ರಾಜಕೀಯ ಸ್ವಾತಂತ್ರ್ಯದಿಂದ ಆರ್ಥಿಕ ಸ್ವಾತಂತ್ರ್ಯದೆಡೆಗೆ
ಆರ್ಥಿಕತೆ ಮತ್ತು ಸ್ವಾತಂತ್ರ್ಯ
ನಾಗರಿಕರಿಗೆ ಸ್ವಾತಂತ್ರ್ಯವಿಲ್ಲದಿದ್ದರೆ ಜೀವನ ಕ್ರಮವನ್ನು ಸುಧಾರಿಸುವುದು ಸಾಧ್ಯವಿಲ್ಲ; ಜೀವನ ಕ್ರಮ ಸುಧಾರಣೆಯಾದಾಗ ಮಾತ್ರ ಸ್ವಾತಂತ್ರ್ಯವು ಅರ್ಥಪೂರ್ಣವಾಗುತ್ತದೆ. ಈ ಹೇಳಿಕೆಯ ಭಾವವನ್ನು ಗ್ರಹಿಸಲು ಭಾರತದ ಸ್ವಾತಂತ್ರ್ಯಪೂರ್ವದ ಕಾಲಘಟ್ಟ, ಆ ಬಳಿಕದ ಸಂವಿಧಾನದ ರಚನೆಯ ಪ್ರಕ್ರಿಯೆ ಮತ್ತು ಸ್ವಾತಂತ್ರ್ಯೋತ್ತರ ದಶಕಗಳ ಬದಲಾವಣೆಗಳತ್ತ ದೃಷ್ಟಿ ಹಾಯಿಸಬೇಕು.
ಈ ವರ್ಷದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೇಶದ ಅರ್ಥವ್ಯವಸ್ಥೆ ಮತ್ತೆ ಮುನ್ನೆಲೆಗೆ ಬರುತ್ತಿದೆ. ಪ್ರಜಾತಂತ್ರವನ್ನು ಪಾಲಿಸುವ ದೇಶದಲ್ಲಿ ನಾಗರಿಕರು ಗೌರವದಿಂದ ಬಾಳಬೇಕಿದ್ದರೆ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಸ್ವಾತಂತ್ರ್ಯವೂ ಅಗತ್ಯ. ನಾಗರಿಕರಿಗೆ ಸ್ವಾತಂತ್ರ್ಯವಿಲ್ಲದಿದ್ದರೆ ಜೀವನ ಕ್ರಮವನ್ನು ಸುಧಾರಿಸುವುದು ಸಾಧ್ಯವಿಲ್ಲ; ಜೀವನ ಕ್ರಮ ಸುಧಾರಣೆಯಾದಾಗ ಮಾತ್ರ ಸ್ವಾತಂತ್ರ್ಯವು ಅರ್ಥಪೂರ್ಣವಾಗುತ್ತದೆ. ಈ ಹೇಳಿಕೆಯ ಭಾವವನ್ನು ಗ್ರಹಿಸಲು ಭಾರತದ ಸ್ವಾತಂತ್ರ್ಯಪೂರ್ವದ ಕಾಲಘಟ್ಟ, ಆ ಬಳಿಕದ ಸಂವಿಧಾನದ ರಚನೆಯ ಪ್ರಕ್ರಿಯೆ ಮತ್ತು ಸ್ವಾತಂತ್ರ್ಯೋತ್ತರ ದಶಕಗಳ ಬದಲಾವಣೆಗಳತ್ತ ದೃಷ್ಟಿ ಹಾಯಿಸಬೇಕು.
ಶೋಷಣೆಯಿಂದ ಮುಕ್ತಿ:
ಬ್ರಿಟಿಷರ ವಸಾಹತು ರಾಜ್ಯವಾಗಿದ್ದಾಗ ಹಾಗೂ ಅದಕ್ಕಿಂತ ಹಿಂದೆ ನೂರಾರು ‘ರಾಜಮಹಾರಾಜ’ರ ಆಳ್ವಿಕೆಯಲ್ಲಿದ್ದಾಗ ಭಾರತದ ಸಮಾಜವು ಉಳ್ಳವರು ಮತ್ತು ಇಲ್ಲದವರು ಎಂದು ಎರಡು ಭಾಗವಾಗಿತ್ತು. ಉಳ್ಳವರು ಮಾತ್ರ ಆಳ್ವಿಕೆಯಲ್ಲಿ ಹಕ್ಕುದಾರರಾಗಿದ್ದರು, ಸಂಖ್ಯೆಯಲ್ಲಿ ಬಹುಮತವನ್ನು ಹೊಂದಿದ್ದರೂ ಇಲ್ಲದವರಿಗೆ ತಮ್ಮ ಏಳಿಗೆಗೆ ಅಗತ್ಯವಾದ ನೀತಿಗಳನ್ನು ರೂಪಿಸುವ ಅಧಿಕಾರವು ಇರಲಿಲ್ಲ.
ಹೋದ ಶತಮಾನದ ಪೂರ್ವಾರ್ಧದ ಸ್ವಾತಂತ್ರ್ಯ ಚಳವಳಿಯ ಒಂದು ಮುಖ್ಯ ಉದ್ದೇಶವು ಜನಸಾಮಾನ್ಯರನ್ನು ಆರ್ಥಿಕ ಶೋಷಣೆಯಿಂದ ಬಿಡುಗಡೆ ಮಾಡಿ ಎಲ್ಲರಿಗೂ ಗೌರವದ ಜೀವನ ನಡೆಸುವ ಹಕ್ಕನ್ನು ಒದಗಿಸಿಕೊಡುವುದೇ ಆಗಿತ್ತು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ದೇಶದ ಹೆಸರಿನಲ್ಲಿ ನೀಡಿದ ಸಂದೇಶ ‘ಭವಿತವ್ಯದೊಡನೆ ಅನುಸಂಧಾನ’ವೂ ಈ ಗುರಿಯನ್ನು ಈ ರೀತಿಯಾಗಿ ಪ್ರಸ್ತಾವಿಸಿತ್ತು:
ಭಾರತದ ಸೇವೆ ಎಂದರೆ ಲಕ್ಷಾಂತರ ಮಂದಿ ಸಂಕಷ್ಟಗೊಳಗಾದವರ ಸೇವೆ. ಇದರ ಅರ್ಥ ದಾರಿದ್ರ್ಯ, ಅಜ್ಞಾನ, ರೋಗರುಜಿನಗಳು ಮತ್ತು ಅವಕಾಶಗಳ ಅಸಮಾನತೆಗಳನ್ನು ದೂರೀಕರಿಸುವುದು.
ಈ ಉದ್ದೇಶವನ್ನು ಹೊಸ ದೇಶದ ಸಂವಿಧಾನವನ್ನು ರಚಿಸುವಾಗ ಅದರ ಪ್ರಸ್ತಾವನೆಯಲ್ಲಿ ಮತ್ತು ರಾಜ್ಯನೀತಿಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಿಕೊಳ್ಳಲಾಯಿತು. ಶತಮಾನಗಳಿಂದ ಶೋಷಣೆಗೊಳಗಾಗಿದ್ದ ದುರ್ಬಲ ಪ್ರಜೆಗಳಿಗೆ ರಾಜಕೀಯ ಸ್ವಾತಂತ್ರ್ಯಕ್ಕೆ ಪೂರಕವಾದ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸಿಕೊಡುವ ಘನ ಉದ್ದೇಶವನ್ನು ಈ ತತ್ವಗಳು ಹೊಂದಿದ್ದವು. ಈ ಆಶಯಗಳನ್ನು ಸಾಕಾರಗೊಳಿಸಲು ಸ್ವತಂತ್ರಭಾರತದ ಸರಕಾರಗಳು ವಿಭಿನ್ನ ಯೋಜನೆಗಳನ್ನು ಕೈಗೊಂಡವು.
ಮುಂದಿನ ಸುಮಾರು ಆರೇಳು ದಶಕಗಳಲ್ಲಿ ದೇಶವು ಬಹಳಷ್ಟು ದಾರಿಯನ್ನು ಕ್ರಮಿಸಿತು. ಸರಕಾರದ ಹಸ್ತಕ್ಷೇಪ, ಉತ್ತೇಜನ ಮತ್ತು ಕಾನೂನುಕ್ರಮಗಳ ಮೂಲಕ ಜನಸಾಮಾನ್ಯರಿಗೆ ಬದುಕುವ ಹಕ್ಕನ್ನು ಕೊಡುವಲ್ಲಿ ಪ್ರಗತಿಯನ್ನು ದೇಶ ಸಾಧಿಸಿತು. ಬರಗಾಲ ಮತ್ತು ಹಸಿವಿನ ನಿವಾರಣೆಯಲ್ಲಿ ಗಮನಾರ್ಹ ಯಶಸ್ಸನ್ನು ಗಳಿಸಿತು. ಶಿಕ್ಷಣ, ಆರೋಗ್ಯ, ಮಕ್ಕಳ ಮತ್ತು ಮಹಿಳೆಯರ ಕಲ್ಯಾಣ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸಾರಿಗೆ ಸಂಪರ್ಕ-ಮುಂತಾದ ರಂಗಗಳಲ್ಲಿ ಗಣನೀಯ ಮುನ್ನಡೆಯನ್ನು ಸಾಧಿಸಿ ಜನರ ಜೀವನಮಟ್ಟ ಸುಧಾರಿಸಿತು. ಒಂದು ಕಾಲಕ್ಕೆ ಜಗತ್ತಿನಲ್ಲಿ ಅತ್ಯಂತ ಹಿಂದುಳಿದ ರಾಷ್ಟ್ರಗಳಲ್ಲಿ ಒಂದಾಗಿದ್ದ ಭಾರತ ಜಗತ್ತಿನಲ್ಲಿ ಒಂದು ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತು.
ಈ ಆರ್ಥಿಕ ಸಾಧನೆಗಳನ್ನು ನಮ್ಮದಾಗಿಸುವಲ್ಲಿ ದೇಶವು ಆಯ್ದುಕೊಂಡ ಮಾರ್ಗ ಪ್ರಜಾಕೇಂದ್ರಿತವಾಗಿತ್ತು ಮತ್ತು ಪ್ರಜಾತಂತ್ರದ ಚೌಕಟ್ಟಿನೊಳಗೇ ಆಗಿತ್ತು ಎಂಬುದು ಹೆಗ್ಗಳಿಕೆಯ ಅಂಶ. ಈ ದಾರಿಯ ಮೂಲಕ ಶೋಷಣೆಗೊಳಗಾಗಿದ್ದ ಪ್ರಜೆಗಳಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಭಾರತವು ಸಾಕಷ್ಟು ಯಶಸ್ಸನ್ನು ಸಾಧಿಸಿತು.
‘ಎಲ್‌ಪಿಜಿ’ ಯುಗದಲ್ಲಿ ಆದ ಬದಲಾವಣೆ:
ಯಾವುದೇ ಸಾರ್ವಭೌಮ ರಾಷ್ಟ್ರದಲ್ಲಿ ಅದರ ನೀತಿ ಮತ್ತು ಧೋರಣೆಗಳು ಬದಲಾವಣೆ ಹೊಂದುತ್ತಲೇ ಇರುತ್ತವೆ. ಹೋದ ಶತಮಾನದ ಕೊನೆಯ ವರ್ಷಗಳಲ್ಲಿ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಹೆಚ್ಚಿನ ಸರಕಾರಗಳು, ಜಾಗತಿಕ ವಿದ್ಯಮಾನಗಳು, ಆಂತರಿಕ ಸಮಸ್ಯೆಗಳು ಮತ್ತು ರಾಜಕೀಯ ಅಸ್ಥಿರತೆಯಿಂದಾಗಿ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು. ಸಂಕಷ್ಟಕ್ಕೊಳಗಾದ ದೇಶಗಳು ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯಬೇಕಾಗಿ ಬಂತು. ಸಾಲದ ಜೊತೆಗೆ ಹಣಕಾಸು ಸಂಸ್ಥೆಗಳು ಹಲವಾರು ನಿಬಂಧನೆಗಳನ್ನು ಹೇರಿದವು. ಸಾಲ ಪಡಕೊಂಡ ದೇಶವು ತನ್ನ ಅರ್ಥವ್ಯವಸ್ಥೆಯಲ್ಲಿ ಸರಕಾರದ ಹಸ್ತಕ್ಷೇಪವನ್ನು ಸಡಿಲಿಸಬೇಕು, ವ್ಯಾಪಾರ-ವ್ಯವಹಾರ-ಉದ್ದಿಮೆಗಳು ಮಾರುಕಟ್ಟೆಯ ಪೂರೈಕೆ-ಬೇಡಿಕೆಗೆ ಅನುಗುಣವಾಗಿ ನಡೆಯಬೇಕು, ಸರಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗಿ ಕ್ಷೇತ್ರಕ್ಕೆ ಬಿಟ್ಟುಕೊಡಬೇಕು, ಖಾಸಗಿ ಉದ್ಯೋಗಪತಿಗಳಿಗೆ ಮತ್ತು ವಿದೇಶಿ ಕಂಪೆನಿಗಳಿಗೆ ಹೊಸ ಉದ್ದಿಮೆಗಳನ್ನು ಆರಂಭಿಸಲು ಮತ್ತು ಮುಚ್ಚಲು ಮುಕ್ತ ಅವಕಾಶ ನೀಡಬೇಕು, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ, ಹೂಡಿಕೆ, ಹಣದ ವರ್ಗಾವಣೆ ಎಲ್ಲವೂ ಸರಕಾರದ ಮೇಲ್ವಿಚಾರಣೆಯಿಂದ ಮುಕ್ತವಾಗಬೇಕು, ಇವೇ ಮುಂತಾದ ನಿಬಂಧನೆಗಳಿಗೆ ಆರ್ಥಿಕ ಸಂಕಷ್ಟಕ್ಕೆ ಒಳಗಾದ ದೇಶಗಳು ಒಪ್ಪಿಗೆ ನೀಡಬೇಕಾಯಿತು. ಈ ಒಟ್ಟು ಬದಲಾವಣೆಯು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ-‘ಎಲ್‌ಪಿಜಿ’- ಎಂದು ಪ್ರಚಾರಕ್ಕೆ ಬಂದಿತು.
ಭಾರತದಲ್ಲಿಯೂ 1991ರ ನಂತರ ಬಂದ ಎಲ್ಲ ಸರಕಾರಗಳು ಎಲ್‌ಪಿಜಿ ಆಧಾರಿತ ಮುಕ್ತ ಅರ್ಥನೀತಿಯನ್ನು ಅನುಸರಿಸತೊಡಗಿದವು. ದೇಶವು ಮುಂದಿನ ಎರಡು ದಶಕಗಳಲ್ಲಿ ನಿರಂತರ ಆರ್ಥಿಕ ಪ್ರಗತಿಯನ್ನು ದಾಖಲಿಸಿತು. ವಿಭಿನ್ನ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಯನ್ನು ಮಾಡಿತು. ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಮಾನದಂಡದ ಪ್ರಕಾರ ವಿಶ್ವದ ಐದನೆಯ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಿತು.
ಪ್ರಗತಿಯ ವಿಪರ್ಯಾಸಗಳು:
ಇದರ ಜೊತೆಗೆ ದೇಶವು ಸಾಧಿಸಿದ ಆರ್ಥಿಕ ಪ್ರಗತಿಯಲ್ಲಿ ಇನ್ನೊಂದು ಮಜಲನ್ನೂ ಕಾಣಬಹುದು. ಈಗ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಸಂಕ್ಷಿಪ್ತವಾಗಿ ನಾಲ್ಕು ಬೆಳವಣಿಗೆಗಳನ್ನು ಗುರುತಿಸಬಹುದು:
1. ಉದ್ಯೋಗರಹಿತ ಪ್ರಗತಿ
2. ಮಾರುಕಟ್ಟೆಯ ಹಿಡಿತಕ್ಕೆ ಸಿಕ್ಕಿ ಬೆಲೆಗಳ ಏರಿಕೆ
3. ಬೆಲೆ ಏರಿಕೆ ಮತ್ತು ಸಂಪಾದನೆಯ ಕುಗ್ಗುವಿಕೆಯಿಂದ ದೈನಂದಿನ ಜೀವನಕ್ಕೆ ಹೊಡೆತ
4. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳು
ಆರ್ಥಿಕ ನೀತಿಯ ದಿಶೆಯ ಬದಲಾವಣೆಯು 1991ರಿಂದ ಆರಂಭವಾಗಿದ್ದರೂ ಹೋದ ದಶಕದಲ್ಲಿ ಕೇಂದ್ರಸರಕಾರವು ಕೈಗೊಂಡ ಕೆಲವು ನಿರ್ಧಾರಗಳು- ಮುಖ್ಯವಾಗಿ 2016ರ ನೋಟು ರದ್ದತಿ, 2017ರ ಜಿಎಸ್‌ಟಿ ಕಾನೂನು, 2020ರ ‘ಲಾಕ್ ಡೌನ್’ ಮತ್ತು ಈ ಅವಧಿಯಲ್ಲಿ ಖಾಸಗಿ ಉದ್ಯೋಗಪತಿಗಳಿಗೆ ನೀಡುತ್ತಿರುವ ಪ್ರಾಶಸ್ತ್ಯ- ಪರಿಸ್ಥಿತಿಯನ್ನು ಸುಧಾರಿಸುವುದರ ಬದಲು ಪ್ರಜೆಗಳನ್ನು ಇನ್ನೂ ಹೆಚ್ಚಿನ ಆರ್ಥಿಕ ಸಂಕಷ್ಟಗಳಿಗೆ ತಳ್ಳಿವೆ.
ಜನಸಾಮಾನ್ಯರ ಬವಣೆಗಳ ಬಗ್ಗೆ ಕೆಲವು ನಿದರ್ಶನಗಳನ್ನು ಮುಂದಿಡಬಹುದು. ನಿರಂತರ ಆಗುತ್ತಿರುವ ಉದ್ಯೋಗ ನಷ್ಟ ಮತ್ತು ಇರುವ ಉದ್ಯೋಗಗಳಲ್ಲಿನ ಅಭದ್ರತೆ, ಹೊಸ ಉದ್ಯೋಗಗಳ ಬರ, ಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆಗಳ ಇಳಿಮುಖ, ಕೌಟುಂಬಿಕ ಸಂಪಾದನೆಯ ಕುಸಿತದಿಂದಾಗಿ ಆರೋಗ್ಯ ಮತ್ತು ಮಕ್ಕಳ ವಿದ್ಯೆಯ ಮೇಲೆ ಹೊಡೆತ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ-ಇವುಗಳು ಘನತೆಯಿಂದ ಬದುಕುವ ಹಕ್ಕಿಗೆ ಹೊಡೆತ ನೀಡಿ ಸ್ವಾತಂತ್ರ್ಯವನ್ನು ದೇಶದ ಪ್ರಧಾನವಾಹಿನಿಯ ನಾಗರಿಕರಿಗೆ ಅರ್ಥಹೀನವಾಗಿ ಮಾಡುತ್ತವೆ.
ನವೆಂಬರ್ 2023ರಲ್ಲಿ ಕೇಂದ್ರ ಸರಕಾರವು ಮಾಧ್ಯಮಗಳಿಗೆ ಕೊಟ್ಟ ಒಂದು ಹೇಳಿಕೆಯ ಪ್ರಕಾರ ದೇಶದ 81.35 ಕೋಟಿ ನಾಗರಿಕರಿಗೆ ಉಚಿತ ಆಹಾರಧಾನ್ಯವನ್ನು ಕೊಡುವ ಯೋಜನೆಯನ್ನು ಮತ್ತೆ ಐದು ವರ್ಷಕ್ಕೆ ವಿಸ್ತರಿಸಿದೆ. ಇದರ ಅರ್ಥ ಸ್ವಾತಂತ್ರ್ಯದ ಅಮೃತಕಾಲದಲ್ಲಿ ಹಸಿದಿರುವವರ ಸಂಖ್ಯೆ ಒಟ್ಟು ಜನಸಂಖ್ಯೆಯ (142 ಕೋಟಿ)ಅರ್ಧಕ್ಕಿಂತ ಹೆಚ್ಚು ಎಂದಾಯಿತು. ಮುಂದಿನ ಐದು ವರ್ಷಗಳಲ್ಲಿ ಇದಕ್ಕೆ ತಗಲುವ ವೆಚ್ಚ ಸುಮಾರು ರೂ.11.80 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಇನ್ನೊಂದೆಡೆ, ತಮ್ಮ ಮಗನ ಮದುವೆಯಿಂದ ಈ ವರ್ಷ ಜಗತ್ತಿನಲ್ಲಿಯೇ ಸುದ್ದಿಮಾಡಿದ್ದ ಭಾರತದ ಉದ್ಯೋಗಪತಿಯೊಬ್ಬರ ಸಂಪತ್ತಿನ ಮೌಲ್ಯವು ರೂ.25.75 ಲಕ್ಷ ಕೋಟಿ. (2023-24ರ ವಿತ್ತವರ್ಷದಲ್ಲಿ ಇವರ ಕಂಪೆನಿಗಳು ಒಟ್ಟು 42,000 ಉದ್ಯೋಗಿಗಳನ್ನು ವಜಾಮಾಡಿವೆ) ಇವೆರಡು ಮಾಹಿತಿಗಳು ನಮ್ಮ ಅರ್ಥವ್ಯವಸ್ಥೆಯ ವಿಪರ್ಯಾಸಗಳಿಗೆ ಕನ್ನಡಿಯನ್ನು ಹಿಡಿಯುತ್ತವೆ ಮತ್ತು ಕವಿ ಸಿದ್ದಲಿಂಗಯ್ಯ ಅವರ ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಕವನ ಪ್ರಜ್ಞಾವಂತರನ್ನು ಕಾಡುತ್ತದೆ.
ಮರುಚಿಂತನೆಯ ಅಗತ್ಯ:
ಉಳಿದೆಲ್ಲ ಸಮಸ್ಯೆಗಳಿಗಿಂತ ಹೆಚ್ಚಾಗಿ ಒಂದು ದೇಶದ ಅರ್ಥವ್ಯವಸ್ಥೆ ಅಲ್ಲಿನ ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ನಿರಂತರವಾಗಿ ಆರ್ಥಿಕ ಸಂಕಷ್ಟಕ್ಕೆ ಜನಸಾಮಾನ್ಯರು ಬಲಿಯಾದರೆ ಅದು ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಯ ಮೇಲೂ ಪ್ರಭಾವವನ್ನು ಬೀರುತ್ತದೆ. ಇತ್ತೀಚಿನ ಲೋಕಸಭೆಯ ಚುನಾವಣೆಯಲ್ಲಿ ಪ್ರಜಾತಂತ್ರದ ಪಾಲುದಾರರಾದ ಮತದಾರರು ಕೊಟ್ಟ ಸೂಚನೆಯ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ನೀತಿಯ ಆದ್ಯತೆ ಮತ್ತು ತಂತ್ರದ ಬಗ್ಗೆ ಮರುಚಿಂತನೆ ಅತೀ ಅಗತ್ಯ. ಆ ಮೂಲಕ ಜನಸಾಮಾನ್ಯರ ಆರ್ಥಿಕ ಸ್ವಾತಂತ್ರ್ಯವನ್ನು ಬಲಪಡಿಸುವ ಹಾಗೂ ದೇಶದ ಸಂವಿಧಾನದ ಆಶಯಗಳನ್ನು ಅರ್ಥಪೂರ್ಣವಾಗಿ ಕಾರ್ಯರೂಪಕ್ಕೆ ಇಳಿಸುವ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗಿದೆ.