬಲ ಜಾತಿ ಸಮುದಾಯಗಳ ನಿದ್ದೆಗೆಡಿಸಿದ್ದರೆ, ಸದಾಶಿವ ಆಯೋಗದ ವರದಿಯು ಸ್ಥಾಪಿತ ಫಲಾನುಭವಿಗಳ ನಿದ್ದೆಗೆಡಿಸುವಂತಿದೆ. ಸಾಮಾಜಿಕ ನ್ಯಾಯಕ್ಕಾಗಿ ಸದಾ ಹೋರಾಡುವ ಸಾಂಘಿಕ ಇಚ್ಛಾಶಕ್ತಿಯು ಸಾಂಸ್ಥಿಕ ನೆಲೆಯಲ್ಲಿ ದುರ್ಬಲವಾಗಲು ಕಾರಣ ಅಧಿಕಾರ ರಾಜಕಾರಣದ ಲಾಲಸೆಗಳು ಹಾಗೂ ಸಾಮಾಜಿಕ-ಆರ್ಥಿಕ ಪ್ರಾಬಲ್ಯದ ವಾಂಛೆ. ಅವಕಾಶವಂಚಿತ ಹಿಂದುಳಿದ ಜಾತಿಗಳ/ಶೋಷಿತ-ದಲಿತ-ಅಸ್ಪಶ್ಯ ಸಮುದಾಯಗಳ ವಾಸ್ತವ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ವ್ಯವಧಾನವನ್ನೂ ಕಳೆದುಕೊಂಡಿರುವ ಒಂದು ಸಮಾಜದಲ್ಲಿ ರಾಜಕೀಯ ಅಧಿಕಾರ ಎನ್ನುವುದು ಪಟ್ಟಭದ್ರರ ಸಂರಕ್ಷಣೆಗೆ ಭದ್ರಕವಚವಾಗಿ ಪರಿಣಮಿಸುತ್ತದೆ. ಹಾಗಾಗಿಯೇ ಕಾಂತರಾಜು/ಸದಾಶಿವ ಆಯೋಗದ ವರದಿಗಳು ಒಕ್ಕಲಿಗರನ್ನು, ಲಿಂಗಾಯತರನ್ನು, ದಲಿತರ ಒಂದು ವರ್ಗವನ್ನು ಪಕ್ಷಾತೀತವಾಗಿ ಒಂದೇ ವೇದಿಕೆಯಡಿ ತಂದು ನಿಲ್ಲಿಸುತ್ತದೆ.
ಆದರೂ ನಾವು ನವೆಂಬರ್ 26ರಂದು ಸಂವಿಧಾನ ಸಮರ್ಪಣಾ ದಿನವನ್ನು ಸಂಭ್ರಮದಿಂದ ಆಚರಿಸುತ್ತಾ, 1949ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರಾಡಿದ ಮಾತುಗಳನ್ನು ಮೆಲುಕು ಹಾಕುತ್ತಲೇ ಇರುತ್ತೇವೆ. ವಾಸ್ತವವಾಗಿ ಒಂದು ಪ್ರಜ್ಞಾವಂತ ಸಮಾಜವಾಗಿ ನಾವು ನೋಡಬೇಕಿರುವುದು ನೆಲವಾಸ್ತವಗಳತ್ತ ಅಲ್ಲವೇ? ಸಂವಿಧಾನ ಏನು ಹೇಳುತ್ತದೆ, ಡಾ. ಅಂಬೇಡ್ಕರ್ ಏನು ಹೇಳಿದ್ದರು ಎನ್ನುವುದಕ್ಕಿಂತಲೂ ಪ್ರಜ್ಞಾವಂತರನ್ನು ಕಾಡಬೇಕಿರುವುದು, ವರ್ತಮಾನದ ಸಮಾಜದಲ್ಲಿ ನಾವೆಷ್ಟು ಸಂವಿಧಾನಬದ್ಧವಾಗಿದ್ದೇವೆ ಎನ್ನುವ ಪ್ರಶ್ನೆ ಅಲ್ಲವೇ? ಸಾಮಾಜಿಕ-ಆರ್ಥಿಕ ಬದುಕಿನಲ್ಲಿ ಅಸಂಖ್ಯಾತ ಅವಕಾಶವಂಚಿತರು ನಮ್ಮ ನಡುವೆ ಇರುವಾಗ, ಅವರತ್ತ ಕಣ್ಣೆತ್ತಿಯೂ ನೋಡದೆ, ಅಂಬೇಡ್ಕರರ ಸಮಾನತೆಯ ಆದರ್ಶಗಳನ್ನು ಘೋಷವಾಕ್ಯಗಳಾಗಿ ಮೊಳಗುವುದು ಠಕ್ಕುತನದ ಪರಮಾವಧಿ ಎನಿಸುವುದಿಲ್ಲವೇ?
► ಸಮಾನತೆ-ಭ್ರಾತೃತ್ವದ ಆಶಯಗಳು
ಸಾಮಾಜಿಕ ನ್ಯಾಯ ಹಾಗೂ ಸಮಾನತೆಗಾಗಿ ಹೋರಾಡುವ ಪ್ರಗತಿಪರ ಸಂಘಟನೆಗಳನ್ನೂ ಈ ಪ್ರಶ್ನೆ ಕಾಡಬೇಕಿದೆ. ತಾತ್ವಿಕವಾಗಿ ತಳಸಮುದಾಯಗಳ, ಶೋಷಿತರ, ಅವಕಾಶವಂಚಿತರ ಸಮಾನ ಅವಕಾಶಗಳಿಗಾಗಿ ಪಣತೊಟ್ಟು ನಿಲ್ಲುತ್ತಲೇ, ಅಧಿಕಾರ ರಾಜಕಾರಣದ ಚೌಕಟ್ಟಿನಲ್ಲಿ ತಮ್ಮದೇ ಆದ ಸೈದ್ಧಾಂತಿಕ ನಿಲುವು, ರಾಜಕೀಯ ಒಲವುಗಳನ್ನು ಮುನ್ನೆಲೆಗೆ ತರುವ ದ್ವಂದ್ವ ಸಾಂಘಿಕ ನೀತಿಯಿಂದ ಸಂಘಟನೆಗಳು ಹೊರಬರಬೇಕಿದೆ. ಸಾಮಾಜಿಕ ನ್ಯಾಯ ಎಂಬ ವಿಶಾಲಾರ್ಥದ ಭೂಮಿಕೆಯಲ್ಲಿ ಅಧಿಕಾರ ಗ್ರಹಣ ಮಾಡಿರುವ ಕಾಂಗ್ರೆಸ್ ಸರಕಾರವೂ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಅಂಬೇಡ್ಕರ್ ಬಯಸಿದ ಸಾಮಾಜಿಕ ನ್ಯಾಯದ ಹಿಂದೆ ಇರುವ ಮತ್ತೊಂದು ಅಮೂಲ್ಯ ಚಿಂತನೆ ಭ್ರಾತೃತ್ವ ಎನ್ನುವುದನ್ನು ನಾವು ಜಾಣ್ಮೆಯಿಂದ ಮರೆಯುತ್ತಿದ್ದೇವೆ ಎನಿಸುತ್ತದೆ. ಸಾಮುದಾಯಿಕ ಆವರಣಗಳಲ್ಲೇ ವ್ಯಕ್ತವಾಗದ ಭ್ರಾತೃತ್ವ ಬಾಹ್ಯ ಸಮಾಜದಲ್ಲಿ ಹೇಗೆ ವ್ಯಕ್ತವಾಗಲು ಸಾಧ್ಯ? ಇಲ್ಲಿ ಪುನಃ ಅಂಬೇಡ್ಕರ್ ನಮ್ಮನ್ನು ಎಚ್ಚರಿಸಬೇಕಿದೆ.
ಈ ದ್ವಂದ್ವ ಹಾಗೂ ಭಿನ್ನ ಭೇದಗಳ ನಡುವೆಯೇ ಅಧಿಕಾರ ವಹಿಸಿಕೊಂಡಿರುವ ಕಾಂಗ್ರೆಸ್ ಆರು ತಿಂಗಳ ಆಡಳಿತ ಪೂರೈಸಿದೆ. ಈ ಅವಧಿಯಲ್ಲಿ ಸರಕಾರದ ಸಾಧನೆಯನ್ನು ಅಳೆಯುವುದಕ್ಕಿಂತಲೂ ಮಿಗಿಲಾಗಿ, ಇನ್ನೂ ನಾಲ್ಕೂವರೆ ವರ್ಷಗಳಲ್ಲಿ ಸರಕಾರ ಇಡಬಹುದಾದ ಮಹತ್ವದ ಹೆಜ್ಜೆಗಳ ಮುನ್ನೋಟ ನಮ್ಮಲ್ಲಿರುವುದು ಅವಶ್ಯ. ತಳಮಟ್ಟದ ಸಮಾಜದ ನಿತ್ಯ ಬದುಕಿಗೆ ನೆರವಾಗುವಂತಹ ಅಥವಾ ಈ ಜನತೆಯ ಜೀವನೋಪಾಯವನ್ನು ಸದೃಢಗೊಳಿಸಬಹುದಾದಂತಹ ಜನಕಲ್ಯಾಣ ಯೋಜನೆಗಳಷ್ಟೇ ಸರಕಾರದ ಸಾಧನೆ ಎನ್ನುವುದು ಅರ್ಧಸತ್ಯ. ಗ್ಯಾರಂಟಿ ಯೋಜನೆಗಳನ್ನೂ ಮೀರಿ ಜನಸಾಮಾನ್ಯರ ಬದುಕನ್ನು ಸುಸ್ಥಿರವಾಗಿ ಕಟ್ಟಿಕೊಡುವ ಸಾಂವಿಧಾನಿಕ ಜವಾಬ್ದಾರಿ ಸರಕಾರದ ಮೇಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಬಹುದೂರ ಸಾಗಬೇಕಿದೆ.
ಕಳೆದ ಆರು ತಿಂಗಳ ಆಡಳಿತದಲ್ಲಿ ಬರಗಾಲದ ನಡುವೆಯೂ ಕಾಂಗ್ರೆಸ್ ಸರಕಾರ ಹಲವು ಜನಸ್ಪಂದನೆಯ ಆಡಳಿತ ನೀತಿಗಳನ್ನು ಜಾರಿಗೊಳಿಸಿದೆ. ಜವಾಬ್ದಾರಿಯುತ ವಿರೋಧ ಪಕ್ಷವಿಲ್ಲದೆಯೇ ಆರು ತಿಂಗಳು ಪೂರೈಸಿರುವ ಸರಕಾರಕ್ಕೆ ಹೆಚ್ಚು ಕಂಟಕಪ್ರಾಯವಾಗಿರುವುದು ಆಂತರಿಕ ಭಿನ್ನಾಭಿಪ್ರಾಯ, ಅಧಿಕಾರ ದಾಹ, ಪ್ರಾತಿನಿಧಿತ್ವದ ಹೆಸರಿನಲ್ಲಿ ಕಾಣುವ ಪೀಠವ್ಯಾಮೋಹ ಹಾಗೂ ಇತ್ತೀಚಿನ ಜಾತಿಗಣತಿಯ ಭೂತ. ಇದು ಏನನ್ನು ಸೂಚಿಸುತ್ತದೆ? ಚುನಾವಣೆಗಳಲ್ಲಿ ಮತದಾರ ಪ್ರಭುಗಳಿಂದ ಸ್ಪಷ್ಟ ಬಹುಮತ ಪಡೆದಿರುವ ಜನಪ್ರತಿನಿಧಿಗಳಿಗೆ ಸಮಸ್ತ ಜನತೆಯ ಯೋಗಕ್ಷೇಮ/ಸಮೃದ್ಧಿಗಿಂತಲೂ ತಮ್ಮ ಸ್ವಾರ್ಥ ಹಿತಾಸಕ್ತಿಯೇ ಪ್ರಧಾನವಾಗಿದೆ ಎನಿಸುವುದಿಲ್ಲವೇ? ಈ ಹಿತಾಸಕ್ತಿಗೆ ಜಾತಿ ಒಂದು ಸಾಧನವಾದರೆ ಮತ್ತೊಂದು ಅಧಿಕಾರ ಪೀಠ ಒದಗಿಸಬಹುದಾದಂತಹ ಸವಲತ್ತುಗಳು.
► ಆಳ್ವಿಕೆಯ ಆದ್ಯತೆಗಳು
ಈ ವ್ಯತ್ಯಯಗಳನ್ನು ಮೀರಿ ಒಂದು ಸದಾಶಯದ ಆಳ್ವಿಕೆ ನೀಡಬೇಕಾದರೆ ಸರಕಾರ ಮತಗಳಿಕೆಯ ಆಕರಗಳನ್ನು ಕೊಂಚ ಸಮಯವಾದರೂ ಮರೆತು, ಸಾಮಾಜಿಕ-ಸಾಂಸ್ಕೃತಿಕ ಸ್ವಾಸ್ಥ್ಯವನ್ನು ಕಾಪಾಡುವತ್ತ ಗಮನಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರದ ಪ್ರಯತ್ನಗಳು ನಗಣ್ಯ ಎಂದೇ ಹೇಳಬಹುದು. ಕೋಮು ಗಲಭೆಗಳಿಲ್ಲ ಎಂದ ಮಾತ್ರಕ್ಕೆ ಸಮಾಜವು ಶಾಂತಿಯುತವಾಗಿದೆ ಎಂದು ಭಾವಿಸಬೇಕಿಲ್ಲ. ಬೆಂಗಳೂರು ನಗರವನ್ನೂ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಹತ್ಯೆಗಳು, ಇತ್ತೀಚೆಗಷ್ಟೇ ಹೊರಬಿದ್ದಿರುವ ಭ್ರೂಣ ಹತ್ಯೆಯ ವ್ಯವಸ್ಥಿತ ಜಾಲ, ನೆಜ್ಜಾರಿನಲ್ಲಿ, ಕೋಲಾರ ಜಿಲ್ಲೆಯಲ್ಲಿ ನಡೆದಿರುವ ಕಗ್ಗೊಲೆಗಳು ಇವೆಲ್ಲವೂ ಕಾನೂನು ಸುವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರುತ್ತವೆ. ಅಧಿಕಾರ ಪೀಠದಲ್ಲಿರುವವರ ಗಮನ ಸುತ್ತಲ ಸಮಾಜದ ಮೇಲಿರಬೇಕೇ ಹೊರತು, ಕುಳಿತ ಪೀಠದ ಸ್ತಂಭಗಳ ಮೇಲಿರಕೂಡದು. ಇದು ಪ್ರತಿಯೊಬ್ಬ ಜನಪ್ರತಿಧಿಯಲ್ಲಿರಬೇಕಾದ ಸಾರ್ವತ್ರಿಕ ಪ್ರಜ್ಞೆ.
ಕಳೆದ ಸರಕಾರದ ಆಳ್ವಿಕೆಯಲ್ಲಿ ಕರ್ನಾಟಕ ಎದುರಿಸಿದ ಸಾಂಸ್ಕೃತಿಕ ಸವಾಲುಗಳತ್ತ ಹಿಂದಿರುಗಿ ನೋಡಿದಾಗ, ಹಾಲಿ ಸರಕಾರ ಸಾಂಸ್ಕೃತಿಕ ವಲಯದಲ್ಲಿ ಉಂಟಾಗಿದ್ದ ಕ್ಷೋಭೆಯನ್ನು ನಿವಾರಿಸಲು ಯಾವ ಪ್ರಯತ್ನಗಳನ್ನು ಮಾಡಿದೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ನಿಗಮ ಮಂಡಲಿಗಳ ನೇಮಕಾತಿಯ ವಿಳಂಬ ಅರ್ಥವಾಗುವಂತಹುದು. ಏಕೆಂದರೆ ಅಲ್ಲಿ ಜಾತಿ-ಪ್ರದೇಶ-ಸಮುದಾಯ ಮತ್ತು ಇತರ ಅಸ್ಮಿತೆಗಳ ಪ್ರಾತಿನಿಧ್ಯವೇ ಪ್ರಧಾನವಾಗಿರುತ್ತದೆ. ಚುನಾವಣಾ ರಾಜಕಾರಣದ ಲೆಕ್ಕಾಚಾರಗಳು ಮುನ್ನೆಲೆಗೆ ಬರುತ್ತವೆ. ಆದರೆ ಸಾಂಸ್ಕೃತಿಕ ವಲಯವನ್ನು ಪ್ರಜಾಸತ್ತಾತ್ಮಕವಾಗಿಸುವ ನಿಟ್ಟಿನಲ್ಲಿ ಸಾಹಿತ್ಯ, ಲಲಿತಕಲೆ, ರಂಗಭೂಮಿ ಮತ್ತು ಶೈಕ್ಷಣಿಕ ವಲಯದಲ್ಲಿ ಸರಕಾರ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಲ್ಲಿ ಈ ವೇಳೆಗೆ ಎಲ್ಲ ಅಕಾಡಮಿಗಳು, ಪ್ರಾಧಿಕಾರಗಳು, ರಂಗಾಯಣಗಳು ಸಕ್ರಿಯವಾಗಿರುತ್ತಿದ್ದವು. ಇಲ್ಲಿಯೂ ಜಾತಿ ಪ್ರಾತಿನಿಧ್ಯದ ಪ್ರಶ್ನೆ ಉದ್ಭವಿಸುವುದಾದರೂ, ಬಗೆಹರಿಸಲಾಗದ ಕಗ್ಗಂಟಾಗಿ ಪರಿಣಮಿಸುವುದಿಲ್ಲ. ಆದರೆ ಸರಕಾರದ ದೃಷ್ಟಿಯಲ್ಲಿ ಇದು ಪ್ರಥಮ ಆದ್ಯತೆ ಪಡೆದೇ ಎಲ್ಲ ಎನಿಸುತ್ತದೆ.
ಕರ್ನಾಟಕದ ಮತದಾರರು ಕಾಂಗ್ರೆಸ್ ಸರಕಾರವನ್ನು ಆಯ್ಕೆ ಮಾಡಿರುವುದು ಕೇವಲ ಗ್ಯಾರಂಟಿ ಯೋಜನೆಗಳಿಗಾಗಿ ಅಲ್ಲ. ಬದಲಾಗಿ ರಾಜ್ಯವನ್ನು ನಿರಂತರ ಕಾಡುತ್ತಿದ್ದ ದ್ವೇಷ ರಾಜಕಾರಣ, ಮತಾಂಧತೆ, ಜಾತಿ ದೌರ್ಜನ್ಯ, ಮಹಿಳಾ ದೌರ್ಜನ್ಯ ಹಾಗೂ ಕಿತ್ತುತಿನ್ನುವ ಬಡತನ-ಹಸಿವೆಯ ಬವಣೆ ಇವುಗಳಿಂದ ಮುಕ್ತಿಪಡೆಯಲು, ನವ ಉದಾರವಾದದ ಕ್ರೂರ ಆರ್ಥಿಕ ನೀತಿಗಳಿಂದ ಬಚಾವಾಗಲು, ಜನಸಾಮಾನ್ಯರು ತಮ್ಮ ಅಸ್ಮಿತೆಯ ಗಡಿಗಳನ್ನು ದಾಟಿ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿದ್ದಾರೆ. ಈ ಸಾಮಾನ್ಯ ಜನತೆಯ ಭರವಸೆಗಳನ್ನು ಈಡೇರಿಸುವುದು ಹಾಗೂ ಈಡೇರಿಕೆಯ ಹಾದಿಯಲ್ಲಿ ಎದುರಾಗಬಹುದಾದ ಭ್ರಷ್ಟಾಚಾರ, ಕೋಮುವಾದ, ದ್ವೇಷಾಸೂಯೆಗಳ ರಾಜಕಾರಣವನ್ನು ತೊಡೆದುಹಾಕುವುದು ಸರಕಾರದ ಪ್ರಧಾನ ಆದ್ಯತೆಯಾಗಬೇಕಿದೆ. ಹಾಗೆಯೇ ಸಂವಿಧಾನದ ಆಶಯದಂತೆ ತಳಮಟ್ಟದ ಸಮಾಜದಲ್ಲಿ ಸಾಮಾಜಿಕ-ಆರ್ಥಿಕ ಸಮಾನತೆ, ಸಾಂಸ್ಕೃತಿಕ ಘನತೆಯನ್ನು ಎತ್ತಿಹಿಡಿಯುವುದು, ಮತ್ತೊಂದೆಡೆ ನಿರಂತರ ದೌರ್ಜನ್ಯ- ತಾರತಮ್ಯಕ್ಕೊಳಗಾಗುತ್ತಿರುವ ಮಹಿಳಾ ಸಂಕುಲದತ್ತ ಗಮನಹರಿಸಿ, ಹೆಣ್ತನದ ಘನತೆಯನ್ನು ಸಂರಕ್ಷಿಸುವುದೂ ಸರಕಾರದ ಮೊದಲ ಆದ್ಯತೆಯಾಗಬೇಕಿದೆ.
ಈ ಆದ್ಯತೆಗಳತ್ತ ಸರಕಾರ ಇಡುವ ಪ್ರತಿಯೊಂದು ಹೆಜ್ಜೆಯೂ ಜನಸಾಮಾನ್ಯರ ಭರವಸೆಯನ್ನು ಇಮ್ಮಡಿಗೊಳಿಸುತ್ತದೆ. ಸಂವಿಧಾನ ಸವಲತ್ತುಗಳಿಂದ ವಂಚಿತವಾಗಿರುವ ಜನಸಮುದಾಯಗಳತ್ತ ಗಮನಹರಿಸುವುದು ಸರಕಾರದ ಕರ್ತವ್ಯವಷ್ಟೇ ಅಲ್ಲ, ಸಾಮಾಜಿಕ ಸಂಘಟನೆಗಳ ನೈತಿಕತೆಯೂ ಹೌದು ಎಂಬ ವಾಸ್ತವವನ್ನು ಸಾಂಘಿಕ ನೆಲೆಯಲ್ಲಿ ನಾವು ಮನದಟ್ಟು ಮಾಡಿಕೊಳ್ಳಬೇಕಿದೆ. ಈ ಸಾಮೂಹಿಕ ಜವಾಬ್ದಾರಿಯನ್ನು ನಿಭಾಯಿಸುವುದರೊಂದಿಗೇ ಡಾ.ಬಿ.ಆರ್. ಅಂಬೇಡ್ಕರ್ ಆಶಿಸಿದ ಸಾಮಾಜಿಕ-ಘನತೆ-ನ್ಯಾಯ ಸಾಕಾರಗೊಳಿಸುವತ್ತ ಯೋಚಿಸುವುದು ಎಲ್ಲ ಪ್ರಜಾಸತ್ತಾತ್ಮಕ ಮನಸ್ಸುಗಳ ಆದ್ಯತೆಯಾಗಬೇಕಿದೆ. ಈ ಪ್ರಜಾಸತ್ತೆಯ ಆಶಯಗಳೇ ತಮ್ಮನ್ನು ಅಧಿಕಾರ ಪೀಠದಲ್ಲಿ ಕೂರಿಸಿವೆ ಎಂಬ ಅರಿವು ಆಡಳಿತಾರೂಢ ಪಕ್ಷದ ಶಾಸಕರಲ್ಲಿರಬೇಕಾಗುತ್ತದೆ. ಆಗಲೇ ನವೆಂಬರ್ 26ರ ಸಂವಿಧಾನ ಸಮರ್ಪಣಾ ದಿನದ ಆಚರಣೆ ಅರ್ಥಪೂರ್ಣವಾದೀತು.