ಅಂತರ್‌ಜಾತಿ ಮತ್ತು ಅಂತರ್‌ಧರ್ಮ ವಿವಾಹಿತರ ಮಕ್ಕಳಿಗೆ ಜಾತಿಯೊಂದು ಬೇಕೇ?
ಅಂತರ್‌ಜಾತಿ ಮತ್ತು ಅಂತರ್‌ಧರ್ಮ ವಿವಾಹವಾದ ದಂಪತಿಗಳಿಗೆ ಜನಿಸುವ ಮಕ್ಕಳ ‘ಜಾತಿ’ ಯಾವುದು? ಎಂಬ ಈ ಪ್ರಶ್ನೆ ಬಹಳ ಜನರನ್ನು ಬಹುವಾಗಿ ಕಾಡಿರಲೂ ಬಹುದು. ಈ ಪ್ರಶ್ನೆಗೆ ಧಾರ್ಮಿಕ ಮತ್ತು ನ್ಯಾಯಿಕ ಹಾಗೂ ಸಾಮಾಜಿಕವಾಗಿ ಈ ಮೂರೂ ಆಯಾಮಗಳಲ್ಲಿ ಪರಾಮರ್ಶೆ ಮಾಡುವ ಅವಶ್ಯಕತೆ ಇದೆ.
ಈ ನಿಟ್ಟಿನಲ್ಲಿ ಪ್ರೊ.ರವಿವರ್ಮ ಕುಮಾರ್ ಆಯೋಗ ವಿಸ್ತೃತವಾಗಿ ವಿಚಾರಣೆ ನಡೆಸಿ ಸರಕಾರಕ್ಕೆ ತನ್ನದೇ ಆದ ಸಲಹೆಯನ್ನು ಇಸವಿ 2000ದಲ್ಲಿಯೇ ನೀಡಿದೆ. ಯಥಾ ಪ್ರಕಾರ ಈತನಕ ಆಗಿ ಹೋದ ಸರಕಾರಗಳು ಗಾಢ ನಿದ್ರೆಯಲ್ಲಿ ಮುಳುಗಿವೆ ಎಂಬುದನ್ನು ಹೇಳಬೇಕಾದ ಅವಶ್ಯಕತೆಯೇ ಇಲ್ಲ.
ಮನುಧರ್ಮ ಶಾಸ್ತ್ರ,ಅನುಲೋಮ ಮತ್ತು ಪ್ರತಿಲೋಮ ಎರಡು ವಿವಾಹ ಪದ್ಧತಿಗಳನ್ನು ಪ್ರಸ್ತುತಪಡಿಸಿ ಅನುಲೋಮ ವಿವಾಹಕ್ಕೆ ಮಾತ್ರ ಮಾನ್ಯತೆಯನ್ನು ಸಾಧ್ಯವಾಗಿಸುತ್ತದೆ. ಪ್ರಾಚೀನ ಕಾಲದಲ್ಲಿಯೂ ಅಂತರ್‌ಜಾತೀಯ ವಿವಾಹ ಇದ್ದದ್ದನ್ನು ಭಾರತೀಯ ಪುರಾಣಗಳೇ ಸಾದರ ಪಡಿಸುತ್ತವೆ. ಶಿವ, ಕೃಷ್ಣ, ವೆಂಕಟರಮಣ ಮತ್ತು ಬಿಳಿಗಿರಿ ರಂಗಯ್ಯ ಇವರೆಲ್ಲರೂ ತಮ್ಮ ಜಾತಿಯವರಲ್ಲದವರನ್ನು ವಿವಾಹವಾದರೆಂದೂ ಹೇಳಲಾಗಿದೆ. ಋಷಿ ಮುನಿಗಳಲ್ಲಿ ವಶಿಷ್ಟ, ಜಮದಗ್ನಿ, ಪರಾಶರ ಮತ್ತು ವಿಶ್ವಾಮಿತ್ರ ಅಂತರ್‌ಜಾತಿ ವಿವಾಹಿತ ಪ್ರಮುಖರು. ಆಧುನಿಕ ಭಾರತದಲ್ಲಿಯೂ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಕೆ.ಆರ್. ನಾರಾಯಣ, ಜಿನ್ನಾ, ಛಾಗ್ಲ ಮುಂತಾದವರು ತಮ್ಮ ಧರ್ಮದವರಲ್ಲದವರನ್ನು ವಿವಾಹವಾಗಿದ್ದರು ಎಂಬುದು ವಿಶೇಷ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅಂತರ್‌ಜಾತಿ ವಿವಾಹದ ಬಗ್ಗೆ ಹೀಗೆ ಹೇಳುತ್ತಾರೆ.
‘‘ಅಂತರ್‌ಜಾತಿ ವಿವಾಹ ವಾಸ್ತವಿಕ ಪರಿಹಾರ ವೆಂಬುದು ನನಗೆ ಮನವರಿಕೆಯಾಗಿದೆ. ....ಸಮಾಜವು ಇತರ ಸಂಬಂಧಗಳ ಮೂಲಕ ಸದೃಢವಾಗಿದ್ದಾಗ ಮದುವೆ ಜೀವನದ ಸಾಮಾನ್ಯ ಸಂಗತಿ ಆಗಿರುತ್ತದೆ. ಆದರೆ ಸಮಾಜ ಚೂರುಚೂರಾಗಿರುವಲ್ಲಿ ಮದುವೆ ಬೆಸೆಯುವ ಶಕ್ತಿಯಾಗಿ ತುರ್ತು ಅಗತ್ಯದ ವಿಷಯವಾಗುತ್ತದೆ. ಜಾತಿ ಪದ್ಧತಿಯನ್ನು ನಿರ್ನಾಮ ಮಾಡುವುದಕ್ಕೆ ಅಂತರ್‌ಜಾತಿ ವಿವಾಹವೇ ನಿಜವಾದ ಪರಿಹಾರ. ಬೇರೆ ಯಾವುದೂ ಜಾತಿ ಪದ್ಧತಿಯನ್ನು ದುರ್ಬಲಗೊಳಿಸುವ ಶಕ್ತಿ ಯಾಗಲಾರದು..... ಅಂತರ್‌ಜಾತಿ ಭೋಜನ ಮತ್ತು ಅಂತರ್‌ಜಾತಿ ವಿವಾಹಗಳು ಜೀವನ ಕ್ರಮದ ಸಾಮಾನ್ಯ ವಿಷಯಗಳಾದಾಗ ಮಾತ್ರ ಜಾತಿ ಪದ್ಧತಿಯು ಆಚರಣೆಯಿಂದ ಬಿಟ್ಟು ಹೋಗುತ್ತದೆ.’’
ಬಾಬಾ ಸಾಹೇಬರು ಕೂಡ ಜಾತಿ ವಿನಾಶಕ್ಕೆ ಕೊಡುವ ಪರಿಹಾರವೆಂದರೆ ಅಂತರ್ ಭೋಜನ ಮತ್ತು ಅಂತರ್‌ಜಾತಿ ವಿವಾಹ. ಆದರೆ, ಅಂತರ್‌ಜಾತಿ ಪತಿ-ಪತ್ನಿಯರ ಮಕ್ಕಳಿಗೆ ನ್ಯಾಯಾಲಯದ ತೀರ್ಪಿನಂತೆ ತಂದೆ ಜಾತಿ ಪ್ರಾಪ್ತವಾಗುತ್ತದೆ. ಹಾಗಾದಾಗ ಅಂತರ್‌ಜಾತಿ ವಿವಾಹಿತರ ಮುಂದಿನ ತಲೆಮಾರು ಮತ್ತೆ ಜಾತಿಗೆ ಅಂಟಿ ಕೊಳ್ಳುವುದಿಲ್ಲವೇ? ಎಂಬ ಪ್ರಶ್ನೆ ಹುಟ್ಟುವುದು ಸಹಜವಾದುದರಿಂದ ಜಾತಿ ವಿನಾಶಕ್ಕೆ ಎಲ್ಲಿದೆ ಕೊನೆ?
ನ್ಯಾಯಿಕ ತೀರ್ಮಾನದಂತೆ ಅಂತರ್‌ಧರ್ಮೀಯ ವಿಚಾರಕ್ಕೆ ಬಂದರೆ-ಸಂವಿಧಾನದ 25ನೇ ಅನುಚ್ಛೇದವು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಈ ಸ್ವಾತಂತ್ರ್ಯವು ಭಾರತದ ನಾಗರಿಕರಿಗೆ ಮಾತ್ರವಲ್ಲದೆ ಭಾರತದ ನಾಗರಿಕರಲ್ಲದವರಿಗೂ ದೊರೆಯುತ್ತದೆ. ಈ ಧಾರ್ಮಿಕ ಸ್ವಾತಂತ್ರ್ಯವು ಮತ್ತೊಬ್ಬ ವ್ಯಕ್ತಿಯನ್ನು ಮತಾಂತರಿಸುವ ಹಕ್ಕನ್ನು ಒಳಗೊಂಡಿರುವುದಿಲ್ಲ (ಸ್ಟೈನಿಕ್ಲಾಸ್ v/s ಮಧ್ಯಪ್ರದೇಶ, ಎಐಆರ್ 1977 ಸ. ನ್ಯಾ.908). ಏಕೆಂದರೆ ಅವನನ್ನು ಯಾವುದೇ ನಿರ್ದಿಷ್ಟ ಧರ್ಮವನ್ನು ಅನುಸರಿಸುವಂತೆ ನಿರ್ಬಂಧಿಸಲಾಗದು. ಈ ಹಿನ್ನೆಲೆಯಲ್ಲಿ ನಾವು ಅಂತರ್‌ಧರ್ಮೀಯ ವಿವಾಹದ ಪರಿಣಾಮಗಳೇನು ಎಂಬುದನ್ನು ನೋಡಬಹುದಾಗಿದೆ.
ಲಿಂಗದ ಆಧಾರದ ಮೇಲೆ ಪುರುಷ ಮತ್ತು ಮಹಿಳೆಯ ಬಗ್ಗೆ ತಾರತಮ್ಯವೆಸಗಿದರೆ ಸಂವಿಧಾನದ ಅನುಚ್ಛೇದ 15(1)ಅನ್ನು ಉಲ್ಲಂಘಿಸಿದಂತಾಗುತ್ತದೆ (ಏರ್ ಇಂಡಿಯಾ v/s ನರ್ಗೇಶ್ ಎಐಆರ್ 1981 ಸ. ನ್ಯಾ. 1821). ಯಾರೇ ಪತ್ನಿ ಆಗಲಿ ಆಕೆಯ ಪತಿಯ ಧರ್ಮಕ್ಕೆ ಸೇರಿರದ ಮಹಿಳೆಯನ್ನು ಪತಿಯ ಧರ್ಮವನ್ನು ಸ್ವೀಕರಿಸುವಂತೆ ನಿರ್ಬಂಧಿಸುವುದು ಕಾನೂನಿನ ಪ್ರಕಾರ ನಿಷಿದ್ಧವಾಗಿದೆ. ಅಂತಹ ಒತ್ತಾಯಪೂರ್ವಕ ಮತಾಂತರಕ್ಕೆ ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಅನುಮೋದನೆ ನೀಡಲಾಗುವುದಿಲ್ಲ. ಅಂತಹ ಸನ್ನಿವೇಶದಲ್ಲಿ ಎರಡು ಧರ್ಮಗಳ ಸದಸ್ಯರ ನಡುವಿನ ಯಾವುದೇ ವಿವಾಹವು ತಂತಾನೆ ಮತ್ತು ಅನೈಚ್ಛಿಕವಾಗಿ ಪತಿ-ಪತ್ನಿಯಲ್ಲೊಬ್ಬರು ಮತ್ತೊಬ್ಬರ ಧರ್ಮಕ್ಕೆ ಮತಾಂತರಗೊಳ್ಳುವಲ್ಲಿ ಪರ್ಯಾಯವಸಾನವಾಗಬಹುದು. ಪತಿ-ಪತ್ನಿಯರಲ್ಲಿ ಮತ್ತೊಬ್ಬರ ಧರ್ಮವನ್ನು ಸ್ವಇಚ್ಛೆಯಿಂದ ಸ್ವೀಕರಿಸದಿದ್ದರೆ ದಂಪತಿಗಳು ಹಾಗೆ ಅಂತರ್‌ಧರ್ಮೀಯ ವಿವಾಹವಾದ ನಂತರವೂ ಕೂಡ ತಮ್ಮ ತಮ್ಮ ಧರ್ಮಗಳಲ್ಲಿ ಮುಂದುವರಿಯಬಹುದು. ಪತಿ-ಪತ್ನಿಯರನ್ನು ಮಾತ್ರವಲ್ಲದೆ, ಇಡೀ ಕುಟುಂಬವನ್ನು ಮತ್ತು ಅದರ ಸಂತತಿಯವರನ್ನು ಅವರು ಒಮ್ಮತದಿಂದ ಒಂದು ಧರ್ಮವನ್ನು ಆಯ್ಕೆ ಮಾಡಿಕೊಳ್ಳುವವರೆಗೆ ಉಭಯ ಧರ್ಮಕ್ಕೆ ಸೇರದವರೆಂದು ಪರಿಗಣಿಸುವುದು ಅಗತ್ಯ. ಆದ್ದರಿಂದ ಅವರು ಸ್ವಇಚ್ಛೆಯಿಂದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವವರೆಗೆ ಅಂತರ್‌ಧರ್ಮೀಯ ವಿವಾಹವಾದ ಪತಿ-ಪತ್ನಿ ಎಂದು ಮತ್ತು ಅವರ ಮಕ್ಕಳನ್ನು ಯಾವುದೇ ಧರ್ಮದ ಸದಸ್ಯರೆಂದೂ ಪರಿಗಣಿಸ ತಕ್ಕದ್ದಲ್ಲ. ಆದ್ದರಿಂದ ಅಂತರ್ ಧರ್ಮೀಯ ವಿವಾಹವಾದ ಪತಿ-ಪತ್ನಿಯರು ಮತ್ತು ಅವರ ಮಕ್ಕಳು ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿರದ ವ್ಯಕ್ತಿಗಳಾಗಿ ಸ್ವತಃ ತಾವೇ ಒಂದು ವರ್ಗವಾಗಿ ರೂಪುಗೊಳ್ಳುತ್ತಾರೆ.
ಅಂತರ್‌ಜಾತಿ ವಿವಾಹಗಳ ಬಗ್ಗೆ ಹೇಳುವುದಾದರೆ: ಸಂವಿಧಾನದ 21ನೇ ಅನುಚ್ಛೇದದಡಿ ವಿವಾಹದ ಸ್ವಾತಂತ್ರ್ಯವನ್ನು ಖಾತರಿ ಪಡಿಸುತ್ತದೆ. ಒಂದು ನಿರ್ದಿಷ್ಟ ಜಾತಿಯ ಸದಸ್ಯನಾಗಿ ಜನಿಸಿರುವ ವ್ಯಕ್ತಿಗೆ ಮತ್ತೊಂದು ಜಾತಿಯ ಸದಸ್ಯನನ್ನು ಮದುವೆಯಾಗುವುದಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಒಂದು ಜಾತಿಯ ವ್ಯಕ್ತಿ ಮತ್ತೊಂದು ಜಾತಿಯ ವ್ಯಕ್ತಿಯನ್ನು ಮದುವೆಯಾದಾಗ ಆ ಪತಿ-ಪತ್ನಿಯರಲ್ಲಿ ಒಬ್ಬರ ಜಾತಿಯನ್ನು ಮತ್ತೊಬ್ಬರ ಜಾತಿ ಮೇಲೆ ಬಲವಂತವಾಗಿ ಹೇರಲಾಗದು. ಅದೇ ರೀತಿ ಆ ಪತಿ- ಪತ್ನಿಯರಲ್ಲಿ ಯಾರೊಬ್ಬರ ಜಾತಿಯನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಲಾಗದು. ಹಾಗೆ ಬಲವಂತವಾಗಿ ಒತ್ತಾಯಿಸುವುದರಿಂದ ಪತಿ-ಪತ್ನಿ ಮತ್ತು ಅವರ ಮಕ್ಕಳಿಗೆ ನೀಡಲಾದ ಜಾತಿಯ ಸ್ವಾತಂತ್ರ್ಯವನ್ನು ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ಗಂಡನ ಜಾತಿಯನ್ನು ಏಕಪಕ್ಷಿಯವಾಗಿ ಪತ್ನಿ ಮತ್ತು ಮಕ್ಕಳ ಮೇಲೆ ಬಲವಂತವಾಗಿ ಹೇರಬಾರದು.
ಜಾತಿ ನಿರ್ಮೂಲನೆಯ ಸಂಬಂಧ ವಾಸ್ತವ ಸ್ಥಿತಿ ಹೀಗಿದ್ದರೂ, ಸರ್ವೋಚ್ಚ ನ್ಯಾಯಾಲಯವು ನೀಡಿದ ಎರಡು ತೀರ್ಪಿನ ಅಂಶಗಳನ್ನು ತುಲನೆ ಮಾಡಿ ನೋಡಿದಾಗ ಕಂಡುಬರುವ ಸಂಗತಿ ಎಂದರೆ:
ಕುಲ ಗೋತ್ರದ ಯಾವುದೇ ಕಟ್ಟು ಪಾಡುಗಳಿಲ್ಲದೆ ಬುಡಕಟ್ಟಿನೊಳಗೆ ಸಂಯೋಗವಾಗುವುದನ್ನು ಮದುವೆಯ ಮೂಲಕ ಎತ್ತಿ ಹಿಡಿಯಲಾಗಿದೆ (ಹೋರಾ v/s ಜಹಾನ್ ಅರಾ). ಮುಂಡ ಬುಡಕಟ್ಟಿಗೆ ಸೇರಿದ ಹಾಕಿ ಆಟದಲ್ಲಿ ಪ್ರವೀಣನಾದ ಜೈಪಾಲ್ ಸಿಂಗ್ 1954ರಲ್ಲಿ ತಮಿಳು ಕ್ರೈಸ್ತ ಕನ್ಯೆಯನ್ನು ಮದುವೆಯಾಗಿದ್ದರು. ಆ ನಂತರದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಕ್ಷೇತ್ರ ಒಂದರಿಂದ ಸಂಸತ್ತಿಗೆ ಚುನಾಯಿತರಾದರು. ಆದರೆ ಅವರು ಆಕಸ್ಮಿಕವಾಗಿ ಮರಣ ಹೊಂದುತ್ತಾರೆ. ಆ ಚುನಾವಣಾ ಕ್ಷೇತ್ರದಿಂದ ಅವರ ಪತ್ನಿ ಜಹಾನ್ ಅರಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದರು ಹಾಗೂ ನಾಮಪತ್ರವನ್ನೂ ಸಲ್ಲಿಸಿದರು. ಚುನಾವಣಾ ಅಧಿಕಾರಿ ನಾಮಪತ್ರವನ್ನು ತಿರಸ್ಕರಿಸುತ್ತಾರೆ. ಚುನಾವಣಾ ಅಧಿಕಾರಿ ನಾಮಪತ್ರವನ್ನು ತಿರಸ್ಕರಿಸಲು ಕೊಟ್ಟ ಕಾರಣ-ಮುಂಡಾ ಜಾತಿಯನ್ನು ಹುಟ್ಟಿನಿಂದ ಪಡೆದುಕೊಳ್ಳಬಹುದೇ ಹೊರತು ಮದುವೆಯ ಕಾರಣದಿಂದಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯ, ಆಕೆಯ ಮದುವೆಯನ್ನು ಊರ್ಜಿತವೆಂದು ಅಂಗೀಕರಿಸಿದೆ ಮತ್ತು ಆಕೆಯ ಮದುವೆಯನ್ನು ಪಂಚಾಯತ್‌ನಲ್ಲಿ ಸೇರಿದ್ದ ಸಮುದಾಯದ ಹಿರಿಯರು ಅನುಮೋದಿಸಿದ್ದಾರೆ ಎಂಬುದಕ್ಕೆ ಸಾಕ್ಷ್ಯವಿದೆ. ಹಾಗೆ ಅಂಗೀಕರಿಸಿದ ಮೇಲೆ ಆಕೆ ಆ ಬುಡಕಟ್ಟಿನ ಸದಸ್ಯಳಾಗಿದ್ದಾಳೆ ಮತ್ತು ಮೀಸಲಿರಿಸಿದ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕನ್ನೂ ಹೊಂದಿದ್ದಾಳೆ(ಎಐಆರ್ 1972 ಸ. ನ್ಯಾ 1840).
ಸರ್ವೋಚ್ಚ ನ್ಯಾಯಾಲಯದ ಮತ್ತೊಂದು ದೃಷ್ಟಾಂತದ ಪ್ರಕರಣ ಹೀಗಿದೆ - ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಕೆ. ರಾಮಸ್ವಾಮಿಯವರು ಅಂತರ್‌ಜಾತೀಯ ವಿವಾಹಗಳ ಸಮಸ್ಯೆಗಳನ್ನು ವ್ಯಾಪಕವಾಗಿ ಚರ್ಚಿಸಿದ್ದಾರೆ. ವಿಷಯದ ಮೇಲಿನ ಪ್ರೌಢವಾದ ಚರ್ಚೆಯನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಈ ಮುಂದಿನ ನಿರ್ಣಯಕ್ಕೆ ನ್ಯಾಯಾಲಯವು ಬಂದಿದೆ.
‘‘........ ಸಾಮಾನ್ಯ ಕಾನೂನಿನಲ್ಲಾಗಲಿ ಅಥವಾ ಹಿಂದೂ ಕಾನೂನಿನಲ್ಲಾಗಲಿ ಮದುವೆಯ ನಂತರ ಹೆಂಡತಿಯು ಕುಟುಂಬದ ಸದಸ್ಯಳಾಗಿ ಗಂಡನ ಅವಿಭಾಜ್ಯ ಅಂಗವಾಗುತ್ತಾಳೆ. ಆದ್ದರಿಂದ ಮದುವೆಯಾದ ಮೇಲೆ ಮಹಿಳೆಯು ಆ ಮೂಲಕ ಆಕೆ ಯಾವ ಜಾತಿಗೆ ಹೋಗುತ್ತಾಳೋ ಆ ಜಾತಿಯ ಸದಸ್ಯಳಾಗುತ್ತಾಳೆ. ಜಾತಿಯು ಕಟ್ಟುನಿಟ್ಟಾಗಿ ಮುರಿದು ಬೀಳುತ್ತದೆ ಮತ್ತು ಆಕೆಯು ಗಂಡ ಯಾವ ಕುಟುಂಬಕ್ಕೆ ಸೇರಿರುತ್ತಾನೋ ಆ ಕುಟುಂಬದ ಸದಸ್ಯಳಾಗುವುದಕ್ಕೆ ಯಾವುದೇ ಅಡೆತಡೆಗಳು ಇರುವುದಿಲ್ಲ. ಆಕೆ ಸ್ವತಃ ಗಂಡನ ಜಾತಿಗೆ ಪರಿವರ್ತನೆಯಾಗುತ್ತಾಳೆ.’’
ಈ ಪ್ರಕರಣದ ವಾಸ್ತವ ಸಂಗತಿಗಳೆಂದರೆ-ಸಿರಿಯನ್ ಕೆಥೊಲಿಕ್(ಹಿಂದುಳಿದವರಲ್ಲ)ನವರಾದ ವಲ್ಸಮ್ಮ ಪೌಲ್‌ರವರು ಲ್ಯಾಟಿನ್ ಕೆಥೊಲಿಕ್(ಹಿಂದುಳಿದ ಬೆಸ್ತ ಸಮುದಾಯ)ನವರಾದ ಜೆ. ಏಸುದಾಸ್‌ರವರನ್ನು ಮದುವೆಯಾಗಿದ್ದರು. ಆಕೆ ತಮ್ಮ ಮದುವೆ ಮೂಲಕ ತಾನು ಲ್ಯಾಟಿನ್ ಕೆಥೊಲಿಕ್ ಆಗಿದ್ದೀನಿ ಎಂದು ಕ್ಲೇಮ್ ಮಾಡಿದ್ದರು. ನ್ಯಾಯಾಲಯವು ಹೆಂಡತಿಯು ಗಂಡನ ಜಾತಿಗೆ ಬದಲಾಗುವ ಸ್ವಇಚ್ಛೆಯ ಕಾರ್ಯವನ್ನು ಎತ್ತಿ ಹಿಡಿದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಮೇಲೆ ಹೇಳಲಾದ ಕಾರಣಗಳಿಗಾಗಿ ಅಂತರ್‌ಧರ್ಮ ಮತ್ತು ಅಂತರ್‌ಜಾತಿ ವಿವಾಹವಾದ ಪತಿ-ಪತ್ನಿಯರು ಸ್ವಇಚ್ಛೆಯಿಂದ ಮತ್ತು ಅವಿರೋಧವಾಗಿ ಯಾವುದೇ ನಿರ್ದಿಷ್ಟ ಧರ್ಮ ಅಥವಾ ಜಾತಿಯನ್ನು ಸೇರದಿದ್ದರೆ ಅವರನ್ನು ಕ್ರಮವಾಗಿ ಯಾವುದೇ ಧರ್ಮ ಅಥವಾ ಯಾವುದೇ ಜಾತಿಗೆ ಸೇರಿರದ ಪತಿ-ಪತ್ನಿಯರೆಂದು ಭಾವಿಸಬಹುದು. ಆ ಕಾರಣಕ್ಕಾಗಿ ಅವರು ಯಾವುದೇ ಧರ್ಮ ಮತ್ತು ಜಾತಿ ಇಲ್ಲದ ಕುಟುಂಬಗಳ ಒಂದು ಪ್ರತ್ಯೇಕ ವರ್ಗವಾಗಿರತಕ್ಕದ್ದು. ಜಾತಿ ಸಿದ್ಧಾಂತಗಳನ್ನು ವಿರೋಧಿಸುವ ಈ ರೀತಿಯೂ ಅಸಾಧಾರಣ ಧೈರ್ಯ ಪ್ರದರ್ಶನವು ಹಿಂದುಳಿದಿರುವಿಕೆಯನ್ನು ಸೂಚಿಸುವುದಿಲ್ಲ. ಆದ್ದರಿಂದ ಆಯೋಗವು ಈ ಕೆಚ್ಚೆದೆಯ ಹೊಸ ಜನಾಂಗಕ್ಕೆ ಸಾಮಾಜಿಕವಾಗಿ ಹಿಂದುಳಿದವರೆಂಬ ಹಣೆಪಟ್ಟಿಯನ್ನು ನೀಡಲು ಇಷ್ಟಪಡುವುದಿಲ್ಲ.
ಅಂತರ್‌ಜಾತಿ ವಿವಾಹಗಳನ್ನು ಮಾಡಿಕೊಳ್ಳುವ ಮೂಲಕ ಜಾತಿ ಪದ್ಧತಿಯನ್ನು ಮುರಿದಿರುವಂಥ ಜನರು, ಮತ್ತೆ ಜಾತಿ ಅಥವಾ ಸಮುದಾಯದ ತೆಕ್ಕೆಗೆ ಮರಳ ಬಾರದು. ಅಂತರ್‌ಜಾತಿ ಮತ್ತು ಅಂತರ್‌ಧರ್ಮೀಯ ವಿವಾಹಗಳ ಕಾರಣದಿಂದ ಅಂಥ ದಂಪತಿಗಳು ಮತ್ತು ಅವರ ಮಕ್ಕಳಿಗೆ ನಷ್ಟವೇನಾಗುವುದಿಲ್ಲ ಎಂಬುದನ್ನು ಖಚಿತಪಡಿಸುವ ಮೂಲಕ ಇದನ್ನು ಸಾಧಿಸಬಹುದು. ಅವರಿಗೆ ಪರ್ಯಾಯ ಕಲ್ಯಾಣ ಯೋಜನೆಗಳಿಂದ ಇತರ ಪ್ರಯೋಜನಗಳನ್ನು ಪ್ರಭುತ್ವ ದೊರಕಿಸಿಕೊಡಬೇಕು.
ಸರ್ವೋಚ್ಚ ನ್ಯಾಯಾಲಯ ಮತ್ತೊಮ್ಮೆ ಈ ಮುಂದಿನ ಮಾತುಗಳಲ್ಲಿ ಮೀಸಲಾತಿ ಉದ್ದೇಶ ಹಾಗೂ ಜಾತಿರಹಿತ ಸಮಾಜವನ್ನು ಸ್ಥಾಪಿಸುವ ಸಂವಿಧಾನದ ಅಂತಿಮ ಗುರಿಯನ್ನು ಒಮ್ಮತದಿಂದ ಎತ್ತಿ ತೋರಿಸಿದೆ:
‘‘ನಿರಂತರವಾಗಿ ಪರಸ್ಪರ ಪ್ರಭಾವ ಬೀರುವಂಥ ಮತ್ತು ಪರಸ್ಪರ ಪ್ರಸರಿಸಿರುವಂಥ ಪ್ರತ್ಯೇಕ ಅನನ್ಯತೆಗಳನ್ನು ವಿಕಾಸಗೊಳಿಸುವುದು ಮತ್ತು ಬದುಕಿಗೆ ರಾಷ್ಟ್ರೀಯ ಮಾರ್ಗವನ್ನು ರೂಪಿಸುವುದಕ್ಕಾಗಿ ಬೇರೆ ಬೇರೆ ಧರ್ಮಗಳು, ಸಮುದಾಯಗಳು, ಜಾತಿಗಳು, ವರ್ಗಗಳು, ಉಪ ವರ್ಗಗಳು ಮತ್ತು ಧರ್ಮಗಳ ಎಲ್ಲಾ ಸದಸ್ಯರಿಗೆ ಒಂದೆಡೆ ಸೇರುವ ಸ್ಥಳವನ್ನು ತೋರಿಸುವುದು ಪ್ರತಿಯೊಬ್ಬನ ಪ್ರಯತ್ನವಾಗಿರುತ್ತದೆ ಮತ್ತು ರಾಷ್ಟ್ರೀಯ ಸಂಯೋಜನೆ ಮತ್ತು ವಿಶ್ವಮಾನವ ಸಂಸ್ಕೃತಿ ಮತ್ತು ಬದುಕಿನ ವಿಧಾನವನ್ನು ಸುಸ್ಥಾಪಿಸುತ್ತದೆ’’(ಎಐಆರ್ 1996 ಸ.ನ್ಯಾ ॥| ಪ್ಯಾರಾ 22).
ತಮಿಳುನಾಡಿನ ಮೀಸಲಾತಿ:
ಅಂತರ್‌ಜಾತಿ ಮತ್ತು ಅಂತರ್ ಧರ್ಮೀಯ ವಿವಾಹದಿಂದಾದ ಮಕ್ಕಳಿಗೆ ತಮಿಳುನಾಡು ಮೀಸಲಾತಿಯನ್ನು 1985ರಷ್ಟು ಹಿಂದೆಯೇ ನೀಡಿರುವುದು ಸರಿಯಷ್ಟೇ. ತಮಿಳುನಾಡು ಸರಕಾರವು ಎಂಬಿಬಿಎಸ್/ಬಿಡಿಎಸ್/ ಬಿ ಫಾರ್ಮ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಸರಕಾರಿ ವೈದ್ಯಕೀಯ ಕಾಲೇಜುಗಳಿಗೆ ನೀಡುವ ಪ್ರವೇಶದಲ್ಲಿ ಅಂಥ ಮಕ್ಕಳಿಗೆ ಸ್ಥಾನಗಳನ್ನು ಮೀಸಲಿರಿಸಿದೆ. ಅವರಿಗೆ ಒಟ್ಟು 12 ಸ್ಥಾನಗಳನ್ನು ಮೀಸಲಿರಿಸಿದೆ, ಅಲ್ಲದೆ ಹಾಗೆ ಮದುವೆಯಾದವರೊಳಗೆ ಆದ್ಯತಾ ಯೋಜನೆಯನ್ನು ರೂಪಿಸಲಾಗಿದೆ.
ಈ ಮೇಲೆ ಪ್ರಸ್ತಾಪಿಸಿರುವ ಅಂಶಗಳೆಲ್ಲವನ್ನೊಳಗೊಂಡು ಪ್ರೊ.ರವಿವರ್ಮ ಕುಮಾರ್ ಆಯೋಗ ಈ ರೀತಿ ಶಿಫಾರಸು ಮಾಡಿದೆ:
‘‘ಅಂಥವರನ್ನು ಸಂವಿಧಾನದ 14ನೇ ಅನುಚ್ಛೇದದಡಿ ಪ್ರತ್ಯೇಕ ವರ್ಗವೆಂದು ಪರಿಗಣಿಸಬೇಕು ಮತ್ತು ರಾಜ್ಯದ ಅಧೀನ ಸೇವೆಗಳಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ನೀಡುವುದಕ್ಕೆ ಮತ್ತು ಪ್ರಸ್ತುತ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಅಂಥ ಉಪಬಂಧಗಳನ್ನು ಕಲ್ಪಿಸಲಾಗಿರುವಂಥ ಎಲ್ಲಾ ಕ್ಷೇತ್ರಗಳಲ್ಲಿ, ಸಮಾನಾಂತರ ಮೀಸಲಾತಿಯ ರೂಪದಲ್ಲಿ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಈಗ ನೀಡಲಾಗುತ್ತಿರುವ ಮೀಸಲಾತಿಯ ಪ್ರಮಾಣಕ್ಕೆ ಹೆಚ್ಚುವರಿಗಾಗಿ ಶೇ.ಒಂದರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು’’
ಆಯೋಗದ ಶಿಫಾರಸಿನಂತೆ ಅಂತಹ ಪತಿ-ಪತ್ನಿಯರಿಂದ ಜನಿಸಿದ ಮಕ್ಕಳಿಗೆ ಅಸ್ತಿತ್ವದಲ್ಲಿರುವ ಯಾವುದೇ ಜಾತಿಯ ಸೋಂಕು ಇರುವುದಿಲ್ಲ. ಅಂತಹ ಮಕ್ಕಳನ್ನು ಪ್ರತ್ಯೇಕ ವರ್ಗವೆಂದು ಪರಿಗಣಿಸುವುದರಿಂದ ಜಾತಿ ರಹಿತ ಸಮಾಜ ನಿರ್ಮಾಣವಾಗುವುದಲ್ಲದೆ, ಜಡ್ಡು ಹಿಡಿದಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ವಿಪ್ಲವ ಉಂಟಾಗುವುದರಲ್ಲಿ ಯಾವುದೇ ಶಂಕೆ ಇಲ್ಲ.