ಭಾರತದ ಸಂವಿಧಾನ-75: ಜಾಗೃತಿ ಮತ್ತು ಪ್ರಬುದ್ಧತೆಯ ಅಗತ್ಯ
ಸಂವಿಧಾನ ಮತ್ತು ‘ಸೆಂಗೋಲ್’
ಸಂವಿಧಾನದ ಮೂಲಕವೇ ಜನ್ಮ ತಾಳಿದ ಪ್ರಜಾತಂತ್ರದ ಆಧಾರ ಸ್ತಂಭಗಳ ಕಾರ್ಯ ನಿರ್ವಹಣೆಯ ಬಗ್ಗೆ ಅನೇಕ ವಿಶ್ಲೇಷಕರು, ನ್ಯಾಯವೇತ್ತರು, ಸಂವಿಧಾನ ತಜ್ಞರು, ಹಿಂದಿನ ಚುನಾವಣಾ ಆಯುಕ್ತರು ಕಾಲಕಾಲಕ್ಕೆ ತಮ್ಮ ಶಂಕೆಗಳನ್ನು ಬರಹ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಆದರೆ ಈ ಅರಿವು ಮತ್ತು ಲೋಕಸಭೆಯ ಚುನಾವಣೆಯಲ್ಲಿ ಕಂಡ ಪ್ರಬುದ್ಧತೆ ಇನ್ನೂ ವಿಶಾಲವಾದ ತಳಹದಿಯಲ್ಲಿ ಹಬ್ಬಿದರೆ ಮಾತ್ರ 1949ರ ಸಂವಿಧಾನವು ಅದರ ಮೂಲ ಆಶಯಗಳನ್ನು ಮುಂದುವರಿಸಿಕೊಂಡು ಹೋಗಬಹುದೆಂಬ ಧೈರ್ಯವನ್ನು ನಾವು ಹೊಂದಬಹುದು.
ಉತ್ತರದಾಯಿತ್ವವಿಲ್ಲದ ಕಾರ್ಯಾಂಗ:
ಸಂಸದೀಯ ವ್ಯವಸ್ಥೆಯಲ್ಲಿ ಕಾರ್ಯಾಂಗದ ಕೇಂದ್ರ ವ್ಯಕ್ತಿ ಪ್ರಧಾನ ಮಂತ್ರಿ. ಅವರು ಬಹುಮತ ಹೊಂದಿದ ಪಕ್ಷದ ನಾಯಕರು ಮಾತ್ರವಲ್ಲ, ಇಡೀ ದೇಶದ ಪ್ರಧಾನಿ ಕೂಡ. ಅವರ ವರ್ತನೆ ಸಂಸತ್ತಿನ ಒಳಗೂ ಹೊರಗೂ ತಮ್ಮ ಸ್ಥಾನದ ಘನತೆಯನ್ನು ಎತ್ತಿಹಿಡಿಯುವಂತಿರಬೇಕು. ಪ್ರಮುಖ ವಿಷಯಗಳ ಕುರಿತು ಚರ್ಚೆಗಳಾಗುತ್ತಿರುವಾಗ ಅವರು ಸದನದಲ್ಲಿ ಉಪಸ್ಥಿತರಿರಬೇಕು; ಅವರ ಉಪಸ್ಥಿತಿಯಿಂದ ಚರ್ಚೆಯ ಮೌಲ್ಯ ಹೆಚ್ಚುತ್ತದೆ. ತಮ್ಮ ಹಾಜರಿಯ ಮೂಲಕ ಅವರಿಗೆ ಜನಪ್ರತಿನಿಧಿಗಳ ವಿಭಿನ್ನ ದೃಷ್ಟಿಕೋನಗಳನ್ನು ನೇರವಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ.
ಹೋದ ಎರಡು ಲೋಕಸಭೆಗಳ ಕಾಲಾವಧಿಯಲ್ಲಿ ಪ್ರಧಾನ ಮಂತ್ರಿಯವರು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗಳಾಗುವಾಗ ಅಧಿವೇಶನದಲ್ಲಿ ಭಾಗವಹಿಸುತ್ತಿರಲಿಲ್ಲ. ಪ್ರಸಕ್ತ ಲೋಕಸಭೆಯ ಮೊದಲ ಅಧಿವೇಶನದಲ್ಲಿ ವಿರೋಧಪಕ್ಷದ ನಾಯಕರು ರಾಷ್ಟ್ರಪತಿಗಳ ಅಭಿಭಾಷಣದ ಮೇಲೆ ತಮ್ಮ ಅಭಿಪ್ರಾಯವನ್ನು ಮಂಡಿಸುವಾಗ ಪ್ರಧಾನಿ ಸಭೆಯಿಂದ ಹೊರಗಿದ್ದರು. (ದೇಶದ ಮೊದಲ ಪ್ರಧಾನಿ ನೆಹರೂ ಅವರು ಆಗ ಯುವನಾಯಕರಾಗಿದ್ದ ವಾಜಪೇಯಿ ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸುವ ಶಿಷ್ಟಾಚಾರವನ್ನು ಮೈಗೂಡಿಸಿಕೊಂಡಿದ್ದರು.)
ಚರ್ಚೆಯಲ್ಲಿ ಭಾಗವಹಿಸುವಾಗಲೂ ಸದನದ ಮತ್ತು ತಮ್ಮ ಸ್ಥಾನದ ಹಿರಿಮೆಯನ್ನು ಕಾಪಾಡಿಕೊಳ್ಳುವ ಉತ್ತರದಾಯಿತ್ವ ಪ್ರಧಾನ ಮಂತ್ರಿಯವರಿಗೆ ಇದೆ. ಮಾತ್ರವಲ್ಲ, ತನ್ನ ಪಕ್ಷದ ಸದಸ್ಯರು ಅಸಂಸದೀಯವಾಗಿ ವರ್ತಿಸಿದರೆ ಅವರಿಗೆ ಶಿಸ್ತಿನ ಬಗ್ಗೆ ತಿಳಿಯ ಹೇಳುವ ನೈತಿಕ ಜವಾಬ್ದಾರಿಯೂ ಪಕ್ಷದ ನಾಯಕರಾದ ಪ್ರಧಾನ ಮಂತ್ರಿಯವರದ್ದು. ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿಯವರು ಆ ನೈತಿಕತೆಯನ್ನು ಪ್ರದರ್ಶಿಸುವ ಸ್ಥೈರ್ಯವನ್ನು ತೋರಿಸಿಲ್ಲ. ಭಾಜಪದ ದಿಲ್ಲಿ ಸಂಸದ ರಮೇಶ ಭಿದೂರಿಯವರು 2023ರಲ್ಲಿ ಇನ್ನೊಬ್ಬ ಸಂಸದ ದಾನಿಶ್ ಅಲಿ ಬಗ್ಗೆ ಅತ್ಯಂತ ಆಕ್ಷೇಪಾರ್ಹವಾದ ಭಾಷೆಯನ್ನು ಬಳಸಿದುದರ ಬಗ್ಗೆ ಪ್ರಧಾನಿಯವರು ಸುಮ್ಮಗಿದ್ದರು. ತಮ್ಮ ಸಹೋದ್ಯೋಗಿ ಮಂತ್ರಿಗಳು ಸದನದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಬೊಬ್ಬಿರಿಯುವಾಗ ಕಡಿವಾಣ ಹಾಕುವ ಪ್ರಯತ್ನವನ್ನು ಮಾಡಲಿಲ್ಲ.
ಈ ತರದ ವರ್ತನೆಗಳು ಸಂಸದೀಯ ಶಿಷ್ಟಾಚಾರದ ಬಗ್ಗೆ ಅವರಿಗೆ ಎಷ್ಟು ಗೌರವವಿದೆ ಎಂಬುದನ್ನು ತೋರಿಸುತ್ತವೆ.
ಸಂಸದೀಯ ಪ್ರಜಾತಂತ್ರದಲ್ಲಿ, ಕಾರ್ಯಾಂಗ, ಅಂದರೆ ಸರಕಾರವು ಜನರಿಂದ ಆಯ್ಕೆಯಾಗಿ ಬಂದ ಸಂಸತ್ತಿಗೆ ಉತ್ತರದಾಯಿಯಾಗಬೇಕು. ದೇಶದೊಳಗೆ ಸಂಭವಿಸುವ ರೈಲುದುರ್ಘಟನೆಗಳು ಮತ್ತು ಬೆಂಕಿ ಅನಾಹುತಗಳು, ಆಂತರಿಕ ಕ್ಷೋಭೆ, ಪ್ರಕೃತಿ ವಿಕೋಪಗಳು, ದೇಶದ ಅರ್ಥವ್ಯವಸ್ಥೆಯಲ್ಲಿ ಏರುಪೇರು-ಮುಂತಾದ ಸಂದರ್ಭಗಳಲ್ಲಿ ಕಾರ್ಯಾಂಗದ ಜವಾಬ್ದಾರಿ ಮಹತ್ತರವಾದುದು. ಸರಕಾರ ಘಟನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ, ಪಕ್ಷಾತೀತವಾದ ನಡೆಯನ್ನು ಅನುಸರಿಸಿ ಸಂಸತ್ತಿನ ಮೂಲಕ ಜನತೆಗೆ ತಾನು ಕೈಗೊಳ್ಳುವ ಕ್ರಮಗಳ ಬಗ್ಗೆ ಆಶ್ವಾಸನೆಗಳನ್ನು ನೀಡಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆಗಳು ಸಂಭವಿಸಿದ್ದರೆ ತಪ್ಪಿತಸ್ಥರ ಮೇಲೆ ಕಾನೂನು ರೀತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಂಸತ್ತಿನಲ್ಲಿ ಚರ್ಚೆಗೆ ಅವಕಾಶವನ್ನು ನೀಡಬೇಕು. ಅಗತ್ಯ ಬಿದ್ದಲ್ಲಿ ಸರ್ವಪಕ್ಷಗಳ ಸಭೆ ಕರೆದು ವಿಷಯವನ್ನು ಚರ್ಚಿಸಿ ಅವರ ಸಲಹೆಗಳನ್ನು ಆಲಿಸಬೇಕು.
ಆದರೆ ವಾಸ್ತವವು ಇದಕ್ಕಿಂತ ತೀರಾ ಭಿನ್ನವಾಗಿದೆ. ರಶ್ಯ-ಉಕ್ರೆನ್ ಮತ್ತು ಇಸ್ರೇಲ್-ಫೆಲೆಸ್ತೀನ್ ನಡುವೆ ಬಿಕ್ಕಟ್ಟುಗಳು ಆರಂಭವಾದಾಗ ಅವುಗಳು ದೇಶದ ಆರ್ಥಿಕತೆ ಮತ್ತು ಅಂತರ್‌ರಾಷ್ಟ್ರೀಯ ಸಂಬಂಧಗಳ ಮೇಲೆ ಪ್ರಭಾವ ಬೀರಬಹುದೆಂದು ತಿಳಿದಿದ್ದರೂ ಪ್ರಧಾನ ಮಂತ್ರಿಗಳಾಗಲೀ, ವಿದೇಶ ಸಚಿವರಾಗಲೀ ಸರಕಾರದ ಧೋರಣೆಯ ಬಗ್ಗೆ ಅಧಿಕೃತವಾದ ಹೇಳಿಕೆಗಳನ್ನು ಸಂಸತ್ತಿನಲ್ಲಿ ನೀಡಲಿಲ್ಲ.
ಮಣಿಪುರದಲ್ಲಿ ಆಗುತ್ತಿರುವ ಕ್ಷೋಭೆಯ ಬಗ್ಗೆ ಪ್ರಧಾನಿಯವರು ಇನ್ನೂ ಸಂಸತ್ತಿನ ಒಳಗೆ ಮಾತನಾಡಿಲ್ಲ, ಆ ರಾಜ್ಯಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಕೋಮುಗಲಭೆ, ಪ್ರಕೃತಿಯ ವಿಕೋಪ ಮತ್ತು ಕೋವಿಡ್‌ನಂತಹ ಮಹಾಮಾರಿಯ ಸಂದರ್ಭಗಳಲ್ಲಿ ಸಂಸತ್ತಿನ ಅಧಿವೇಶನದಲ್ಲಿ ಸಾಂತ್ವನ, ಸಹಾನುಭೂತಿ ಮತ್ತು ಸರಕಾರವು ಕೈಗೊಂಡ ಕ್ರಮದ ಬಗ್ಗೆ ಮಾತನಾಡಿರಲಿಲ್ಲ. ಸಂಕಷ್ಟಕ್ಕೆ ಬಲಿಯಾದವರ ಕುರಿತು ಸಾಂತ್ವನ, ಸಹಾನುಭೂತಿಯನ್ನು ಕೇವಲ ‘ಟ್ವಿಟರ್’ ಹೇಳಿಕೆಗೆ ಸೀಮಿತಗೊಳಿಸಲಾಗಿದೆ. ತಮ್ಮ ಸಚಿವಾಲಯದ ವೈಫಲ್ಯಗಳಿಗೆ ನೈತಿಕ ಹೊಣೆ ಹೊತ್ತು ಮಂತ್ರಿಗಳು ಪದತ್ಯಾಗ ಮಾಡಿದ ಉದಾಹರಣೆ ಕಳೆದ ಒಂದು ದಶಕದಲ್ಲಿ ನಮ್ಮ ಮುಂದೆ ಇಲ್ಲ.
ಸೆಂಗೋಲ್ ಎಂಬ ಪಳೆಯುಳಿಕೆ:
2023 ಮೇ ತಿಂಗಳಿನಲ್ಲಿ ಸಂಸತ್ತಿನ ಹೊಸ ಭವನದ ಉದ್ಘಾಟನೆಯನ್ನು ‘ಸೆಂಗೋಲ್’ (ರಾಜದಂಡ?) ವನ್ನು ಪ್ರತಿಷ್ಠಾಪಿಸಿ ಮಾಡಲಾದುದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬೇಕು. ನಮ್ಮ ಸಂವಿಧಾನದಲ್ಲಿ ರಾಜದಂಡಕ್ಕೆ ಸ್ಥಾನವಿಲ್ಲ; ಬ್ರಿಟಿಷರು ಬರುವ ತನಕ ಭಾರತದಲ್ಲಿ ನೂರಾರು ರಾಜರಿದ್ದರು. ರಾಜದಂಡವು ಅರಸೊತ್ತಿಗೆಯ ಸಂಕೇತ. ಅಲ್ಲಿ ರಾಜನ ಮಾತೇ ಅಂತಿಮ. ಅವನನ್ನು ಯಾರೂ ಪ್ರಶ್ನಿಸುವಂತಿಲ್ಲ; ಅವನು ಯಾರಿಗೂ ಉತ್ತರದಾಯಿಯೂ ಅಲ್ಲ. ಭಾರತವು ಸಂವಿಧಾನಾತ್ಮಕ ಗಣರಾಜ್ಯವಾದ ಮೇಲೆ ಸಂಸತ್ತಿನಲ್ಲಿ ರಾಜದಂಡಕ್ಕೆ ಸ್ಥಾನವಿಲ್ಲ. ಅದರ ನೈಜ ಸ್ಥಾನ ವಸ್ತು ಸಂಗ್ರಹಾಲಯ; ಹೊಸ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ ಅವರು ತಮ್ಮನ್ನು ಆಯ್ಕೆಮಾಡಿದ ಮತದಾರರಿಗೆ ತಾನು ಉತ್ತರದಾಯಿಯಲ್ಲ ಎಂಬ ಸಂದೇಶವನ್ನು ಕೊಟ್ಟಿದ್ದಾರೆ ಎನ್ನಬೇಕು. ತಾನು ‘ದೈವಾಂಶಸಂಭೂತ’ನೆಂಬ ಅವರ ಇತ್ತೀಚಿನ ಹೇಳಿಕೆ ಈ ಭಾವನೆಗೆ ಮತ್ತಷ್ಟು ಪುಷ್ಟಿಯನ್ನು ಕೊಡುತ್ತದೆ.
ನ್ಯಾಯಾಂಗವು ಸಂವಿಧಾನಕ್ಕೆ ಬದ್ಧವಾಗಿದೆಯೇ?
ಶಾಸಕಾಂಗ ಮತ್ತು ಕಾರ್ಯಾಂಗದಂತೆ ದೇಶದ ನ್ಯಾಯಾಂಗದ ಕಾರ್ಯನಿರ್ವಹಣೆ ಹಾಗೂ ಸ್ವಾಯತ್ತತೆಯ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಗಂಭೀರವಾದ ಪ್ರಶ್ನೆಗಳು ಹುಟ್ಟಿವೆ. ಅವುಗಳ ಬಗ್ಗೆ ಕೆಲವು ಉದಾಹರಣೆಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ. ಮೂಲಭೂತ ಹಕ್ಕುಗಳ ದಮನದ ಕುರಿತಾದ ಪ್ರಕರಣಗಳು ವರ್ಷಗಟ್ಟಲೆ ವಿಚಾರಣೆಯೂ ಆಗದೆ ಸುಪ್ರೀಂ ಕೋರ್ಟ್ ಮತ್ತು ರಾಜ್ಯಗಳ ಮುಖ್ಯ ನ್ಯಾಯಾಲಯಗಳಲ್ಲಿ ನನೆಗುದಿಗೆ ಬಿದ್ದಿವೆ. ಪೂರ್ಣಗೊಂಡ ವಿಚಾರಣೆಗಳಲ್ಲಿ ಕೆಲವು ನಿರ್ಧಾರಗಳು ಕಟು ಟೀಕೆಗೆ ಒಳಗಾಗಿವೆ. ಕಾನೂನು ಮತ್ತು ಸಂವಿಧಾನವೇ ಮಾನದಂಡವಾಗಬೇಕಾದಲ್ಲಿ ನ್ಯಾಯಮೂರ್ತಿಗಳು ‘ದೇವರ’ ಮತ್ತು ‘ಸ್ಮತಿ’ಗಳನ್ನು ಉದ್ಧರಿಸಿ ನಿರ್ಣಯ ನೀಡಿದ ಘಟನೆಗಳು ವರದಿಯಾಗಿವೆ. ಈ ದ್ವಂದ್ವವು ಜನರಿಗೆ ನ್ಯಾಯಾಂಗವು ಸಂವಿಧಾನಕ್ಕೆ ಬದ್ಧವಾಗಿದೆಯೇ ಎಂಬ ಶಂಕೆಯನ್ನು ಉಂಟು ಮಾಡುತ್ತದೆ.
ಸಾಂವಿಧಾನಿಕ ಪ್ರಶ್ನೆಗಳ ಕುರಿತಾದ ಪ್ರಕರಣಗಳನ್ನು ಇತ್ಯರ್ಥಮಾಡುವಲ್ಲಿಯೂ ಸುಪ್ರೀಂ ಕೋರ್ಟ್ ಸುದೀರ್ಘವಾದ ಸಮಯವನ್ನು ವ್ಯಯಿಸುತ್ತದೆ. ವಿಳಂಬವಾದ ನ್ಯಾಯ ಅನ್ಯಾಯಕ್ಕೆ ಸಮ ಎಂಬ ಭಾವನೆ ಬೆಳೆಯಲು ಇದು ಅವಕಾಶ ಮಾಡಿಕೊಡುತ್ತದೆ.
ನ್ಯಾಯಮೂರ್ತಿಗಳು ಸಾರ್ವಜನಿಕವಾಗಿ ರಾಜಕೀಯಕ್ಕೆ ನಂಟು ಇರುವ ಸಮಾರಂಭಗಳಲ್ಲಿ ಭಾಗವಹಿಸುವುದು, ಅತಿಗಣ್ಯ ವ್ಯಕ್ತಿಗಳ ಜೊತೆಯಲ್ಲಿ ಖಾಸಗಿ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವುದು ಮತ್ತು ಧರ್ಮಗಳಿಗೆ ಸಂಬಂಧವಾದ ಹೇಳಿಕೆಗಳನ್ನು ನೀಡುವುದು ಜನರಲ್ಲಿ ಸಂಶಯಕ್ಕೆ ಅನುವು ಮಾಡಿಕೊಟ್ಟಿದೆ.
ನ್ಯಾಯಾಧೀಶರ ನೇಮಕಾತಿಯಲ್ಲಿಯೂ ಅನೇಕ ಘಟನೆಗಳು ಸರಕಾರದ ಹಸ್ತಕ್ಷೇಪದ ಸಾಧ್ಯತೆಯನ್ನು ತೋರಿಸಿಕೊಡುತ್ತವೆ. ಸುಪ್ರೀಂ ಕೋರ್ಟ್ ಶಿಫಾರಸು ಮಾಡಿದ ನೇಮಕಾತಿಯ ಪಟ್ಟಿಗಳನ್ನು ಅಂಗೀಕರಿಸುವಲ್ಲಿ ಸರಕಾರವು ಮೀನಮೇಷ ಎಣಿಸುವುದು ಸಾಮಾನ್ಯವಾಗಿದೆ. ಸಾರ್ವಜನಿಕರ ವಿರೋಧವಿದ್ದರೂ ಕೆಲವು ಶಿಫಾರಸುಗಳನ್ನು ಅತಿ ವೇಗದಲ್ಲಿ ಒಪ್ಪಿ ನ್ಯಾಯಮೂರ್ತಿಗಳ ನೇಮಕಾತಿ ಆಗಿದೆ. ಇನ್ನು ಕೆಲವು ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ಸರಕಾರದ ಕೋರಿಕೆಯಂತೆ ಮರುಪರಿಶೀಲಿಸಿದ ಬಳಿಕವೂ ನೇಮಕಾತಿಗಳನ್ನು ಮಾಡಲಾಗಿಲ್ಲ. ಅದೇ ಕೋರ್ಟಿನ ಒಂದು ನಿರ್ಧಾರದಂತೆ ಎರಡನೆಯ ಬಾರಿ ಶಿಫಾರಸು ಮಾಡಿದ ಹೆಸರುಗಳನ್ನು ಸರಕಾರ ಅಂಗೀಕರಿಸಬೇಕು. ಆದರೆ ಸುಪ್ರೀಂ ಕೋರ್ಟ್ ಈ ವಿಳಂಬದ ಬಗ್ಗೆ ಸರಕಾರವನ್ನು ಪ್ರಶ್ನಿಸುವ ಆಸಕ್ತಿಯನ್ನು ತೋರಿಸಿಲ್ಲ.
ನಿವೃತ್ತ ನ್ಯಾಯಮೂರ್ತಿಗಳನ್ನು ಸಂಸತ್ತಿನ ಸದಸ್ಯರಾಗಿ, ರಾಜ್ಯಪಾಲರಾಗಿ ಇಲ್ಲವೇ ಪ್ರಮುಖ ಹುದ್ದೆಗಳಿಗೆ ನೇಮಿಸುವುದು ಈಗ ಸಾಮಾನ್ಯವಾಗಿದೆ. ಇದು ನ್ಯಾಯಾಂಗ ಮತ್ತು ಕಾರ್ಯಾಂಗಗಳು ಅಪವಿತ್ರವಾದ ಹೊಂದಾಣಿಕೆಯನ್ನು ಮಾಡುತ್ತಿವೆ ಎಂಬ ಶಂಕೆಯನ್ನು ಹುಟ್ಟಿಸುತ್ತದೆ.
ಚುನಾವಣಾ ಆಯೋಗದ ಸ್ವಾಯತ್ತತೆ:
ಸ್ವತಂತ್ರ ಚುನಾವಣಾ ಆಯೋಗವು ಪ್ರಜಾತಂತ್ರದ ಒಂದು ಪ್ರಮುಖ ಆಧಾರಸ್ತಂಭ. 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು ಸುಮಾರಾಗಿ 2014ರ ತನಕ ಭಾರತದ ಚುನಾವಣಾ ಆಯೋಗ ತನ್ನ ದಕ್ಷತೆಗೆ, ಸ್ವತಂತ್ರತೆಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಪಡೆದಿತ್ತು. ಚುನಾವಣೆಗಳ ಸಂದರ್ಭದಲ್ಲಿ ಆಯೋಗದ ವರ್ತನೆಯು ಪಾರದರ್ಶಕವಾಗಿರುತ್ತಿತ್ತು. ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯ ಬಗ್ಗೆ ಬಂದ ದೂರುಗಳನ್ನು ಕ್ಷಿಪ್ರವಾಗಿ ಆಯೋಗವು ವಿಚಾರಿಸಿ ನಿರ್ಧಾರವನ್ನು ಕೈಗೊಳ್ಳುತ್ತಿತ್ತು. ಚುನಾವಣಾ ಆಯುಕ್ತರ ನೇಮಕಾತಿಯಲ್ಲಿಯೂ ಪಾರದರ್ಶಕತೆ ಇರುತ್ತಿತ್ತು.
ಇದಕ್ಕೆ ವ್ಯತಿರಿಕ್ತವಾದ ಬೆಳವಣಿಗೆಗಳು ಇತ್ತೀಚೆಗಿನ ವರ್ಷಗಳಲ್ಲಿ ಆಗುತ್ತಿವೆ.
ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಕೇಂದ್ರ ಸರಕಾರವು ಸುಪ್ರೀಂ ಕೋರ್ಟಿನ ನಿರ್ದೇಶನವನ್ನು ಬದಿಗಿರಿಸಿ ಆಯ್ಕೆ ಸಮಿತಿಯಿಂದ ದೇಶದ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಟ್ಟಿದೆ. ಆಯ್ಕೆ ಸಮಿತಿಯ ಸದಸ್ಯರ ಅವಗಾಹನೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಭೆಗಿಂತ ಒಂದು ದಿನ ಮೊದಲಷ್ಟೇ ಕೊಟ್ಟ ಆರೋಪವನ್ನು ವಿರೋಧ ಪಕ್ಷದ ಸದಸ್ಯರು ಮಾಡಿದ್ದಾರೆ. ಕೇಂದ್ರ ಸರಕಾರದ ಕಾರ್ಯದರ್ಶಿ ಒಬ್ಬರ ಸ್ವಯಂಪ್ರೇರಿತ ನಿವೃತ್ತಿ ಅರ್ಜಿಯನ್ನು ಒಂದೇ ದಿನದಲ್ಲಿ ಅಂಗೀಕರಿಸಿ ಅದೇ ದಿನ ಅವರು ಚುನಾವಣಾ ಆಯುಕ್ತರಾಗಲು ಸೂಕ್ತ ವ್ಯಕ್ತಿ ಎಂದು ಸರಕಾರವೇ ಶಿಫಾರಸು ಮಾಡಿತ್ತು. ಅದನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.
ಆಯೋಗದ ಹೆಚ್ಚಿನ ನಿರ್ಧಾರಗಳು ಆಡಳಿತ ಪಕ್ಷಕ್ಕೆ ಅನುಕೂಲವಾಗುವಂತಿದೆ ಎಂಬ ಆರೋಪಗಳು ಅನೇಕ ಬಾರಿ ಕೇಳಿಬಂದಿವೆ. ಆಡಳಿತಪಕ್ಷದ ನಾಯಕರು ನೀತಿಸಂಹಿತೆಯನ್ನು ಉಲ್ಲಂಘಿಸುವ ಬಗ್ಗೆ ವಿರೋಧಪಕ್ಷಗಳು ಕೊಟ್ಟ ದೂರುಗಳ ವಿಚಾರಣೆ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಆಡಳಿತ ಪಕ್ಷದ ವಿರುದ್ಧ ಬಂದ ದೂರಿನ ಕುರಿತು ವಿಚಾರಣೆ ನಡೆಸಿ ಅ ಪಕ್ಷದ ಪರ ಅತಾರ್ಕಿಕವಾದ ನಿರ್ಣಯಕ್ಕೆ ಒಪ್ಪದ ಓರ್ವ ಆಯುಕ್ತರ ಸಮೀಪದ ಬಂಧುಗಳ ಮೇಲೆ ಪ್ರವರ್ತನ ನಿರ್ದೇಶನಾಲಯವು ಒತ್ತಡವನ್ನು ಹೇರಿ ಅವರು ಪದತ್ಯಾಗ ಮಾಡುವಂತೆ ಕೇಂದ್ರ ಸರಕಾರವು 2019ರಲ್ಲಿ ಮಾಡಿತ್ತು.
ಈ ವರ್ಷದ ಲೋಕಸಭೆ ಮತ್ತು ಬೇರೆ ಬೇರೆ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾನದ ಅವಧಿ, ಹಂತಗಳು, ನೀತಿ ಸಂಹಿತೆಗಳ ಉಲ್ಲಂಘನೆ, ದ್ವೇಷಭಾಷಣಗಳು-ಹೀಗೆ ವಿವಿಧ ವಿಷಯಗಳ ಬಗ್ಗೆ ದೂರುಗಳು ಬಂದಿದ್ದರೂ ಮುಖ್ಯ ಚುನಾವಣಾ ಆಯುಕ್ತರಲ್ಲಿ ತೃಪ್ತಿಕರವಾದ ಉತ್ತರವಾಗಲೀ ಪರಿಹಾರವಾಗಲೀ ಇರಲಿಲ್ಲ. ಮುಂದೆ ಕೈಗೊಳ್ಳಲಿರುವ ಮುಂಜಾಗರೂಕತಾ ಕ್ರಮಗಳ ಬಗ್ಗೆ ಅವರಲ್ಲಿ ಸ್ಪಷ್ಟ ನಿಲುವು ಕಂಡುಬರಲಿಲ್ಲ.
ಮತಯಂತ್ರಗಳ ದುರ್ಬಳಕೆಯ ಬಗ್ಗೆ ನಿರಂತರ ದೂರುಗಳು ಬರುತ್ತಿವೆ. ಮುಂದುವರಿದ ದೇಶಗಳಲ್ಲಿ ಅವುಗಳ ದಕ್ಷತೆಯ ಬಗ್ಗೆ ಮೂಲಭೂತ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಭಾರತದ ಚುನಾವಣಾ ಆಯೋಗವು ಈ ಸಂಶಯಗಳನ್ನು ತಾರ್ಕಿಕವಾಗಿ ಪರಿಹರಿಸಿಲ್ಲ. ಈ ಬೆಳವಣಿಗೆಗಳು ಚುನಾವಣಾ ಆಯೋಗದ ಸ್ವಾಯತ್ತತೆಗೆ ಮಸಿ ಬಳಿದಿವೆ.
ಮತದಾರರ ಪ್ರಬುದ್ಧತೆಯ ಅಗತ್ಯ:
2024ರ ಲೋಕಸಭೆಯ ಚುನಾವಣೆಯಲ್ಲಿ ಭಾಜಪವು ಬಿಂಬಿಸಿಕೊಂಡಂತೆ ಸಂಸತ್ತಿನಲ್ಲಿ 400 ಸೀಟುಗಳು ಲಭ್ಯವಾಗಿದ್ದರೆ ಭಾರತದ ಸಂವಿಧಾನಕ್ಕೆ 75 ವರ್ಷ ಮಾತ್ರ ಆಯುಸ್ಸು ಇರುತ್ತಿತ್ತು. ಮತದಾರರ ಪ್ರಬುದ್ಧತೆಯಿಂದಾಗಿ ಫಲಿತಾಂಶವು ಭಿನ್ನವಾಗಿ ಹೊರಬಂದು ಸಂವಿಧಾನ ಉಳಿಯಬಹುದೆಂಬ ಆಶೆಯು ಇನ್ನೂ ಜೀವಂತವಿದೆ.
ಸಂವಿಧಾನದ ಮೂಲಕವೇ ಜನ್ಮ ತಾಳಿದ ಪ್ರಜಾತಂತ್ರದ ಆಧಾರ ಸ್ತಂಭಗಳ ಕಾರ್ಯ ನಿರ್ವಹಣೆಯ ಬಗ್ಗೆ ಅನೇಕ ವಿಶ್ಲೇಷಕರು, ನ್ಯಾಯವೇತ್ತರು, ಸಂವಿಧಾನ ತಜ್ಞರು, ಹಿಂದಿನ ಚುನಾವಣಾ ಆಯುಕ್ತರು ಕಾಲಕಾಲಕ್ಕೆ ತಮ್ಮ ಶಂಕೆಗಳನ್ನು ಬರಹ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಆದರೆ ಈ ಅರಿವು ಮತ್ತು ಲೋಕಸಭೆಯ ಚುನಾವಣೆಯಲ್ಲಿ ಕಂಡ ಪ್ರಬುದ್ಧತೆ ಇನ್ನೂ ವಿಶಾಲವಾದ ತಳಹದಿಯಲ್ಲಿ ಹಬ್ಬಿದರೆ ಮಾತ್ರ 1949ರ ಸಂವಿಧಾನವು ಅದರ ಮೂಲ ಆಶಯಗಳನ್ನು ಮುಂದುವರಿಸಿಕೊಂಡು ಹೋಗಬಹುದೆಂಬ ಧೈರ್ಯವನ್ನು ನಾವು ಹೊಂದಬಹುದು.