ಕನ್ನಡ ಮತ್ತು ಕನ್ನಡ ಶಾಲೆಗಳ ಅಸ್ತಿತ್ವ ಉಳಿಸಿಕೊಳ್ಳುವುದು ಹೇಗೆ?
ಕನ್ನಡ ನಮ್ಮ ನೆಲದ ಭಾಷೆ, ಮಾತೃಭಾಷೆ. ಆಡಳಿತ ಭಾಷೆ. ಆದರೆ ಇಂತಹ ಭಾಷೆ ಇತ್ತೀಚಿನ ಕೆಲವು ದಶಕಗಳಿಂದ ನಿತ್ಯ ಅವಗಣನೆಗೆ ಈಡಾಗುತ್ತಿದೆ. ವಿದ್ಯಾಭ್ಯಾಸದ ನೆಲಗಟ್ಟಾಗಿ, ಬದುಕಿನ ಜೀವಾಳವಾಗಿ ಉಪಯೋಗವಾಗಬೇಕಾದ ಕನ್ನಡ ತನ್ನ ನೆಲದಲ್ಲಿಯೇ ಪರಕೀಯವಾಗುತ್ತಾ ಸಾಗುತ್ತಿರುವ ಮುನ್ಸೂಚನೆ ಕಾಣುತ್ತಿದೆ. ಮಾತೃಭಾಷೆಯಲ್ಲಿ ಪಡೆದ ಶಿಕ್ಷಣವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಮಗುವಿನ ಸರ್ವಾಂಗೀಣ ಪ್ರಗತಿ ಮತ್ತು ಭಾಷಾ ಪಾಂಡಿತ್ಯವನ್ನು ವಿಸ್ತರಿಸುತ್ತದೆ. ಸ್ವಯಂ ಕಲಿಕೆಗೆ ಪ್ರೇರೇಪಿಸುತ್ತದೆ ಎಂಬುದು ಶಿಕ್ಷಣ ತಜ್ಞರ ಅಂಬೋಣ. ಆದರೆ ಇಂದು ಕನ್ನಡದ ನೆಲದಲ್ಲಿ ಕನ್ನಡ ಭಾಷೆ, ಕನ್ನಡ ಶಾಲೆಗಳು ದಿನದಿಂದ ದಿನಕ್ಕೆ ತಮ್ಮ ಗುಣಮಟ್ಟವನ್ನು ಕಳೆದುಕೊಳ್ಳುತ್ತಿವೆಯೇ? ಸರಕಾರಿ ಶಾಲೆಗಳಲ್ಲಿ ಅದರಲ್ಲೂ ಕನ್ನಡ ಮಾಧ್ಯಮದ ಬಗ್ಗೆ ಜನರಲ್ಲಿ ಅನಾದರ, ಅಸಡ್ಡೆ ಬೆಳೆದುಬರುತ್ತಿದೆಯೇ? ಇದಕ್ಕೆ ಮೂಲ ಕಾರಣಗಳು ಏನು? ನಮ್ಮ ನಿಮ್ಮೆಲ್ಲರ ತಾಯ್ನುಡಿಯ ಬಗ್ಗೆ ಇಂತಹ ಕೀಳರಿಮೆ ಬೆಳೆದು ಬರಲು, ಆ ಮೂಲಕ ಕನ್ನಡ ಶಾಲೆಗಳು ತಮ್ಮ ಗುಣಮಟ್ಟ ಕಳೆದುಕೊಳ್ಳಲು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಯಾರು ಕಾರಣರು? ಯೋಚಿಸಬೇಕಾಗಿದೆ.
ಇದಕ್ಕೆಲ್ಲ ಕಾರಣ ನಮ್ಮತನವನ್ನು ಮಾರಿಕೊಂಡ ನಮ್ಮ ಗುಲಾಮಗಿರಿತನ. ಹಾಗಾಗಿಯೇ ಇಂದು ಕನ್ನಡದ ಉಳಿವಿನ ಬಗ್ಗೆ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಪರದಾಡಬೇಕಾಗಿದೆ. ಶೇ.೯೫ ಸುಶಿಕ್ಷಿತರು ಶಿಕ್ಷಕ ವೃತ್ತಿಯಲ್ಲಿ ಇರುವವರು, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುವುದಿಲ್ಲ. ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳು, ತಂತ್ರಜ್ಞಾನದ ಯುಗದೊಂದಿಗೆ ಪೈಪೋಟಿ ನಡೆಸಬೇಕಾದ ಈ ಸಂದರ್ಭದಲ್ಲಿ ಅಂತರ್‌ರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್‌ನ ಮೊರೆ ಹೋಗುತ್ತಿದ್ದಾರೆ. ಇದು ಪಟ್ಟಣಗಳಿಗೆ ಮಾತ್ರ ಸೀಮಿತವೆಂದರೆ ಅದು ಸುಳ್ಳು. ಇಂದು ಹಳ್ಳಿಗಳಲ್ಲಿ ಕನ್ನಡ ಮಾಧ್ಯಮ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಪೋಷಕರು ತಮ್ಮ ಮಕ್ಕಳೂ ಇಂಗ್ಲಿಷ್ ಕಲಿತು ದೇಶ ವಿದೇಶಗಳಲ್ಲಿ ವೈಟ್ ಕಾಲರಿನ ನೌಕರಿ ಪಡೆಯಲಿ ಎಂಬ ಕನಸನ್ನು ದೊಡ್ಡದಾಗಿ ಕಾಣುತ್ತ, ಸಾಲ ಸೋಲ ಮಾಡಿ ಖಾಸಗಿ ಶಾಲೆಗಳಲ್ಲಿ ಕಾಲೇಜುಗಳಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ. ಹೀಗಾಗಿ ಹಳ್ಳಿಯ ಸರಕಾರಿ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಸೊರಗುತ್ತಿವೆ. ರಾಜ್ಯದಾದ್ಯಂತ ನೂರಾರು ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿಯಾದ ವರದಿ ಬಂದಿದೆ. ಆಂಗ್ಲ ಮಾಧ್ಯಮ ಶಾಲೆಗಳು ಹಳ್ಳಿ ಹಳ್ಳಿಗಳಲ್ಲೂ ತಲೆ ಎತ್ತುತ್ತಿರುವುದು, ಖಾಸಗಿ ಶಾಲೆಗಳು ಹಳ್ಳಿಯ ವಿದ್ಯಾರ್ಥಿಗಳಿಗೆ ಶಾಲಾ ಬಸ್ಸುಗಳ ವ್ಯವಸ್ಥೆ ಮಾಡಿರುವುದು ಪೋಷಕರು ಕೂಡ ಆಂಗ್ಲ ಭಾಷೆಯತ್ತ ಒಲವು ತೋರಲು ಕಾರಣವಾಗಿದೆ.
ಶಿಕ್ಷಣ ವ್ಯವಸ್ಥೆ ಉದ್ಯಮವಾಗಿ ಬೆಳೆದುಬರುತ್ತಿದೆ. ಖಾಸಗಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಸಂಸ್ಥೆಗಳು ಅತಿ ಹೆಚ್ಚು ಶುಲ್ಕಗಳನ್ನು ವಿಧಿಸಿ, ಶಾಲಾ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸುತ್ತವೆ. ಕ್ಯಾಪಿಟೇಷನ್, ಡೊನೇಷನ್ ಇತ್ಯಾದಿ ಮೂಲಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಗಳಿಕೆಯನ್ನು, ಆರ್ಥಿಕ ಲಾಭದ ದೃಷ್ಟಿಕೋನವನ್ನು ಮೂಲವಾಗಿಟ್ಟುಕೊಂಡು ಸಂಸ್ಥೆಯನ್ನು ಬೆಳೆಸಲಾಗುತ್ತದೆ. ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಕರ್ಯಗಳು, ವಿದ್ಯಾರ್ಥಿಗಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರ ಸಂಖ್ಯೆ, ಕೌಶಲ್ಯ ವರ್ಧಿತ ಶೈಕ್ಷಣಿಕ ತರಬೇತಿಗಳು, ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಲಭ್ಯವಿರುವುದರಿಂದ ಪೋಷಕರು ಸರಕಾರಿ ಅದರಲ್ಲೂ ಕನ್ನಡ ಮಾಧ್ಯಮದ ಶಿಕ್ಷಣ ಸಂಸ್ಥೆಗಳ ಬಗ್ಗೆ ಅಸಡ್ಡೆ ಮೂಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಪ್ರತಿವರ್ಷ ಸರಕಾರ ಕೆಲವು ಕನ್ನಡ ಮಾಧ್ಯಮದ ಶಾಲೆಗಳನ್ನು ಮಕ್ಕಳ ಕೊರತೆಯ ಕಾರಣ ನೀಡಿ ಮುಚ್ಚುತ್ತಿದೆ. ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ವರ್ಷದಿಂದ ವರ್ಷಕ್ಕೆ ಸಂಖ್ಯೆಯಲ್ಲಿ ಹೆಚ್ಚುತ್ತಿವೆ. ಶಿಕ್ಷಣ ಸಂಸ್ಥೆಗಳ ಖಾಸಗೀಕರಣಕ್ಕೆ ಸರಕಾರಗಳು ಪರೋಕ್ಷವಾಗಿ ಅವಕಾಶವನ್ನು ಕಲ್ಪಿಸಿಕೊಡುತ್ತಿವೆ.
ಸರಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಉಚಿತ ಪಠ್ಯಪುಸ್ತಕಗಳು, ಉಚಿತ ಸಮವಸ್ತ್ರ, ಸೈಕಲ್ ವಿತರಣೆ, ಶಿಷ್ಯವೇತನ, ಬಿಸಿಯೂಟ ಭಾಗ್ಯ ಇತ್ಯಾದಿಗಳನ್ನು ಪ್ರಾಯೋಜಿಸಿದ್ದರೂ ಸರಕಾರಿ ಶಾಲೆಗಳು ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ತಾತ್ಸಾರವಿದೆ. ಇದಕ್ಕೆ ಕಾರಣವೇನು? ಬಹುಮುಖ್ಯವಾಗಿ ಸರಕಾರಿ ವ್ಯವಸ್ಥೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಾಣುತ್ತದೆ. ಶಿಕ್ಷಕರ ಕೊರತೆ ಇದೆ. ಶಿಕ್ಷಣದಲ್ಲಿ ಅಂತಹ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿಲ್ಲ ಎಂಬ ದೂರಿದೆ. ತರಗತಿ ಕೊಠಡಿಗಳ ಕೊರತೆ, ಶೌಚಾಲಯಗಳು ಇಲ್ಲದಿರುವುದು, ಪ್ರಯೋಗಾಲಯಗಳು, ಲ್ಯಾಂಗ್ವೇಜ್ ಲ್ಯಾಬ್‌ಗಳು, ಈ-ಬೋರ್ಡುಗಳು ಇತ್ಯಾದಿ ಕೊರತೆ ಇದ್ದು, ಇಂದಿನ ಕಲಿಕಾ ಮಟ್ಟವನ್ನು ಹೊಂದುವಲ್ಲಿ ಸರಕಾರಿ ಶಾಲೆಗಳು ಹಿಂದೆ ಬೀಳುತ್ತಿವೆ. ಆಯ್ಕೆಯಾದ ಶಿಕ್ಷಕರಿಗೆ ಪುನಶ್ಚೇತನ ಶಿಬಿರಗಳು ನಡೆಯದಿರುವುದು, ಕಟ್ಟು ನಿಟ್ಟಾದ ಮೇಲ್ವಿಚಾರಣೆ ಇಲ್ಲದಿರುವುದು ಮುಂತಾದ ಕಾರಣಗಳಿಂದ ಸರಕಾರಿ ಶಾಲೆಯ ಶಿಕ್ಷಕರು ಬೋಧನೆಯಲ್ಲಿ ಹೊಸತನವನ್ನು ಕಾಯ್ದುಕೊಳ್ಳುವುದಿಲ್ಲ.
ಕನ್ನಡ ಉಳಿಯಬೇಕೆಂದರೆ ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕು. ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕೆಂದರೆ ಈ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು. ಸರಕಾರ ಸಾರ್ವಜನಿಕ ಶಿಕ್ಷಣದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೆ ತರಬೇಕು. ಮಾತೃಭಾಷೆ ಅಥವಾ ನೆಲದ ಭಾಷೆಯಲ್ಲಿ ಶಿಕ್ಷಣವನ್ನು ಪ್ರಾಥಮಿಕ ಹಂತದವರೆಗೆ ಕಡ್ಡಾಯಗೊಳಿಸಬೇಕು. ಸರಕಾರಿ ಶಾಲೆಗಳಿಗೆ ಸರಕಾರ ಅನುಷ್ಠಾನಗೊಳಿಸಿರುವ ಹಲವು ಯೋಜನೆಗಳು ಸಮಯಕ್ಕೆ ಸರಿಯಾಗಿ ತಲುಪಬೇಕು. ಎಲ್ಲಾ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಲಿಸಬೇಕು. ಸ್ವಾತಂತ್ರ್ಯಾನಂತರದಲ್ಲಿ ಹಾಗೂ ಏಕೀಕರಣದ ನಂತರದಲ್ಲಿ ಸ್ಥಾಪನೆಯಾದ ಹಲವು ಖಾಸಗಿ ಕನ್ನಡ ಶಾಲೆಗಳು ಕರ್ನಾಟಕದಲ್ಲಿವೆ. ಕನ್ನಡ ಉಳಿಸುವ ನಿಟ್ಟಿನಲ್ಲಿ ಅಂತಹ ಶಾಲೆಗಳಿಗೆ ವಿಶೇಷ ಸೌಲಭ್ಯಗಳನ್ನು ಸರಕಾರ ನೀಡಬೇಕಿದೆ.
ಕನ್ನಡ ಮಾಧ್ಯಮದಲ್ಲಿ ಓದಿದರೂ ಬದುಕನ್ನು ಕಟ್ಟಿಕೊಳ್ಳಬಹುದು ಎನ್ನುವ ಸನ್ನಿವೇಶವನ್ನು ನಿರ್ಮಾಣ ಮಾಡಬೇಕಿದೆ. ಭಾಷೆಯೊಂದು ಬದುಕಿನ ಭಾಷೆಯಾಗಿ, ಅನ್ನದ ಭಾಷೆಯಾಗಿ ಬೆಳೆದಾಗಲೇ ಅದು ತನ್ನ ಸತ್ವವನ್ನು ಕಾಯ್ದುಕೊಳ್ಳಬಹುದು. ಇದಕ್ಕೆ ಇಂಗ್ಲಿಷ್ ಜ್ವಲಂತ ಉದಾಹರಣೆಯಾಗಿ ನಮ್ಮೆಲ್ಲರ ಕಣ್ಣ ಮುಂದಿದೆ. ಇಂದಿನ ಆಧುನಿಕ ಯುಗದಲ್ಲಿ ಬದುಕಿನ ಆಯ್ಕೆಗಳು ಮತ್ತು ಗಳಿಕೆಯ ಮಾರ್ಗಗಳು ವ್ಯಾಪಕವಾಗಿವೆ. ತಂತ್ರಜ್ಞಾನದಲ್ಲಿ, ವೈದ್ಯಕೀಯ ಕ್ಷೇತ್ರಗಳಲ್ಲಿ, ಸಿನೆಮಾ, ಜಾಹೀರಾತು, ಮಾಧ್ಯಮಗಳಿಗೆ, ವ್ಯಾಪಾರ-ವಾಣಿಜ್ಯ ರಂಗಗಳಿಗೆ ಬೇಕಾದ ಮಾಹಿತಿಗಳು ಕನ್ನಡದಲ್ಲಿ ಲಭ್ಯವಾಗುವಂತಿರಬೇಕು. ಕನ್ನಡ ನಾಡಿನ ಸಾಂಸ್ಕೃತಿಕ ಹಿರಿಮೆ, ಮತ್ತು ವೈವಿಧ್ಯತೆಯನ್ನು ಅಭಿವ್ಯಕ್ತಿಸುವ ಪಠ್ಯಗಳು ಮಕ್ಕಳಿಗೆ ಲಭ್ಯವಾಗಬೇಕು. ಜಪಾನ್, ಚೀನಾ, ರಶ್ಯ, ಜರ್ಮನಿಗಳಲ್ಲಿ ಮಾತೃಭಾಷೆಯಲ್ಲಿಯೇ ವಿವಿಧ ಜ್ಞಾನಶಾಖೆಯ ಬೋಧನೆ ನಡೆಯುತ್ತದೆ. ಇಂಗ್ಲಿಷನ್ನು ಕೇವಲ ಒಂದು ಭಾಷೆಯಾಗಿ ಕಲಿಸಲಾಗುತ್ತದೆ. ಆ ಮೂಲಕ ಪ್ರಾದೇಶಿಕ ಭಾಷೆ ಅಥವಾ ದೇಶಭಾಷೆಯು ಜೀವಂತವಾಗಿರಲು, ಬೆಳೆಯಲು ಅವಕಾಶವಿರುತ್ತದೆ. ಕನ್ನಡದ ಬಗ್ಗೆ ಸರಕಾರ ಹಾಗೂ ಸಾರ್ವಜನಿಕರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ‘‘ಹಿತ್ತಲ ಗಿಡ ಮದ್ದಲ್ಲ’’ ಎಂಬ ಪೋಷಕರ ಮನಃಸ್ಥಿತಿಯೂ ಬದಲಾಗಬೇಕು.