ಲಾರಿ ಚಾಲಕನ ಕೈ ಹಿಡಿದ ‘ಗುಲಾಬಿ’
ನರೇಗಾ ನೆರವಿನಲ್ಲಿ ಗುಲಾಬಿ ಬೆಳೆ
ಕೋಲಾರ: ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ನೆರವು ಪಡೆದು ಲಾರಿ ಚಾಲಕರೊಬ್ಬರು, ಈಗ
ಗುಲಾಬಿ ಹೂ ಬೆಳೆದು ಸ್ವತಃ ಊರಿನಲ್ಲೇ ಕೈತುಂಬ ಆದಾಯ ಗಳಿಸುತ್ತಿದ್ದಾರೆ. ಕೋಲಾರ ತಾಲೂಕು ಅರಾಭಿಕೊತ್ತನೂರ ಗ್ರಾಮ ಪಂಚಾಯತ್‌ನ ಚಿಕ್ಕ ಅಯ್ಯೂರು ಗ್ರಾಮದ ಸತೀಶ್ ಎಂಬುವರು, ಉದ್ಯೋಗ ಖಾತ್ರಿಯಡಿ, ಹೂ ಬೆಳೆದು, ಹೊಸ
ಬದುಕು ರೂಪಿಸಿಕೊಂಡಿದ್ದಾರೆ.
ಸತೀಶ್ ಈ ಹಿಂದೆ ತಮ್ಮ ಕುಟುಂಬದ ಪೋಷಣೆಗಾಗಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪೂರ್ವಜರಿಂದ ಬಂದಿದ್ದ 30 ಗುಂಟೆ ಜಮೀನಿನಲ್ಲಿ ನೀಲಗಿರಿ ಬೆಳೆದಿದ್ದರು. ಆದರೆ ಅದರಿಂದ ಹೆಚ್ಚು ಪ್ರಯೋಜನವೇನು ಇರಲಿಲ್ಲ. ನಿತ್ಯ ದೂರದ ಊರಿಗೆ ಹೋಗಿ ಅನ್ಯರ ಬಳಿಯ ದುಡಿಮೆ ತೃಪ್ತಿ ತರಲಿಲ್ಲ. ಸ್ವ ಉದ್ಯೋಗ ಮಾಡುವ ನಿಟ್ಟಿನಲ್ಲಿ, ಜಮೀನಿನಲ್ಲಿದ್ದ ನೀಲಗಿರಿಯನ್ನು ಸಂಪೂರ್ಣ ತೆಗೆದು, ಪಕ್ಕದ ಜಮೀನಿನಿಂದ ನೀರು ಪಡೆದು ಕೃಷಿ ಮಾಡಲು ಮುಂದಾದರು.
ಆದರೆ ಯಾವ ಬೆಳೆಯನ್ನು ಬೆಳೆಯಬೇಕು, ಎಂಬ ಯೋಚನೆಗೆ ಬಿದ್ದ ಸತೀಶ್‌ಗೆ ಸಾರ್ವಕಾಲಿಕ ಲಾಭದ ಬೆಳೆಯಾಗಿ ಕಂಡಿದ್ದು ಗುಲಾಬಿ. ಅಲ್ಲದೆ ಗುಲಾಬಿ ಹೂ ಬೆಳೆಯಲು ನರೇಗಾದಡಿಯಲ್ಲಿ ನೆರವು ನೀಡುವ ಮಾಹಿತಿ ಪಡೆದ ಅವರು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹೂ ಬೆಳೆಯುವ ಬಗ್ಗೆ ತಿಳಿದುಕೊಂಡರು. ತಮಿಳುನಾಡಿನ ಅಗಲಕೋಟೆಯಿಂದ 1,300 ಮೆರಾಬುಲ್ ಕೆಂಪು ತಳಿಯ ಗುಲಾಬಿ ಗಿಡಗಳನ್ನು ತಂದು ತಮ್ಮ ಜಮೀನಿನಲ್ಲಿ ನಾಟಿ ಮಾಡಿದರು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು, ಸತೀಶ್ ಕುಟುಂಬದವರೇ ಗುಲಾಬಿ ತೋಟದ ನಿರ್ವಹಣೆ ಮಾಡುತ್ತಿದ್ದಾರೆ. ನರೇಗಾದಿಂದ 72,512 ರೂ. ನೆರವು ದೊರೆತಿದೆ.
ಗುಲಾಬಿ ಹೂವಿಗೆ ಸರ್ವ ಕಾಲದಲ್ಲೂ ಬೇಡಿಕೆ ಇದ್ದು, ಹಬ್ಬದ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ದಿನ ಬಿಟ್ಟು ದಿನ ಕೊಯ್ಲು ಮಾಡುತ್ತಿದ್ದು, 80ರಿಂದ 100 ಕೆಜಿ ಹೂ ದೊರೆಯುತ್ತದೆ. ಸತೀಶ್ ತಮ್ಮ ಗುಲಾಬಿ ಹೂಗಳನ್ನು ಕೋಲಾರ ಮಾರುಕಟ್ಟೆಯಲ್ಲಿ
ಮಾರಾಟ ಮಾಡುತ್ತಿದ್ದಾರೆ. ಗುಲಾಬಿಗೆ ಸಾಮಾನ್ಯ ದಿನಗಳಲ್ಲಿ 60ರಿಂದ 100 ರೂಪಾಯಿ ಇದ್ದರೆ, ಹಬ್ಬದ ದಿನಗಳಲ್ಲಿ 150ರಿಂದ 200 ರೂಪಾಯಿಗೆ ಮಾರಾಟವಾಗುತ್ತದೆ. ಇದರಿಂದ ರೈತ ಸತೀಶ್ ತಿಂಗಳಿಗೆ ಸರಾಸರಿ 40 ರಿಂದ 50 ಸಾವಿರ ಆದಾಯ ಗಳಿಸುತ್ತಿದ್ದಾರೆ.
ಲಾರಿ ಚಾಲಕನ ಕೃಷಿ ಪಯಣಕ್ಕೆ ಮಹಾತ್ಮ ಗಾಂಧಿ ನರೇಗಾ ನೆರವಾಗಿದ್ದು, ಸ್ವಗ್ರಾಮದಲ್ಲಿ ಉತ್ತಮ ಆದಾಯ ಗಳಿಸುತ್ತಿರುವ ಸತೀಶ್ ಈಗ ಗ್ರಾಮದ ಜನರಿಗೆ ಮಾದರಿಯಾಗಿದ್ದಾರೆ. ಸತೀಶ್‌ರನ್ನು ಅನುಸರಿಸಿ, ಈಗ ಗ್ರಾಮದಲ್ಲಿ ಅನೇಕ ರೈತರು ನರೇಗಾ ನೆರವು ಪಡೆದು ಗುಲಾಬಿ ಬೆಳೆದು, ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.
ಲಾರಿ ಚಾಲಕನಾಗಿದ್ದ ನಾನು, ಈಗ ನರೇಗಾ ನೆರವು ಪಡೆದು ಗುಲಾಬಿ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದೇನೆ. ಗುಲಾಬಿ ಹೂವಿಗೆ ಸದಾ ಬೇಡಿಕೆ ಇದ್ದು, ನಷ್ಟ ಆಗುವುದಿಲ್ಲ. ತೋಟವನ್ನ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದರೆ, ಉತ್ತಮ ಲಾಭ ಪಡೆಯಬಹುದು. ಉದ್ಯೋಗ ಖಾತ್ರಿ ಯೋಜನೆ ಬಡ ರೈತರಿಗೆ ತುಂಬ ಉಪಯುಕ್ತವಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ಸತೀಶ್, ಗುಲಾಬಿ ಬೆಳೆಗಾರ