ಗರ್ಭಿಣಿಯರ ಆರೋಗ್ಯದ ಗ್ಯಾರಂಟಿ ಡಾ. ನಿಸಾರ್ ಫಾತಿಮಾ
24 ವರ್ಷಗಳ ಸೇವೆಯಲ್ಲಿ 10 ಸಾವಿರಕ್ಕೂ ಹೆಚ್ಚು ಸಹಜ ಹೆರಿಗೆ

ಹಾಸನ ಜಿಲ್ಲೆಯ ಆಲೂರು ತಾಲೂಕಿನ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಿಸಾರ್ ಫಾತಿಮಾ ತಮ್ಮ ಅನನ್ಯ ಸೇವಾ ಮನೋಭಾವದಿಂದ ಜನಮನ ಗೆದ್ದಿದ್ದಾರೆ. 24 ವರ್ಷಗಳ ಸೇವೆಯಲ್ಲಿ 10 ಸಾವಿರಕ್ಕೂ ಹೆಚ್ಚು ಸಹಜ ಹೆರಿಗೆ ಮಾಡಿದ್ದಾರೆ.
ಎಂಬಿಬಿಎಸ್ ಮುಗಿಸಿದ ನಂತರ ಬೆಂಗಳೂರಿನ ಫಿಲೊಮಿನಾ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭಿಸಿ ಒಂದು ವರ್ಷ ಕೆಲಸ ಮಾಡಿದರು. 23 ವರ್ಷಗಳ ಕಾಲ ಆಲೂರು ತಾಲೂಕಿನ ಪಾಳ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಮೂಲದ ಡಾ.ಫಾತಿಮಾ, ಕಿರಿಯ ವೈದ್ಯೆಯಾಗಿ ಬಂದಾಗ ಆರೋಗ್ಯ ಕೇಂದ್ರದಲ್ಲಿ ಸರಿಯಾದ ನಾಮಫಲಕವೂ ಇರಲಿಲ್ಲ.
ನಿರಂತರವಾಗಿ ತಮ್ಮ ವೈದ್ಯಕೀಯ ಸೇವೆಯನ್ನು ಗ್ರಾಮೀಣ ಪ್ರದೇಶದ ಜನತೆಗೆ ಅರ್ಪಿಸುತ್ತಾ, ಸಾವಿರಾರು ಗರ್ಭಿಣಿಯರ ಸೇವೆ ಮಾಡುತ್ತಾ ‘ಮಾತೃ ಸೇವಾ ದಿವ್ಯ ತೇಜಸ್’ ಎಂದು ಗುರುತಿಸಿಕೊಂಡಿದ್ದಾರೆ.
ರಜೆ ಇಲ್ಲದ ಸೇವೆ
ವೈದ್ಯಕೀಯ ವೃತ್ತಿಯನ್ನು ಅವರು ಕೇವಲ ಉದ್ಯೋಗವನ್ನಾಗಿ ನೋಡುವುದಿಲ್ಲ. ಡಾ. ನಿಸಾರ್ ಫಾತಿಮಾ ಎಂದರೆ ಎಲ್ಲ ಗರ್ಭಿಣಿಯರ ಆರೋಗ್ಯದ ಭರವಸೆ. ಸರಕಾರಿ ರಜೆಗಳಲ್ಲೂ ಆಸ್ಪತ್ರೆಗೆ ಹಾಜರಾಗುವ ಅವರು, ಹಗಲು-ಇರುಳೆನ್ನದೆ ಸೇವೆಯಲ್ಲಿರುತ್ತಾರೆ.
ಹತ್ತು ಸಾವಿರ ಸಹಜ ಹೆರಿಗೆ ಸಾಧನೆ
ಇತ್ತೀಚೆಗೆ ಆಪರೇಷನ್ ಮೂಲಕ ಹೆರಿಗೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತದೆ. ಆದರೆ ಡಾ.ಫಾತಿಮಾ ಅವರಿಂದ 10 ಸಾವಿರಕ್ಕೂ ಹೆಚ್ಚು ಹೆರಿಗೆಗಳು ಸಹಜವಾಗಿ ನಡೆದಿವೆ. ಇದು ಅವರ ವೈದ್ಯಕೀಯ ಕೌಶಲ್ಯ ಹಾಗೂ ಶ್ರದ್ಧೆಯ ಪ್ರತೀಕವಾಗಿದೆ.
ಇವರ ವೈದ್ಯಕೀಯ ಸೇವೆಯ ಗುಣಮಟ್ಟ ಎಷ್ಟರ ಮಟ್ಟಿಗೆ ಖ್ಯಾತಿ ಪಡೆದಿದೆ ಎಂದರೆ, ಹಾಸನ ಜಿಲ್ಲೆ ಮಾತ್ರವಲ್ಲ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಗರ್ಭಿಣಿಯರು ಇವರ ಬಳಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಅನೇಕ ಮಹಿಳೆಯರು ಹಾಸನ ತಾಲೂಕಿನಲ್ಲಿರುವ ದೊಡ್ಡ ಆಸ್ಪತ್ರೆಗಳಿಗೆ ಹೋಗುವ ಬದಲು ಇವರ ಚಿಕ್ಕ ಆಸ್ಪತ್ರೆ ಮೇಲೆ ವಿಶ್ವಾಸ ಇಡುತ್ತಾರೆ.
ಬಂಜೆತನಕ್ಕೆ ಚಿಕಿತ್ಸೆ
ಕೇವಲ ಹೆರಿಗೆ ಮಾತ್ರವಲ್ಲ, ಬಂಜೆತನ (Infertility) ಚಿಕಿತ್ಸೆಗಾಗಿ ಡಾ. ಫಾತಿಮಾ ಬಳಿ ಬರುತ್ತಾರೆ. ಶೇ.95ರಷ್ಟು ಜನರು ಯಶಸ್ವಿಯಾಗಿ ಸಂತಾನ ಭಾಗ್ಯವನ್ನು ಪಡೆದಿದ್ದಾರೆ ಎಂಬುದು ಅವರ ಚಿಕಿತ್ಸಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ
ಇವರ ಪತಿ ಮೈಸೂರು ಮೂಲದ ಸೈಯದ್ ಮುದಸ್ಸಿರ್ ಕೂಡ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಪತಿಯೇ ವಾಹನ ಚಾಲಕರಾಗಿ ಪತ್ನಿಗೆ ಸಹಾಯ ಮಾಡುತ್ತಾರೆ.
ಅವರ ಸೇವಾವಧಿಯಲ್ಲಿ ಪಾಳ್ಯ ಆಸ್ಪತ್ರೆಗೆ ಎನ್‌ಕ್ಯೂಎ (National Quality Assurance (NQA) ರಾಷ್ಟ್ರೀಯ ಪ್ರಶಸ್ತಿ ಲಬಿಸಿದೆ. ಅವರು ನೂರಾರು ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಡಾ.ನಿಸಾರ್ ಫಾತಿಮಾ ಅವರಂತಹ ವೈದ್ಯರಿಂದ ಎಷ್ಟೋ ಬಡ ಕುಟುಂಬಗಳ ಮಹಿಳೆಯರು ಆರೋಗ್ಯಪೂರ್ಣ ತಾಯ್ತನ ಪಡೆಯುತ್ತಿದ್ದಾರೆ. ಅವರು ಕೇವಲ ವೈದ್ಯೆಯಾಗಿರದೆ, ಭರವಸೆಯ ಹೆಸರಾಗಿದ್ದಾರೆ.
ಎಂಬಿಬಿಎಸ್ ಮಾಡಿರುವ ಇವರು ಉನ್ನತ ವ್ಯಾಸಂಗ ಮಾಡಬೇಕು ಎಂಬ ಆಸೆ ಇದ್ದರೂ ಗ್ರಾಮೀಣ ಸೇವೆಯಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಹೈಯರ್ ಎಜುಕೇಶನ್ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಳ್ಳುತ್ತಾರೆ.