Fact Check: ಅಯೋಧ್ಯೆಯಲ್ಲಿ ರಾಮಮಂದಿರವನ್ನು ಬಾಬರಿ ಮಸೀದಿ ಕೆಡವಿದ ಜಾಗದಿಂದ 3 ಕಿಮಿ ದೂರದಲ್ಲಿ ಕಟ್ಟಲಾಗುತ್ತಿದೆಯೇ?
ಸತ್ಯಾಂಶ ಇಲ್ಲಿದೆ
Photo: PTI
ವದಂತಿ: ಅಯೋಧ್ಯೆಯಲ್ಲಿ ರಾಮಮಂದಿರವನ್ನು ಬಾಬ್ರಿ ಮಸೀದಿ ಕಡವಿದ ಜಾಗದಿಂದ ಮೂರು ಕಿಮಿ ದೂರದಲ್ಲಿ ಕಟ್ಟಲಾಗುತ್ತಿದೆ "
ವಾಸ್ತವ - ಇದು ಸುಳ್ಳು ಸುದ್ದಿ.
ಕೆಲವು ವಾಸ್ತವ ಸಂಗತಿಗಳನ್ನು ಗಮನಿಸೋಣ :
-ಬಾಬರಿ ಮಸೀದಿಯನ್ನು ಕೆಡವಿದ ನಂತರ ಪಿವಿ. ನರಸಿಂಹ ರಾವ್ ಸರ್ಕಾರ ಬಾಬರಿ ಮಸೀದಿ ಇದ್ದ 2.7 ಎಕರೆ ಪ್ರದೇಶವನ್ನು ಒಳಗೊಂಡಂತೆ 70 ಎಕರೆ ಪ್ರದೇಶವನ್ನು ಕೇಂದ್ರ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ THE ACQUISITION OF CERTAIN AREA AT AYODHYA ACT, 1993 ಕಾಯಿದೆಯನ್ನು ಜಾರಿ ಮಾಡಿತು. ಅಲ್ಲಿಂದಾಚೆಗೆ ಬಾಬರಿ ಮಸೀದಿ ಇದ್ದ ಜಾಗವು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಸುಪರ್ದಿಯಲ್ಲೇ ಇತ್ತು . 2019 ರಲ್ಲಿ ಸುಪ್ರೀಂ ಕೋರ್ಟು ತೀರ್ಪು ಬರುವ ತನಕ.
(https://www.indiacode.nic.in/bitstream/123456789/1915/3/A1993-33.pdf)
-ಅಸಲು ವಿವಾದ ಇದ್ದದ್ದು ಬಾಬರಿ ಮಸೀದಿ ಇದ್ದ ಜಾಗವಾದ 2.7 ಎಕರೆ ಜಮೀನಿನ ಒಡೆತನ ಯಾರದ್ದು ಎಂಬುದು. ಹೀಗಾಗಿ ಅದು ದಾಖಲೆಗಳು, ಭೂ ಒಡೆತನಗಳ ಬಗ್ಗೆ ಇರುವ ಕಾನೂನುಗಳು ಮತ್ತು ಸಾಕ್ಷ್ಯ ಪುರಾವೆಗಳ ಆಧಾರದಲ್ಲಿ ಬಗೆಹರಿಸಬೇಕಿದ್ದ ಭೂ ಒಡೆತನದ ವ್ಯಾಜ್ಯವಾಗಿತ್ತು. ಆದರೆ ಸುಪ್ರೀಂ ಕೋರ್ಟು ಹಿಂದುತ್ವವಾದಿ ಶಕ್ತಿಗಳ ಒತ್ತಡಕ್ಕೆ ಮಣಿದು ಅದನ್ನು ಜಾಗದ ಧಾರ್ಮಿಕ ಸ್ವರೂಪದ ಐತಿಹ್ಯದ ವಿವಾದವನ್ನಾಗಿ ಪರಿಗಣಿಸಿತು.
ಸಾಕ್ಷಿ ಪುರಾವೆಗಳಿಲ್ಲದಿದ್ದರೂ ಮಸೀದಿಯ ಕೆಳಗೆ ರಾಮಮಂದಿರವಿತ್ತು ಎಂಬುದಾಗಲೀ ಮತ್ತು ಅದನ್ನು ಕೆಡವಿಯೇ ಬಾಬರಿ ಮಸೀದಿ ಕಟ್ಟಲಾಗಿದೆ ಎಂಬುದಾಗಲಿ ಸಾಬೀತಾಗಿಲ್ಲವೆಂದು ಒಪ್ಪಿಕೊಂಡರೂ ಆ ಜಾಗದ ಒಡತನ ಹಿಂದೂಗಳಿಗೆ ಸೇರಿದ್ದೆಂದು ತೀರ್ಪು ನೀಡಿತು.
- 2019 ರ ನವಂಬರ್ ನಲ್ಲಿ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಕೊಟ್ಟ ತೀರ್ಪಿನ ಅಂತಿಮ ಭಾಗದಲ್ಲಿ ವಿವಾದಕ್ಕೆ ಕೊಟ್ಟಿರುವ ಪರಿಹಾರದ ಪ್ರಕಾರ (ಪ್ಯಾರಾ : 805, ಪುಟ 925-927) :
ಆ) ಬಾಬರಿ ಮಸೀದಿ ಧ್ವಂಸ ಮಾಡಿದ ಜಾಗದ ಒಡೆತನ (ಮಸೀದಿ ಇದ್ದ ಜಾಗದ ಒಳಾವರಣ ಮತ್ತು ಹೊರಾವರಣ ಗಳನ್ನೂ ಒಳಗೊಂಡು ) ರಾಮ ಲಲ್ಲಾ ನಿಗೆ ಸೇರುತ್ತದೆ. ಹೀಗಾಗಿ ಅಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮೂರು ತಿಂಗಳೊಳಗೆ ಒಂದು ಟ್ರಸ್ಟ್ ಸ್ಥಾಪನೆ ಮಾಡಬೇಕು.
ಆ) 1993 ರ ಕಾಯಿದೆಯಡಿ ರಲ್ಲಿ ವಶಪಡಿಸಿಕೊಂಡ, ಬಾಬರಿ ಮಸೀದಿ ಇದ್ದ 2.7 ಎಕರೆ ಜಮೀನನ್ನು ಕೇಂದ್ರ ಸರ್ಕಾರ ಆ ಟ್ರಸ್ಟ್ ಗೆ ವರ್ಗಾಯಿಸಬೇಕು.
ಇ) ಆಯೋಧ್ಯಾ ಕಾಯಿದೆಯಡಿ ವಶಪಡಿಸಿಕೊಂಡ 70 ಎಕರೆ ಜಮೀನಿನಲ್ಲಿ ಐದು ಎಕರೆ ಜಮೀನನ್ನು ಕೇಂದ್ರ ಸರ್ಕಾರ ಮಸೀದಿ ನಿರ್ಮಿಸಲು ಕೊಡಬೇಕು ಅಥವಾ ಉತ್ತರ ಪ್ರದೇಶ ರಾಜ್ಯ ಸರ್ಕಾರ ಪ್ರಮುಖವಾದ ಪ್ರದೇಶದಲ್ಲಿ ಸೂಕ್ತವಾದ ಐದು ಎಕರೆ ಜಮೀನನ್ನು ಕೊಡಬೇಕು.
(ಆಸಕ್ತರು ತೀರ್ಪನ್ನು ಈ ವೆಬ್ ವಿಳಾಸದಲ್ಲಿ ಗಮನಿಸಬಹುದು: https://www.sci.gov.in/pdf/JUD_2.pdf)
ಹೀಗಾಗಿ ಸುಪ್ರೀಂ ಕೋರ್ಟ್ ಸ್ವಯಂ ಬಾಬರಿ ಮಸೀದಿ ಇದ್ದ ಜಾಗವನ್ನು ರಾಮಮಂದಿರ ಕಟ್ಟಲು ಸಂಘಪರಿವಾರಕ್ಕೆ ನೀಡಿದೆ.
ಈ ತೀರ್ಪಿನ ವಿರುದ್ಧ 18 ಪುನರ್ ಪರಿಶೀಲನಾ ಅಹವಾಲುಗಳು ಸುಪ್ರೀಂ ಕೋರ್ಟಿನಲ್ಲಿ ಕೂಡಲೇ ದಾಖಲಾದವು. ಆದರೆ ಅವೆಲ್ಲವನ್ನು ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪರಿಶೀಲನಾ ಪೀಠ 2019 ರ ಡಿಸೇಂಬರ್ 12 ರಂದೇ ವಜಾ ಮಾಡಿತು. ಆ ನಂತರ ಎಲ್ಲಾ ಮುಸ್ಲಿಂ ದಾವೆದಾರರು ಈ ತೀರ್ಪಿನ ವಿರುದ್ಧ ಹೋರಾಡಲು ಉಳಿದಿದ್ದ ಏಕಮಾತ್ರ ದಾರಿಯಾಗಿದ್ದ Curative Petition ದಾಖಲು ಮಾಡುವುದು ಬೇಡವೆಂದು ತೀರ್ಮಾನಿಸಿದರು.
ಆದರೆ ಪೀಸ್ ಪಾರ್ಟಿ ಎಂಬ ಪಕ್ಷದ ಅಧ್ಯಕ್ಷ ಡಾ. ಮಹಮ್ಮದ್ ಅಯೂಬ್ ಎಂಬುವರು 2020 ರ ಜನವರಿ 21 ರಂದು ಅಯೋಧ್ಯಾ ತೀರ್ಪಿನ ವಿರುದ್ಧ Curative Petition ದಾಖಲಿಸಿದರು. ಅವರು ಈ ಹಿಂದೆ ದೂರುದಾರರಾಗಿರಲಿಲ್ಲ. ಆದರೆ ಅದನ್ನು ಸುಪ್ರೀಂ ಕೋರ್ಟು ಇನ್ನು ವಿಚಾರಣೆಗೆ ಒಪ್ಪಿಕೊಂಡೂ ಇಲ್ಲ. ಅಥವಾ ತನ್ನ ಹಿಂದಿನ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆಯನ್ನು ಕೊಟ್ಟಿಲ್ಲ.
ಸುಪ್ರೀಂ ಕೋರ್ಟಿನ ವೆಬ್ ಸೈಟಿನಲ್ಲಿ ಈ ಅಹವಾಲಿನ ವಿವರಗಳನ್ನು ನೋಡಿದರೆ ಅಹವಾಲುದಾರರೂ ಇದನ್ನು ಗಂಭೀರವಾಗಿ ಬೆಂಬತ್ತಿರುವಂತೆ ಕಾಣುತ್ತಿಲ್ಲ. ಹೀಗಾಗಿ ಈ Curative Petition ಸರ್ಕಾರದ ಮುಂದಿನ ನಡೆಗಳಿಗೆ ಯಾವುದೇ ರೀತಿ ಅಡ್ಡಿಯಾಗಲಿಲ್ಲ.
(ಮೇಲಾಗಿ ಸುಪ್ರೀಂ ಈ Curative Petition ಅನ್ನು ಪರಿಗಣಿಸುವುದೂ ಇಲ್ಲ ಎಂಬುದಕ್ಕೆ ವಿಶೇಷ ಪುರಾವೆಗಳ ಅಗತ್ಯವಿಲ್ಲ).
- ಹೀಗಾಗಿ ಕ್ಯೂರಿಟಿವ್ ಪೆಟಿಶನ್ ದಾಖಲಾದ 15 ದಿನದಲ್ಲೆ ಅಂದರೆ 2020 ರ ಫೆಬ್ರವರಿ 5 ರಂದು ಮೋದಿ ಸರ್ಕಾರ ಬಾಬರಿ ಮಸೀದಿ ನಾಶ ಮಾಡಿದ ಜಾಗದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಮಾಡಲು 15 ಜನ ಸದಸ್ಯರ "ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್" ಅನ್ನು ಸ್ಥಾಪಿಸಿತು. ಈ 15 ಜನರಲ್ಲಿ 12 ಜನರನ್ನು ಮೋದಿ ಸರ್ಕಾರವೇ ನೇಮಕ ಮಾಡಿತು. ಅದರಲ್ಲಿ ಕರ್ನಾಟಕದ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮಿಯೂ ಒಬ್ಬರು. ಈ ಟ್ರಸ್ಟ್ ಕಾಮೇಶ್ವರ್ ಚೌಪಾಲ್ ಎಂಬ ವಿಶ್ವ ಹಿಂದೂ ಪರಿಷತ್ತಿನ ದಲಿತ ನಾಯಕರನ್ನು ಸದಸ್ಯರನ್ನಾಗಿ ಸೇರಿಸಿಕೊಂಡಿದೆ.
ಟ್ರಸ್ಟಿನ ವೆಬ್ ಸೈಟ್ ಸ್ಪಷ್ಟಪಡಿಸುವಂತೆ ಟ್ರಸ್ಟಿನ ಉದ್ದೇಶ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಲೆಂದೇ ಭಾರತ ಸರ್ಕಾರ ಟ್ರಸ್ಟನ್ನು ಸ್ಥಾಪಿಸಿದೆ.
(ಹೆಚ್ಚಿನ ವಿವರಗಳಿಗೆ ಆಸಕ್ತರು ಟ್ರಸ್ಟಿನ ವೆಬ್ ಸೈಟನ್ನು ಈ ವಿಳಾಸದಲ್ಲಿ ಗಮನಿಸಬಹುದು : https://srjbtkshetra.org/)
2020 ರ ಆಗಸ್ಟ್ 5 ರಂದು ಪ್ರಧಾನಿ ಮೋದಿ ಬಾಬರಿ ಮಸೀದಿ ಕೆಡವಿದ ಜಾಗದಲ್ಲೇ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಮಾಡಿದರು.
ಭೂಮಿ ಪೂಜೆ ಮಾಡಿದ ಜಾಗದಲ್ಲೇ ಅಂದರೆ ಬಾಬರಿ ಮಸೀದಿ ಧ್ವಂಸ ಮಾಡಿದ ಜಾಗದಲ್ಲೇ ರಾಮಮಂದಿರವೂ ನಿರ್ಮಾಣವಾಗುತ್ತಿದೆ.
ಹೀಗಾಗಿ ಮಸೀದಿ ಇದ್ದ ಜಾಗದಿಂದ ಮೂರು ಕಿಮೀ ದೂರದಲ್ಲಿ ನಿರ್ಮಾಣವಾಗುತ್ತಿದೆ ಎಂಬ ವದಂತಿಯೆಲ್ಲಾ ಸುಳ್ಳು ಎಂಬುದನ್ನು ಮೇಲಿನ ಮಾಹಿತಿಗಳು ಸ್ಪಷ್ಟಪಡಿಸುತ್ತವೆ.
ಈ ಮಧ್ಯೆ ಮಸೀದಿ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರ್ಕಾರವೂ ಅಯೋಧ್ಯೆಯಿಂದ 25 ಕಿಮೀ ದೂರವಿರುವ ಧುನ್ಪುರದಲ್ಲಿ ಐದು ಎಕರೆ ಜಮೀನನ್ನು ನೀಡಿದೆ. ಆದ್ದರಿಂದ ಕೇಂದ್ರ ಸರ್ಕಾರ ವಶಪಡಿಸಿಕೊಂಡಿದ್ದ 70 ಎಕರೆಗಳಲ್ಲೂ ರಾಮಮಂದಿರ ಸಂಸ್ಥಾನವನ್ನೇ ಮೋದಿ ಸರ್ಕಾರ ನಿರ್ಮಿಸುತ್ತಿದೆ.
ಇದು ಬೃಹತ್ ಅನ್ಯಾಯ. ಮಹಾ ಅಧರ್ಮ. ಇಂಥಾ ಅನ್ಯಾಯವನ್ನು ಮಾನ್ಯ ಮಾಡಿದ್ದು ಭಾರತದ ಸುಪ್ರೀಂ ಕೋರ್ಟ್. ಇವೆಲ್ಲಾ ಗೊತ್ತಿರುವ ವಿಷಯವೇ.
ಈ ಅನ್ಯಾಯದ ವಿರುದ್ಧ ಮತ್ತು ಅಧರ್ಮದ ವಿರುದ್ಧ ನ್ಯಾಯವಂತರು ಧ್ವನಿ ಎತ್ತಬೇಕಿರುವ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಬಾಬರಿ ಮಸೀದಿ ಇಂದ ಮೂರು ಕಿಮಿ ದೂರದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂಬ ಹುಸಿ ಸಮಾಧಾನ ಕೊಡುವ ಹುಸಿ ಸುದ್ದಿ ಚಾಲ್ತಿಗೆ ಬಂದಿದೆ. ಇದಕ್ಕೆ ಯಾವ ತರ್ಕವೂ ಇಲ್ಲ. ಮೇಲಿನ ವಿವರಗಳಲ್ಲಿ ಅದು ಸ್ಪಷ್ಟ. ಈವರೆಗೆ ಯಾವ ವಿರೋಧ ಪಕ್ಷಗಳೂ ಅಥವಾ ಈಗ ಇದನ್ನು ತಮ್ಮದೇ ಕಾರಣಗಳಿಗೆ ವಿರೋಧಿಸುತ್ತಿರುವ ಶಂಕರಾಚಾರ್ಯರೂ ಸಹ ಈ ವದಂತಿಯನ್ನು ಪರೋಕ್ಷವಾಗಿ ಸಮರ್ಥಿಸುವ ವಿಷಯವನ್ನೂ ಹೇಳುತ್ತಿಲ್ಲ.
ಉತ್ತರ ಪ್ರದೇಶದಲ್ಲಿ ಬೇರುಗಳನ್ನು ಹೊಂದಿರುವ ಯಾವ ಜನಪರ, ಪ್ರಗತಿಪರ ಪರ್ಯಾಯ ಮಾಧ್ಯಮಗಳೂ ಸಹ ರಾಮಮಂದಿರವು ಬಾಬರಿ ಮಸೀದಿ ನಾಶವಾದ ಜಾಗದಿಂದ ಮೂರು ಕಿಮಿ ದೂರದಲ್ಲಿ ನಿರ್ಮಾಣವಾಗುತ್ತಿದೆ ಎಂದು ವರದಿ ಮಾಡಿಲ್ಲ. ಏಕೆಂದರೆ ಅದು ವಾಸ್ತವವಲ್ಲ. ಹಾಗಿದ್ದಲ್ಲಿ ಇದ್ದಕ್ಕಿದ್ದಂತೆ ಈ ಸುದ್ದಿ ಸೃಷ್ಟಿ ಮಾಡುತ್ತಿರುವರು ಯಾರು ? ಏಕೆ?
ಜಸ್ಟ್ ಆಸ್ಕಿಂಗ್
- ಶಿವಸುಂದರ್