ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಡೀಪ್ ಫೇಕ್
Photo: freepik
ತಂತ್ರಜ್ಞಾನ ಬೆಳವಣಿಗೆ ಆದಂತೆ ಅದು ಮಾನವರ ಪ್ರಗತಿಗೆ ಪೂರಕವಾಗಿರಬೇಕು. ಆದರೆ ಕೆಲವೊಮ್ಮೆ ಅದು ಮಾನವರ ಚಿಂತೆಗೂ ಕಾರಣವಾಗಿಬಿಡುತ್ತದೆ. ಡೀಪ್ ಫೇಕ್ ಇದೀಗ ಅಂತಹದ್ದೊಂದು ಸಂಚಲನವನ್ನು ಕರ್ನಾಟಕದಲ್ಲಿ ಉಂಟು ಮಾಡಿದೆ. ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನ ಮೂಲಕ ಯಾರದ್ದೋ ದೇಹಕ್ಕೆ ಯಾರದ್ದೋ ತಲೆಯನ್ನು ಎಡಿಟಿಂಗ್ ತಂತ್ರಜ್ಞಾನದ ಉಪಯೋಗಿಸಿಕೊಂಡು ಜೋಡಿಸಿ ವೀಡಿಯೊ ಅಥವಾ ಫೋಟೊವನ್ನು ನಿರ್ಮಿಸುವುದನ್ನು ಡೀಪ್ ಫೇಕ್ ಎಂದು ಕರೆಯಲಾಗುತ್ತದೆ. ಸಾಮಾನ್ಯ ಫೋಟೊದಲ್ಲಾದರೂ ಅಲ್ಪ ಸ್ವಲ್ಪ ಅನುಮಾನ ಬರುತ್ತದೆ. ಆದರೆ ಡೀಪ್ ಫೇಕ್ ತಂತ್ರಜ್ಞಾನದ ವೀಡಿಯೊವನ್ನು ನಕಲಿ ಎಂದು ಹೇಳಲು ಸಾಧ್ಯವೇ ಆಗುವುದಿಲ್ಲ. ವೀಡಿಯೊ ಎಷ್ಟು ನೈಜತೆಯಿಂದ ಕೂಡಿರುತ್ತದೆಯೆಂದರೆ ವ್ಯಕ್ತಿಯ ದೇಹ ಮತ್ತು ಮುಖ ಬೇರೆ ಬೇರೆ ಎಂದು ಯಾರಿಗೂ ಅನುಮಾನವೇ ಬರುವುದಿಲ್ಲ. ಮೂಲ ವೀಡಿಯೊ ಬೇರೆ ಆಗಿದ್ದರೂ ಈ ವ್ಯಕ್ತಿಯೇ ವೀಡಿಯೊದಲ್ಲಿ ನಟಿಸುತ್ತಿದ್ದಂತೆ ಬಿಂಬಿಸಲಾಗುತ್ತದೆ. ಸಂಬಂಧಿಸಿದ ವೀಡಿಯೊದಲ್ಲಿ ಇಲ್ಲದ ವ್ಯಕ್ತಿ ನೋಡಿದರೂ ಕೂಡ ಅದು ತಾನೇ ಏನೋ ಎಂಬ ಅನುಮಾನ ಮೂಡುವಷ್ಟು ನೈಜತೆಯೊಂದಿಗೆ ವೀಡಿಯೊವನ್ನು ಸೃಷ್ಟಿಸಲಾಗುತ್ತದೆ.
ಡೀಪ್ ಫೇಕ್ ಮೂಲಕ ದೇಹ ಮತ್ತು ಮುಖದಂತೆ ಭಾಷೆಯನ್ನೂ ಕೂಡ ಬದಲಾವಣೆ ಮಾಡಲಾಗುತ್ತದೆ. ಉದಾಹರಣೆಗೆ ಕನ್ನಡ ಭಾಷೆಯೇ ಬಾರದ ಹಿಂದಿ ಮಾತನಾಡುವ ವ್ಯಕ್ತಿ ಕನ್ನಡದಲ್ಲಿ ನೈಜವಾಗಿ ಮಾತನಾಡುವಂತೆ ತೋರಿಸಬಹುದು. ಡೀಪ್ಫೇಕ್ಗಳಲ್ಲಿ ಬಳಸುವ ಮತ್ತೊಂದು ಸಾಮಾನ್ಯ ತಂತ್ರವೆಂದರೆ ಲಿಪ್ ಸಿಂಕ್ಸಿಂಗ್. ಅಂದರೆ ನಕಲಿ ಮಾತುಗಳಿಗೆ ತಕ್ಕಂತೆ ತುಟಿಗಳನ್ನು ಸರಿದೂಗಿಸುವುದು. ಡೀಪ್ಫೇಕ್ ವೀಡಿಯೊಗೆ ಧ್ವನಿ ರೆಕಾರ್ಡಿಂಗ್ ಅನ್ನು ಸರಿದೂಗಿಸುತ್ತದೆ. ವೀಡಿಯೊದಲ್ಲಿರುವ ವ್ಯಕ್ತಿಯು ರೆಕಾರ್ಡಿಂಗ್ನಲ್ಲಿರುವ ಪದಗಳನ್ನು ನಿಜವಾಗಿಯೂ ಅವನೇ ಮಾತನಾಡುತ್ತಿರುವಂತೆ ನೋಡುಗರಿಗೆ ಗೋಚರಿಸುತ್ತದೆ. ಆಡಿಯೊ ಸ್ವತಃ ಡೀಪ್ಫೇಕ್ ಆಗಿದ್ದರೆ, ವೀಡಿಯೊ ವಂಚನೆಯ ಹೆಚ್ಚುವರಿ ಪದರವನ್ನು ಸೇರಿಸುತ್ತದೆ. ಈ ತಂತ್ರವು ಕೃತಕ ಬುದ್ಧಿಮತ್ತೆಯ ಪುನರಾವರ್ತಿತ ನರಮಂಡಲಗಳಿಂದ ಬೆಂಬಲಿತವಾಗಿರುತ್ತದೆ.
ಕಳೆದ ತಿಂಗಳು ಹಿಂದಿ ಚಲನಚಿತ್ರ ನಟಿಯೊಬ್ಬರ ಈ ಡೀಪ್ ಫೇಕ್ ವೀಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಈಗ ಇನ್ನೊಬ್ಬ ನಟಿಯ ವೀಡಿಯೊ ಸುದ್ದಿ ಮಾಡುತ್ತಿದೆ. ಇದೊಂದು ರೀತಿಯ ಡಿಜಿಟಲ್ ಭಯೋತ್ಪಾದನೆಯೇ ಸರಿ. ಡೀಪ್ ಫೇಕ್ಗಳಿಂದ ಉಂಟಾಗುವ ದೊಡ್ಡ ಅಪಾಯವೆಂದರೆ ವಿಶ್ವಾಸಾರ್ಹ ಮೂಲಗಳಿಂದ ಬರುವ ಸುಳ್ಳು ಮಾಹಿತಿಯನ್ನು ಹರಡುವ ಅವುಗಳನ್ನು ರಚಿಸುವವರ ಮತ್ತು ಅವುಗಳ ಸಾಮರ್ಥ್ಯ. ಉದಾಹರಣೆಗೆ, ೨೦೨೨ರಲ್ಲಿ ಉಕ್ರೇನಿಯನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ತನ್ನ ಸೈನ್ಯವನ್ನು ಶರಣಾಗುವಂತೆ ಕೇಳುವ ಡೀಪ್ ಫೇಕ್ ವೀಡಿಯೊವನ್ನು ಬಿಡುಗಡೆ ಮಾಡಲಾಗಿತ್ತು. ಭಾರತದಂತಹ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರಗಳಿಗೆ ಈ ಡೀಪ್ ಫೇಕ್ ದೊಡ್ಡ ಆಘಾತವನ್ನೇ ಉಂಟುಮಾಡುವ ಅಪಾಯಗಳಿವೆ. ಡೀಪ್ ಫೇಕ್ ತಂತ್ರಜ್ಞಾನವು ಭಾರತದ ಮಟ್ಟಿಗೆ ಹೊಸತಾಗಿ ತೋರುತ್ತಿರಬಹುದು. ಆದರೆ ಯುರೋಪ್, ಅಮೆರಿಕಗಳಲ್ಲಿ ಹಲವು ವರ್ಷಗಳ ಹಿಂದೆಯೇ ಈ ಹಾವಳಿ ಕಂಡು ಬಂದಿತ್ತು.
ಮೊದಲೇ ಭಾರತದ ಸಾಮಾಜಿಕ ಮಾಧ್ಯಮಗಳಿಗೆ ಯಾವುದೇ ಅಡ-ತಡೆ ಇಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯಗಳನ್ನು ಶೇರ್ ಮಾಡುವಾಗ ಯಾರೂ ಅವುಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಜನರೂ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ವಿಷಯಗಳ ನೈಜತೆಯ ಕುರಿತು ಚಿಂತಿಸುವುದಿಲ್ಲ. ಬಂದದ್ದೆಲ್ಲವನ್ನೂ, ಹರಿದಾಡಿದ್ದೆಲ್ಲವನ್ನೂ ನಂಬಿಬಿಡುವ ಮನೋಭಾವ ನಮ್ಮದು. ಆದ್ದರಿಂದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಂತಹ ದೇಶದಲ್ಲಿ ಈ ಡೀಪ್ ಫೇಕ್ ವೀಡಿಯೊಗಳ ಹಾವಳಿ ಹೆಚ್ಚಾದರೆ ಸಮಾಜದಲ್ಲಿ ಅಶಾಂತಿ ಉಂಟಾಗಬಹುದು. ಅದೆಷ್ಟೋ ಅಮಾಯಕರ, ಮಾನ-ಮರ್ಯಾದೆಗಳಿಗೆ ಅಂಜಿ ಜೀವಿಸುವವರ ಪ್ರಾಣಕ್ಕೆ ಸಂಚಕಾರವನ್ನು ಡೀಪ್ ಫೇಕ್ ಉಂಟು ಮಾಡಬಹುದು. ಇಂತಹ ವೀಡಿಯೊಗಳನ್ನು ಸೃಷ್ಟಿಸಿ ಯಾರೋ ಅಮಾಯಕರಿಗೆ ಹಣೆಪಟ್ಟಿ ಕಟ್ಟಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಬಿಡಬಹುದು. ಎಲ್ಲಕ್ಕಿಂತ ಇದು ದೊಡ್ಡ ದಂಧೆ ಕೂಡ ಆಗಬಹುದು.
ಇಂತಹ ವೀಡಿಯೊಗಳನ್ನು ಹೆಚ್ಚಾಗಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಕುರಿತು ಮಾಡಲಾಗುತ್ತದೆ. ಇದು ಇಡೀ ಮಹಿಳಾ ಸಮುದಾಯದ ತೇಜೋವಧೆಗೂ ಕೂಡ ಕಾರಣವಾಗಬಹುದು. ಅಶ್ಲೀಲ ಫೋಟೊ ಅಥವಾ ವೀಡಿಯೊಗಳನ್ನು ಪ್ರದರ್ಶಿಸುವ ವೆಬ್ಸೈಟ್ಗಳಲ್ಲಿ ಡೀಪ್ ಫೇಕ್ ವೀಡಿಯೊಗಳು ೨೦೧೮ರಿಂದಲೇ ಅಪ್ ಲೋಡ್ ಆಗುತ್ತಿವೆ. ಮನರಂಜನೆ ಹಾಗೂ ವಿಡಂಬನೆಗಾಗಿ ಹುಟ್ಟಿಕೊಂಡ ಡೀಪ್ ಫೇಕ್ ಪ್ರಸಕ್ತ ತಪ್ಪು ಮಾಹಿತಿ ರವಾನೆ, ಮಹಿಳೆಯರ ಅದರಲ್ಲೂ ಮುಖ್ಯವಾಗಿ ಸೆಲಬ್ರಿಟಿಗಳ ಚಾರಿತ್ರ್ಯಹರಣ, ರಾಜಕೀಯ ಅಪಪ್ರಚಾರ, ಬ್ಲ್ಯಾಕ್ ಮೇಲ್ ಮಾಡಲು ಬಳಕೆಯಾಗುತ್ತಿರುವುದು ತಂತ್ರಜ್ಞಾನದ ದುರುಪಯೋಗವೇ ಸರಿ.
ಡೀಪ್ ಫೇಕ್ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗಮನಕ್ಕೆ ಬಂದಾಗ ಜವಾಬ್ದಾರಿಯುತ ನಾಗರಿಕರಾಗಿ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ವೀಡಿಯೊಗಳು ಕಂಡ ಕೂಡಲೇ ರಿಪೋರ್ಟ್ ಮಾಡಬೇಕು. ಅದು ನೈಜವಾಗಿರಲಿ ಅಥವಾ ಸುಳ್ಳಾಗಿರಲಿ ಅಂತಹ ವೀಡಿಯೊಗಳನ್ನು ಶೇರ್ ಮಾಡಬಾರದು. ಸಮಾಜದಲ್ಲಿಯಾಗಲಿ ಅಥವಾ ಮನೆಗಳಲ್ಲಾಗಲಿ ಇಂತಹ ಸನ್ನಿವೇಶ ಎದುರಾದಾಗ ಇಂತಹ ವೀಡಿಯೊಗಳ ಕ್ರೌರ್ಯಕ್ಕೆ ಬಲಿಯಾದವರಿಗೆ ಮಾನಸಿಕ ಬೆಂಬಲವನ್ನು ನೀಡಬೇಕು. ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಮಾಡಬೇಕು. ಪತ್ರಿಕೆ, ಟಿ.ವಿ., ಸಾಮಾಜಿಕ ಮಾಧ್ಯಮ ಹೀಗೆ ಯಾವುದೇ ಮಾಧ್ಯಮದ ಪ್ರತಿನಿಧಿಗಳಾದರೂ ಸರಿ ಇಂತಹ ಸಂತ್ರಸ್ತರಿಗೆ ಅನವಶ್ಯಕವಾದ ಪ್ರಶ್ನೆಗಳನ್ನು ಕೇಳುವ ಪ್ರಯತ್ನ ಮಾಡಬಾರದು. ಇದು ಸಂತ್ರಸ್ತರನ್ನು ಮತ್ತಷ್ಟು ಪೇಚಿಗೆ ಸಿಲುಕಿಸಿದಂತಾಗುತ್ತದೆ.
ಮಾಹಿತಿ ತಂತ್ರಜ್ಞಾನ ವಿಶೇಷಜ್ಞರ ಪ್ರಕಾರ ಈ ವರ್ಷವೊಂದರಲ್ಲೇ ಸುಮಾರು ೧.೪೩ ಲಕ್ಷ ಡೀಪ್ ಫೇಕ್ ವೀಡಿಯೊಗಳು ಜಗತ್ತಿನಾದ್ಯಂತ ಅಂತರ್ಜಾಲದಲ್ಲಿ ಅಪ್ಲೋಡ್ ಆಗಿವೆ. ಈ ಪೈಕಿ ಶೇ.೨೭ಕ್ಕಿಂತ ಹೆಚ್ಚು ಸೆಲಬ್ರಿಟಿಗಳ ವೀಡಿಯೊಗಳು ಹರಿದಾಡಿವೆ. ಭಾರತ ಸರಕಾರ ಈಗಾಗಲೇ ಡೀಪ್ ಫೇಕ್ ಹಾವಳಿಯನ್ನು ತಡೆಗಟ್ಟಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೊಂದು ಅತ್ಯಂತ ಅಪಾಯಕಾರಿ ಕೃತ್ಯ ಎಂದು ಪರಿಗಣಿಸಿರುವ ಕೇಂದ್ರ ಸರಕಾರ ಇಂತಹ ಮಾರ್ಫಿಂಗ್ ವೀಡಿಯೊಗಳನ್ನು ನಿಯಂತ್ರಿಸುವುದು ಸಾಮಾಜಿಕ ಮಾಧ್ಯಮಗಳ ಹೊಣೆಯಾಗಿದೆ ಎಂದು ಹೇಳಿದೆ ಮತ್ತು ಇಂತಹ ವೀಡಿಯೊಗಳು ಅಪ್ಲೋಡ್ ಆದ ೩೬ ಗಂಟೆಗಳಲ್ಲಿ ಇವುಗಳನ್ನು ತೆಗೆದುಹಾಕದಿದ್ದರೆ ಅಂತಹ ಸಾಮಾಜಿಕ ಮಾಧ್ಯಮವನ್ನು ನ್ಯಾಯಾಲಯದ ಕಟಕಟೆಗೆ ಎಳೆಯಬಹುದು ಎಂದು ಸ್ಪಷ್ಟಪಡಿಸಿದೆ.
ಭಾರತದಲ್ಲಿ ಡೀಪ್ ಫೇಕ್ ಹಾವಳಿಯನ್ನು ತಡೆಗಟ್ಟಲು ವಿಶೇಷವಾದ ಕಾನೂನುಗಳು ಇನ್ನೂ ರಚನೆಯಾಗಬೇಕಾಗಿದೆ. ಆದರೆ ಈಗಾಗಲೇ ಚಾಲ್ತಿಯಲ್ಲಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆ-೨೦೦೦ ಮತ್ತು ನೂತನ ಮಾಹಿತಿ ತಂತ್ರಜ್ಞಾನ ಕಾಯ್ದೆ-೨೦೦೧ ಡೀಪ್ ಫೇಕ್ ಹಾವಳಿಯನ್ನು ತಡೆಗಟ್ಟುವಲ್ಲಿ ಸಹಾಯಕವಾಗುತ್ತವೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನುಚ್ಛೇದ ೬೬ಇ ಪ್ರಕಾರ ಖಾಸಗಿ ಹಕ್ಕು ಉಲ್ಲಂಘನೆಗಾಗಿ ಮೂರು ವರ್ಷ ಜೈಲು ಹಾಗೂ ಎರಡು ಲಕ್ಷ ರೂ.ಗಳವರೆಗೂ ದಂಡ ವಿಧಿಸಬಹುದು. ಅನುಚ್ಛೇದ ೬೭ರ ಪ್ರಕಾರ ದೃಶ್ಯ ರೂಪದಲ್ಲಿ ಅಶ್ಲೀಲತೆ ಪ್ರದರ್ಶನ ಮಾಡಿದರೆ ಮೂರು ವರ್ಷ ಸೆರೆವಾಸ ಹಾಗೂ ಮೂರು ಲಕ್ಷ ರೂ.ಗಳವರೆಗೂ ದಂಡ ಹಾಕಬಹುದು.