ಹವಾಮಾನ ವೈಪರೀತ್ಯ ಎಫೆಕ್ಟ್: ಅಪಾಯದಂಚಿನಲ್ಲಿ ಪಶ್ಚಿಮ ಘಟ್ಟದ ಕುಣಿವ ಕಪ್ಪೆಗಳು!
ಅಪರೂಪದ ಪ್ರಭೇದ ಉಳಿಸಲು ಅಧ್ಯಯನ
ಉಡುಪಿ, ಅ.8: ಪಶ್ಚಿಮ ಘಟ್ಟದಲ್ಲಿ ಮಾತ್ರವೇ ಕಂಡುಬರುವ ಎಂಡೆಮಿಕ್(ಸ್ಥಳೀಯ) ಹಾಗೂ ಅತ್ಯಂತ ಸೂಕ್ಷ್ಮ ಪ್ರಭೇದವಾಗಿರುವ ಕುಣಿವ ಕಪ್ಪೆಗಳು(ಡ್ಯಾನ್ಸಿಂಗ್ ಫ್ರಾಗ್) ಹವಾಮಾನ ವೈಪರೀತ್ಯದ ಪರಿಣಾಮವಾಗಿ ಇಂದು ಅಪಾಯದ ಅಂಚಿಗೆ ತಲುಪಿವೆ. ಈ ಆತಂಕಕಾರಿ ಅಂಶವು ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಭಾರತದ ಒಟ್ಟು 30 ಉಭಯಜೀವಿಗಳ ವಿಷಯ ತಜ್ಞರು ಸೇರಿ ಈ ಬಗ್ಗೆ ಅಧ್ಯಯನ ನಡೆಸಿದ್ದು, ಅದರ ಸಂಶೋಧನಾ ಲೇಖನವು ‘ನೇಚರ್’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಈ ಲೇಖನದ ಸಹ ಲೇಖಕರಾದ ಬೆಂಗಳೂರು ಮಾಹೆಯ ‘ಸೃಷ್ಟಿ’ ಕಲೆ, ವಿನ್ಯಾಸ ಮತ್ತು ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಹಾಗೂ ಕಪ್ಪೆ ಸಂಶೋಧಕ ಡಾ.ಗುರುರಾಜ ಕೆ.ವಿ. ಕುಣಿವ ಕಪ್ಪೆಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ.
ಕರ್ನಾಟಕದಲ್ಲಿ 7 ಪ್ರಭೇದಗಳು
ಪಶ್ಚಿಮ ಘಟ್ಟದಲ್ಲಿ ಈವರೆಗೆ ಕುಣಿವ ಕಪ್ಪೆಗಳ 24 ಪ್ರಭೇದಗಳು ಕಂಡುಬಂದಿದ್ದು, ಅವುಗಳಲ್ಲಿ ಎರಡು ಪ್ರಭೇದಗಳು ವಿನಾಶದ ಅಂಚಿನಲ್ಲಿದ್ದರೆ, 15 ಪ್ರಭೇದಗಳು ಅಪಾಯದ ಸ್ಥಿತಿಯಲ್ಲಿವೆ. ಇವು ಭಾರತ-ಮಲಯಾ(ಇಂಡೋ ಮಲೇಶ್ಯನ್) ಭೂಭಾಗದ ಅತೀ ಹೆಚ್ಚು ಅಪಾಯದಲ್ಲಿರುವ ಕಪ್ಪೆ ಕುಟುಂಬಗಳಾಗಿವೆ ಎಂಬುದು ಗುರುರಾಜ್‌ರ ಅಧ್ಯಯನದಿಂದ ಕಂಡುಬಂದಿದೆ.
24 ಪ್ರಬೇಧಗಳ ಪೈಕಿ ಏಳು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟದಲ್ಲಿ ಕಂಡುಬಂದಿವೆ. ತೀರ್ಥಹಳ್ಳಿ ತಾಲೂಕಿನ ನೀಲ್‌ವಾಸೆಯಲ್ಲಿ ಪತ್ತೆಯಾಗಿರುವ ಕಪ್ಪೆ ನೀಲ್‌ವಾಸೆ ಕಪ್ಪೆ ಹಾಗೂ ಕೊಟ್ಟಿಗೆಹಾರದಲ್ಲಿ ಕಂಡು ಬಂದ ಕಪ್ಪೆಗೆ ಕೊಟ್ಟಿಗೆಹಾರ ಕುಣಿವ ಕಪ್ಪೆ ಎಂದೇ ಹೆಸರಿಸಲಾ
ಗಿದೆ. ಅದೇರೀತಿ ಮೂಡಿಗೆರೆ, ಕೂರ್ಗ್ ಗಳಲ್ಲೂ ಮೊದಲ ಬಾರಿಗೆ ಹೊಸ ಪ್ರಭೇದದ ಕುಣಿವ ಕಪ್ಪೆಗಳು ಪತ್ತೆಯಾಗಿವೆ. ಜಿಲ್ಲೆಯ ಹೆಬ್ರಿ, ಮಾಳ ಸೇರಿದಂತೆ ಹಲವು ಪ್ರದೇಶಗಳಲ್ಲೂ ಈ ಕಪ್ಪೆಗಳು ಕಂಡುಬರುತ್ತವೆ.
ಹರಿಯುವ ತೊರೆಗಳೇ ಜೀವಾಳ
ನಿರಂತರವಾಗಿ ಹರಿಯುವ ತೊರೆಗಳ ಬಳಿಯೇ ಕುಣಿವ ಕಪ್ಪೆಗಳು ಕಂಡುಬರುತ್ತವೆ. ಹಾಗಾಗಿ ಇವು ಪಶ್ಚಿಮ ಘಟ್ಟಗಳಲ್ಲಿ ಮಾತ್ರವೇ ಕಾಣಸಿಗುತ್ತವೆ. ಅದು ಬಿಟ್ಟರೆ ಈಸ್ಟರ್ನ್ ಘಾಟ್‌ನಲ್ಲಿ ಆಗಲಿ, ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಆಗಲಿ ಕಂಡುಬರುವುದಿಲ್ಲ. ಆದುದರಿಂದ ಇದು ಪಶ್ಚಿಮ ಘಟ್ಟದ ಬಹಳ ಸ್ಥಳೀಯವಾದ ಪ್ರಭೇದವಾಗಿದೆ.
ಈ ಕಪ್ಪೆಗಳಿಗೆ ಮೇಲ್ಭಾಗದಲ್ಲಿ ದಟ್ಟವಾಗಿ ಹರಡಿರುವ ಮರಗಳಿರಬೇಕು ಮತ್ತು ಕೆಳಗಡೆ ನಿರಂತರವಾಗಿ ಹರಿಯುವ ತೊರೆಗಳಿರಬೇಕು. ಒಟ್ಟಾರೆ ಇಡೀ ಪರಿಸರ ತಂಪಿನಿಂದ ಕೂಡಿರಬೇಕು. ಕೀಟಗಳನ್ನು ತಿಂದು ಬದುಕುವ ಈ ಕಪ್ಪೆಗಳು, ತೊರೆಯಲ್ಲಿ ತೆಳುವಾಗಿ ಹರಿಯುವ ನೀರಿನಲ್ಲಿ ಗುಂಡಿ ಮಾಡಿ ಅದರೊಳಗೆ ಮೊಟ್ಟೆ ಇಡುತ್ತವೆೆ. ಬಳಿಕ ಹೆಣ್ಣು ಕಪ್ಪೆ ಅದರ ಮೇಲೆ ಮಣ್ಣು ಮುಚ್ಚಿ ಕುಣಿದು ಮರಳನ್ನು ಮುಚ್ಚುತ್ತವೆ. ಇದುವೇ ಈ ಕಪ್ಪೆಗಳ ಪ್ರಮುಖ ವೈಶಿಷ್ಟ್ಯ ಎನ್ನುತ್ತಾರೆ ಬೆಂಗಳೂರು ಮಾಹೆಯ ‘ಸೃಷ್ಟಿ’ ಕಲೆ, ವಿನ್ಯಾಸ ಮತ್ತು ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ
ಗುರುರಾಜ ಕೆ.ವಿ.
ಯಾಕಾಗಿ ಡ್ಯಾನ್ಸ್ ಮಾಡುತ್ತವೆ?
ಈ ಪ್ರಭೇದದ ಗಂಡು ಕಪ್ಪೆಗಳು ಕುಣಿಯುವ ರೀತಿಯಲ್ಲಿ ತನ್ನ ಕಾಲನ್ನು ಎತ್ತಿ ಗುರುತು ಮಾಡುವ ಮೂಲಕ ತನ್ನ ಆವಾಸ ಸ್ಥಾನ(ಟೆರಿಟೋರಿ)ವನ್ನು ಎದುರಾಳಿ ಗಂಡು ಕಪ್ಪೆಗೆ ತೋರಿಸುತ್ತದೆ. ಇದನ್ನು ಆವಾಸ ಸ್ಥಾನ(ಟೆರಿಟೋರಿಯಲ್ ಮಾರ್ಕಿಂಗ್) ಗುರುತಿಸುವಿಕೆ ಎಂದು ಕರೆಯಲಾಗುತ್ತದೆ. ಹಾಗಾಗಿ ಈ ಪ್ರಭೇದಕ್ಕೆ ‘ಡ್ಯಾನ್ಸಿಂಗ್ ಫ್ರಾಗ್’ ಎಂದು ಹೆಸರಿಡಲಾಗಿದೆ. ಹೆಣ್ಣು ಕಪ್ಪೆಗಳೊಂದಿಗೆ ಮಿಲನ ಪ್ರಕ್ರಿಯೆ ನಡೆಸಲು ಈ ಆವಾಸ ಸ್ಥಾನವನ್ನು ಗುರುತಿಸುತ್ತದೆ. ಇದರ ವ್ಯಾಪ್ತಿ ಕೇವಲ 30 ಚದರ ಸೆ.ಮೀ. ಮಾತ್ರ ಆಗಿರುತ್ತದೆ. ಈ ವ್ಯಾಪ್ತಿಯೊಳಗೆ ಬೇರೆ ಗಂಡು ಕಪ್ಪೆಗಳು ಬಂದರೆ ಅದನ್ನು ಕಾಲಿನಲ್ಲೇ ಒದ್ದೋಡಿಸುತ್ತವೆ. ಈ ರೀತಿ ಕಾಲಿನಲ್ಲಿ ಆವಾಸ ಸ್ಥಾನವನ್ನು ಗುರುತಿಸುವ ಕಪ್ಪೆ ಪ್ರಭೇದ ಇದೊಂದೇ ಆಗಿದೆ ಎಂದು ಡಾ.ಗುರುರಾಜ್ ಕೆ.ವಿ. ಮಾಹಿತಿ ನೀಡಿದ್ದಾರೆ.
ಬಿಸಿ ಪರಿಸರವೇ ಮಾರಕ
ಶೀತ ರಕ್ತ ಪ್ರಾಣಿಗಳಾಗಿರುವ ಕಪ್ಪೆುಗಳು ತುಂಬಾ ಸೂಕ್ಷ್ಮಜೀವಿಗಳು. ಪರಿಸರದ ತಾಪಮಾನ ಒಂದು ಡಿಗ್ರಿ ಬದಲಾವಣೆಯಾದರೂ ಅವುಗಳ ಮೇಲೆ ಸಾಕಷ್ಟು ಪರಿಣಾಮಗಳು ಬೀರುತ್ತವೆ.
ಹವಾಮಾನದಲ್ಲಿ ವೈಪರೀತ್ಯ ಉಂಟಾಗಿ ಪರಿಸರದಲ್ಲಿ ಬಿಸಿ ಜಾಸ್ತಿಯಾದರೆ ಸಾಕಷ್ಟು ಸೂಕ್ಷ್ಮವಾಗಿರುವ ಈ ಕುಣಿವ ಕಪ್ಪೆಗಳು ಒಣಗಿ ಹೋಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಅವುಗಳು ತಾನಿರುವ ಜಾಗವನ್ನು ಬಿಟ್ಟು ತಂಪು ಇರುವ ಜಾಗವನ್ನು ಹುಡುಕಿಕೊಂಡು ಹೋಗುತ್ತವೆ.
ಇದರಿಂದ ಈ ಹಿಂದೆ ಇದ್ದ ಜಾಗದಲ್ಲಿ ಆ ಕಪ್ಪೆಗಳು ಕಾಣಲೇ ಸಿಗುವುದಿಲ್ಲ. ಇದೇರೀತಿ ಮುಂದೆ ತಾನು ಹೋದ ಜಾಗದಲ್ಲೂ ಬಿಸಿ ಹೆಚ್ಚಾದರೆ ತಂಪಿನ ಪ್ರದೇಶವೇ ಇಲ್ಲದೇ ಈ ಕಪ್ಪೆ ಪ್ರಭೇದವೇ ನಾಶವಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಅಲ್ಲದೆ ಪರಿಸರ ಬಿಸಿ ಜಾಸ್ತಿಯಾಗುವುದರಿಂದ ಯಾವುದೇ ರಕ್ಷಣೆ ಇಲ್ಲದ ಅವುಗಳ ಮೊಟ್ಟೆಗಳು ಕೂಡ ಒಣಗಿ ಹೋಗಿ ಇಡೀ ಸಂತಾನವೇ ನಾಶವಾಗುತ್ತದೆ ಎಂದು ಡಾ.ಗುರುರಾಜ್ ಕೆ.ವಿ. ಆತಂಕ ವ್ಯಕ್ತಪಡಿಸಿದ್ದಾರೆ.
‘ಉಭಯಜೀವಿ ಸಂರಕ್ಷಣಾ ನೀತಿ ಅಗತ್ಯ’
ಭಾರತದಲ್ಲಿ 426 ಕಪ್ಪೆ ಸೇರಿದಂತೆ ಉಭಯಜೀವಿಗಳ ಬಗ್ಗೆ ಅಧ್ಯಯನ ಮಾಡಿದ್ದು, ಅದರಲ್ಲಿ 139(ಶೇ.41) ಪ್ರಭೇದಗಳು ಅಪಾಯದ ಸ್ಥಿತಿಯಲ್ಲಿವೆ. ರಾಜ್ಯವಾರು ಸಂಖ್ಯೆಯಲ್ಲಿ ಕೇರಳ(178/84), ತಮಿಳುನಾಡು(128/54) ಮತ್ತು ಕರ್ನಾಟಕ (100/30) ರಾಜ್ಯದಲ್ಲಿ ಪ್ರಭೇದಗಳು ಅಪಾಯದಲ್ಲಿವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಪ್ಪೆಗಳ ಬಗ್ಗೆ ಅರಿವು ಮಾತ್ರವಲ್ಲ, ಅವುಗಳ ವಾಸಸ್ಥಾನ, ಹವಾಮಾನ ವೈಪರೀತ್ಯದಿಂದಾಗುವ ಪರಿಣಾಮಗಳು, ಗುಣಲಕ್ಷಣಗಳು ಮತ್ತು ವಿಕಸನ ಬಗ್ಗೆ ವೈಜ್ಞಾನಿಕ ಅಧ್ಯಯನದ ತೀವ್ರ ಅವಶ್ಯಕತೆ ಇದೆ. ಜೊತೆಗೆ ರಾಜ್ಯ ಮತ್ತು ರಾಷ್ಟ್ರವ್ಯಾಪಿ ಉಭಯಜೀವಿ ಸಂರಕ್ಷಣಾ ನೀತಿಯ ಜಾರಿಗೆ ತರಬೇಕಾಗಿದೆ. ರಾಜ್ಯ ಕಪ್ಪೆ ಮತ್ತು ರಾಷ್ಟ್ರ ಕಪ್ಪೆಗಳನ್ನು ಗುರುತಿಸಿ, ಜನಸಾಮಾನ್ಯರು ಉಭಯಜೀವಿಗಳ ಅಧ್ಯಯನದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡಬೇಕಾ ಗಿದೆ ಎಂದು ಕಪ್ಪೆ ಸಂಶೋಧಕ ಡಾ.ಗುರುರಾಜ್ ಕೆ.ವಿ. ಅಭಿಪ್ರಾಯಪಟ್ಟಿದ್ದಾರೆ.
‘ಪ್ರಸಕ್ತ ಮಳೆ ಕಡಿಮೆಯಾಗಿದ್ದು, ತುಂಬಾ ಅಂತರ ಬಿಟ್ಟು ಮಳೆ ಬರುವುದರಿಂದಲೂ ಪಶ್ಚಿಮ ಘಟ್ಟಗಳ ಕುಣಿವ ಕಪ್ಪೆಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ಹವಾಮಾನದಲ್ಲಿ ಸ್ವಲ್ಪ ಬದಲಾವಣೆಯಾದರೂ ಈ ಸೂಕ್ಷ್ಮ ಪ್ರಭೇದಗಳು ಅಪಾಯದ ಸ್ಥಿತಿಗೆ ತಲುಪುತ್ತವೆ. ಕಪ್ಪೆ ಸೇರಿದಂತೆ ಉಭಯ ಜೀವಿಗಳ ಕುರಿತು ನಡೆಸಿದ ಅಧ್ಯಯನದಿಂದ ಉಭಯಚರಗಳ ರಕ್ಷಣೆ ಮತ್ತು ಮರುಸ್ಥಾಪನೆಯು ಹವಾಮಾನ ಬಿಕ್ಕಟ್ಟಿಗೆ ಪರಿಹಾರ ಎಂಬುದನ್ನು ಕಂಡುಕೊಳ್ಳಲಾಗಿದೆ’
- ಡಾ.ಗುರುರಾಜ್ ಕೆ.ವಿ., ಕಪ್ಪೆ ಸಂಶೋಧಕರು