ಪಾಳು ಬಿದ್ದ ದ.ಕ. ಜಿಲ್ಲೆಯ ಏಕೈಕ ಕೃಷಿ ತರಬೇತಿ ಕೇಂದ್ರ
ಬೆಳ್ತಂಗಡಿ, ಡಿ.25: ದ.ಕ. ಜಿಲ್ಲೆಯ ಕೃಷಿಕರಿಗೆ ತರಬೇತಿಗಳನ್ನು ನೀಡಿ ಆ ಮೂಲಕ ಕೃಷಿಯಲ್ಲಿ ಹೊಸ ಬದಲಾವಣೆಗಳು ತರಬೇಕು ಎಂಬ ಮಹತ್ವದ ಗುರಿಯೊಂದಿಗೆ ಬೆಳ್ತಂಗಡಿಯಲ್ಲಿ ಆರಂಭಿಸಲಾಗಿದ್ದ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಇದೀಗ ಸಂಪೂರ್ಣವಾಗಿ ಪಾಳು ಬಿದ್ದಿದ್ದು, ಕೊಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಕಟ್ಟಡಗಳು ನಿರುಪಯುಕ್ತವಾಗಿ ಹಾಳಾಗುತ್ತಿದೆ.
ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ ಸರಕಾರದ ನೆರವಿನಿಂದ ಸುಸಜ್ಜಿತವಾದ ಕೃಷಿ ತರಬೇತಿ ಕೇಂದ್ರವನ್ನು ನಿರ್ಮಿಸಲಾಗಿದೆ. ಇಡೀ ತರಬೇತಿ ಕೇಂದ್ರದ ಆವರಣದಲ್ಲಿ ಡಾಮರು ರಸ್ತೆಗಳನ್ನು ಹಾಗೂ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಸುಸಜ್ಜಿತವಾದ ವಸತಿ ಗೃಹಗಳು, ತರಬೇತಿ ಕೊಠಡಿಗಳು ಪೀಠೋಪಕರಣಗಳು ಇಲ್ಲಿದೆ. ಆದರೆ ತರಬೇತಿಗಳು ಮಾತ್ರ ನಡೆಯುತ್ತಿಲ್ಲ. ಎಲ್ಲವೂ ಪಾಳು ಬಿದ್ದು ನಾಶವಾಗುತ್ತಿದೆ.
ಇಲ್ಲಿನ ಹಳೆಯ ವಸತಿಗೃಹಗಳು ಸರಿಯಾದ ನಿರ್ವಹಣೆಯಿಲ್ಲದೆ ಒಂದೊಂದಾಗಿ ಉರುಳಿ ಬೀಳುತ್ತಿದೆ. ಒಂದೆರಡು ಕಟ್ಟಡಗಳು ಸಂಪೂರ್ಣ ಕುಸಿದು ಬಿದ್ದಿದೆ. ಎರಡು ವರ್ಷದ ಹಿಂದೆ ಸುಸಜ್ಜಿತವಾಗಿದ್ದ ಕಟ್ಟಡಗಳು ಇದೀಗ ಸಂಪೂರ್ಣವಾಗಿ ಕಾಡು ಆವರಿಸಿಕೊಂಡು ಕೇಂದ್ರದ ಸಮೀಪಕ್ಕೆ ಮನುಷ್ಯ ತೆರಳಲು ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದೆ. ಕಟ್ಟಡಗಳೇ ಕಾಣದ ರೀತಿಯಲ್ಲಿ ಕಾಡು ಬೆಳೆದಿದ್ದರೂ ಅದನ್ನು ತೆಗೆಯಲು ಕನಿಷ್ಠ ಕ್ರಮವನ್ನೂ ಇಲಾಖೆ ತೆಗೆದುಕೊಂಡಿಲ್ಲ.
ನೂರಕ್ಕೂ ಹೆಚ್ಚು ಕೃಷಿಕರಿಗೆ ತರಬೇತಿ ಪಡೆಯಲು ಎಲ್ಲ ವ್ಯವಸ್ಥೆಗಳೂ ಇಲ್ಲಿದೆ. ಎಲ್ಲ ಆಧುನಿಕ ಸೌಲಭ್ಯಗಳಿರುವ ತರಬೇತಿ ಕೊಠಡಿಗಳು, ಡೈನಿಂಗ್ ಹಾಲ್, ಕೃಷಿಕರಿಗೆ ತಂಗಲು ಕೊಠಡಿಗಳು, ಬೆಡ್ಗಳು, ಅಧಿಕಾರಿಗಳ ವಸತಿ ಗೃಹಗಳು, ತರಬೇತಿ, ಪ್ರಾತ್ಯಕ್ಷಿಕೆಗೆ ಬೇಕಾದ ವ್ಯವಸ್ಥೆಗಳು ಈ ಕೇಂದ್ರದಲ್ಲಿದೆ.
ಜಿಲ್ಲೆಯ ಎಲ್ಲ ತಾಲೂಕುಗಳ ಕೃಷಿಕರಿಗೆ ತರಬೇತಿಗಳು ನಡೆಯುತ್ತಿದ್ದು, ಇದೀಗ ಎಲ್ಲ ಕಟ್ಟಡಗಳು ಹಾಗೂ ಇಲ್ಲಿನ ವ್ಯವಸ್ಥೆಗಳು ನಿರ್ವಹಣೆಯಿಲ್ಲದೆ ಸಂಪೂರ್ಣ ಹಾಳಾಗಿ ಹೋಗಿದೆ.
ಕೊರೋನದ ಬಳಿಕ ನಿಂತು ಹೋದ ತರಬೇತಿಗಳು: ಕೊರೋನದ ಬಳಿಕ ಬೆಳ್ತಂಗಡಿ ಕೃಷಿ ಕೇಂದ್ರದಲ್ಲಿ ಕೃಷಿಕರಿಗೆ ತರಬೇತಿಗಳು ನಡೆದಿಲ್ಲ. ಕೊರೋನ ಸಂದರ್ಭ ಆನ್ಲೈನ್ನಲ್ಲಿ ತರಬೇತಿಗಳನ್ನು ಆರಂಭಿಸಲಾಗಿತ್ತು. ಮತ್ತೆ ತಾತ್ಕಾಲಿಕವಾಗಿ ತರಬೇತಿಗಳನ್ನು ನಿಲ್ಲಿಸಲಾಗಿತ್ತು. ಕೊರೋನ ಹೋದರೂ ಕೃಷಿ ತರಬೇತಿ ಕೇಂದ್ರಕ್ಕೆ ಮಾತ್ರ ಇನ್ನೂ ಮುಕ್ತಿ ದೊರೆತಿಲ್ಲ. ತರಬೇತಿಗಳು ನಡೆಯುತ್ತಿಲ್ಲ.
ತರಬೇತಿ ಕೇಂದ್ರವನ್ನು ನಿರ್ವಹಣೆ ಮಾಡದೆ ಬಿಟ್ಟಿದ್ದು, ಕಟ್ಟಡಗಳು ನಾಶವಾಗಲು ಕಾರಣ
ವಾಗಿದೆ. ಪಾಳು ಬಿದ್ದಿರುವ ಹಲವು ಕಟ್ಟಡಗಳು ಮತ್ತೆ ದುರಸ್ತಿ ಮಾಡಲು ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದೆ. ಕೆಲವನ್ನು ದುರಸ್ತಿ ಮಾಡಬೇಕಾದರೆ ಮತ್ತೆ ಲಕ್ಷಾಂತರ ರೂ. ಖರ್ಚು ಮಾಡಬೇಕಾದ ಅನಿವಾರ್ಯತೆಯಿದೆ.
ಸಚಿವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ
ಜಿಲ್ಲೆಯ ಏಕೈಕ ಕೃಷಿ ತರಬೇತಿ ಕೇಂದ್ರದ ದುರವಸ್ಥೆಯ ಬಗ್ಗೆ ಹಾಗೂ ಅದನ್ನು ಸರಿಪಡಿಸುವ ಬಗ್ಗೆ ಬೆಳ್ತಂಗಡಿಗೆ ಆಗಮಿಸಿದ್ದ ಕೃಷಿ ಸಚಿವರಿಗೆ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ ಈ ವರೆಗೆ ಯಾವುದೇ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿಲ್ಲ.
3 ವರ್ಷಗಳಿಂದ ನಿಂತಲ್ಲಿಯೇ ಇರುವ ಬಸ್
ತರಬೇತಿಗೆ ಬರುವ ಕೃಷಿಕರಿಗೆ ಕ್ಷೇತ್ರ ವೀಕ್ಷಣೆಗೆಂದು ತರಬೇತಿ ಕೇಂದ್ರದಲ್ಲಿ ಬಸ್ ಒದಗಿಸಲಾಗಿತ್ತು. ತರಬೇತಿ ನಿಂತಾಗಲೇ ಬಸ್ ನ್ನು ಶೆಡ್ ನಲ್ಲಿ ನಿಲ್ಲಿಸಲಾಗಿದ್ದು, ಮತ್ತೆ ಅದನ್ನು ಅಲ್ಲಿಂದ ಹೊರತೆಗೆದಿಲ್ಲ. ನಿಂತಲ್ಲಿಯೇ ಮೂರು ವರ್ಷಗಳಿಂದ ಇರುವ ಬಸ್ ಗುಜಿರಿಗೆ ಕೊಡುವ ಸ್ಥಿತಿ ತಲುಪಿದೆ. ಇನ್ನು ಚಾಲನಾ ಸ್ಥಿತಿಗೆ ತರುವುದು ಅಸಾಧ್ಯ.
ಕೃಷಿ ತರಬೇತಿ ಕೇಂದ್ರದ ಈ ದುರವಸ್ಥೆಗೆ ಇಲ್ಲಿನ ಅಧಿಕಾರಿಗಳೇ ಕಾರಣರಾಗಿದ್ದಾರೆ. ತರಬೇತಿಗಳು ನಡೆಯದೆ ಇದ್ದರೂ ಕಟ್ಟಡಗಳ ನಿರ್ವಹಣೆ ಮಾಡುವ ಜವಾಬ್ದಾರಿ ಅವರದ್ದಾಗಿತ್ತು. ಆದರೆ ಅದನ್ನು ಮಾಡದೆ ಇಡೀ ತರಬೇತಿ ಕೇಂದ್ರವೇ ಸಂಪೂರ್ಣವಾಗಿ ಪಾಳು ಬೀಳಲು ಬಿಟ್ಟಿದ್ದಾರೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಇಲ್ಲಿನ ಕಟ್ಟಡಗಳನ್ನು ದುರಸ್ತಿಮಾಡಿ ಸುಸ್ಥಿತಿಗೆ ತರಬೇಕು. ಇಲ್ಲಿ ಕೃಷಿಕರಿಗೆ ತರಬೇತಿ ಸಿಗುವಂತಾಗಬೇಕು. ಇಡೀ ತರಬೇತಿ ಕೇಂದ್ರವನ್ನು ಹಾಳುಗೆಡವಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಶೇಖರ ಲಾಯಿಲ, ಸಾಮಾಜಿಕ ಹೋರಾಟಗಾರ