ಕನ್ನಡ ನೆಲದ ಅಭಿವೃದ್ಧಿಗೆ ಸರ್ ಮಿರ್ಝಾ ಇಸ್ಮಾಯೀಲ್ ಅವರ ಕೊಡುಗೆಗಳು
ಅಂದಿನ ಮೈಸೂರು ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿದ್ದಲ್ಲದೆ ಕನ್ನಡ ನೆಲದ ಅಭಿವೃದ್ಧಿಗಾಗಿ ಅಪಾರವಾಗಿ ಶ್ರಮಿಸಿದ ದಿವಾನ್ ಸರ್ ಮಿರ್ಝಾ ಇಸ್ಮಾಯೀಲ್ ಅವರನ್ನು ಕನ್ನಡಿಗರಿಗಾದ ನಾವು ಈ ಸಂದರ್ಭದಲ್ಲಿ ಹೃದಯ ತುಂಬಿ ನೆನೆಯಬೇಕು.
ಸರ್ ಮಿರ್ಝಾ ಇಸ್ಮಾಯೀಲ್ ಅವರು 1883ರಲ್ಲಿ ಬೆಂಗಳೂರಿನಲ್ಲಿ ಜನಿಸಿದವರು. ಅವರು ಮೈಸೂರು ರಾಜ ಮನೆತನಕ್ಕೆ ನಿಷ್ಠರಾಗಿ, ಧರ್ಮಾತ್ಮರಾಗಿ ಬಾಳಿದ ಅಲಿ ಅಸ್ಕರ್ ಅವರ ಮೊಮ್ಮಗ. ಬೆಂಗಳೂರಿನ ರಾಜಭವನದ ಎಡಕ್ಕೆ ಕನ್ನಿಂಗ್ ಹ್ಯಾಮ್ ರಸ್ತೆ ತಲುಪುವ ರಸ್ತೆಗೆ ಅವರ ಹೆಸರಿದೆ. ಮಿರ್ಝಾ ಇಸ್ಮಾಯೀಲ್ ಅವರ ತಂದೆ ಚಾಮರಾಜ ಒಡೆಯರ್ ಅವರ ಆಪ್ತರಕ್ಷಕ ಪಡೆಯ ಅಧಿಕಾರಿಯಾಗಿದ್ದರು.
ಮಿರ್ಝಾ ಇಸ್ಮಾಯೀಲ್ ಅವರ ವಿದ್ಯಾಭ್ಯಾಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೊತೆಯಲ್ಲಿಯೇ ನಡೆಯಿತು. ಪದವಿ ಪಡೆದ ನಂತರ ಪೊಲೀಸ್ ಇಲಾಖೆಯ ಸಹಾಯಕ ಅಧಿಕಾರಿಯಾಗಿ ಸೇವೆಗೆ ತೊಡಗಿದರು. ಮುಂದೆ ನಾಲ್ವಡಿ ಅವರ ಆಪ್ತ ಕಾರ್ಯ ದರ್ಶಿಗಳಾಗಿ ನೇಮಿಸಲ್ಪಟ್ಟರು. ಮಹಾರಾಜರಿಗೆ ಆಡಳಿತದಲ್ಲಿ ಅತ್ಯಂತ ಕುಶಲತೆ, ಶ್ರದ್ಧೆ ಮತ್ತು ಸಾಮರ್ಥ್ಯದಿಂದ ಕಾರ್ಯನಿರ್ವಹಿಸುತ್ತಿದ್ದ ಮಿರ್ಝಾ ಇಸ್ಮಾಯೀಲ್ ಅವರನ್ನು ಕಂಡರೆ ಅಪಾರ ಅಭಿಮಾನ.
1926ರಲ್ಲಿ ಮಿರ್ಝಾ ಇಸ್ಮಾಯೀಲ್ ಅವರ ಪ್ರಾಮಾಣಿಕತೆಯನ್ನು ಗಮನಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ ದಿವಾನರಾಗಿ ನೇಮಿಸಿಕೊಂಡರು. ಮಹಾರಾಜರು ಮತ್ತು ಮಿರ್ಝಾ ಇಸ್ಮಾಯೀಲ್ ಅವರ ಜೊತೆಗಾರಿಕೆಯ ಅವಧಿ ಮೈಸೂರು ಸಂಸ್ಥಾನದ ಸುವರ್ಣಕಾಲ ಎಂದು ಬಣ್ಣಿತವಾಗಿದೆ. ವಿಭಿನ್ನ ಧರ್ಮಗಳ ನೆಲೆಯಿಂದ ಬಂದು ಸೋದರರಂತೆ ಒಂದುಗೂಡಿ ಕೆಲಸ ಮಾಡಿದ ಇವರ ಜೊತೆಗಾರಿಕೆಯನ್ನು ಕಂಡು ಸಂಸ್ಥಾನ ಮೆಚ್ಚಿಕೊಂಡಾಡಿದೆ. ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಪರಿಷತ್‌ನಲ್ಲಿ, ಅಂದಿನ ದಿನಗಳ ಸಭೆಯೊಂದರಲ್ಲಿ ಲಾರ್ಡ್ ಸ್ಯಾಂಕಿ ಅವರು ಮೈಸೂರನ್ನು ಅತ್ಯಂತ ಶ್ರೇಷ್ಠ ಆಡಳಿತಾತ್ಮಕ ನಗರ ಎಂದು ಬಣ್ಣಿಸಿದ್ದಾರೆ. ಅದಕ್ಕೆ ಮೂಲ ಕಾರಣವೇ ಸರ್ ಮಿರ್ಝಾ ಇಸ್ಮಾಯೀಲ್.
ಮೈಸೂರು ರಾಜ್ಯದ ಬಗ್ಗೆ ಅಪಾರ ಪ್ರೇಮ ತುಂಬಿಕೊಂಡಿದ್ದ ಮಿರ್ಝಾ ಇಸ್ಮಾಯೀಲ್ ಅವರು ರಾಜ್ಯದೆಲ್ಲೆಡೆ ಕಡ್ಡಾಯವಾಗಿ ಕನ್ನಡ ಕಲಿಸುವುದನ್ನು ಪ್ರೋತ್ಸಾಹಿಸಿದರು. ಅವರ ಆಡಳಿತಾವಧಿಯಲ್ಲಿ ಸರ್ವರಿಗೂ ಸಮಾನತೆಯ, ನಿಷ್ಪಕ್ಷ ಆಡಳಿತವನ್ನು ರೂಢಿಯಲ್ಲಿರಿಸಿದ್ದರು. ಶಾಂತಿ, ಪ್ರಗತಿ, ಆರ್ಥಿಕ ಉನ್ನತಿ ಮತ್ತು ಪ್ರಜೆಗಳ ಕ್ಷೇಮ ಮಾತ್ರವೇ ಅವರ ಆಡಳಿತದ ಪ್ರಧಾನ ತತ್ವವಾಗಿತ್ತು.
ಬೆಂಗಳೂರು ನಗರಕ್ಕೆ ಆಧುನೀಕರಣದ ಸಕಲ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಸರ್ ಮಿರ್ಝಾ ಇಸ್ಮಾಯೀಲ್ ಅವರ ಶ್ರಮ ಪ್ರಮುಖ ಪಾತ್ರ ನಿರ್ವಹಿಸಿದೆ. ಇದರೊಟ್ಟಿಗೆ ಮೈಸೂರು ಸಂಸ್ಥಾನವನ್ನು ಸುಂದರವಾಗಿಸಲು ಕೈಗೊಂಡ ಅಸಂಖ್ಯಾತ ಕಾರ್ಯಗಳು ಎದ್ದು ಕಾಣುವಂತಹದ್ದು. ಕೃಷ್ಣರಾಜ ಸಾಗರ ಅಣೆಕಟ್ಟು ಪೂರ್ಣಗೊಂಡದ್ದು, ಬೃಂದಾವನ, ಉದ್ಯಾನವನ, ವೈವಿಧ್ಯ ನೀರಿನ ಕಾರಂಜಿಗಳು, ವಿದ್ಯುದ್ದೀಕರಣಗಳ ಸೊಬಗು, ಇತರ ಕಾರ್ಯಗಳು ವಿಶ್ವದೆಲ್ಲೆಡೆ ಮೈಸೂರಿನ ಕೀರ್ತಿಯನ್ನು ಬೆಳಗಿಸಲು ಮತ್ತಷ್ಟು ಪ್ರೇರಕವಾಯಿತು.
ಮಿರ್ಝಾ ಇಸ್ಮಾಯೀಲರ ಅಧಿಕಾರಾವಧಿ ಯಲ್ಲಿ ಶಿವನ ಸಮುದ್ರದಲ್ಲಿ ವಿದ್ಯುತ್ ಕಂಡು ಹಿಡಿಯು ವುದರ ಮೂಲಕ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಹಳ್ಳಿಗಳಲ್ಲಿ ಬೆಳಕು ಮೂಡಿತು. ಮೈಸೂರಿನಲ್ಲಿ ಮೆಡಿಕಲ್ ಕಾಲೇಜು ಹಾಗೂ ಬೆಂಗಳೂರಿನಲ್ಲಿ ಟೌನ್ ಹಾಲ್ ಮೂಡಿ ಬಂತು. ಇದರೊಟ್ಟಿಗೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ತಲೆ ಎತ್ತಿತು. ಇಂದು ಭಾರತೀಯ ವಿಜ್ಞಾನದಲ್ಲಿ ಪ್ರಮುಖ ಹೆಸರಾದ ರಾಮನ್ ಇನ್‌ಸ್ಟ್ಟಿಟ್ಯೂಟ್ ನಿರ್ಮಾಣಕ್ಕಾಗಿ ಭಾರತೀಯ ವಿಜ್ಞಾನ ಅಕಾಡಮಿಗೆ ಹನ್ನೆರಡು ಎಕರೆ ಭೂಮಿಯನ್ನು ಮಹಾರಾಜರಿಂದ ಒದಗುವಂತೆ ಮಾಡಿದ್ದು ಸರ್ ಮಿರ್ಝಾ ಇಸ್ಮಾಯೀಲ್ ಅವರ ಮತ್ತೊಂದು ಶ್ರೇಷ್ಠ ಕೆಲಸ.
ಸರ್ ಮಿರ್ಝಾ ಇಸ್ಮಾಯೀಲ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಪ್ರವಾಸಗಳ ಮೂಲಕ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಕಾರ್ಯದಕ್ಷತೆ ಯೆಡೆಗೆ ಪ್ರೇರೇಪಿಸುತ್ತ, ಸಾರ್ವಜನಿಕರ ಕುಂದುಕೊರತೆಗಳನ್ನು ವೈಯಕ್ತಿಕವಾಗಿ ಗಮನಿ ಸುತ್ತಾ ಅತ್ಯಂತ ದಕ್ಷರೆನಿಸಿದ್ದರು. ಅವರ ಹದಿನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಸರಕಾರಿ ಹಾಗೂ ಖಾಸಗಿ ವಲಯಗಳೆರಡಲ್ಲಿಯೂ ಮೈಸೂರು ಸಂಸ್ಥಾನ ಅದ್ಭುತ ಕೈಗಾರಿಕಾ ಪ್ರಗತಿ ಸಾಧಿಸಿತು.
ನಗರಗಳಲ್ಲಿ ಸುಂದರ ಉದ್ಯಾನವನಗಳು, ರಸ್ತೆಗಳು ಸೇರುವೆಡೆಗಳಲ್ಲಿ ಸುಂದರ ವೃತ್ತಗಳು ನಿರ್ಮಾಣಗೊಂಡವು. ಸ್ವಯಂ ತೋಟಗಾರಿಕಾ ಪ್ರವೀಣರಾಗಿದ್ದ ಮಿರ್ಝಾ ಇಸ್ಮಾಯೀಲ್ ಅವರು, ಬೆಂಗಳೂರು ನಗರದಲ್ಲಿ ಉತ್ಕೃಷ್ಟ ರೀತಿಯ ಉದ್ಯಾನವನಗಳು ಮತ್ತು ಸಸ್ಯರಾಶಿಯನ್ನು ನಿರ್ಮಿಸಲು ವಿಶ್ವದೆಲ್ಲೆಡೆಯಿಂದ ಉತ್ಕೃಷ್ಟ ಚಿಂತಕರನ್ನು ಒಂದುಗೂಡಿಸಿ ಇಲ್ಲಿನ ಮರಗಳು ವರ್ಷವಿಡೀ ಹಸಿರಾಗಿರುವಂತೆಯೂ, ಗಿಡಗಳು ಎಲ್ಲ ಕಾಲದಲ್ಲಿಯೂ ಪುಷ್ಪಗಳಿಂದ ಕಂಗೊಳಿಸುವಂತೆಯೂ ಕ್ರಮಕೈಗೊಂಡರು. ಸಾರ್ವಜನಿಕ ಆಸ್ಪತ್ರೆಗಳ ಆವರಣದಲ್ಲಿಯೂ ಇಂತಹ ಉದ್ಯಾನವನದ ವಾತಾವರಣವನ್ನು ಸೃಷ್ಟಿಸುವಲ್ಲಿ ವಿಶೇಷ ಕಾಳಜಿ ವಹಿಸಿದ್ದರು. ಬೆಂಗಳೂರು ಮತ್ತು ಮೈಸೂರಿಗೆ ಉದ್ಯಾನವನ ನಗರಗಳು ಎಂದು ಹೆಸರು ಬರಲು ಈ ದಿವಾನರು ಮಾಡಿರುವ ಶ್ರೇಷ್ಠ ಕಾರ್ಯವೇ ಕಾರಣ.
ಕಾವೇರಿಯ ಮೇಲು ಹಂತದ ಕಾಲುವೆ ನಿರ್ಮಾಣದ ಮೂಲಕ ಮಂಡ್ಯ ಜಿಲ್ಲೆಯ ಸಹಸ್ರಾರು ಎಕರೆ ಭೂ ಪ್ರದೇಶ ಫಲವತ್ತಾದ ವ್ಯವಸಾಯ ಭೂಮಿಯಾಯಿತು. ಅವರ ಕಾಲದಲ್ಲಿ ನಿರ್ಮಾಣಗೊಂಡ ಇತರ ಕೈಗಾರಿಕೆಗಳೆಂದರೆ ಬೆಂಗಳೂರಿನ ಪೋರ್ಸೇಲಿನ್ ಮತ್ತು ಗಾಜಿನ ಕಾರ್ಖಾನೆ, ಕಾಗದ, ಸಿಮೆಂಟ್, ಉಕ್ಕು, ಗೊಬ್ಬರ, ಸಕ್ಕರೆ, ವಿದ್ಯುತ್ ಬಲ್ಬ್‌ಗಳು ಮುಂತಾದವು. ವೈಶ್ಯ ಬ್ಯಾಂಕ್, ಶಿವಮೊಗ್ಗದಲ್ಲಿ ಸಕ್ಕರೆ ಕಾರ್ಖಾನೆ, ಮೈಸೂರಿನಲ್ಲಿ ಖಾದಿ ಕಾರ್ಖಾನೆಗಳು ಇವೆಲ್ಲವೂ ಮಿರ್ಝಾ ಇಸ್ಮಾಯೀಲ್ ಅವರ ಅವಧಿಯಲ್ಲಿ ಮೂಡಿದಂತಹವು. ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ನಿರ್ಮಾಣ ಕಾರ್ಯದಲ್ಲಿಯೂ ವಿಶೇಷ ಆಸಕ್ತಿ ತಳೆದು ಕಾರ್ಯ ಪ್ರಗತಿ ಸಾಧಿಸಿದರು.
ಸರ್ ಮಿರ್ಝಾ ಇಸ್ಮಾಯೀಲ್ ಅವರು ತಮ್ಮ ಅಧಿಕಾರಾವಧಿಯ ಪ್ರಮುಖ ಸಮಯವನ್ನು ಯಾವುದೇ ಧಾರ್ಮಿಕ ಹಾಗೂ ಜಾತಿ ಗಲಭೆಗಳಿಗೆ ಅವಕಾಶವಿಲ್ಲದಂತೆ ನೋಡಿಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಚಳವಳಿಗಳನ್ನು ಹೂಡುತಿತ್ತು. ಇಂತಹ ಅವಧಿಯಲ್ಲಿ ರಾಷ್ಟ್ರೀಯ ನಾಯಕರಾದ ಗಾಂಧಿ, ನೆಹರೂರಂತಹ ಮಹನೀಯರೊಡನೆ ಮಹಾರಾಜರ ಸಂಪರ್ಕವನ್ನು ಮಿರ್ಝಾ ಇಸ್ಮಾಯೀಲ್ ಆತ್ಮೀಯವನ್ನಾಗಿಸಿದರು. ಅಂತಹ ಚಳವಳಿಯ ಸಂದರ್ಭದಲ್ಲಿ ಯಾವುದೇ ಗಲಭೆಗಳು ಉಂಟಾಗದಂತೆ ಪರಿಸ್ಥಿತಿ ನಿಭಾಯಿಸುವಲ್ಲಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಆದರೆ 1940ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಿಧನಾನಂತರ ಬದಲಾದ ಪರಿಸ್ಥಿತಿಯನ್ನು ಇಷ್ಟಪಡಲಾಗದೆ ತಮ್ಮ ದಿವಾನಗಿರಿ ಹುದ್ದೆಯಿಂದ ಹೊರಬಂದರು.
ಆನಂತರ 1941ರಲ್ಲಿ ಜೈಪುರ ಸಂಸ್ಥಾನದಲ್ಲಿ ಅಧಿಕಾರ ವಹಿಸಿಕೊಂಡ ಸರ್ ಮಿರ್ಝಾ ಇಸ್ಮಾಯೀಲ್ ಅವರು, ಅಲ್ಲಿಯೂ ತಮ್ಮ ದಕ್ಷತೆಯ ಪ್ರಭಾವ ಬೀರಿದರು. ಇದರಿಂದ ಜೈಪುರ ನಗರ ಕೈಗಾರಿಕೋದ್ಯಮದಲ್ಲಿ ಹೊಸ ಬೆಳಕು ಕಂಡಿತು. ಅಲ್ಲಿನ ಒಂದು ಪ್ರಮುಖ ರಸ್ತೆಗೆ ಅವರ ಹೆಸರನ್ನು ಇಡಲಾಗಿದೆ.
ಪಾಕಿಸ್ತಾನವನ್ನು ಆಧುನಿಕವಾಗಿ ನಿರ್ಮಿಸಬೇಕೆಂಬ ಬಯಕೆಯಿಂದ ಅಲ್ಲಿನ ಪ್ರಜೆಯಾಗಬೇಕೆಂದು ಆಹ್ವಾನಿಸಿದ ಮಹಮ್ಮದ್ ಅಲಿ ಜಿನ್ನಾ ಅವರ ಕೋರಿಕೆಯನ್ನು ಸರಾಸಗಟವಾಗಿ ತಳ್ಳಿಹಾಕಿದ ಮಿರ್ಝಾ ಇಸ್ಮಾಯೀಲ್ ಅವರು, ನನಗೆ ಭಾರತ ವಿಭಜನೆ ಆಗುವುದಕ್ಕೆ ಸ್ಪಷ್ಟ ವಿರೋಧವಿದೆ ಎಂದು ತಿಳಿಸಿ ಜಿನ್ನಾ ಅವರಿಗೆ ನೇರ ನಿಷ್ಠೂರರಾದರು. ಆನಂತರ 1946ರಲ್ಲಿ ಹೈದರಾಬಾದ್ ಸಂಸ್ಥಾನಕ್ಕೆ ದಿವಾನರಾದರು. ಸರ್ ಮಿರ್ಝಾ ಇಸ್ಮಾಯೀಲ್ ಅವರು ನಿಜಾಮನಿಗೆ ಯಾವುದೇ ತಕರಾರಿಲ್ಲದೆ ಭಾರತದ ಭಾಗವಾಗಲು ಮನವೊಲಿಸಲು ಪ್ರಯತ್ನಿಸಿ ನಿರಾಶರಾಗಿ ಕೆಲವು ತಿಂಗಳುಗಳಲ್ಲೇ ಕೆಲಸ ಬಿಟ್ಟು ಹೊರ ನಡೆದರು. ನಂತರ ಬಲಪ್ರಯೋಗಕ್ಕೆ ಒಳಗಾಗಿ ಹೈದರಾಬಾದಿನ ನಿಜಾಮ ಭಾರತದ ಒಕ್ಕೂಟ ವ್ಯವಸ್ಥೆಗೆ ಶರಣಾಗಬೇಕಾಯಿತು.
ಮುಂದೆ ಮಿರ್ಝಾ ಇಸ್ಮಾಯೀಲರು ತಮ್ಮ ಹುಟ್ಟಿದ ಊರಾದ ಬೆಂಗಳೂರಿಗೆ ಬಂದು ನೆಲೆಸಿದರು. ಕಾಶ್ಮೀರದ ಮುಖ್ಯಮಂತ್ರಿಯಾಗಲು ಅವರನ್ನು ಆಹ್ವಾನಿಸಲಾಗಿತ್ತು. ಅದನ್ನು ಒಪ್ಪದ ಅವರು, ವಿಶ್ವಸಂಸ್ಥೆಗೆ ದುಡಿದರು.
ಸರ್ ಮಿರ್ಝಾ ಇಸ್ಮಾಯೀಲ್ ಅವರು ಕರ್ನಾಟಕದಲ್ಲಿ ಹುಟ್ಟಿ ಒಬ್ಬ ಕನ್ನಡಿಗನಾಗಿ ಮೈಸೂರು ರಾಜ್ಯವಲ್ಲದೆ ಭಾರತದ ಹಲವು ಸಂಸ್ಥಾನಗಳಲ್ಲಿ ದಿವಾನರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರು ನಿಜಕ್ಕೂ ನಮ್ಮ ಕನ್ನಡದ ಹೆಮ್ಮೆಯ ಪುತ್ರ. ಕರ್ನಾಟಕ ನಮಗೆ ಕೊಟ್ಟ ಇಂತಹ ಮಹಾನ್ ನಾಯಕನನ್ನು ಕನ್ನಡಿಗರಾದ ನಾವು ನಿಜಕ್ಕೂ ಹೃದಯ ತುಂಬಿ ನೆನೆಯಬೇಕು.