ಹಜ್ ಯಾತ್ರೆ-2024: ಕೇಂದ್ರ ಸರಕಾರದ ವಿಳಂಬದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಟೂರ್ ಆಪರೇಟರ್ಗಳು
Photo: twitter.com/MoHU_En/media
ಬೆಂಗಳೂರು: ಕೇಂದ್ರ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಯ ವಿಳಂಬ ಧೋರಣೆಯಿಂದಾಗಿ ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳಿಂದ ಖಾಸಗಿ ಟೂರ್ ಆಪರೇಟರ್ಗಳ ಮೂಲಕ ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಮುಂದಾಗಿರುವ ಯಾತ್ರಿಗಳಿಗೆ ವಿಐಪಿ ಸೌಲಭ್ಯ ಕಲ್ಪಿಸುವುದು ಖಾಸಗಿ ಟೂರ್ ಆಪರೇಟರ್ಗಳಿಗೆ ಸವಾಲಾಗಿ ಪರಿಣಮಿಸಿದೆ.
ಮಕ್ಕಾ ನಗರದ ಮಿನಾ ಬಳಿ ಖಾಸಗಿ ಟೂರ್ ಆಪರೇಟರ್ಗಳಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸೌದಿ ಅರೇಬಿಯಾ ಸರಕಾರವು ಟೆಂಟ್ಗಳನ್ನು ಕಲ್ಪಿಸುತ್ತದೆ. ಇದು ಹಜ್ ಸಂದರ್ಭದಲ್ಲಿ ಸಾಮಾನ್ಯವಾಗಿ ನಡೆಯುವಂತಹ ಪ್ರಕ್ರಿಯೆ. ಇದಕ್ಕಾಗಿ ಅಂತಾರಾಷ್ಟ್ರೀಯ ಬ್ಯಾಂಕ್ ಖಾತೆ ಸಂಖ್ಯೆ(ಐಬಾನ್) ಯಲ್ಲಿ ಟೂರ್ ಆಪರೇಟರ್ಗಳು ಹಣವನ್ನು ವರ್ಗಾವಣೆ ಮಾಡಿ, ಅದರ ಮೂಲಕವೇ ಟೆಂಟ್, ಸಾರಿಗೆ ಸೇರಿದಂತೆ ಇತರ ವೆಚ್ಚಗಳನ್ನು ಭರಿಸುತ್ತಿದ್ದರು.
ಆದರೆ, ಈ ಬಾರಿ ಸೌದಿ ಅರೇಬಿಯಾ ಸರಕಾರವು ಹೊಸ ಕಾನೂನು ಮಾಡಿ, ಎಲ್ಲ ದೇಶಗಳ ಖಾಸಗಿ ಟೂರ್ ಆಪರೇಟರ್ಗಳು ಹಣವನ್ನು ಐಬಾನ್ ಖಾತೆಗೆ ಜಮೆ ಮಾಡದೆ, ಮಕ್ಕಾದಲ್ಲಿರುವ ತಮ್ಮ ತಮ್ಮ ದೇಶದ ಹಜ್ ಸಂಬಂಧಿತ ಸರಕಾರಿ ಮಿಷನ್ಗಳ ಖಾತೆಗೆ ಹಣ ಜಮೆ ಮಾಡಬೇಕು. ಅದೇ ರೀತಿ ಭಾರತದ ಖಾಸಗಿ ಟೂರ್ ಆಪರೇಟರ್ಗಳು ಇಂಡಿಯನ್ ಹಜ್ ಮಿಷನ್ ಖಾತೆಗೆ ಹಣ ಜಮೆ ಮಾಡುವಂತೆ ಸೂಚಿಸಿದೆ.
ಇಂಡಿಯನ್ ಹಜ್ ಮಿಷನ್ನವರು ಹಣ ಜಮೆ ಮಾಡಿಸಿಕೊಂಡು ಖಾಸಗಿ ಟೂರ್ ಆಪರೇಟರ್ಗಳಿಗೆ ಖಾತೆ ಸಂಖ್ಯೆಯನ್ನು ನೀಡಲಿದ್ದಾರೆ. ಅದನ್ನು ಬಳಸಿಕೊಂಡೆ ಅವರು ಎಲ್ಲ ವ್ಯವಹಾರಗಳನ್ನು ಮಾಡಬೇಕಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಯುಎಇ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಇತರ ದೇಶಗಳ ಹಜ್ ಸಚಿವಾಲಯಗಳು ಅಲ್ಲಿನ ಖಾಸಗಿ ಟೂರ್ ಆಪರೇಟರ್ಗಳಿಗೆ ಅಗತ್ಯ ಸೌಲಭ್ಯ ಗಳನ್ನು ಕಲ್ಪಿಸಿ, ಅವರ ಹಣ ವನ್ನು ಜಮೆ ಮಾಡಿಸಿಕೊಂಡು, ಖಾತೆ ಸಂಖ್ಯೆಗಳನ್ನು ನೀಡಿವೆ.
ಇದರಿಂದಾಗಿ, ಆ ದೇಶಗಳು ಭಾರತದ ಖಾಸಗಿ ಟೂರ್ ಆಪರೇಟರ್ಗಳು ಈ ಹಿಂದೆ ವಿಐಪಿ ಟೆಂಟ್ಗಳ ಅಳವಡಿಕೆಗೆ ಪಡೆದುಕೊಳ್ಳುತ್ತಿದ್ದ ಜಾಗಗಳನ್ನು ಪಡೆದುಕೊಂಡು ಅವರ ದೇಶದ ಯಾತ್ರಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧತೆಗಳನ್ನು ಆರಂಭಿಸಿವೆ. ಆದರೆ, ಕೇಂದ್ರ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದಿಂದ ಈವರೆಗೆ ಖಾಸಗಿ ಟೂರ್ ಆಪರೇಟರ್ಗಳು ಹಣ ಜಮೆ ಮಾಡಲು ಅವಕಾಶ ಕೊಟ್ಟಿಲ್ಲ.
ಕೆಲವು ಖಾಸಗಿ ಟೂರ್ ಆಪರೇಟರ್ಗಳು ಹಳೆಯ ಐಬಾನ್ ಖಾತೆಗೆ ಹಣ ಕಳುಹಿಸಿದ್ದಾರೆ. ಆದರೆ ಹಣ ಖಾತೆಗೂ ಹೋಗದೆ ಇವರಿಗೂ ವಾಪಸ್ ಬರದೆ ಸಿಕ್ಕಿಹಾಕಿಕೊಂಡಿದೆ. ಯಾತ್ರಿಗಳಿಗೆ ಮಾತು ಕೊಟ್ಟಿರುವಂತೆ ಮೀನಾದಲ್ಲಿ ವಿಐಪಿ ಟೆಂಟ್ಗಳನ್ನು ಕಲ್ಪಿಸಿಕೊಡಲು ಸಾಧ್ಯವಾಗದೇ ಇದ್ದರೆ ಖಾಸಗಿ ಟೂರ್ ಆಪರೇಟರ್ಗಳು ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ. ಕೇಂದ್ರ ಸರಕಾರದ ವಿಳಂಬದಿಂದಾಗಿ ದೇಶದ ಪ್ರತಿಷ್ಠಿತ ಟೂರ್ ಆಪರೇಟರ್ಗಳು ಸಹ ಯಾತ್ರಿಗಳಿಂದ ಅಪಮಾನ ಎದುರಿಸಬೇಕಾಗಬಹುದು. ಅಲ್ಲದೆ , ಕಳೆದ ವರ್ಷವೂ ಕೇಂದ್ರ ಸರಕಾರದ ವಿಳಂಬ ನೀತಿಯಿಂದಾಗಿ ಹಜ್ ಆಪರೇಟರ್ಗಳು ಹಜ್ ಯಾತ್ರಿಕರು ಸಮಸ್ಯೆಗಳನ್ನು ಎದುರಿಸಿದ್ದರು.
ನೆರವಿಗೆ ಬಾರದೆ ಹೋದರೆ ಪರಿಸ್ಥಿತಿ ಬಿಗಡಾಯಿಸಬಹುದು
ಇಡೀ ದೇಶದಲ್ಲಿ ಖಾಸಗಿ ಟೂರ್ ಆಪರೇಟರ್ಗಳು ಈ ನೂತನ ನಿಯಮದಿಂದ ಸಮಸ್ಯೆ ಎದುರಿಸುವಂತಾಗಿದೆ. ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದಿಂದ ನಿರ್ದೇಶನ ಹೋಗದೆ ಇಂಡಿಯನ್ ಹಜ್ ಮಿಷನ್ನವರು ಯಾವುದೆ ಕೆಲಸ ಮಾಡುವುದಿಲ್ಲ. ಈಗಾಗಲೇ ಹಲವಾರು ಮಂದಿ ಟೂರ್ ಆಪರೇಟರ್ಗಳು ಇಮೇಲ್ ಮೂಲಕ ತಮ್ಮ ಸಮಸ್ಯೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದಾರೆ. ಆದರೆ, ಕೇಂದ್ರ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ರಮಝಾನ್ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಸರಕಾರಿ ಕಚೇರಿಗಳೆಲ್ಲ ಬಂದ್ ಆಗಿವೆ. ಸೋಮವಾರದಿಂದ ಬಹುಷಃ ಕಚೇರಿಗಳು ಆರಂಭವಾಗಲಿವೆ. ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಈ ವಿಚಾರದಲ್ಲಿ ನಮ್ಮ ನೆರವಿಗೆ ಬಾರದೆ ಹೋದರೆ ಪರಿಸ್ಥಿತಿ ಬಿಗಡಾಯಿಸಬಹುದು. ಈ ಬಾರಿ ನಮಗೆ ತ್ವರಿತವಾಗಿ ಪ್ರಮಾಣ ಪತ್ರಗಳು ಸಿಕ್ಕಿದ್ದರಿಂದ ನಾವು ಸಂತೋಷವಾಗಿದ್ದೆವು. ಆದರೆ, ಈಗ ಹಣ ಪಾವತಿ ವಿಚಾರದಲ್ಲಿ ಬಂದು ಸಿಕ್ಕಿ ಹಾಕಿಕೊಂಡಿದ್ದೇವೆ. ಸಾಮಾನ್ಯವಾಗಿ ಶವ್ವಾಲ್ ತಿಂಗಳ 20ನೇ ತಾರೀಖಿನಿಂದ ಹಜ್ ಯಾತ್ರೆಯ ವೀಸಾ ನೀಡುವ ಪ್ರಕ್ರಿಯೆ ಆರಂಭಿಸಲಾಗುತ್ತಿತ್ತು. ಆದರೆ, ಈ ಬಾರಿ ರಮಝಾನ್ 10ನೇ ತಾರೀಖಿನಿಂದಲೇ ಆರಂಭ ಮಾಡಿದ್ದಾರೆ. ಆದರೆ, ಇಂಡಿಯನ್ ಹಜ್ ಮಿಷನ್ ಖಾತೆಗೆ ನಮ್ಮ ಹಣ ಜಮೆ ಆಗದೆ ನಾವು ದೊಡ್ಡ ಸಮಸ್ಯೆಗೆ ಸಿಲುಕಿಕೊಂಡಿದ್ದೇವೆ.
ಈ ಬಾರಿ ಐಬಾನ್ ಖಾತೆಯಿಂದಲೇ ಹಣ ಜಮೆ ಮಾಡುತ್ತೇವೆ. ಮುಂದಿನ ವರ್ಷದಿಂದ ಹೊಸ ಪದ್ಧತಿ ಅಳವಡಿಸಿಕೊಳ್ಳುವುದಾಗಿ ಸೌದಿ ಅರೇಬಿಯಾ ಸರಕಾರದ ಜೊತೆ ಮಾತುಕತೆ ನಡೆಸುವಂತೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ ಸಚಿವೆ ಸ್ಮತಿ ಇರಾನಿ ಅವರಿಗೆ ಮನವಿ ಮಾಡುತ್ತೇವೆ. ಇಲ್ಲದಿದ್ದರೆ, ನಮಗೆ ಮೀನಾದಲ್ಲಿ ತುಂಬಾ ದೂರದ ಪ್ರದೇಶದಲ್ಲಿ ಟೆಂಟ್ಗಳು ಸಿಗುತ್ತವೆ. ಇದರಿಂದ ನಮಗೆ ಹಾಗೂ ಯಾತ್ರಿಗಳಿಗೆ ತುಂಬಾ ತೊಂದರೆಯಾಗುತ್ತದೆ ಎಂದು ಕರ್ನಾಟಕ ಹಜ್ ಆರ್ಗನೈಸರ್ಸ್ ಅಸೋಸಿಯೇಷನ್ ಅಧ್ಯಕ್ಷ ಶೌಕತ್ ಅಲಿ ಸುಲ್ತಾನ್ ತಿಳಿಸಿದ್ದಾರೆ.