ಪಶು ಸಖಿಯರ ಆದಾಯ ವೃದ್ಧಿಗೆ ಸರಕಾರದ ಹೊಸ ಯೋಜನೆ
ಜಾನುವಾರು ಗಣತಿ ಮುಗಿದ ಬಳಿಕ ಇನ್ನಷ್ಟು ಜವಾಬ್ದಾರಿಗೆ ಚಿಂತನೆ

ಮಂಗಳೂರು : ಪಶು ಸಂಗೋಪನಾ ಇಲಾಖೆಯಲ್ಲಿ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಪಶು ಸಖಿಯರಿಗೆ ನೀಡಲಾಗುವ ಗೌರವ ಧನ ಅತ್ಯಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ಅವರ ಆದಾಯವನ್ನು ಏರಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ.
ಆರೋಗ್ಯ ಇಲಾಖೆಯಲ್ಲಿರುವ ಆಶಾ ಕಾರ್ಯಕರ್ತರಂತೆ ಪಶು ಇಲಾಖೆಗೆ ‘ಪಶು ಸಖಿ’ಯರನ್ನು ನೇಮಕ ಮಾಡಲಾ ಗಿತ್ತು. ರೈತರು ಮತ್ತು ಪಶು ಸಂಗೋಪನಾ ಇಲಾಖೆಯ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ಸಮರ್ಪಕವಾಗಿ ತಲುಪಿಸುವ ಜವಾಬ್ದಾರಿಯನ್ನು ಇವರಿಗೆ ಆರಂಭದಲ್ಲಿ ನೀಡಲಾಗಿತ್ತು.
ಪ್ರತಿ ಗ್ರಾಪಂಗೆ ಒಬ್ಬರಂತೆ ನೇಮಿಸಲಾದ ಪಶು ಸಖಿಯರಿಗೆ ಈಗ ನೀಡಲಾಗುತ್ತಿರುವ ಗೌರವಧನ ಅತ್ಯಂತ ಕಡಿಮೆ ಇದ್ದು, ಪಶು ಸಖಿಯರಿಗೆ ತಿಂಗಳಿಗೆ 3,000 ರೂ. ಗೌರವ ಧನ ಮತ್ತು ಪ್ರಯಾಣ ವೆಚ್ಚ 750 ರೂ. ನೀಡಲಾಗುತ್ತಿದೆ. ಇದರಲ್ಲಿ ಅವರು ಎಲ್ಲವನ್ನು ನಿಭಾಯಿಸಬೇಕಿದೆ.
ಕನಿಷ್ಠ ೮ನೇ ತರಗತಿ ಅಥವಾ ಎಸೆಸೆಲ್ಸಿ ಉತ್ತೀರ್ಣರಾದ ಮಹಿಳೆಯರನ್ನು ಈ ಹುದ್ದೆಗೆ ನೇಮಕ ಮಾಡಲಾಗುತ್ತಿದ್ದು, ಈಗ ಈ ಹುದ್ದೆಯಲ್ಲಿ ಪದವೀಧರ ಮಹಳೆಯರು ಸೇರಿಕೊಂಡಿದ್ದಾರೆ. ಪಶು ಸಖಿಯಾಗಿ ನೇಮಕಗೊಂಡವರು ಜಾನುವಾರುಗಳ ವೈಜ್ಞಾನಿಕ ಸಾಕಣೆ ಸಂಬಂಧಿಸಿ ಮೂರು ವಾರಗಳ ತರಬೇತಿಯನ್ನು ಪಡೆದು ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
೨೧೩ ಪಶು ಸಖಿಯರು: ದ.ಕ. ಜಿಲ್ಲೆಯಲ್ಲಿ 223 ಗ್ರಾಪಂಗಳ ಪೈಕಿ 213 ಗ್ರಾಪಂಗಳಲ್ಲಿ ಪಶು ಸಖಿಯರು ಕಾರ್ಯ ನಿರ್ವಹಿಸುತ್ತಿದ್ದು, ಈಗ ಅವರಿಗೆ ಜಾನವಾರು ಗಣತಿಯ ಜವಾಬ್ದಾರಿಯನ್ನು ನೀಡಲಾಗಿದೆ. ನವೆಂಬರ್ ೨೦ರಂದು ಜಾನುವಾರುಗಳ ಗಣತಿ ಆರಂಭವಾಗಿತ್ತು. ಫೆಬ್ರವರಿ 28ರೊಳಗೆ ಪೂರ್ಣಗೊಳ್ಳಬೇಕಿದೆ.
ಜಾನುವಾರುಗಳ ಗಣತಿ ಪೂರ್ಣಗೊಂಡ ಬಳಿಕ ಅವರಿಗೆ ಪಶು ಸಂಗೋಪನಾ ಇಲಾಖೆಯು ಹೊಸ ಜವಾಬ್ದಾರಿ ನೀಡಲಿದ್ದು, ಈ ಉದ್ದೇಶಕ್ಕಾಗಿ ಮೂರು ತಿಂಗಳ ತರಬೇತಿ ನೀಡಲಿದೆ.
ಜಾನುವಾರುಗಳಿಗೆ ಲಸಿಕೆ ನೀಡಿಕೆ, ಕೃತಕ ಗರ್ಭಧಾರಣೆ: ಪ್ರಥಮ ಚಿಕಿತ್ಸೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಅವರಿಗೆ ಇಲಾಖೆ ತರಬೇತಿ ನೀಡಲಿದೆ. ಪಶುವೈದ್ಯರ ಕೊರತೆ ಗ್ರಾಮೀಣ ಪ್ರದೇಶದಲ್ಲಿದ್ದು, ಜಾನುವಾರುಗಳಿಗೆ ಅರೋಗ್ಯದ ಸಮಸ್ಯೆ ಎದುರಾದಾಗ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಲ್ಲದೆ ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆಯನ್ನು ತಪ್ಪಿಸಲು ಇಲಾಖೆಯು ಪಶು ಸಖಿಯರಿಗೆ ತರಬೇತಿ ನೀಡಲು ತೀರ್ಮಾನಿಸಿದೆ.
ಪಶು ಸಖಿಯರನ್ನು ಖಾಯಂ ಆಗಿ ಉಳಿಸುವ ಉದ್ದೇಶಕ್ಕಾಗಿ ಇಲಾಖೆಯು ಅವರಿಗೆ ಇನ್ನಷ್ಟು ಜವಾಬ್ದಾರಿ ನೀಡಿ ಅವರ ಆದಾಯ ವೃದ್ಧಿಗೆ ಅವಕಾಶ ಮಾಡಿಕೊಡಲಿದೆ. ಅವರಿಗೆ ಲಸಿಕೆ ನೀಡಿಕೆ, ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಇತ್ಯಾದಿಗಳಿಗೆ ಇಲಾಖೆಯು ಪ್ರೋತ್ಸಾಹಧನ ನೀಡಲಿದೆ.
ಒಂದು ತಿಂಗಳು ಕ್ಲಾಸ್‌ನಲ್ಲಿ ತರಬೇತಿ ಮತ್ತು ಎರಡು ತಿಂಗಳುಗಳ ಕಾಲ ಪ್ರಾಯೋಗಿಕ ತರಬೇತಿ ನೀಡಲಾಗುವುದು. ತರಬೇತಿಗಾಗಿ ಪ್ರತಿಯೊಬ್ಬರಿಗೆ ತಲಾ 31 ಸಾವಿರ ರೂ.ಗಳನ್ನು ಸರಕಾರ ವೆಚ್ಚ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ತರಬೇತಿ ಅವಧಿಯದಲ್ಲಿ ಪಶುಸಖಿಯರಿಗೆ ತಲಾ ಒಂದೂವರೆ ಸಾವಿರ ರೂ. ಶಿಷ್ಯವೇತನ, ತರಬೇತಿ ಬಳಿಕ ಒಂದು ವರ್ಷದ ತನಕ ತಲಾ ಒಂದೂವರೆ ಸಾವಿರ ಹೆಚ್ಚುವರಿ ಗೌರವ ಧನ ಅವರಿಗೆ ದೊರೆಯಲಿದೆ. ಪಶುಸಖಿಯರಿಗೆ ಹೊಸ ಯೋಜನೆಯು ಸ್ವಾವಲಂಭಿ ಬದುಕಿಗೆ ನೆರವಾಗಲಿದೆ ಎಂಬ ವಿಶ್ವಾಸವನ್ನು ಇಲಾಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಪಶುವೈದ್ಯರ ತೀವ್ರ ಕೊರತೆ :
ದ.ಕ. ಜಿಲ್ಲೆಯಲ್ಲಿ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ74 ವೈದ್ಯ ಹುದ್ದೆಗಳ ಪೈಕಿ ಕೇವಲ 32 ಮಂದಿ ಇದ್ದಾರೆ. ಈಗಾಗಲೇ ಗುತ್ತಿಗೆ ಆಧಾರದಲ್ಲಿ 7 ಹುದ್ದೆಗಳನ್ನು ತುಂಬಲಾಗಿದ್ದು, 35 ವೈದ್ಯರ ಹುದ್ದೆ ಖಾಲಿ. ಪಶು ಆಸ್ಪತ್ರೆ ಮತ್ತು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳಲ್ಲಿ ಇರಬೇಕಾದ 187 ನಿರೀಕ್ಷಕರ ಹುದ್ದೆಗಳಲ್ಲಿ 42 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಉಳಿದ ಹುದ್ದೆಗಳು ಖಾಲಿ ಇವೆ. 166 ಕಚೇರಿ ಸಹಾಯಕರ ಹುದ್ದೆಗಳಲ್ಲಿ 162 ಹುದ್ದೆಗಳು ಖಾಲಿ ಬಿದ್ದಿವೆ. ಇತ್ತೀಚಿನ ದಿನಗಳಲ್ಲಿ ಮನುಷ್ಯರಂತೆ ಪ್ರಾಣಿಗಳಿಗೂ ನಾನಾ ರೋಗಗಳು ಕಾಣಿಸಿಕೊಳ್ಳುತ್ತವೆ. ಆದರೆ ಮೂಕ ಪ್ರಾಣಿಗಳ ಆರೋಗ್ಯದ ವಿಚಾರದಲ್ಲಿ ಸರಕಾರ ಯಾಕೆ ಇಷ್ಟು ಮೌನವಾಗಿದೆ ಗೊತ್ತಿಲ್ಲ. ಸರಕಾರವು ಪಶು ಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿರುವುದು ನಿಜಕ್ಕೂ ದುರದೃಷ್ಟಕರ ಎನ್ನದೆ ವಿಧಿಯಿಲ್ಲ.
ಪಶು ಸಖಿಯರಿಗೆ ಈಗ ನೀಡಲಾಗುವ ಗೌರವ ಧನ ಅತ್ಯಂತ ಕಡಿಮೆ ಇದೆ. ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಅವರ ಆದಾಯ ಹೆಚ್ಚಳಕ್ಕೆ ಸರಕಾರ ಯೋಚಿಸಿದೆ. ತರಬೇತಿ ಪಡೆದ ಪಶು ಸಖಿಯರಿಗೆ ಇದರಿಂದ ಮುಂದೆ ಹೆಚ್ಚಿನ ಆದಾಯ ದೊರೆಯಲಿದೆ. ಇಲಾಖೆಯು ಎದುರಿ ಸುತ್ತಿರುವ ಕೊರತೆ ಸಮಸ್ಯೆಯು ಪಶು ಸಖಿಯರ ಮೂಲಕ ನಿವಾರ ಣೆಯಾಗಲಿದೆ. ಜಾನುವಾರುಗಳ ಆರೋಗ್ಯ ಕೂಡಾ ಹೊಸ ವ್ಯವಸ್ಥೆಯ ಮೂಲಕ ಸುಧಾರಣೆ ಯಾಗಲಿದೆ.
-ಡಾ.ಅರುಣ್ ಕುಮಾರ್ ಶೆಟ್ಟಿ, ಉಪ ನಿರ್ದೇಶಕ, ಪಶು ಸಂಗೋಪನಾ ಇಲಾಖೆ ದ.ಕ. ಜಿಲ್ಲೆ