ಜಾತಿ ಗಣತಿಯ ವಿವಾದದ ಧೂಳು ಝಾಡಿಸುತ್ತಾ...
ಭಾಗ- 2
ಜಾತಿ ಗಣತಿಯಿಂದ ಮೀಸಲಾತಿಯ ಬೇಡಿಕೆ ಹೆಚ್ಚಾಗುವುದೇ?
ಜಾತಿ ಗಣತಿಯಿಂದ ಮೀಸಲಾತಿ ಪ್ರಮಾಣ ಹೆಚ್ಚಾಗುತ್ತದೆ ಎನ್ನುವ ಅಪಪ್ರಚಾರದ ಕೂಗು ಪ್ರಾರಂಭದಿಂದಲೇ ಕೇಳಿಬರುತ್ತಿತ್ತು. ಆದರೆ ಮೀಸಲಾತಿ ಪ್ರಮಾಣ ಹೆಚ್ಚಾಗಿದ್ದು ಜಾತಿ ಗಣತಿಯಿಂದ ಅಲ್ಲ. ಅದು ಆರ್ಥಿಕವಾಗಿ ಹಿಂದುಳಿದವರಿಗೂ ಶೇ. ಹತ್ತರಷ್ಟು ಮೀಸಲಾತಿ ನೀಡುವ ಕೇಂದ್ರದ ಬಿಜೆಪಿ ಸರಕಾರದ ಸಂವಿಧಾನ ವಿರೋಧಿ ಕಾಯ್ದೆಯಿಂದಾಗಿ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಜಾತಿಗಣತಿಯ ಉದ್ದೇಶ ಮೀಸಲಾತಿಯನ್ನು ವಿಸ್ತರಿಸುವುದಲ್ಲ, ಮೀಸಲಾತಿಯ ದುರುಪಯೋಗವನ್ನು ತಡೆದು ಅದರ ಲಾಭ ಅರ್ಹರಿಗೆ ತಲುಪುವಂತೆ ಮಾಡುವುದು.
ಮೀಸಲಾತಿ ದುರುಪಯೋಗದ ಹಲವಾರು ಪ್ರಕರಣಗಳು ವ್ಯಾಪಕವಾಗಿ ಚರ್ಚೆಗೀಡಾಗಿವೆ. 2009ರ ಅಕ್ಟೋಬರ್ 27ರಂದು ಹಿಂದಿನ ಬಿಜೆಪಿ ಸರಕಾರ ವೀರಶೈವ/ಲಿಂಗಾಯತ ಉಪಜಾತಿಗಳಾದ ಕುಡುಒಕ್ಕಲ, ಲಾಳಗೊಂಡ, ಹೂಗಾರ, ಆದಿಬಣಜಿಗ, ಬಣಗಾರ, ಗಾಣಿಗ, ನಗರ್ತ, ವೀರಶೈವ ಜಂಗಮ, ವೀರಶೈವ ಬೇಡುವ ಜಂಗಮ, ಶಿವಚಾರ ನಗರ್ತ, ಆದಿವೀರಶೈವ, ವೀರಶೈವ ಪಂಚಮಸಾಲಿ, ಕುರುಹಿನಶೆಟ್ಟಿ/ನೇಕಾರ/ಜಾಡ, ವೀರಶೈವ ಸಿಂಪಿ, ರೆಡ್ಡಿ, ಸಾದರ, ಆರಾಧ್ಯ, ಗುರುವ/ಗುರವ ಈ 19 ಉಪಜಾತಿಗಳನ್ನು ಪ್ರವರ್ಗ -3 (ಬಿ) ಪಟ್ಟಿಗೆ ಸೇರಿಸಿತು.
3(ಬಿ)ಯಲ್ಲಿ ಕ್ರಿಶ್ಚಿಯನ್, ಜೈನ (ದಿಗಂಬರ), ಮರಾಠಾ ಜಾತಿಗಳಲ್ಲದೆ ಲಿಂಗಾಯತ ಉಪಜಾತಿಗಳಾದ ಹೆಳವ, ಅಂಬಿಗ, ಬೋಯಿ, ಗಂಗಾಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ, ಕುರುಬ, ಭಜಂತ್ರಿ, ಭಂಡಾರಿ, ಹಡಪದ, ನಾಯಿಂದ, ಅಕ್ಕಸಾಲಿ, ಬಡಿಗೇರ, ಕಮ್ಮಾರ, ಪಾಂಚಾಳ, ಮೇದಾರ, ಉಪ್ಪಾರ, ಗೌಳಿ ಮೊದಲಾದ ಜಾತಿಗಳಿವೆ. ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಯಾವುದೇ ಕಾರಣವನ್ನು ನೀಡದೆ ಸರಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಿತು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ‘ಬುಡ್ಗಜಂಗಮ’ ಎಂಬ ಅಲೆಮಾರಿ ಜಾತಿಯ ಹೆಸರಿನಲ್ಲಿ ‘ಬೇಡುವ ಜಂಗಮ’ರು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ರಾಜ್ಯ ಸರಕಾರ ಹಿಂದಕ್ಕೆ ಪಡೆದಿದ್ದ 18 ಜಾತಿಗಳಲ್ಲಿ ಲಿಂಗಾಯತ ಸಾದರರೂ ಒಂದು. ಈಗ ಇದೇ ಲಿಂಗಾಯತ ಸಾದರರು ಪ್ರವರ್ಗ 2 (ಎ)ಯಲ್ಲಿರುವ 103 ಜಾತಿಗಳಲ್ಲಿ ಒಂದಾಗಿರುವ ಹಿಂದೂ ಸಾದರರೆಂದು ಸುಳ್ಳು ಸರ್ಟಿಫಿಕೆಟ್ ಪಡೆದು ಒಳ ನುಸುಳುವ ಪ್ರಯತ್ನ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಈಗಿರುವ ಮೀಸಲಾತಿ ನೀತಿ ಪ್ರಕಾರ ಹಿಂದುಳಿದ ಜಾತಿಗಳಿಗೆ ಶೇ. 32ರಷ್ಟು ಮೀಸಲಾತಿ ಇದೆ. ಈ ಹಿಂದುಳಿದ ಜಾತಿಗಳಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಉಪಜಾತಿಗಳೂ ಇವೆ ಎನ್ನುವುದು ಗಮನಾರ್ಹ. ಹಿಂದೂಗಳಲ್ಲಿರುವ ಅನೇಕ ಜಾತಿಗಳು ಲಿಂಗಾಯತ ಉಪಜಾತಿಗಳಲ್ಲಿವೆ. ಆದರೆ ಲಿಂಗಾಯತರಲ್ಲಿರುವ ಈ ಹಿಂದುಳಿದ ಉಪಜಾತಿಗಳಿಗೆ ಹಿಂದೂಗಳಲ್ಲಿರುವ ಉಪಜಾತಿಗಳಿಗೆ ಇರುವ ಪ್ರಮಾಣದ ಮೀಸಲಾತಿ ಇಲ್ಲ.
ಪ್ರವರ್ಗ 2(ಎ)ಯಲ್ಲಿ ಹಿಂದೂ ಧರ್ಮಕ್ಕೆ ಸೇರಿರುವ 103 ಉಪಜಾತಿಗಳಿಗೆ ಶೇ. 15ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಲಿಂಗಾಯತರಲ್ಲಿರುವ ಇದೇ ಜಾತಿಗಳಿಗೆ ಪ್ರವರ್ಗ 3(ಬಿ)ಯಲ್ಲಿ ಶೇ. ಐದರಷ್ಟು ಮೀಸಲಾತಿ ಮಾತ್ರ ಇದೆ. ಜಾತಿ ಗಣತಿ ನಡೆಯಬೇಕಾಗಿರುವುದು ಮೀಸಲಾತಿ ಹೆಚ್ಚಳಕ್ಕಲ್ಲ, ಅದರ ದುರುಪಯೋಗವನ್ನು ತಡೆಯಲು ಎನ್ನುವುದು ಗಮನಾರ್ಹ.
ಜಾತಿ ಗಣತಿ ಕೋಮುವಾದಿಗಳಿಗೆ ನೆರವಾಗಬಹುದೇ?
ಜಾತಿ ಗಣತಿ ಎನ್ನುವುದು ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಕ್ಕೆ ನೆರವಾಗಬಹುದು ಎಂದು ಕೆಲವರು ಕಳವಳ ವ್ಯಕ್ತಪಡಿಸುತ್ತಾರೆ. ನಮ್ಮ ತಥಾಕಥಿತ ಹಿಂದೂ ರಾಷ್ಟ್ರವಾದಿಗಳು ಜಾತಿಯ ಪ್ರಶ್ನೆ ಎದುರಾದಾಗ ಓಡಿಹೋಗುತ್ತಾರೆ. ಯಾಕೆಂದರೆ ಜಾತಿಯ ಜತೆ ಎದುರಾಗುವ ಅಸ್ಪಶ್ಯತೆ, ಅಸಮಾನತೆ, ಪಂಕ್ತಿಭೇದ, ಮೂಢನಂಬಿಕೆ, ಕಂದಾಚಾರಗಳ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದಕ್ಕಾಗಿ ಅವರು ಜಾತಿಯ ಹುಣ್ಣನ್ನು ಒಳಗೆ ಕೊಳೆಯಲು ಬಿಟ್ಟು ಮೇಲೆ ಧರ್ಮದ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಗಣತಿ ನಡೆದರೆ ಈ ಹಿಂದೂಗಳಲ್ಲಿ ಕಳೆದುಕೊಂಡವರು ಯಾರು? ಪಡೆದುಕೊಂಡವರು ಯಾರು? ಎಂಬ ಲೆಕ್ಕ ಸಿಕ್ಕಿದರೆ ಬಯಲಾಗುವುದು ಯಾರ ಮುಖಗಳು ಎನ್ನುವುದನ್ನು ಬಿಡಿಸಿ ಹೇಳಬೇಕೇ?
ಇಂದು ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಬಿಜೆಪಿಯ ಇಡಿ-ಪುಡಿ ನಾಯಕರೆಲ್ಲರೂ ದೇಶ ಒಡೆದು ಚೂರುಚೂರು ಆಗುತ್ತಿದೆ ಎಂದು ಬೊಬ್ಬಿಡುತ್ತಿರುವುದಕ್ಕೆ ಮುಖ್ಯ ಕಾರಣ ಹಿಂದುತ್ವದ ರಾಜಕಾರಣದ ಆತ್ಮವಂಚನೆಯನ್ನು ಜಾತಿ ಗಣತಿಯ ಮಾಹಿತಿ ಬಯಲು ಮಾಡಲಿದೆ ಎಂಬ ಭೀತಿ.
ಜಾತಿ ಗಣತಿ ಎನ್ನುವುದು ವಿವಾದಕ್ಕೆ ಕಾರಣವಾಗಿರುವುದು ಬಯಲಾಗುವ ಜಾತಿವಾರು ಮಾಹಿತಿ ಅಲ್ಲ. ಅದರ ಆಧಾರದಲ್ಲಿ ನೀಡಲಾಗುವ ಮೀಸಲಾತಿಯ ಕಾರಣದಿಂದಾಗಿ. ಇಂದು ಮೀಸಲಾತಿಯನ್ನು ನೇರವಾಗಿ ವಿರೋಧಿಸುವ ಧೈರ್ಯ ಯಾವುದೇ ರಾಜಕೀಯ ಪಕ್ಷ ಇಲ್ಲವೇ ಜಾತಿ-ಧರ್ಮಗಳ ಸಂಘಟನೆಗಳಿಗೆ ಇಲ್ಲ. ಮಂಡಲ್ ವರದಿ ಜಾರಿಗೆ ತರಲು ಹೊರಟಾಗ ಮೈಗೆ ಬೆಂಕಿ ಹಚ್ಚಿಕೊಂಡವರಾಗಲಿ, ಅವರನ್ನು ಬೆಂಬಲಿಸಿದ್ದ ರಾಜಕೀಯ ಪಕ್ಷಕ್ಕಾಗಲಿ ಈಗ ಬಹಿರಂಗವಾಗಿ ಮೀಸಲಾತಿಯನ್ನು ವಿರೋಧಿಸುವ ಧೈರ್ಯ ಇಲ್ಲ.
ಹೌದು, ಒಂದು ಕಾಲದಲ್ಲಿ ಮಂಡಲ್ ವರದಿಯನ್ನು ವಿ.ಪಿ. ಸಿಂಗ್ ಸರಕಾರ ಜಾರಿಗೆ ತಂದಾಗ ವಿರೋಧಪಕ್ಷದಲ್ಲಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೇ ಲೋಕಸಭೆಯಲ್ಲಿ ವಿರೋಧಿಸಿದ್ದರು. ಬಿಜೆಪಿಯಂತೂ ಮಂಡಲ್ ವಿರುದ್ಧ ಕಮಂಡಲವನ್ನು ಹುಟ್ಟುಹಾಕಿ ದೇಶದ ಹಾದಿ ತಪ್ಪಿಸಿತು. ಇಂದು ಜಾತ್ಯತೀತರನ್ನೆಲ್ಲ ಆತಂಕಕ್ಕೀಡುಮಾಡಿರುವ ಕೋಮುವಾದ ಈ ರೀತಿ ಆಳ-ಅಗಲಕ್ಕೆ ಬೆಳೆಯಲು ಸನ್ಮಾನ್ಯ ಲಾಲ್ ಕೃಷ್ಣ ಅಡ್ವಾಣಿಯವರ ನೇತೃತ್ವದಲ್ಲಿ ಪ್ರಾರಂಭಗೊಂಡ ಕಮಂಡಲ ಅರ್ಥಾತ್ ಕೋಮುವಾದಿ ರಾಜಕೀಯ ಕಾರಣ ಎನ್ನುವುದನ್ನು ಮರೆಯಬಾರದು.
ಆದರೆ ಇಂದು ಅದೇ ಬಿಜೆಪಿಗೆ ಕೂಡಾ ಮೀಸಲಾತಿಯನ್ನು ವಿರೋಧಿಸುವ ಧೈರ್ಯ ಇಲ್ಲ. ಸಾಮಾಜಿಕ ನ್ಯಾಯವನ್ನು ಅಪಹಾಸ್ಯ ಮಾಡುತ್ತಿದ್ದ ಬಿಜೆಪಿ ನಾಯಕರು ಈಗ ಸಾಮಾಜಿಕ ನ್ಯಾಯದ ಮಂತ್ರ ಪಠಿಸತೊಡಗಿದ್ದಾರೆ.
ನೀವು ಮೀಸಲಾತಿಯನ್ನು ಒಪ್ಪುವುದಾದರೆ ಅದನ್ನು ಇನ್ನಷ್ಟು ವೈಜ್ಞಾನಿಕವಾಗಿ ಜಾರಿಗೆ ತರಲು ನೆರವಾಗುವ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನೂ ಒಪ್ಪಬೇಕಾಗುತ್ತದೆ. ಜಾತಿ ಗಣತಿಬೇಡ ಎನ್ನುವುದಾದರೆ ಮೀಸಲಾತಿ ಕೂಡಾ ಬೇಡ ಎಂದು ಬಹಿರಂಗವಾಗಿ ಹೇಳಿಕೆ ನೀಡಬೇಕು. ಆ ಧೈರ್ಯ ಭಾರತೀಯ ಜನತಾ ಪಕ್ಷಕ್ಕೆ ಇದೆಯೇ?
ಜಾತಿ ಗಣತಿಯಿಂದ ಏನು ಲಾಭ?
ಸರಕಾರಿ ಸೌಲಭ್ಯಗಳ ಸದ್ಬಳಕೆ ಮತ್ತು ಮೀಸಲಾತಿ ದುರು ಪಯೋಗದ ತಡೆಯ ಜತೆಗೆ ಈಗಿನ ಸರಕಾರಿ ಮೀಸಲಾತಿಗಿಂತ ಆಚೆಗೆ ನೋಡಲು ಈ ಜಾತಿ ಗಣತಿ ನೆರವಾಗಬಹುದು. ಜಾತಿ ಗಣತಿ ನಡೆದರೆ ಪ್ರತಿಯೊಬ್ಬರ ಉದ್ಯೋಗದ ವಿವರ ಕೂಡಾ ಲಭ್ಯ ಇರುವುದರಿಂದ ಖಾಸಗಿ ಕ್ಷೇತ್ರಗಳಲ್ಲಿರುವ ಉದ್ಯೋಗಿಗಳ ಜಾತಿ-ಧರ್ಮದ ಬಹುಮುಖ್ಯ ಮಾಹಿತಿ ಲಭ್ಯವಾಗುತ್ತದೆ. ಇಲ್ಲಿಯ ವರೆಗೆ ಖಾಸಗಿ ಕಂಪೆನಿಗಳು ಈ ಮಾಹಿತಿಯನ್ನು ಒದಗಿಸಲು ನಿರಾಕರಿಸುತ್ತಾ ಬಂದಿವೆ.
ಸರಕಾರ ಬಹುತೇಕ ತನ್ನ ಸೇವೆಗಳನ್ನು ಖಾಸಗೀಕರಣಗೊಳಿಸಿರು ವುದರಿಂದ ಸರಕಾರಿ ಉದ್ಯೋಗಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೆ ವಿಸ್ತರಿಸದೆ ನಿರುದ್ಯೋಗ ನಿವಾರಣೆ, ಉದ್ಯೋಗದ ಸಮಾನ ಅವಕಾಶ ಸಾಧ್ಯ ಇಲ್ಲ.
ಖಾಸಗಿ ಎನ್ನುವುದು ಎಷ್ಟು ಖಾಸಗಿ ಎನ್ನುವ ಪ್ರಶ್ನೆಯನ್ನು ಕೂಡಾ ನಾವು ಕೇಳಬೇಕಾಗಿದೆ. ಸರಕಾರ ನೀಡುವ ಅಗ್ಗದ ದರದಲ್ಲಿ ಭೂಮಿ, ಕಡಿಮೆ ಬಡ್ಡಿದರದಲ್ಲಿ ಸಾಲ, ಟ್ಯಾಕ್ಸ್ ಹಾಲಿಡೇ, ವಿದ್ಯುತ್, ನೀರು, ತೆರಿಗೆ ವಿನಾಯಿತಿ, ಸಬ್ಸಿಡಿ ಬೆಂಬಲ ಇಲ್ಲದೆ ಖಾಸಗಿ ಕ್ಷೇತ್ರದ ಬಂಡವಾಳ ಬೆಳೆಯಲು ಸಾಧ್ಯವೇ ಇಲ್ಲ.
ಈ ಖಾಸಗಿ ಕಂಪೆನಿಗಳ ಷೇರುಗಳಲ್ಲಿ ತಮ್ಮ ಅಲ್ಪ ಉಳಿತಾಯವನ್ನು ಹೂಡುತ್ತಿರುವವರು ಸಾಮಾನ್ಯ ಜನರು. ಹರ್ಷದ್ ಮೆಹ್ತಾನ ವಂಚನೆಯಿಂದ, ಸತ್ಯ ಕಂಪ್ಯೂಟರ್‌ನ ಮೋಸಕ್ಕೆ ಬಲಿಯಾದವರು ಅದರ ಷೇರುಗಳನ್ನು ಖರೀದಿಸಿದ್ದ ಸಾಮಾನ್ಯ ಜನ.
ಭಾರತದಲ್ಲಿ ಮೀಸಲಾತಿ ಸರಕಾರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರೆ ಅನೇಕ ದೇಶಗಳಲ್ಲಿ ಉದಾಹರಣೆಗೆ ಅಮೆರಿಕ, ಉತ್ತರ ಐರ್‌ಲ್ಯಾಂಡ್, ದಕ್ಷಿಣ ಆಫ್ರಿಕಾ, ಮಲೇಶ್ಯ ಮೊದಲಾದ ದೇಶಗಳಲ್ಲಿ ಮೀಸಲಾತಿಯಂತಹ ದೃಢ ಸಂಕಲ್ಪ (Affirmative Action) ನೀತಿಗಳು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಜಾರಿಯಲ್ಲಿವೆ.
ಸರಕಾರದ ವಿವಿಧ ಸವಲತ್ತುಗಳನ್ನು ಅನುಭವಿಸುವ ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದ ಸಾಲಪಡೆಯುವ ಎಲ್ಲ ಕೈಗಾರಿಕೆಗಳು, ವಸತಿ, ಶಿಕ್ಷಣ, ರಾಜಕೀಯ ಪಕ್ಷಗಳು ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ Affirmative Action ಜಾರಿಯಲ್ಲಿದೆ. ಇದು ಕೇವಲ ಔಪಚಾರಿಕ ಮಟ್ಟದಲ್ಲಿ ಉಳಿಯದೆ ಇವುಗಳ ಚಾಲನೆ ಮತ್ತು ಕಾರ್ಯಗತಕ್ಕೆ ಸಂಬಂಧಪಟ್ಟ ಕಾನೂನುಗಳು ಮತ್ತು ಸಂಸ್ಥೆಗಳಿರುವುದನ್ನು ಕಾಣಬಹುದು.
ಅಮೆರಿಕದಲ್ಲಿ Equal Opportunity (employment) Laws, Equal Employment Opportunity Commission, ದಕ್ಷಿಣ ಆಫ್ರಿಕಾದಲ್ಲಿ The Promotion of Equality and Prevention of Unfair Discrimination Act-2000 ನೆದರ್‌ಲ್ಯಾಂಡ್ಸ್‌ನಲ್ಲಿ Fair Employment Actಗಳಿವೆ.
ಜಾತಿ ಸಮೀಕ್ಷೆಯಿಂದ ಮೇಲ್ಜಾತಿಯವರಿಗೆ ಏನು ಲಾಭ?
ಮೊದಲನೆಯದಾಗಿ ಈಗ ನಡೆಯುತ್ತಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಬಳಕೆಯಲ್ಲಿ ಜಾತಿ ಗಣತಿ ಎಂದು ಹೇಳಿದರೂ ಇದಕ್ಕೆ ಅಷ್ಟು ಸೀಮಿತವಾದ ಅರ್ಥ ಇಲ್ಲ. ಇದು ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯ, ಎಲ್ಲ ಜಾತಿ-ಧರ್ಮಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ.
ಸಾಮಾನ್ಯವಾಗಿ ಮೀಸಲಾತಿಯ ಬಗ್ಗೆ ಚರ್ಚೆ ನಡೆದಾಗೆಲ್ಲ ಮೇಲ್ಜಾತಿಯವರಲ್ಲಿ ಬಡವರಿಲ್ಲವೇ ಎಂಬ ಪ್ರಶ್ನೆ ತೂರಿ ಬರುತ್ತದೆ. ಈ ಪ್ರಶ್ನೆ ಬಹಳ ಪ್ರಸ್ತುತವಾದುದು ಕೂಡಾ. ಖಂಡಿತ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಲ್ಲಿ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿಯೂ ಬಡವರಿದ್ದಾರೆ. ಆದರೆ ಈ ಬಗ್ಗೆ ಸರಕಾರದಲ್ಲಿ ಯಾವ ಮಾಹಿತಿಯೂ ಇಲ್ಲ.
ಈಗಿನ ಆರ್ಥಿಕ-ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಾಗ ದಲಿತ-ಹಿಂದುಳಿದ-ಅಲ್ಪಸಂಖ್ಯಾತರಲ್ಲಿರುವ ಬಡವರ ಸಂಖ್ಯೆ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿನ ಬಡವರ ಸಂಖ್ಯೆ ಮತ್ತು ಅವರ ಸ್ಥಿತಿಗತಿಯ ಮಾಹಿತಿ ಲಭ್ಯವಾಗುತ್ತದೆ. ಅದರ ಆಧಾರದಲ್ಲಿ ಮೇಲ್ಜಾತಿಗಳಲ್ಲಿರುವ ಬಡವರ ಅಭಿವೃದ್ಧಿಗಾಗಿಯೂ ಕಾರ್ಯಕ್ರಮಗಳನ್ನು ರೂಪಿಸುವಂತೆ ಒತ್ತಡ ಹೇರಲು ಸಾಧ್ಯವಿದೆ.