ಎರಡು ಸಾವಿರ ವರ್ಷಗಳಿಂದ ಒಂದು ನಾಡನ್ನು ಪೋಷಿಸಿದ ಭಾಷೆಯನ್ನು ನಾವು ಸಂರಕ್ಷಿಸದೇ ಹೋದರೆ ಇನ್ನಾರು ಸಂರಕ್ಷಿಸಬೇಕು? : ಪುರುಷೋತ್ತಮ ಬಿಳಿಮಲೆ
ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ನಾಡಿನ ಹಿರಿಯ ಚಿಂತಕ ಡಾ. ಪುರುಷೋತ್ತಮ ಬಿಳಿಮಲೆಯವರು ಕನ್ನಡ ಭಾಷಾ ಬೆಳವಣಿಗೆಯ ಬಗ್ಗೆ ತಮ್ಮ ಯೋಚನೆ, ಯೋಜನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ನೀವೀಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಮಯ ಯಾವ ಥರದ್ದು? ಸವಾಲಿನದ್ದಾಗಿದೆಯೆ? ಇದನ್ನು ಹೇಗೆ ನೋಡುತ್ತೀರಿ?
ಪುರುಷೋತ್ತಮ ಬಿಳಿಮಲೆ: ಕನ್ನಡವೂ ಸೇರಿದ ಹಾಗೆ ಭಾರತದ ಅನೇಕ ಭಾಷೆಗಳು ತೀವ್ರವಾದ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭ ಇದು. ಈ ಬಿಕ್ಕಟ್ಟಿಗೆ ಅನೇಕ ಕಾರಣಗಳಿವೆ. ಆದರೆ ಭಾರತಕ್ಕೆ ಸಮರ್ಪಕವಾದ ಒಂದು ಭಾಷಾ ನೀತಿ ಇಲ್ಲದೆ ಇರುವುದರಿಂದ, ಕೆಲವು ಭಾಷೆಗಳು ಅತ್ಯಂತ ತೀವ್ರವಾಗಿ ಬೆಳೆಯುವುದು, ಕೆಲವು ಭಾಷೆಗಳು ಪತನಮುಖಿಯಾಗಿರುವುದು ಕಂಡುಬರುತ್ತದೆ. 1971ರಿಂದ 2011ರ ನಡುವಿನ ಸುಮಾರು 40 ವರ್ಷಗಳ ಅವಧಿಯಲ್ಲಿ ಹಿಂದಿ ಭಾಷೆ ಶೇ.66ರಷ್ಟು ಅಭಿವೃದ್ಧಿಯನ್ನು ತೋರಿಸುತ್ತಿದೆ. ಒಬ್ಬ ಭಾಷಾ ವಿದ್ಯಾರ್ಥಿಯಾಗಿ ಇದು ನನಗೆ ಸಂತೋಷ ಕೊಡುವ ವಿಷಯವೇ. ಆದರೆ ಉಳಿದ ಭಾಷೆಗಳು ತಮಿಳು, ತೆಲುಗು, ಒಡಿಯಾ, ಬಾಂಗ್ಲಾ ಈ ಎಲ್ಲ ಭಾಷೆಗಳು ಶೇ.11, 12, 13, 14ರ ಆಸುಪಾಸಿನಲ್ಲಿ ತಮ್ಮ ಬೆಳವಣಿಗೆಯನ್ನು ತೋರಿಸುತ್ತಿವೆ. ತುಳು ಭಾಷೆಗೆ ಲಿಪಿ ಇಲ್ಲ. ಆದರೆ ಅದು ಶೇ.7ರಷ್ಟು ಅಭಿವೃದ್ಧಿಯನ್ನು ತೋರಿಸುತ್ತಿದೆ. ನಾನು ಹೇಳುತ್ತಿರುವುದು ಸರಕಾರದ ಅಂಕಿಅಂಶಗಳು. ಆದರೆ ಕನ್ನಡ ತೋರಿಸುತ್ತಿರುವ ಅಭಿವೃದ್ಧಿ ಶೇ.3.73 ಇದೆ. ಅಂದರೆ ಒಂದು ಭಾಷೆ ಶೇ.66 ವೇಗದಲ್ಲಿ ಬೆಳೆಯುತ್ತಿದೆ. ಇನ್ನೊಂದು ಭಾಷೆ ಶೇ.3.73 ವೇಗದಲ್ಲಿ ಬೆಳೆಯುತ್ತಿದೆ. ಈ ಅಪಾರವಾದ ಅಂತರ ಕೆಲವು ಭಾಷೆಗಳನ್ನು ಸಾಯಿಸಿಬಿಡುತ್ತದೆ.
ಭಾಷಾವಾರು ಪ್ರಾಂತ ಎಂದು ಮಾಡಿದಾಗ ಹಿಂದಿ ಶೇ.66 ಅಭಿವೃದ್ಧಿ ದಾಖಲು ಮಾಡುವುದಕ್ಕೆ ಹಿಂದಿ ಮಾತನಾಡುವ ಜನಸಂಖ್ಯೆ ಕೂಡ ಮುಖ್ಯ. ಆ ಹಿನ್ನೆಲೆಯಲ್ಲಿ ಕನ್ನಡದ ಸಂದರ್ಭದಲ್ಲಿ ವ್ಯತ್ಯಾಸ ಆಗಿರಬಹುದೆ?
ಪು.ಬಿ.: ಕರ್ನಾಟಕದ ಜಿಯೊ ಪೊಲಿಟಿಕಲ್ ಸ್ಥಿತಿಯನ್ನು ನೋಡಿದರೆ ಇದು ಪೂರ್ಣ ಉತ್ತರ ಭಾರತವೂ ಅಲ್ಲ; ಪೂರ್ಣ ದಕ್ಷಿಣ ಭಾರತವೂ ಅಲ್ಲ. ‘ಕಾವೇರಿಯಿಂದ ಗೋದಾವರಿವರಮಿರ್ದ’ ಎಂಬುದು ಒಳ್ಳೆಯ ರೂಪಕ. ಉತ್ತರದಿಂದ ನೇರ ಪ್ರವೇಶ ಮಾಡುವ ಯಾವುದೇ ಭಾಷೆ ಕರ್ನಾಟಕಕ್ಕೆ ಬರುತ್ತದೆ. ತೀರಾ ದಕ್ಷಿಣಕ್ಕೆ ಹೋಗುವುದಿಲ್ಲ. ದಕ್ಷಿಣದ ಕೆಲವು ಭಾಷೆಗಳೂ ಉತ್ತರದ ಕಡೆಗೆ ಹೋಗುತ್ತವೆ. ಹಾಗಾಗಿ ಕರ್ನಾಟಕ ಅನೇಕ ಭಾಷೆಗಳ ಒಂದು ಸಂಗಮ ಸ್ಥಾನ ಆಗುವುದಕ್ಕೆ ಅದು ಇರುವ ಜಾಗವೇ ಮುಖ್ಯವಾದ ಕಾರಣ. ಕರ್ನಾಟಕದಲ್ಲಿ ಏಕೀಕರಣದ ಸಂದರ್ಭದಲ್ಲಿ ಕನ್ನಡ ಪ್ರಮುಖ ಭಾಷೆಯಾಯಿತು. ಆದರೆ ಕರ್ನಾಟಕದಲ್ಲಿರುವ ಉಪಭಾಷೆಗಳು ಸಾಮಾಜಿಕ ಉಪಭಾಷೆಗಳು, ಪ್ರಾದೇಶಿಕ ಉಪಭಾಷೆಗಳು ಮತ್ತು ತಾಯ್ನುಡಿಗಳ ಸಂಖ್ಯೆ 230ಕ್ಕೂ ಹೆಚ್ಚು ಇದೆ. ತುಳುವರು ತಮ್ಮ ಮಾತೃಭಾಷೆ ತುಳು ಎನ್ನುತ್ತಾರೆ. ಕೊಡವರು ತಮ್ಮ ಮಾತೃಭಾಷೆ ಕೊಡವ ಎನ್ನುತ್ತಾರೆ. ಕೊಂಕಣಿಯವರು ಕೊಂಕಣಿ ಎನ್ನುತ್ತಾರೆ. ಬ್ಯಾರಿ ಭಾಷೆಯವರು ಬ್ಯಾರಿ ಎನ್ನುತ್ತಾರೆ. ಕನ್ನಡಕ್ಕೆ ಯಾರು ಹಾಗಾದರೆ? ಕನ್ನಡದ ಸಂಖ್ಯೆ ಕಡಿಮೆಯಾಗಿ ಕಾಣುವುದಕ್ಕೆ ಇಲ್ಲಿನ ಬಹುಭಾಷೆಗಳ ಪರಿಸರ ಒಂದು ಕಾರಣವಾದರೆ, ಹಿಂದಿ ಇಷ್ಟು ತೀವ್ರವಾಗಿ ಬೆಳೆಯುವುದಕ್ಕೆ ಇನ್ನೊಂದು ಕಾರಣವಿದೆ. ಹಿಂದಿ ನಮ್ಮ ಸಂವಿಧಾನದ ಪ್ರಕಾರ ಗೃಹ ಇಲಾಖೆಯ ಅಡಿಯಲ್ಲಿ ಬರುತ್ತದೆ. ಉಳಿದ ಎಲ್ಲ ಭಾಷೆಗಳೂ ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುತ್ತವೆ. ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಭಾಷೆಗಳಿಗೆ ಕೇಂದ್ರ ಸರಕಾರದ ಪ್ರೋತ್ಸಾಹ ಬಹುತೇಕ ಇಲ್ಲ. ಭಾರತದಲ್ಲಿ 19,569 ತಾಯ್ನುಡಿಗಳಿವೆ. ಇದರಲ್ಲಿ ಭಾರತದ ಸಂವಿಧಾನ ಅಂಗೀಕರಿಸಿರುವ ಭಾಷೆಗಳು ಕೇವಲ 22. ಉಳಿದ ಭಾಷೆಗಳ ಗತಿ ಏನು? 2011ರ ಜನಗಣತಿಯಲ್ಲಿ 99 ಭಾಷೆಗಳು 8ನೇ ಷೆಡ್ಯೂಲ್‌ಗೆ ಸೇರಲು ಕಾದುಕುಳಿತಿವೆ. 2024ರ ಜನಗಣತಿ ಬಂದಾಗ ಈ ಸಂಖ್ಯೆ ಏನಿಲ್ಲವೆಂದರೂ 125ರಿಂದ 130 ಆಗಬಹುದು. ಭಾಷೆಯ ಬಗ್ಗೆ ಎಚ್ಚರ ಮೂಡಿದಾಗ 8ನೇ ಷೆಡ್ಯೂಲ್‌ಗೆ ಸೇರಿಸಬೇಕು ಎಂಬ ಒತ್ತಾಯ ಬರುತ್ತದೆ. ಆದರೆ ವಾಸ್ತವವಾಗಿ ಇಷ್ಟು ಭಾಷೆಗಳನ್ನು 8ನೇ ಷೆಡ್ಯೂಲ್‌ಗೆ ಸೇರಿಸಲು ಸಾಧ್ಯವೇ ಇಲ್ಲ.
ಆದರೆ ಆ 99 ಭಾಷೆಗಳಲ್ಲಿ ಹೆಚ್ಚಿನವುಗಳು ನಶಿಸಿಹೋಗುತ್ತಿದ್ದು, ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರ ಬಗ್ಗೆ ಏನೆನ್ನಿಸುತ್ತದೆ?
ಪು.ಬಿ.: ನನಗಿರುವ ಆತಂಕ 8ನೇ ಷೆಡ್ಯೂಲ್‌ನ 22 ಭಾಷೆಗಳಲ್ಲ. ಉಳಿದ ಬಹುತೇಕ ಭಾಷೆಗಳು ಪತನಮುಖಿಯಾ ಗಿವೆ. ಸೆರ್ರಾ ಎಂಬ ಅಂಡಮಾನ್‌ನ ಒಂದು ಭಾಷೆ 2023ರಲ್ಲಿ ಸತ್ತುಹೋಯಿತು. 1871ರ ಜನಗಣತಿಯಲ್ಲಿ ಕರಾವಳಿ, ಮಲೆನಾಡು ಪ್ರದೇಶದಲ್ಲಿರುವ ಕೊರಗ ಭಾಷೆಯನ್ನು ಮಾತನಾಡು ವವರ ಸಂಖ್ಯೆ 55 ಸಾವಿರ. ಆದರೆ 2011ರ ಜನಗಣತಿಯಲ್ಲಿ ದಾಖಲಾಗಿ ರುವ ಕೊರಗ ಭಾಷಿಕರ ಸಂಖ್ಯೆ 5 ಸಾವಿರ. ಆದರೆ ಅಲ್ಲಿಯೇ ಕೆಲಸ ಮಾಡುವ ನನ್ನ ಗೆಳೆಯರೆಲ್ಲ ಹೇಳುವ ಪ್ರಕಾರ ಆ ಭಾಷೆ ಮಾತನಾಡುವವರ ಸಂಖ್ಯೆ 2 ಸಾವಿರಕ್ಕಿಂತ ಹೆಚ್ಚಿಲ್ಲ. ಇದೊಂದು ಸಣ್ಣ ಭಾಷೆ. ಆದರೆ ಕೊಡವದಂಥ ಒಂದು ಭಾಷೆ ಮಾತನಾಡುವವರ ಸಂಖ್ಯೆ 2001ರ ಜನಗಣತಿಯಲ್ಲಿ 1 ಲಕ್ಷ 66 ಸಾವಿರ ಇತ್ತು. 2011ರಲ್ಲಿ ದಾಖಲಾಗಿದ್ದು 1 ಲಕ್ಷ 31 ಸಾವಿರ. ಇದು ಭಾರತದ ಸಣ್ಣ ಭಾಷೆಗಳ ಕಥೆ. ಭಾರತದ ಬಹುತೇಕ ಭಾಷೆಗಳು ಪತನಮುಖಿಯಾಗಿವೆ ಮತ್ತು ಸಾವಿನತ್ತ ಚಲಿಸುತ್ತಿವೆ. ಇದು ಭಾಷೆಯ ಬಗ್ಗೆ ಯೋಚಿಸುವುದಕ್ಕೆ, ಕೆಲಸ ಮಾಡುವುದಕ್ಕೆ ಅತ್ಯಂತ ಸಶಕ್ತವಾದ ಕಾಲಘಟ್ಟ. ಈ ಕಾಲಘಟ್ಟದಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡದೆ ಹೋದರೆ, ಅನೇಕ ಭಾಷೆಗಳ ಸಾವಿಗೆ ನಾವು ಸಾಕ್ಷಿಯಾಗಬೇಕಾಗುತ್ತದೆ. ಇದು ಆಗಬಾರದು ಎಂಬುದು ನನ್ನ ಆಸೆ, ಕಳಕಳಿ. ಆದ್ದರಿಂದ ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜವಾಬ್ದಾರಿ ತೆಗೆದುಕೊಂಡಾಗ ನನ್ನ ಮುಂದಿರುವ ಒಂದು ಕಾಳಜಿ ಬಹುಭಾಷೆಗಳ ಕುರಿತದ್ದು. ಬಹುಭಾಷೆಗಳೆಂದರೆ ಒಂದು ರಂಗೋಲಿ ಇದ್ದ ಹಾಗೆ. ಬಣ್ಣ ಹೆಚ್ಚಿದ್ದಷ್ಟೂ ರಂಗೋಲಿ ಚೆಂದ. ರಂಗೋಲಿಯಿಂದ ಒಂದೊಂದೇ ಬಣ್ಣ ಕಳೆದು ಯಾವುದೋ ಒಂದು ಬಣ್ಣ ಹಾಕಿದರೆ ಚಂದವಿರುವುದಿಲ್ಲ. ಭಾರತ ಎಂಬುದು ಅಥವಾ ಕರ್ನಾಟಕ ಎಂಬುದು ಬಹುಬಣ್ಣಗಳ ರಂಗೋಲಿಯ ಹಾಗಿರುವ ಬಹುಭಾಷೆಗಳ ನಾಡು.
ಸರಕಾರದ ಬಳಿ ಒಂದು ಅಂಕಿಅಂಶವಂತೂ ಇದೆ. ವರದಿಯೊಂದರ ಪ್ರಕಾರ, 46,750 ಕನ್ನಡ ಶಾಲೆಗಳಿವೆ. ಅದರಲ್ಲಿ ಶಿಕ್ಷಕರ ಕೊರತೆ ಇರುವುದು ಸುಮಾರು 53,850. ಈಚೆಗೆ ನೀವು ಶಿಕ್ಷಣ ಮಂತ್ರಿಗಳಿಗೆ ಮಾಡಿಕೊಂಡ ಮನವಿಯಲ್ಲಿರುವಂತೆ, 2,268 ಶಾಲೆಗಳಿಗೆ 3,848 ಶಿಕ್ಷಕರ ಕೊರತೆ ಇರುವಾಗ, ಇನ್ನು ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದು ಹೇಗೆ ಸಾಧ್ಯ?
ಅದಕ್ಕೇ ನಾನು ಹೇಳಿದ್ದು. ಈ ಸಮಸ್ಯೆಗಳನ್ನು ಇಡಿಯಾಗಿ ಹೊತ್ತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಈಗ ಕೊರತೆಯಿರುವ 55 ಸಾವಿರ ಶಿಕ್ಷಕರು ಒಂದೇ ದಿನ ನಿವೃತ್ತರಾದರಾ? ಬೇರೆ ಬೇರೆ ಕಾಲಘಟ್ಟದಲ್ಲಿ ನಿವೃತ್ತರಾದರು. ನಿವೃತ್ತರಾದಾಗಲೇ ತುಂಬಿಸಬೇಕಿತ್ತು. ಮೈಸೂರು ವಿವಿಯ ಸುಮಾರು 900 ಹುದ್ದೆಗಳು ಖಾಲಿ ಇವೆ. 900 ಜನ ಒಂದೇ ದಿನ ನಿವೃತ್ತರಾದರಾ? ವರ್ಷಕ್ಕೆ 10, 20 ಜನ ನಿವೃತ್ತರಾಗುತ್ತಾ ಇದ್ದ ಹಾಗೆಯೇ ತುಂಬಿಸುತ್ತಾ ಬಂದಿದ್ದರೆ ಸಮಸ್ಯೆ ಈಗ ಈ ಹಂತಕ್ಕೆ ಬರುತ್ತಿರಲಿಲ್ಲ.
ಶಿಕ್ಷಣ ಮತ್ತು ಆರೋಗ್ಯ ವಿಚಾರ ಮಾಫಿಯಾ ಆಗಿರುವುದು ಎಲ್ಲರಿಗೂ ಗೊತ್ತಿದೆ. ರಾಜಕಾರಣಿಗಳೇ ಶಿಕ್ಷಣ ಸಂಸ್ಥೆಗಳನ್ನು ನಡೆಸುವಾಗ ಸರಕಾರಿ ಶಾಲಾ ವ್ಯವಸ್ಥೆ ಗುಣಮಟ್ಟದ್ದಾಗಿರಬೇಕೆಂದು ಅವರೇಕೆ ಬಯಸುತ್ತಾರೆ? ಇದು ಮೂಲ ಎಂದು ಅನ್ನಿಸುವುದಿಲ್ಲವೆ?
ಪು.ಬಿ.: ಆ ಸಮಸ್ಯೆ ಇದೆ. ಅದನ್ನು ಎತ್ತಿಕೊಳ್ಳುವಷ್ಟು ಶಕ್ತಿಯಾಗಲಿ, ಪರಿಹಾರ ಮಾಡುವಷ್ಟು ಆರ್ಥಿಕ ಸಂಪನ್ಮೂಲವಾಗಲಿ ಪ್ರಾಧಿಕಾರದ ಬಳಿ ಇಲ್ಲ. ಆದರೆ ಇನ್ನೂರು ಕಂಡ ಶತಮಾನೋತ್ಸವ ಇನ್ನೂರು ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದರೆ, ಅಲ್ಲಿ ಕುಡಿಯುವ ನೀರಿಲ್ಲದಿದ್ದರೆ ಅಂಥ ವ್ಯವಸ್ಥೆಯನ್ನು ಮಾಡಲು ಸಾಧ್ಯ. ವರ್ಷ ಬಿಟ್ಟು ಮತ್ತೊಮ್ಮೆ ಹೀಗೇ ಮಾತಾಡುವಾಗ ಒಂದು ವರದಿ ಕೊಡುತ್ತೇನೆ. ಪ್ರತೀ ಶತಮಾನೋತ್ಸವ ಕಂಡ ಶಾಲೆಯನ್ನು ಮಾದರಿ ಶಾಲೆಯಾಗಿ ಪರಿವರ್ತಿಸುತ್ತೇನೆ.
ನಾನು ಓದಿದ ಶಿವಮೊಗ್ಗದ ಮಾಸ್ತಿಕಟ್ಟೆಯ ಶಾಲೆ ನೂರು ವರ್ಷ ಪೂರೈಸಿದೆ. ದುರಂತ ಏನೆಂದರೆ ಆ ಶಾಲೆಯಲ್ಲೀಗ ಹತ್ತು ಮಕ್ಕಳೂ ಇಲ್ಲ. ಒಬ್ಬ ಶಿಕ್ಷಕರೂ ಇಲ್ಲ. ಅತಿಥಿ ಶಿಕ್ಷಕರೊಬ್ಬರು ಇದ್ದಾರೆ. ಇಂಥ ಸ್ಥಿತಿಯಿದೆ.
ಪು.ಬಿ.: ಅಲ್ಲಿಗೆ ಹೋಗುತ್ತೇನೆ. ನಾನು ಕಂಡುಕೊಂಡಿರುವ ಪ್ರಕಾರ, ಸರಕಾರಿ ಶಾಲೆಯಲ್ಲಿ ಸರಿಯಾದ ವ್ಯವಸ್ಥೆ ಇದ್ದರೆ ಪೋಷಕರು ಮಕ್ಕಳನ್ನು ಆ ಶಾಲೆಗೆ ಕಳಿಸಲು ಹಿಂದೆಮುಂದೆ ನೋಡುವುದಿಲ್ಲ. ಅಲ್ಲಿ ಶೌಚಾಲಯವಿಲ್ಲ, ನೀರಿಲ್ಲ, ಕುಳಿತುಕೊಳ್ಳುವ ವ್ಯವಸ್ಥೆಯಿಲ್ಲ, ಸೂರು ಸೋರುತ್ತಿದೆಯೆಂದರೆ ಯಾರು ತಾನೆ ಮಕ್ಕಳನ್ನು ಕಳಿಸಲು ಸಾಧ್ಯ? ಆದರೆ ನನ್ನೆದುರು ಒಂದು ಒಳ್ಳೆಯ ಮಾದರಿ ಇದೆ. ಅದು ದಿಲ್ಲಿ ಮಾದರಿ. ದಿಲ್ಲಿಯಲ್ಲಿ ಆಪ್ ಸರಕಾರ ಬಂದ ಕೂಡಲೇ ಅವರ ಮೊದಲ ಆದ್ಯತೆಗಳಾಗಿ ವಿದ್ಯುತ್, ನೀರು, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಸರಿಪಡಿಸಿದರು. ಶಿಕ್ಷಣಕ್ಕೆ ಶೇ.33 ಹಣ ಇಟ್ಟರು. ಕರ್ನಾಟಕದಲ್ಲಿ ನಮಗೆ ಅಷ್ಟು ಇಡಲು ಆಗುವುದಿಲ್ಲ. ಆದರೆ ಆ ಶಾಲೆಗಳಲ್ಲಿ ಕೇಜ್ರಿವಾಲ್, ಸಿಸೋಡಿಯಾ ಮತ್ತು ಆತಿಶಿ ಇವರೆಲ್ಲ ಸೇರಿ ಮೂಲಸೌಕರ್ಯ ಸುಧಾರಿಸಿದರು. ಅವು ಖಾಸಗಿ ಶಾಲೆಗಳಷ್ಟೇ ಚೆನ್ನಾಗಿವೆ. ಕಳೆದ ಹತ್ತು ವರ್ಷಗಳಲ್ಲಿ ಸರಕಾರಿ ಶಾಲೆಗಳಿಗೆ ಎಷ್ಟು ದಾಖಲಾತಿ ಆಯಿತೆಂದರೆ, ಖಾಸಗಿ ಶಾಲೆಗಳು ಇಷ್ಟು ಅವಧಿಯಲ್ಲಿ ಶುಲ್ಕ ಹೆಚ್ಚಿಸುವುದಕ್ಕೇ ಆಗಲಿಲ್ಲ. ಸರಿಯಾಗಿ ಸರಕಾರಿ ಶಾಲೆಗಳನ್ನು ನಡೆಸಿದರೆ ಪೋಷಕರು ಮಕ್ಕಳನ್ನು ಕಳಿಸುತ್ತಾರೆ.
ಪ್ರಾಧಿಕಾರಕ್ಕೆ ನೀವೇ ಹೇಳಿದ ಹಾಗೆ ಅಷ್ಟು ಅಧಿಕಾರ ಇಲ್ಲ. ನೀವು ವರದಿ ಕೊಡಬಹುದು. ಸರಕಾರ ಅಂತಿಮವಾಗಿ ತೀರ್ಮಾನಿಸಬೇಕಾಗುತ್ತದೆ. ದಿಲ್ಲಿ ಮಾದರಿ ತರುವುದು ಸಾಧ್ಯವಿದೆ ಎಂದು ಅನ್ನಿಸುತ್ತದೆಯೆ?
ಪು.ಬಿ.: ನನ್ನ ಯೋಜನೆ ಸ್ವಲ್ಪ ಬೇರೆಯಿದೆ. ಸರಕಾರಕ್ಕೆ ಪ್ರಸ್ತಾಪ ಸಲ್ಲಿಸುತ್ತೇವೆ. ಶತಮಾನೋತ್ಸವ ಕಂಡ ಶಾಲೆಗಳ ಸ್ಥಿತಿ ಸುಧಾರಿಸಲು ಹಣ ಒದಗಿಸುವ ಜವಾಬ್ದಾರಿ ತಮ್ಮದೆಂದು ಶಿಕ್ಷಣ ಮಂತ್ರಿಗಳು ಹೇಳಿದ್ದಾರೆ. ಜೊತೆಗೆ ನಾನು ಶಿಕ್ಷಕರನ್ನು, ಆಯಾ ಊರಿನ ಶಾಸಕರು, ಸಂಸದರನ್ನು ಭೇಟಿಯಾಗುತ್ತೇನೆ. ಊರಿನಲ್ಲಿ ಸರಿಯಾದವರ ಕೈಗೆ ದುಡ್ಡು ಹೋಗುತ್ತದೆ ಎಂದು ಗೊತ್ತಾದರೆ ದುಡ್ಡು ಕೊಡುವವರು ಇದ್ದಾರೆ. ನಾನು ದಿಲ್ಲಿಯಲ್ಲಿ ಕರ್ನಾಟಕ ಸಂಘ ಕಟ್ಟುವಾಗ ಸಾರ್ವಜನಿಕರಿಂದ 3 ಕೋಟಿ ಸಂಗ್ರಹಿಸಿದ್ದೆ. ನೂರು ವರ್ಷವಾದ ಶಾಲೆಗಳಿಗೆ ಜಾಗ ಕೊಟ್ಟವರು ಅಥವಾ ಆ ಕಾಲದಲ್ಲಿ ಕಟ್ಟಡ ಕಟ್ಟಿದವರ ಮೊಮ್ಮಕ್ಕಳು ಅಮೆರಿಕದಲ್ಲೋ ಇಂಗ್ಲೆಂಡ್‌ನಲ್ಲಿಯೋ ಇದ್ದಿರಬಹುದು ಅಥವಾ ಊರಿನವರೇ ತಮ್ಮ ಶಾಲೆ ಎಂದು ಹಣ ಕೊಡಬಹುದು. ಆದರೆ ಕೆಲವು ಶಾಲೆಗಳು ತಲೆಯೆತ್ತಲಾರದ ಸ್ಥಿತಿಗೂ ಬಂದಿವೆ. ಅಂಥವುಗಳನ್ನು ಏನೂ ಮಾಡಲಾಗದೆನ್ನುವುದಾದರೆ ಮುಚ್ಚದೆ ಬೇರೆ ದಾರಿಯಿಲ್ಲ. ಹೈದರಾಬಾದ್ ಕರ್ನಾಟಕದಲ್ಲಿ, ಬೆಳಗಾವಿ ಪರಿಸರದಲ್ಲಿ ಸ್ಥಿತಿ ಸುಧಾರಿಸಲು ಸಾಧ್ಯ. ಸಣ್ಣ ಸಣ್ಣ ನೆರವು ನೀಡುವ ಜನರಿದ್ದಾರೆ. ಅಂಥ ಶಕ್ತಿಯನ್ನು ಬಳಸಿಕೊಳ್ಳುವುದು ನನ್ನ ಉದ್ದೇಶ.
ಇಲ್ಲಿ ಇನ್ನೊಂದು ಸಮಸ್ಯೆ ಇದೆ. ಇಂಗ್ಲಿಷ್ ಎಲ್ಲರನ್ನೂ ಆವರಿಸಿಕೊಂಡಿದೆ. ಒಂದು ಕಾಲದ ಪ್ರಾಮುಖ್ಯತೆ ಭಾಷೆಗೆ ಈಗ ಉಳಿದುಕೊಂಡಿಲ್ಲ, ಇಂಗ್ಲಿಷನ್ನು ಕಲಿಯಲೇಬೇಕು ಎನ್ನುವ ಮನಸ್ಥಿತಿ ಇದೆ. ಇದರ ಬಗ್ಗೆ?
ಪು.ಬಿ.: ಐದನೇ ತರಗತಿವರೆಗೆ ತಮ್ಮ ಮಕ್ಕಳು ಕನ್ನಡ ಕಲಿಯಬೇಕು ಎಂಬುದು ನೂರಕ್ಕೆ ತೊಂಭತ್ತೆಂಟರಷ್ಟು ಜನರ ಮನಸ್ಸಿನಲ್ಲಿ ಇದೆ. ಆದರೆ 1990ರ ನಂತರದ ಜಾಗತಿಕ ಬೆಳವಣಿಗೆಯಲ್ಲಿ ಇಂಗ್ಲಿಷ್ ಅನಿವಾರ್ಯವಾಗಿದೆ. ಐದನೇ ತರಗತಿಯವರೆಗೆ ರಾಜ್ಯಭಾಷೆಯಲ್ಲಿ ಕಲಿಸಬೇಕು. ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ವಿಷಯವಾಗಿ ಕಲಿಸಬೇಕು. ಐದರ ನಂತರ ಇಂಗ್ಲಿಷ್ ಮಾಧ್ಯಮಕ್ಕೆ ಹೋಗಬಹುದು.
ಸರಕಾರಕ್ಕೂ ಒಂದು ಸವಾಲು ಇದೆ. ಸುಮಾರು 13 ಸಾವಿರ ಸರಕಾರಿ ಶಾಲೆಗಳು ಮುಚ್ಚಿವೆ ಎಂದು ಒಂದು ವರದಿಯೂ ಇದೆ. ಇರುವಂಥ ಶಾಲೆಗಳನ್ನಾದರೂ ಉಳಿಸಿಕೊಳ್ಳಬೇಕು. ಆದರೆ ಊರಿನಲ್ಲಿಯ ಇಂಗ್ಲಿಷ್ ಶಾಲೆಗೆ ಮಕ್ಕಳನ್ನು ಕಳಿಸುತ್ತಾರೆ. ಸರಕಾರಿ ಶಾಲೆಗೆ ಮಕ್ಕಳಿಲ್ಲ. ಹೀಗಾಗಿ ಇಂಗ್ಲಿಷ್ ಮಾಧ್ಯಮವನ್ನಾದರೂ ತೆರೆದರೆ ಸರಕಾರಿ ಶಾಲಾ ವ್ಯವಸ್ಥೆ ಉಳಿಯುತ್ತದೇನೊ ಎಂಬ ಉದ್ದೇಶ ಸರಕಾರದ್ದಾಗಿರಬಹುದಲ್ಲವೆ?
ಪು.ಬಿ.: ನನ್ನ ಪ್ರಶ್ನೆ ಇಷ್ಟೆ. ಕನ್ನಡ ಶಾಲೆಯನ್ನೇ ಉಳಿಸಲಾಗದವರು ಇಂಗ್ಲಿಷ್ ಶಾಲೆಯನ್ನು ಹೇಗೆ ಉಳಿಸುತ್ತಾರೆ? ಅದನ್ನು ಉಳಿಸುವ ಸರಕಾರ ಅಥವಾ ಆಡಳಿತ ಇದ್ದರೆ ಅದಕ್ಕೆ ಕನ್ನಡ ಉಳಿಸುವುದು ಯಾಕೆ ಆಗುವುದಿಲ್ಲ? ಹಾಗಾಗಿ ಇದೆಲ್ಲ ತಮ್ಮ ನಿರ್ಧಾರವನ್ನು ಸಮರ್ಥನೆ ಮಾಡುವುದಕ್ಕೆ ವಾದವಷ್ಟೆ. ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹಾಕುವ ಹಣ ಮತ್ತು ಶ್ರಮವನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಹಾಕಿ. ಅರ್ಧಕ್ಕರ್ಧ ಶಾಲೆಗಳು ಪುನರುಜ್ಜೀವನಗೊಳ್ಳುತ್ತವೆ. ವಾಸ್ತವವಾಗಿ, ಶಾಲೆ ನಡೆಸುವುದಕ್ಕೇ ನಿಮಗೆ ಗೊತ್ತಿಲ್ಲ ಎಂದು ಅರ್ಥ. ಶಿಕ್ಷಣಕ್ಕೆ ಶೇ.3.5 ಹಣ ಇಡುತ್ತಾರೆ. ಆದರೆ ವೆಚ್ಚ ಶೇ.2ಕ್ಕಿಂತ ಕಡಿಮೆಯಿದೆ. ಅಂದರೆ ಶಿಕ್ಷಣಕ್ಕೆ ಖರ್ಚು ಮಾಡಲು ಯಾರಿಗೂ ಆಸಕ್ತಿಯಿಲ್ಲ.
ಆದರೆ ಸಂವಿಧಾನ ಕಡ್ಡಾಯ ಮತ್ತು ಮೂಲಭೂತ ಶಿಕ್ಷಣವನ್ನು ಒಂದರಿಂದ 14ನೇ ವರ್ಷದವರೆಗೂ ಕೊಡಬೇಕು ಎನ್ನುತ್ತದೆ. ಅದಕ್ಕಾಗಿ ಯಾವುದೇ ಕಾನೂನನ್ನು ರಾಜ್ಯ ಸರಕಾರವೂ ತರಬಹುದು. ಅದನ್ನೇಕೆ ಮಾಡುವುದಿಲ್ಲ?
ಪು.ಬಿ.: ನಮಗೊಂದು ನೈತಿಕ ಜವಾಬ್ದಾರಿ ಇದೆ. ಕನ್ನಡಿಗರಿಗೆ ಒಂದು ನೈತಿಕ ಜವಾಬ್ದಾರಿ ಇದೆ. ಅದು ಬರೀ ಆರ್ಥಿಕ ಜವಾಬ್ದಾರಿ ಅಲ್ಲ. ಎರಡು ಸಾವಿರ ವರ್ಷಗಳಿಂದ ಒಂದು ನಾಡನ್ನು ಪೋಷಿಸಿದ ಭಾಷೆಯನ್ನು ನಾವು ಸಂರಕ್ಷಿಸದೇ ಹೋದರೆ ಇನ್ನಾರು ಸಂರಕ್ಷಿಸಬೇಕು? ದೇಶದ ಅನೇಕ ರಾಜ್ಯಗಳು ಅವುಗಳ ರಾಜ್ಯಭಾಷೆಯನ್ನು ಸಂರಕ್ಷಿಸುವುದಕ್ಕೆ ಕೆಲಸ ಮಾಡುತ್ತಿರುವಾಗ ನಾವು ಕೈಬಿಟ್ಟು ಕೂರಲು ಆಗುವುದಿಲ್ಲ. ಬಸವಣ್ಣ ಬರೆಯುವ ಕಾಲಕ್ಕೆ ನಮ್ಮ ದೇವರುಗಳಿಗೆ ಸಂಸ್ಕೃತ ಬಿಟ್ಟರೆ ಬೇರಾವ ಭಾಷೆಯೂ ಬರುತ್ತಿರಲಿಲ್ಲ. ಆದರೆ ಬಸವಾದಿ ಶರಣರು ದೇವರಿಗೆ ಕನ್ನಡ ಕಲಿಸಿದರು. ನಂಬಿ ಕರೆದರೆ ಓ ಎಂಬನೆ ಶಿವನು ಇದು ನಮ್ಮ ನಾಡಿನ ಪರಂಪರೆ. ಜಾಗತೀಕರಣದ ಸಂದರ್ಭದಲ್ಲಿ ಕನ್ನಡದ ಅನುಭವಗಳನ್ನು ಹೇಳುವುದಕ್ಕೆ ಆಗುವುದಿಲ್ಲ ಎನ್ನಲಾಗುತ್ತದೆ. ಯಾಕೆ ಆಗುವುದಿಲ್ಲ? ಕನ್ನಡದಲ್ಲಿ ಅನಂತಮೂರ್ತಿಯಂಥ ಒಬ್ಬ ಬರಹಗಾರ, ಪಂಪನಂಥ ಒಬ್ಬ ಕವಿ, ವಚನಕಾರರಂಥವರು, ಶಿವಪ್ರಕಾಶ್ ಅಂಥ ಒಬ್ಬ ಮಹಾಕವಿ, ಗಿರೀಶ್ ಕಾರ್ನಾಡರು ಇವರೆಲ್ಲರೂ ಅತ್ಯಾಧುನಿಕ ಅನುಭವಗಳನ್ನು ಭಾಷೆಯಲ್ಲಿ ಹೇಳಲು ಸಾಧ್ಯ ಎಂದು ತೋರಿಸಿದ್ದಾರೆ. ಜಗತ್ತಿನಲ್ಲಿ ಅದು ಸಾಬೀತಾಗಿದೆ. ನಾವು ಹೇಳಲಿಕ್ಕೆ ಏನಿಲ್ಲ. ಹೇಳಲು ಆಗುವುದಿಲ್ಲ ಎನ್ನುವವರು ಏನನ್ನೂ ಹೇಳುವುದಿಲ್ಲ. 1834ರಿಂದ ಇಂಗ್ಲಿಷ್ ಕಲಿತಿದ್ದೇವೆ. ಇಂಗ್ಲಿಷ್ ಮಾಧ್ಯಮ ಶಾಲೆಗಳು ಎಲ್ಲೆಲ್ಲೂ ಬರುತ್ತಿವೆ. ಶಿವರಾಮ ಕಾರಂತರ ‘ಬೆಟ್ಟದ ಜೀವ’ ಕಾದಂಬರಿಯನ್ನು ಸರಿಯಾದ ಇಂಗ್ಲಿಷ್‌ಗೆ ಅನುವಾದ ಮಾಡುವ ಒಬ್ಬನನ್ನು ಹುಡುಕಿಕೊಡಿ. ಅನುವಾದ ಮಾಡಿ ಬಿಸಾಕುವವರು ಬೇಡ. ಅಷ್ಟು ಇಂಗ್ಲಿಷ್ ನನಗೂ ಬರುತ್ತದೆ. ಆದರೆ ಬೆಟ್ಟದ ಜೀವ ಒಂದು ಕಾದಂಬರಿಯಾದರೂ ಅದರೊಳಗಡೆ ಒಂದು ಕಾವ್ಯ ಇದೆ. ಆ ಜೀವ, ಅಲ್ಲಿರುವ ಕಾಟಮೂಲೆ ಇರಬಹುದು, ಲಕ್ಷ್ಮಿ ಜೀವನ ಇರಬಹುದು, ಹೊಳೆ ಇರಬಹುದು, ಹುಲಿ ಹಿಡಿಯುವ ಪ್ರಕ್ರಿಯೆ ಇರಬಹುದು, ಇಡೀ ಕಾಟಮೂಲೆಯ ಕಾವ್ಯವನ್ನು ಇಂಗ್ಲಿಷಿನಲ್ಲಿ ಹೇಳಲಿಕ್ಕೆ 160 ವರ್ಷಗಳಿಂದ ಇಂಗ್ಲಿಷ್ ಕಲಿಯುತ್ತಿರುವ ನಾಡಿನಲ್ಲಿ ನನಗೆ ಒಬ್ಬ ಸಿಗುವುದಿಲ್ಲ ಅಂತಾದರೆ? ವ್ಯಾವಹಾರಿಕ ಭಾಷೆ ಬೇರೆ. ಅದು ಸೃಜನಶೀಲತೆಗೆ ಸಹಾಯ ಮಾಡುವುದಿಲ್ಲ. ಹಾಗಾಗಿ ನಮ್ಮ ಮಕ್ಕಳು ಮಾತೃಭಾಷೆಯಲ್ಲಿ ಕಲಿಯದೇ ಹೋದರೆ ತಳವಿಲ್ಲದ ದೋಣಿಯ ಹಾಗೆ. ಅತ್ಯಂತ ಪ್ರಬುದ್ಧ ಭಾಷೆ ಕನ್ನಡ. ಬೇರೆ ಭಾಷೆಗಳಲ್ಲಿ ಇಲ್ಲದ ಒಂದು ಗುಣ ಕನ್ನಡಕ್ಕೆ ಇದೆ. ಅದು ಅತ್ಯಾಧುನಿಕ ಪದಗಳನ್ನು ಕೂಡ ತನ್ನೊಳಗೆ ಸುಲಭವಾಗಿ ಸ್ವೀಕರಿಸುತ್ತದೆ. ತಮಿಳು ವಿರೋಧಿಸುತ್ತದೆ. ತಮಿಳಿನಲ್ಲಿ ವಾಟ್ಸ್‌ಆ್ಯಪ್ ಎಂಬ ಶಬ್ದವೇ ಇಲ್ಲ. ನಮಗೆ ಅಂಥದೇನೂ ಸಮಸ್ಯೆ ಇಲ್ಲ. ಯಾವ ಶಬ್ದವನ್ನು ಬೇಕಾದರೂ ನಾವು ತೆಗೆದುಕೊಳ್ಳುತ್ತೇವೆ.
ಕನ್ನಡದ ಅಭಿವೃದ್ಧಿ ಎನ್ನುವಾಗ ಆಡಳಿತಾತ್ಮಕವಾಗಿ ಇರುತ್ತದೆ ಮತ್ತು ಉದ್ಯೋಗದಲ್ಲಿಯೂ ಬರುತ್ತದೆ. ಸರೋಜಿನಿ ಮಹಿಷಿ ವರದಿಯನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು ಎಂಬ ಒತ್ತಾಯ ಬಹಳ ಕಾಲದಿಂದಲೂ ಇದೆ. ಯಾಕೆ ಅದು ಸಾಧ್ಯವಾಗುತ್ತಿಲ್ಲ?
ಪು.ಬಿ.: ಸರೋಜಿನಿ ಮಹಿಷಿ ವರದಿಯ ಎಲ್ಲಾ ಶಿಫಾರಸುಗಳನ್ನು ಕೂಡ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಕಾಲ ಬದಲಾಗಿದೆ. ಆ ವರದಿ ಸಲ್ಲಿಸುವಾಗ ಐಟಿ-ಬಿಟಿ ಬೆಳೆದಿರಲಿಲ್ಲ. ಅದರ ಉಲ್ಲೇಖವೇ ಅದರಲ್ಲಿಲ್ಲ. ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿರುವುದು ನಮ್ಮ ಸರಕಾರಗಳು ಹೇಳುವ ಹಾಗೆ ಐಟಿ-ಬಿಟಿಯಲ್ಲಿ. ಅಲ್ಲಿ ಕನ್ನಡಿಗರನ್ನು ಹೇಗೆ ತುಂಬಬೇಕು ಎಂಬುದು ಅದರಲ್ಲಿಲ್ಲ. ಕೆಲವು ಕ್ಷೇತ್ರಗಳಲ್ಲಿ ನೂರಕ್ಕೆ ನೂರು ನೇಮಕಾತಿ ಅಗಬೇಕು ಎನ್ನುತ್ತಾರೆ. ಅದು ಸಾಧ್ಯವಿಲ್ಲ. ಬದಲಾದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಜಾಗತಿಕ ಸಂದರ್ಭದಲ್ಲಿ ನಾವು ನಮ್ಮ ಜವಾಬ್ದಾರಿಯನ್ನು, ನಮ್ಮ ಭಾಷೆಯನ್ನು, ನಮ್ಮ ಉದ್ಯೋಗಗಳನ್ನು ಪುನರ್ ವಿಮರ್ಶೆ ಮಾಡಿಕೊಂಡು ಮುಂದೆ ಹೋಗಬೇಕೇ ವಿನಃ ಹಳೆಯದೇನೋ ಇದೆ ಎಂದು ಮಾಡಲು ಆಗುವುದಿಲ್ಲ. ಹಿಂದಿನ ಪ್ರಾಧಿಕಾರದ ಅಧ್ಯಕ್ಷರು ಅದನ್ನು ಅಧ್ಯಯನ ಮಾಡಿ, 14 ಅನುಷ್ಠಾನಯೋಗ್ಯ ಶಿಫಾರಸುಗಳನ್ನು ಪ್ರತ್ಯೇಕ ಮಾಡಿದ್ದಾರೆ. ನಾನದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದೇನೆ. ಅದನ್ನು ಮಾಡಲು ಸಾಧ್ಯವಿದೆ. ಉದಾಹರಣೆಗೆ ಗ್ರೂಪ್ ಡಿ ಮತ್ತು ಸಿಯಲ್ಲಿ ಶೇ.80 ಕನ್ನಡಿಗರಿಗೆ ಮೀಸಲಾತಿ ಇಡಿ. ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಮಾಡುವುದು ಸಾಧ್ಯ. ಇದಕ್ಕೆ ಕೇಂದ್ರ ಸರಕಾರದ ಒಪ್ಪಿಗೆಯೂ ಇದೆ. ಆದರೆ ಅನುಷ್ಠಾನಗೊಳಿಸದೇ ಇರುವುದು ಸಮಸ್ಯೆ. ಆಗಬಹುದಾದ 14ನ್ನು ಪ್ರತ್ಯೇಕ ಪಟ್ಟಿ ಮಾಡಿ, ಒಂದು ನಿಯೋಗದ ಮೂಲಕ ಮುಖ್ಯಮಂತ್ರಿಗಳಿಗೆ ಕೊಡುತ್ತೇವೆ. ಅದರ ನಂತರ ಪತ್ರಿಕಾ ಹೇಳಿಕೆ ಕೊಡುವುದು ನನ್ನ ಉದ್ದೇಶವಲ್ಲವೇ ಅಲ್ಲ. ಮುಖ್ಯಮಂತ್ರಿಗಳಿಗೆ ಕೊಟ್ಟ ಪ್ರತಿಯನ್ನು ಎಲ್ಲ ಶಾಸಕರಿಗೂ ಕೊಡುತ್ತೇವೆ. ಅದು ವಿಧಾನಸಭೆಯಲ್ಲಿ ಚರ್ಚೆಯಾಗಬೇಕು. ಕಾನೂನಾಗಬೇಕು. ಎಲ್ಲಿಯವರೆಗೆ ಯಾವುದೇ ಶಿಫಾರಸು ಕಾನೂನಾಗುವುದಿಲ್ಲವೋ ಅದಕ್ಕೆ ಬೆಲೆಯೇ ಇರುವುದಿಲ್ಲ. ನಾನು ಶೇ.80 ಎಂದು ಮಾಡಿರುವುದನ್ನು ವಿಧಾನಸಭೆಯವರು ಶೇ. 70 ಎಂದು ಬೇಕಾದರೂ ಮಾಡಲಿ, ಇರುವ ಇನ್ನೊಂದು ಸಮಸ್ಯೆಯೇನೆಂದರೆ, ಉದ್ಯೋಗಕ್ಕಾಗಿ ಜಾಹೀರಾತುಗಳು ಪ್ರಕಟವಾದಾಗ ಕನ್ನಡಿಗರು ಅರ್ಜಿಯನ್ನೇ ಹಾಕುವುದಿಲ್ಲ. ಜೆಎನ್‌ಯುನಲ್ಲಿ 400 ಮಲಯಾಳಿ ವಿದ್ಯಾರ್ಥಿಗಳಿದ್ದಾರೆ. 250ರಷ್ಟು ತಮಿಳು ವಿದ್ಯಾರ್ಥಿಗಳಿದ್ದಾರೆ. ಸುಮಾರು 260ರಷ್ಟು ತೆಲುಗು ವಿದ್ಯಾರ್ಥಿಗಳಿದ್ದಾರೆ. ಕನ್ನಡದವರು ನಾಲ್ಕೈದು ವಿದ್ಯಾರ್ಥಿಗಳು ಮಾತ್ರ. ಎಷ್ಟೊ ಐಟಿ ಬಿಟಿ ಉದ್ಯೋಗಗಳಿಗೆ ಕನ್ನಡದವರ ಅರ್ಜಿಯೇ ಇರುವುದಿಲ್ಲ.
ಕನ್ನಡದ ಫಲಕಗಳ ಬಗ್ಗೆ ಸರಕಾರವೇ ಮುತುವರ್ಜಿ ವಹಿಸಬೇಕಿತ್ತು. ಹಿಂದಿ ಬಗ್ಗೆ ಮಾತ್ರವಲ್ಲ, ಇಂಗ್ಲಿಷ್ ಕೂಡ ಆಕ್ರಮಿಸಿಕೊಳ್ಳುವಾಗ ಯಾಕೆ ಅದಕ್ಕೆ ಮಿತಿ ಹಾಕಿಲ್ಲ?
ಪು.ಬಿ.: ಕನ್ನಡದ ಅನುಷ್ಠಾನದ ವಿಷಯದಲ್ಲಿ ನಮ್ಮಲ್ಲಿ ಸಮಸ್ಯೆಯಿದೆ. ನೀವು ಯಾವ ಸಮಸ್ಯೆ ಹೇಳಿದರೂ ಅದಕ್ಕೆ ನಮ್ಮಲ್ಲಿ ಒಂದು ಕಾನೂನು ಇದೆ. 2023ರಲ್ಲಿ ಕನ್ನಡ ಭಾಷಾ ನೀತಿ ಬಂತು. ಅದರಲ್ಲಿ ಐದನೇ ತರಗತಿವರೆಗೆ ಕನ್ನಡ ಮಾಧ್ಯಮ ಆಗಬೇಕು ಎಂದಿದೆ. ಅದನ್ನು ಸರಕಾರ ಅಂಗೀಕರಿಸಿ ಗೆಝೆಟ್‌ನಲ್ಲಿ ಅಧಿಸೂಚನೆ ಹಾಕಿದೆ. ಈಗ ನಮ್ಮ ಶಿಕ್ಷಣ ಸಚಿವರು ಇಂಗ್ಲಿಷ್ ಮಾಧ್ಯಮ ಶುರು ಮಾಡಿದ್ದಾರೆ. ಹಾಗಾದರೆ ಭಾಷಾ ನೀತಿ ಏನಾಯಿತು? ಕನ್ನಡಿಗರಿಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಈ ಮೂರೂ ವಿಷಯದಲ್ಲಿ ಒಂದು ತೀವ್ರವಾದ ತಿಳುವಳಿಕೆಯ ಕೊರತೆ ಇದೆ.
ನಮ್ಮ ಜನಪದ ಪರಂಪರೆಯಲ್ಲಿ ಬೆಳಕಿನ ಆರಾಧನೆಯಿಂದ ಹಾಡು ಶುರುವಾಗುತ್ತದೆ. ಅದು ಕೂಡ ಸಂಸ್ಕೃತಿಯ ಭಾಗ. ರಾಯಚೂರಿನಲ್ಲಿ ಮುಹರ‌್ರಂ ಕುಣಿಯುವವರು ಹಿಂದೂಗಳು. ಬಯಲಾಟ ಕುಣಿಯುವವರು ಮುಸ್ಲಿಮರು. ಇಂಥ ಒಂದು ಜನಸಂಸ್ಕೃತಿ ನಮ್ಮಲ್ಲಿದೆ. ತಿಂಥಿಣಿ ಮೌನೇಶ್ವರ ಎಂದು ಒಂದು ದೇವಸ್ಥಾನವಿದೆ. ಮುಸ್ಲಿಮರಿಗೆ ಅದು ಮೌನುದ್ದೀನ್. ಕರಾವಳಿಯಲ್ಲಿ ಬಬ್ಬರ್ಯ ಎಂಬ ದೈವವಿದೆ. ಹಿಂದೂಗಳಿಗೂ ಒಗ್ಗದ, ಮುಸ್ಲಿಮರಿಗೂ ಒಗ್ಗದ ಅವನು ಕರಾವಳಿಯ ಸಂಸ್ಕೃತಿಗೆ ಒಗ್ಗಿಕೊಂಡಿದ್ದಾನೆ. ಈ ಥರದ ವಿಸ್ಮಯಗಳಿವೆ ಕರ್ನಾಟಕದಲ್ಲಿ, ಎಲ್ಲವನ್ನೂ ಒಳಗೊಳ್ಳುವಿಕೆ. ಶಂಕರಾಚಾರ್ಯರು ಬಿಹಾರದಲ್ಲಿ ಮಂಡನಮಿಶ್ರನನ್ನು ವಾದದಲ್ಲಿ ಸೋಲಿಸಿ ಸುರೇಶಾಚಾರ್ಯ ಎಂದು ಹೆಸರು ಬದಲಿಸಿ ಕಳಿಸಿದ್ದು ಶೃಂಗೇರಿಗೆ. ಭುವನೇಶ್ವರಕ್ಕೂ ಕಳಿಸಲಿಲ್ಲ. ಬಂಗಾಳಕ್ಕೂ ಕಳಿಸಲಿಲ್ಲ. ಕಾಶ್ಮೀರಕ್ಕೂ ಕಳಿಸಲಿಲ್ಲ, ಅವರ ಊರಾದ ಕಾಲಾಟಿಗೂ ಕಳಿಸಲಿಲ್ಲ. ಕರ್ನಾಟಕದ ಗುಣ ಅದು. ತಮಿಳುನಾಡಿನಲ್ಲಿ ಚೋಳರೊಟ್ಟಿಗೆ ಕೆಲಸ ಮಾಡಲು ಆಗಲಿಲ್ಲ ರಾಮಾನುಜಾಚಾರ್ಯರಿಗೆ. ಕರ್ನಾಟಕಕ್ಕೆ ಬಂದರು. ಮೇಲುಕೋಟೆಯಲ್ಲಿ ಜಾಗ ಕೊಟ್ಟು ವಿಷ್ಣುವರ್ಧನ ಅವರಿಗೆ ನೆರವಾದ. ವೇದಾಂತದ ಪ್ರಮುಖ ಮೂರು ಶಾಖೆಗಳು ಕರ್ನಾಟಕದಲ್ಲಿವೆ.
ಸಮಾಜದ ಅಂಕುಡೊಂಕನ್ನು ತಿದ್ದುವುದು, ಪ್ರಭುತ್ವವನ್ನು ಪ್ರಶ್ನೆ ಮಾಡುವುದು, ಒಂದು ದೂರವನ್ನು ಕಾಯ್ದುಕೊಳ್ಳುವುದು ಸರಕಾರದ ಹತ್ತಿರಕ್ಕೆ ಬಂದಾಗ ಕಡಿಮೆಯಾಗುತ್ತದಾ?
ಪು.ಬಿ.: ಖಂಡಿತ ಕಡಿಮೆಯಾಗುತ್ತದೆ. ರಾಜಿ ಮಾಡಿಕೊಳ್ಳಲೇಬೇಕು. ನಾನೇ ಎಷ್ಟೋ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ನಾನು ಈ ವ್ಯವಸ್ಥೆಯ ಒಳಗೆ ಕೆಲಸ ಮಾಡಲು ಒಪ್ಪಿಕೊಂಡರೆ ನಾನು ವ್ಯವಸ್ಥೆಯ ಕೆಲವು ಗುಣಗಳನ್ನು ಕಾಪಾಡಿಕೊಳ್ಳಬೇಕು ಇಲ್ಲವೆ ಬಿಟ್ಟುಹೋಗಬೇಕು. ನಮ್ಮಲ್ಲಿನ ಸಮಸ್ಯೆ ಏನೆಂದರೆ, ಒಳಗಿದ್ದವರಿಗೆ ಅವರದೇ ಮಿತಿಗಳಿವೆ. ಹೊರಗಿದ್ದವರಿಗೆ ಅಂಥ ಮಿತಿಗಳಿಲ್ಲ. ಅವರೂ ಏನೂ ಮಾಡುತ್ತಿಲ್ಲ.
ಸುಮಾರು 45 ಲಕ್ಷ ಜನ ಕೊರೋನದಿಂದ ಸತ್ತರು. ಇದು ಅಂತರ್‌ರಾಷ್ಟ್ರೀಯ ಅಂಕಿ ಅಂಶ. ನಮ್ಮ ಕಣ್ಣೆದುರೇ ಹೆಣಗಳು ಬಿದ್ದವು. ನಮ್ಮ ಬಂಧುಬಾಂಧವರ ಹೆಣಗಳು ಬಿದ್ದವು. ನಮ್ಮ ಕಣ್ಣೆದುರೇ ಜನ 200-300 ಕಿ.ಮೀ. ನಡೆದರು. ದಿಲ್ಲಿಯಲ್ಲಿ ಒಬ್ಬ ಸೈಕಲ್ ಮೇಲೆ ಮುಂದೆ ಮಗುವನ್ನೂ ಹಿಂದೆ ತನ್ನ ತಾಯಿಯನ್ನೂ ಕೂರಿಸಿಕೊಂಡು ಜೈಪುರಕ್ಕೆ ಹೊರಟಿದ್ದೇನೆ ಎಂದಾಗ, ಅದು ಎಂಥ ಬೀಭತ್ಸಕರ ಸಂದರ್ಭವಾಗಿತ್ತೆಂದರೆ, ಕವಿಯಲ್ಲದ, ಕಾದಂಬರಿಕಾರನಲ್ಲದ ನ್ನನ್ನನ್ನು ಅದು ತುಂಬ ಘಾಸಿಗೊಳಿಸಿತು. ಕನ್ನಡ ಸಾಹಿತ್ಯ ಇಂಥ ಭಯಾನಕವಾದ ಲೋಕಕ್ಕೆ ಹೇಗೆ ಪ್ರತಿಕ್ರಿಯಿಸಿದೆ ಹೇಳಿ. ಬರೆಯಲು ಹೆದರಿದರಾ ಅಥವಾ ಲೋಕವನ್ನು ನೊಡುತ್ತಿಲ್ಲವಾ ಇವರು? ಅಥವಾ ಲೋಕದಲ್ಲಿ ಏನೇ ನಡೆಯಲಿ, ನನ್ನ ಪಾಡಿಗೆ ಬರೆಯುತ್ತಿರುತ್ತೇನೆ ಎಂದು ಕೂತಿರುತ್ತಾರಾ? ಉತ್ಸವ್ ಗೋನವಾರ ‘ಫೋಟೊ’ ಎಂದು ಒಂದು ಸಿನೆಮಾ ಮಾಡಿದರು. ಅಪ್ಪ, ಅಮ್ಮ, ಮಗ ಮೂರೇ ಪಾತ್ರಗಳು. ಆದರೆ ಕರ್ನಾಟಕ ರಾಯಚೂರಿನಿಂದ ಬೆಂಗಳೂರಿನವರೆಗೆ ಹಬ್ಬಿದ ಕೊರೋನದ ಭಯಾನಕ ಚಿತ್ರವನ್ನು ಅದು ಕಟ್ಟಿಕೊಟ್ಟಿದೆ. ಎಲ್ಲಿ ಸಾಹಿತಿಗಳು ವಿಫಲರಾದರೋ ಅಲ್ಲಿ ಒಂದು ಸಿನೆಮಾ ಗೆದ್ದಿತು.
ಬಿಜೆಪಿ ಅಧಿಕಾರದಲ್ಲಿದ್ದಾಗ ಈ ಥರದ ಪ್ರಾಧಿಕಾರಗಳು, ಅಕಾಡಮಿಗಳು, ಪಠ್ಯಪುಸ್ತಕ ಪರಿಷ್ಕರಣೆ ಇವೆಲ್ಲವೂ ‘ಕೇಶವಕೃಪಾ’ದಲ್ಲಿ ನಡೆಯುತ್ತಿದ್ದವು ಎಂಬ ಆರೋಪವಿತ್ತು. ಒಂದು ಕಡೆಯ ಸಾಹಿತಿಗಳು, ವಿದ್ವಾಂಸರೆಲ್ಲ ಆರೋಪ ಮಾಡಿದ್ದರು. ಈಗ ಇನ್ನೊಂದು ಕಡೆಯಿಂದ ಆರೋಪ ಬರುತ್ತದೆ. ಕಾಂಗ್ರೆಸ್ ಕಚೇರಿಯಲ್ಲಿ ನಡೆಯತ್ತಿದೆ. ಮೊನ್ನೆ ಅಲ್ಲಿ ಸಭೆಯೂ ಆಗಿದೆ, ಸ್ವಾಯತ್ತ ಸಂಸ್ಥೆಗಳ ಅಧ್ಯಕ್ಷರು ಅಲ್ಲಿಗೆ ಯಾಕೆ ಹೋಗಬೇಕಿತ್ತು ಎಂಬ ಪ್ರಶ್ನೆ. ಅವರೂ ರಾಜಕಾರಣಿಗಳೇ, ಪಕ್ಷ ಬೆಂಬಲಿಸುವವರೇ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಇದಕ್ಕೆ ಏನೆನ್ನುತ್ತೀರಿ?
ಪು.ಬಿ.: ಅದೊಂದು ಘಟನೆ ಆಗಿದೆ. ಅದರ ಬಗ್ಗೆ ಸಂಪಾದಕೀಯಗಳು ಬಂದಿವೆ. ಸಾಕಷ್ಟು ಚರ್ಚೆಯಾಗಿದೆ. ಇಲ್ಲಿ ಎರಡು ವಿಯಷಗಳಿವೆ. ಒಂದು, ಒಬ್ಬ ರಾಜಕಾರಣಿ ಒಂದು ಹೇಳಿಕೆ ಕೊಟ್ಟ ಕೂಡಲೇ ಅದೇ ನಿಜ ಆಗುವುದಿಲ್ಲ. ಅವರು ಒಂದು ಹೇಳಿಕೆಯನ್ನು ಯಾವುದೋ ಸಂದರ್ಭದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಕೊಡುತ್ತಾರೆ. ಹೇಳಿಕೆಗಳನ್ನು ಅದರ ಸ್ಪಿರಿಟ್‌ನಲ್ಲಿ ಗ್ರಹಿಸಬೇಕೇ ವಿನಃ ವಾಸ್ತವವಾಗಿ ಗ್ರಹಿಸಬಾರದು. ಎರಡನೆಯದು, ಸಂಸ್ಥೆಗಳಿಗೆ ಸ್ವಾಯತ್ತತೆ ಇರಬೇಕೆಂಬುದು ಸತ್ಯ. ಮತ್ತದು ಅಗತ್ಯ ಕೂಡ. ಇಲ್ಲದೇ ಇದ್ದರೆ ಕೆಲಸ ಮಾಡಲು ಆಗುವುದಿಲ್ಲ. ನಾನು ಕೆಲಸ ಮಾಡುವ ವಿಧಾನದಲ್ಲಿ ಯಾರೂ ಹಸ್ತಕ್ಷೇಪ ಮಾಡಿಲ್ಲ. ನಾನು ಎಲ್ಲರ ಪರವಾಗಿ ಮಾತಾಡಲಾರೆ. ನನ್ನ ಸ್ವಾಯತ್ತತೆಗೆ ಭಂಗ ಬಂದರೆ ನಾನು ಇರುವುದಿಲ್ಲ ಇಲ್ಲಿ.
ನಿಮ್ಮ ಸಮಕಾಲೀನ ಸಾಹಿತಿಗಳೇ ಹಿಂದೆ ಸರಕಾರದ ಭಾಗವಾಗಿದ್ದವರೇ ಯಾಕೆ ಅಲ್ಲಿಗೆ ಹೋಗಬೇಕಾಗಿತ್ತು ಎಂದು ಹೇಳಿದ್ದಾರೆ ಅಥವಾ ಡಿಕೆಶಿ ಹೇಳಿಕೆಯನ್ನು ಖಂಡಿಸಬೇಕಿತ್ತು. ಅಧಿಕಾರ ಸಿಗದೇ ಇದ್ದಾಗ ಹೀಗೆ ಆಗಬೇಕಾ?
ಪು.ಬಿ.: ನನಗೆ ಅನ್ನಿಸಿದ ಹಾಗೆ ಇಡೀ ವಿಚಾರವೇ ಅಗತ್ಯ ಇರಲಿಲ್ಲ. ನಿಗಮ-ಮಂಡಳಿಗಳ ಸಭೆ ಕರೆದಿದ್ದರು. ನಾನು ಹೋಗಲಿಲ್ಲ. ಕೆಲವರು ಹೋದರು. ಯಾಕೆ ಹೋದರು ಎಂದು ಅವರನ್ನೇ ಕೇಳಬೇಕು. ಹೋದವರು ಸಮರ್ಥಿಸಿಕೊಂಡರು. ಸರಕಾರ ಕೊಟ್ಟ ಜವಾಬ್ದಾರಿಯುತ ಹುದ್ದೆಯಲ್ಲಿರುವಾಗ ಆ ಹುದ್ದೆಯ ಸಾಧ್ಯತೆಗಳೇನು, ಮಿತಿಗಳೇನು, ಶಕ್ತಿಯೇನು ಇದನ್ನು ಅರ್ಥ ಮಾಡಿಕೊಂಡಷ್ಟೂ ಅದಕ್ಕೆ ಹೆಚ್ಚು ನ್ಯಾಯ ಒದಗಿಸಲು ಸಾಧ್ಯ. ನೀವು ಗಂಭೀರವಾಗಿದ್ದರೆ ನಿಮ್ಮ ಅನನ್ಯತೆಯನ್ನು ಅಷ್ಟು ಸುಲಭವಾಗಿ ಯಾರೂ ಅಲ್ಲಗಳೆಯುವುದಿಲ್ಲ. ನೀವು ಗಟ್ಟಿಯಾಗಿರಬೇಕು. ನಿಮ್ಮ ಹೇಳಿಕೆ ಸಮರ್ಥಿಸಿಕೊಳ್ಳಲು ನಿಮಗೆ ಗೊತ್ತಿರಲೇಬೇಕು. ದಿಲ್ಲಿಯಲ್ಲಿ ಒಮ್ಮೆ ಕೇಳಿದೆ. ಒಬ್ಬ ವ್ಯಕ್ತಿ, ಒಂದು ಸಂಘಟನೆ ಅಥವಾ ಒಂದು ರಾಜಕೀಯ ಪಕ್ಷ ರಾಷ್ಟ್ರೀಯವಾಗುತ್ತಲೇ ಪ್ರಾದೇಶಿಕವಾಗುವುದು ಹೇಗೆ? ಈ ಪ್ರಶ್ನೆಯನ್ನು ರಾಜಕೀಯ ಪಕ್ಷಗಳು ಎತ್ತಿಕೊಳ್ಳಬೇಕು. ಜೆಡಿಎಸ್, ಪ್ರಾದೇಶಿಕ ಪಕ್ಷ ಎಂದು ಹೇಳಲಾಗುತ್ತದೆ. ಅದರಲ್ಲಿ ಪ್ರಾದೇಶಿಕವಾದದ್ದು ಏನಿದೆ ಎಂಬ ಪ್ರಶ್ನೆಗಳನ್ನು ನಾವು ಕೇಳಬೇಕು.