ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿಯಲ್ಲಿ ಭ್ರಷ್ಟಾಚಾರ?
ಬೆಂಗಳೂರು, ಮೇ 27: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಕೆಟಿಪಿಪಿ ಕಾಯ್ದೆ, ನಿಯಮಗಳ ಪಾಲನೆಯಾಗಿಲ್ಲ ಮತ್ತು ದರಪಟ್ಟಿಗಳನ್ನೂ ಪಡೆದಿಲ್ಲ. ಪುಸ್ತಕಗಳ ಖರೀದಿ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಾದೇಶವನ್ನೂ ಹೊರಡಿಸಿಲ್ಲ.
ಈ ಕುರಿತು ಕುಲಸಚಿವರು ಕುಲಪತಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ಕುಲಸಚಿವರಾದ ಅನುರಾಧ ವಸ್ತ್ರದ್ ಅವರು ನೇರವಾಗಿ ಸರಕಾರದ ಮೆಟ್ಟಿಲು ಹತ್ತಿದ್ದಾರೆ.
ಈ ಪ್ರಕರಣದ ಕುರಿತು ವಿಶ್ವವಿದ್ಯಾ ನಿಲಯದ ಕುಲಸಚಿವರಾದ ಕೆಎಎಸ್ ಅಧಿಕಾರಿ ಅನುರಾಧ ವಸ್ತ್ರದ ಅವರು ಸರಕಾರಕ್ಕೆ 2024ರ ಫೆ.9ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘The-file.in’ಗೆ ಲಭ್ಯವಾಗಿದೆ.
ಕುಲಪತಿಗಳ ಕಾರ್ಯಾಲಯದ ವಿಶೇಷಾಧಿಕಾರಿಯಾದ ಐ.ಬಿ. ಬಿರಾದಾರ ಅವರ ಮೌಖಿಕ ಆದೇಶದ ಮೂಲಕವೇ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿಯಾಗಿತ್ತು. ಪುಸ್ತಕಗಳ ಖರೀದಿ ಸಂಬಂಧದ ಕಡತವನ್ನು ವಿಶ್ವವಿದ್ಯಾನಿಲಯದ ಗ್ರಂಥಾಲಯದ ಶಾಖೆಗೆ ವರ್ಗಾಯಿಸದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದರು ಎಂಬ ಸಂಗತಿಯು ಪತ್ರದಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಕುಲಪತಿಗಳ ಕಚೇರಿಯ ವಿಶೇಷಾಧಿಕಾರಿಗಳು ತಮ್ಮದಲ್ಲದ ಅಧಿಕಾರವ್ಯಾಪ್ತಿಯನ್ನು ಚಲಾಯಿಸಿದ್ದಾರೆ. ಈ ಸಂಗ್ರಹಣೆಯಲ್ಲಿ ಕೇವಲ ಶೇ.15ರಷ್ಟು ರಿಯಾಯಿತಿ ಪಡೆದುಕೊಂಡಿರುವುದು ಮತ್ತು ಈ ನಿಯಮಬಾಹಿರ ಕ್ರಮದಿಂದ ವಿಶ್ವವಿದ್ಯಾನಿಲಯಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂಬುದು ಕುಲಸಚಿವರ ಪತ್ರದಿಂದ ಗೊತ್ತಾಗಿದೆ.
ಪ್ರಕರಣದ ವಿವರ
2022-23ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ನಿಧಿಯಡಿಯಲ್ಲಿ 5 ಲಕ್ಷ ರೂ.ಗಳ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗಿತ್ತು. ಈ ಮೊತ್ತದ ಪುಸ್ತಕಗಳ ಖರೀದಿ ಕುರಿತಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಘಟಕದ ಸ್ಥಾಯಿ ಸಮಿತಿಯು ಪುಸ್ತಕಗಳ ಖರೀದಿ ಕುರಿತು ಪ್ರಸ್ತಾವನೆ ಮಂಡಿಸಿತ್ತು.
ಈ ಸಂಬಂಧ ಪುಸ್ತಕಗಳ ಸಂಗ್ರಹಣೆಗೆ ದರಪಟ್ಟಿ ಆಹ್ವಾನಿಸಿ ನಿಯಮಾನುಸಾರ ಸೂಕ್ತ ಕ್ರಮವಹಿಸಬೇಕು ಎಂದು 2023ರ ಫೆ.23ರಂದು ಕುಲಪತಿಗಳು ಸೂಚಿಸಿದ್ದರು. ಅಲ್ಲದೆ 2023ರ ಮಾರ್ಚ್ 16ರಂದು ಅನುಮೋದಿಸಿದ್ದರು. ಆದರೂ ಕಡತವನ್ನು ಕುಲಪತಿಗಳ ವಿಶೇಷಾಧಿಕಾರಿಗಳಾದ ಐ.ಬಿ. ಬಿರಾದಾರ ಅವರನ್ನು ಕಡತವನ್ನು ಮೂಲ ಶಾಖೆ ಗ್ರಂಥಾಲಯಕ್ಕೆ ವರ್ಗಾಯಿಸಿರಲಿಲ್ಲ ಎಂದು ಕುಲಸಚಿವರು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಪ್ರಕಟನೆ ನೀಡಿರಲಿಲ್ಲ. ಮತ್ತು ತುಲನಾತ್ಮಕ ಪಟ್ಟಿ ತಯಾರಿಸಿರಲಿಲ್ಲ. ಈ ಪಟ್ಟಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯನ್ನೂ ಪಡೆದಿರಲಿಲ್ಲ ಹಾಗೂ ಯಾವುದೇ ಕಾರ್ಯಾದೇಶ ನೀಡದೇ ತಾವೇ ನೇರವಾಗಿ ದರಪಟ್ಟಿ ಆಹ್ವಾನಿಸಿದ್ದರು. ಈ ಮೂಲಕ ಕೆಟಿಪಿಪಿ ಕಾಯ್ದೆ 1999 ಮತ್ತು ನಿಯಮಗಳು 2000 ಮತ್ತು ಸಂಗ್ರಹಣೆ ಕುರಿತಂತೆ ಆರ್ಥಿಕ ಇಲಾಖೆಯ ಆದೇಶಗಳನ್ನು ಉಲ್ಲಂಘಿಸಿದ್ದಾರೆ ಎಂದು ಕುಲಸಚಿವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಮೌಖಿಕ ಸೂಚನೆ
ಕುಲಪತಿಗಳ ಕಾರ್ಯಾಲಯದ ವಿಶೇಷಾಧಿ ಕಾರಿಗಳೇ ನೇರವಾಗಿ ಎಂಪಿಪಿ ಬುಕ್ ಹೌಸ್‌ನವರಿಗೆ ದೂರವಾಣಿ ಮೂಲಕ ಮೌಖಿಕವಾಗಿ ಪುಸ್ತಕಗಳನ್ನು ಪೂರೈಸುವಂತೆ ಸೂಚಿಸಿದ್ದರು. ಈ ಕುರಿತು ಉಪ ಗ್ರಂಥಪಾಲಕರಿಗೆ 2023ರ ಡಿಸೆಂಬರ್ 21ರಂದು ನೋಟಿಸ್ ನೀಡಲಾಗಿತ್ತು.
ಐ.ಬಿ. ಬಿರಾದಾರ ಅವರು ನೀಡಿದ್ದ ಮೌಖಿಕ ಆದೇಶದನ್ವಯ ಎಂಪಿಪಿ ಬುಕ್ ಹೌಸ್ ಅವರು 2023 ರ ಜುಲೈ 16ರಂದು 4.81 ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಪೂರೈಸಿರುತ್ತಾರೆ. ಕೆಟಿಪಿಪಿ ನಿಯಮಗಳ ಪಾಲನೆ ಆಗಿರುವ ಕುರಿತಂತೆ ಸದರಿ ಕಡತದಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಉಪ ಗ್ರಂಥಪಾಲಕರು ವರದಿ ಸಲ್ಲಿಸಿದ್ದರು ಎಂಬುದು ಪತ್ರದಿಂದ ತಿಳಿದು ಬಂದಿದೆ.
ಅಧಿಕಾರ ವ್ಯಾಪ್ತಿ ಮೀರಿದ್ದ ವಿಶೇಷಾಧಿಕಾರಿ?
ಪುಸ್ತಕಗಳ ಸಂಗ್ರಹಣೆಯು ಗ್ರಂಥಪಾಲಕರ ವ್ಯಾಪ್ತಿಯ ವಿಷಯವಾಗಿದೆ. ಆದರೆ ಈ ವಿಚಾರದಲ್ಲಿ ಕುಲಪತಿಗಳ ಕಾರ್ಯಾಲಯದ ವಿಶೇಷಾಧಿಕಾರಿಗಳಾದ ಐ.ಬಿ. ಬಿರಾದಾರ ಅವರು ತಮ್ಮದಲ್ಲದ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸಿದ್ದರು ಎಂಬ ಅಂಶವನ್ನು ಪತ್ರದಲ್ಲಿ ಕುಲಸಚಿವರು ಉಲ್ಲೇಖಿಸಿರುವುದು ಗೊತ್ತಾಗಿದೆ.
ಅಧಿಕಾರದ ದುರ್ಬಳಕೆ ಮಾಡಿರುವುದು ಮತ್ತು ನಿಯಮಬಾಹಿರವಾಗಿ ಸರಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿದ್ದು ಹಾಗೂ ಮೇಲ್ನೋಟಕ್ಕೆ ಭ್ರಷ್ಟಾಚಾರ ಮತ್ತು ದುರ್ವವ್ಯವಹಾರ ಎಸಗಿದ್ದು ಕಂಡು ಬರುತ್ತದೆ ಎಂದು ಕುಲಸಚಿವರು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಸಾಮಾನ್ಯವಾಗಿ ಹಲವಾರು ವರ್ಷಗಳಿಂದ ಗ್ರಂಥಾಲಯದ ಪುಸ್ತಕಗಳಿಗೆ ಸರಾಸರಿ ಶೇ.25ರಿಂದ 30ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಆದರೆ ಬಿರಾದಾರ ಅವರ ಮೌಖಿಕ ಸೂಚನೆ ಮೇರೆಗೆ ಆಗಿರುವ ಈ ಸಂಗ್ರಹಣೆಯಲ್ಲಿ ಕೇವಲ ಶೇ.15ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಈ ನಿಯಮಬಾಹಿರ ಕ್ರಮದಿಂದ ವಿಶ್ವವಿದ್ಯಾನಿಲಯಕ್ಕೆ ಆರ್ಥಿಕ ನಷ್ಟವುಂಟಾಗಿರುವುದು ಕಂಡು ಬಂದಿದೆ ಎಂದೂ ಪತ್ರದಲ್ಲಿ ಪ್ರಸ್ತಾಪಿಸಿರುವುದು ತಿಳಿದು ಬಂದಿದೆ.