ಲಾಕ್ ಡೌನ್ ನ ಕರಾಳ ನೆನಪುಗಳು
2019ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೋನ ಸಾಂಕ್ರಾಮಿಕ ಪಿಡುಗು ಕೆಲವೇ ತಿಂಗಳುಗಳಲ್ಲಿ ಇಡೀ ಜಗತ್ತನ್ನೇ ಆವರಿಸಿತ್ತು. 2020 ಫೆಬ್ರವರಿಯಲ್ಲಿ ಭಾರತಕ್ಕೂ ವಕ್ಕರಿಸಿದ ಕೊರೋನವನ್ನು ನಿಯಂತ್ರಿಸಲು ಸರಕಾರ ವಿಫಲಗೊಂಡಿತ್ತು. ವ್ಯಾಪಕವಾಗಿ ಹಬ್ಬುತ್ತಿದ್ದ ಈ ಸೋಂಕಿನ ನಿಯಂತ್ರಣಕ್ಕೆ ಬೇರೆ ದಾರಿ ಕಾಣದೇ 2020ರ ಮಾ.24ರಂದು ಪ್ರಧಾನ ಮಂತ್ರಿ ಏಕಾಏಕಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ್ದರು. ಪೂರ್ವತಯಾರಿ, ಪರ್ಯಾಯ ವ್ಯವಸ್ಥೆಗಳಿಲ್ಲದೇ ಘೋಷಿಸಿದ ಲಾಕ್‌ಡೌನ್‌ನಿಂದಾಗಿ ಜನ ಅತಂತ್ರರಾದರು. ಮನೆಯಲ್ಲಿದ್ದ ದಿನಸಿ ಸಾಮಗ್ರಿಗಳು ಖಾಲಿಯಾದಾಗ, ಆದಾಯದ ಮೂಲಗಳು ನಿಂತುಹೋದಾಗ ಜನ ಸಾಮಾನ್ಯರು ಪಡಬಾರದ ಕಷ್ಟಗಳನ್ನು ಅನುಭವಿಸಿದರು. ಎಲ್ಲವೂ ಸ್ತಬ್ಧವಾಗಿದ್ದ ಲಾಕ್‌ಡೌನ್ ಅವಧಿಯಲ್ಲಿ ತಾವು ಅನುಭವಿಸಿದ ಕಷ್ಟ-ನಷ್ಟ, ನೋವು-ನಲಿವುಗಳನ್ನು ರಾಜ್ಯದ ಜನ ‘ವಾರ್ತಾಭಾರತಿ’ಯೊಂದಿಗೆ ಮತ್ತೊಮ್ಮೆ ನೆನೆದುಕೊಂಡಿದ್ದಾರೆ.
ಗುತ್ತಿಗೆದಾರನಾಗಿದ್ದ ನಾನು ಕೂಲಿ ಕಾರ್ಮಿಕನಾದೆ!
ಕೊರೋನ ಸಂದರ್ಭದಲ್ಲಿ ಏಕಾಏಕಿ ಲಾಕ್‌ಡೌನ್ ಹೇರಿಕೆ ಮಾಡಿದ್ದರಿಂದ ಏನು ಮಾಡಬೇಕೆಂದು ತೋಚದೇ ಕಂಗಾಲಾಗಿದ್ದೆ. ಗುತ್ತಿಗೆದಾರನಾಗಿದ್ದ ನನ್ನ ಬಳಿ 7-8 ಮಂದಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ಆಗುತ್ತಿದ್ದಂತೆ ಕೂಲಿ ಕಾರ್ಮಿಕರು ಕಾಲ್ನಡಿಗೆಯಲ್ಲೇ ತಮ್ಮ ಊರುಗಳಿಗೆ ತಲುಪಲು ಹೊರಟಿದ್ದರು. ಇಲ್ಲಿ ಇದ್ದು ಹಸಿವಿನಿಂದ ಸಾಯುವುದಕ್ಕಿಂತ ಮನೆ ತಲುಪಿ ಕುಟುಂಬ ವರ್ಗದವರ ಜೊತೆ ಇದ್ದರೆ ಒಳಿತು ಎಂದು ನಮಗೆ ಅನಿಸಿತ್ತು.
ನನ್ನ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ನೀಡಬೇಕಿದ್ದ ಹಣಕಾಸಿನ ವ್ಯವಸ್ಥೆ ಮಾಡಿ ಅವರವರ ಊರುಗಳಿಗೆ ಕಳುಹಿಸಿದೆ. ಆದರೆ, ನನ್ನ ಕುಟುಂಬಕ್ಕೆ ನಾನೇ ಆಧಾರಸ್ತಂಭ. ಊರಿಗೆ ಹೋಗಿ ಮಾಡುವುದಾದರೂ ಏನು? ಇಲ್ಲೇ ಇದ್ದು ಏನಾದರೂ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡೋಣ ಎಂದು ಆಲೋಚಿಸಿ ಉಳಿದುಕೊಂಡೆ.
ಹಲವು ದಿನಗಳ ಕಾಲ ಕೇವಲ ನೀರು ಕುಡಿದು ಹಸಿವು ದೂರ ಮಾಡುವ ಪ್ರಯತ್ನ ಮಾಡಿದ್ದೇನೆ. ಕ್ರಮೇಣ ಕೋವಿಡ್ ನಿಯಂತ್ರಣಕ್ಕೆ ಬಂದು ಲಾಕ್‌ಡೌನ್ ಸಡಿಲಿಕೆಯಾಯಿತು. ಆದರೆ, ನನ್ನ ಬಳಿ ಕೆಲಸ ಮಾಡುತ್ತಿದ್ದವರು ವಾಪಸ್ ಬರಲಿಲ್ಲ. ಇದರಿಂದಾಗಿ, ನನ್ನ ಗುತ್ತಿಗೆ ಕೆಲಸಗಳು ಬೇರೆಯವರ ಪಾಲಾದವು.
ಗುತ್ತಿಗೆದಾರನಾಗಿದ್ದ ನಾನು ಕುಟುಂಬ ನಿರ್ವಹಣೆಯ ಜವಾಬ್ದಾರಿ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೂಲಿ ಕಾರ್ಮಿಕನಾಗಬೇಕಾಯಿತು. ದಶಕದ ಹಿಂದೆ ಉತ್ತರಪ್ರದೇಶದ ಖಲೀಲಾಬಾದ್‌ನಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಪರಿಶ್ರಮದಿಂದ ಗುತ್ತಿಗೆದಾರನಾಗಿದ್ದ ನಾನು, ಮತ್ತೆ ಅದೇ ಹಿಂದಿನ ಪರಿಸ್ಥಿತಿಗೆ ತಲುಪಿದೆ. ಮನೆಯ ಜವಾಬ್ದಾರಿ ಒಂದು ಕಡೆಯಾದರೆ, ಸಾಲಗಾರರ ಕಾಟ ಮತ್ತೊಂದೆಡೆ.
ಈ ಎಲ್ಲ ಸಮಸ್ಯೆಗಳಿಂದ ಹೊರ ಬರಬೇಕಾದರೆ ಕೆಲಸ ಮಾಡಲೇಬೇಕಿತ್ತು. ಕೂಲಿ ಕಾರ್ಮಿಕನಾಗಿ ಯೇ ಕೆಲಸ ಮುಂದುವರಿಸಿದೆ. ನಮ್ಮಂತಹ ಬಡವರ ಪಾಲಿಗೆ ಲಾಕ್‌ಡೌನ್ ನಿಜಕ್ಕೂ ದೊಡ್ಡ ಹೊಡೆತ ತಂದೊಡ್ಡಿದೆ. ಮೂರು ವರ್ಷಗಳಾದರೂ ಆ ಹೊಡೆತದಿಂದ ಚೇತರಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಿಲ್ಲ. ಭವಿಷ್ಯದಲ್ಲಿ ಎಂದಿಗೂ ಇಂತಹ ಪರಿಸ್ಥಿತಿ ಎದುರಾಗಬಾರದು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.
ಶಿವಶಂಕರ್, ಆನಂದಪುರ ಬೆಂಗಳೂರು
ಅವಕಾಶ ಕಸಿದ ಲಾಕ್‌ಡೌನ್
ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ನಾನು ಮಂಗಳೂರು ವಿವಿಯಲ್ಲಿ ದ್ವಿತೀಯ ವರ್ಷದ ಭೌತಶಾಸ್ತ್ರ ವಿದ್ಯಾರ್ಥಿಯಾಗಿದ್ದೆ. ಪ್ರಥಮ ವರ್ಷದಲ್ಲಿ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದೆ. ಆದರೆ ದ್ವಿತೀಯ ವರ್ಷದಲ್ಲಿ ಲಾಕ್‌ಡೌನ್‌ನಿಂದಾಗಿ ನಾನು ಹಲವು ಶೈಕ್ಷಣಿಕ ಅವಕಾಶಗಳನ್ನು ಕಳೆದುಕೊಂಡೆ.
ಪಾಠಗಳನ್ನು ಗೂಗಲ್ ಮೀಟ್ ಮೂಲಕ ಕೇಳಬೇಕಾಯಿತು. ಸಹಪಾಠಿಗಳ ಒಡನಾಟ ಕಡಿಮೆಯಾಯಿತು. ವಿವಿಯಲ್ಲಿ ನಡೆಯುತ್ತಿದ್ದ ಟ್ಯಾಲೆಂಟ್ಸ್ ಡೇ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾವಕಾಶದಿಂದ ವಂಚಿತರಾದೆವು. ಯಕ್ಷಗಾನ ಕೇಂದ್ರದ ಮೂಲಕ ನಡೆಯುತ್ತಿದ್ದ ಪ್ರದರ್ಶನಗಳಲ್ಲಿ ಬಣ್ಣ ಹಚ್ಚುವ ಸುವರ್ಣಾವಕಾಶ ಕೈ ತಪ್ಪಿತು. ದ್ವಿತೀಯ ವರ್ಷದಲ್ಲಿ ಕ್ಯಾಂಪಸ್ ಸಂದರ್ಶನ ಇರುತ್ತದೆ. ಕೊರೋನ ಸಮಸ್ಯೆಯಿಂದ ನಮ್ಮ ಅವಧಿಯಲ್ಲಿ ಅದೂ ಇಲ್ಲದಾಯಿತು. ಮುಖ್ಯವಾಗಿ ವಿದ್ಯಾರ್ಥಿ ಜೀವನದಲ್ಲಿ ಪಡೆಯಬೇಕಿದ್ದ ಅನೇಕ ಅವಕಾಶಗಳು ನಮ್ಮಿಂದ ದೂರವಾಗಿದ್ದವು.
ಯತೀಶ್, ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿ
ಮನೆಗೆ ಹೋಗುವಾಗ ಪೊಲೀಸರ ಲಾಠಿ ಏಟು
ನಾನು ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್‌ನಲ್ಲಿ ಒಂದು ರೀತಿಯಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದಂತೆ ಇದ್ದೆ. ಪತ್ನಿ ಮತ್ತು ಮಕ್ಕಳು ನನ್ನ ತಂದೆ ತಾಯಿಯ ಜೊತೆಯಲ್ಲಿದ್ದರೆ ನಾನು ನನ್ನ ನಂಜನಗೂಡಿನ ಮನೆಯಲ್ಲಿದ್ದೆ. ಮನೆಯಿಂದ ದೂರವೇ ಉಳಿದಿದ್ದ ನನಗೆ ಮೂಗಿಯಾದ ಪತ್ನಿ ಜೊತೆ ಮೊಬೈಲ್‌ನಲ್ಲಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಮಕ್ಕಳೂ ಸಣ್ಣವರು. ಹೀಗಾಗಿ ಒಂದು ದಿನ ಪತ್ನಿ, ಮಕ್ಕಳನ್ನು ನೋಡುವ ಆಸೆಯಿಂದ ಪೊಲೀಸರ ಕಣ್ಣು ತಪ್ಪಿಸಿ ಸ್ಕೂಟರ್‌ನಲ್ಲಿ ಹೋಗುವಾಗ ದಾರಿ ಮಧ್ಯೆ ಪೊಲೀಸರು ತಡೆದರು. ಎಲ್ಲಿಗೆಂದು ಕೇಳಿದಾಗ ಪತ್ನಿ, ಮಕ್ಕಳನ್ನು ನೋಡಲು ಎಂದು ನಿಜ ವಿಷಯ ತಿಳಿಸಿದೆ. ಅಷ್ಟು ಹೇಳಿದ್ದೇ ತಡ ಓರ್ವ ಪೊಲೀಸ್ ಹೊಡೆಯಲೆಂದು ಲಾಠಿ ಬೀಸಿದರು. ಸ್ಕೂಟರ್ ತಿರುಗಿಸಿ, ಹಿಂದಿರುಗಿ ನೋಡದೇ ಮರಳಿ ಬಂದೆ. ಮತ್ತೆ ಇಂತಹ ದುಸ್ಸಾಹಸಕ್ಕೇ ಇಳಿದೇ ಇಲ್ಲ.
ದರ್ಶನ್ -ಕಾರ್ಮಿಕ, ನಂಜನಗೂಡು
ಭಯ ಹುಟ್ಟಿಸುತ್ತಿದ್ದ ಟಿವಿ ಸುದ್ದಿಗಳು
ಕೊರೋನ, ಲಾಕ್‌ಡೌನ್’ ಆ ಎರಡು ಪದಗಳು ಕೇಳಿದಾಗ ನೆನಪಾಗುವುದೇ ಭಯ, ಭೀತಿಯ ಆ ಕರಾಳ ದಿನಗಳು. ಟಿವಿಯಲ್ಲಿ ಕೊರೋನ, ಲಾಕ್‌ಡೌನ್, ಸೋಂಕು, ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಮೊದಲಾದ ಸುದ್ದಿಗಳನ್ನು ಭಯಾನಕವಾಗಿ ಬಿತ್ತರಿಸಲಾಗುತ್ತಿತ್ತು. ಅಲ್ಲಿ ಅಷ್ಟು ಸಾವು, ಇಲ್ಲಿ ಇಷ್ಟು ಸಾವು ಮೊದಲಾದ ಸುದ್ದಿಗಳು ನಮ್ಮ ಆತಂಕವನ್ನು ಹೆಚ್ಚಿಸುತ್ತಿತ್ತು.
ಹಲವು ದಿನಗಳವರೆಗೆ ಮನೆಯೊಳಗೆ ಬಂಧನ. ದಿನನಿತ್ಯದ ದಿನಸಿಗೆ ಹೊರಗೆ ಹೋಗಲೂ ಭಯ. ನಮ್ಮ ಮನೆಯ ಸಮೀಪವಿದ್ದ ಕೂಲಿ ಕಾರ್ಮಿಕರ ಮಾತುಗಳಂತೂ ಇಂದಿಗೂ ನನ್ನ ಮನದಿಂದ ಮಾಸಿಹೋಗಿಲ್ಲ. ‘ಕೊರೋನದಿಂದ ಸತ್ತರೂ ಚಿಂತೆ ಇಲ್ಲ ಅಕ್ಕ, ಆದರೆ ನಾನು, ಮನೆಯವರು ಕೆಲಸಕ್ಕೆ ಹೋಗದೆ, ಒಲೆ ಹಚ್ಚದೆ ನನ್ನ ಮಕ್ಕಳು ಹಸಿವಿನಿಂದ ಯಾತನೆ ಪಡುವುದನ್ನು ಸಹಿಸಲಾಗದು’. ಮನೆಯಲ್ಲಿ ಅಳಿದುಳಿದ ತಿಂಡಿ ತಿನಿಸು, ಅಕ್ಕಿ ಸಾಮಗ್ರಿಗಳನ್ನು ಅವರಿಗೆ ನೀಡಿ ನನ್ನಿಂದಾದ ಸಹಾಯ ಮಾಡಿದ ತೃಪ್ತಿ. ನಾನು ಔಷಧಿ ಸಗಟು ಕಂಪೆನಿಯಲ್ಲಿ ಕೆಲಸಕ್ಕಿದ್ದ ಕಾರಣ ಆ ಭಯದ ದಿನಗಳಲ್ಲೂ ಕೆಲಸಕ್ಕೆ ಹೋಗುವ ಅನಿವಾರ್ಯತೆ ಇತ್ತು. ಸಂಜೆ ಕೆಲಸದಿಂದ ಹಿಂದಿರುಗಿ ಸ್ನಾನ ಮಾಡಿ ಮನೆ ಒಳಗೆ ಹೊಕ್ಕರೂ ಮೂಲೆಯಲ್ಲಿ ಕುಳಿತು ಊಟ ಮಾಡಬೇಕಾದ ಪರಿಸ್ಥಿತಿ. ನನ್ನ ಐದು ವರ್ಷದ ಮಗನನ್ನು ದೂರದಿಂದಲೇ ಮಾತನಾಡಿಸಿದ ಆ ದಿನಗಳನ್ನು ಮರೆಯುವಂತಿಲ್ಲ. ಪತಿ ಜತೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಆ ಸಮಯದಲ್ಲಿ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು. ಪ್ರತಿನಿತ್ಯ ಪತ್ರಿಕೆ, ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದ ಕೋವಿಡ್ ಸುದ್ದಿ ನೋಡುವಾಗ ಲಾಕ್‌ಡೌನ್ ಮೊದಲಿನ ದಿನಗಳು ಹಿಂದಿರುಗುವುದೇ ಎಂಬ ಆತಂಕ ಕಾಡುತ್ತಿತ್ತು.
ಚೇತನಾ, ಕಲ್ಲಾವು, ಉರ್ವ
ಅರ್ಥವಾಗದ ಆನ್ ಲೈನ್ ಕ್ಲಾಸ್
ಲಾಕ್‌ಡೌನ್ ಸಂದರ್ಭದಲ್ಲಿ ನಡೆಯುತ್ತಿದ್ದ ಆನ್‌ಲೈನ್ ತರಗತಿಗಳು ಸಾಮಾನ್ಯ ತರಗತಿಯಂತೆ ಅರ್ಥವಾಗುತ್ತಿರಲಿಲ್ಲ. ಕೆಲ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗದೇ ಇರುತ್ತಿದ್ದರೆ ಇನ್ನು ಕೆಲವರು ಮೊಬೈಲ್ ಆನ್ ಮಾಡಿ ಬೇರೆಯದೇ ಕೆಲಸದಲ್ಲಿ ತಲ್ಲೀನರಾ ಗುತ್ತಿದ್ದರು. ಶಿಕ್ಷಕರ ನೇರ ಸಂಪರ್ಕವಿಲ್ಲದ ಕಾರಣ ಆನ್‌ಲೈನ್ ತರಗತಿಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ಕಳೆದು ಕೊಂಡಿದ್ದರು. ಆನ್‌ಲೈನ್ ಕ್ಲಾಸ್‌ಗೆಂದು ಪೋಷಕರು ಕೊಟ್ಟ ಮೊಬೈಲ್‌ಗಳನ್ನು ಕೆಲ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಬಳಸಲು, ಗೇಮ್ಸ್ ಆಡಲು ಬಳಸುತ್ತಿರುವುದೂ ಕಂಡು ಬಂದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನ ಗಮನ ನೀಡುತ್ತಿರಲಿಲ್ಲ.
ಭವಾನಿಶ್ರೀ -ವಿದ್ಯಾರ್ಥಿನಿ, ಚಿಕ್ಕಕೋಲಿಗ
ಬ್ಯಾಂಕ್ ಸೇರಿದ ಆಭರಣಗಳು
ಚಿಕ್ಕಮಗಳೂರು ನಗರದ ಬೇಲೂರು ರಸ್ತೆ ಬದಿಯಲ್ಲಿ ಗೋಬಿ ಮಂಚೂರಿ ಅಂಗಡಿ ಇದ್ದ ನನಗೆ ಲಾಕ್‌ಡೌನ್ ಹೇರಿಕೆ ಭಾರೀ ಹೊಡೆತ ನೀಡಿತ್ತು. ಇದೇ ಆದಾಯನ್ನು ನೆಚ್ಚಿಕೊಂಡಿದ್ದ ನನಗೆ ಅಂಗಡಿ ಮುಚ್ಚಿದ್ದರಿಂದ ಮನೆ ಮಂದಿಯನ್ನು ಸಾಕುವುದು ಕಷ್ಟವಾಗಿತ್ತು. ಅದೆಷ್ಟೋ ದಿನಗಳನ್ನು ಅರೆ ಹೊಟ್ಟೆಯಲ್ಲೇ ಕಳೆದಿದ್ದೆ. ಮತ್ತೊಂದೆಡೆ ಸಾಲಗಾರರ ಕಾಟವೂ ವಿಪರೀತವಾಗಿತ್ತು. ಪಡಿತರ ಅಕ್ಕಿ ಸ್ವಲ್ಪ ಮಟ್ಟಿಗೆ ಹೊಟ್ಟೆ ತುಂಬಿಸಿದರೂ ಮನೆ ಬಾಡಿಗೆ, ಮಕ್ಕಳ ಶಾಲಾ ಫೀಸು ಕಟ್ಟಲು ಹೆಂಡತಿಯ ಚಿನ್ನ ಅಡವಿಡಬೇಕಾಗಿ ಬಂದಿತ್ತು.
ಮೋಹನ್‌ಕುಮಾರ್, ರಸ್ತೆ ಬದಿ ವ್ಯಾಪಾರಿ, ಚಿಕ್ಕಮಗಳೂರು
ನೆರವಾಗಿದ್ದು ಶಾಸಕರು ನೀಡಿದ ಅಕ್ಕಿ
ಗಂಡು ದೆಸೆ ಇಲ್ಲದ ನನಗೆ ಲಾಕ್‌ಡೌನ್ ಸಂದರ್ಭದಲ್ಲಿ ಜೀವನ ನಿರ್ವಹಣೆ ಸವಾಲಾಗಿತ್ತು. ಬೀಡಿ ಕಟ್ಟಿ, ಕೂಲಿ ಮಾಡಿ ಹಿರಿಯ ಮಗಳನ್ನು ಪಿಯುಸಿವರೆಗೆ ಕಲಿಸಿ ಮದುವೆ ಮಾಡಿಕೊಟ್ಟೆ. ಎಸೆಸೆಲ್ಸಿ ಮುಗಿಸಿದ ಮಗನ ಹೆಗಲಿಗೆ ಮನೆಯ ಜವಾಬ್ದಾರಿ ಬಿತ್ತು. ಶಾಮಿಯಾನದ ಕೆಲಸ ಮಾಡುತ್ತಿದ್ದ ಮಗ ಕೆಲಸದ ಸ್ಥಳದಲ್ಲೇ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ. ಕುಟುಂಬಕ್ಕೆ ಆಸರೆಯಾಗಿದ್ದ ಏಕೈಕ ಮಗನನ್ನು ಕಳೆದುಕೊಂಡ ನನಗೆ ಜೀವನ ನಡೆಸುವುದು ಮತ್ತಷ್ಟು ಕಷ್ಟವಾಗಿತ್ತು.
ಲಾಕ್‌ಡೌನ್ ಸಂದರ್ಭದಲ್ಲಿ ಶಾಸಕ ಯು.ಟಿ.ಖಾದರ್ ಅವರ ಅಕ್ಕಿಯ ನೆರವು ಬಿಟ್ಟರೆ ಬೇರೇನು ಸಿಕ್ಕಿರಲಿಲ್ಲ. ಆ ದಿನಗಳನ್ನು ಹಸಿವಿನಿಂದಲೇ ಕಳೆದಿದ್ದೆ.
ನಫೀಸಾ ಉರುಮಣೆ, ಮಂಜನಾಡಿ ಗ್ರಾಮ
ಆಟೊ ಬಿಟ್ಟು ಅಡಿಕೆ ತೋಟಕ್ಕೆ
ಆಟೊ ಚಾಲಕನಾಗಿದ್ದ ನಾನು ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಕುಟುಂಬ ನಿರ್ವಹಣೆಗಾಗಿ ಮನೆ ಸಮೀಪದ ಅಡಿಕೆ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗತೊಡಗಿದೆ. ಇದು ನನಗೆ ಅನಿವಾರ್ಯವಾಗಿತ್ತು. ಯಾಕೆಂದರೆ ಎರಡು ವರ್ಷಗಳ ಹಿಂದೆ ಸಾಲ ಮಾಡಿ ಖರೀದಿಸಿದ್ದ ರಿಕ್ಷಾದ ಕಂತು, ಇನ್ಶೂರೆನ್ಸ್ ಕಟ್ಟಲು ನನಗೆ ಬೇರೆ ಯಾವುದೇ ಆದಾಯ ಮಾರ್ಗಗಳಿರಲಿಲ್ಲ. ಕೂಲಿಯಿಂದ ಜೀವನ ಸಾಗುತ್ತಿದ್ದರೂ ತಂದೆ-ತಾಯಿಯ ಅನಾರೋಗ್ಯದ ಚಿಕಿತ್ಸೆಗೆ ಹಣ ಸಾಲುತ್ತಿರಲಿಲ್ಲ. ಪಡಿತರ ಚೀಟಿಯಲ್ಲಿ ಸಿಗುತ್ತಿದ್ದ ಅಕ್ಕಿ ನೆರವಾಗಿತ್ತು.
ರಾಜು, ಆಟೊ ಚಾಲಕ | ಮಾವಿನಕೆರೆ ಗ್ರಾಮ , ಕಳಸ ತಾಲೂಕು
ವೀಡಿಯೊ ಮೂಲಕ ಶಿಕ್ಷಣ
ಲಾಕ್‌ಡೌನ್ ಮರೆಯಲಾಗದ ಅನುಭವ. ಆ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳಬಾರದು ಎಂಬ ಉದ್ದೇಶದಿಂದ ಇಲಾಖೆಯ ಆದೇಶದಂತೆ ಮಕ್ಕಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಿ ಶಿಕ್ಷಣ ನೀಡಲಾಗುತ್ತಿತ್ತು. ವಾಟ್ಸ್‌ಆ್ಯಪ್ ಗುಂಪುಗಳನ್ನು ರಚಿಸಿ, ಕಲಿಕೆಯ ಸಣ್ಣ ಸಣ್ಣ ವೀಡಿಯೊಗಳನ್ನು ಮಾಡಿ ಅದನ್ನು ಮಕ್ಕಳಿಗೆ ಕಳುಹಿಸಿಕೊಡಲಾಗುತ್ತಿತ್ತು. ಮಕ್ಕಳಿಗೆ ಕಲಿಕೆಯ ಕಡೆಗೆ ಹೆಚ್ಚು ಗಮನ ನೀಡುವಲ್ಲಿ ಶ್ರಮಿಸಲಾಗಿತ್ತು. ಲಾಕ್‌ಡೌನ್ ಮುಗಿದರೂ ಕೊರೋನ ಆತಂಕ ದೂರವಾಗಿರಲಿಲ್ಲ.
ಪ್ರೆಸಿಲ್ಲಾ ಎವ್ಲಿನ್ ಡಿಸೋಜ, ಪ್ರಭಾರ ಮುಖ್ಯ ಶಿಕ್ಷಕಿ, ದ.ಕ. ಜಿಪಂ ಉ. ಹಿ.ಪ್ರಾ. ಶಾಲೆ, ಬೋಳಂತೂರು,
ಮರೀಚಿಕೆಯಾದ ಪಿಎಂ ಕೇರ್ ನಿಧಿ
ಕೊರೋನ ಹಿನ್ನೆಲೆಯಲ್ಲಿ ಯಾವುದೇ ಪೂರ್ವ ತಯಾರಿ, ಮುಂದಾಲೋಚನೆ ಇಲ್ಲದೇ ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ಲಾಕ್‌ಡೌನ್ ಘೋಷಿಸಿದ ಪರಿಣಾಮ ಶ್ರಮಜೀವಿಗಳ ಬದುಕು ಮೂರಾಬಟ್ಟೆಯಾಗಿತ್ತು. ಪ್ರಧಾನಿ ಮೋದಿಯ ಅವೈಜ್ಞಾನಿಕ ನಿರ್ಧಾರದಿಂದಾಗಿ ಲಕ್ಷಾಂತರ ಜನ ಸೋಂಕಿಗೆ ಜೀವ ಕಳೆದುಕೊಂಡರು.
ಸೋಂಕಿಗೆ ಚಿಕಿತ್ಸೆ ನೀಡುವ ಸಲುವಾಗಿ ಆಸ್ಪತ್ರೆಗಳಲ್ಲಿ ಸೂಕ್ತ ಔಷಧಿಗಳು, ಬೆಡ್, ವೈದ್ಯರು ಶುಶ್ರೂಷಕರ ವ್ಯವಸ್ಥೆ ಮಾಡದೇ ‘ತಟ್ಟೆ ಬಡಿಯಿರಿ’, ‘ದೀಪ ಹಚ್ಚಿರಿ’ ಎಂಬ ಪ್ರಧಾನಿಯ ಬೇಜವಾಬ್ದಾರಿ ಹೇಳಿಕೆಗಳೇ ದೇಶದಲ್ಲಿ ಮತ್ತಷ್ಟು ಸಂಕಷ್ಟಗಳನ್ನು ಸೃಷ್ಟಿಸಿತ್ತು.
ಸೂಕ್ತ ಚಿಕಿತ್ಸೆ ಲಭಿಸದೇ ರೋಗಿಗಳು ಆಸ್ಪತ್ರೆಯಲ್ಲಿ ನರಳಿದರು. ಸೋಂಕಿ ನಿಂದ ಮೃತಪಟ್ಟವರಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಲೂ ಸರಕಾರ ವಿಫಲವಾಯಿತು. ಲಾಕ್‌ಡೌನ್‌ನಿಂದ ಉದ್ಯೋಗ, ವ್ಯಾಪಾರ ಕಳೆದುಕೊಂಡವರಿಗೆ ಪುನರ್ವ ಸತಿ ಕಲ್ಪಿಸಲೂ ಸರಕಾರಕ್ಕೆ ಸಾಧ್ಯವಾಗಿಲ್ಲ. ಪಿಎಂ ಕೇರ್ ನಿಧಿ, 20 ಲಕ್ಷ ಕೋಟಿ ರೂ. ಪ್ಯಾಕೇಜ್ ಎಲ್ಲವೂ ಮರೀಚಿಕೆಯಾಗಿದೆ. ಯಾವುದೂ ಜನಸಾಮಾನ್ಯರ ಉಪಯೋಗಕ್ಕೆ ಬಂದಿಲ್ಲ.
ಎನ್.ಎಲ್.ಭರತ್‌ರಾಜ್, ಕರ್ನಾಟಕ ಪ್ರಾಂತ ರೈತಸಂಘ
ಔಷಧ ಖರೀದಿಸಲೂ ಹಣ ಇರಲಿಲ್ಲ
ನಾನು ಆಗ ತಾನೇ ಬಿ.ಇಡಿ ಮುಗಿಸಿ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದ್ದೆ. ಲಾಕ್‌ಡೌನ್‌ನಲ್ಲಿ ಎಲ್ಲ ಶಾಲಾ-ಕಾಲೇಜುಗಳು ರಜೆ ಘೋಷಿಸಿದವು. ಆನ್‌ಲೈನ್ ತರಗತಿಗಳು ಆರಂಭವಾದರೂ, ಸಂಸ್ಥೆಗಳಲ್ಲಿ ಸರಿಯಾದ ಸಂಬಳವಿಲ್ಲದೇ ಊಟಕ್ಕೂ ಪರದಾಡುವಂತಹ ಸ್ಥಿತಿ ಉಂಟಾಯಿತು. ಆರ್ಥಿಕ ಸಮಸ್ಯೆಯಿಂದಾಗಿ ಔಷಧ ಖರೀದಿಸಲಾಗದ ಸ್ಥಿತಿ ಉಂಟಾಗಿದ್ದೂ ಇದೆ.
ವಾಸ ಹಳ್ಳಿಯಲ್ಲಾದರೂ ಯಾರೂ ಯಾರ ಮನೆ ಬಾಗಿಲಿಗೂ ಹೋಗುವಂತಿರಲಿಲ್ಲ. ಇನ್ನೆಷ್ಟು ದಿನ ಇದೇ ಪರಿಸ್ಥಿತಿ ಮುಂದುವರಿಯುತ್ತೋ ಎಂಬ ಆತಂಕ ಮನೆ ಮಾಡಿತ್ತು. ಬಡ, ಮಧ್ಯಮ ವರ್ಗದ ಜನರು ಕಷ್ಟದಿಂದಲೇ ದಿನ ದೂಡಿದ್ದರು. ಲಾಕ್‌ಡೌನ್ ದಿನಗಳ ನೆನಪು ಈಗಲೂ ನಮ್ಮನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತಿದೆ.
ತಿಲಕ್ ಲಕ್ಷ್ಮೀಪುರ, ಉಪನ್ಯಾಸಕರು, ತುಮಕೂರು
ಅನಿವಾರ್ಯವಾದ ಡಿಜಿಟಲ್ ವ್ಯವಸ್ಥೆ
ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾನು ಲಾಕ್‌ಡೌನ್ ಸಂದರ್ಭದಲ್ಲಿ ಅನಿವಾರ್ಯವಾಗಿ ಡಿಜಿಟಲ್ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಾಯಿತು.
ಆನ್‌ಲೈನ್ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ಧಗೊಳಿಸುವುದು ಸವಾಲಾಗಿತ್ತು. ಸ್ಮಾರ್ಟ್‌ಫೋನ್ ಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳು ಸ್ವಲ್ಪ ಮಟ್ಟಿನ ಸಮಸ್ಯೆಯನ್ನೂ ಎದುರಿಸಿದ್ದರು. ವಿದ್ಯಾರ್ಥಿಗಳಿಗೆ ಅಧ್ಯಾಪಕರ ಸಂಪರ್ಕವೇ ಇಲ್ಲದಾಯಿತು.
ವೆಬಿನಾರ್ ಮೂಲಕ ತರಗತಿ, ಯೂಟ್ಯೂಬ್ ಮೂಲಕ ನೇರಪ್ರಸಾರ, ಲಿಂಕ್ ಹಂಚಿಕೊಳ್ಳುವುದು ಇವೆಲ್ಲವೂ ಮೊದಲ ಅನುಭವವಾದರೂ, ಮಾಡಲೇ ಬೇಕಾದ ಅನಿವಾರ್ಯತೆ ಇತ್ತು. ಕೊರೋನದಿಂದ ನಿರಂತರ ಕಲಿಕೆ, ವ್ಯಾಯಾಮ, ಮಾನಸಿಕ ಆರೋಗ್ಯ, ಮಾಧ್ಯಮ, ತಂತ್ರಜ್ಞಾನಗಳ ಪ್ರಾಮುಖ್ಯತೆಯನ್ನು ತಿಳಿದುಕೊಂಡೆ. ನಾನಂತೂ ಯೂಟ್ಯೂಬ್ ಎಂಬ ಗುರುವಿನ ಮೂಲಕ ವೀಡಿಯೊ ಎಡಿಟಿಂಗ್ ಸಾಫ್ ್ಟವೇರ್‌ಗಳು, ಸ್ಕ್ರೀನ್ ರೆಕಾರ್ಡಿಂಗ್, ಪರಿಣಾಮಕಾರಿ ಆನ್‌ಲೈನ್ ಪಾಠ, ಅದೆಷ್ಟೋ ಅಪ್ಲಿಕೇಷನ್‌ಗಳ, ಉಪಕರಣಗಳ ಪರಿಚಯ ಮಾಡಿಕೊಂಡೆ. ಲಾಕ್‌ಡೌನ್ ಮುಗಿದ ಬಳಿಕ ಕಾಲೇಜಿಗೆ ಹೋದಾಗ, ಮಳೆನೀರು ಸೋರಿ ಕ್ಯಾಮರಾ ಸೇರಿದಂತೆ ಇಡೀ ಸ್ಟುಡಿಯೋಗೆ ಬೂಸ್ಟ್ ಹಿಡಿದದ್ದು ನೋಡಿ ಚಿಂತಾಕ್ರಾಂತನಾಗಿದ್ದು ಮರೆಯಲು ಸಾಧ್ಯವಿಲ್ಲ.
‘ಕಾಲಾಯ ತಸ್ಮೈ ನಮಃ’. ಕಾಲದೊಂದಿಗೆ ಅದೆಷ್ಟೋ ನೋವಿನ ಸಂಗತಿಗಳ ಮಧ್ಯೆ ಕೆಲ ಹೊಸ ವಿಚಾರಗಳನ್ನು ಕಲಿತದ್ದೇ ಲಾಭ!
ಗುರುಪ್ರಸಾದ್ ಟಿ.ಎನ್, ಹವ್ಯಾಸಿ ಪತ್ರಕರ್ತ, ಮಂಗಳೂರು
ಆತ್ಮೀಯರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲೂ ಸಾಧ್ಯವಾಗಿಲ್ಲ
ಕೋವಿಡ್ ಲಾಕ್‌ಡೌನ್ ಕಾಲದ ನೆನಪುಗಳು ಭೀಕರ. ಬೆಂಗಳೂರಿನ ಪತಿ ಮನೆಯಲ್ಲಿದ್ದ ನಾನು ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ಚಿಕ್ಕಮಗಳೂರಿನಲ್ಲಿರುವ ತವರು ಮನೆಗೆ ಹೊರಟೆ.
ಈ ನಡುವೆ ಪತಿಯ ಚಿಕ್ಕಮ್ಮನಿಗೂ ಕೊರೋನ ಸೋಂಕು ತಗುಲಿತ್ತು. ಇದರಿಂದಾಗಿ ಪತಿಯೂ ವಿಚಲಿತರಾದರು. ಮತ್ತೊಂದೆಡೆ ಅತ್ತಿಗೆಯ ಸೋದರತ್ತೆ ಕುಸಿದು ಬಿದ್ದು ಹಾಸಿಗೆ ಹಿಡಿದಿದ್ದರು. ಕೊರೋನ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಿನ ನಿಯಮಗಳಿದ್ದುದರಿಂದ ಅವರಿಗೆ ಚಿಕಿತ್ಸೆ ಕೊಡಿಸುವುದೂ ಸವಾಲಾಗಿತ್ತು. ಸೂಕ್ತ ಚಿಕಿತ್ಸೆ ಸಿಗದೇ ಅವರು ಮೃತಪಟ್ಟಿದ್ದರು. ನಾವು ಕುಟುಂಬ ಸಮೇತ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾದೆವು. ಈ ನಡುವೆ ಅಲ್ಲಿ ಸೇರಿದ ಹಲವರಿಗೆ ಕೊರೋನ ಸೋಂಕು ತಗುಲಿತ್ತು. ಈ ಪೈಕಿ ಕೆಲವರು ಸೋಂಕಿನಿಂದ ಮೃತಪಟ್ಟರು. ವಿಪರ್ಯಾಸವೆಂದರೆ ಸೋಂಕು ಇನ್ನಷ್ಟು ಹರಡುವ ಭಯ, ಸರಕಾರದ ಕಠಿನ ನಿಯಮಗಳಿಂದಾಗಿ ಕೊರೋನದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.
ಕೇವಲ ಅವರ ಫೋಟೊಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅವರಿಗೆ ಸಂತಾಪ ಸೂಚಿಸಿದೆವು. ಒಟ್ಟಿನಲ್ಲಿ ಕೊರೋನ ಕಾಲವು ಹಲವು ನೋವಿನ ನೆನಪುಗಳನ್ನು ನಮಗೆ ಕೊಟ್ಟಿದೆ.
ನಳಿನಾ ಡಿ. -ಗೃಹಿಣಿ, ಬೆಂಗಳೂರು
'ಲಾಕ್ ಡೌನ್' ಊಹಿಸಲೂ ಅಸಾಧ್ಯ
ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಸಲುವಾಗಿ 2020ರ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಸರಕಾರ ಹೇರಿದ ‘ಲಾಕ್‌ಡೌನ್’ ದಿನಗಳನ್ನು ನೆನಪಿಸುವಾಗ ಮನಸ್ಸು ಭಾರವಾಗುತ್ತದೆ. ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುವ ನನ್ನಂಥವನಿಗೆ ಈ ‘ಲಾಕ್‌ಡೌನ್’ನ ದಿನಗಳು ಕರಾಳ ದಿನಗಳೇ ಆಗಿದ್ದವು. ರಸ್ತೆ ಅಪಘಾತದಿಂದ ಗಾಯಗೊಂಡು ಚೇತರಿಸಿಕೊಂಡು ಮತ್ತೆ ಕೂಲಿ ಕೆಲಸಕ್ಕೆ ಹೋಗಬೇಕು ಅನ್ನುವಷ್ಟರಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಆ ಎರಡು-ಮೂರು ತಿಂಗಳ ಬದುಕಿನ ದಿನಗಳನ್ನು ಊಹಿಸಲೂ ಅಸಾಧ್ಯ. ಕೆಲಸ ಮಾಡಲು ಹೊರಗೆ ಹೋಗುವಂತಿಲ್ಲ. ಕೆಲವು ದಿನ ಊಟೋಪಚಾರಕ್ಕೂ ಸಮಸ್ಯೆಯಾಗಿತ್ತು. ದಾನಿಯೋರ್ವರು ನೀಡಿದ ಹಣದಿಂದ ಬಟ್ಟೆ ಬರೆ ಖರೀದಿಸಿ ಹಬ್ಬ ಆಚರಿಸಿದೆ. ದಾನಿಗಳ ಆರ್ಥಿಕ ನೆರವು, ಅವರು ನೀಡಿದ ಆಹಾರದ ಕಿಟ್‌ಗಳು ಬದುಕು ಚೇತರಿಸುವಂತೆ ಮಾಡಿತ್ತು. ಈ ರೀತಿಯ ಪರಿಸ್ಥಿತಿ ಇನ್ನೆಂದೂ ಬಾರದಿರಲಿ.
ರಝಾಕ್ ಎಂ. ಉರುಮಣೆ, ಮಂಜನಾಡಿ
ಗಂಟೆ, ಜಾಗಟೆ ಬಾರಿಸಿದ ಸರಕಾರ; ಕೈ ಹಿಡಿದ ಕೃಷಿ
ಕೊರೋನ ನಿರ್ವಹಣೆಯಲ್ಲಿ ಸರಕಾರ ಸಂಪೂರ್ಣ ವಿಫಲವಾದರೂ ಕೃಷಿ ಮಾತ್ರ ಕೆಲ ಜನರ ಕೈಹಿಡಿದಿತ್ತು. ಕೋವಿಡ್ ಸಮಯದಲ್ಲಿ ನಗರ ಪ್ರದೇಶದಲ್ಲಿ ವಾಸವಾಗಿದ್ದ ಬಹುತೇಕ ಯುವಜನರು ಮತ್ತೆ ಹಳ್ಳಿಗೆ ಹೋಗಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡರು. ಈ ಮೂಲಕ ತಮ್ಮ ಜೀವನ ನಿರ್ವಹಣೆ ಮಾಡಿದ್ದಾರೆ. ಸರಕಾರ ಮಾತ್ರ ಪಿಡುಗನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು ಬಿಟ್ಟು, ಗಂಟೆ, ಜಾಗಟೆ ಬಾರಿಸುವುದರಲ್ಲೇ ಸಮಯ ಕಳೆಯಿತು. ಜನರಿಗೆ ಬೇಕಾದ ಆಹಾರ ಒದಗಿಸಲಿಲ್ಲ. ಕೆಲ ಸಂಘ-ಸಂಸ್ಥೆಗಳು ದಿನಸಿ ಸಾಮಗ್ರಿಗಳನ್ನು ಹಂಚಿದ್ದು ಬಡವರಿಗೆ ಸಹಾಯವಾಗಿತ್ತು. ಹೊರ ಜಗತ್ತಿನ ಸಂಪರ್ಕವಿಲ್ಲದೇ ಮನೆಯೊಳಗೆ ಕುಳಿತು ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಲಾಕ್‌ಡೌನ್ ಸಡಿಲಿಕೆಯಿಂದ ನಿರಾಳರಾಗಿದ್ದರು.
ನಯನಾ, ತುಮಕೂರು
ಜೀವನ ನಿರ್ವಹಣೆಗೆ ಪುಡ್ ಡೆಲಿವರಿ
ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ನಾನು ಕೆಲಸ ಮಾಡುತ್ತಿದ್ದ ಕಂಪೆನಿ ಸ್ಥಗಿತಗೊಂಡಿತ್ತು.ಬಳಿಕ ಹಲವೆಡೆ ‘ವರ್ಕ್ ಫ್ರಂ ಹೋಂ’ ಹುಡುಕಾಡಿದೆ. ಎಲ್ಲಿಯೂ ಕೆಲಸ ಸಿಗಲಿಲ್ಲ. ತಿಂಗಳು ಕೊನೆಯಾಗುತ್ತಿದ್ದಂತೆ ರೂಮ್ ಬಾಡಿಗೆ, ಸಾಲದ ಕಂತು ಪಾವತಿಸಲೂ ಹಣ ಇಲ್ಲದಾಯಿತು. ಇವೆಲ್ಲವನ್ನೂ ಸರಿದೂಗಿಸಲು ಖಾಸಗಿ ಸಂಸ್ಥೆಯೊಂದರಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸಿದೆ. ಇದರಿಂದ ರೂಮ್ ಬಾಡಿಗೆ ಕಟ್ಟಲು ಸಾಧ್ಯವಾಯಿತಾದರೂ ಸಾಲದ ಕಂತು ಕಟ್ಟಲಾಗಲಿಲ್ಲ. ಡೆಲಿವರಿ ಕೆಲಸ ಹೊಸ ಅನುಭವ ಆಗಿದ್ದರಿಂದ ಹೆಚ್ಚಿನ ಸಂಪಾದನೆ ಸಾಧ್ಯವಾಗಲಿಲ್ಲ. ಈ ನಡುವೆ ರೂಮ್‌ನಲ್ಲಿದ್ದ ಗೆಳೆಯನಿಗೆ ಕೊರೋನ ಸೋಂಕು ತಗುಲಿತ್ತು. ಬಸ್ ವ್ಯವಸ್ಥೆ ಇಲ್ಲದಿದ್ದರಿಂದ ಆತನನ್ನು ಊರಿಗೆ ಕಳುಹಿಸುವುದೂ ಸವಾಲಾಗಿತ್ತು. ಕೊನೆಗೆ ಪರಿಚಯಸ್ಥರ ವಾಹನದಲ್ಲಿ ಹೇಗೋ ಗೆಳೆಯನನ್ನು ಊರಿಗೆ ಕಳುಹಿಸಿದೆ. ಬಹಳಷ್ಟು ಆರ್ಥಿಕ ಮತ್ತಿತರ ಸಮಸ್ಯೆಗಳು ಇದ್ದರೂ ಊರಿಗೆ ಹೋಗುವಂತಿರಲಿಲ್ಲ. ಯಾಕೆಂದರೆ ಊರಿಗೆ ಹೋದರೆ ಮನೆಯಲ್ಲೇ ಸುಮ್ಮನೆ ಇರಬೇಕಿತ್ತು. ಅಲ್ಲಿ ಆದಾಯ ಮಾರ್ಗಗಳೇನೂ ಇರಲಿಲ್ಲ. ಈ ಕಾರಣದಿಂದ ನಗರದಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿ ದಿನ ದೂಡಿದೆ.
ಶಿವಲಿಂಗಮೂರ್ತಿ ಎಂ., ಬೆಂಗಳೂರು
ಬಿಜೆಪಿ ಸರಕಾರದಿಂದ ಶಿಷ್ಯವೇತನ ಸ್ಥಗಿತ
ಕೊರೋನ ಎರಡನೇ ಅಲೆಯ ಸಂದರ್ಭದಲ್ಲಿ ನಾನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಡಿ ಪತ್ರಿಕೋದ್ಯಮ ತರಬೇತಿಯನ್ನು ಪಡೆಯುತ್ತಿದ್ದೆ. ಈ ಯೋಜನೆಯಡಿ ಪ್ರತೀ ಜಿಲ್ಲೆಗೆ ಇಬ್ಬರಂತೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದವರನ್ನು ನೇಮಕ ಮಾಡಿಕೊಂಡು, ಅವರಿಗೆ ಪ್ರತೀ ತಿಂಗಳು 15 ಸಾವಿರ ರೂ. ಶಿಷ್ಯ ವೇತನವನ್ನು ಸರಕಾರ ನೀಡುತ್ತಿತ್ತು.
ಆದರೆ ಕೊರೋನ ಎರಡನೇ ಅಲೆಯ ಲಾಕ್‌ಡೌನ್ ಬಳಿಕ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ನಮಗಾಗಿ ಮೀಸಲಿಟ್ಟ ಅನುದಾನವನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿತ್ತು. ಇದರಿಂದ ನಾನು ಸೇರಿ ನನ್ನಂತೆ ತರಬೇತಿಯನ್ನು ಪಡೆಯುತ್ತಿದ್ದ ಕೆಲವು ಸ್ನೇಹಿತರು ಕೆಲಸವಿಲ್ಲದೆ ಕೆಲಕಾಲ ಅಲೆದಾಡಬೇಕಾಯಿತು.
ತರಬೇತಿಯನ್ನು ಸ್ಥಗಿತ ಮಾಡದೇ ಮುಂದುವರಿಸುವಂತೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರಿಗೆ, ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊರೋನ ಸಂದರ್ಭದಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದೆ ಎಂದು ವರದಿಯಾದಾಗಲೆಲ್ಲ, ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಏಕೆ ಬಳಸಿಕೊಂಡಿತು ಎಂಬ ಪ್ರಶ್ನೆ ಕಾಡತೊಡಗಿದೆ.
ಅನಿಲ್ ಕುಮಾರ್ ಎಂ. ಹೊಸಕೋಟೆ
ಸೋಂಕು ತಗುಲಿದಾಗ ಕಾಡಿದ ಜೀವಭಯ
ಕೋವಿಡ್ ಎರಡನೇ ಅಲೆಯಲ್ಲಿ ನನಗೂ ಸೋಂಕು ತಗುಲಿತ್ತು. ಜ್ವರ, ನೆಗಡಿ, ಸುಸ್ತು ಇದ್ದ ನಾನು ಪರೀಕ್ಷೆ ಮಾಡಿಸಿದಾಗ ಸೋಂಕು ಇರುವುದು ತಿಳಿದು ಬಂತು. ಪತ್ರಕರ್ತನಾಗಿ ಇತರರಿಗೆ ಧೈರ್ಯ ತುಂಬುತ್ತಿದ್ದ ನಾನು ಕೋವಿಡ್ ಪಾಸಿಟಿವ್ ಬಂದ ತಕ್ಷಣ ಭಯಕ್ಕೆ ಬಿದ್ದೆ.
ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದೆ. ನನ್ನಂತೆ ಕೋವಿಡ್ ಚಿಕಿತ್ಸೆಗೆಂದು ದಾಖಲಾದವರ ಪರಿಸ್ಥಿತಿ ನೋಡಿದಾಗ ಜೀವಭಯ ಕಾಡತೊಡಗಿತು. ನನ್ನ ಎದುರಿನ ಬೆಡ್‌ನಲ್ಲಿದ್ದ ಸುಮಾರು ೩೫ ವರ್ಷದ ಯುವಕನಿಗೆ ಸೋಂಕು ತೀವ್ರವಾಗಿ ತಗುಲಿತ್ತು. ಆತನಿಗೆ ಉಸಿರಾಡುವುದೂ ಕಷ್ಟವಾಗಿತ್ತು. ಒಂದು ದಿನ ಆತನ ಬಳಿ ತೆರಳಿ ಧೈರ್ಯ ತುಂಬಿದೆ. ಆದರೆ ಒಂದು ದಿನ ಬೆಳಗ್ಗೆ ಆತ ಚಿಕಿತ್ಸೆ ಫಲಿಸದೇ ಮೃತಪಟ್ಟ. ವಿಷಯ ತಿಳಿದು ಭೂಮಿಯೇ ಕುಸಿದಂತಾಯಿತು. ಭಯ ಹೆಚ್ಚಾಯಿತು. ೧೪ ದಿನಗಳ ಕಾಲ ಧೈರ್ಯ ಮಾಡಿ ಆಸ್ಪತ್ರೆಯಲ್ಲಿ ಕಳೆದೆ. ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಾಗ ನಿಟ್ಟುಸಿರು ಬಿಟ್ಟೆ.
ಎ.ಫಕ್ರುದ್ದೀನ್, ದಾವಣಗೆರೆ
ಮೃತದೇಹ ಸಾಗಿಸಲು 10 ಸಾವಿರ ರೂ. ಬಾಡಿಗೆ
ಕೊರೋನದಿಂದ ಮೃತಪಟ್ಟ ನನ್ನ ತಂದೆಯ ಅಂತ್ಯ ಸಂಸ್ಕಾರ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆ ನೆನಪುಗಳು ಈಗಲೂ ಕಣ್ಣೀರು ತರಿಸುತ್ತಿದೆ. ಮೊದಲು ಕೊರೋನದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಸರಕಾರವೇ ಮಾಡುತ್ತಿದ್ದರೆ, ನನ್ನ ತಂದೆ ಮೃತಪಟ್ಟ ಸಂದರ್ಭದಲ್ಲಿ ಆ ನಿಯಮದಲ್ಲಿ ಬದಲಾವಣೆ ಆಗಿತ್ತು. ನೂತನ ಸುತ್ತೋಲೆ ಸಿಕ್ಕಿಲ್ಲ ಎಂಬ ನೆಪ ಹೇಳಿ ನನ್ನ ತಂದೆಯ ಮೃತದೇಹವನ್ನು ಬಿಟ್ಟು ಕೊಡಲು ಹಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಒಪ್ಪಿರಲಿಲ್ಲ. ಕೊನೆಗೂ ಅಧಿಕಾರಿಗಳ ಬಳಿ ಮನವಿ ಮಾಡಿ ಮೃತದೇಹ ಪಡೆದುಕೊಂಡೆವು. ಹಾಗಂತ ಎಲ್ಲವೂ ನಮ್ಮ ಕೈಯಲ್ಲಿ ಇರಲಿಲ್ಲ. ಸರಕಾರದ ಹಲವು ಷರತ್ತುಗಳ ನಡುವೆ ತಂದೆಯ ಅಂತ್ಯಸಂಸ್ಕಾರವನ್ನು ಅತ್ಯಂತ ಗೌರವಪೂರ್ವಕವಾಗಿ ನಡೆಸಿದೆವು.
ಆಸ್ಪತ್ರೆಯಿಂದ 40 ಕಿಲೋಮೀಟರ್ ದೂರವಿರುವ ನಮ್ಮ ಊರಿಗೆ ಮೃತದೇಹ ತರಲು 10 ಸಾವಿರ ರೂ. ಆ್ಯಂಬುಲೆನ್ಸ್ ಬಾಡಿಗೆ ನೀಡಿದ್ದೆವು.
ಜ್ವರದ ಹಿನ್ನೆಲೆಯಲ್ಲಿ ನನ್ನ ತಂದೆಯನ್ನು ತಪಾಸಣೆಗೊಳಪಡಿಸಿದಾಗ ಕೊರೋನ ಸೋಂಕು ಇರುವುದು ತಿಳಿದು ಬಂದಿತ್ತು. ಸುಮಾರು 7 ದಿನಗಳ ಕಾಲ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರನ್ನು ನೇರವಾಗಿ ನೋಡಲು ಸಾಧ್ಯವಾಗಲೇ ಇಲ್ಲ. ಅವರಿಗಾಗಿ ಆಸ್ಪತ್ರೆಯ ಮುಂಭಾಗದಲ್ಲಿ ಕಳೆದ ದಿನಗಳು, ವೀಡಿಯೊ ಕರೆ ಮೂಲಕ ಅವರ ಜೊತೆಗೆ ಕಳೆದ ಕ್ಷಣಗಳು, ಎಲ್ಲವೂ ಇಂದಿಗೂ ಕಾಡುತ್ತಿದೆ.
ಇಮ್ರಾನ್ ಶರೀಫ್, ಸಕಲೇಶಪುರ
ಅಗತ್ಯ ವಸ್ತು ಖರೀದಿಗೂ ಹೊರಹೋಗಲಾರದ ಸ್ಥಿತಿ
ನಾನು ಮೂಲತಃ ಕಿನ್ನಿಗೋಳಿ ನಿವಾಸಿ. ಕೆಲಸದ ನಿಮಿತ್ತ ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವೆ. ಕದ್ರಿಯ ಪಾಲಿಟೆಕ್ನಿಕ್ ಬಳಿಯ ಹೊಟೇಲ್ವೊಂದರಲ್ಲಿ ನಾನು ಅಡುಗೆ ಕೆಲಸ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ಕೊರೋನ ಹಾವಳಿ ಕಾಣಿಸಿತು. ಲಾಕ್ಡೌನ್ ಹೇರಲಾಯಿತು. ಅನಿವಾರ್ಯವಾಗಿ ಹೊಟೇಲ್ ಮುಚ್ಚಲ್ಪಟ್ಟಿತು. ಉದ್ಯೋಗವಿಲ್ಲದೇ ಮನೆ ಸೇರಿ ತಾಯಿ, ತಮ್ಮ, ಪತ್ನಿ ಮತ್ತು ಮಗುವಿನ ಜೊತೆ ಕಾಲ ಕಳೆಯತೊಡಗಿದೆ. ಕೆಲಸವಿಲ್ಲದ ಕಾರಣ ಆಹಾರದ ಸಮಸ್ಯೆಯೂ ಎದುರಾಗಿತ್ತು. ಅಗತ್ಯ ವಸ್ತುಗಳಿಗೂ ಮನೆಯಿಂದ ಹೊರಗೆ ಹೋಗಲಾಗದ ಸ್ಥಿತಿಯಿತ್ತು. ತಿನ್ನಲು ಮಾತ್ರವಲ್ಲ, ಅಗತ್ಯ ಸಾಮಗ್ರಿಗಳ ಖರೀದಿಯೂ ಅಸಾಧ್ಯವಾಗಿತ್ತು. ಕೊನೆಗೆ ಹೇಗೋ ದಿನದೂಡಿದೆವು. ಸರಕಾರ ಹಂತ ಹಂತವಾಗಿ ಲಾಕ್ಡೌನ್ ಸಡಿಲಿಸುತ್ತಲೇ ನಾವು ನೆಮ್ಮದಿಯ ನಿಟ್ಟುಸಿರು ಬಿಟ್ಟೆವು. ಆ ದಿನಗಳನ್ನು ನೆನಪಿಸಲು ಭಯವಾಗುತ್ತದೆ. ಅದು ಮತ್ತೆ ಎಂದೂ ಬಾರದಿರಲಿ.
ರಾಘವೇಂದ್ರ ದೇವಾಡಿಗ, ಉದಯನಗರ ಮಂಗಳೂರು
ಮಿತಿಮೀರಿದ ಸಾಲಗಾರರ ಕಿರುಕುಳ
ನನ್ನ ಪತಿ ನಡೆಸುತ್ತಿದ್ದ ಕೋಳಿ ಅಂಗಡಿಯಿಂದಾಗಿ ಜೀವನ ಸಾಗುತ್ತಿತ್ತು. ಆದರೆ ದಿಢೀರ್ ಲಾಕ್ಡೌನ್ ಘೋಷಣೆಯಿಂದ ನಮ್ಮ ಕೋಳಿ ಅಂಗಡಿಯನ್ನೂ ಮುಚ್ಚಬೇಕಾಯಿತು. ತಿಂಗಳು ಗಟ್ಟಲೇ ಲಾಕ್ಡೌನ್ ಮುಂದುವರಿದಿದ್ದರಿಂದ ಜೀವನ ನಿರ್ವಹಣೆ ಕಷ್ಟವಾಯಿತು. ನಾಲ್ಕು ಮಕ್ಕಳಿರುವ ನಮ್ಮ ಕುಟುಂಬಕ್ಕೆ ಒಪ್ಪೊತ್ತಿನ ಊಟಕ್ಕೂ ಸಮಸ್ಯೆ ಎದುರಾಯಿತು. ಮನೆ ಬಾಡಿಗೆ ಕಟ್ಟಲೂ ಹಣ ಇಲ್ಲದಾಯಿತು. ಕೋಳಿ ಅಂಗಡಿ ಆರಂಭಿಸಲು ಹಣ ಸಾಲ ಪಡೆದಿದ್ದು, ಸಾಲ ಮರು ಪಾವತಿ ಮಾಡುವಂತೆ ಸಾಲ ನೀಡಿದವರ ಒತ್ತಡ ಜೋರಾಯಿತು. ಲಾಕ್ಡೌನ್ ಎಷ್ಟು ದಿನ ಇರಲಿದೆ, ಕೊರೋನ ನಿರ್ಮೂಲನೆಯಾಗದಿದ್ದರೆ ಮುಂದೇನು ಮೊದಲಾ ದವುಗಳು ಉತ್ತರವಿಲ್ಲದ ಪ್ರಶ್ನೆಗಳಾಗಿದ್ದವು. ಪಡಿತರ ಅಂಗಡಿಯಲ್ಲಿ ಸಿಗುತ್ತಿದ್ದ ಅಕ್ಕಿ, ಸಂಘ ಸಂಸ್ಥೆಗಳು ನೀಡಿದ ಆಹಾರ ಧಾನ್ಯಗಳು ನಮ್ಮ ಹಸಿವಿನ ತೀವ್ರತೆಯನ್ನು ಕಡಿಮೆ ಮಾಡಿದ್ದವು.
ಕೊರೋನ ಕಡಿಮೆ ಆಯಿತು. ಲಾಕ್ಡೌನ್ ಕೂಡಾ ಸಡಿಲವಾಯಿತು. ಆದರೆ ನಮ್ಮ ಕಷ್ಟ ಮಾತ್ರ ನಿವಾರಣೆಯಾಗಿಲ್ಲ. ವ್ಯಾಪಾರ ಮೊದಲಿನಂತಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಪಡೆದ ಸಾಲ ಮುಗಿದಿಲ್ಲ. ಈ ನಡುವೆ ಸರಕಾರದ ಗ್ಯಾರಂಟಿ ಯೋಜನೆಗಳು ನಮ್ಮ ಕಷ್ಟಗಳಿಗೆ ಸ್ವಲ್ಪ ಮಟ್ಟಿನ ನೆರವಾಗಿದೆ.
ಶಬೀನ್ ತಾಜ್ -ಗೃಹಿಣಿ | ಬೆಸಗರಹಳ್ಳಿ, ಮಂಡ್ಯ
ಮುಚ್ಚಿದ ಆದಾಯ ಮಾರ್ಗ
ವೃತ್ತಿಯಲ್ಲಿ ಆಟೊ ಚಾಲಕನಾಗಿದ್ದ ನಾನು ಹವ್ಯಾಸಿ ಕಲಾವಿದ. ಆಟೊ ಚಲಾಯಿಸಿ ಮತ್ತು ಮನರಂಜನಾ ಕಾರ್ಯಕ್ರಮಗಳ ಮೂಲಕ ಬಂದ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೆ. ಆದರೆ ದಿಢೀರ್ ಲಾಕ್ಡೌನ್ ನನ್ನ ಎರಡೂ ಆದಾಯ ಮಾರ್ಗಗಳನ್ನು ಮುಚ್ಚಿತ್ತು.
ಆಟೊ ಚಾಲನೆಗೆ ಷರತ್ತುಬದ್ಧ ಅನುಮತಿ ಇದ್ದರೂ, ಪ್ರಯಾಣಿಕರು ಇರಲಿಲ್ಲ. ಮನರಂಜನಾ ಕಾರ್ಯ ಕ್ರಮಗಳೂ ನಿಂತ ಪರಿಣಾಮ ತೀವ್ರ ಆರ್ಥಿಕ ಸಮಸ್ಯೆ ಎದುರಾಯಿತು.
ಉಳಿತಾಯದ ಹಣ ಜೀವನ ನಿರ್ವಹಣೆ, ಆಟೊ ಕಂತು ಕಟ್ಟಿಯೇ ಮುಗಿಯಿತು. ಸರಕಾರದಿಂದ ಕೆಲ ಆಟೊ ಚಾಲಕರಿಗೆ ಐದು ಸಾವಿರ ರೂ. ಪರಿಹಾರ ಸಿಕ್ಕಿದ್ದು ಬಿಟ್ಟರೆ, ಬೇರೇನೂ ನೆರವು ಸಿಕ್ಕಿಲ್ಲ.
ಸಿದ್ದರಾಜು, ಆಟೊ ಚಾಲಕ- ಸ್ವಾಂದೇನಹಳ್ಳಿ, ತುಮಕೂರು
ಆಸ್ಪತ್ರೆಗಳಿಂದ ಲೂಟಿ
ಲಾಕ್ಡೌನ್ ಸಂದರ್ಭದಲ್ಲಿ ಜನ ಹಲವು ರೀತಿಯ ಸಂಕಷ್ಟಗಳನ್ನು ಅನುಭವಿಸಿದರು. ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದೇ ದೊಡ್ಡ ಸವಾಲಾಗಿತ್ತು. ಈ ನಡುವೆ ಸಣ್ಣ ಜ್ವರ ಬಂದರೂ ಆಸ್ಪತ್ರೆಗೆ ಹೋಗಲು ಭಯ. ಯಾಕೆಂದರೆ ರೋಗದ ಹೆಸರಿನಲ್ಲಿ ಆಸ್ಪತ್ರೆಗಳು ಜನ ಸಾಮಾನ್ಯರನ್ನು ಲೂಟಿ ಮಾಡುತ್ತಿತ್ತು. ಸಾವು-ನೋವುಗಳು ಸಂಭವಿಸಿದಾಗ ಜನ ಸಂಬಂಧಗಳನ್ನೇ ಮರೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅನೇಕ ಸಂಘ ಸಂಸ್ಥೆಗಳು ದಿನ ಬಳಕೆ ಸಾಮಗ್ರಿ ವಿತರಿಸುವ ಮೂಲಕ ಬಡವರಿಗೆ ನೆರವಾಗಿತ್ತು.
ಶುಭಲಕ್ಷ್ಮೀ ಹೆಜಮಾಡಿ, ಗೃಹಿಣಿ
ಭಯ ಬೀಳಿಸುತ್ತಿದ್ದ ಸಾವಿನ ಸುದ್ದಿ
ಕೊರೋನ ವಕ್ಕರಿಸಿದಾಗಲೇ ಭಯ ಮನೆ ಮಾಡಿತ್ತು. ಲಾಕ್ಡೌನ್ ಘೋಷಣೆಯಾದಾಗ ನಮ್ಮ ಆತಂಕ ಮತ್ತಷ್ಟು ಹೆಚ್ಚಾಗಿತ್ತು. ನಿರ್ಜನ ಬೀದಿ, ಪೊಲೀಸರ ತಾಕೀತು, ಆರೋಗ್ಯ ಅಧಿಕಾರಿಗಳ ಸೂಚನೆಗಳು ನಮ್ಮನ್ನು ಹೈರಾಣು ಮಾಡಿತ್ತು. ಒಬ್ಬರಿಗೊಬ್ಬರ ಸಂಪರ್ಕವಿರಲಿಲ್ಲ. ಸೋಂಕಿನಿಂದ ಮೃತಪಟ್ಟ ಸುದ್ದಿ ಕೇಳಿದಾಗ ಭಯ ಮತ್ತಷ್ಟು ಹೆಚ್ಚಾಗುತ್ತಿತ್ತು. ಸದ್ಯ ನಿರಾತಂಕವಾಗಿದ್ದೇವೆ. ಅಂದಿನ ನೆನಪುಗಳು ಈಗಲೂ ಮೈ ಜುಂ ಎನಿಸುತ್ತಿದೆ.
ಗುರುಸಿದ್ಧಯ್ಯ, ರೈತ, ನಂಜನಗೂಡು
ಕಲಾವಿದರ ಶೋಚನೀಯ ಸ್ಥಿತಿ
ವೃತ್ತಿಯಲ್ಲಿ ಉಪನ್ಯಾಸಕ, ಪ್ರವೃತ್ತಿಯಲ್ಲಿ ಸಂಗೀತ ಕಲಾವಿದನಾಗಿದ್ದ ನನಗೆ ಲಾಕ್ಡೌನ್ನಲ್ಲಿ ಜೀವನ ನಿರ್ವಹಣೆ ಕಷ್ಟವಾಗಿತ್ತು. ಲಾಕ್ಡೌನ್ ಘೋಷಣೆಯಾಗುತ್ತಲೇ ಕಾಲೇಜು ಬಾಗಿಲುಗಳು ಮುಚ್ಚಿದವು. ಸಂಜೆ ನಡೆಸುತ್ತಿದ್ದ ಸಂಗೀತ ತರಗತಿಗಳಿಗೂ ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಸಂಗೀತ ಕಾರ್ಯಕ್ರಮಗಳೂ ನಿಂತು ಹೋದವು. ಆದಾಯದ ಎಲ್ಲ ಬಾಗಿಲುಗಳು ಮುಚ್ಚಿದ ಪರಿಣಾಮ ಜೀವನ ನಡೆಸುವುದೇ ಸವಾಲಾಗಿತ್ತು.
ಸಂಗೀತ, ರಂಗಭೂಮಿ, ಯಕ್ಷಗಾನ, ಹಾಸ್ಯ ಕಲಾವಿದರು, ಕೊರೋನ ಕಾಲದಲ್ಲಿ ಕಾರ್ಯಕ್ರಮವಿಲ್ಲದೆ ಜೀವನವನ್ನು ನಡೆಸಲು ಹರಸಾಹಸಪಟ್ಟರು. ಅನೇಕ ಕಲಾವಿದರು ಕೊರೋನ ಎಂಬ ಕಾಯಿಲೆಗೆ ಜೀವವನ್ನು ಕಳೆದುಕೊಂಡರು.
ನೌಷಾದ್, ಹರ್ಲಾಪುರ್, ಹಿಂದೂಸ್ತಾನಿ ಗಾಯಕರು ಉಪನ್ಯಾಸಕರು ಕುವೆಂಪು ಶತಮಾನೋತ್ಸವ ಬಿಎಡ್ ಕಾಲೇಜು, ಶಿವಮೊಗ್ಗ
ಸವಾಲಾದ ಆನ್ಲೈನ್ ಶಿಕ್ಷಣ
ಲಾಕ್ಡೌನ್ ಸಂದರ್ಭದಲ್ಲಿ ಆನ್ಲೈನ್ ಮೂಲಕ ಶಿಕ್ಷಣ ನೀಡಿದ್ದು ಶಿಕ್ಷಕಿಯಾಗಿ ನನಗೆ ತೃಪ್ತಿ ಕೊಟ್ಟಿಲ್ಲ. ನೇರವಾಗಿ ಮಕ್ಕಳ ಮುಖ ನೋಡಿ ಅವರನ್ನು ಸಂಬೋಧಿಸುತ್ತಿದ್ದ ನಮಗೆ ಎಲ್ಲೋ ಒಂದು ಕಡೆ ಕುಳಿತಿರುವ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕ ಬೋಧಿಸುವುದು ಸಮಾಧಾನ ತರಲಿಲ್ಲ. ಆನ್ಲೈನ್ ತರಗತಿಗೆ ಎಲ್ಲ ವಿದ್ಯಾರ್ಥಿಗಳೂ ಹಾಜರಾಗುತ್ತಿರಲಿಲ್ಲ. ಹಾಜರಾದವರೂ ನೇರ ಕ್ಲಾಸಿನಲ್ಲಿ ಗಮನ ಕೊಟ್ಟಂತೆ ನಮ್ಮೆಡೆ ಗಮನ ಕೊಡುತ್ತಿರಲಿಲ್ಲ. ಆನ್ಲೈನ್ನಲ್ಲಿ ಮಕ್ಕಳ ಸಂಶಯ ನಿವಾರಣೆ, ಪಠ್ಯದ ಬಗ್ಗೆ ವಿಸ್ತೃತ ವಿವರಣೆ ಎಲ್ಲವೂ ನಮ್ಮ ಪಾಲಿಗೆ ಸವಾಲಾಗಿತ್ತು. ಲಾಕ್ಡೌನ್ ಸಮಯದಲ್ಲಿ ವೇತನವೂ ಸರಿಯಾಗಿ ಬರುತ್ತಿರಲಿಲ್ಲ
ನೀಲಮ್ಮ -ಸಹಾಯಕ ಶಿಕ್ಷಕಿ, ಹೊಸಕೋಟೆ
ನನ್ನ ಸೋಂಕು ತಾಯಿ, ತಮ್ಮನಿಗೂ ಹರಡಿತು
ನಮ್ಮ ಮನೆ ಸಮೀಪದಿಂದ ಹಲವರು ನಂಜನಗೂಡಿನ ಜ್ಯುಬಿಲಿಯಂಟ್ ಕಂಪೆನಿಗೆ ಕೆಲಸಕ್ಕೆ ಹೋಗುತ್ತಿದ್ದರು. ಆ ಕಂಪೆನಿಯಲ್ಲಿ ಕೊರೋನ ಸೋಂಕು ಹರಡಿದೆ ಎಂಬ ಸುದ್ದಿ ತಿಳಿದಾಗ ನಮಗೆಲ್ಲಾ ಆತಂಕ ಶುರುವಾಗಿತ್ತು. ಈ ಹಿಂದೆ ಕಾಲರಾ ರೋಗದಿಂದ ಹಲವು ಮಂದಿ ಇದೇ ರೀತಿ ಸಾವನ್ನಪ್ಪಿದ್ದರು ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಇದು ಅದಕ್ಕಿಂತಲೂ ಭೀಕರ ಎಂದು ತಿಳಿಯುತ್ತಿದ್ದಂತೆ ನಮಗೆ ಏನು ಮಾಡಬೇಕೆಂದು ತೋಚದಂತಾಯಿತು. ಜ್ಯುಬಿಲಿಯಂಟ್ ಕಂಪೆನಿಗೆ ಕೆಲಸಕ್ಕೆ ಹೋಗುತ್ತಿದ್ದ ನಮ್ಮ ನೆರೆಹೊರೆಯ ಹಲವರಿಗೆ ಸೋಂಕು ತಗುಲಿತ್ತು. ಸೈರನ್ ಹಾಕಿಕೊಂಡು ಬಂದು ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಬಳಿಕ ಸ್ಥಳೀಯಾಡಳಿತದಿಂದ ಅವರ ಮನೆ, ಅಲ್ಲಿನ ರಸ್ತೆಗಳನ್ನು ಸೀಲ್ಡೌನ್ ಮಾಡುತ್ತಿದ್ದರು. ಇವೆಲ್ಲವನ್ನು ನೋಡುವಾಗ ನಮ್ಮ ಆತಂಕ ಹೆಚ್ಚಾಗುತ್ತಿತ್ತು.
ಈ ನಡುವೆ ನನ್ನ ಆರೋಗ್ಯ ಹದಗೆಟ್ಟಿತು. ಪರೀಕ್ಷಿಸಿದಾಗ ಕೊರೋನ ಪಾಸಿಟಿವ್ ಇತ್ತು. ಭಯ ಮತ್ತಷ್ಟು ಹೆಚ್ಚಾಗತೊಡಗಿತು. ಕೆಲ ದಿನಗಳ ಬಳಿಕ ತಾಯಿ, ತಮ್ಮನಿಗೂ ಸೋಂಕು ಹರಡಿತು. ನಾವೆಲ್ಲರೂ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದೆವು. ನನ್ನ ಹೆಂಡತಿ ಮಕ್ಕಳು ಒಂದು ಕಡೆ ಇದ್ದರೆ, ವಯಸ್ಸಾದ ತಂದೆ ಇನ್ನೊಂದು ಕಡೆ ಇದ್ದರು. ಈ ನೆನಪುಗಳು ಇಂದಿಗೂ ನಮ್ಮಿಂದ ಮಾಸಿಲ್ಲ.
ಸೋಮಶೇಖರ ಮೂರ್ತಿ, ಹಾಲಿನ ವ್ಯಾಪಾರಿ, ಕೆ.ಎಚ್.ಬಿ.ಕಾಲನಿ, ನಂಜನಗೂಡು
ವೈದ್ಯರು ಸಿಗದೇ ಕಷ್ಟಪಟ್ಟಿದ್ದೆ
ಲಾಕ್ಡೌನ್ ಸಂದರ್ಭದಲ್ಲಿ ಕಣ್ಣು ನೋವು ಕಾಣಿಸಿ ಕೊಂಡಿದ್ದ ನನಗೆ ವೈದ್ಯರ ಬಳಿ ಹೋಗಲೂ ಆಗಿರಲಿಲ್ಲ. ಕಣ್ಣು ನೋವು ತೀವ್ರಗೊಂಡು ಕಣ್ಣಿನಿಂದ ರಕ್ತ ಬರತೊಡಗಿತು. ವೈದ್ಯರನ್ನು ಹುಡುಕುತ್ತಾ ರಸ್ತೆಯಲ್ಲಿ ಅಲೆದಾಡಿದೆ. ಕೊನೆಗೂ ವೈದ್ಯರೊಬ್ಬರು ಸಿಕ್ಕಿದರು. ಅವರು ಔಷಧ ನೀಡಿದ ಪರಿಣಾಮ ಎರಡು ದಿನದಲ್ಲಿ ಕಣ್ಣು ನೋವು ಕಡಿಮೆಯಾಗಿತ್ತು.
ನೂರ್ ಫಾತಿಮ, ದಾವಣಗೆರೆ
ಕೊರೋನದಲ್ಲೂ ‘ಧರ್ಮ’ ತಂದರು
ಕೊರೋನ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದ್ದರೂ ಸರಕಾರಗಳಿಗೆ ಅದರ ನಿಯಂತ್ರಣ ಸಾಧ್ಯವಾಗಿಲ್ಲ. ಆದರೆ ಮತಾಂಧತೆ ತುಂಬಿದ ಜನ ಕೊರೋನ ಒಂದು ಧರ್ಮದವ ರಿಂದಾಗಿ ಹರಡುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ವಿಕೃತ ಸಂತೋಷ ಪಡುತ್ತಿದ್ದರು. ದೇಶಾದ್ಯಂತ ಕೊರೋನ ಹಬ್ಬಲು ಮುಸ್ಲಿಮರೇ ಕಾರಣ ಎಂದು ಪ್ರಚಾರಪಡಿಸಲಾಗಿತ್ತು. ಇದಕ್ಕೆ ಹೆಚ್ಚಿನ ಮಾಧ್ಯಮಗಳೂ ಸಾಥ್ ನೀಡಿತ್ತು. ಆದರೆ ಈ ಸಂದರ್ಭದಲ್ಲಿ ಪ್ರಭುತ್ವ ಕೂಡಾ ಸುಮ್ಮನಿದ್ದುದು ವಿಪರ್ಯಾಸ.
ಕರಿಬಸಪ್ಪ ಎಂ., ದಾವಣಗೆರೆ
ಮಾತ್ರೆ ಸಿಕ್ಕಿದ್ದರಿಂದ ಜೀವ ಉಳಿಯಿತು
ಬಿಪಿ, ಶುಗರ್ ಇದ್ದ ನಾನು ದಿನ ಅದಕ್ಕಾಗಿ 6 ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ ಲಾಕ್ಡೌನ್ನಲ್ಲಿ ಮಾತ್ರೆ ಖಾಲಿಯಾದಾಗ ಮತ್ತೆ ಖರೀದಿಸಲು ಸಾಧ್ಯವಾಗಿರಲಿಲ್ಲ. ಆರ್ಥಿಕ ಸಮಸ್ಯೆ, ಸೀಲ್ಡೌನ್ ಮೊದಲಾದ ಕಾರಣಗಳಿಂದಾಗಿ ಮಾತ್ರೆ ಮುಗಿದು 8 ದಿನಗಳಾದರೂ ಖರೀದಿಸಲು ಸಾಧ್ಯವಾಗಿರಲಿಲ್ಲ. ಈ ನಡುವೆ ನನ್ನ ಆರೋಗ್ಯದಲ್ಲಿ ಏರುಪೇರಾಗಿತ್ತು. ನನ್ನ ಕಷ್ಟ ನೋಡಲಾಗದ ಮಗ ರಾತ್ರಿ ವೇಳೆ ಎಲ್ಲೋ ಕೆಲಸಕ್ಕೆ ಹೋಗಿ ಹಣ ಹೊಂದಿಸಿ ಮಾತ್ರೆ ತೆಗೆದುಕೊಂಡು ಬಂದಿದ್ದ. ಮಾತ್ರೆ ಸಿಕ್ಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದೆ.
ನಗೀನಾ ಬಾನು, ದಾವಣಗೆರೆ
ಚೇತರಿಸದ ವ್ಯಾಪಾರ
ನನ್ನದು ಕನ್ನಡಕ ವ್ಯಾಪಾರ. ಲಾಕ್ಡೌನ್ಗಿಂತ ಮುಂಚೆ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ಅದರಿಂದ ಜೀವನವೂ ನಿರಾತಂಕವಾಗಿ ಸಾಗುತ್ತಿತ್ತು. ಆದರೆ ಲಾಕ್ಡೌನ್ ಸಂದರ್ಭದಲ್ಲಿ ಇಳಿಕೆ ಕಂಡ ವ್ಯಾಪಾರ ಮತ್ತೆ ಮೊದಲಿನಂತೆ ಮೇಲೇರಲೇ ಇಲ್ಲ. ಇದೇ ವ್ಯಾಪಾರವನ್ನು ನಂಬಿಕೊಂಡು ಜೀವನ
ನಡೆಸುತ್ತಿದ್ದೇನೆ. ಹಿಂದಿನ ದಿನಗಳು ಯಾವಾಗ ಬರುತ್ತದೆಯೋ ಗೊತ್ತಿಲ್ಲ.
ಲಕ್ಷ್ಮೀಪತಿ, ಕನ್ನಡಕ ವ್ಯಾಪಾರಿ ಗುಡಿಬಂಡೆ
ಶಾಲಾ ಕಾಲೇಜುಗಳನ್ನೇ ಮರೆತಿದ್ದೆವು
ಲಾಕ್ಡೌನ್ನಲ್ಲಿ ಶಾಲಾ ಕಾಲೇಜುಗಳು ಮುಚ್ಚಿ ದ್ದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳನ್ನೇ ಮರೆತಿದ್ದರು. ಪರಸ್ಪರ ಸಂವಹನವಿಲ್ಲದೇ ಗೆಳೆಯರೂ ದೂರವಾಗಿದ್ದರು. ಆನ್ಲೈನ್ ಕಲಿಕೆ ನೆಪಮಾತ್ರಕ್ಕಷ್ಟೇ ಇತ್ತು. ಮೊಬೈಲ್ಗಳು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ಬಳಕೆಯಾಗುತ್ತಿದ್ದವು.
ಅಶ್ವಿನಿ ಶೇಖರಪ್ಪ ದ್ವಿತೀಯ ಬಿ ಇಡಿ, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಶಿವಮೊಗ್ಗ
ಆತಂಕದಿಂದಲೇ ದಿನ ಕಳೆದೆ
ಹೊಟೇಲ್ ಕಾರ್ಮಿಕನಾಗಿದ್ದ ನಾನು ಲಾಕ್ಡೌನ್ ಘೋಷಣೆಯಾದಾಗಲೇ ಮನೆ ಸೇರಿದ್ದೆ. ಉದ್ಯೋಗ ಇಲ್ಲದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಹಣ ಇರಲಿಲ್ಲ. ಸಂಪಾದನೆಯ ದಾರಿ ಹುಡುಕಿದರೂ ಕೂಡಿ ಬರಲಿಲ್ಲ. ದಿನಸಿ ಸಾಮಗ್ರಿ ಗಳು ದೊರೆತರೂ ಕೆಲವೊಂದು ಅಗತ್ಯ ವಸ್ತುಗಳಿಗೆ ಪರದಾಡಬೇಕಾಯಿತು. ಅಲ್ಲಲ್ಲಿ ಸಾವಿನ ಸುದ್ದಿಗಳು ನಮ್ಮನ್ನು ಆತಂಕಕ್ಕೀಡು ಮಾಡಿತ್ತು. ಇದೇ ಆತಂಕ ಲಾಕ್ಡೌನ್ ಸಡಿಲಿಕೆವರೆಗೂ ಮುಂದುವರಿದಿತ್ತು.
ಮನ್ಸೂರ್, ಉಳ್ಳಾಲ, ಹೊಟೇಲ್ ಕಾರ್ಮಿಕ
ಕೃಷಿಯಿಂದ ದಿನ ದೂಡಿದೆ
ನಾನು ಕೃಷಿ ಜತೆಗೆ, ಒಂದು ಸಣ್ಣ ಇಲೆಕ್ಟ್ರಿಕ್ ಅಂಗಡಿ ನಡೆಸುತ್ತಿದ್ದೆ. ಲಾಕ್ಡೌನ್ ಕಾಲಕ್ಕೆ ಅಂಗಡಿ ಮುಚ್ಚಿತು. ಕೃಷಿ ಭೂಮಿ ಇದ್ದ ಕಾರಣ ಹೊಟ್ಟೆ ತುಂಬಿಸಲು ತೊಂದರೆ ಆಗಲಿಲ್ಲ. ಆದರೆ, ಕೃಷಿ ಭೂಮಿ ಇಲ್ಲದವರು, ಬಡವರು ತೊಂದರೆಗೆ ಸಿಲುಕಿದರು. ಲಾಕ್ಡೌನ್ ಪರಿಣಾಮದಿಂದಾಗಿ ವ್ಯಾಪಾರ ವಹಿವಾಟು ಹಿಂದಿನಂತಿಲ್ಲ.
ಎಂ.ಆರ್.ಶ್ರೀಧರ, ಮಹರ್ನವಮಿದೊಡ್ಡಿ, ಮಂಡ್ಯ
ಮೂಲೆ ಸೇರಿದ್ದ ಕೇರಂ, ಚೆಸ್ ಬೋರ್ಡ್ ಗೆ ಬೇಡಿಕೆ
ದಿಢೀರ್ ಲಾಕ್ಡೌನ್ ಹೇರಿಕೆಯಿಂದ ನಾವೆಲ್ಲ ಮನೆಯೊಳಗೇ ಬಂಧಿಯಾದೆವು. ಕೆಲಸ ಮತ್ತಿತರ ವಿಚಾರವಾಗಿ ಮನೆಯ ಹೊರಗಿರುತ್ತಿದ್ದ ಮನೆ ಮಂದಿಯೆಲ್ಲ ಒಂದಾದೆವು. ಮೂಲೆಯಲ್ಲಿದ್ದ ಕೇರಂ,ಚೆಸ್ ಬೋರ್ಡ್ಗೆ ಬೇಡಿಕೆ ಬಂತು. ಮನೆ ಮಂದಿಯೆಲ್ಲ ಒಟ್ಟಾಗಿ ಕೇರಂ, ಚೆಸ್, ಲುಡೋ ಆಡಿದೆವು. ಮಹಿಳೆಯರ ಜೊತೆ ಪುರುಷರೂ ಅಡುಗೆಗೆ ಸಹಕರಿಸತೊಡಗಿದರು. ಈ ಮೂಲಕ ಅನೇಕ ಹೊಸರುಚಿಗಳು ಜನ್ಮತಾಳಿದವು.
ಎಲ್ಲ ಕಾಯಿಲೆಗಳಿಗೂ ಹಳೆಯ ಮನೆಮದ್ದೇ ರಾಮಬಾಣವಾಗಿತ್ತು. ಪ್ರಸಿದ್ಧ ವೈದ್ಯರು ಕೂಡಾ ಫೋನ್ ಕಾಲ್ನಲ್ಲೂ ಔಷಧಿ ಕೊಡುತ್ತಿದ್ದರು. ಮಾಲಿನ್ಯವಿಲ್ಲದೇ ಪರಿಸರ ಶುದ್ಧವಾಗಿತ್ತು.ಮನೆಯೇ ದೇವಾಲಯವಾಗಿತ್ತು.
ಲಾಕ್ಡೌನ್ ಸಂಕಷ್ಟದೊಂದಿಗೆ ಜನರಲ್ಲಿ ಸ್ವಯಂ ಶಿಸ್ತನ್ನು ತಂದು ಕೊಟ್ಟಿತು. ಬದುಕಿನ ವಾಸ್ತವತೆಯ ಅರಿವು ಮೂಡಿಸಿತು. ಮರಳಿ ಹಳೆಯ ಜೀವನಶೈಲಿಗೆ, ಪ್ರಕೃತಿಯ ಮಡಿಲಿಗೆ ಹೋಗಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಸುಳ್ಳಲ್ಲ.
ನಳಿನಾಕ್ಷಿ ಉದಯರಾಜ್, ನಿವೃತ್ತ ಮುಖ್ಯ ಶಿಕ್ಷಕಿ, ಮಂಗಳೂರು
‘ಗ್ಯಾರಂಟಿ’ಗಳಿಂದ ಚೇತರಿಕೆ
ಕೊರೋನ ನಿರ್ವಹಣೆಯಲ್ಲಿ ಸರಕಾರ ಸಂಪೂರ್ಣ ವಿಫಲ ಗೊಂಡಿದೆ. ಸರಕಾರ ಅವೈಜ್ಞಾನಿಕವಾಗಿ ಲಾಕ್ಡೌನ್ ಘೋಷಿಸಿದ್ದೇ ಹೊರತು ಜನಸಾಮಾನ್ಯರ ಪುನಶ್ಚೇತನಕ್ಕಾಗಿ ಯಾವುದೇ ಕಾರ್ಯಕ್ರಮ ಕೈಗೊಂಡಿಲ್ಲ. ಲಾಕ್ಡೌನ್ ಸಡಿಲಿಕೆ ಬಳಿಕ ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿ ಅಲ್ಪ ಚೇತರಿಕೆ ಕಂಡರೂ ಲಾಕ್ಡೌನ್ ಸಂದರ್ಭದಲ್ಲಿನ ಸಾಲದ ಹೊರೆಯಿಂದ ಚೇತರಿಸಿಕೊಳ್ಳಲಾಗಲಿಲ್ಲ. ಆದರೆ ಸದ್ಯಕ್ಕೆ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಒಂದಷ್ಟು ಆರ್ಥಿಕ ಸಾಂತ್ವನ ತುಂಬಿದೆ.
ಡಿ.ಎಲ್.ಶಂಕರಲಿಂಗೇಗೌಡ, ದ್ಯಾಪಸಂದ್ರ, ಮಂಡ್ಯ
ಸರಳ ಬದುಕಿನ ಪಾಠ
ಕೊರೋನ ನಮಗೆ ಹಲವು ಪಾಠಗಳನ್ನು ಕಲಿಸಿಕೊಟ್ಟಿತ್ತು. ಪ್ರಮುಖವಾಗಿ ಅತ್ಯಂತ ಸರಳವಾಗಿ ಬದುಕುವುದನ್ನೂ ಲಾಕ್ಡೌನ್ ಸಂದರ್ಭದಲ್ಲಿ ಕಲಿತೆವು. ಈ ಪಿಡುಗಿಗೆ ಇಡೀ ಜಗತ್ತೇ ತಲ್ಲಣಗೊಂಡಿತ್ತು. ಬಡ, ಮಧ್ಯಮ ವರ್ಗದ ಜನ ತೀವ್ರ ಆರ್ಥಿಕ ಸಂಕಷ್ಟವನ್ನು ಅನುಭವಿಸಿದ್ದರು.
ವಿಭಾ ಹೆಜಮಾಡಿ