ನ್ಯಾಯದ ನಿರೀಕ್ಷೆಯಲ್ಲಿ ಕಣ್ಮುಚ್ಚಿದವರೆಷ್ಟು- ಉಳಿದವರೆಷ್ಟು ?
ಕಂಬಾಲಪಲ್ಲಿ ಹತ್ಯಾಕಾಂಡಕ್ಕೆ 25 ವರ್ಷ

ಕೋಲಾರ : ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ಅಂದರೆ ಮಾ.11, 2000ರಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಸಮೀಪದ ಕಂಬಾಲಪಲ್ಲಿ ಗ್ರಾಮದಲ್ಲಿ ರೆಡ್ಡಿ ಜನಾಂಗ ಹಾಗೂ ದಲಿತರ ನಡುವೆ ನಡೆದ ಸಂಘರ್ಷ ತಾರಕಕ್ಕೇರಿತ್ತು. ಈ ಸಂದರ್ಭದಲ್ಲಿ ಏಳು ದಲಿತರನ್ನು ಅವರ ಮನೆಯಲ್ಲೇ ಸುಟ್ಟು ಹಾಕಿದ್ದರು.
ಸುಟ್ಟು ಕರಕಲಾದ ಗುಡಿಸಲುಗಳು ಮತ್ತು ಕಮರಿ ಹೋದ ಮೃತದೇಹಗಳನ್ನು ನೋಡಲು ಅಂದಿನ ಗೃಹ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ರಾಷ್ಟ್ರ ಮಟ್ಟದಲ್ಲಿ ದಲಿತ ನಾಯಕರೆಂದೇ ಗುರುತಿಸಿಕೊಂಡಿದ್ದ ರಾಮ್ ವಿಲಾಸ್ ಪಾಸ್ವಾನ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಭೇಟಿ ನೀಡಿ ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ಇಡೀ ಅವಿಭಜಿತ ಕೋಲಾರ ಜಿಲ್ಲೆ ಸೂತಕದ ಮನೆಯಾಗಿತ್ತು. ಎಲ್ಲೆಲ್ಲೂ ನೀರವ ಮೌನ ಆವರಿಸಿತ್ತು.
ಕಂಬಾಲಪಲ್ಲಿ ಸಜೀವ ದಹನದ ಪ್ರಕರಣ ಬಗ್ಗೆ ವಿಧಾನಸಭೆ, ಸಂಸತ್ತಿನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯಿತು. ಬ್ರಿಟನ್ ಸಂಸತ್ತಿನಲ್ಲಿ ಸಹ ಚರ್ಚೆಯಾಗಿತ್ತು. 2001 ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಜನಾಂಗೀಯ ತಾರತಮ್ಯ (United nations Conference on Racial Discrimination-2001) ಸಮ್ಮೇಳನದಲ್ಲಿ ಭಾರತದಲ್ಲಿ ಜಾತಿ ಆಧಾರಿತ ದೌರ್ಜನ್ಯ,ಹಿಂಸೆ ಮತ್ತು ತಾರತಮ್ಯ ಕುರಿತು ಚರ್ಚೆಗೆ ಒತ್ತಾಯಿಸಲಾಯಿತು. ಆಗ ಕಂಬಾಲಪಲ್ಲಿ ತಾಜಾ ಘಟನೆಯಾಗಿ ಉದಾಹರಿಸಿಲಾಗಿತ್ತು.
ಕಂಬಾಲಪಲ್ಲಿ ಘಟನೆಯನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂಬ ದಲಿತ ಚಳುವಳಿಯ ಒತ್ತಾಯ ಹಾಗೂ ಜೀವ ಕಳೆದುಕೊಂಡ ಕುಟುಂಬಗಳ ಆಕ್ರಂದನ ಅಂದಿನ ರಾಜ್ಯ ಸರ್ಕಾರದ ಮನೆ ಮುಟ್ಟಲಿಲ್ಲ. ಸಹಜವಾಗಿಯೇ ಒಂದು ಅಟ್ರಾಸಿಟಿ ಪ್ರಕರಣ ದಾಖಲಾಯಿತು.
ಸುಮಾರು ಎಂಟು ವರ್ಷಗಳ ಕಾಲ ಸುಧೀರ್ಘ ವಿಚಾರಣೆ ನಡೆಯಿತಾದರೂ, ಸೂಕ್ತ ರಕ್ಷಣೆ ಸಿಗದ ಸಾಕ್ಷಿಗಳು ನ್ಯಾಯಾಲಯದಲ್ಲಿ ವ್ಯತಿರಿಕ್ತವಾಗಿ ಹೇಳಿಕೆ ನೀಡಿದರು. ದೊಡ್ಡ ಮಟ್ಟದಲ್ಲಿ ನೋವುಂಡ ವೆಂಕಟರಾಯಪ್ಪ ತಮ್ಮ ಕೊನೆಯ ಉಸಿರಿರುವ ತನಕ ನ್ಯಾಯದ ನಿರೀಕ್ಷೆಯಲ್ಲಿ ಕಳೆದರು. ಎಂಟು ವರ್ಷಗಳ ನಂತರ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಜಿಲ್ಲಾ ಸತ್ರ ನ್ಯಾಯಾಲಯ ಕಂಬಾಲಪಲ್ಲಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿತು.
ತೀರ್ಪಿನಿಂದ ನಿರಾಸೆಗೊಳಗಾದ ದಲಿತ ಚಳುವಳಿ ತಮ್ಮ ಕಾರ್ಯಕರ್ತರ ಸಭೆ ನಡೆಸಿತು. ಆ ಸಭೆಯಲ್ಲಿ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ನವರ ಸಲಹೆಯಂತೆ, ಈ ಪ್ರಕರಣದಲ್ಲಿ ಆದ ಅನ್ಯಾಯವನ್ನು ನಾಗರೀಕ ಸಮಾಜಕ್ಕೆ ರವಾನಿಸುವ ಸಲುವಾಗಿ " ಸುಟ್ಟ ಬೂದಿಯಲ್ಲಿ ನ್ಯಾಯ ಚಿಗುರಲಿ" ಎಂಬ ಘೋಷ್ಯವಾಕ್ಯದಡಿ ಸುಮಾರು 5 ಸಾವಿರ ದಲಿತರು ಕೋಲಾರ ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಜಿಲ್ಲಾ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಮೌನ ಮೆರವಣಿಗೆ ನಡೆಸಿ ತಮ್ಮ ನೋವನ್ನು ಅಭಿವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ದಲಿತರಿಗೆ ಅನ್ಯಾಯ ಆಗಿದೆ, ಸರ್ಕಾರ ಕಂಬಾಲಪಲ್ಲಿ ಮರು ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಲಾಯಿತು. ಇದೇ ವೇಳೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಲ್ಲಿ ಒಬ್ಬರಾದ ಎನ್.ವೆಂಕಟೇಶ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿರಿಯ ನ್ಯಾಯವಾದಿ ಚಂದ್ರಮೌಳಿ ಅವರನ್ನು ನೇಮಿಸಿತು.
ಇದೀಗ ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇದೆ. ಇಡೀ ದೇಶವನ್ನೇ ನಡುಗಿಸಿದ ಕಂಬಾಲಪಲ್ಲಿ ಘಟನೆ ದಲಿತರ ಆತ್ಮಬಲವನ್ನೇ ಕುಗ್ಗಿಸಿತು. ಜಾತಿವಾದಿ ಶಕ್ತಿಗಳು ಕೆಕ್ಕರಿಸಿ ನಗುವಂತೆ ಮಾಡಿತು. ನ್ಯಾಯಾಲಯ ಸಾಕ್ಷಾಧಾರಗಳನ್ನು ನೋಡಿತೆ ವಿನಃ ಏಳು ಜನ ಜೀವ ಸಮಾಧಿ ಆಗಿದ್ದಾದರೂ ಹೇಗೆ ಅನ್ನೋದನ್ನು ಪರಿಗಣಿಸಲೇ ಇಲ್ಲ. ನ್ಯಾಯಾಂಗ ವ್ಯವಸ್ಥೆ ಸಹ ಸತ್ಯ ಜೀವಗಳಿಗೆ ನ್ಯಾಯ ಒದಗಿಸಲಿಲ್ಲ ಎಂದು ದಲಿತ ಚಳುವಳಿ ಆರೋಪಿಸಿತ್ತು.
ನ್ಯಾಯ ಮರೀಚಿಕೆ :
ಕಂಬಾಲಪಲ್ಲಿ ಪ್ರಕರಣದ ನಂತರ ಊರಿಗೆ ಊರೇ ಖಾಲಿಯಾಗಿತ್ತು. ಘಟನೆ ಬಳಿಕ ಸುಮಾರು 66 ಸಂತ್ರಸ್ತ ದಲಿತ ಕುಟುಂಬಗಳಿಗೆ ಚಿಂತಾಮಣಿ ಹೊರ ವಲಯದಲ್ಲಿ 'ಮಿನಿ ಕಂಬಾಲಪಲ್ಲಿ' ಸ್ಥಾಪಿಸಲಾಯಿತು. ಗ್ರಾಮ ತೊರೆದ ದಲಿತ ಕುಟುಂಬಗಳು ತಮ್ಮ ತುಂಡು ಕೃಷಿ ಭೂಮಿಯನ್ನು ಬೀಡು ಬಿಟ್ಟು ಚಿಂತಾಮಣಿ ಸುತ್ತಮುತ್ತಲಿನ ಕೈಗಾರಿಕೆಗಳಲ್ಲಿ, ಮಿಲ್ ಗಳು ಮತ್ತು ಇಟ್ಟಿಗೆ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವಂತಹಾಗಿದೆ. ಏಳು ಜನ ಅಮಾಯಕ ದಲಿತರ ಸಜೀವ ದಹನ ನಡೆದು ಕಾಲು ಶತಮಾನ ಕಳೆದಿದೆ. ನ್ಯಾಯದ ನಿರೀಕ್ಷೆಯಲ್ಲಿದ್ದ ಕೆಲವರು ವಯೋಸಹ ಕಾಯಿಲೆಗೆ ತುತ್ತಾಗಿ ಕಣ್ಮುಚ್ಚಿದರು, ಇನ್ನುಳಿದ ಕುಟುಂಬಗಳು ನ್ಯಾಯ ಮರೀಚಿಕೆಯಾದ ನೋವಿನಲ್ಲಿಯೇ ಬದುಕುತ್ತಿದ್ದಾರೆ.