ತಾತ್ವಿಕ ನೆಲೆಯಿಲ್ಲದ ನೋಟು ರದ್ದತಿ
Photo: PTI
ಭಾಗ - 2
ನಗದು ಇಂದಿಗೂ ದೊರೆಯೇ!
ನವೆಂಬರ್ 8, 2016ರ ನೋಟು ರದ್ದತಿಯ ಘೋಷಣೆಯ ನಂತರ ಸೇರಿಸಿದ ಉದ್ದೇಶವಾದ ನಗದು ಬಳಕೆಯ ಕಡಿತ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ? ಈ ಪ್ರಶ್ನೆಗೆ ವಿರೋಧಾಭಾಸದ ಉತ್ತರಗಳು ಸಿಗುತ್ತವೆ.
ಒಂದು ಧನಾತ್ಮಕ ಬೆಳವಣಿಗೆ ಅಂದರೆ ಕಳೆದ ಏಳು ವರ್ಷಗಳಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಬಳಸಲಾಗುವ ನಗದಿನ ಪ್ರಮಾಣ ಇಳಿಮುಖವಾಗುತ್ತಾ ಬಂದಿದೆ. ಸಣ್ಣ ಸಣ್ಣ ಊರುಗಳಲ್ಲಿ, ಅಂಗಡಿಗಳಲ್ಲಿ, ಕೈಗಾಡಿಗಳಲ್ಲಿ, ಹೊಟೇಲ್ಗಳಲ್ಲಿಯೂ ಈಗ ನಗದಿಲ್ಲದೆ, ಬ್ಯಾಂಕ್ ಟ್ರಾನ್ಸ್ಫರ್, ಡೆಬಿಟ್/ಕ್ರೆಡಿಟ್ ಕಾರ್ಡ್, ಯುಪಿಐ, ಕ್ಯುಆರ್ ಕೋಡ್, ಪೇಮೆಂಟ್ ಆ್ಯಪ್ಸ್ ಮುಂತಾದ ಪರ್ಯಾಯ ಮಾರ್ಗಗಳಲ್ಲಿ ಹಣವನ್ನು ಸಂದಾಯಿಸಲಾಗುತ್ತಿದೆ. ಹೆಚ್ಚು ಹೆಚ್ಚು ಮಂದಿ ಬ್ಯಾಂಕ್ಗಳಲ್ಲಿ ಎಕೌಂಟ್ಗಳನ್ನು ತೆರೆದು ಅವುಗಳ ಮೂಲಕ ಪಾವತಿಗಳನ್ನು ಮಾಡಲು ಆರಂಭಿಸಿದ್ದಾರೆ. ಇದು ಶ್ಲಾಘನೀಯ ಬದಲಾವಣೆ.
ಆದರೆ ಈ ಬೆಳವಣಿಗೆಯ ಜೊತೆಗೆ ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆ ಮತ್ತು ಮೌಲ್ಯವು ನೋಟು ರದ್ದತಿಯ ಸಂದರ್ಭದಲ್ಲಿದ್ದುದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿದೆ. ಇಲ್ಲಿಯೂ ಒಟ್ಟು ಚಲಾವಣೆಯಲ್ಲಿದ್ದ ನೋಟುಗಳಲ್ಲಿ ಹಳೆಯ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳ ಪ್ರಮಾಣ ಎಷ್ಟಿತ್ತೋ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೊಸ 500 ಮತ್ತು 2,000 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿವೆ. ಇದೇ ಕಾರಣಕ್ಕಾಗಿ ಬಹುಶಃ ಈ ವರ್ಷ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಕ್ರಮವನ್ನು ಆರ್ಬಿಐ ಕೈಗೊಂಡಿತು. ಕೋಷ್ಟಕ 2 ಇದನ್ನು ಪುಷ್ಟೀಕರಿಸುತ್ತದೆ.
ನೋಟು ರದ್ದತಿಯಿಂದ ನಗದು ಬಳಕೆಯಲ್ಲಿ ಕಡಿತವಾಗಬೇಕಿತ್ತು; ಬದಲಾಗಿ, 2016ರ ನಂತರದ 7 ವರ್ಷಗಳಲ್ಲಿ ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆ ಮತ್ತು ಮೌಲ್ಯ ಹೆಚ್ಚಿವೆ. ಇದು ಯಾಕೆ ಹೀಗೆ? ಅನೇಕ ವಿಶ್ಲೇಷಕರ ಪ್ರಕಾರ ದೇಶದಲ್ಲಿ ನಗದು ಇನ್ನೂ ದೊರೆಯಾಗಿಯೇ ವಿಜೃಂಭಿಸುತ್ತಿದೆ!
ಡಿಜಿಟಲ್ ಮಾಧ್ಯಮದ ಬಳಕೆ
ಡಿಜಿಟಲ್ ಪಾವತಿಗಳ ಬಗ್ಗೆ ಹೇಳುವುದಿದ್ದರೆ, ಅವುಗಳ ಪ್ರಮಾಣವೇನೋ ಹೆಚ್ಚುತ್ತಾ ಇದೆ. ನೋಟು ರದ್ದತಿಯಿಂದಾಗಿಯೇ ಈ ಹೆಚ್ಚಳವಾಗಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಸುಮಾರಾಗಿ ಕಳೆದ ಶತಮಾನದ ಅಂತ್ಯಕ್ಕೆ ಬ್ಯಾಂಕ್ಗಳು ಬೃಹತ್ಪ್ರಮಾಣದಲ್ಲಿ ತಮ್ಮ ವ್ಯವಹಾರಗಳಲ್ಲಿ ತಂತ್ರಜ್ಞಾನವನ್ನು ಬಳಸಲು ಆರಂಭಿಸಿದವು. ಗ್ರಾಹಕರಲ್ಲಿಯೂ ಜಾಗೃತಿ ಹೆಚ್ಚುತ್ತಾ ಬಂತು. ಈ ಶತಮಾನದ ಆರಂಭದಿಂದಲೇ ವ್ಯಾಪಕವಾಗಿ ಅಂತರ್ಜಾಲದ ಮೂಲಕ ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ, ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣದ ರವಾನೆ, ಕ್ರೆಡಿಟ್/ಡೆಬಿಟ್ ಕಾರ್ಡುಗಳ ಪ್ರಯೋಗ ಜನಪ್ರಿಯವಾಗತೊಡಗಿತು. ತಂತ್ರಜ್ಞಾನ ಮುಂದುವರಿಯುತ್ತಾ ಹೋದಾಗ ಅದರ ಬಳಕೆಯಲ್ಲಿ ಗ್ರಾಹಕರಿಗೆ ವಿಶ್ವಾಸ ಹೆಚ್ಚುತ್ತದೆ, ಸ್ವಾಭಾವಿಕವಾಗಿ ಅರಿವು ಇದ್ದವರು ಹೊಸ ವಿಧಾನಗಳನ್ನು ಬಳಸಿ ಪಾವತಿ ಮಾಡುತ್ತಾರೆ. ಅರಿವು ಕಡಿಮೆ ಇದ್ದವರು ಪರಿಚಯದವರ ಅನುಭವದಿಂದ ಪ್ರೇರಿತರಾಗಿ ಕಾರ್ಯೋನ್ಮುಖರಾಗುತ್ತಾರೆ.
ಈ ಶತಮಾನದ ಎರಡನೇ ದಶಕದಲ್ಲಿ ವಿಶ್ವದಾದ್ಯಂತ ಐಟಿಯಲ್ಲಿ ವ್ಯಾಪಕ ಬದಲಾವಣೆಗಳಾಗುತ್ತಿದ್ದಂತೆ ಅದರ ಪ್ರಭಾವವು ನಮ್ಮ ದೇಶಕ್ಕೂ ತಟ್ಟಿತು. ಹೀಗಾಗಿ 2016ರಲ್ಲಿ ನಮ್ಮಲ್ಲಿ ನೋಟು ರದ್ದತಿ ಸಂಭವಿಸದಿದ್ದರೆ ವ್ಯಾಪಾರ ವಹಿವಾಟುಗಳಲ್ಲಿ ತಂತ್ರಜ್ಞಾನದ ಬಳಕೆಯೇನು ಸ್ಥಗಿತವಾಗುತ್ತಿರಲಿಲ್ಲ.
ಈ ಎಲ್ಲ ಬೆಳವಣಿಗೆಗಳನ್ನು ಸಮಗ್ರವಾಗಿ ಗಮನಿಸಿದರೆ ಏನು ಸ್ಪಷ್ಟವಾಗುತ್ತದೆ ಎಂದರೆ ವ್ಯಾಪಕವಾಗುತ್ತಿರುವ ಡಿಜಿಟಲ್ ಪಾವತಿಗೆ ನೋಟು ರದ್ದತಿ ಒಂದು ನೆಪ ಮಾತ್ರ, ಪ್ರಮುಖ ಕಾರಣವಲ್ಲ. ನೋಟು ರದ್ದತಿಯಾಗದ ಅನೇಕ ದೇಶಗಳಲ್ಲಿಯೂ ಇಂದು ಡಿಜಿಟಲ್ ಮಾಧ್ಯಮದ ಬಳಕೆ ಸರ್ವೇ ಸಾಮಾನ್ಯವಾಗುತ್ತಿದೆ.
ಡಿಜಿಟಲ್ ಮಾಧ್ಯಮದ ಸಂದಾಯದಲ್ಲಿ ತೊಡಕುಗಳೂ ಹೆಚ್ಚುತ್ತಿವೆ. ಹೊಸ ಹೊಸ ರೀತಿಯ ಅಕ್ರಮಗಳು ಬೆಳಕಿಗೆ ಬರುತ್ತಿವೆ. ಸೈಬರ್ ಕ್ರೈಂಗಳ ಮೂಲಕ ಕೋಟ್ಯಂತರ ಹಣ ನಷ್ಟವಾಗುತ್ತಿದೆ; ನಾಗರಿಕರ ಖಾಸಗಿತನಕ್ಕೆ ಹೊಡೆತ ಬೀಳುತ್ತಿದೆ, ಆಮಿಷಗಳ ಮೂಲಕ ಖಾತೆಗಳಿಂದ ಹಣವನ್ನು ವರ್ಗಾಯಿಸಿಕೊಳ್ಳುವ ಪ್ರಕ್ರಿಯೆಗಳು ದಿನಾ ವರದಿಯಾಗುತ್ತಿವೆ. ಈ ತೊಡಕುಗಳಿಗೆ ನೋಟು ರದ್ದತಿ ಕಾರಣವಲ್ಲ; ಡಿಜಿಟಲ್ ಪೇಮೆಂಟ್ ಪದ್ಧತಿಯಲ್ಲಿರುವ ತೊಂದರೆಗಳನ್ನು ತೋರಿಸುವ ಉದ್ದೇಶದಿಂದ ಈ ಸಮಸ್ಯೆಯನ್ನು ಉಲ್ಲೇಖಿಸಲಾಗಿದೆ.
ಅರ್ಥವ್ಯವಸ್ಥೆಗೆ ಮಾರಕ ಹೊಡೆತ
ನೋಟು ರದ್ದತಿಯ ನಂತರದ ದಿನಗಳಲ್ಲಿ ದೇಶದಾದ್ಯಂತ ವಿವಿಧ ಮಾಧ್ಯಮಗಳು ಪ್ರಜೆಗಳನ್ನು ಸಂದರ್ಶಿಸಿ, ಬ್ಯಾಂಕುಗಳ ಎದುರು ಆಗುತ್ತಿದ್ದ ಗೊಂದಲಗಳನ್ನು ಗಮನಿಸಿ, ಸಣ್ಣ ಪುಟ್ಟ ಉದ್ದಿಮೆದಾರರ ಬವಣೆಗಳನ್ನು ಅರಿತು, ಸಂಘಸಂಸ್ಥೆಗಳ ಪ್ರತಿನಿಧಿಗಳೊಡನೆ ಮಾತನಾಡಿ ಪ್ರಕಟಿಸಿದ ವರದಿಗಳು ಮತ್ತು ದೇಶದ ಪ್ರಸಿದ್ಧ ಅರ್ಥಶಾಸ್ತ್ರಜ್ಞರು, ಹಣಕಾಸು ವ್ಯವಹಾರಗಳಲ್ಲಿ ಪರಿಣತಿ ಹೊಂದಿದವರು ಮತ್ತು ರಿಸರ್ವ್ ಬ್ಯಾಂಕಿನಲ್ಲಿ ಹಿಂದೆ ಸೇವೆ ಸಲ್ಲಿಸಿದ ಹಿರಿಯ ತಜ್ಞರು ಮಾಡಿದ ಅಧ್ಯಯನಗಳು ಕೆಲವು ಪ್ರಮುಖ ವಿಷಯಗಳನ್ನು ಮುನ್ನೆಲೆಗೆ ತಂದವು:
1. ನೋಟು ರದ್ದತಿಯು ಶಿಸ್ತಿನ ಜೀವನ ನಡೆಸುವ ಸಾಮಾನ್ಯ ನಾಗರಿಕರ ಜೀವನವನ್ನು ಮೂರಾಬಟ್ಟೆ ಮಾಡಿತು.
2. ನಗದು ವ್ಯವಹಾರಕ್ಕೆ ಅಂಟಿಕೊಂಡಿರುವ ಲಕ್ಷಗಟ್ಟಲೆ ಸ್ವೋದ್ಯೋಗಿಗಳು, ಸಣ್ಣ ಉದ್ದಿಮೆದಾರರು, ವ್ಯಾಪಾರಸ್ಥರು ತಮ್ಮ ವ್ಯವಹಾರಗಳನ್ನು ಮುಚ್ಚಬೇಕಾದ ಸ್ಥಿತಿಗೆ ಬಂದರು.
3. ಇದರ ಪರಿಣಾಮ ಎರಡು ನಿಟ್ಟಿನಲ್ಲಿ ಸಂಭವಿಸಿತು: ಸ್ವೋದ್ಯೋಗಿಗಳು ಬದುಕನ್ನು ಕಳಕೊಂಡರು, ಸಣ್ಣ ಸಣ್ಣ ಉದ್ದಿಮೆದಾರರು ತಮ್ಮ ವ್ಯವಹಾರವನ್ನು ಮುಚ್ಚಿದಾಗ ಅವರಲ್ಲಿ ಉದ್ಯೋಗಕ್ಕಿದ್ದ ಲಕ್ಷಾಂತರ ನೌಕರರೂ ಸಂಪಾದನೆಯ ಮಾರ್ಗವನ್ನು ಕಳಕೊಂಡರು.
4. ಆಗ ಬಳಕೆಯಲ್ಲಿದ್ದ ಎಟಿಎಂಗಳಿಗೆ ಗಾತ್ರದಲ್ಲಿ ವ್ಯತ್ಯಾಸವಿದ್ದ ಹೊಸ ನೋಟುಗಳನ್ನು ವಿತರಿಸಲು ತಾಂತ್ರಿಕ ಅಡಚಣೆಗಳಿದ್ದವು. ಅವುಗಳ ಬದಲಿಗೆ ಹೊಸ ಎಟಿಎಂಗಳನ್ನು ಸ್ಥಾಪಿಸಬೇಕಾಗಿ ಬಂತು. ಗ್ರಾಹಕರು ಕಂಗೆಟ್ಟರು ಮಾತ್ರವಲ್ಲ ಬ್ಯಾಂಕ್ಗಳಿಗೂ ಹಣ ಖರ್ಚಾಯಿತು.
5. ಚಲಾವಣೆಯಲ್ಲಿದ್ದ ನೋಟುಗಳನ್ನು ಹಿಂಪಡೆದಾಗ ಆದ ನಿರ್ವಾತವನ್ನು ಭರ್ತಿ ಮಾಡಲು ಹೊಸ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರಬೇಕಾಯಿತು. ದೇಶವು ಅನಗತ್ಯವಾಗಿ ಇದರ ವೆಚ್ಚದ ಹೊರೆಯನ್ನು ತಾಳಬೇಕಾಯಿತು.
6. ಆರ್ಥಿಕ ಚಟುವಟಿಕೆಗಳು ಸ್ಥಗಿತವಾಗಿ, ದೇಶದ ಇಡೀ ಅರ್ಥವ್ಯವಸ್ಥೆಗೆ ಹೊಡೆತ ಬಿದ್ದು ದೇಶದ ಒಟ್ಟು ಆದಾಯದ ಬೆಳವಣಿಗೆ ಸುಮಾರು ಶೇ. 2ರಷ್ಟು ಕುಂಠಿತವಾಯಿತು.
ಇವಿಷ್ಟೂ ಅಲ್ಲದೆ, ನೋಟು ಮುದ್ರಣ, ಚಲಾವಣೆ, ಹಿಂಪಡೆತ ಮುಂತಾದ ವಿಷಯಗಳ ಜವಾಬ್ದಾರಿ ಹೊಂದಿದ ಆರ್ಬಿಐಯನ್ನು ವಿಚಾರಿಸದೆ, ಏಕಪಕ್ಷೀಯ ನಿರ್ಧಾರ ಕೈಗೊಂಡ ಸರಕಾರವು ಆರ್ಬಿಐ ಗವರ್ನರ್ ಊರ್ಜಿತ್ ಪಟೇಲರ ಮೇಲೆ ಒತ್ತಡ ಹೇರಿ ತನ್ನ ನಿರ್ಧಾರಕ್ಕೆ ಸ್ವಂತ ವಿವೇಚನೆಯಿಲ್ಲದೆ ಅಂಗೀಕಾರ ನೀಡುವಂತೆ ಮಾಡಿತು. ದೇಶದ ಹಣಕಾಸಿನ ಭದ್ರತೆಯನ್ನು ಕಾಪಾಡುವ ಬದ್ಧತೆ ಹೊಂದಿದ ಸ್ವಾಯತ್ತ ಸಂಸ್ಥೆಯಾದ ಆರ್ಬಿಐಯ ವಿಶ್ವಾಸಾರ್ಹತೆಗೆ ಧಕ್ಕೆಯುಂಟಾಯಿತು. ನೋಟು ರದ್ದತಿಯ ಎರಡು ತಿಂಗಳು ಮೊದಲು ಅಂದರೆ ಸೆಪ್ಟಂಬರ್ 2016ರಲ್ಲಿ ಮೋದಿ ಸರಕಾರದಿಂದಲೇ ನೇಮಿಸಲ್ಪಟ್ಟ ಪಟೇಲರು ತಮ್ಮ ಅವಧಿಯ ಮೊದಲೇ ಅಂದರೆ ಡಿಸೆಂಬರ್ 2018ರಲ್ಲಿ ಪದತ್ಯಾಗ ಮಾಡಿದರು.
ಹಿಂದಿನ ನೋಟು ರದ್ದತಿಗಳು
ಈ ಸಂದರ್ಭದಲ್ಲಿ ಭಾರತದಲ್ಲಿ ಹಿಂದೆ ನಡೆದ ನೋಟು ರದ್ದತಿಗಳ ಬಗ್ಗೆ ಹೇಳುವುದು ಪ್ರಾಸಂಗಿಕವಾಗುತ್ತದೆ. 1946ರಲ್ಲಿ ನಮ್ಮನ್ನು ಆಳುತ್ತಿದ್ದ ಬ್ರಿಟಿಷ್ ಸರಕಾರ, ಎರಡನೆಯ ಮಹಾಯುದ್ಧದ ಕಾಲದಲ್ಲಿ ಉಂಟಾದ ಕಾಳಧನದ ನಿವಾರಣೆಗೆಂದು ನೋಟು ರದ್ದತಿಗೆ ಮುಂದಾಯಿತು. ಆದರೆ ಸರಕಾರದ ಸಲಹೆಗೆ ಆರ್ಬಿಐ ಒಪ್ಪಲಿಲ್ಲ. ಹಾಗಿದ್ದರೂ ಸರಕಾರವು ಅಧಿಕ ಮೌಲ್ಯದ ನೋಟುಗಳನ್ನು ರದ್ದು ಪಡಿಸಿತು. ರದ್ದಾದ ನೋಟುಗಳೆಲ್ಲ ಸಂಪೂರ್ಣವಾಗಿ ವಾಪಸಾಗಿದ್ದವೆಂದು ಮತ್ತು ಕಾಳಧನವನ್ನು ನಿವಾರಿಸಲು ಆ ಪ್ರಯೋಗ ಸಹಕಾರಿಯಾಗಲಿಲ್ಲ ಎಂದು ಆಗ ಆರ್ಬಿಐ ಗವರ್ನರರಾಗಿದ್ದ ಸಿ.ಡಿ. ದೇಶಮುಖ್ರೇ ಒಪ್ಪಿದ್ದರು.
ಎರಡನೆಯ ಬಾರಿ, 1978ರಲ್ಲಿ ಜನತಾ ಪಕ್ಷದ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ನೋಟು ರದ್ದತಿಗೆ ಸಿದ್ಧತೆ ನಡೆಸಿ ಆರ್ಬಿಐಯ ಸಲಹೆ ಕೇಳಿದರು. ಆ ಸಂಸ್ಥೆ ಕಾಳಧನದ ಹತೋಟಿಗೆ ನೋಟುರದ್ದತಿ ಮಾರ್ಗವಾಗಲಾರದು ಎಂದು ಅಭಿಪ್ರಾಯ ಕೊಟ್ಟರೂ ದೇಸಾಯಿ ಅವರು ತನ್ನ ನಿರ್ಧಾರವನ್ನು ಅನುಷ್ಠಾನಗೊಳಿಸಿದರು. ಆದರೆ ರದ್ದಾದ ಅಧಿಕ ಮುಖಬೆಲೆಯ ನೋಟುಗಳ ಪ್ರಮಾಣ ಬಹಳ ಕಡಿಮೆಯಾಗಿದ್ದುದರಿಂದ ಜನ ಸಾಮಾನ್ಯರಿಗೆ ಯಾವ ಬಾಧೆಯೂ ಆಗಲಿಲ್ಲ. ಕಾಳಹಣಕ್ಕೆ ಪರಿಹಾರ ಮಾತ್ರ ಸಿಗಲಿಲ್ಲವೆಂಬುದು ಇನ್ನೊಂದು ವಿಷಯ!
ಬಹುಷಃ ಈ ಅನುಭವದ ಹಿನ್ನೆಲೆಯಲ್ಲಿಯೇ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಅವರ ಆಪ್ತರಿಂದ ನೋಟು ರದ್ದತಿಯ ಸಲಹೆ ಬಂದಾಗ ತಿರಸ್ಕರಿಸಿದ್ದರು. ಇಂದಿರಾ ಗಾಂಧಿ ಆ ಸಲಹೆಯನ್ನು ಒಪ್ಪಿದ್ದರೆ ದೇಶವು ಕಾಳಧನದ ಬಾಧೆಯಿಂದ ಮುಕ್ತವಾಗುತ್ತಿತ್ತು ಎಂದು ಪ್ರಧಾನಿ ಮೋದಿ ಅವರು ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಯ ವಿಪರ್ಯಾಸವೆಂದರೆ ಇಂದಿರಾ ಅವರು ತಮಗೆ ಬಂದ ಸಲಹೆಯನ್ನು ತಿರಸ್ಕರಿಸಿ ಜನರಿಗೆ ಆಗಬಹುದಾದ ಸಂಕಷ್ಟಗಳನ್ನು ನಿವಾರಿಸಿದರು. ನರೇಂದ್ರ ಮೋದಿ ಅವರು ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡು ಪ್ರಜೆಗಳನ್ನು ಹಾಗೂ ದೇಶದ ಅರ್ಥವ್ಯವಸ್ಥೆಯನ್ನು ತೀವ್ರವಾದ ಸಂಕಷ್ಟಕ್ಕೆ ತಳ್ಳಿದರು. ಮಾತ್ರವಲ್ಲ, ಹಿಂದಿನ ಎರಡು ಘಟನೆಗಳಂತೆ ಈ ಬಾರಿಯೂ ಕಾಳಹಣ ಮತ್ತು ಭ್ರಷ್ಟಾಚಾರದ ಪಿಡುಗುಗಳು ಅಬಾಧಿತವಾಗಿ ಉಳಿದವು.
ನೀತಿಗಳಿಗೆ ಸೈದ್ಧಾಂತಿಕ ತಳಹದಿಯ ಅಗತ್ಯ
ಈ ನಿರ್ಧಾರವನ್ನು ಪ್ರಧಾನಿಯವರು ಯಾಕೆ ಕೈಗೊಂಡರು? ನೋಟು ರದ್ದತಿಯ ಬಳಿಕ ಬಂದ ವರದಿಗಳ ಪ್ರಕಾರ, ಪುಣೆಯ ‘ಅರ್ಥಕ್ರಾಂತಿ’ ಎಂಬ ಸರಕಾರೇತರ ಸಂಸ್ಥೆಯ ಮುಖ್ಯಸ್ಥರಾದ ಅನಿಲ್ ಬೋಕಿಲ್ ಅವರು ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಕೆಲವೇ ಸಮಯದಲ್ಲಿ ನೋಟು ರದ್ದತಿಯ ಸಲಹೆಯನ್ನು ನೀಡಿದ್ದರು. ಆ ಸಲಹೆಯನ್ನು ಕೂಲಂಕಷವಾಗಿ ವಿಮರ್ಶಿಸದೆ ಪ್ರಧಾನಿಯವರು ನಿರ್ಧಾರವನ್ನು ಕೈಗೊಂಡರು ಎಂದು ಹೇಳಲಾಗುತ್ತಿದೆ. ಅದರ ಸತ್ಯಾಸತ್ಯತೆ ಇಲ್ಲಿ ಪ್ರಸ್ತುತವಲ್ಲ.
ಸ್ವಾತಂತ್ರ್ಯೋತ್ತರದ ಸರಕಾರಗಳ ಪ್ರಮುಖ ಆರ್ಥಿಕ ನೀತಿಗಳ ಹಿಂದೆ ಸೈದ್ಧಾಂತಿಕ ನೆಲೆಗಟ್ಟು ಅಡಕವಾಗಿರುತ್ತಿತ್ತು. ಆ ಸಿದ್ಧಾಂತಗಳ ಸಾಧಕಬಾಧಕಗಳ ಕುರಿತಂತೆ ವಿಭಿನ್ನ ಮಟ್ಟಗಳಲ್ಲಿ ಚರ್ಚೆ ನಡೆದು ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಹ್ವಾನಿಸಿ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವ ಸತ್ಸಂಪ್ರದಾಯ ಬೆಳೆದಿತ್ತು. 1955ರಲ್ಲಿ ಅಂದಿನ ಅತಿ ದೊಡ್ಡ ಬ್ಯಾಂಕಾದ ‘ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ’ವನ್ನು ರಾಷ್ಟ್ರೀಕರಣಗೊಳಿಸಿ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದ ಸ್ಥಾಪನೆ, 1956ರಲ್ಲಿ ಜೀವ ವಿಮಾ ಕಂಪೆನಿಗಳನ್ನು ರಾಷ್ಟ್ರೀಕರಿಸಿ, ಜೀವವಿಮಾ ನಿಗಮದ ಸ್ಥಾಪನೆ, 1969ರಲ್ಲಿ 14 ಖಾಸಗಿ ಬ್ಯಾಂಕುಗಳ ರಾಷ್ಟ್ರೀಕರಣ, 1991ರಲ್ಲಿ ಪಿ.ವಿ.ನರಸಿಂಹ ರಾವ್ ಅವರ ಕಾಲದಲ್ಲಿ ಸಂಸತ್ತಿನಲ್ಲಿ ಹೊಸ ಆರ್ಥಿಕ ನೀತಿಯ ಮಂಡನೆ, 2004-14ರ ಮನಮೋಹನ್ ಸಿಂಗ್ರ ಆಡಳಿತದ ಸಂದರ್ಭದಲ್ಲಿ ಜನಪರ ಕಾನೂನುಗಳಾದ ಆಹಾರ ಭದ್ರತೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಮಾಹಿತಿ ಹಕ್ಕುಗಳ ಕಾನೂನುಗಳು ಇವೇ ಮುಂತಾದ ನಿರ್ಧಾರಗಳ ಮೂಲ ಉದ್ದೇಶ ಸರ್ವಜನರ ಹಿತವನ್ನು ದೂರಗಾಮಿ ಬದಲಾವಣೆಗಳ ಮೂಲಕ ಬಲಪಡಿಸುವುದರಲ್ಲಿತ್ತು.
2016ರ ನೋಟು ರದ್ದತಿಯ ನಿರ್ಧಾರವನ್ನು ಹೇರುವ ಸಂದರ್ಭದಲ್ಲಿ ಪ್ರಜಾತಂತ್ರದ ಬುನಾದಿಯಾದ ಪಾರದರ್ಶಕತೆ, ಮುಕ್ತ ಚರ್ಚೆ, ಸಾಧಕ ಬಾಧಕಗಳ ವಿಮರ್ಶೆ ಮುಂತಾದ ಮಾನದಂಡಗಳು ಬಳಕೆಯಾಗಿರಲಿಲ್ಲ. ಹಾಗಾಗಿ ಅದು ಅರ್ಥಕ್ರಾಂತಿಗೆ ನಾಂದಿ ಹಾಕುವುದರ ಬದಲು ಭ್ರಾಂತಿಯನ್ನು ಹಬ್ಬಿಸಿತು. ಸಂಕೀರ್ಣವಾದ ದೇಶದ ಮೇಲೆ ಅಗಾಧವಾದ ಪ್ರಭಾವ ಬೀರಬಲ್ಲ ಒಂದು ನಿರ್ಧಾರವನ್ನು ಕಾರ್ಯಗತಗೊಳಿಸುವ ಪೂರ್ವಭಾವಿಯಾಗಿ ಸಾಕಷ್ಟು ವಿವೇಚನೆ ಮತ್ತು ಸ್ವತಂತ್ರವಾದ ವಿಮರ್ಶೆ ಅಗತ್ಯ ಎಂಬುದು ನೋಟು ರದ್ದತಿಯ ಪ್ರಮುಖ ಪಾಠ; ಅದು ಯಾವಕಾಲಕ್ಕೂ ಪ್ರಸ್ತುತವಾಗಿಯೇ ಉಳಿಯುತ್ತದೆ.