ಸೈಬರ್ ವಂಚಕರ ಬಲೆಗೆ ಬೀಳದಿರಿ
ಜಾರಿ ಬಿದ್ದ ಜಾಣ/ಜಾಣೆ ನೀವಾಗದಿರಿ!
ಸಾಂದರ್ಭಿಕ ಚಿತ್ರ: PTI
ಬೆಂಗಳೂರು : ಹುಷಾರ್ ! ನೀವು ನಿಮ್ಮ ವೃತ್ತಿಯಲ್ಲಿ, ವ್ಯಾಪಾರದಲ್ಲಿ ಬಹಳ ಜಾಣರಿರಬಹುದು. ಆದರೆ ನಿಮ್ಮ ಸ್ಮಾರ್ಟ್ಫೋನ್ ಮೂಲಕ ವ್ಯವಹರಿಸುವಾಗ ಒಂದಿಷ್ಟು ಅಜಾಗರೂಕತೆ, ಸುಲಭ ದುಡ್ಡು ಗಳಿಸುವ ದುರಾಸೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಕಠಿಣ ಶ್ರಮದ ಸಂಪಾದನೆಯನ್ನು ನಿಮ್ಮಿಂದ ಕಸಿದುಕೊಂಡುಬಿಡಬಹುದು. ನಿಮ್ಮನ್ನೇ ಬಳಸಿಕೊಂಡು ಮರುಳು ಮಾಡಿ ನಿಮ್ಮ ಖಾತೆಯಿಂದ ಲಕ್ಷ ಲಕ್ಷ ಮಾಯವಾಗುತ್ತೆ. ಜಾರಿ ಬಿದ್ದ ಜಾಣ / ಜಾಣೆ ನೀವಾಗುತ್ತೀರಿ. ನಿಮಗೆ ಗೊತ್ತೇ ಇಲ್ಲದೆ ಹೈಟೆಕ್ ಸೈಬರ್ ಕ್ರಿಮಿನಲ್ಗಳ ಮಾಯಾಜಾಲದಲ್ಲಿ ನೀವು ಸಿಲುಕಿ ಬಿಟ್ಟಿರುತ್ತೀರಿ. ಹುಷಾರ್ !
ಬೆಂಗಳೂರು ಒಂದರಲ್ಲೇ ಹೀಗೆ ವಾಟ್ಸ್ಆ್ಯಪ್, ಟೆಲಿಗ್ರಾಮ್, ಇಮೇಲ್ ಇತ್ಯಾದಿಗಳಲ್ಲಿ ಬರುವ ಆಕರ್ಷಕ ಅಥವಾ ಬೆದರಿಕೆ ಧಾಟಿಯ ಮೆಸೇಜುಗಳ ಬಲೆಗೆ ಬಿದ್ದು ಲಕ್ಷಾಂತರ ರೂ. ಕಳಕೊಂಡವರು ಎಷ್ಟು ಮಂದಿ ಗೊತ್ತೇ ? ಕೇವಲ ಕಳೆದ ನಾಲ್ಕು ತಿಂಗಳಲ್ಲೇ ಈ ಬಗ್ಗೆ ಬಂದಿರುವ ದೂರುಗಳ ಸಂಖ್ಯೆ ಸಾವಿರಕ್ಕೂ ಹೆಚ್ಚು !
ಆದರೆ ದೂರು ಸಲ್ಲಿಸಿದ್ದರೂ ಈ ಬಹುತೇಕ ಪ್ರಕರಣಗಳಲ್ಲಿ ಆಗುವ ಪ್ರಯೋಜನ ಅಷ್ಟಕ್ಕಷ್ಟೇ. ಎಲ್ಲೆಲ್ಲೋ ಕೂತು ಆಮಿಷದ ಅಥವಾ ಬೆದರಿಕೆಯ ಬಲೆ ಬೀಸಿ ಲಕ್ಷ ಲಕ್ಷ ವಸೂಲಿ ಮಾಡಿದವರನ್ನು ಹಿಡಿಯುವುದು ಪೊಲೀಸರಿಗೆ ‘ಮುಷ್ಕಿಲ್ ಹೀ ನಹೀ ನಾ ಮುಮ್ಕಿನ್ ಹೈ’. ಈ ಸೈಬರ್ ಖದೀಮರು ಪೊಲೀಸರ ಬಲೆಗೆ ಬೀಳೋದು ತೀರಾ ಅಪರೂಪ. ಕಳಕೊಂಡ ದುಡ್ಡು ಮತ್ತೆ ವಾಪಸ್ ಸಿಗುವ ಸಾಧ್ಯತೆ ಇಲ್ಲವೇ ಇಲ್ಲವೆಂಬಷ್ಟು ಕಡಿಮೆ.
ನೀವು ನಿತ್ಯವೂ ಗಮನಿಸಿಯೇ ಇರುತ್ತೀರಿ. ನಿಮ್ಮ ಫೋನ್ಗೆ ನೂರೆಂಟು ಬಗೆಯ ಮೆಸೇಜ್ಗಳು ಬರುತ್ತಿರುತ್ತವೆ. ಅವೆಲ್ಲವೂ ಬೇರೆ ಬೇರೆ ರೀತಿಯಲ್ಲಿ ಆಮಿಷವೊಡ್ಡುವ ರೀತಿಯಲ್ಲಿರುತ್ತವೆ. ಸುಲಭ ಸಂಪಾದನೆ, ಪಾರ್ಟ್ ಟೈಮ್ ಕೆಲಸ, ಶೇರ್ ಟ್ರೇಡಿಂಗ್, ನೀವು ಅಷ್ಟು ಗೆದ್ದಿದ್ದೀರಿ, ಇಷ್ಟು ಹಣ ನಿಮ್ಮದಾಗುತ್ತದೆ, ಖರ್ಚಿಲ್ಲದೆ ಸಂಪಾದನೆ ಎಂಬಿತ್ಯಾದಿ ಆಮಿಷ ವೊಡ್ಡುವ ಮೆಸೇಜ್ ನ ಕಡೆಯಲ್ಲೊಂದು ಲಿಂಕ್ ಕೊಡಲಾಗಿರುತ್ತದೆ. ಅದೇ ಥರದ ಇಮೈಲ್ಗಳೂ ಬಂದು ನಿಮ್ ಇನ್ ಬಾಕ್ಸ್ ತುಂಬಿಕೊಂಡಿರುತ್ತವೆ. ಆಮಿಷಕ್ಕೆ ಬಲಿಯಾಗಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಿರೋ, ಅಷ್ಟೆ. ಅಲ್ಲಿಗೆ ನಿಮ್ಮ ಇಡೀ ಫೋನ್ ಅಥವಾ ನಿಮ್ಮ ಕಂಪ್ಯೂಟರ್ ಅವರ ವಶವಾಗುತ್ತದೆ. ವಂಚಕರ ಆಟಕ್ಕೆ ನೀವು ಬಲಿಯಾಗಿ ಹೋಗಿರುತ್ತೀರಿ. ನಿಮ್ಮ ಖಾತೆ ದೋಚಲ್ಪಟ್ಟಿರುತ್ತದೆ. ನಿಮ್ಮಿಂದಲೇ ಒಟಿಪಿ ಪಡೆದು, ನೀವೇ ಹಣ ವರ್ಗಾಯಿಸುವಂತೆ ಮಾಡುವ ಚಾಕಚಕ್ಯತೆಯೂ ಆ ವಂಚಕರಿಗೆ ಕರಗತ !
ಇದೊಂದು ಬಗೆಯಾದರೆ, ನಿಮಗೆ ಬರುವ ಕೆಲವು ಕಾಲ್ಗಳು ಕೂಡ ಅದೇ ರೀತಿಯ ಆಮಿಷವೊಡ್ಡುವಂಥವೇ ಆಗಿರುತ್ತವೆ. ನಿಮ್ಮನ್ನು ಮರುಳು ಮಾಡುವ ಮೋಹಕ ಮಾತುಗಳಿಂದ ತಮ್ಮ ಮಾಯಾಜಾಲದೊಳಕ್ಕೆ ನಿಮ್ಮನ್ನು ಬೀಳಿಸಬಲ್ಲ ಚಾಲಾಕಿಗಳು ಆ ಕಡೆಯಿಂದ ಕಾದಿರುತ್ತಾರೆ. ನಿಮ್ಮನ್ನು ಮಾತಿನಲ್ಲೇ ಮೋಡಿ ಮಾಡುತ್ತಲೇ ನಿಮ್ಮಿಂದ ಅವರಿಗೆ ಅಗತ್ಯವಾದ ಎಲ್ಲ ಮಾಹಿತಿಯನ್ನೂ ಪಡೆದುಕೊಳ್ಳುತ್ತಾರೆ. ಕಡೆಗೆ ನಿಮ್ಮ ಮೊಬೈಲ್ಗೆ ಬರುವ ಒಟಿಪಿಯನ್ನೂ ನೀವು ಅವರಿಗೆ ಕೊಟ್ಟುಬಿಡುತ್ತೀರಿ. ಅಲ್ಲಿಗೆ ಕಥೆ ಮುಗಿಯಿತು.
ಆಮಿಷ ಮಾತ್ರವಲ್ಲ, ಭಯಬೀಳಿಸುವ ಸಂದೇಶಗಳ ಮೂಲಕವೂ ನಿಮ್ಮನ್ನು ಅವರು ತಮ್ಮ ವಶ ಮಾಡಿಕೊಂಡುಬಿಡಬಹುದು, ನೀವು ಅವರ ಮಾತನ್ನು ಕೇಳುತ್ತಲೇ ಹೋಗಬೇಕಾದ ಸ್ಥಿತಿಗೆ ನಿಮ್ಮನ್ನು ತಳ್ಳಿ ಅವರು ತಮ್ಮ ಕೆಲಸ ಸಾಧಿಸಿಕೊಳ್ಳಬಹುದು. ಹಾಗಾಗಿಯೇ ವಂಚನೆಗೆ ಒಳಗಾಗುವ ಮೊದಲೇ ಹುಷಾರಾಗುವುದು ಬಹಳ ಮುಖ್ಯ.
ಹೀಗೆ ಮರುಳಾಗಬೇಡಿ, ಮರುಳಾಗಿ ಮೋಸ ಹೋಗಬೇಡಿ ಎಂತಲೇ ಪೊಲೀಸರು ಜನರಿಗೆ ಎಚ್ಚರಿಸುತ್ತಿದ್ದಾರೆ . ಯಾಕೆಂದರೆ ಒಮ್ಮೆ ಹ್ಯಾಕರ್ಗಳು ನಿಮ್ಮ ವಿವರಗಳನ್ನೆಲ್ಲ ಪಡೆದುಕೊಂಡು, ನಿಮ್ಮ ಖಾತೆಗೆ ಕನ್ನ ಹಾಕಿದರೆಂದರೆ, ಅಲ್ಲಿಗೆ ನಿಮ್ಮ ಹಣ ಮರಳಿ ಬಾರದು ಎಂದೇ ಅರ್ಥ. ಪೊಲೀಸರು ನಿಮಗಾಗಿ ಎಷ್ಟೇ ಪ್ರಯತ್ನಿಸಿದರೂ, ಅದು ಬಹಳ ಕಷ್ಟ. ಸೈಬರ್ ವಂಚನೆಯ ಜಾಲವೆಂಬುದು ಮಹಾ ಸಮುದ್ರವಿದ್ದ ಹಾಗೆ. ಅದರ ಆಳ-ಅಗಲ ಒಂದೇ ನಝರಿಗೆ ದಕ್ಕುವಂಥದ್ದಲ್ಲ. ಅದರ ಮೇಲೆ ಹಿಡಿತ ಸಾಧಿಸಿ, ನೀವು ಕಳೆದುಕೊಂಡದ್ದನ್ನು ಮರಳಿ ತರುವುದು ಪ್ರಾಯಶಃ ಆಗಲಾರದ ಕೆಲಸ. ಅದರ ಮೂಲವೆಲ್ಲಿದೆ ಎಂಬುದೇ ಪತ್ತೆಯಾಗದ ಹಾಗೆ ಇರುತ್ತದೆ ಆ ವಂಚನಾ ಜಾಲ.
ಜನಸಾಮಾನ್ಯರಿಗಿಂತ ಹೆಚ್ಚಾಗಿ ಸುಶಿಕ್ಷಿತರು, ವೃತ್ತಿಪರರು, ಟೆಕ್ಕಿಗಳಂಥ ಪರಿಣಿತರೇ ಇಂಥ ವಂಚನೆಯ ಜಾಲಕ್ಕೆ ಬಲಿಯಾಗುತ್ತಾರೆ ಎಂಬುದು ಮತ್ತೊಂದು ವಿಪರ್ಯಾಸ.
ಇಂಥ ಜಾಲಕ್ಕೆ ಜನರು ಬಲಿಯಾಗಬಾರದು. ಮೋಸ ಹೋಗಕೂಡದು ಎಂದೇ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ಅರಿವು ಮೂಡಿಸುವ ಮಹತ್ವದ ಅಭಿಯಾನವೊಂದನ್ನು ಶುರು ಮಾಡಿದ್ಧಾರೆ.
ಸೈಬರ್ ಕ್ರೈಂ ಹೇಗೆ ನಡೆಯುತ್ತದೆ? ಹೇಗೆ ನಿಮಗೆ ಗೊತ್ತಾಗದಂತೆ ನಿಮ್ಮ ಖಾತೆಗೆ ಸೈಬರ್ ವಂಚಕರು ಕನ್ನ ಹಾಕಬಲ್ಲರು? ನೀವು ವಹಿಸಬೇಕಾದ ಎಚ್ಚರಗಳೇನು? ಹೇಗೆ ನಿಮ್ಮ ಸುರಕ್ಷತೆಯನ್ನು ನೋಡಿಕೊಳ್ಳಬೇಕು? ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಲು ಬೆಂಗಳೂರು ಪೊಲೀಸರು ಈ ಯತ್ನ ಮಾಡಿದ್ದಾರೆ.
ಸೈಬರ್ ಕ್ರೈಂ ಪೊಲೀಸರು ಜನರನ್ನು ಎಚ್ಚರಿಸುವುದಕ್ಕಾಗಿ ಏನೇನು ಹೇಳಿದ್ದಾರೆ? ಅದರ ಎಲ್ಲ ಪ್ರಮುಖ ಅಂಶಗಳನ್ನು ಇಲ್ಲಿ ನಿಮಗಾಗಿ ಸಂಗ್ರಹಿಸಿ ಕೊಡಲಾಗಿದೆ.
ಸೈಬರ್ ಕ್ರೈಂ ಎಂಬುದು ಕಂಪ್ಯೂಟರ್, ನೆಟ್ವರ್ಕ್ ಅಥವಾ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಬಳಸಿಕೊಂಡು ಮಾಡುವ ಅಪರಾಧ ಕೃತ್ಯ. ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಅಡಿಯಲ್ಲಿ ಬರುವ ಅಪರಾಧ. ಸಾಮಾನ್ಯವಾಗಿ ಅಕ್ರಮವಾಗಿ ಹಣ ಗಳಿಸಲು ಸೈಬರ್ ಅಪರಾಧಗಳನ್ನು ಎಸಗುತ್ತಾರೆ. ಕೆಲವು ಸೈಬರ್ ಅಪರಾಧಗಳಲ್ಲಿ ಜನರ ಮಾನಹಾನಿ ಮಾಡುವ ಉದ್ದೇಶವೂ ಇರುತ್ತವೆ.
ವಂಚಕರು ಸಾಮಾನ್ಯವಾಗಿ ಬಳಸುವ ದಾರಿಗಳು
1. ಶೇರ್ ಟ್ರೆಂಡಿಂಗ್
ಅಪರಿಚಿತರು ವಾಟ್ಸ್ಆ್ಯಪ್ ಅಥವಾ ಟೆಲಿಗ್ರಾಂ ಮೂಲಕ ಅಮಾಯಕರನ್ನು ಸಂಪರ್ಕಿಸುತ್ತಾರೆ. ಅಧಿಕ ಲಾಭದ ಆಮಿಷವೊಡ್ಡಿ, ನಂಬಿಸಿ, ವಿವಿಧ ಟ್ರೇಡಿಂಗ್ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಸುತ್ತಾರೆ. ಅಲ್ಪ ಮೊತ್ತದ ಲಾಭಾಂಶ ನೀಡಿ ಅಮಾಯಕರನ್ನು ನಂಬಿಸಿ, ಕಡೆಗೆ ಅವರಿಂದ ದೊಡ್ಡ ಮೊತ್ತದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿಸಿಕೊಂಡು ವಂಚಿಸುತ್ತಾರೆ.
2.ಫೆಡೆಕ್ಸ್ ಕೊರಿಯರ್ ವಂಚನೆ
ಅಪರಿಚಿತರು ನಿಮ್ಮ ಮೊಬೈಲ್ಗೆ ಕರೆ ಮಾಡಿ, ತಾವು TRAI, ಸಿಬಿಐ, ಕಸ್ಟಮ್ಸ್ ಆಫೀಸ್, ಪೊಲೀಸ್ ಅಧಿಕಾರಿಗಳು ಎಂದು ಸುಳ್ಳು ಹೇಳಿ ನಂಬಿಸುತ್ತಾರೆ. ನಿಮ್ಮ ಮೊಬೈಲ್ ನಂಬರ್ನಿಂದ ಕೆಟ್ಟ ಸಂದೇಶ ಕಳಿಸುತ್ತಿರುತ್ತೀರಿ. ನಿಮ್ಮ ಮೇಲೆ ಎಫ್ಐಆರ್ ಆಗಿದೆ. ಅರೆಸ್ಟ್ ವಾರೆಂಟ್ ಮಾಡಲಾಗುವುದು ಎಂದು ಬೆದರಿಸುತ್ತಾರೆ. ನಂತರ ಬ್ಯಾಂಕ್ ಖಾತೆಯಲ್ಲಿ ಅವ್ಯವಹಾರ ನಡೆದಿದೆ, ಅದನ್ನು ಪರಿಶೀಲಿಸಬೇಕು ಎಂದು ವಂಚನೆಯ ಬಲೆಗೆ ಬೀಳಿಸುತ್ತಾರೆ.
ನಿಮಗೆ ಒಂದು ಪಾರ್ಸೆಲ್ ಬಂದಿದ್ದು, ಆ ಪಾರ್ಸೆಲ್ನಲ್ಲಿ ನಿಮ್ಮ ಮೊಬೈಲ್ ನಂಬರ್ ಇದೆ. ಪಾರ್ಸೆಲ್ನಲ್ಲಿ ಡ್ರಗ್ಸ್ ಇದೆ ಎಂದು ಸುಳ್ಳು ಹೇಳಿ ಬೆದರಿಸಿ, ನಿಮ್ಮ ಆಧಾರ್ ಕಾರ್ಡ್ಅನ್ನು ವಾಟ್ಸ್ಆ್ಯಪ್ ಮೂಲಕ ಪಡೆದು, ಕಡೆಗೆ ನಿಮ್ಮ ಮೇಲೆ ಮನಿ ಲಾಂಡರಿಂಗ್ ಕೇಸ್ ಇದೆ ಎನ್ನುತ್ತಾರೆ. ನಿಮ್ಮನ್ನು ಭಯಗೊಳಿಸಿ ಬ್ಯಾಂಕ್ ಖಾತೆ ವಿವರ ಪಡೆದು, ಖಾತೆಗೆ ಕನ್ನಹಾಕಿ, ಹಣವನ್ನು ಆನ್ಲೈನ್ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ.
3. ಆನ್ಲೈನ್ ಪಾರ್ಟ್ಟೈಂ ಜಾಬ್
ವಾಟ್ಸ್ಆ್ಯಪ್, ಟೆಲಿಗ್ರಾಂ ಮೂಲಕ ಸಂಪರ್ಕಿಸಿ ಪಾರ್ಟ್ ಟೈಂ ಉದ್ಯೋಗದ ಆಮಿಷ ಒಡ್ಡಲಾಗುತ್ತದೆ. ಯೂಟ್ಯೂಬ್ ವೀಡಿಯೊ ಲೈಕ್ ಮತ್ತು ಶೇರ್ ಮಾಡುವುದು, ಗೂಗಲ್ನಲ್ಲಿ ಹೋಟೆಲ್ಗಳಿಗೆ ರೇಟಿಂಗ್ಸ್ ನೀಡುವಂತಹ ಸಣ್ಣಪುಟ್ಟ ಟಾಸ್ಕ್ ನೀಡಿ ಅದಕ್ಕೆ ಪ್ರತಿಯಾಗಿ ಬ್ಯಾಂಕ್ ಖಾತೆಗೆ 500 ರೂ., 1,000 ರೂ. ಹಾಕಿ ನಂಬಿಸುತ್ತಾರೆ. ಕಡೆಗೆ ಹೂಡಿಕೆ ಮಾಹಿತಿ ನೀಡಿ, ಅಧಿಕ ಲಾಭ ಗಳಿಕೆಯ ಆಮಿಷವೊಡ್ಡಿ ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಳ್ಳುತ್ತಾರೆ.
4. ಹನಿಟ್ರ್ಯಾಪ್ ಮಾದರಿಯ ವಂಚನೆ
ಅಂತರ್ರಾಷ್ಟ್ರೀಯ ನಂಬರ್ ಅನ್ನು ಹೋಲುವ ನಂಬರ್ನಿಂದ ಅಪರಿಚಿತ ಮಹಿಳೆಯರು ವಾಟ್ಸ್ಆ್ಯಪ್ ಮೂಲಕ ವೀಡಿಯೊ ಕಾಲ್ ಮಾಡುತ್ತಾರೆ. ಬೆತ್ತಲಾಗಿ ಮಾತಾಡುವ ಮಹಿಳೆ ಕರೆ ಸ್ವೀಕರಿಸಿದವರನ್ನೂ ಬೆತ್ತಲಾಗಲು ಒತ್ತಾಯಿಸಿ, ಸಂಭಾಷಣೆಯನ್ನು ಸ್ಕ್ರೀನ್ ರೆಕಾರ್ಡ್ ಮಾಡಿರುತ್ತಾಳೆ. ನಂತರ ಅದನ್ನು ಬಳಸಿ ಬೆದರಿಸಿ, ಹಣ ನೀಡುವಂತೆ ಪೀಡಿಸಲಾಗುತ್ತದೆ. ಇಲ್ಲದಿದ್ದರೆ ವೀಡಿಯೊವನ್ನು ಸಂಬಂಧಿಕರು, ಸ್ನೇಹಿತರಿಗೆ ಕಳಿಸುವ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಬೆದರಿಕೆ ಒಡ್ಡಲಾಗುತ್ತದೆ. ಕಡೆಗೆ ಸಿಬಿಐ ಅಧಿಕಾರಿ, ನ್ಯೂಸ್ ಚಾನೆಲ್ ವರದಿಗಾರ ಎಂಬೆಲ್ಲ ಸೋಗಿನಲ್ಲಿ ಕರೆ ಮಾಡಿ ಬೆದರಿಸುವುದು ನಡೆಯುತ್ತದೆ. ವಂಚನೆಗೊಳಗಾದವರು ಮರ್ಯಾದೆಗೆ ಅಂಜಿ ಆ ಗ್ಯಾಂಗ್ನ ಹಲವು ಖಾತೆಗಳಿಗೆ ಹಣ ಜಮೆ ಮಾಡುವ ಸ್ಥಿತಿ ತರಲಾಗುತ್ತದೆ.
5. ನಕಲಿ ವಿಮೆ ವಂಚನೆಗಳು
ವಾಟ್ಸ್ಆ್ಯಪ್, ಟೆಲಿಗ್ರಾಂನಂತಹ ಜಾಲತಾಣಗಳನ್ನು ಬಳಸಿ ಉನ್ನತ ವಿಮಾ ಕಂಪೆನಿಗಳ ಹೆಸರಿನಲ್ಲಿ ಸಂಪರ್ಕಿಸಲಾಗುತ್ತದೆ. ಸುಳ್ಳು ಮಾಹಿತಿ ನೀಡಿ, ಅಧಿಕ ಲಾಭದ ಆಮಿಷವೊಡ್ಡಿ, ದೊಡ್ಡ ಮೊತ್ತದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿಸಿಕೊಳ್ಳುತ್ತಾರೆ.
6. ಮ್ಯಾಟ್ರಿಮೋನಿಯಲ್ ವಂಚನೆ
ಸೋಶಿಯಲ್ ಮೀಡಿಯಾಗಳ ಮೂಲಕ ಜನರನ್ನು ಪರಿಚಯ ಮಾಡಿಕೊಂಡು ಫೋನ್ ನಂಬರ್ ಪಡೆದುಕೊಳ್ಳುತ್ತಾರೆ. ವಿಚ್ಛೇದನ ಆದ ಮಹಿಳೆಯರನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಾರೆ. ಆತ್ಮೀಯತೆ ತೋರಿಸಿ, ಮದುವೆ ಪ್ರಸ್ತಾಪ ಕೂಡ ಇಡುತ್ತಾರೆ. ವಿದೇಶದಲ್ಲಿರುವುದಾಗಿ ಹೇಳಿಕೊಳ್ಳುವ ವಂಚಕ ಭಾರತಕ್ಕೆ ನಿನ್ನನ್ನು ನೋಡಲು ಬರುವುದಾಗಿ ಹೇಳುತ್ತಾನೆ. ನಂತರ ಯಾವುದೋ ನೆಪ ಹೇಳಿ, ಹಣದ ಅಗತ್ಯವಿದೆ ಎಂದು ನಂಬಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಲಾಗುತ್ತದೆ.
7. OLX ವಂಚನೆ
OLXನಲ್ಲಿ ನಕಲಿ ಖಾತೆ ತೆರೆದು ವಾಹನಗಳ ಮಾಹಿತಿ ಅಪ್ಲೋಡ್ ಮಾಡಿ ಕಡಿಮೆ ಬೆಲೆಗೆ ಮಾರುವುದಾಗಿ ಪೋಸ್ಟ್ ಹಾಕುತ್ತಾರೆ. ಸೇನಾಧಿಕಾರಿಗಳು, ಉನ್ನತ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಭಾವಚಿತ್ರ ಬಳಸಿ, ಅವರಂತೆಯೇ ಬಿಂಬಿಸಿಕೊಂಡು ಮಾತಾಡುತ್ತಾರೆ. ವಾಹನ ಖರೀದಿಸಲು ನೀವು ಬಯಸಿದರೆ, ಅದು ವಿಮಾನ ನಿಲ್ದಾಣದಲ್ಲಿದ್ದು, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ನಂಬಿಸುತ್ತಾರೆ. ಕಡೆಗೆ ಏನೋ ನೆಪ ಮಾಡಿ, ಇವತ್ತೇ ಹಣ ಹಾಕಿ ಎಂದು ಒತ್ತಾಯಿಸಿ, ಹಣವನ್ನು ವಿವಿಧ ಬ್ಯಾಂಕ್ಗಳಿಗೆ ಹಾಕಿಸಿಕೊಳ್ಳುತ್ತಾರೆ.
8. ಫೇಕ್ ವೆಬ್ ಲಿಂಕ್ ಅಥವಾ ಒಟಿಪಿ
ಮೊಬೈಲ್ ನಂಬರ್ಗೆ ಲಿಂಕ್ ಕಳಿಸಿ ಏನೋ ಕಾರಣ ಹೇಳಿ ನೀವದನ್ನು ಕ್ಲಿಕ್ ಮಾಡುವಂತೆ ಮಾಡುತ್ತಾರೆ. ಒಟಿಪಿ ಪಡೆದು, ನಿಮಗೆ ಗೊತ್ತಿಲ್ಲದಂತೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಳ್ಳುತ್ತಾರೆ. ಬ್ಯಾಂಕ್ ಖಾತೆ ಬ್ಲಾಕ್ ಆಗಲಿದೆ ಎಂಬ ಮೆಸೇಜ್ ಜೊತೆ ವೆಬ್ ಲಿಂಕ್ ಕಳಿಸಿ, ಅದನ್ನು ಕ್ಲಿಕ್ ಮಾಡಿಸಿ, ನಿಮ್ಮ ಖಾತೆಯ ಮಾಹಿತಿ ಪಡೆದು ಅಕ್ರಮವಾಗಿ ಹಣ ವರ್ಗಾಯಿಸಿ ಕೊಳ್ಳುತ್ತಾರೆ.
ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ವಿಚಾರ ಹೇಳಿ, ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವಂತೆ ಲಿಂಕ್ಗಳನ್ನು ಕಳಿಸಿ ಕೂಡ ಹೀಗೆಯೇ ವಂಚಿಸಲಾಗುತ್ತದೆ.
9.ಲೋನ್ ಆ್ಯಪ್ ವಂಚನೆ
ದುಡ್ಡಿನ ತುರ್ತು ಅಗತ್ಯ ಇರುವವರಿಂದ ಆಧಾರ್ ಸಹಿತ ಎಲ್ಲ ದಾಖಲೆ ಪಡೆದು ಪುಡಿಗಾಸು ಸಾಲ ಕೊಡ್ತಾರೆ. ಆಮೇಲೆ ಅದರ ಎರಡು ಪಟ್ಟು ವಸೂಲಿ ಮಾಡ್ತಾರೆ. ಇವರ ಕಂತುಗಳು ಮುಗಿಯೋದೇ ಇಲ್ಲ. ಅವರು ಹೇಳಿದಷ್ಟು ದುಡ್ಡು ಕೊಡದೇ ಇದ್ದರೆ ಸಾಲ ಪಡೆದ ವ್ಯಕ್ತಿಯ ಫೋಟೊವನ್ನು ತೀರಾ ಅಶ್ಲೀಲ ರೀತಿಯಲ್ಲಿ ತಿರುಚಿ ಅದನ್ನು ಆತನ / ಆಕೆಯ ಎಲ್ಲ ಕಾಂಟ್ಯಾಕ್ಟ್ಗಳಿಗೆ ಕಳುಹಿಸಿ ಮರ್ಯಾದೆ ಹರಾಜು ಹಾಕಿ ಬಿಡುತ್ರೆತಾರೆ. ತುರ್ತಿಗೆ ಸಾಲ ಪಡೆದು ಆಮೇಲೆ ಈ ಆ್ಯಪ್ ಗಳು ಕೊಡುವ ಕಿರುಕುಳ ತಾಳಲಾರದೆ, ಮಾನಕ್ಕಂಜಿ ಆತ್ಮಹತ್ಯೆ ಮಾಡಿಕೊಂಡವರೂ ಹಲವರಿದ್ದಾರೆ.
ವಂಚಕರ ಕರೆ ಬಂದಾಗ...
ಬೀ ಅಲರ್ಟ್ ! ಅಪರಿಚಿತರಿಂದ ಆಮಿಷದ, ಸುಲಭ ಸಂಪಾದನೆಯ ಕರೆ ಬಂದರೆ ಕೂಡಲೇ ಕಾಲ್ ಕಟ್ ಮಾಡಿ. ಸರಕಾರಿ ಅಧಿಕಾರಿಗಳು / ಪೊಲೀಸರ ಹೆಸರಲ್ಲಿ ಬೆದರಿಸುವ ಕರೆಗಳು ಬಂದರೆ ನೋಟಿಸ್ ಕಳಿಸಿ, ಉತ್ತರಿಸುತ್ತೇನೆ ಎಂದು ಕಾಲ್ ಕಟ್ ಮಾಡಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
ಸುರಕ್ಷಿತವಾಗಿರುವುದು ಹೇಗೆ?
1. ಕಠಿಣ ಪಾಸ್ವರ್ಡ್ ಬಳಕೆ.
2. ಭೇಟಿ ನೀಡುವ ವೆಬ್ಸೈಟ್ಗಳ ಬಗ್ಗೆ ಎಚ್ಚರಿಕೆ.
3. ವೈಯಕ್ತಿಕ ಮಾಹಿತಿ ಕೇಳುವ ಆ್ಯಪ್ಗಳನ್ನು ಬಳಸಕೂಡದು.
4. ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಕೂಡದು.
5. ಸಾಫ್ಟ್ವೇರ್ಗಳನ್ನು ಆಗಾಗ್ಗೆ ಅಪ್ಡೇಟ್ ಮಾಡುತ್ತಿರಬೇಕು.
ವಂಚನೆಗೊಳಗಾದರೆ ತಕ್ಷಣ ಏನು ಮಾಡಬೇಕು?
1930 ಸೈಬರ್ ಕ್ರೈಂ ಸಹಾಯವಾಣಿ ಯಾಗಿದ್ದು, ಇದು ಭಾರತದ ಎಲ್ಲಾ ರಾಜ್ಯಗಳಲ್ಲಿ ಲಭ್ಯ. ಇದಕ್ಕೆ ಕರೆ ಮಾಡಿ, ಯಾವುದೇ ಸೈಬರ್ ಕ್ರೈಂ ಘಟನೆ ಬಗ್ಗೆ ಎಲ್ಲಿಂದ ಬೇಕಾದರೂ ದೂರು ನೀಡಬಹುದು.
ಎನ್ಸಿಆರ್ಪಿ ಪೋರ್ಟಲ್ಗೆ ಲಾಗಿನ್ ಆಗಿ ದೂರು ದಾಖಲಿಸಬಹುದು. ಒಂದು ವೇಳೆ ಪ್ರಕರಣ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದ್ದರೆ ಸಂಬಂಧಪಟ್ಟವರ ಬ್ಯಾಂಕ್ ಖಾತೆಗಳನ್ನು ತಕ್ಷಣ ಫ್ರೀಝ್ ಮಾಡಿಸಲಾಗುತ್ತದೆ.