ಮಹಿಳಾ ಮೀಸಲಾತಿ ಜಾರಿಯಾಗದೆ ಮಂತ್ರಿಗಿರಿ ತಿರಸ್ಕರಿಸಿದ ದಿಟ್ಟ ಮಹಿಳೆ ಗೀತಾ ಮುಖರ್ಜಿ
ಪ್ರಸಕ್ತ ಕೇಂದ್ರ ಸರಕಾರ ಶೇ.33ರ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಅಂಗೀಕರಿಸಿದೆ. ಆದರೆ ಈ ಮೀಸಲಾತಿ ದೊರಕಲು ಅವಿರತ ಹೋರಾಟ ಮಾಡಿದ್ದ ಕಾ| ಗೀತಾ ಮುಖರ್ಜಿಯವರನ್ನು ದೇಶದ ಜನತೆ ಮರೆಯಲಾಗದು.
ಗೀತಾ ಮುಖರ್ಜಿಯವರು 1924ರಲ್ಲಿ ಕಲ್ಕತ್ತದಲ್ಲಿ ಜನಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ರಾಜಕೀಯ ಪ್ರಭಾವ ಅವರಲ್ಲಿತ್ತು. ಆಗಲೇ ಅವರು ಅಖಿಲ ಭಾರತ ವಿದ್ಯಾರ್ಥಿ ಫೆಡೆರೇಷನ್ (ಎಐಎಸ್‌ಎಫ್)ನ ಸದಸ್ಯರಾಗಿ 1940ರಲ್ಲಿ ಜೆಸ್ಸೂರ್ (ಈಗ ಬಾಂಗ್ಲಾದೇಶದಲ್ಲಿದೆ.) ಎಂಬಲ್ಲಿ ವಿದ್ಯಾರ್ಥಿ ನಾಯಕಿಯಾದರು. 1939-40ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿ ಕಾರ್ಮಿಕರ, ದೀನದಲಿತರ ಮತ್ತು ವಿದ್ಯಾರ್ಥಿಗಳ ಸಾಮಾಜಿಕ ಹೋರಾಟದಲ್ಲಿ ಭಾಗವಹಿಸಿದರು. ಕಮ್ಯುನಿಸ್ಟ್ ನಾಯಕರಾದ ಬಿಶ್ವನಾಥ ಮುಖರ್ಜಿಯವರನ್ನು ಮದುವೆಯಾಗಿ ಈ ಹೊಸ ಜೋಡಿ ಅಂದಿನ ಹೋರಾಟಗಳಲ್ಲಿ ಜನರ ಗಮನ ಸೆಳೆಯಿತು.
1942ರಲ್ಲಿ ಪಕ್ಷದ ಪಶ್ಚಿಮ ಬಂಗಾಳದ ರಾಜ್ಯ ಸಮಿತಿಯ ಸದಸ್ಯರಾಗಿ ಚುನಾಯಿತರಾದ ಇವರು 1946ರ ವರೆಗೆ ಮುಂದುವರಿದರು. ವಿದ್ಯಾರ್ಥಿ ಮತ್ತು ಕಾರ್ಮಿಕರ ಬೇಡಿಕೆ ಹಾಗೂ ಬ್ರಿಟಿಷ್ ದಬ್ಬಾಳಿಕೆಗಳ ವಿರುದ್ಧ ಹೋರಾಟಗಳಲ್ಲಿ ಭಾಗವಹಿಸಿದ ಇವರು 6 ತಿಂಗಳ ಜೈಲುವಾಸ ಅನುಭವಿಸಿದ್ದರು.
ಗೀತಾ ಮುಖರ್ಜಿಯವರು 1967ರಿಂದ 1977ರ ವರೆಗೆ ಪಶ್ಚಿಮ ಬಂಗಾಳದ ವಿಧಾನ ಸಭೆಯ ಸದಸ್ಯರಾಗಿದ್ದರು. 1980ರಿಂದ 2000 ಇಸವಿಯವರೆಗೂ ಪಂಸ್ಕುರಾ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿದ್ದರು. ಅವರು ಪಕ್ಷದ ರಾಷ್ಟ್ರೀಯ ಮಂಡಳಿ, ರಾಷ್ರೀಯ ಕಾರ್ಯಕಾರಿ ಸಮಿತಿ ಹಾಗೂ ಎಐಟಿಯುಸಿಯ ರಾಷ್ಟ್ರೀಯ ಮಂಡಳಿಯ ಸದಸ್ಯರಾಗಿಯೂ ಪಕ್ಷ ಹಾಗೂ ಕಾರ್ಮಿಕ ಸಂಘಟನೆ ಬೆಳೆಸುವಲ್ಲಿ ಸಹಕಾರಿಯಾದರು. ಅವರು ಪಾರ್ಲಿಮೆಂಟ್‌ನಲ್ಲಿ ರಚಿಸಲ್ಪಟ್ಟ ಹೆಚ್ಚಿನ ಉನ್ನತ ಸಮಿತಿಗಳಲ್ಲಿ ಸದಸ್ಯರಾಗಿ ಜನರ ಕೇಳಿಕೆಗಳಿಗೆ ಸ್ಪಂದಿಸಿದರು.
ಗೀತಾ ಮುಖರ್ಜಿಯವರು ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು)ದ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಅಲ್ಲಿಯೂ ಮಹಿಳಾ ಮೀಸಲಾತಿ ಬಗ್ಗೆ ಅನೇಕ ಹೋರಾಟಗಳನ್ನು ಆಯೋಜಿಸಿದ್ದರು.
ಅವರು ಬಂಗಾಳಿ ಭಾಷೆಯಲ್ಲಿ ಅನೇಕ ಪುಸ್ತಕಗಳನ್ನು ಬರೆದು ಮಹಿಳೆಯರ ಮನದೊತ್ತಡಗಳನ್ನು ಬಿಂಬಿಸಿ ಅದಕ್ಕೆ ವೈಜ್ಞಾನಿಕ ರೀತಿಯ ಪರಿಹಾರಗಳನ್ನು ಸೂಚಿಸುತ್ತಿದ್ದರು.
1963ರ ಕಾಲಘಟ್ಟದಲ್ಲಿ ರೇಣು ಚಕ್ರವರ್ತಿ, ಪಾರ್ವತಿ ಕೃಷ್ಣನ್ ಮುಂತಾದ ಸಿಪಿಐ ವತಿಯಿಂದ ಪಾರ್ಲಿಮೆಂಟ್ ಸದಸ್ಯರಾಗಿದ್ದ ನಾಯಕರು ಮಹಿಳಾ ಮೀಸಲಾತಿಗಾಗಿ ಪಾರ್ಲಿಮೆಂಟ್ ಕಲಾಪಗಳಲ್ಲಿ ಒತ್ತಾಯಿಸಿ ಅದರ ಜಾರಿಗಾಗಿ ಮುತುವರ್ಜಿ ವಹಿಸಿದ್ದರು. ಇವರ ಈ ಮಹಿಳಾ ಮೀಸಲಾತಿಪರ ಹೋರಾಟಗಳನ್ನು ಗೀತಾ ಮುಖರ್ಜಿಯವರು ಮುಂದುವರಿಸಿದರು.
ಚೀನಾದ ಬೀಜಿಂಗ್‌ನಲ್ಲಿ ಜರುಗಿದ ಮಹಿಳಾ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ ಇವರು ಮಹಿಳೆಯರಿಗೆ ಶೇ. 33 ಮೀಸಲಾತಿ ಜಗತ್ತಿನಲ್ಲೆಲ್ಲಾ ಜಾರಿಯಾಗಬೇಕೆಂದು ಈ ಸಮ್ಮೇಳನದಲ್ಲಿ ನಿರ್ಣಯವನ್ನು ಮಂಡಿಸಿದರು.
ಪಕ್ಷದ ಪಾಟ್ನಾ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದ ಬಳಿಕ ಇವರು 1986ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‌ನಲ್ಲಿ ಮಂಡಿಸಿದರು. ಮುಂದುವರಿದು ಮತ್ತೆ 1996ರಲ್ಲಿ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲೂ ಮತ್ತೊಮ್ಮೆ ಮಹಿಳಾ ಮೀಸಲಾತಿ ಮಸೂದೆಯನ್ನು ಕೆಲವು ತಿದ್ದುಪಡಿಗಳೊಂದಿಗೆ ಮಂಡಿಸಿದರು. ಈ ಬಗ್ಗೆ ಚರ್ಚಿಸಿ ಸರಕಾರಕ್ಕೆ ಶಿಫಾರಸು ಮಾಡಲು ರಚಿಸಿದ 31 ಸದಸ್ಯರ ಸಮಿತಿಗೆ ಗೀತಾ ಮುಖರ್ಜಿ ಅಧ್ಯಕ್ಷರಾಗಿದ್ದರು. ಈ ಮಸೂದೆ ಜಾರಿಯಾಗುವಂತೆ ಮಹಿಳೆಯರನ್ನು ಜಾಗೃತಿಗೊಳಿಸಲು ಹಲವಾರು ಹೋರಾಟಗಳನ್ನು ಸಂಘಟಿಸಿದ್ದರು. ಅವರು ಆಯೋಜಿಸಿದ್ದ ಹೋರಾಟಗಳಲ್ಲಿ ಪೋಸ್ಟ್ ಕಾರ್ಡ್ ಚಳವಳಿ ಅತೀ ಮುಖ್ಯವಾದುದು. ಅವರ ಈ ನಡೆಗಳನ್ನು ಕೆಲವು ರಾಜಕೀಯ ಶಕ್ತಿಗಳು ವಿರೋಧಿಸಿದಾಗ ತಮ್ಮ ನಿಲುಮೆಯನ್ನು ಸ್ಪಷ್ಟಪಡಿಸಲು ಕಿರು ಹೊತ್ತಿಗೆಯನ್ನು ಹೊರತಂದರು. ಅವರ ಹೋರಾಟಗಳ ಫಲವಾಗಿ ಐ.ಕೆ. ಗುಜ್ರಾಲ್ ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಒಂದು ರಾಜಿಸೂತ್ರ ತಂದು ಮೀಸಲಾತಿಯನ್ನು ಶೇ.20 ಅಥವಾ ಶೇ. 25 ಮಾಡಬಹುದೆಂದು ಸಲಹೆ ನೀಡಿದರು. ಕೆಲವು ಎಡಪಂಥೀಯ ನಾಯಕರ ಹಠಮಾರಿ ನಿಲುವಿನಿಂದ ಪ್ರಭಾವಿತರಾದ ಕೆಲವು ಮಹಿಳಾಪರ ಗುಂಪುಗಳು ಈ ಪ್ರಸ್ತಾಪವನ್ನು ತಿರಸ್ಕರಿಸಿದವು. ಇದರಿಂದ ಗೀತಾರವರಿಗೆ ಬಹಳ ಬೇಸರವಾಯಿತು. ತಮ್ಮ ಬೇಸರವನ್ನು ಅವರು ಮುಂದಿನ ಕೆಲವು ಸಭೆಗಳಲ್ಲಿ ವ್ಯಕ್ತಪಡಿಸಿದ್ದರು. ಮಹಿಳಾ ಮೀಸಲಾತಿ ಬಗ್ಗೆ ಇತರ ಪಕ್ಷಗಳು ಸರಿಯಾದ ನಿಲುವು ತೆಗೆದುಕೊಳ್ಳದ ಕಾರಣದಿಂದಾಗಿ ಅವರ ಈ ಪ್ರಸ್ತಾಪ ಜಾರಿಯಾಗಲೇ ಇಲ್ಲ. ಅವರ ಪರಿಶ್ರಮವನ್ನು ಮನಗಂಡ ಗುಜ್ರಾಲ್ ಸರಕಾರ ಅವರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡಲು ಮುಂದಾಯಿತು. ಅದನ್ನು ಸ್ಪಷ್ಟವಾಗಿ ನಿರಾಕರಿಸಿದ ಗೀತಾ ಮುಖರ್ಜಿಯವರು ಮಹಿಳಾ ಮೀಸಲಾತಿ ಜಾರಿಯಾಗದೆ ನನಗೆ ಯಾವ ಮಂತ್ರಿಗಿರಿಯೂ ಬೇಡವೆಂದು ಮಹಿಳಾಪರ ನಿಂತ ದಿಟ್ಟ ಮಹಿಳೆಯಾಗಿದ್ದಾರೆ. ಈ ಕಾಲಘಟ್ಟದಲ್ಲಿ ಭಾರತೀಯರು ಗೀತಾ ಮುಖರ್ಜಿಯವರ ಈ ದಿಟ್ಟತನವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.
ಇತ್ತೀಚೆಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಕಾನೂನಾಗಿ ರಾಜ್ಯಸಭೆ ಮತ್ತು ಲೋಕಸಭೆ ಅಂಗೀಕಾರ ಮಾಡಿದ್ದು ಗೀತಾ ಮುಖರ್ಜಿಯವರಿಗೆ ಸಂದ ಅತಿ ದೊಡ್ಡ ಪುರಸ್ಕಾರವಾಗಿದೆ. ಈ ಬಗ್ಗೆ ಮಾತನಾಡಿದ ಸಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾರವರು ‘‘ಈ ಕಾನೂನು ಸಿಪಿಐ ಮತ್ತು ಗೀತಾ ಮುಖರ್ಜಿಯವರಿಗೆ ಸಿಕ್ಕ ಸನ್ಮಾನ’’ ಎಂದು ಹೇಳಿದ್ದಾರೆ. ಬಿಜೆಪಿ ಸಂಸದ ನಿಶಿಕಾಂತ್ ದುಭೆಯವರು ‘‘ಈ ಕಾನೂನು ಗೀತಾ ಮುಖರ್ಜಿಯವರ ಕೊಡುಗೆಯಾಗಿದ್ದು, ಅವರು ಮಹಿಳಾ ಮೀಸಲಾತಿಯ ಚಾಂಪಿಯನ್ ಆಗಿದ್ದಾರೆ’’ ಎಂದು ವರ್ಣಿಸಿದ್ದಾರೆ.
ಮೀಸಲಾತಿಯ ಅಗ್ರಗಣ್ಯ ಹೋರಾಟಗಾರ್ತಿ ಕಾ| ಗೀತಾ ಮುಖರ್ಜಿ ಅವರು 2000 ಇಸವಿಯಲ್ಲಿ ತಮ್ಮ 76ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅದುವರೆಗೂ ಅವರು ಲೋಕಸಭೆಯ ಸದಸ್ಯರಾಗಿದ್ದರು. 2024ರ ಇಸವಿಯಲ್ಲಿ ಅವರ ಶತಮಾನೋತ್ಸವವನ್ನು ಆಚರಿಸಲಿದ್ದೇವೆ.
ಪ್ರಸಕ್ತ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಅಂಗೀಕರಿಸಲ್ಪಟ್ಟ ಮಹಿಳಾ ಮೀಸಲಾತಿ ಮಸೂದೆ ಶೀಘ್ರ ಜಾರಿಯಾದರೆ ಮಾತ್ರ ಗೀತಾ ಮುಖರ್ಜಿಯವರಿಗೆ ಸಲ್ಲಿಸುವ ನಿಜವಾದ ಗೌರವವಾಗಿರುತ್ತದೆ.