ರಾಜಕೀಯ ಪಕ್ಷದ ಪರ ಪ್ರಚಾರಕ್ಕೆ ಇಳಿಯುತ್ತಾರಾ ಧ್ರುವ್ ರಾಠಿ?
ಧ್ರುವ್ ರಾಠಿ
ನವೆಂಬರ್ 15ರಂದು ಯೂಟ್ಯೂಬರ್ ಧ್ರುವ್ ರಾಠಿ ಮಹಾರಾಷ್ಟ್ರ ಚುನಾವಣೆ ಸಂಬಂಧ ವೀಡಿಯೊ ಮಾಡಿದ್ದರು. ಅದರಲ್ಲಿ ಅವರು ʼಮಿಷನ್ ಸ್ವರಾಜ್ʼ ಎಂಬ ಅಭಿಯಾನದ ಪ್ರಸ್ತಾಪ ಮಾಡಿದ್ದರು.
ಉಚಿತ ಕೊಡುಗೆಗಳ ಬಗ್ಗೆ ರಾಜಕೀಯ ಪಕ್ಷಗಳು ಬಡವರಿಗೆ ಕೊಡುವ ಭರವಸೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅವರು, ಎಲ್ಲ ರಾಜಕೀಯ ಪಕ್ಷಗಳಿಗೂ ಒಂದು ಸವಾಲು ಹಾಕಿದ್ದರು. ಅದನ್ನು ಸ್ವೀಕರಿಸುವ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿಯೂ ಹೇಳಿದ್ದರು.
ಧ್ರುವ್ ರಾಠಿ ಸವಾಲನ್ನು ಈಗ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಸ್ವೀಕರಿಸಿದ್ದಾರೆ. ಪಕ್ಷದ ವತಿಯಿಂದಲೂ ಅವರು ಸವಾಲನ್ನು ಸ್ವೀಕರಿಸಿದ್ದು, ನಾವು ಯಾವುದಕ್ಕಾಗಿ ಎದುರು ನೋಡುತ್ತಿದ್ದೆವೋ ಅದೇ ಇದಾಗಿದೆ ಎಂದಿದ್ದಾರೆ.
ರೈತರಿಗೆ ತರಬೇತಿ, ಮಣ್ಣು ಪರೀಕ್ಷೆ, ಮಾರುಕಟ್ಟೆ ಈ ಎಲ್ಲದರ ಮೂಲಕ ನೆರವಾಗುವುದು, ಮಳೆನೀರು ಕೊಯ್ಲು, ಉಚಿತವಾಗಿ ಗುಣಮಟ್ಟದ ಶಿಕ್ಷಣ ಒದಗಿಸುವುದು, ಉಚಿತವಾಗಿ ಉತ್ತಮ ಆರೋಗ್ಯ ಸೌಲಭ್ಯ, ಶುದ್ಧ ಹವೆ ಮತ್ತು ನೀರು ನಾಗರಿಕರ ಸುರಕ್ಷತೆ ಮತ್ತು ಭದ್ರತೆ, ಸ್ಥಳೀಯವಾಗಿ ಮೈಕ್ರೊ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಉತ್ತೇಜಿಸುವುದು, ಎಲ್ಲರಿಗೂ ಉದ್ಯೋಗ. ಇಷ್ಟೂ ಸವಾಲುಗಳನ್ನು ಸ್ವೀಕರಿಸಿರುವ ಶಿವಸೇನಾ ಉದ್ಧವ್ ಠಾಕ್ರೆ ಬಣದ ಪರವಾಗಿ ಈಗ ಧ್ರುವ್ ರಾಠಿ ಪ್ರಚಾರಕ್ಕೆ ಇಳಿಯಲಿದ್ದಾರೆಯೆ? ಈ ಮೂಲಕ ಅವರು ರಾಜಕೀಯಕ್ಕೆ ಹಿಂಬಾಗಿಲ ಮೂಲಕ ಎಂಟ್ರಿ ಕೊಡಲಿದ್ದಾರೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ರಾಜಕೀಯ ಪಕ್ಷಗಳು ತಮ್ಮ ಸವಾಲನ್ನು ಒಪ್ಪಿಕೊಳ್ಳುತ್ತಿರುವ ಬಗ್ಗೆ ಧ್ರುವ್ ರಾಠಿ ಸಂತಸ ಹಂಚಿಕೊಂಡಿದ್ದಾರೆ ಮತ್ತು ತಾನೀಗ ಆ ಪಕ್ಷದ ಪರವಾಗಿ ಏನು ಮಾಡಬಹುದು ಎಂಬುದರ ಬಗ್ಗೆ ಜನರಿಂದಲೇ ಸಲಹೆಗಳನ್ನು ಕೇಳಿದ್ದಾರೆ.
ಧ್ರುವ್ ರಾಠಿ ಪ್ರಚಾರಕ್ಕೆ ಇಳಿದರೆ ಬಹುಶಃ ಅದು ರಾಜಕೀಯವಾಗಿ ಬೇರೆಯದೇ ಆಯಾಮ ಪಡೆಯಲೂ ಬಹುದು. ಮಹಾರಾಷ್ಟ್ರ ರಾಜಕೀಯವಂತೂ ಬಹಳ ಕುತೂಹಲವನ್ನು ಈ ದಿನಗಳಲ್ಲಿ ಮೂಡಿಸಿದೆ. ಮೋದಿ, ಆದಿತ್ಯನಾಥ್ ಥರದವರ ಪ್ರಚಾರ ರ್ಯಾಲಿಗಳಿಗೂ ಜನರು ಬರುತ್ತಿಲ್ಲ. ಅದೇ ಜನರು ಶರದ್ ಪವಾರ್ ಭಾಷಣವನ್ನು ಮಳೆಯಲ್ಲಿ ನಿಂತು ಕೇಳುವುದಕ್ಕೂ ಉತ್ಸುಕರಾಗಿದ್ದಾರೆ.
ಉದ್ಧವ್ ಠಾಕ್ರೆ ರ್ಯಾಲಿಗೂ ಜನರು ಬರುತ್ತಾರೆ. ಮಹಾರಾಷ್ಟ್ರ ರಾಜಕೀಯದಲ್ಲಿ ಎಂಥದೋ ಬದಲಾವಣೆ ಆಗುವ ಹಾಗೆ ಕಾಣಿಸತೊಡಗಿದೆ. ವೀಕ್ಷಕರ ಸಲಹೆಗಾಗಿ ಕೇಳಿದ್ದ ರಾಠಿಗೆ ಪ್ರತಿಕ್ರಿಯೆಗಳೂ ಬರುತ್ತಿವೆ. ಶಿವಸೇನೆ ಉದ್ಧವ್ ಬಣವೂ ಉಚಿತ ಕೊಡುಗಗೆಳ ಭರವಸೆ ನೀಡಿರುವ ಬಗ್ಗೆ ಹೇಳಿದ್ದಾರೆ.
ರಾಜ್ ಠಾಕ್ರೆ ಪಕ್ಷವೂ ಸವಾಲು ಸ್ವೀಕರಿಸಿದ್ದು, ಮಹಾರಾಷ್ಟ್ರದಲ್ಲಿ ಅದು ಬದಲಾವಣೆ ಬಯಸುತ್ತದೆಂದಾದರೆ ಆದರ ಪರವಾಗಿಯೂ ಪ್ರಚಾರ ಮಾಡುವಂತೆ ಕೇಳಿದ್ದಾರೆ. ಬಹುಶಃ ಇದು ಧ್ರುವ್ ರಾಠಿಗೂ ಸವಾಲಾಗಬಹುದು.
ಯಾವ ಉಚಿತ ಕೊಡುಗೆಗಳ ಬಗ್ಗೆ ಆಕ್ಷೇಪವೆತ್ತಿದ್ಧಾರೊ ಅದೇ ಉಚಿತ ಕೊಡುಗೆಗಳನ್ನು ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವ ಪಕ್ಷದ ಪರವಾಗಿ ಪ್ರಚಾರ ಮಾಡುವರೆ? ಪರಸ್ಪರ ವಿರೋಧಿಗಳಾಗಿರುವ ಪಕ್ಷಗಳ ಪರವಾಗಿ ಪ್ರಚಾರ ಸಾಧ್ಯವೆ? ಬಿಜೆಪಿಯೂ ಸೇರಿ ಎಲ್ಲ ಪಕ್ಷಗಳನ್ನೂ ಅವರು ತಮ್ಮ ಸವಾಲು ಸ್ವೀಕರಿಸಲು ಕೇಳಿದ್ದರು.
ಧ್ರುವ್ ರಾಠಿಯೆಂದರೇ ಕೆಂಡಾಮಂಡಲವಾಗುವ ಬಿಜೆಪಿಯಂತೂ ಮೌನವಾಗಿದೆ.
ಸದ್ಯಕ್ಕಂತೂ ಮಿಷನ್ ಸ್ವರಾಜ್ ಕುತೂಹಲ ಉಂಟು ಮಾಡಿದೆ.